ಮಣಿಪಾಲದ ಮಧುರ ನೆನಪುಗಳು..ಭಾಗ 6

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)
ಪುಚ್ಚಮೊಗರು ಜಂಗಮ ಮಠ.

ಸೊಗಸಾದ ಹರಿಹರ ಮಂದಿರವನ್ನು  ಕಂಡು ಆಶ್ಚರ್ಯ, ಆನಂದಗೊಂಡ ಮನದಿಂದ ಹೊರಬಂದಾಗ ಇನ್ನೊಂದು ಪಕ್ಕದಲ್ಲಿಯೇ ಕಾಣಿಸುತ್ತಿದೆ.. ಪುಚ್ಚಮೊಗರು ಜಂಗಮ ಮಠ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ,  900ವರ್ಷಗಳಷ್ಟು  ಹಳೆಯ, ಮೂಡಬಿದಿರೆಯ ಪುಚ್ಚಮೊಗರು ಎಂಬಲ್ಲಿಯ ವೀರಶೈವರ ಮಠವಾಗಿದೆ ಇದು. ಶತ ಶತಮಾನಗಳ ಘಟನೆಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡ  ಈ ಮಠವು ಅತೀ ಜೀರ್ಣಾವಸ್ಥೆಯಲ್ಲಿದ್ದುದನ್ನು ತಿಳಿದ ಶೆಣೈಯವರು ಅದರ ಎಲ್ಲಾ ಭಾಗಗಳನ್ನು ಬಿಡಿಬಿಡಿಯಾಗಿ ಇಲ್ಲಿಗೆ ತಂದು, ಅದು ಮೊದಲಿದ್ದಂತೆಯೇ ಪುನರ್ನಿಮಾಣ ಮಾಡಿದರು.

ಇದರ ಮುಂಭಾಗದ ಮೆಟ್ಟಲುಗಳನ್ನೇರಿ ಒಳಗೆ ಅಡಿ ಇಟ್ಟಂತೆಯೇ ನಮ್ಮೆದುರು ಬೇರೆಯೇ ಆದ ಭವ್ಯ ಲೋಕವೊಂದು ತೆರೆದುಕೊಳ್ಳುತ್ತದೆ! ಒಳಗಿನ ಈ ಅದ್ಬುತ ಸೌಂದರ್ಯವನ್ನು ಒಂದಿಷ್ಟೂ ಬಹಿರಂಗಗೊಳಿಸದೆ ಹೊರಗಿನಿಂದ ನೋಡಿದರೆ ಒಂದು ಸಾಮಾನ್ಯ ಹಳೆಯ ಕಟ್ಟಡದಂತೆ ಕಾಣಿಸುವುದು ಈ ಮಠದ ವಿಶೇಷತೆ. ಹೊಸ್ತಿಲು ದಾಟಿ ಒಳ ಹೊಕ್ಕಂತೆಯೇ, ಜಗುಲಿಯಿಂದ ಜಗುಲಿಗೆ ಏರುತ್ತಾ ಸಾಗಿದರೆ ಕೈಲಾಸ ಪರ್ವತವನ್ನೇ ಹತ್ತಿದ ಅನುಭವವಾಗುತ್ತದೆ.. ಯಾಕೆಂದರೆ, ಮೂರನೇ ಜಗುಲಿ ಮೇಲಿದೆ ಪುಟ್ಟ ಶಿವ ದೇಗುಲ. ಈ  ದೇಗುಲದ ಬಾಗಿಲು ಹಾಗೂ ಅದರ ಎರಡೂ ಪಕ್ಕದ ಮರದ ದಾರಂದಗಳ ಮೇಲಿನ ಕೆತ್ತನೆಗಳು ಅತ್ಯದ್ಭುತ! ಆದರೆ ಅವುಗಳಲ್ಲಿ ಅರ್ಧಕ್ಕರ್ಧ ಗೆದ್ದಲು ತಿಂದು ಹಾಳಾಗಿದ್ದು ನೋಡಿದರೆ ಬೇಸರವಾಗುವುದು. ಶೆಣೈಯವರು ಅದರ ಮೂಲಸ್ಥಾನದಿಂದ ತರುವ ಸಮಯದಲ್ಲೇ ಹಾಳಾಗಿದ್ದುದರಿಂದ ಅದನ್ನು ರಿಪೇರಿ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದರು ನಮ್ಮ ಮಾರ್ಗದರ್ಶಿ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ; ಮರದ ಒಂದಿಂಚು ಜಾಗವನ್ನೂ ಬಿಡದೆ, ಅದರಲ್ಲಿ ಅತ್ಯದ್ಭುತ ಕಲಾವಂತಿಕೆಯನ್ನು ಬಿಂಬಿಸಿದ ಶಿಲ್ಪಿಗಳ ನೈಪುಣ್ಯತೆಗೆ ಬೆರಗಾಗದಿರಲು ಸಾಧ್ಯವೇ ಇಲ್ಲ!   

ದಕ್ಷಿಣಕನ್ನಡದಲ್ಲಿಯೂ ವೀರಶೈವರ  ನೆಲೆಯಿತ್ತು ಎಂಬುದಕ್ಕೆ ಸಾಕ್ಷಿಯಾಗಿರುವ  ಈ ಜಂಗಮ ಮಠದಲ್ಲಿ ಸ್ಥೂಲವಾಗಿ ಎರಡು ವಿಭಾಗಗಳಿವೆ; ಒಂದು ಹೊರಭಾಗ, ಸಾರ್ವಜನಿಕ ವ್ಯವಹಾರಕ್ಕೆ, ಇನ್ನೊಂದು ಒಳಭಾಗ ಯತಿಗಳ ಧಾರ್ಮಿಕ ಕೆಲಸಗಳಿಗೆ. ಒಂದೇ ಮರದಿಂದ ಮಾಡಲ್ಪಟ್ಟ  ಬಹಳ ದಪ್ಪದ ಕಂಬಗಳ, ಮೂರು ಹಂತಗಳ ಜಗಲಿಗಳಿರುವಂತೆ ಕಟ್ಟಿರುವ ಈ ಕಟ್ಟಡವು ತುಂಬಾ ತಂಪಾಗಿದೆ. ಅವುಗಳು  ಬೇರೆ ಬೇರೆ ಮಠಗಳಿಂದ ತಂದು ಸ್ಥಾಪಿಸಲಾಗಿದ್ದುದರಿಂದ, ಮೇಲಿನ ಹಂತವು ಮುಖ್ಯ ಮಠವಾಗಿ ಪರಿಗಣಿಸಲ್ಪಟ್ಟಿದೆ. ಮೂರೂ ಮಠಗಳ ಪ್ರತೀಕವಾಗಿ ಸುಂದರವಾದ ಪಲ್ಲಕ್ಕಿಯನ್ನು ಇರಿಸಿದ್ದಾರೆ. ಗೋಡೆಯ ಮೇಲಿದ್ದ ವಿಶೇಷ ತರಹದ ಚಿತ್ರಗಳು, ಉದ್ಧರಣಿ ಕಲೆಯಲ್ಲಿ ಬಿಂಬಿತವಾಗಿವೆ. ಇವುಗಳು, ಚಿತ್ರಕಲೆಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ರಚಿಸಿದ ಶಿವಲಿಂಗ,ಕುಂಡಲಿನಿ, ಜಾತಕ ಇತ್ಯಾದಿಗಳ ಚಿತ್ರಗಳಾಗಿದ್ದವು. ಅಲ್ಲಿಯ ಪೂಜಾಕೋಣೆಯಲ್ಲಿ ಪೂಜಾ ಸಾಮಗ್ರಿ, ಪಾತ್ರೆ ಪಗಡಿ, ಪಾದುಕೆ ಇತ್ಯಾದಿಗಳು ಯಥಾಸ್ಥಿತಿಯಲ್ಲಿ ಕಾಪಿಡಲ್ಪಟ್ಟಿವೆ. ಮೇಲಿನ ಜಗುಲಿಯಲ್ಲಿ, ದೇಗುಲದ ಮುಂದೆ ನಮ್ಮನ್ನು ಕುಳ್ಳಿರಿಸಿ, ಅಲ್ಲಿಯ ನೆನಪಿಗೋಸ್ಕರ ಚಂದದ ಫೋಟೋವೊಂದನ್ನು ಕ್ಲಿಕ್ಕಿಸಿದರು, ನಮ್ಮ ಮಾರ್ಗದರ್ಶಿ.

ಅಲ್ಲಿಂದ ಹೊರಗಡೆ ಬಂದಾಗ ಬಲ ಪಾರ್ಶ್ವದಲ್ಲಿ, ಅನತಿ ದೂರದಲ್ಲಿ  ನೀರು ತುಂಬಿದ ದೊಡ್ಡದಾದ ಕೆರೆಯೊಂದು ಕಾಣುತ್ತಿತ್ತು. ಅಲ್ಲಿದ್ದ ವಿಶೇಷ ಗುಣದ ಕೆಂಪುಮಣ್ಣನ್ನು ಇಟ್ಟಿಗೆ ತಯಾರಿಸಲು ಉಪಯೋಗಿಸುತ್ತಿದ್ದರಂತೆ. ಹಾಗೆಯೇ ವರ್ಷಾನುಗಟ್ಟಲೆ ಮಣ್ಣು ತೆಗೆದಾಗ ರೂಪುಗೊಂಡ ಅಗಾಧ ಹೊಂಡದಲ್ಲಿ ನೀರು ತುಂಬಿ ಕೆರೆಯಾಗಿ ಮಾರ್ಪಟ್ಟಿತ್ತು. ಇಲ್ಲಿಯ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಪಳ್ಳ ಅಂದರೆ  ಆಳವಿಲ್ಲದ ಕೆರೆ ಎಂದರ್ಥ. ಆ ಮಣ್ಣುಪಳ್ಳ ಎಂಬ ಮಾತಿನಿಂದಲೇ ಮುಂದೆ ಮಣಿಪಾಲ ಎಂಬ ಹೆಸರು ರೂಪುಗೊಂಡಿತು ಎಂದು ನಮಗೆ ತಿಳಿದಿರದ ಮಾಹಿತಿಯೊಂದನ್ನು ತಿಳಿಸಿದರು..ಮಾರ್ಗದರ್ಶಿಯವರು.

ಹಾಗೆಯೇ ಮುಂದೆ ಸಾಗುತ್ತಾ ದಾರಿ ಪಕ್ಕದಲ್ಲಿದೆ.. 200ವರ್ಷಗಳಷ್ಟು ಹಳೆಯದಾದ ಕೋಣಿ ಕಾರಂತರ ಮನೆ. ಕುಂದಾಪುರ-ಬಸ್ರೂರು ನಡುವಿನ ವಡೇರಹೋಬಳಿ ಗ್ರಾಮದ ಕಾರಂತರೆಂದರೆ, ಹತ್ತೂರುಗಳಲ್ಲಿ ಹೆಸರುವಾಸಿ. ಈ ಕೋಣಿ ಕಾರಂತರ ಮನೆಯ ವಿಶಾಲ ಹೆಬ್ಬಾಗಿಲ ಚಾವಡಿಯು ಮನಸೆಳೆಯುತ್ತದೆ. ಅದರ ಹೊರ ವರಾಂಡದ ವಿಶಾಲವಾದ, ಎರಡು ಹಂತಗಳ ಜಗುಲಿಯಲ್ಲಿ ಚೌಕಾಕಾರದ ಬೃಹದಾಕಾರದ ಕಂಬಗಳಿದ್ದು, ಬಾಗಿಲು – ದಾರಂದಗಳು ಚಂದದ ಕೆತ್ತನೆಗಳಿಂದ ಕೂಡಿದೆ. ಇಲ್ಲಿ ಕೃಷಿ ಕೆಲಸಗಳ ಉಸ್ತುವಾರಿ ಮತ್ತು ಸಾರ್ವಜನಿಕರೊಂದಿಗಿನ  ವ್ಯವಹಾರ ನಡೆಸಲ್ಪಡುತ್ತಿತ್ತು. ಹೊರ ವರಾಂಡದ ಆನೆಬಾಗಿಲನ್ನು ದಾಟಿ ಒಳ ಹೋದರೆ, ಇಕ್ಕೆಲಗಳಲ್ಲಿ ಒಳಚಾವಡಿಯು ವಿಶಾಲವಾಗಿ ಹರಡಿಕೊಂಡಿದೆ. ಇಲ್ಲಿಯೂ ಎರಡು ಹಂತದ ಜಗುಲಿಗಳಿದ್ದು, ಬಲಬದಿಗೆ ಉಪ್ಪರಿಗೆ ಮೇಲೇರಲು ಮೆಟ್ಟಲುಗಳಿವೆ. ಅಲ್ಲಿಯೇ ಅಡುಗೆಗೆ, ಊಟಕ್ಕೆ, ವಿಶ್ರಾಂತಿಗೆ ಪ್ರತ್ಯೇಕ ಕೊಠಡಿಗಳಿದ್ದು; ಒಟ್ಟಾರೆಯಾಗಿ ಈ ಮನೆಯು ಗ್ರಾಮೀಣ ವೈಭವದ ಗತಕಾಲ ಇತಿಹಾಸದ ಪಳೆಯುಳಿಕೆಯಂತಿದೆ. ಈ ಮನೆಯುಲ್ಲಿ ರಿಪೇರಿ ಕೆಲಸ ನಡೆಯುತ್ತಿದ್ದುದರಿಂದ ಮನೆಯ ಒಳಭಾಗವನ್ನು ಹೊರಗಿನಿಂದಲೇ ನಿರುಕಿಸಿ  ತೃಪ್ತಿಪಟ್ಟುಕೊಳ್ಳಬೇಕಾಯಿತು. ತುಂಬಾ ದೊಡ್ಡದಾದ ಆ ಮನೆಯ ಹೊರಗೋಡೆಯ ಮೇಲ್ಭಾಗದಲ್ಲಿ, ಛಾವಣಿಯ ಸಮೀಪ ಕೆಂಪು ಕಾವಿ ಬಣ್ಣದ ಗೋಡೆಯಲ್ಲಿ ಬಿಳಿಬಣ್ಣದಲ್ಲಿ ಬರೆದ ಸುಂದರ ಜಾನಪದ ಶೈಲಿಯ ಚಿತ್ರಗಳು ವಿಶೇಷ ರೀತಿಯಲ್ಲಿ ಗಮನ ಸೆಳೆಯುತ್ತವೆ.

ಮುಂದುವರಿಯುವುದು…..

-ಶಂಕರಿ ಶರ್ಮ, ಪುತ್ತೂರು.

9 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ

 2. ನಾಗರತ್ನ ಬಿ. ಅರ್. says:

  ತಮ್ಮ ಪ್ರವಾಸ ದ ಅನುಭವದ ಮೂಸೆಯಲ್ಲಿ ಅದ್ದಿ ಉಣಬಡಿಸಿರುವ ಪರಿ ಅದೂ ಚಿತ್ರದ ಮೂಲಕ ಬಹಳ ಮುಂದೆ ತಂದಿದೆ.ದನ್ಯವಾದಗಳು.ಮೇಡಂ.

  • ಶಂಕರಿ ಶರ್ಮ says:

   ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

 3. Dr Krishnaprabha says:

  ಒಳ್ಳೆಯ ಲೇಖನ

  • ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ಕೃಷ್ಣಪ್ರಭಾ ಮೇಡಂ.

 4. padmini says:

  ಗತಕಾಲ ಇತಿಹಾಸದ ಚಿತ್ರ ಚೆನ್ನಾಗಿದೆ.

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು..ಪದ್ಮಿನಿ ಮೇಡಂ.

 5. Padma Anand says:

  ಲೇಖನದ ವರ್ಣನೆಯಿಂದ ಹಿಂದಿನ ತಲೆಮಾರಿನ ನಮ್ಮ ಜನರ ಕಲಾನೈಪುಣ್ಯತೆ ಎಷ್ಟು ಶ್ರೀಮಂತಾಗಿತ್ತು ಎಂಬುದರ ಪರಿಚಯ ಆಗುತ್ತಿದೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: