ಮೆಚ್ಚಿನ ಸಾಹಿತಿ ‘ತ್ರಿವೇಣಿ’ಯವರಿಗೆ ನುಡಿನಮನ….
ಕನ್ನಡ ಸಾರಸ್ವತ ಲೋಕದ ಹೆಮ್ಮೆಯ ಸಾಹಿತಿ ತ್ರಿವೇಣಿಯವರ ಜನ್ಮದಿನ ಸೆ.1. ಅವರಿಗೆ ನನ್ನದೊಂದು ನುಡಿನಮನ….
ನನಗೆ ತ್ರಿವೇಣಿಯವರು ಬಹಳ ಅಚ್ಚುಮೆಚ್ಚು. ಇದು ಈಗಿನ ಮಾತಲ್ಲ. 30 ವರ್ಷಗಳ ಹಿಂದಿನ ಮಾತು. ನಾನು ಬಾಲ್ಯದಲ್ಲಿ ಅಂದರೆ ನನಗೆ ಮದುವೆಯಾಗೋ ಮೊದಲು ಬಹಳ ಕಾದಂಬರಿಗಳನ್ನು ಓದ್ತಾ ಇದ್ದೆ. ತ್ರಿವೇಣಿ, ಎಂ.ಕೆ. ಇಂದಿರಾ, ಉಷಾನವರತ್ನರಾವ್, ವಾಣಿ, ಹೆಚ್.ಜಿ. ರಾಧಾದೇವಿ ಇವರೆಲ್ಲರ ಕಾದಂಬರಿಗಳನ್ನು ಓದಿದ್ದೆ. ಆದರೆ ಈಗ ಯಾವುದೂ ನೆನಪಿಲ್ಲ. ನಂತರ ಓದೋದನ್ನೇ ಬಿಟ್ಟೆ. ಇವರೆಲ್ಲರಲ್ಲಿ ಮೊದಲ ಸ್ಥಾನ ತ್ರಿವೇಣಿಯವರಿಗೆ. ಅವರ ಕಾದಂಬರಿಗಳ ಬಗ್ಗೆ ಆ ಸಮಯದಲ್ಲಾದರೆ ಬಹಳ ವಿಷಯಗಳನ್ನು ಬರೆಯಬಹುದಿತ್ತು.ಈಗ ಎಲ್ಲವೂ ಮರೆತುಹೋಗಿದೆ. ಅವರ ಎಲ್ಲಾ ಕಾದಂಬರಿಗಳನ್ನೂ ಒಂದೂ ಬಿಡದೆ ಹುಡುಕಿ ಓದಿರೋ ನೆನಪಿದೆ. ಅವರ ಕಾದಂಬರಿಗಳು ನನಗೆ ಎಷ್ಟು ಇಷ್ಟವೆಂದು ನನಗೆ ಬರೆಯಲು ಶಬ್ದಗಳಿಲ್ಲ.
ಅವರು ಬಹುಶಃ 20ರಿಂದ 25 ಕಾದಂಬರಿಗಳನ್ನು ಬರೆದಿರಬೇಕು. ಒಂದಕ್ಕಿಂದ ಒಂದು ಸುಂದರ ಕೃತಿಗಳು. ಅವರ ನಾಲ್ಕೈದು ಕಾದಂಬರಿಗಳು ಚಲನಚಿತ್ರಗಳಾಗಿ ಅವುಗಳು ಕೂಡಾ ಬಹಳ ಹೆಸರು ಪಡೆದಿವೆ. ಅವುಗಳನ್ನೂ ನಾನು ನೋಡಿದ್ದೇನೆ. ನಾನು ಅವರ ಕಾದಂಬರಿಗಳ ಹುಚ್ಚಿಯಾಗಿದ್ದೆ. ಓದಲು ಪ್ರಾರಂಭಿಸಿದರೆ, ರಾತ್ರಿಯೆಲ್ಲಾ ನಿದ್ದೆಗೆಟ್ಟು ಮುಗಿಸಿಯೇ ಬಿಡುತ್ತಿದ್ದೆ.
ಅವರದು ಸರಳವಾದ ಭಾಷೆ, ಸುಂದರ ಶೈಲಿ, ನಿರೂಪಣೆ ಆ ಕಾದಂಬರಿಗಳನ್ನು ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತಿತ್ತು. ಅವರ ಕಥಾವಸ್ತು ಸಾಂಸಾರಿಕ ಜೀವನ. ಹಿಂದೆ ನಮ್ಮದು ಪುರುಷಪ್ರಧಾನ ದೇಶವಾದರೂ, ಮಹಿಳೆಯರನ್ನು ಗುಲಾಮರಂತೆ ಕಾಣುತ್ತಿದ್ದರು. ತ್ರಿವೇಣಿಯವರು ಮನಃಶ್ಯಾಸ್ತ್ರಜ್ಞೆ ಎಂದು ಹೇಳುವುದು ಕೇಳಿದ್ದೇನೆ. ಅವರು ತಮ್ಮ ಕಾದಂಬರಿಗಳಲ್ಲಿ ಹೆಣ್ಣಿನ ಸಾಂಸಾರಿಕ ಜೀವನ, ಅವಳ ಭಾವನೆಗಳು, ಅವಳ ಮಾನಸಿಕ ಆಂದೋಲನ, ಅದರಿಂದ ಅವಳ ಮಾನಸಿಕ ಸ್ಥಿತಿಯಲ್ಲಿ ಏರುಪೇರು, ಅದಕ್ಕೆ ಮನಃಶ್ಯಾಸ್ತ್ರಜ್ಞರಿಂದ ಪರಿಹಾರ, ಸಲಹೆ, ಆರೈಕೆ ಈ ವಿಷಯಗಳನ್ನು ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಬಹಳ ಯಶಸ್ವಿಯಾಗಿ ಓದುಗರ ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಇದಕ್ಕೆ ಕಾರಣ ಅವರು ಸ್ವತಃ ಮನಃಶ್ಯಾಸ್ತ್ರದ ಬಗ್ಗೆ ಓದಿರುವುದರಿಂದ ಎಂಬುದಕ್ಕೆ ಎರಡು ಮಾತಿಲ್ಲ. ನನಗಂತೂ ಆ ವಿಷಯದಲ್ಲಿ ಬಹಳ ಆಸಕ್ತಿ ಇತ್ತು. ನನಗೆ ಅವರ ಕೃತಿಗಳನ್ನು ಓದಿ ಓದಿ,ನಾನೇ ಮನಃಶ್ಯಾಸ್ತ್ರದಲ್ಲಿ ನಿಪುಣಳಾದೆನೇನೋ ಎಂಬ ಭಾವನೆ ನನಗೀಗಲೂ ಇದೆ. ಅವರು ತಮ್ಮ 35 ನೆಯ ವಯಸ್ಸಿನಲ್ಲಿ, ಹದಗೆಟ್ಟ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳದೆ , ಅಕಾಲ ಮರಣಕ್ಕೀಡಾದುದು ಕನ್ನಡ ಸಾಹಿತ್ಯಲೋಕಕ್ಕಾದ ದೊಡ್ಡ ನಷ್ಟ .
ಅವರು ತಮ್ಮ ಕಾದಂಬರಿಗಳಲ್ಲಿ ಹೆಣ್ಣಿನ ಮಾನಸಿಕ ದುರ್ಬಲತೆಯನ್ನು ಮಾತ್ರವಲ್ಲ, ಹೆಣ್ಣಿನ ದಿಟ್ಟತನದ ನಿಲುವನ್ನೂ, ಅವಳ ಸ್ವಾಭಿಮಾನವನ್ನೂ ಪ್ರತಿಪಾದಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ತಮ್ಮ ಕಾದಂಬರಿ ಬೆಳ್ಳಿಮೋಡದಲ್ಲಿ ನಾಯಕಿಗೆ ತಮ್ಮ ಹುಟ್ಟಿದಾಗ, ಆಸ್ತಿಗೆ ಪಾಲುದಾರ ಬಂದನೆಂದು ನಾಯಕ ಅವಳನ್ನು ಮದುವೆಯಾಗಲು ತಿರಸ್ಕರಿಸುತ್ತಾನೆ. ನಂತರ ಅವಳು ತನ್ನ ಅಸಹಾಯಕ ಸ್ಥಿತಿಯಲ್ಲಿ ತನಗೆ ಮಾಡಿದ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಮುಂದೆ ಬಂದಾಗ ನಾಯಕಿ ಅವನನ್ನು ದಿಟ್ಟತನದಿಂದ ಅವನನ್ನು ನಿರಾಕರಿಸುತ್ತಾಳೆ.
ಇದಲ್ಲವೇ ತ್ರಿವೇಣಿಯವರು ಹೆಣ್ಣಿ ನಿಲುವನ್ನು ಗೌರವಯುತವಾಗಿ ಪ್ರತಿಬಿಂಬಿಸಿದ್ದು, ಅವಳ ಭಾವನೆಗಳಿಗೆ ಬೆಲೆ ಕೊಟ್ಟಿದ್ದು. ಇನ್ನು ಶರಪಂಜರದಲ್ಲಿ ಅವಳು ತನ್ನ ಮಾನಸಿಕ ಕಾಯಿಲೆಯಿಂದ ಹೊರಬಂದರೂ ಅವಳ ಗಂಡ, ಸಮಾಜ ಅವಳನ್ನು ಆರೋಗ್ಯವಂತಳೆಂದು ಒಪ್ಪುವುದಿಲ್ಲ. ಇದರಲ್ಲಿ ಹೆಣ್ಣಿನ ಬಗ್ಗೆ, ಸಮಾಜದ, ಪುರುಷರ ಅಭಿಪ್ರಾಯ ಹೇಗಿದೆಯೆಂದು ತ್ರಿವೇಣಿಯವರು ಉಲ್ಲೇಖಿಸಿದ್ದು ಸತ್ಯಕ್ಕೆ ದೂರವಿಲ್ಲದ ಮಾತು . ಜನರ ದೃಷ್ಟಿಕೋನ ಬದಲಾಗದು ಎಂಬುದಕ್ಕೆ ನಿದರ್ಶನವಾಗಿದೆ ಈ ಕಾದಂಬರಿ.
ಇನ್ನು ಬೆಕ್ಕಿನಕಣ್ಣು ಕಾದಂಬರಿಯಂತೂ ಬಹಳ ಬಹಳ ಚೆನ್ನಾಗಿತ್ತು ಎಂದು ನನಗೆ ನೆನಪಿರುವುದೇ ಹೊರತು ಕತೆ ನೆನಪಿಲ್ಲ. ಅಪಸ್ವರ, ಅಪಜಯದಲ್ಲಿ ತ್ರಿವೇಣಿಯವರು ಮೀರಾ ಎಂಬ ನಾಯಕಿಯು ಮದುವೆಯಾದ ಮೇಲೆ ಡಾಕ್ಟರ್ ಓದಿ ತನ್ನ ಗುರಿಯನ್ನು ತಲುಪಿದಳಾದರೂ, ವೈವಾಹಿಕ ಜೀವನದಲ್ಲಿ ಅವಳ ಅಪಜಯವೆಂದು ನಿರೂಪಿಸಿದ್ದಾರೆ. ಅಂದರೆ ತ್ರಿವೇಣಿಯವರು ಹೆಣ್ಣಿನ ಸ್ವಂತ ಅಭಿವೃದ್ಧಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿರುವರೋ, ಅಷ್ಟೇ ಪ್ರಾಮುಖ್ಯತೆ ಹೆಣ್ಣಿನ ಸಾಂಸಾರಿಕ ಜೀವನಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಟ್ಟಿರುವರೆಂದು ನನ್ನ ಅನಿಸಿಕೆ.
ತಾನು ಓದಿ, ತನ್ನ ಗಂಡನಿಗೆ 2 ನೇ ಮದುವೆ ಮಾಡಿ ತಾನು ಗೆದ್ದೆನೆಂದು ಮೀರಾ ಅಂದುಕೊಂಡರೂ ಅವಳಿಗೆ ನಿಜವಾದ ಸಂತೋಷ, ನೆಮ್ಮದಿ ಸಿಗುವುದಿಲ್ಲ. ಅವಳ ಜೀವನದಲ್ಲಿ ಅಪಸ್ವರವಿತ್ತು, ಅವಳು ಅಪಜಯ ಹೊಂದಿದಳು ಎಂದು ತಮ್ಮ ಕಾದಂಬರಿಯಲ್ಲಿ ತ್ರಿವೇಣಿಯವರು ನಿರೂಪಿಸಿದ್ದಾರೆ. ಅಂದರೆ ಹೆಣ್ಣಿಗೆ ಗಂಡನ ಪ್ರೀತಿ, ಮಕ್ಕಳ ಭಾಗ್ಯವೂ ಅಷ್ಟೇ ಅಗತ್ಯ. ಸಂಸಾರ ಸುಖವೂ ಅವಳ ಜೀವನದ ಗುರಿಯಾಗಿರಬೇಕು, ಓದಿ ಸಾಧಿಸುವುದು ಮಾತ್ರವಲ್ಲ, ಸಂಸಾರವನ್ನೂ ಯಶಸ್ವಿಯಾಗಿ ನಿರ್ವಹಿಸುವ ತಾಳ್ಮೆ ಅವಳಲ್ಲಿರಬೇಕು. ಆಗಲೇ ಅವಳಿಗೆ ಜಯ ಎಂಬುದು ತ್ರಿವೇಣಿಯವರ ಅಭಿಪ್ರಾಯವಾಗಿರಬೇಕು.
ಅವರು 75 ವರ್ಷಗಳ ಹಿಂದೆ ಬರೆದಿರುವುದು ಇಂದು ನಮಗೆ ಸಮಾಜದಲ್ಲಿ ಕಂಡುಬರುತ್ತಿಲ್ಲವೇ. ಇಂದು ತನ್ನ ಅಭ್ಯುದಯವನ್ನೂ, ತನ್ನ ಸಂಸಾರವನ್ನೂ ಸರಿತೂಗಿಸಲಾರದೆ ವಿವಾಹವಿಚ್ಛೇದನಗಳಾಗುವುದನ್ನು ನೋಡುತ್ತಲೇ ಇದ್ದೇವೆ. ಆದರೆ ತ್ರಿವೇಣಿಯವರು ಅಂದೇ ಅರಿತಿದ್ದರು. ಮಹಿಳೆಯ ಒಂದೊಂದು ಮಾನಸಿಕ ಹಿಂಸೆಯನ್ನು, ಅವಳ ಭಾವನೆಗಳನ್ನು, ಅವಳ ಪರಿಸ್ಥಿತಿಯನ್ನು, ಅವಳ ಸಾಂಸಾರಿಕ ಜೀವನವನ್ನು, ದಾಂಪತ್ಯದ ಅನುಬಂಧವನ್ನು, ಗಂಡಹೆಂಡಿರ ಸಾಮರಸ್ಯವನ್ನು, ಪ್ರೀತಿಪ್ರೇಮವನ್ನು ತ್ರಿವೇಣಿಯವರು ತಮ್ಮ ಕಾದಂಬರಿಯಲ್ಲಿ ಎಷ್ಟು ಹೃದಯಂಗಮವಾಗಿ ಚಿತ್ರಿಸಿದ್ದಾರೆಂದರೆ, ನಾವೂ ಅದರಲ್ಲಿ ಒಂದಾಗಿ ಬಿಡುತ್ತೇವೆ. ಅವರ ಕಾದಂಬರಿಗಳನ್ನೋದುತ್ತಾ ನನ್ನ ಕಣ್ಣಿಂದ ಸುರಿಯುತ್ತಿದ್ದ ನೀರಿಗೆ ಲೆಕ್ಕವಿಲ್ಲ. ನಾನೇ ಆ ನಾಯಕಿಯೇನೋ ಎಂದು ನನಗೆ ಅನಿಸುತ್ತಿತ್ತು……., ಅವಳ ಹೆಜ್ಜೆ, ಮೊದಲಾದ ನಾಲ್ಕೈದು ಚಿಕ್ಕಕಥೆಗಳನ್ನೂ ಬರೆದಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮರೆಯಾದ , ಈ ಉತ್ಕ್ರಷ್ಠ ಸ್ಥಾನದಲ್ಲಿರುವ, ಇಂದು ನನ್ನೆದೆಯಲ್ಲಿ ಹಚ್ಚಹಸುರಾಗಿರುವ ಈ ಕಾದಂಬರಿಕಾರ್ತಿ ತ್ರಿವೇಣಿಯವರಿಗೆ, ಇಡೀ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿ, ಇನ್ನೂ ನೀಡಬೇಕಾಗಿದ್ದ ಸಾರಸ್ವತ ಲೋಕದ ಈ ಅನರ್ಘ್ಯ ಕುಸುಮಕ್ಕೆ, ಇಂದು ಧ್ರುವತಾರೆಯಾಗಿರುವ ಎಲ್ಲ ಮನಸ್ಸಿನಲ್ಲಿ, ತನ್ನ ನೆನಪನ್ನು ಅಚ್ಚೊತ್ತ್ತಿ ಹೋಗಿರುವ ತ್ರಿವೇಣಿಯವರಿಗೆ ನನ್ನ ಗೌರವಪೂರ್ವಕ ನಮನಗಳು…….
–ಮಾಲತಿ ಜೈನ್
ಕಾದಂಬರಿ ಲೋಕದ ವಿಶಿಷ್ಟ ಪ್ರತಿಭೆ ತ್ರಿವೇಣಿಯವರನ್ನು ನೆನೆದುಕೊಂಡದ್ದು ತುಂಬ ಅಥ೯ಪೂಣ೯ವಾಗಿದೆ.
ಧನ್ಯವಾದಗಳು
Nice
ಧನ್ಯವಾದಗಳು
ತಮ್ಮ ಕಾದಂಬರಿಗಳಿಂದ ಸಾಹಿತ್ಯ ಆಸಕ್ತರನ್ನು ಅದರಲ್ಲೂ ಮಹಿಳೆಯರನ್ನು…ಸೆಳದಿದ್ದ ತ್ರಿವೇಣಿ ಯವರನ್ನು
ನೆನಪಿಸುವ ಲೇಖನಕ್ಕೆ ನನ್ನ ಧನ್ಯವಾದಗಳು.
ನಮ್ಮ ಮನದಂಗಳದಲ್ಲಿ ಹಚ್ಚ ಹಸಿರಾಗಿರುವ ತ್ರಿವೇಣಿಯವರಿಗೆ ಸಲ್ಲಿಸಿದ ನುಡಿನಮನ ಸೊಗಸಾಗಿದೆ
ಧನ್ಯವಾದಗಳು
ಸಾರ್ವತ್ರಿಕ ಮನ್ನಣೆ ಗಳಿಸಿದ ಅಪರೂಪದ ಲೇಖಕಿ ತ್ರಿವೇಣಿಯವರ ಕಿರುಪರಿಚಯದ ಸಕಾಲಿಕ ಲೇಖನವು ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು ಮಾಲತಿ ಮೇಡಂ.
Thank u v.much
ತ್ರಿವೇಣಿ ಎಂದೆಂದಿಗೂ ಸಮಕಾಲೀನ ಲೇಖಕಿ!
ಧನ್ಯವಾದಗಳು
ಸಕಾಲಿಕ ಬರಹ.. ಚೆನ್ನಾಗಿದೆ.
ಧನ್ಯವಾದಗಳು
ತ್ರಿವೇಣಿ ಎಲ್ಲಾ ಕಾಲಕ್ಕೂ ಸಲ್ಲುವ ಶ್ರೇಷ್ಟ ಲೇಖಕಿ..ಬರಹ ತುಂಬಾ ಚೆನ್ನಾಗಿದೆ..
ಮಾಲತಿ ಅಕ್ಕಾ ಚೆನ್ನಾಗಿ ವಿವರಿಸಿ ಬರೆದಿರುವಿರಿ
ಧನ್ಯವಾದಗಳು
ಧನ್ಯವಾದಗಳು
ತ್ರಿವೇಣಿ ಅವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ
ತುಂಬಾ ಚೆನ್ನಾಗಿ ಬರೆದಿದ್ದೀರಿ.ಅವರ ಕಾದಂಬರಿಗಳ ಬಗ್ಗೆ ಬರೆಯುವುದು ಅಷ್ಟು ಸುಲಭ ಅಲ್ಲ.ಆದರೆ ನೀವು ಮಾತ್ರ ಯಾವತ್ತೋ ಓದಿದ್ದನ್ನು ನೆನಪಿಸಿಕೊಂಡು ಬರೆದರಲ್ಲ ,ಅದೇ ತುಂಬಾ ಖುಷಿ .ಬರಹವೂ ತುಂಬಾ ಚೆನ್ನಾಗಿದೆ ಮಾಲತಿ.