ರುಚಿಯಲ್ಲೂ ಸೈ, ಆರೋಗ್ಯಕ್ಕೆ ಜೈ
ಸುರಹೊನ್ನೆಯ ಒಡತಿ ಶ್ರೀಮತಿ ಹೇಮಮಾಲಾ ಅವರು ಪ್ರಯೋಗಾರ್ಥವಾಗಿ ಹೂವು ಎಂಬ ಪದವನ್ನು ಥೀಮಿಗಾಗಿ ನೀಡಿದ್ದಾರೆ. ಹೂವುಗಳೆಂದರೆ ಎಲ್ಲರಿಗೂ ಇಷ್ಟ. ಗಿಡದಲ್ಲಿ ಅರಳಿ ನಗುವ ವಿವಿಧ ಬಣ್ಣದ/ಸುವಾಸನೆಯ ಹೂಗಳ ಅಂದ-ಚಂದ-ವಯ್ಯಾರ ಕಂಡು ಸಂತಸಪಡುವವರು ಹಲವರಾದರೆ ಹೂವನ್ನು/ಹೂಗಳನ್ನು ಮುಡಿದು ಸಂಭ್ರಮಿಸುವರು ಹೆಂಗಳೆಯರು. ಹೂವಿನ ಸುತ್ತ ಮುತ್ತ ಅದೆಷ್ಟು ಬಾಲ್ಯದ ಅನುಭವಗಳು!ಒಂದೊಂದು ಹೂವಿಗೂ ಒಂದೊಂದು ಬಣ್ಣ ಇರುವಂತೆ, ಒಂದೊಂದು ಹೂವಿನ ಜೊತೆಗೂ ನಂಟು ಇದ್ದೇ ಇದೆ. ಹಾಗಾಗಿ ಈ ಥೀಮ್ ನನಗೆ ತುಂಬಾ ಇಷ್ಟವಾಯಿತು.
ವಿವಿಧ ಹೂವುಗಳ ಜೊತೆಗೆ ಇರುವ ಒಡನಾಟವನ್ನು ವರ್ಷಪೂರ್ತಿ ಬರೆದರೂ ಮುಗಿಯದಷ್ಟಿವೆ. ಹೂವುಗಳನ್ನು ಜುಟ್ಟಿಗೆ ಮುಡಿದು ಸಂಭ್ರಮಿಸಿದ ನೆನಪುಗಳ ಜೊತೆ, ಹೂವುಗಳನ್ನು ಬಳಸಿ ತಯಾರಿಸಿದ ವ್ಯಂಜನಗಳನ್ನು ಹೊಟ್ಟೆಗೆ ಇಳಿಸಿದ ನೆನಪುಗಳ ಬಗ್ಗೆ ಈ ಲೇಖನ. ಈ ಥೀಮ್ ನೋಡಿದಾಗ ಮೊದಲು ನನ್ನ ನೆನಪಿಗೆ ಬಂದದ್ದು ನಮ್ಮ ಮನೆಯ ಅಡಿಕೆತೋಟದ ಬದಿಯಲ್ಲಿ ಎತ್ತರವಾಗಿ ಬೆಳೆದಿದ್ದ ಕೆನೆಬಣ್ಣದ ದಾಸವಾಳದ ಹೂಗಳನ್ನು ಬಳಸಿ ಮಾಡುತ್ತಿದ್ದ ಮಜ್ಜಿಗೆ ತಂಬುಳಿ! ಜೊತೆಗೆ ಚೀನೀಕಾಯಿ ಹೂವುಗಳ ಎಸಳಿನ ದೋಸೆ! ನಂತರ ಕಿಸ್ಕಾರ/ಕೊಡಸಿಗೆ ಹೂಗಳ ತಂಬುಳಿ!
ನಮ್ಮ ಮನೆಯ ಅಡಿಕೆತೋಟದ ಬದಿಯಲ್ಲಿದ್ದ ಆ ಗಿಡದ ತುಂಬಾ ಕೆನೆಯ ಬಣ್ಣದ ದಾಸವಾಳ ಹೂಗಳು ಅರಳಿರುತ್ತಿದ್ದವು. ಕೆನೆಬಣ್ಣದ ಐದು ಎಸಳುಗಳ ಮಧ್ಯೆ ಮರೂನ್ ಬಣ್ಣ ಹೊಂದಿದ್ದ ಆ ದಾಸವಾಳ ಹೂವುಗಳನ್ನು ತೋಟಕ್ಕೆ ಹೋದಾಗಲೆಲ್ಲಾ, ದೇವರ ಪೂಜೆಗೆಂದು ಕೊಯಿದು ತರುವ ನೆನಪಿಗಿಂತಲೂ ಆ ದಾಸವಾಳ ಹೂವುಗಳನ್ನು ಬಳಸಿ ದಿಢೀರ್ ಪದಾರ್ಥ ಮಾಡುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹದಿನೈದರಿಂದ ಇಪ್ಪತ್ತು ಹೂವುಗಳ ಎಸಳುಗಳನ್ನು ಬೇರ್ಪಡಿಸಿ, ಆ ಎಸಳುಗಳನ್ನು ಕಲ್ಲುಪ್ಪಿನ ಹರಳುಗಳ ಜೊತೆ ಕಿವುಚಿ ನಂತರ ಅದೇ ದಿನ ತಯಾರಿಸಿದ ಮಜ್ಜಿಗೆಗೆ ಹಾಕಿ, ಬಳಿಕ ಗಾಂಧಾರಿ ಮೆಣಸು ಅಥವಾ ಹಸಿಮೆಣಸು ಕತ್ತರಿಸಿ ಹಾಕಿ ಕಡೆಗೆ ಸಾಸಿವೆ- ಉದ್ದಿನಬೇಳೆ-ಕರಿಬೇವು ಒಗ್ಗರಣೆ ಕೊಟ್ಟರೆ ದಾಸವಾಳ ಮಜ್ಜಿಗೆ ತಂಬುಳಿ ಸಿದ್ಧ. ಆ ರುಚಿಯನ್ನು ನಾಲಿಗೆ ಇನ್ನೂ ಮರೆತಿಲ್ಲ.
ಚೀನೀಕಾಯಿ ಬಳ್ಳಿಯಲ್ಲಿ ಬಿಡುತ್ತಿದ್ದ ಗಂಡುಹೂವುಗಳನ್ನು ಬಳಸಿ ತಯಾರಿಸುತ್ತಿದ್ದ ಖಾರದೋಸೆಯ ಆ ಸವಿರುಚಿಯನ್ನು ಹೇಗೆ ತಾನೇ ಮರೆಯಲಿ? ಪ್ರತಿ ಮನೆಯಲ್ಲೂ ಅಡುಗೆಗೆ ಬೇಕಾದ ತರಕಾರಿಗಳನ್ನು ಬೆಳೆಯುವುದು ಸರ್ವೇಸಾಮಾನ್ಯವಾಗಿತ್ತು. ಹಟ್ಟಿಯ ಗೊಬ್ಬರ ಯಥೇಚ್ಛವಾಗಿ ಹಾಕಿದ ಕಾರಣ ತರಕಾರಿ ಗಿಡ/ಬಳ್ಳಿಗಳು ಸೊಕ್ಕಿ ಬೆಳೆಯುತ್ತಿದ್ದವು. ಚೀನೀಕಾಯಿ, ಕುಂಬಳಕಾಯಿ, ಹಾಗಲಕಾಯಿಗಳಂತಹ ಬಳ್ಳಿಗಿಡಗಳಲ್ಲಿ ಹೆಣ್ಣು ಹೂಗಳು ಹಾಗೂ ಗಂಡು ಹೂಗಳು ಪ್ರತ್ಯೇಕವಾಗಿರುತ್ತಿದ್ದವು. ಚೀನೀಕಾಯಿಯ ಬಳ್ಳಿಯಲ್ಲಿ ಅರಳುವ ಹೆಣ್ಣುಹೂವುಗಳಿಗಿಂತ ಗಂಡುಹೂವುಗಳ ಸಂಖ್ಯೆಯೇ ಜಾಸ್ತಿ. ಆ ಗಂಡು ಹೂವುಗಳನ್ನು ತುಳುವಿನಲ್ಲಿ ಮರ್ಲ್ ಪೂ ಅಂದರೆ ಹುಚ್ಚು ಹೂವು ಅನ್ನುತ್ತಿದ್ದರು. ಗಂಡು ಹೂವುಗಳನ್ನು ಕೊಯಿದು ತಂದು ಎಸಳುಗಳನ್ನು ಬೇರ್ಪಡಿಸಿ ಖಾರದೋಸೆ ಮಾಡಲು ತಯಾರಿಸಿದ ದೋಸೆಹಿಟ್ಟಿನಲ್ಲಿ ಮುಳುಗಿಸಿ ಕಾವಲಿ ಮೇಲೆ ಜೋಡಿಸಿಟ್ಟು ಬೇಯಿಸಿ, ಪುನಃ ಅಡಿಮೇಲೆ ಮಾಡಿ ಬೇಯಿಸಿದ ಆ ದೋಸೆಯ ಸವಿ ಬಲ್ಲವನಿಗೆ ಮಾತ್ರ ಗೊತ್ತು. (ನೆನೆಸಿಟ್ಟ ಅಕ್ಕಿಯ ಜೊತೆ ತೆಂಗಿನಕಾಯಿ ತುರಿ, ಹುಣಸೆಹುಳಿ, ಒಣಮೆಣಸು, ಜೀರಿಗೆ, ಕೊತ್ತಂಬರಿ ಸೇರಿಸಿ ನುಣ್ಣಗೆ ರುಬ್ಬಿ, ನಂತರ ಸ್ವಲ್ಪ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಖಾರದೋಸೆಯ ಹಿಟ್ಟು ತಯಾರಾಗುತ್ತದೆ).
ಮತ್ತೆ ನೆನಪಿಗೆ ಬರುವುದು ಒಣಗಿಸಿದ ಕಿಸ್ಕಾರ ಅಥವಾ ಕೊಡಸಿಗೆ ಹೂಗಳ ತಂಬುಳಿ. ಗುಡ್ಡದಲ್ಲಿ ಬೆಳೆಯುವ ಗುಡ್ಡೆ ಕಿಸ್ಕಾರ/ಕೊಡಸಿಗೆ ಹೂಗಳನ್ನು ಕಿತ್ತು (ಮೊಗ್ಗುಗಳನ್ನೂ ಸೇರಿಸಬಹುದು), ತೊಳೆದು, ಬಿಸಿಲಿನಲ್ಲಿ ಒಣಗಿಸಿಟ್ಟುಕೊಂಡರೆ ಬೇಕೆಂದಾಗ ತಂಬುಳಿ ಮಾಡಬಹುದು. ಬೇಕಾದಷ್ಟು ಒಣಗಿದ ಹೂಗಳನ್ನು ತುಪ್ಪದಲ್ಲಿ ಹುರಿದು, ತುರಿದ ತೆಂಗಿನಕಾಯಿ ಒಂದು ಹಿಡಿ, ಒಂದು ಚಮಚ ಜೀರಿಗೆ, ಹಸಿರುಮೆಣಸು ಅಥವಾ ಕಾಳುಮೆಣಸು ಸೇರಿಸಿ ರುಬ್ಬಿ, ಇದಕ್ಕೆ ಬೇಕಾದಷ್ಟು ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಾಸಿವೆ-ಕರಿಬೇವಿನ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ರುಚಿಗೆ ಬೇಕಿದ್ದರೆ ಸ್ವಲ್ಪ ಬೆಲ್ಲ ಹಾಕಬಹುದು. ಒಣಗಿಸಿದ ಕೊಡಸಿಗೆ ಹೂಗಳ ತಂಬುಳಿ ಮಳೆಗಾಲದ ಶೀತ, ಅಜೀರ್ಣದ ಬೇಧಿಗಳಿಗೆ ದಿವ್ಯೌಷಧಿಯಾಗಿದೆ. ಬಿಸಿಲಿನ ಉಷ್ಣದಿಂದ ಉಂಟಾಗುವ ಹೊಟ್ಟೆನೋವು, ಮುಟ್ಟಿನ ಹೊಟ್ಟೆನೋವು, ಬಾಯಿಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಕಿಸ್ಕಾರ ತಂಬುಳಿ ಒಳ್ಳೆಯದು.
ತಕ್ಷಣವೇ ನೆನಪಿಗೆ ಬಂದ, ಅಡುಗೆಮನೆಗೆ ಕರೆತಂದ ಕೆಲವು ಹೂವುಗಳ ಬಗ್ಗೆ ಬರೆದಿರುವೆ. ನೀವೂ ಕೂಡಾ ಕೆಲವು ಹೂವುಗಳನ್ನು ಅಡುಗೆಯಲ್ಲಿ ಬಳಸಿರಬಹುದು. ಆ ಬಗ್ಗೆ ಮಾಹಿತಿ ಹಂಚಿಕೊಳ್ಳುವಿರಲ್ಲಾ?
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಹೌದು ನಾವು ಕೊಡಗಾಸನ ಹೂವಿಂದ ತಂಬುಳಿ ..ಮತ್ತೆ ಅದನ್ನು ಒಣಗಿಸಿ ತುಪ್ಪದಲ್ಲಿ ಹುರಿದು ಬಾಣಂತಿಗೆ .ಕೊಡುತ್ತಿದ್ದರು … ಕೆಮ್ಮು ಗೂ ಒಳ್ಳೆದು … ಔಷಧೀಯ ಹೂವನ್ನೆ ನೀವು ಬರೆದಿರಿ ಪ್ರಭಾ ……
ಈಗ ತಿನ್ನಬೇಕೆಂದರೂ ಸಿಗುವುದಿಲ್ಲ ಅಕ್ಕ…ಮೆಚ್ಚುಗೆಗೆ ಧನ್ಯವಾದಗಳು
ಡಾಕ್ಟರ್ ರ ಬರಹ ಎಂದಿನಂತೆ ಆರೋಗ್ಯ ಪೂಣ೯ವಾಗಿದೆ. ಉಪಯುಕ್ತ ವಾಗಿ ದೆ. ಧನ್ಯವಾದಗಳು
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು
ಬಣ್ಣ ಬಣ್ಣದ ಹೂಗಳಷ್ಟೇ ಸುಂದರವಾದ ಲೇಖನ
ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು ನಯನಾ
ಅಡಿಗೆ ಮನೆಗೆ ತಂದ ಹೊಗಳಬಗ್ಗೆ ತಿಳಿಸಿ ಅದರಿಂದ ಮಾಡುವ ವ್ಯಂಜನಗಳ ರುಚಿ ಅದರ ಉಪಯೋಗ ಓದಿದ ನನಗೆ ಅದರಲ್ಲಿ ಕೆಲವು ಮಾಡುವುದು ಗೊತ್ತಿರಲಿಲ್ಲ. ನಿಮ್ಮ ಈ ಲೇಖನದಮೂಲಕ ತಿಳಿಯಿತು ಅದಕ್ಕಾಗಿ ಧನ್ಯವಾದಗಳು ಮೇಡಂ.
Thank you very much for compliments
ಇನ್ನೂ ಕೆಲವು ಹೂವುಗಳನ್ನು ಬಳಸುವ ಬಗ್ಗೆ ಕೇಳಿದ್ದೇನೆ…ಆದರೆ ಬಳಸಿಲ್ಲ…
ಮೆಚ್ಚುಗೆಗೆ ಧನ್ಯವಾದಗಳು
ಓ.ಪ್ರಭಾ,ನಿಮ್ಮ ಲೇಖನ ಓದಿ,ನಾನು ಬಹಳ ಮೊದಲು ಮಾಡುತಿದ್ದ ಅಡುಗೆಯೆಲ್ಲಾ ಮೆಲುಕು ಹಾಕುವಂತಾಯ್ತು.
Madam your writings make me remember my childhood. Nicely written madam.
Thank you
ನಮ್ಮ ಬಾಲ್ಯದ ದಿನಗಳಲ್ಲಿ ಯಾವಾಗಲೂ ಬಳಕೆ ಆಗುತ್ತಿದ್ದ ಹೂವುಗಳು…ಈಗ ನೆನಪು ಮಾತ್ರ…
ಹೂವನ್ನು ಬಳಸಿ ಮಾಡುವ ಸುಲಭದ ಆರೋಗ್ಯಕರ ಅಡುಗೆಗಳು ಹಳ್ಳಿಗಳಲ್ಲಿ ಮಾಮೂಲು. ಆದರೆ ಹೊಸ ಪೀಳಿಗೆಗೆ ತಿಂದೂ ಗೊತ್ತಿರಲಾರದು. ಇಲ್ಲಿ ಕಸಿ ಹೂಗಳು ಬಳಕೆಯಾಗದೆ, ಪ್ರಕೃತಿಯಲ್ಲಿ ಸಹಜವಾಗಿ ಬೆಳೆದ ಹೂಗಳನ್ನೇ ಉಪಯೋಗಿಸಲ್ಪಡುತ್ತವೆ. ಸೊಗಸಾದ ಲೇಖನ.ಪ್ರಭಾ ಮೇಡಂ.
ಈಗಿನ ಪೀಳಿಗೆಯವರಿಗೆ ಈ ರುಚಿಗಳನ್ನು ತಿಳಿಸಿಕೊಡುವುದು ನಮ್ಮ ಕರ್ತವ್ಯ ಕೂಡಾ ..ಮೆಚ್ಚುಗೆಗೆ ಧನ್ಯವಾದಗಳು ಶಂಕರಿ ಅಕ್ಕ
ಹಲವು ಬಗೆಯ ಹೂಗಳಿಂದ ಮಾಡುವ ತಂಬುಳಿ ವಿಷಯ ಓದಿದಾಗ ಬಾಯಲ್ಲಿ ನೀರೂರಿತು
ಮೆಚ್ಚುಗೆಗೆ ಧನ್ಯವಾದಗಳು