ಮಣ್ಣಿನ ಮಕ್ಕಳ ಪ್ರೀತಿಪಾತ್ರರು ಗೌರಿ-ಗಣಪತಿಯರು
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣಿಂದ ಸಕಲ ದರುಶನಗಳೆಲ್ಲ
ಮಣ್ಣು ಬಿಟ್ಟವರಿಗೆ ಆಧಾರವೇ ಇಲ್ಲ
ಅಣ್ಣಗಳಿರಾ ಕೇಳಿರಯ್ಯ
ಗೌರಿ-ಗಣೇಶನ ಬಗ್ಗೆ ಬರೀರಿ ಅಂತ ಅಂದರೆ ಇವರೇನಪ್ಪ ಪುರಂದರದಾಸರ ಕೀರ್ತನೆ ಹಾಡುತ್ತಾ ಕುಳಿತರಲ್ಲ ಅಂದುಕೊಂಡಿರಾ? ನಿಜ, ನೀವು ಅಂದುಕೊಳ್ಳುತ್ತಿರುವುದು ಸರಿಯಾಗಿಯೇ ಇದೆ. ಪುರಂದರದಾಸರು ಮುಂದುವರೆದು ಹೇಳುತ್ತಾರೆ, ನಮಗೆ ಅನ್ನ ಉದಕ ವೀಯುವುದು ಮಣ್ಣು, ಬಂಗಾರ ಬೊಕ್ಕಸವೇ ಮಣ್ಣು , ಕೈಲಾಸವೇ ಮಣ್ಣು….. ದೇವರಗುಡಿ,ಮನೆ ಮಠ, ಅಟ್ಟುಣುವ ಮಡಕೆ, ಕೋಟೆ, ಗಂಗೆಯ ತಡಿ, ವೈಕುಂಠ ಕೂಡ ಮಣ್ಣು! ಬೆಳೆ ಕೊಡುವುದು ಮಣ್ಣು, ಸತ್ತವರನು ಹೂಳುವುದು ಮಣ್ಣು…… ಹೀಗೆ ವಿಶ್ವವೇ ಮಣ್ಣಿನಿಂದಾಗಿದೆ. ಇಂತಹ ಮಣ್ಣಿನ ಮಹತ್ವದಿಂದಲೇ ಗೌರಿ-ಗಣೇಶ ಹಬ್ಬಕೂಡ ಆಚರಣೆಗೆ ಬಂದಿದೆ.
ಒಂದು ಹಿಡಿ ಮಣ್ಣಿದ್ದರೆ ಸಾಕು, ಅದು ತನ್ನೊಳಗೊಂದು ಕುಡಿ ಹೊರಡಿಸುತ್ತದೆ. ಮಣ್ಣಿನ ಒಂದು ಕಣ ಕೂಡ ಸುಮ್ಮನೆ ಕೂಡುವುದಿಲ್ಲ. ಅದರ ಕೆಲಸವೇ ಬದುಕುಕೊಡುವುದು, ಹುಟ್ಟುಕೊಡುವುದು. ಮಣ್ಣಿಲ್ಲದ ಜೀವವೇ ಇಲ್ಲ. ಅಂತೆಯೇ ಪಂಚಭೂತಗಳೇ ನಮ್ಮ ಜೀವನಾಧಾರ. ಭೂಮಿ ಇಲ್ಲದಿದ್ದರೆ ನಾವು ಕಾಲೂರುವುದೆಲ್ಲಿ? ಗಾಳಿಯಿಲ್ಲದಿದ್ದರೆ? ಇಂತಹ ಜೀವನಾಧಾರಗಳೆಲ್ಲ ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಪೂಜೆಗೊಳ್ಳುತ್ತವೆ.
ಹಾಗೆಯೇ ನಮ್ಮ ಹಿಂದೂಗಳಿಗೆ ಸಂತಸವೀಯುವ ಹಬ್ಬವೆಂದರೆ ಅದು ಗೌರಿಗಣೇಶ ಹಬ್ಬ. ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಸ್ಥಿತಿಕರ್ತ, ಶಿವ ಲಯಕರ್ತ. ಈ ಮೂವರನ್ನು ನಾವು ವಿಧ ವಿಧವಾಗಿ ಧ್ಯಾನಿಸುತ್ತೇವೆ. ಅಂತೆಯೇ ಶಿವನಿಗೊಂದು ಸಂಸಾರದ ಕಟ್ಟುಪಾಡುಗಳನ್ನು ವಿಧಿಸಿ, ನಮ್ಮಲ್ಲಿರುವ ಅಂದರೆ ಮನುಷ್ಯನ ಎಲ್ಲ ಗೊಂದಲಗಳನ್ನು ಅವನಲ್ಲಿ ನೋಡ ಬಯಸಿದ್ದೇವೆ. ಹೆಂಡತಿ, ಮಕ್ಕಳು, ತವರು, ಸವತಿ ಹೀಗೆ ಎಲ್ಲವನ್ನೂ ಅವನ ಬದುಕಿನಲ್ಲಿ ತಂದಿದ್ದೇವೆ. ದೈವತ್ವದಲ್ಲೂ ನಾವಿದನ್ನು ನೋಡುವುದರ ಮೂಲಕ ನಮ್ಮನ್ನು ನಾವು ಅಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ. ತಮಾಷೆಯೆಂದರೆ `ಅಯ್ಯೋ! ಅಂತಾ ಪರಮೇಶ್ವರನನ್ನೇ ವಿಧಿ ಬಿಡಲಿಲ್ಲ. ತಾಯಿ ಪಾರ್ವತೀದೇವಿ ಅನುಭವಿಸಿದ ಕಷ್ಟಕ್ಕಿಂತಾ ನಮ್ಮ ಕಷ್ಟ ದೊಡ್ಡದಾ? ವಿಧಿ ಮುಂದೆ ದೇವ್ರು-ಮನುಷ್ಯ ಇಬ್ರು ಒಂದೇ‘ ಎಂದು ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುವ ಅವಕಾಶವನ್ನು ನಮಗೆ ನಾವೇ ಕಲ್ಪಿಸಿಕೊಂಡು ಸಂತೋಷವಾಗಿದ್ದೇವೆ.
ಈ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬವನ್ನು ವಿಶ್ಲೇಷಿಸುತ್ತಾ ಹೋದರೆ ನೂರಾರು ಕತೆಗಳನ್ನು ಇವರಿಬ್ಬರ ಬಗ್ಗೆ ನಾವು ಓದಿದ್ದೇವೆ, ಕೇಳಿದ್ದೇವೆ, ಸಡಗರಿಸಿದ್ದೇವೆ. ಅದರಂತೆ ನಮಗೆ ಅನ್ನ ನೀಡುವ, ಎಲ್ಲದಕ್ಕೂ ಆಶ್ರಯವಾಗಿರುವ ಮಣ್ಣಿಗೂ ಈ ಹಬ್ಬಕ್ಕೂ ಇರುವ ಸಂಬಂಧವನ್ನು ಇಂದು ನೋಡೋಣ.
ಗೌರಿಯನ್ನು ತರುವ ಮೊದಲು ಗಂಗೆಯನ್ನು ತರುತ್ತೇವೆ. ಅಂದರೆ ಜಲವಿಲ್ಲದೆ ಜೀವಜಾಲವಿಲ್ಲ! ಗಂಗೆಯನ್ನು ಪೂಜಿಸಿ ಅವಳ ಪ್ರೋಕ್ಷಣೆಯಿಂದ ಎಲ್ಲವೂ ಪವಿತ್ರಗೊಂಡ ಮೇಲೆ ಗೌರಿಪೂಜೆಗೆ ಕಂಕಣಬದ್ಧರಾಗುತ್ತೇವೆ. ಹದಿನಾರು ಗಂಟುಗಳಿರುವ ಈ ಕಂಕಣ; ಸ್ತ್ರೀಯರಿಗೆ ರಕ್ಷೆಯೂ ಹೌದು, ವ್ರತಕ್ಕೆ ತಯಾರಿಯ ಸೂಚಕವೂ ಹೌದು. ಗೌರಿಯನ್ನು ತಂದು ಪ್ರತಿಷ್ಠಾಪಿಸುವ ಸ್ಥಳವನ್ನು ಸ್ವಚ್ಛವಾಗಿರಿಸಿ, ಅಲಂಕರಿಸಿ ಮೊದಲು ಮೃತ್ತಿಕಾ ಗೌರಿಯನ್ನು ತಯಾರಿಸಿ ಅದನ್ನುಒಂದು ವೀಳೆಯದೆಲೆಯ ಮೇಲೆ ಪ್ರತಿಷ್ಠಾಪಿಸಿ, ಆ ಮೃತ್ತಿಕಾ ಗೌರಿಗೆ ಷೋಡಷೋಪಚಾರಗಳಿಂದ ಅಲಂಕರಿಸಿ ಪೂಜಿಸುತ್ತೇವೆ. ಅವಳಿಗೇ ನಾವು ತವರುಮನೆಯ ಬಾಗಿನವನ್ನು ಸಮರ್ಪಿಸುತ್ತೇವೆ. ತವರಿನ ಬಾಗಿನ ಪಡೆದ ಗೌರಿಯನ್ನು ಮತ್ತೆ ನೀರಿನಲ್ಲಿ ವಿಸರ್ಜಿಸಿಬಿಡುತ್ತೇವೆ. ಮಣ್ಣಿಂದ ಮೂಡಿಬರುವ ಗೌರಿ ನಮಗೆ ಅತ್ಯಂತ ಶ್ರೇಷ್ಠಳು. ಬೇಕಾದರೆ ನಾವು ಈ ಮೃತ್ತಿಕಾ ಗೌರಿಯ ಜೊತೆಗೆ ಹರಿದ್ರಾಗೌರಿ, ಸ್ವರ್ಣಗೌರಿ, ಕುಂಕುಮ ಗೌರಿ ಹೀಗೆ ನಾನಾವಿಧದ ಗೌರಿಯರನ್ನು ತಯಾರಿಸಿ ಪೂಜಿಸುವ ಸಂಪ್ರದಾಯವಿದೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಹಿಂದೆ ಅಂದರೆ ಕೆಲವು ದಶಕಗಳ ಹಿಂದೆ ಮಣ್ಣಿನ ನೆಲವನ್ನು ಗುಡಿಸಿ ಸಾರಿಸಿ ಮಣ್ಣಿನ ಮೇಲೇ ಮಣ್ಣಿನಿಂದ ತಯಾರಾದ ಗೌರಿಯನ್ನು ಕೂರಿಸಿ ಸಂಭ್ರಮಿಸುತ್ತಿದ್ದರು. ಅವಳಿಗೆ ಸಲ್ಲಿಸಬೇಕಾದ ಸಕಲೊಂದನ್ನು ಮಣ್ಣಿನ ಮೇಲೆಯೇ ಇಟ್ಟು, ಪೂಜಿಸುತ್ತಿದ್ದರು. ಇದು ನಾವು ಭೂಮಿತಾಯಿಯ ಮೇಲಿಟ್ಟಿರುವ ಪೂಜ್ಯಭಾವವನ್ನು ತೋರಿಸಿದರೆ, ಮಣ್ಣಿಂದ ಮೂಡಿಸಿದ ಗೌರಿಯನ್ನು ಗಂಗೆಯಲ್ಲಿ ಲೀನಗೊಳಿಸಿ, ಬಾಗಿನ ಸಮರ್ಪಿಸಿ, ಅವಳಿಗಾಗಿ ಹೋಳಿಗೆ ಹೂರಣಗಳ ನೈವೇದ್ಯ ತಯಾರಿಸಿ ತವರಿಗೆ ಬಂದವಳನ್ನು ಸಂತೋಷಪಡಿಸಿ ಕಳಿಸಿಕೊಟ್ಟು ನಾವು ಕೂಡ ಭರ್ಜರಿ ಭೋಜನ ಮಾಡಿ ಸಂಭ್ರಮಿಸುತ್ತೇವೆ. ಬದುಕಿನ ಗಾಢ ಅನ್ಯೋನ್ಯತೆಯನ್ನು ಇದು ಸಾರುತ್ತದೆ. ಮೊರದ ಬಾಗಿನದಲ್ಲಿ ತವರಿನಿಂದ ಅವಳಿಗೆ ಹರಿಷಿಣ ಕುಂಕುಮ, ಕರಿಮಣಿ ಕನ್ನಡಿ, ಬೆಲ್ಲ, ಧಾನ್ಯಗಳು, ಅಕ್ಕಿ, ಬೇಳೆಗಳು, ಅಲಂಕಾರಿಕ ಸಾಮಗ್ರಿಗಳು, ಸೀರೆ-ರವಿಕೆ ಕಣಗಳು, ಗೆಜ್ಜೆವಸ್ತ್ರ ಮೊದಲ್ಗೊಂಡು ಅದನ್ನು ಮತ್ತೊಂದು ಮೊರದಿಂದ ಮುಚ್ಚಿ ಮುಚ್ಚಟೆಯಾಗಿ ಗೌರಿಬಾಗಿನವನ್ನು ಸಮರ್ಪಿಸಿ ಧನ್ಯರಾಗುತ್ತೇವೆ. ಈ ಎಲ್ಲ ಆಚರಣೆಗಳು ಮನಸ್ಸನ್ನು ಸಂತೋಷಗೊಳಿಸಿ, ನಾಲ್ಕಾರು ದಿನ ಸಂಭ್ರಮಿಸುವಂತೆ ಮಾಡುತ್ತದೆ. ಗೌರಿ ನಮ್ಮನೆಗೆ ಕೈಲಾಸದಿಂದ ಇಳಿದು ಬಂದಳೇ ಇಲ್ಲವೇ…… ಪ್ರತಿಮನೆಗೂ ಹೋದಳೇ….. ಎಲ್ಲರಿಂದಲೂ ಪೂಜೆ ಸ್ವೀಕರಿಸಿದಳೇ…..ಇವೆಲ್ಲ ಪ್ರಶ್ನೆಗಳು ಹಬ್ಬದ ಸಡಗರದಲ್ಲಿ ನಗಣ್ಯವಾಗುತ್ತವೆ. ಆದರೆ ಎಲ್ಲರೂ ಸೇರಿ ಮಾಡುವ ಹಬ್ಬದ ಬಿಂಬ ಮಾತ್ರ ಮನದಲ್ಲಿ ಸ್ಥಾಯಿಯಾಗುತ್ತದೆ. ಮುಂದಿನದೆಲ್ಲಅವರವರ ನಂಬಿಕೆಗೆ ಬಿಟ್ಟದ್ದು.
ಇನ್ನು ಗಣಪತಿಯ ವಿಷಯಕ್ಕೆ ಬರೋಣ.ಗಣಪತಿ ಎಂದರೆ ಮಕ್ಕಳು ಮರಿಗೆಲ್ಲ ಬಹುಪ್ರಿಯ. ಅವನ ಡೊಳ್ಳುಹೊಟ್ಟೆ, ಉದ್ದ ಸೊಂಡಿಲು, ಸುತ್ತಿಕೊಂಡ ಹಾವು, ಅವನ ವಾಹನ ಪುಟಾಣಿ ಇಲಿ….. ಇದೆಲ್ಲವೂ ಮಕ್ಕಳಿಗೇನು ದೊಡ್ಡವರಿಗೇ ಸೋಜಿಗವೆನಿಸುತ್ತದೆ ಮತ್ತುರಂಜನೀಯವೆನಿಸುತ್ತದೆ. ಈ ವಿಶಿಷ್ಟವಾದ ಆಕಾರದ ಗಣಪತಿಯ ಉದ್ಭವಕ್ಕೆ ಕಾರಣವಾದ ಕತೆಗಳೆಲ್ಲ ನಿಮಗೆ ಗೊತ್ತಿವೆ. ಶಿವನನ್ನು ತಡೆದು ತಲೆ ಕಡಿಸಿ ಕೊಂಡಿದ್ದರಿಂದ ಹಿಡಿದು, ಇಲಿಯ ಮೇಲೆ ಕೂತ ಡೊಳ್ಳುಹೊಟ್ಟೆ ಗಣಪ ಜಾರಿ ನೆಲಕ್ಕೆ ಬಿದ್ದು ಚಂದ್ರ ಗಹಗಹಿಸಿ ನಕ್ಕು, ನಕ್ಕ ಚಂದ್ರನಿಗೆ ಗಣಪ ಶಾಪ ಕೊಟ್ಟಿದ್ದು, ತಂದೆತಾಯಿಯರನ್ನೆ ಪ್ರದಕ್ಷಿಣೆ ಹಾಕಿ ಬುದ್ಧಿವಂತಿಕೆ ಮೆರೆದದ್ದು, ಮೂರು ಬಾರಿ ರಾವಣಾಎಂದು ಕೂಗಿ ಶಿವಲಿಂಗವನ್ನು ಕೆಳಗಿಟ್ಟುಬಿಟ್ಟದ್ದು ಹೀಗೆ ಅನೇಕಾನೇಕ ಕತೆಗಳೆಲ್ಲ ಆಬಾಲವೃದ್ಧರಾದಿಯಾಗಿ ತಿಳಿದಿದ್ದೇವೆ. ಗಣಪತಿ ಕೂರಿಸಲು ಹುಂಡಿಡಬ್ಬ ಹಿಡಿದು, ಚಿಳ್ಳೆಪಿಳ್ಳೆಗಳೆಲ್ಲ ಸೇರಿ ಹಣ ಸಂಗ್ರಹಿಸಿ ಗಣಪತಿ ಕೂರಿಸುವುದನ್ನು ನೋಡುತ್ತಿದ್ದೇವೆ. ಗಣಪತಿಗೆ ತಮಗೆ ಬೇಕಾದಂತೆ ವೇಷಭೂಷಣಗಳನ್ನು ಹಾಕಿ ಖುಷಿ ಪಡುವ ಜನರನ್ನೂ ನೋಡಿದ್ದೇವೆ. ಸೈನಿಕ ಗಣಪತಿ, ಸಂಸಾರವಂದಿಗ ಗಣಪತಿ, ವಿಮಾನದಲ್ಲಿ ಹಾರುವ ಗಣಪತಿ, ಪೈಲಟ್ ಗಣಪತಿ, ಸೂಟುಬೂಟುಧಾರಿ ಗಣಪತಿ! ಅವನನ್ನು ಹೇಗೆ ಸಿಂಗರಿಸಿದರೂ ಅವನು ಬೇಡವೆನ್ನಲಾರ! ಅವನಿಗೂ ಇದೇ ಖುಷಿಯೇನೋ ಯಾರಿಗೆ ಗೊತ್ತು?
ಅಂತೂ ಇಂತೂ ಗಣಪತಿ ಹಬ್ಬ ಬಂತೆಂದರೆ ಸಾಕು ಊರಿನ ಜನರೆಲ್ಲಇದ್ದಕ್ಕಿದ್ದಂತೆ ಒಗ್ಗಟ್ಟಾಗಿ ಬಿಡುತ್ತಾರೆ. ಹಿರಿಯರೇ ಒಗ್ಗಟ್ಟಾದ ಮೇಲೆ ಇನ್ನು ಮಕ್ಕಳು ಕೇಳಬೇಕೆ? ಅವರೂ ಡಬ್ಬಗಳನ್ನು ಬಡಿಯುತ್ತಾ ಹುಂಡಿ ಹಿಡಿದುಅಧಿಕಾರವಾಣಿಯಿಂದ ಗಣಪತಿ ಕೂರಿಸಲು ಹಣಕೊಡಿ ಎನ್ನುತ್ತಾ, ಚಂದಾಕಾಸು ಎತ್ತಿ, ತಾವೂ ಹೇಗೇಗೋ ಮಾಡಿ ಮನೆಯಲ್ಲಿ ಚಳ್ಳೆಹಣ್ಣು ತಿನ್ನಿಸಿ ಕಾಸು ಹೊಂದಿಸಿಕೊಂಡು ಬಂದು ಗಣಪತಿಯನ್ನು ಕೂರಿಸುವಂತಾದ್ದು ಈ ಮಕ್ಕಳಿಗೆ ಯಾವ ದರ್ದು? ಅದೇನಾದರೂ ಇರಲಿ ಗಣಪತಿಯಿಂದುಂಟಾಗುವ ಈ ಸಂಘಟನೆಯನ್ನು ನಾವು ಹಗುರವಾಗಿ ಎಣಿಸುವಂತಿಲ್ಲ.ಅಂತೂ ಎಲ್ಲರ ಮನೆಗಳಲ್ಲೂ, ಬೀದಿ ಬೀದಿಗಳಲ್ಲೂ ಗಣಪತಿ ರಾರಾಜಿಸುತ್ತಾನೆ. ಪೂಜೆಗೊಳ್ಳುತ್ತಾನೆ! ಇದೇ ಇಲ್ಲಿಯ ಮುಖ್ಯ ವಿಷಯ.
ಇದು ನಮಗೆಲ್ಲ ಮೇಲ್ನೋಟಕ್ಕೆ ಕಾಣಿಸುವ ವಿಷಯ. ಆದರೆ ಗಣಪತಿಯ ಆಕಾರಕ್ಕೆ, ಅವನ ತತ್ವಗಳಿಗೆ ಅನೇಕಾನೇಕ ಒಳಾರ್ಥಗಳಿವೆ. ಗಣಪತಿ ಕೂಡ ಮಣ್ಣಿಂದಲೇ ಹುಟ್ಟುತ್ತಾನೆ, ಮತ್ತೆ ಮಣ್ಣಿಗೇ ಸೇರುತ್ತಾನೆ. ಅವನ ಬೃಹದಾಕಾರ, ನೀಳ ಸೊಂಡಿಲು, ವಕ್ರದಂತ, ಸೊಂಟಕ್ಕೆ ಸುತ್ತಿದ ಸರ್ಪ, ವಾಹನವಾದ ಇಲಿ, ಅವನ ಗರಿಕೆಪ್ರಿಯತೆ ಇವೆಲ್ಲವೂ ಕೂಡ ಪ್ರಕೃತಿಯ ಹಿಡಿತದಲ್ಲಿ ಅಥವಾ ಪ್ರಕೃತಿದತ್ತವಾಗಿ ಆಗಬೇಕಾದ ಕಾರ್ಯಗಳನ್ನೇ ಸೂಚಿಸುತ್ತವೆ.
ನಿಮಗೆಲ್ಲ ನೆನಪಿರಬಹುದು ಅಥವಾ ಈಗಲೂ ಕೂಡ ಸಗಣಿಯಲ್ಲೇ ಒಂದು ಉಂಡೆ ಕಟ್ಟಿ, ಅದನ್ನು ಎಲೆಯ ಮೇಲಿಟ್ಟು ಚೆಂಡುಹೂವಿನಿಂದ ಅಲಂಕರಿಸಿ, ಮೇಲೆ ಗರಿಕೆ ಸಿಕ್ಕಿಸಿ ಅದಕ್ಕೇ ಗಣಪತಿಯೆಂದು ಪೂಜೆ ಮಾಡುತ್ತಿದ್ದರು. ಇದು ನಮಗೆಲ್ಲ ತಿಳಿದೇ ಇದೆ. ಮಣ್ಣು, ಸಗಣಿಗಳಿಂದ ತಯಾರಿಕೆಯಾಗಿ ಗರಿಕೆಯಿಂದಲಂಕರಿಸಿಕೊಂಡು, ಕಾಡು ಹೂವುಗಳಿಂದ ಪೂಜಿಸಿಕೊಂಡು ಈ ಗಣಪತಿ ನಮ್ಮನ್ನು ಕಾಯುವ ಪ್ರಕೃತಿಯ ಪ್ರತಿರೂಪವಾಗಿ, ನಿಸರ್ಗವನ್ನು ಸಮತೋಲನದಲ್ಲಿಡುವ ದೇವನಾಗಿದ್ದಾನೆ.
ಗಣಪತಿಯ ರೂಪವರ್ಣನೆಯಂದರೆ ಅವನ ಡೊಳ್ಳುಹೊಟ್ಟೆಯು, ಕೊಯ್ಲಿಗೆ ಬಂದ ಬೆಳೆಯನ್ನು ಕೊಯ್ದು ಬಣವೆ ಒಟ್ಟಿದ ಬೆಳೆಯ ಪ್ರತೀಕವಾದರೆ, ಅವನ ಸೊಂಟಕ್ಕೆ ಸುತ್ತಿದ ಹಾವು ಬೆಳೆಗೆ ಮುತ್ತುವ ಪ್ರಾಣಿಗಳ ಪ್ರತಿರೋಧಿಯಾಗುತ್ತದೆ. ಇಲಿಯೇ ಮುಂತಾದ ಪ್ರಾಣಿಗಳು ಆಹಾರದ ವಿನಾಶಕ್ಕೆ ಕಾರಣವಾಗಬಾರದೆಂಬುದು ಇದರರ್ಥ. ಮುರಿದ ದಂತ ಇವನ ಆಯುಧವಾಗುತ್ತದೆ. ಇದಕ್ಕೆ ಇನ್ನೂ ಒಂದು ಕತೆಯಿದೆ. ಪರಿಪೂರ್ಣತೆಯಂಬುದು ಅಹಂಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅವನ ವಕ್ರದಂತ ಅಹಂ ಅನ್ನು ಮೆಟ್ಟು ಅಪೂರ್ಣತೆಯ ಸಂಕೇತವಾಗುತ್ತದೆ. ಅವನ ಅರ್ಧ ಸುತ್ತಿದ ಸೊಂಡಿಲು ನೇಗಿಲನ್ನು ಪ್ರತಿಪಾದಿಸಿ, ಗಣಪತಿಯು ಸುಗ್ಗಿಯ, ಸಂಮೃದ್ಧಿಯ ಪ್ರತೀಕವಾಗಿ, ಗೋಚರನಾಗುತ್ತಾನೆ. ಇನ್ನಿವನ ಪ್ರೀತಿಯ ಗರಿಕೆ ಅವಿನಾಶದ ಸಂಕೇತವಾಗುತ್ತದೆ. ಗರಿಕೆ ಅವಿನಾಶಿ. ಸುಟ್ಟರೂ ಚಿಗುರುವ ಗುಣವದರದು. ಗರಿಕೆಯ ಬಳ್ಳಿಯಂತೆ ಸಂಬಂಧಗಳು ಹಬ್ಬುತ್ತಾ ಹೋಗಲಿ ಎಂಬುದು ಇದರ ಆಶಯ. ಪ್ರಕೃತಿಯ ಸಮತೋಲನ, ಶತ್ರುವಿನಿಂದ ರಕ್ಷಣೆ, ಅಹಂನ ವಿನಾಶ, ಅವಿನಾಶದ ಸೂಚಕನಾದ ಗಣಪತಿಯ ಆರಾಧನೆ ನಮ್ಮಜೀವನದಲ್ಲಿಜಾಗೃತಿ ಮೂಡಿಸುವ ದಾರಿದೀಪವಾಗಿದೆ. ಹಬ್ಬಗಳ ಆಚರಣೆ ಎಂದಿಗೂ ದಾರಿತಪ್ಪಿಸುವುದಿಲ್ಲ. ಮೋದಕ ಪ್ರಿಯಗಣಪನನ್ನು ನೀವೆಲ್ಲ ಮನೆಗೆ ಬರಮಾಡಿಕೊಳ್ಳಲಿಕ್ಕೆ ಸಜ್ಜಾಗುತ್ತಿದ್ದೀರಿ. ಇಲ್ಲಿ ನಾನು ಬಹಳ ಸಂಕ್ಷಿಪ್ತ ವಿವರ ನೀಡಿದ್ದೇನೆ. ನಮ್ಮ ಪುರಾಣಗಳಲ್ಲಿ ವಿಶೇಷ ಮಹತ್ವದಿಂದ ಕೂಡಿದ ಮಾರ್ಗಸೂಚಿಯಾದ ನೂರೆಂಟು ಕತೆಗಳಿವೆ. ತಿಳಿದುಕೊಳ್ಳಬೇಕಾದ ಸಾಕಷ್ಟು ವಿಷಯಗಳಿವೆ.
ನಮ್ಮ ಸಂಸ್ಕೃತಿ ನಮ್ಮನ್ನು ಎಂದಿಗೂ ದಾರಿತಪ್ಪಿಸುವುದಿಲ್ಲ. ಪ್ರತಿಯೊಂದನ್ನೂ ಪ್ರಶ್ನಿಸುತ್ತಾ ಎಲ್ಲವನ್ನೂ ಅಲ್ಲಗಳೆಯುವ ಅತೀಬುದ್ಧಿಜೀವಗಳು ಸರಿಯಾಗಿ ಬುದ್ಧಿ ಬೆಳೆಯದ ಹರೆಯಕ್ಕೆ ಕಾಲಿಟ್ಟ ಚಿಗುರುಮನಸ್ಸುಗಳನ್ನು ದಾರಿತಪ್ಪಿಸುತ್ತಿದ್ದಾರೆ. ಪ್ರಶ್ನೆ ಮಾಡಿಕೊಂಡು ಉತ್ತರ ಹುಡುಕಿ ಆಚರಣೆಯನ್ನಾದರೂ ಜಾರಿಯಲ್ಲಿಟ್ಟುಕೊಂಡರೆ ಪರವಾಗಿಲ್ಲ. ಆದರೆ ಲೇವಡಿ ಮಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡವರಿಗೆ ಆ ದೇವರೇ ದಾರಿತೋರಬೇಕಷ್ಟೆ. ಅದೇನೇ ಇರಲಿ, ತಾಯಿ , ಮಗ ಇಬ್ಬರನ್ನೂ ಬರಮಾಡಿಕೊಂಡು ನಮ್ಮ ಎಂದಿನ ಸಂತಸ ಸಂಭ್ರಮಗಳನ್ನು ಕಾಯ್ದಿರಿಸಿಕೊಂಡು ಹೋಳಿಗೆ ಉಂಡು ಕಡುಬನ್ನು ಮೆದ್ದು ಸಂತೃಪ್ತರಾಗಿ ಬದುಕೋಣ.
ಎಲ್ಲರಿಗೂ ಗೌರಿಗಣೇಶ ಹಬ್ಬದ ಶುಭಾಶಯಗಳು.
-ಬಿ.ಕೆ.ಮೀನಾಕ್ಷಿ, ಮೈಸೂರು.
ಗೌರಿ ಗಣೇಶ ಹಬ್ಬದ ವಿಶೇಷ ವನ್ನು ಬಣ್ಣಿಸಿದ ಪರಿ ಚೆನ್ನಾಗಿ ದೆ.
ಹಬ್ಬ, ಸಂಸ್ಕೃತಿ, ಆಚರಣೆಗಳ ಜೊತೆಗೆ ಮಣ್ಣಿನ ಮಹತ್ವವನ್ನೂ ಸೊಗಸಾಗಿ ವಿವರಿಸಿದ ಬರಹ ತುಂಬಾ ಇಷ್ಟವಾಯಿತು.
ಉತ್ತಮ ಮಾಹಿತಿ ಯುಳ್ಳ ಚಂದದ ಲೇಖನ ಧನ್ಯವಾದಗಳು ಗೆಳತಿ ಮೀನಾಕ್ಷಿ.
ಮಹೇಶ್ವರಿಯವರಿಗೆ, ನಯನ ಮತ್ತು ನಾಗರತ್ನ ಮೇಡಂ ಹಾಗು ಬರೆಹ ಮೆಚ್ಚಿದ ಎಲ್ಲಿಗೂ ಗೌರಿ ಗಣಪತಿ ಹಬ್ಬದ ಶುಭಾಶಯ ಗಳೊಂದಿಗೆ ಧನ್ಯವಾದ ಗಳು.
ಚಂದದ ಲೇಖನ.
Thank you
ಮಣ್ಣಿನಿಂದಲೇ ಎಲ್ಲಾ..ಅದಿಲ್ಲದೆ ಜೀವ ಜಂತುಗಳಿಲ್ಲ..ಮಣ್ಣಿಂದ ಕಾಯಾ ಮಣ್ಣಿಂದ.. ಗೌರಿ ಗಣೇಶ ಹಬ್ಬಕ್ಕೂ ಪ್ರಕೃತಿಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಬಹಳ ಸೊಗಸಾದ ಬರಹ..ಧನ್ಯವಾದಗಳು ಮೀನಾಕ್ಷಿ ಮೇಡಂ.
ನಿಮ್ಮ ಅನಿಸಿಕೆ ಗೆ ಧನ್ಯವಾದ ಮೇಡಂ