ಪುಷ್ಪಗಳ ವಿಸ್ಮಯದ ಸುತ್ತ..

Share Button

ಪುಷ್ಪಗಳ ಬಗ್ಗೆ ಬರೆಯುವ ಮೊದಲು ಒಂದು ಸುಂದರ ಸುಭಾಷಿತದ ಮೂಲಕ ಪ್ರಾರಂಭ ಮಾಡುವುದು ಸೂಕ್ತವೆನಿಸುತ್ತದೆ.

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗಹಃ
ಸರ್ವಭೂತ ದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತಃ
ಜ್ಞಾನ ಪುಷ್ಪಂ ತಪಃ ಪುಷ್ಪಂ ಶಾಂತಿ ಪುಷ್ಪಂ ತಥೈವಚಃ
ಸತ್ಯ ಮಷ್ಪವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್


ಅಂದರೆ ಅಹಿಂಸೆ, ಇಂದ್ರಿಯ ನಿಗ್ರಹ, ಎಲ್ಲ ಜೀವಿಗಳಿಗೆ ದಯೆ ತೋರುವುದು, ಕ್ಷಮೆ, ಜ್ಞಾನ, ತಪಸ್ಸು, ಶಾಂತಿ ಮತ್ತು ಸತ್ಯ ಇವು ಎಂದು ಭಾವಪುಷ್ಪಗಳು. ಇವುಗಳಿಂದ ಅರ್ಚನೆ ಮಾಡಿದರೆ ಭಗವಂತನು ಸಂತುಷ್ಟನಾಗುತ್ತಾನೆ. ಆದರೆ ಇದು ಯೋಗಿಗಳಿಂದ ಮಾತ್ರ ಸಾಧ್ಯ. ನಾವು ಮಾನವರು ವಿವಿಧ ಪುಷ್ಪಗಳನ್ನು ಢಂಭಾಚಾರದಿಂದ ಭಗವಂತನಿಗೆ ಅರ್ಪಿಸುವ ಒಂದು ನಾಟಕವನ್ನುಡುತ್ತೇವೆ.

ಪುಷ್ಪಗಳ ಲೋಕ ಅದ್ಭುತವಾದದ್ದು. ಪುಷ್ಪಗಳನ್ನೂ ನೋಡುತ್ತಿದ್ದರೆ, ಅದರ ಜೊತೆ ಒಡನಾಟವಿದ್ದರೆ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಆದ್ದರಿಂದಲೇ ಅನೇಕ ಸಸ್ಯೋದ್ಯಾನಗಳು ಪ್ರಪಂಚದಾದ್ಯಂತ ತಲೆ ಎತ್ತಿವೆ. ಪುಷ್ಪೋದ್ಯಾನಗಳಲ್ಲಿ ಇದ್ದ ಅಷ್ಟುಹೊತ್ತು ಮನಸ್ಸು ಉಲ್ಲಾಸಿತವಾಗಿರುವುದು ಎಲ್ಲರ ಅನುಭವ.
ಪುಷ್ಪಗಳ ಬಗ್ಗೆ ಇರುವ ವ್ಯಾಮೋಹ ಇಂದು ನನ್ನೆಯದಲ್ಲ. ಪುರಾಣ ಕಾಲದಲ್ಲಿ ಇದರ ಉಲ್ಲೇಖಗಳಿವೆ. ಮಹಾಭಾರತದಲ್ಲಿ ದ್ರೌಪದಿ ಒಂದು ಪುಷ್ಪದ ಸುವಾಸನೆಗೆ ಮಾರು ಹೋಗಿ ಅದು ತನಗೆ ಬೇಕೆಂದು ಭೀಮನಲ್ಲಿ ಅರಿಕೆ ಮಾಡುತ್ತಾಳೆ. ಅವನು ಅದರ ಸುವಾಸನೆಯನ್ನೆ ಜಾಡು ಹಿಡಿದು ದಾರಿಯಲ್ಲಿ ಹನುಮಂತನ ಭೇಟಿಯಾಗಿ, ಹನುಮಂತ ಇವನ ಗರ್ವಭಂಗ ಮಾಡಿ ಮತ್ತೆ ಆ ಪುಷ್ಪದ ಜಾಡನ್ನು ತೋರಿಸಿದ ಕಥೆ ಸರ್ವವಿದಿತ. ಈ ಪುಷ್ಪವೇ ಪ್ರಖ್ಯಾತವಾದ ಸೌಗಂಧಿಕಾ ಪುಷ್ಪ. ಸೀತೆಯ ಅಪಹರಣವಾದಾಗ ಪುಷ್ಪಕ ವಿಮಾನದಿಂದ ಸೀತೆ ಕೆಳಗೆ ಎಸೆದ ಪುಷ್ಪವೇ ‘ಸೀತೆ ದಂಡೆ’ ಎಂದು ಪ್ರಸಿದ್ಧ ಹೆಲಿಕೋನಿಯ ಎಂಬ ಜಡೆಯಾಕಾರದ ಪುಷ್ಪವೇ ‘ದ್ರೌಪದಿಯ ಜಡೆ’ ಎಂದು ಪ್ರಸಿದ್ಧ ಹೀಗೆ ಪುರಾಣಕಾಲದಲ್ಲೂ ಪುಷ್ಪಗಳ ವ್ಯಾಮೋಹಕ್ಕೆ ಕೊರತೆ ಇಲ್ಲ.

ಪುಷ್ಪಗಳಲ್ಲಿ ಕಾಣುವ ಇನ್ನೊಂದು ಅದ್ಭುತ ವಿಸ್ಮಯದ ಬಗ್ಗೆ ಹೇಳಲೇಬೇಕು. ಸರ್ವಂತರ್ಯಾಮ ಶಿವಲೀಲೆಯೊಂದು ಪ್ರಕೃತಿಯಲ್ಲೂ ಅಡಗಿದೆ ಎನಿಸುತ್ತದೆ. ಜಗತ್ತಿನ ಶೇಕಡ 99.9 ರಷ್ಟು ಪುಷ್ಪಗಳ ದಳಗಳು 3,5,8,13,21 ಸಂಖ್ಯೆಯಲ್ಲಿ ಮಾತ್ರ ಇರುತ್ತವೆ ಎಂದರೆ ಆಶ್ಚರ್‍ಯವಲ್ಲವೇ ? ಪ್ರಸಿದ್ಧ ಗಣಿತಜ್ಞ ಫಿಬೋನಾಕ್ಸಿ ಹೆಸರಿನಲ್ಲಿ ಇದನ್ನು ಫಿಬೋನಾಕ್ಸಿ ಸರಣಿ’ ಎಂದು ಕರೆಯುತ್ತಾರೆ. ನಾವು ಆ ಸರಣಿಯ ಮೂಲಕ್ಕೆ ಹೋಗುವುದು ಬೇಡ. ಆದರೆ ಇದು ಪ್ರಕೃತಿಯ ಒಂದು ವಿಶಿಷ್ಟ ವಿಸ್ಮಯ. ಇದು ಬರೇ ಎಸಳುಗಳಿಗಷ್ಟೇಲಿಲ್ಲ ಸೂರ್‍ಯಕಾಂತಿ ಹೂವಿನ ಬೀಜಗಳಲ್ಲೂ ಕೂಡ ಪ್ರತಿ ಸುತ್ತಿನಲ್ಲಿ ಈ ಸಂಖ್ಯೆಯನ್ನು ಕಾಣಬಹುದು. ಅಲ್ಲದೆ ತೆಂಗಿನ ಮರದ ಎಲೆಗಳು ಬಿದ್ದ ಮೇಲೆ ಕಾಂಡದ ಸುತ್ತ, ಕತ್ತಿ ಎಲೆಗಳ ಜೋಡಣೆ ಇವೆಲ್ಲ ಫಿಬೋನಾಕ್ಸಿಯ ಸರಣಿಯನ್ನು ತಪ್ಪದೆ ಪಾಲಿಸುತ್ತವೆ. ಈ ತರಹದ ಸಂಖ್ಯೆಗಳ ದಳಗಳು, ವಿನ್ಯಾಸ ಏಕಾಗುತ್ತವೆಂದು ವಿಜ್ಞಾನಿಗಳಿಗೆ ಇದುವರೆಗೂ ಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಪ್ರಕೃತಿ ತನ್ನ ಗುಟ್ಟನ್ನು ಇನ್ನು ಯಾಕೋ ಬಿಟ್ಟು ಕೊಟ್ಟಿಲ್ಲ. ಅಲ್ಲದೆ ಯಾವುದೇ ಎರಡು ಪುಷ್ಪಗಳ ಎಸಳುಗಳ ಸಂಖ್ಯೆಯ ಅನುಪಾತವು 1.6 ಇರುವುದು ಇನ್ನೊಂದು ವಿಷ್ಮಯ.

ಇವುಗಳ ಬಗ್ಗೆ ನಾವೇ ಒಂದು ವ್ಯಾಖ್ಯಾನವನ್ನು ನೀಡಬಹುದೇನೋ ಈ ಪ್ರಕೃತಿಯ ಆಯ್ಕೆ ಸಾವಿರಾರು ವರ್ಷಗಳಿಂದ ಪ್ರಕೃತಿಯ ತಪ್ಪು ಒಪ್ಪುಗಳ ಕ್ರಿಯೆಗಳಿಂದ ಅತ್ಯಂತ ಸೂಕ್ತವಾದ ನಿರ್ಣಯವಾಗಿರಬಹುದು. ಈ ಪುಷ್ಪಗಳ ದಳಗಳ ಪೂರ್ಣ ವಿಕಸನಕ್ಕೆ ಈ ಮೇಲಿನ ಸರಣಿಯಲ್ಲಿ ಮಾತ್ರ ಸಾಧ್ಯ. ಇದರಿಂದ ದ್ಯುತಿಸಂಶ್ಲೇಷಣೆ (Photo Synthesis) ಕಾರ್‍ಯ ಅತ್ಯಂತ ಫಲೋತ್ಪಾದಕವೆಂದು ತೋರುತ್ತದೆ. ಹೀಗಾಗಿ ಈ ಸರಣಿಯ ಸಂಖ್ಯೆಯಲ್ಲೇ ಪುಷ್ಪಗಳ ದಳಗಳು ವಿಕಸನಗೊಳ್ಳುವುದು ಎಂದು ತೋರುತ್ತದೆ.

ಪುಷ್ಪಗಳ ಬಳಕೆಯ ಬಗ್ಗೆಯೂ ಸಾಕಷ್ಟು ಪ್ರಗತಿಯಾಗಿದೆ. ಪ್ರಾಚೀನ ಯುರೋಪಿನ ಸಂಸ್ಕೃತಿಯಲ್ಲಿ ಪುಷ್ಪಗಳ ಬಳಕೆಯ ಸಂಪ್ರದಾಯ ಬಹಳ ಶಿಸ್ತಿನದ್ದಾಗಿತ್ತು. ಇದನ್ನ Florigraphy ಅಥವಾ Language of Flowers ಎಂದು ಕರೆದಿದ್ದರು. ಮನಸ್ಸಿನ ಭಾವನೆಗಳನ್ನು ಒಬ್ಬರಿಂದೊಬ್ಬರಿಗೆ ತಲುಪಿಸಲು ಹೂವುಗಳು ಒಂದು ಮಾಧ್ಯಮವಾಗಿದ್ದು. ಪ್ರೀತಿ, ದುಃಖ, ದುಗುಡ, ದುಮ್ಮಾನ, ದ್ವೇಷ, ತಿರಸ್ಕಾರ ಹೀಗೆ ವಿವಿಧ ಭಾವನೆಗಳಿಗೆ ವಿಧವಿಧವಾದ ಪುಷ್ಪಗಳ ಬಳಕೆಯಾಗುತ್ತಿತ್ತು. ಜಪಾನಿನ ಕೆಲವು ಕುಟುಂಬಗಳು ತಮ್ಮ ಕುಟುಂಬದ ಲಾಂಛನವಾಗಿ ಕೆಲವು ಪುಷ್ಪಗಳನ್ನು ಬಳಸುತ್ತಾರೆ. ಬೌದ್ಧಧರ್ಮದಲ್ಲೂ ಪುಷ್ಪಭಾಷೆಯ ಪ್ರಭಾವವಿದೆ. ಬುದ್ಧನ ಉಪದೇಶಗಳು, ಜ್ಞಾನೋದಯ, ವಿವೇಕ ಎಲ್ಲವನ್ನೂ ಪುಷ್ಪಗಳು ಪ್ರತಿನಿಧಿಸುತ್ತವೆ.

ಇನ್ನೂ ಪುಷ್ಪಗಳನ್ನು ವಿವಿಧ ಅನುಷ್ಟಾನಗಳಿಗೆ ಬಳಸುವುದು ಬಹಳ ಸಾಮಾನ್ಯ. ದೇವರ ಪೂಜೆಗೆ ಸಾಮಾನ್ಯವಾಗಿ ಎಲ್ಲಾ ಪುಷ್ಪಗಳನ್ನು ಬಳಸುತ್ತಾರೆ. ಪುರಾಣಗಳಲ್ಲೇ ಇವುಗಳ ಹೆಸರುಗಳು ಪ್ರಖ್ಯಾತವಾಗಿವೆ. ಸೇವಮತಿಕಾ, ಬಕುಲ, ಜಾಜಿ, ಚಂಪಕ, ಪುನ್ನಾಗ, ಕರವೀರ, ರಸಾಲ, ಮಲ್ಲಿಕಾ, ಎಂಬ ಹಲವಾರು ಹೆಸರುಗಳು ಬರುತ್ತವೆ. ಕೆಂಪು ಗುಲಾಬಿ ಹೂವು ಪ್ರೇಮದ ಸಂಕೇತ. ಅದನ್ನ ನೀಡುವ ಪರಿಯೂ ಕೂಡ ಉಲ್ಲೇಖವಾಗಿದೆ. ಊರ್ಧ್ವಮುಖವಾಗಿ ಕೊಟ್ಟರೆ ಅದು ಸಂತೋಷದ ಪ್ರತೀಕ. ಅಧೋಮುಖವದರೆ ದುಃಖದ ಚಿಹ್ನೆ. ಎಡಗಡೆಗೆ, ಬಲಗಡೆಗೆ ವಾಲಿಸಿಕೊಟ್ಟರೆ ಬೇರೊಂದು ಅರ್ಥ. ಬಲಗೈಯಿಂದ ಕೊಟ್ಟರೆ ಸಕಾರಾತ್ಮ, ಎಡಗೈನಕಾರಾತ್ಮಕ. ಹೀಗೆ ಹೂವಿನ ಒಂದು ಕೊಡುವ ಅರ್ಥವೂ ಕೂಡ ಅರ್ಥಪೂರ್ಣವಾದುದು. ಕೆಂಪು ಗುಲಾಬಿ ಪ್ರೇಮದ ಪ್ರತೀಕ. ಮಾಲೆಯ ರೂಪದಲ್ಲಿ ನೀಡಿದರೆ ಅದು ಮರ್‍ಯಾದೆ ಹಾಗೂ ಗೌರವದ ಪ್ರತೀಕ. ಅದೇ ಚಕ್ರಾಕಾರವಾದರೆ ಶವಕ್ಕೆ ಶ್ರದ್ಧಾಂಜಲಿ. ಮೆರಿಗೊಲ್ಡ್ ಅಥವಾ ಚೆಂಡು ಹೂ ತವರೂರು ಮಧ್ಯ ಅಮೇರಿಕ ಅಲ್ಲಿ ಅದು ಸಂತೋಷದ ಹಾಗೂ ಶುಭಪ್ರತೀಕ್ಷೆಯ ಸಂಕೇತ. ವಲಸೆಗಾರರ ಹಾಗೂ ಆಕ್ರಮಣಕಾರರ ಮೂಲಕ ಬಂದ ಈ ಹೂವು ಭಾರತದಲ್ಲಿ ಶೋಕದ ಪ್ರತೀಕ. ಶವಯಾತ್ರೆಯಲ್ಲಿ ಪ್ರಧಾನವಾಗಿ ಬಳಕೆ. ಇವೆಲ್ಲಾ ವಿಚಿತ್ರವಲ್ಲವೇ ? ಶುಭಾಷಯ ಕೋರಲು ನಾವು ವಿಧವಿಧವಾದ ಹೂವುಗಳ ಗುಚ್ಛಗಳನ್ನು ಕೊಡುವುದು ಸಾಮಾನ್ಯ.

ಪುಷ್ಪಗಳ ಬಗ್ಗೆ ಕವಿಗಳು ರಚಿಸಿರುವ ಕಾವ್ಯಗಳು ಅಸಂಖ್ಯ ಸಿನಿಮಾಗಳಲ್ಲೂ ಹೂವಿನ ಬಗ್ಗೆ ಅಸಂಖ್ಯ ಹಾಡುಗಳು ಬಂದಿವೆ. ಪುಷ್ಪೋದ್ಯಮ ಅಥವಾ ಫ್ಲೋರಿಕಲ್ಚರ್ ಎಂಬ ಉದ್ಯಮ ನೂರಾರು ಕೋಟಿಯಷ್ಟು ಬೆಳೆದಿದೆ. ಅದರಲ್ಲೂ ಗುಲಾಬಿ ಹಾಗೂ ಆರ್ಕಿಡ್ ಎಂಬ ಪುಷ್ಪಗಳು ಅತ್ಯಂತ ದುಬಾರಿಯದು ಸಾಕಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತದೆ.

ಪ್ರತಿದಿನ ಬೆಳಗ್ಗೆ ಮನೆತೋಟದಲ್ಲಿ ಬೆಳೆದ ಹೂವುಗಳ ವೀಕ್ಷಣೆ ಹಾಗೂ ಪೂಜೆಗೆ ಅವುಗಳ ಶೇಖರಣೆ ನಿಜಕ್ಕೂ ಆಹ್ಲಾದಕರ. ಮನಸ್ಸಿಗೆ ನೆಮ್ಮದಿ ಹಾಗೂ ಉಲ್ಲಾಸ ನೀಡುವ ಸಮಯ. ಸುಮಾರು ಇಪ್ಪತ್ತು ನಿಮಿಷಗಳ ಈ ಅವಧಿ ನಿಜಕ್ಕೂ ದಿನಪೂರ್ತಿ ನಮಗೆ ಸ್ಪೂರ್ತಿ, ಆತ್ಮಸ್ಥೈರ್ಯ ನೀಡುವಂಥಹುದು. ಬೆಳಗಿನ ವಾಯುವಿಹಾರದಲ್ಲಿ ಪುಷ್ಪಗಳ್ಳರ ಕಾಟ ನಿಜಕ್ಕೆ ಖೇದಕರ. ಮನೆಸುತ್ತ ಒಂದು ಸಣ್ಣ ಹೂತೋಟವಿದ್ದರೆ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಪ್ರತಿಮನೆಯಲ್ಲೂ ಒಂದು ಹೂದೋಟವಿರುವುದು ಸಾಮಾನ್ಯ. ಅಲ್ಲಿನ ವರ್ಷಪೂರ ಇರುವ ತಂಪಿನ ವಾತಾವರಣದಲ್ಲಿ ಬಗೆಬಗೆಯ ಹೂವುಗಳು ಸದಾ ನಳನಳಿಸುತ್ತಿರುತ್ತವೆ. ನೀವು ನಿಮ್ಮ ಮನೆಯಂಗಳದಲ್ಲಿ ಒಂದು ಹೂದೋಟ ಮಾಡಿ ಅದರ ಸವಿಯನ್ನು ಅನುಭವಿಸಿ. ಡಿ.ವಿ.ಜಿ. ಯವರ ಈ ಕೆಳಗಿನ ಕಗ್ಗಗಳೊಂದಿಗೆ ಲೇಖನಕ್ಕೆ ಪೂರ್ಣವಿರಾಮ ಹಾಕೋಣವೇ?

ಗಿಡದಿ ನಗುತಿರುವ ಹೂ ಪ್ರಕೃತಿ ಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |
ಬಿಡಿಗಾಸು ಹೂವಳಿಗೆ – ಮಂಕುತಿಮ್ಮ ||

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ||
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |
ಬ್ರಹ್ಮಾನುಭವಿಯಾಗೋ ಮಂಕುತಿಮ್ಮ ||


-ಕೆ. ರಮೇಶ್

17 Responses

 1. Hema says:

  ‘ಫಿಬೋನಾಕ್ಸಿ ‘ ಬಗ್ಗೆ ಪ್ರಥಮ ಬಾರಿಗೆ ಓದಿದೆ..ಬಹಳ ಆಸಕ್ತಿಕರ ಮಾಹಿತಿಗಳುಳ್ಳ ಚೆಂದದ ನಿರೂಪಣೆಯ ಬರಹ ಇಷ್ಟವಾಯಿತು.

 2. ಮಹೇಶ್ವರಿ ಯು says:

  ಹೂಗಳ ಲೋಕದ ವಿಸ್ಮಯವನ್ನು ತೆರೆದಿಟ್ಟ ಸುಂದರ ಬರಹ

 3. ನಯನ ಬಜಕೂಡ್ಲು says:

  ಸುಭಾಷಿತ , ಮಂಕುತಿಮ್ಮನ ಕಗ್ಗಗಳನ್ನೊಳಗೊಂಡ ಲೇಖನ ತುಂಬಾ ಚೆನ್ನಾಗಿದೆ

 4. ನಾಗರತ್ನ ಬಿ. ಅರ್. says:

  ಪುಷ್ಪೋಧ್ಯಾನ ದ ಬಗ್ಗೆ ಬರೆದಿರುವ ಲೇಖನ ಬಹಳ ಆಪ್ತವಾಗಿ ಮೂಡಿ ಬಂದಿದೆ ಸಾರ್. ಧನ್ಯವಾದಗಳು

 5. H.s.vathsala says:

  ಹೂವಿನ ಬಗೆಗಿನ ವೈಜ್ಞಾನಿಕ ತಿಳಿವು ಬಹಳ ಮಾಹಿತಿ
  ದಾಯಕವಾಗಿದೆ. ಹೂವಿನ ಬಳಕೆ ಸಂಧರ್ಭಕ್ಕನುಸಾರವಾಗಿ ಹೇಗೆ ಇರುತ್ತದೆ ಎಂಬುದನ್ನು
  ಚೆನ್ನಾಗಿ ತಿಳಿಸಿರುವುದಕ್ಕೆ ಅಭಿನಂದನೆಗಳು.

 6. Dr Krishnaprabha says:

  ತುಂಬಾ ಚೆನ್ನಾಗಿ ಬರೆದಿದ್ದೀರಿ

 7. ಕೆ. ರಮೇಶ್ says:

  ಧನ್ಯವಾದಗಳು ಮೇಡಂ

 8. Padmini says:

  ಚೆನ್ನಾಗಿ ಬರೆದಿದ್ದೀರಿ.

 9. ಶಂಕರಿ ಶರ್ಮ says:

  ಹೂವಿನ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತುಂಬಿದ ಲೇಖನವು ಹಲವಾರು ಗಹನವಾದ ವಿಷಯಗಳನ್ನು ಬಿಚ್ಚಿಟ್ಟಿದೆ. ಹೂವಿನ ಎಸಳುಗಳಲ್ಲಿಯ ವಿಶೇಷ ಜೋಡಣೆ, ಹೂವುಗಳ ಬಳಕೆಯ ಬಗ್ಗೆ ಇರುವ ಪ್ರತ್ಯೇಕ ಪದ್ಧತಿ.. ಹೀಗೆ ಹಲವಾರು ಹೊಸ ವಿಷಯಗಳನ್ನು ತಿಳಿದುಕೊಳ್ಳುವಂತಾಯ್ತು. ಧನ್ಯವಾದಗಳು ಸರ್.

 10. ನಿರ್ಮಲಜಿ.ವಿ says:

  ಬಹಳ ಅಚ್ಚುಕಟ್ಟಾದ, ಮಾಹಿತಿ ಭರಿತ ಲೇಖನ. ಮತ್ತಷ್ಟು ಓದಲು ಕಾತುರವಿದ್ದಾಗಲೇ ಮುಗಿದೇ ಹೋಯಿತು. ಪಿಬೋನಾಕ್ಸಿ ಸಂಸ್ಥೆಯಲ್ಲಿಯೇ ಹೂವಿನ ಬೀಜಗಳಿದ್ದಾಗ ಬೀಜ ಪ್ರಸರಣಕ್ಕೆ ಅನುಕೂಲ ಎಂದು ಇತ್ತೀಚಿಗೆ ಓದಿದ್ದೆ. ಒಳ್ಳೆಯ ಲೇಖನಕ್ಕಾಗಿ ಅಭಿನಂದನೆಗಳು

 11. ಸುಬ್ಬರಾವ್ says:

  ಬಹಳ ಉಪಯುಕ್ತ ವಿಷಯಗಳನ್ನು ತಿಳಿಸಿದ್ದೀರಿ. ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: