ಸ್ಪಟಿಕ / ಗೊರಟಿಗೆ ಹೂ

Share Button

ಹೂವು ಎಂದರೆ ಮನಕ್ಕೆ ಒಂಥರಾ ಹರ್ಷ. ಬಾಲ್ಯ ಅಂದರೆ ಸಹ ಅಷ್ಟೇ .ನನ್ನ ಬಾಲ್ಯಕ್ಕೂ ಹೂವಿಗೂ ತುಂಬಾನೇ ನಂಟು.  ಈಗಲೂ ಆ ಬೆಸುಗೆ ತುಂಡಾಗದ ಹಾಗೆ ಹೂವಿನ ಮೇಲಿನ ಪ್ರೀತಿ ಹಾಗೇ ಇದೆ. ಚಿಕ್ಕವರಿದ್ದಾಗಿನ ನಮ್ಮ ಮನೆಯ ಕೈ ತೋಟದಲ್ಲಿ ಹೂವಿನ ಗಿಡಗಳೇ ಹೆಚ್ಚು. ಅಮ್ಮನೇ ಮಾಡಿದ ತೋಟದಲ್ಲಿ ಇಲ್ಲದ ಹೂ ಗಿಡಗಳೇ ಇರಲಿಲ್ಲ ಅಂದರೆ ಅತಿಶಯೋಕ್ತಿ ಅಲ್ಲ.  ಕೊಂಡು ತರಲು ನರ್ಸರಿಗಳಿರದ ಆ ಕಾಲದಲ್ಲಿ ವಿನಿಮಯದಿಂದಲೇ ಗಿಡಗಳು ಬೆಳೆಯುತ್ತಿದ್ದು ಉಳಿಯುತ್ತಿದ್ದುದು. ಆಗಿನ ಹೂವುಗಳಲ್ಲಿ ಅಚ್ಚಳಿಯದ ನೆನಪು ಅಂದರೆ ಸ್ಫಟಿಕದ ಹೂ. ಅರ್ಥ ಆಗಲಿಲ್ಲವಾ ? ಗೊರಟಿಗೆ ಅಥವಾ ಗೊರಟೆ ಹೂ ಅಂತಾರಲ್ಲ ಅದು . ಮೊದಲೆಲ್ಲ ಎಂಕೆ ಇಂದಿರಾ ವಸುಮತಿ ಉಡುಪ ಅವರ ಕಾದಂಬರಿಗಳಲ್ಲಿ ಗೊರಟೆ ಹೂ ಅಂತ ಓದಿದಾಗ ಯಾವುದಪ್ಪಾ ಇದು ಅಂದುಕೊಂಡಿದ್ದು ಉಂಟು. ಆಮೇಲಾಮೇಲೆ ಗೊತ್ತಾಯ್ತು ಗೊರಟಿಗೆ ಹೂ ಅಂದರೆ ನಮ್ಮ ಸ್ಫಟಿಕದ ಹೂವೇ ಅಂತ. ತೀರಾ ಹಳ್ಳಿ ಉಚ್ಛಾರಣೆಯಲ್ಲಿ ಪಟಿಕ ಹೂ ಅಂತಾನೂ ಅನ್ನುವ ಈ ಸ್ಪಟಿಕಕ್ಕೆ ಆ ಹೆಸರು ಹೇಗೆ ಬಂತು ಅಂತ ಮಾತ್ರ ದೇವರಾಣೆಗೂ ಗೊತ್ತಿಲ್ಲ.  ದಯವಿಟ್ಟು ಕೇಳಬೇಡಿ.😁😁

ಸಂಸ್ಕೃತದಲ್ಲಿ ಈ ಪುಷ್ಪಕ್ಕೆ ಸಹಚರ ಸರೈಕಾ ಎಂಬ ಹೆಸರುಗಳಿವೆ .ಇದರ ವೈಜ್ಞಾನಿಕ ನಾಮ ಬರ್ಲೇರಿಯ ಕ್ರಿಸ್ಪಾಟ .ಅಕಾಂತರ್ಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ .ಇದು ಪೊದೆಯ ಆಕಾರದಲ್ಲಿ ಉದ್ದುದ್ದ ಕಾಂಡಗಳನ್ನು ಹೊಂದಿದೆ .ಕಾಂಡಕ್ಕೆ ಅಂಟಿಕೊಂಡಂತೆ ಮೊಗ್ಗಿನ ಗೊಂಚಲುಗಳು. ಮೊಗ್ಗಲ್ಲಿ ಕಿತ್ತಾಗ ಸಂಪೂರ್ಣ ಅರಳುವುದಿಲ್ಲ. ಗಿಡದಲ್ಲಿದ್ದರೆ ಬೆಳಿಗ್ಗೆ ಬೇಗನೆ ಪೂರ್ಣ ಅರಳುವ ಇವು ಬೇಗನೆ ಬಾಡುವುದಿಲ್ಲ ಕೂಡ. ತೆಳುವಾದ ಬೀಜಗಳಾದ್ದರಿಂದ ಹಗುರವಾಗಿ ಗಾಳಿಯಲ್ಲಿ ಹರಡಿ ಹೊಸ ಗಿಡಗಳ ಉತ್ಪತ್ತಿ ಸುಲಭವಾಗಿ ಆಗುತ್ತದೆ .

ಬಣ್ಣ ಬಣ್ಣವಾಗಿ ಆಕರ್ಷಕವಾಗಿರುವ ಈ ಹೂವಿಗೆ ಯಾವುದೇ ಸುವಾಸನೆ ಇಲ್ಲ.  ಅಲಂಕಾರಕ್ಕೆ ಮುಡಿಯಲು ಹಾಗೂ ಇತ್ತೀಚೆಗೆ ಪೂಜೆಗೆ ಸಹ ಬಳಸುತ್ತಾರೆ ನಾವು ಚಿಕ್ಕವರಿದ್ದಾಗ ಹಾರ ಮಾಡಿ ದೇವರಿಗೆ ಹಾಕುತ್ತಿದ್ದರು ಆದರೆ ಪೂಜೆ ಅರ್ಚನೆಗೆ ಬಳಸುತ್ತಿರಲಿಲ್ಲ .ಕಾಲಿನ ಹಿಮ್ಮಡಿ ಒಡೆದಿದ್ದಾಗ( ಆಗ ಅದು ತುಂಬಾ ಮಾಮೂಲಿ) ಈ ಸೊಪ್ಪನ್ನು ಅರೆದು ಹಚ್ಚುತ್ತಿದ್ದ ನೆನಪು . ಪಕ್ಕದ ಮನೆಯ ಅಜ್ಜಿ ಮೊಳಕಾಲಿನ ನೋವಿಗೆ ಈ ಗಿಡದ ಬೇರನ್ನು ತೆಗೆದುಕೊಂಡು ಹೋಗುತ್ತಿದ್ದರು . ಸಂಧಿವಾತ ಕಿವಿ ನೋವು ಹಲ್ಲು ನೋವುಗಳ ಉಪಶಮನಕ್ಕೆ ಬಳಸುತ್ತಾರೆಂದು ಇತ್ತೀಚೆಗೆ ತಿಳಿಯಿತು.

ಇನ್ನು ನಮ್ಮ ತೋಟದ ವಿಷಯಕ್ಕೆ ಮತ್ತೆ ಬಂದರೆ ಮಾಮೂಲಿ ಸ್ಫಟಿಕ ಹೂವಿನ ಗಾಢ ನೀಲಿ ಹೂಗಳು ತೆಳು ಗುಲಾಬಿ,  ಅಚ್ಚ ಗುಲಾಬಿ ರಂಗಿನವು ಬಿಳಿ ಮತ್ತು ಸರಸ್ವತಿ (ಮೆಜಂತಾ) ಬಣ್ಣಗಳು ಪ್ರಮುಖವಾಗಿತ್ತು. ಡಬ್ಬಲ್ ಕಲರ್ ನಾಮ ಸ್ಫಟಿಕ ಎಂಬ ಪ್ರಭೇದದಲ್ಲಿ ನೀಲಿಗೆ ಬಿಳಿ ಗೆರೆ ಹಾಗೂ ಬಿಳಿಗೆ ನೀಲಿ ಗೆರೆ ಈ ತರಹ ಎರಡು ವಿಧ .ಇನ್ನು ಗಾಢ ಹಳದಿ ಬಣ್ಣದ ಸ್ಫಟಿಕ ಗಿಡವೆಲ್ಲ ಮುಳ್ಳು. ಈ ಹಳದಿ ಸ್ಫಟಿಕದ ಗಿಡವನ್ನು ಕಾಂಪೌಂಡ್ ಪಕ್ಕಕ್ಕೆ ಸುತ್ತಲೂ ಹಾಕಿ ಬಿಟ್ಟು ನೈಸರ್ಗಿಕ ಬೇಲಿ ಆಗಿಬಿಟ್ಟಿತ್ತು.  ಗಿಡಗಳು ಹೆಚ್ಚಾಗಿ ಇದ್ದಿದ್ದರಿಂದ ಜಾಸ್ತಿಯೇ ಹೂ ಬಿಡುತ್ತಿತ್ತು ಬೆಳಿಗ್ಗೆ ಎದ್ದು ಕಾಫಿ ಕುಡಿದು ಹೂ ಬಿಡಿಸಿ ಕಟ್ಟಿ ಸ್ಕೂಲಿಗೆ ಮುಡಿದು ಹೋಗುತ್ತಿದ್ದ ವಾಡಿಕೆ . ಮಿಡಲ್ ಸ್ಕೂಲ್ ತನಕ ಸಮವಸ್ತ್ರ ಬೇರೆ ಗಾಢ ನೀಲಿ ಸ್ಕರ್ಟ್ ಹಾಗೂ ಪಿಂಕ್ ಶರ್ಟ್ ಹಾಗಾಗಿ ಎರಡು ಬಣ್ಣದ ಹೂ ಬೆರೆಸಿ ದಂಡೆಗಳನ್ನು ಕಟ್ಟಿದರೆ ನಮ್ಮ ಮೂರು ಜನರ ಸಮವಸ್ತ್ರಕ್ಕೆ ಮ್ಯಾಚಿಂಗ್. ಹೈಸ್ಕೂಲಿನಲ್ಲಿ ನೀಲಿ ಸ್ಕರ್ಟ್ ಬಿಳಿ ಶರ್ಟ್ ಅದಕ್ಕೂ ಮ್ಯಾಚಿಂಗ್ ಸರಿ ಹೋಗ್ತಿತ್ತು .

ಇನ್ನು ಹೂವು ಕಟ್ಟುವ ವಿಷಯಕ್ಕೆ ಬಂದರೆ ಎರಡು ಹೂ ಸೇರಿಸಿ ತೆಳುವಾಗಿ ಕಟ್ಟುವುದು, ನಾಲ್ಕು ಹೂ ಸೇರಿಸಿ ಒತ್ತಾಗಿ ಕಟ್ಟುವುದು, ಕಾಲಿನಲ್ಲಿ ಕಟ್ಟುವ ದಂಡೆ, ಹಾರ ಕಟ್ಟುವ ಹಾಗೆ ತೋಮಾಲೆ ದಂಡೆ!  ನಿಜಕ್ಕೂ ಎಷ್ಟು ಸೃಜನಾತ್ಮಕ ಕಲಾತ್ಮಕ ಕಲೆ. ಇನ್ನು ಹೊಗಳಿಸಿಕೊಂಡರಂತೂ ಉಬ್ಬಿ ಮತ್ತಷ್ಟು ರಚನಾತ್ಮಕವಾಗಿ ಮಾಡುತ್ತಿದ್ದುದು. ಆ ಪಾಟಿ ಹೂ ಕೀಳಕ್ಕೆ ಕಟ್ಟಕ್ಕೆ ಬೇಜಾರಾಗಲ್ವಾ ನಿನಗೆ ತುಂಬಾ ಸಹನೆ ಅಂತಿದ್ರು ಆಗ . ನಾವು ಮಾತ್ರ ಅಲ್ಲದೆ ಗೆಳತಿಯರಿಗೂ ಟೀಚರ್ಸ್ಗೂ ತಗೊಂಡು ಹೋಗಿ ಕೊಡುವುದು. ಬರೀ ಒಂದೇ ಬಗೆಯ ಹೂವನ್ನು ಕಟ್ಟಿ ಸ್ಟಾಫ್ ರೂಮಿಗೆ ಕೊಡುವುದು . ಮಿಸ್ ನಾನು ಕೊಟ್ಟಿದ್ದನ್ನು ಮುಡಿದಿದ್ದಾರೆ ಅಂತ ಖುಷಿ ಪಡುವುದು. ಈಗಂತೂ ನನ್ನ ಕಣ್ಣಿಗೆ ನೀಲಿ ಮತ್ತು ಬಿಳಿ ಪ್ರಭೇದ ಮಾತ್ರ ಕಾಣಸಿಕ್ಕಿದೆ . ಬೇರೆಯವರೆಲ್ಲಾ ಏನಾದವೋ ತಳಿಯೇ ನಾಶವಾಯ್ತು ಏನೋ ಗೊತ್ತಿಲ್ಲ .ನಾಮಸ್ಫಟಿಕವಂತೂ ಕಾಣುತ್ತಲೇ ಇಲ್ಲ .

ಸಾಮಾನ್ಯ ಆಷಾಢದಿಂದ ನವರಾತ್ರಿಯವರೆಗೆ ಹಬ್ಬ ಸಾಲಿನಲ್ಲಿ ಬಿಡುತ್ತಿದ್ದ ಹೂಗಳು ಅಗತ್ಯಕ್ಕೆ ತುಂಬಾ ಒದಗುತ್ತಿದ್ದವು.  ಸರಸ್ವತಿ ಸ್ಫಟಿಕದ ಸಸಿಯನ್ನು ದೂರದ ಒಂಟಿ ಕೊಪ್ಪಲಿನಿಂದ ಅಪ್ಪನ ಗೆಳೆಯರ ಮನೆಯಿಂದ ತಂದು ಹಾಕಿದ ನೆನಪಿದೆ. ಅದರ ಮುಂದಿನ ವರ್ಷ ನಮ್ಮ ಮನೆಯಲ್ಲಿ ಅದರ ಅಷ್ಟೊಂದು ಸಸಿಯಾಗಿತ್ತು. ನವರಾತ್ರಿಯ ವೇಳೆಗೆ ಹಳದಿ ಸ್ಫಟಿಕ ಬಿಡಲು ಶುರು. ಅದು ಅರಳಿದರೆ ಪರಾಗ ತುಂಬಾ ಉದುರುತ್ತೆ ಅಂತ ಮೊಗ್ಗೆ ಕಿತ್ತು ಕಟ್ಟುತ್ತಿದ್ದ ನೆನಪು .ಅದು ಬೇರೆಯವಕ್ಕಿಂತ
ಪುಟ್ಟ ತೊಟ್ಟು ಆಕಾರವೂ ಚಿಕ್ಕದೇ .ಹಾಗಾಗಿ ಬೇರೆ ಬಣ್ಣದ ಹೂವುಗಳೊಂದಿಗೆ ಬೆರೆಸುತ್ತಿರಲಿಲ್ಲ .

ಆ ಮನೆ ಬಿಟ್ಟ ಮೇಲೆ ಸ್ಫಟಿಕ ಹೂವಿನ ಒಡನಾಟ ಕಡಿಮೆಯೇ ಆಗಿತ್ತು. .ಕೆಲಸ ಸಿಕ್ಕಿ ಚಿಕ್ಕಬಳ್ಳಾಪುರಕ್ಕೆ ಹೋದಾಗ ವರ್ತನೆಗೆ ಹೂ ತರುತ್ತಿದ್ದವಳು ಸ್ಫಟಿಕದ ಮಾಲೆಯನ್ನೂ ತರುತ್ತಿದ್ದಳು.  ಮೈಸೂರಿನಲ್ಲೇ ಇದ್ದೇನೇನೋ ಅಂತ ಅನ್ನಿಸೋ ಹಾಗೆ ಮಾಡ್ತಾ ಇದ್ದಿದ್ದು ಹೂವಿನ ಈ ನಂಟೇ. ಮನೆಯವರ ಅಗಲಿಕೆಯನ್ನು ಸ್ವಲ್ಪ ಮಟ್ಟಿಗಾದರೂ ಮರೆಸಕ್ಕೆ ಸಹಾಯ ಮಾಡ್ತಿತ್ತು . ಬರೀ ಕುಂಡಗಳನ್ನಿಟ್ಟು ಕೊಂಡಾಗಲೂ ಗೆಳತಿಯ ಮನೆಯಿಂದ ತಂದು ಸ್ಫಟಿಕದ ಸಸಿ ಹಾಕಿ ಬಾಲ್ಯದ ನೆನಪನ್ನು ಅದರಲ್ಲೇ ಕಾಣುತ್ತಿದ್ದೆ. ಈ ವರ್ಗಾವಣೆಗಳ ಜಂಜಾಟದಲ್ಲಿ ಅದಕ್ಕೂ ಕತ್ತರಿ ಆಯಿತು .

ಈಗ ಇರುವ ಮನೆಯಲ್ಲಿ ಸ್ವಲ್ಪ ಗಿಡ ಹಾಕಲು ಅವಕಾಶವಿದೆ.  ಮೊದಲು ತಂದಿದ್ದು ಸ್ಫಟಿಕದ ಸಸಿಯೇ. ಗೃಹಪ್ರವೇಶವಾದ ಸ್ವಲ್ಪ ದಿನದಲ್ಲೇ ಶಿವಮೊಗ್ಗೆಗೆ ಗೆಳತಿ ಶಶಿ ಮನೆಗೆ ಹೋದಾಗ ಅಲ್ಲಿಂದ ತಂದ ನೀಲಿ ಸ್ಫಟಿಕ ಇನ್ನೂ ಈಗಲೂ ಇದೆ. ಆದರೆ ಅದೇನೋ ಕಾಲ ಪ್ರಭಾವವೋ ಗೊತ್ತಿಲ್ಲ. ವರ್ಷವಿಡೀ ಹೂ ಬಿಡುತ್ತಿರುತ್ತೆ. ಮೊಗ್ಗು ಖಾಲಿಯಾದಾಗ ಗಿಡ ಕತ್ತರಿಸಿದರೆ ಮತ್ತೆ ಚಿಗುರಿ ಹೂವು. ಈ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿಯೂ ಸ್ಫಟಿಕ ಹೂವಿನ ದರ್ಶನ ಆಗುತ್ತಿದೆ . ಸಾಧ್ಯವಾದರೆ ಬಾಲ್ಯದಲ್ಲಿ ಸಿಗುತ್ತಿದ್ದ ಎಲ್ಲ ರೀತಿಯ ಪ್ರಭೇದದ ಸ್ಫಟಿಕ ಪ್ರಕಾರಗಳನ್ನು ಸಂಗ್ರಹಿಸಬೇಕೆಂಬ ಆಸೆ . ಆದರೆ ಸಿಕ್ಕುತ್ತಿಲ್ಲ ಕೆಲವೆಲ್ಲ ಪ್ರಭೇದಗಳು ತಳಿಗಳು ಮಾಯವಾಗಿದೆಯೋ ಏನೋ !

ನೋಡಿದಾಗಲೆಲ್ಲ ಬಾಲ್ಯದ ನೆನಪು ಅಮ್ಮನ ನೆನಪು ತರುವ ಈ ಸ್ಫಟಿಕದ ಹೂ ನನಗಂತೂ ಹೃದಯಕ್ಕೆ ತುಂಬಾ ಆಪ್ತ .ಮತ್ತೆ ಚಿಕ್ಕ ಹುಡುಗಿಯಾದೆನೇನೋ ಅನ್ನಿಸುವಂತೆ ಮಾಡುತ್ತದೆ. ಈಗ ಸ್ಫಟಿಕದ ಹೂ ಮುಡಿದು ಹೋದರೆ ಆಶ್ಚರ್ಯದಲ್ಲಿ ನೋಡೋ ಜನನೂ ಇದ್ದಾರೆ ಅಂದ್ರೆ ಆಶ್ಚರ್ಯನಾ? ಹೂ ಮುಡಿಯೋದೇ ಅಪರೂಪ ಅಲ್ಲೂ ನೈಸರ್ಗಿಕ ಹೂಗಳಿಗಿಂತ ಕೃತಕ ಹೂಗಳಿಗೆ ಆದ್ಯತೆ . ಆದರೂ ನಾನು ಬಿಡೋದಿಲ್ಲ. ಕಟ್ಟಿ ಮುಡಿದು ಹೋಗ್ತೀನಿ. ಮನದಲ್ಲೇ ಎರಡು ಬದನೆಕಾಯಿ ಜಡೆಗೆ ಹೂ ಮುಡಿದ ಸಮವಸ್ತ್ರಧಾರಿಣಿ ಚಿಕ್ಕ ಹುಡುಗಿ ನಾನು ಅನ್ನೋ ಲವಲವಿಕೆಯ ಭಾವನೆ ಮೂಡಿಸಿಕೊಳ್ಳುತ್ತಾ ………..

– ಸುಜಾತಾ ರವೀಶ್

22 Responses

  1. Anonymous says:

    ಪ್ರಕಟಣೆಗಾಗಿ ಸಂಪಾದಕಿ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಸಾಂಧರ್ಭಿಕ ಚಿತ್ರಗಳಂತೂ ತುಂಬಾನೇ ಸೊಗಸಾಗಿದೆ. ನನ್ನ ಮನಸ್ಸಿನಲ್ಲಿ ಇದ್ದ ಹಾಗೆ ಬಂದಿದೆ.

    ಸುಜಾತಾ ರವೀಶ್

  2. ನಯನ ಬಜಕೂಡ್ಲು says:

    ಚಂದದ ಬರಹ

  3. ನಾಗರತ್ನ ಬಿ. ಅರ್. says:

    ಹೂವಿನ ಬಗೆ ಅದರಲ್ಲೂ ಸ್ಪಟಿಕ ಹೂವಿನ ವಿಚಾರಹೇಳುತ್ತಾ ಅದರೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ… ನಮ್ಮನ್ನು ಆಕಾಲಕ್ಕೆ ಕರೆದುಕೊಂಡು ಹೋದ ನಿಮಗೆ ಧನ್ಯವಾದಗಳು ಮೇಡಂ.

    • Anonymous says:

      ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಅನಂತಾನಂತ ಧನ್ಯವಾದಗಳು ನಾಗರತ್ನಾ ಮೇಡಮ್

      ಸುಜಾತಾ

  4. ಮಹೇಶ್ವರಿ ಯು says:

    ಆಪ್ತ ಬರಹ ನನ್ನ ನ್ನೂ ಬಾಲ್ಯಕ್ಕೆ ಕರೆದೊಯ್ದಿತು. ನಾವು ಹವ್ಯಕ ಭಾಷೆ ಯಲ್ಲಿ ಇದಕ್ಕೆ ಗೆಂಟಿಗೆ ಎನ್ನುತ್ತೇವೆ . ನಾಮ ಗೆಂಟಿಗೆ, ನೀಲಿ ಗೆಂಟಿಗೆ, ಅರಸಿನ ಗೆಂಟಿಗೆ, ಕೆಂಪು ಗೆಂಟಿಗೆ. ವಾಸ್ತವವಾಗಿ ಅದು ಕೆಂಪು ಅಲ್ಲ. ಪಿಂಕ್. ಆದರೆ ಪಿಂಕ್, ಗುಲಾಬಿ, ಮೆರೂನ್ಎಲ್ಲವೂ ಕೆಂಪು ಶಬ್ದ ದಲ್ಲಿ ಸಮಾವೇಶ ವಾಗುತ್ತಿತ್ತು.

    • Anonymous says:

      ಹೌದು ತಿಳಿ ರೋಜಾಬಣ್ಣ ಹಾಗೂ ಗಾಢ ರೋಜಾ ಬಣ್ಣ ಎರಡೂ ಬಣ್ಣ ಬಿಡುತ್ತಿತ್ತು .ಅಲ್ಲದೆ 1ರೀತಿಯ ಮೆಜೆಂತಾ ಬಣ್ಣ ಅದಕ್ಕೆ ಸರಸ್ವತಿ ಕಲರ್ ಅಂತಾ ಅನ್ನುತ್ತಿದ್ದೆವು.ತಮ್ಮ ಸಹೃದಯಿ ಓದು ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು ಮೇಡಂ

      ಸುಜಾತಾ

  5. Savithri bhat says:

    ಬರಹ ಬಹಳ ಕುಶಿ ಆಯಿತು..ಬಾಲ್ಯದ ನೆನಪು ತಂದಿತು. ನಮ್ಮಲ್ಲೂ ನಾಲ್ಕು ಬಣ್ಣದ ಗೋರಂಟಿ ಹೂಗಿಡಗಳು ಆದರೆ ಅದನ್ನು ಕೊಯ್ಯುವವರಿಲ್ಲ..

    • Anonymous says:

      ನೀವು ಕೊಯ್ಯುವುದು ಹೇಳಿದಿರಿ ಕೊಯಿದು ಕಟ್ಟಿ ಕೊಡುತ್ತೇನೆಂದರೂ ಮುಡಿಯುವವರೇ ಇಲ್ಲ ಈಗ
      ತಮ್ಮ ಸವಿ ಪ್ರತಿಕ್ರಿಯೆಗೆ ಧನ್ಯವಾದಗಳು

      ಸುಜಾತಾ

  6. sudha says:

    a beautiful article down memory lane

  7. Padma Anand says:

    ಹೂವಿನ ಕುರಿತಾದ ಲೇಖನ ಓದಿ ಮನ ಹೂವಿನಂತೆ ಅರಳುವಂತಾಯಿತು. ಹೂಗಳನ್ನು ಮಾಲೆಯಾಗಿ ಕಟ್ಟಲು ಕಲಿತುಕೊಳ್ಳುವ ಸಮಯದಲ್ಲಿ ಉದುದ್ದ ಇರುವ ಈ ಸ್ಪಟಿಕದ ಹೂಗಳಿಂದ ಪ್ರಾರಂಭಿಸಿದ್ದು ನೆನಪಾಯಿತು. ಚಂದದ ಬರಹ.

    • Anonymous says:

      ಹೌದು ಹೂಕಟ್ಟಲು ಕಲಿಯುತ್ತಿದ್ದದ್ದೇ ಸ್ಪಟಿಕ ಹೂವಿನಿಂದ. ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಮ್

      ಸುಜಾತಾ

  8. ಶಂಕರಿ ಶರ್ಮ says:

    ಚಿಕ್ಕಂದಿನ ದಿನಗಳಿಗೆ ನನ್ನಟ್ಟಿತು..ನಿಮ್ಮ ಲೇಖನ! ನಮ್ಮಲಿದ್ದ ನಾಲ್ಕೈದು ಬಣ್ಣಗಳ ಗೋರಂಟೆ ಹೂವಿನ ಮಾಲೆಗಳನ್ನು ತಲೆ ತುಂಬಾ ಮುಡಿಸಿ ಪ್ರೈಮರಿ ಶಾಲೆಗೆ ಕಳುಹಿಸುತ್ತಿದ್ದರು ನನ್ನಮ್ಮ..! ಚಂದದ ನೆನಪುಗಳೊಂದಿಗೆ ಧನ್ಯವಾದಗಳು, ಸುಜಾತಾ ಮೇಡಂ ಅವರಿಗೆ.

    • Anonymous says:

      ನಿಜಾ ಸಿಕ್ಕಿದ ಹೂಗಳನ್ನು ಕಟ್ಟಿ ತಲೆಗೆ ಏರಿಸಿಕೊಳ್ಳುತ್ತಿದ್ದ ಕಾಲ . ಈಗ ಹೂ ಮುಡಿಯುವ ವರೇ ಕಡಿಮೆಯಾಗಿಬಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ

      ಸುಜಾತಾ

  9. padmini says:

    nice article.

  10. Samatha.R says:

    ಮನಸ್ಸು ಬಾಲ್ಯಕ್ಕೆ ಮರಳಿತು…ನನ್ನ ಅನುಭವವೇ ನಿಮ್ಮ ಬರಹದಲ್ಲಿ ಮೂಡಿದೆ ಅನ್ನುವಷ್ಟು ಆಪ್ತ ಬರಹ…ಚಿಕ್ಕಂದಿನಲ್ಲಿ ಜಡೆ ಉದ್ದಕ್ಕೂ ಹೂವು ಮುಡಿದು ಹೋಗುತ್ತಿದ್ದು,ನಮ್ಮ ಮನೆ ಹಿತ್ತಲು ಎಲ್ಲಾ ನೆನಪಾಯಿತು…ಸುಂದರ ಬರಹ…

    • Anonymous says:

      ನಿಮ್ಮ ಸವಿ ಸಿಹಿ ಸ್ಪಂದನಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಮ್

      ಸುಜಾತಾ

  11. Hema says:

    ನನ್ನ ಬಾಲ್ಯದ ನೆನಪುಗಳೂ ಹೀಗೆಯೇ ಇವೆ..ಚೆಂದದ ಬರಹ.

    • Anonymous says:

      ನಿಮ್ಮ ಮೆಚ್ಚುಗೆಯ ಪ್ರತಿಸ್ಪಂದನಕ್ಕೆ ತುಂಬಾ ತುಂಬಾ ಧನ್ಯವಾದಗಳು ಹೇಮಮಾಲಾ ಮೇಡಂ

      ಸುಜಾತಾ ರವೀಶ್

  12. ವತ್ಸಲ says:

    ಬಾಲ್ಯದಿಂದಲೂ ಹೂವು ಮುಡಿಯುವ ಆಸಕ್ತಿ
    ಇಲ್ಲದ ನನ್ನಲ್ಲಿ ಹೂವಿನ ಬಗೆಗಿನ ಬರಹಗಳನ್ನು ಓದಲು
    ಉದ್ದೀಪನ ಗೊಳಿಸಿದ ನಿಮ್ಮಬರವಣಿಗೆಯ ಶೈಲಿ ಪ್ರಶಂಸನಾರ್ಹ.

Leave a Reply to padmini Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: