ಹೂವೊಂದು ಬಳಿ ಬಂದು..
ಹೂವಿನ ಗಿಡ,ಹೂವು ಯಾರಿಗೆ ಇಷ್ಟವಿಲ್ಲ.ದೇವರ ಪೂಜೆಗೆ,ಮನೆಯ ಅಲಂಕಾರಕ್ಕೆ,ಹಬ್ಬದ ದಿನ ರಂಗೋಲಿ ಸಿಂಗರಿಸಲು,ಜಡೆಗೆ ಮುಡಿಯಲು, ಹೀಗೆ ನಾನಾ ಕಾರಣಗಳಿಗಾಗಿ ಹೂವುಬಳಕೆಯಾಗುತ್ತದೆ. ಹೂವಿಗೂ ಒಂದೊಂದು ತೃಪ್ತಿ, ತಾನು ದೇವರ ಪಾದ ಸೇರಿದೆ, ಹೆಣ್ಣಿನ ಮುಡಿಗೇರಿದೆ ಎಂಬ ಸಂತೋಷದಿಂದ ಅರಳಿ,ಸುವಾಸನೆಯೂ ಬೀರುವುದು.ಇಷ್ಟಲ್ಲದೇ ಗಿಡದಲ್ಲಿ ಉಳಿದರೂ,ಗಿಡಕ್ಕೆ ಇನ್ನೂ ಅಂದವನ್ನು ನೀಡುವುದು. ಹೂವನ್ನು ಬಿಡಿಯಾಗಿ,ಹಿಡಿಯಾಗಿ,ದಾರದಲ್ಲಿ ಪೋಣಿಸಿ,ದಾರದಿಂದ,ಬಾಳೆನಾರಿನಿಂದ ಕಟ್ಟಿ,ಬೇರೆ ಹೂವಿನೊಂದಿಗೆ ಕಟ್ಟಿ ಬಳಸುತ್ತಾರೆ. ಒಂದೊಂದು ಹೂವನ್ನು ಬಳಸುವ ಬಗೆ ಒಂದೊಂದು.ಗುಲಾಬಿಯನ್ನು ಒಂದೆರಡು ಎಲೆ ಸಮೇತ ಮುಡಿಯುವ ಹೆಣ್ಣು,ಗುಲಾಬಿ ಪಕಳೆಗಳನ್ನು ಅಂದವಾಗಿ ಪೋಣಿಸಿ,ಕಟ್ಟಿ ಅದರ ಮಾಲೆ ಕಟ್ಟಿ ಮಾಡುವೆ ಸಮಾರಂಭಗಳಿಗೆ ಉಪಯೋಗಿಸುತ್ತಾರೆ.ಇತ್ತೀಚಿನ ದಿನಗಳಲ್ಲೇ ಗುಲಾಬಿ ಪಕಳೆಯ ಮಾಲೆಯದ್ದೇ ಹೊಸ ಟ್ರೆಂಡ್. ಅದನ್ನು ತುರುಬು ಕಟ್ಟಿ ಅದರ ಮೇಲೆ ಮುಡಿಯಲು ಸಹ ಗುಲಾಬಿ ಪಕಳೆಯ ಮಾಲೆಯನ್ನು ಬಳಸುತ್ತಾರೆ.ಮಲ್ಲಿಗೆ,ಪಾರಿಜಾತ,ಜಾಜಿ,ಕನಕಾಂಬರ,ರತ್ನಗಂಧಿ,ಸಂಜೆಮಲ್ಲಿಗೆ ಹೀಗೆ ನಾನಾ ಬಗೆಯ ಹೂವುಗಳ ಮಾಲೆಗಳನ್ನು ಕಟ್ಟುವರು.ದಾಸವಾಳ,ಸೇವಂತಿಗೆ,ಜೀನಿಯ,ನಿತ್ಯಪುಷ್ಪ,ಶಂಖಪುಷ್ಪ ಹೀಗೆ ನಾನಾ ಬಗೆಯ ಹೂವುಗಳನ್ನು ದೇವರಿಗೆ ಮೂಡಿಸಲು ಒಂದೊಂದೇ ಹೂವನ್ನು ಬಳಸುವರು. ದಾಸವಾಳ ಮುಡಿಯಲು ಕೆಲವು ಹೆಣ್ಣುಮಕ್ಕಳು ಅಷ್ಟು ಇಷ್ಟ ಪಡುವುದಿಲ್ಲ. (ಮುಂದೆ ಪ್ರಾಯವಾದ ಹುಡುಗನನ್ನು ಮದುವೆಯಾಗಬೇಕಾದೀತು ಎಂಬ ಮೂಢನಂಬಿಕೆ). ಮಲ್ಲಿಗೆ,ಜಾಜಿಯ ಹೂಮಾಲೆಯನ್ನು ಆಸೆಪಟ್ಟು ಮುಡಿಯುತ್ತಾರೆ.ಮಂಗಳೂರು,ಉಡುಪಿಯ ಕಡೆ ಸಣ್ಣ ಹೆಣ್ಣು ಮಕ್ಕಳಿಗೆ,ಸೀಮಂತ, ಮದುವೆಯ ವಾರ್ಷಿಕೋತ್ಸವ,ಷಷ್ಠಬ್ದಿ ಶಾಂತಿಯ ಸಮಯದಲ್ಲಿ ಇಂತಹ ಶುಭ ಸಂದರ್ಭದಲ್ಲಿ ಹೆಂಗಸರಿಗೆ ಜಲ್ಲಿ ಹೂವು ಮೂಡಿಸುವ ಸಂಪ್ರದಾಯವಿದೆ.
ಮಲ್ಲಿಗೆ,ಸಂಪಿಗೆ ಇತ್ಯಾದಿ ಹೂವುಗಳ ಸುವಾಸನೆಗಾಗಿ ಆಸೆಪಡುವ ಹೆಣ್ಣುಮಕ್ಕಳು,ಗುಲಾಬಿ,ಡೇರೆ ಹೂವಿನ ಅಂದಕ್ಕೆ ಮನಸೋಲುತ್ತಾರೆ. ಪ್ರೇಮ ನಿವೇದನೆಗೆ
ಬಳಕೆಯಾಗುವ ಗುಲಾಬಿ ಎಂದರೆ ಹೆಣ್ಣು ಮಕ್ಕಳಿಗೆ ಪಂಚಪ್ರಾಣ. ನಮ್ಮ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಗುಲಾಬಿಯನ್ನು ತುಂಬಾ ಇಷ್ಟ ಪಡುತ್ತಿದ್ದರು.ಅವರ ಕೋಟಿನಲ್ಲಿ ಗುಲಾಬಿ ಯಾವಾಗಲೂ ಇರುತ್ತಿತ್ತು. ಹೂಗುಚ್ಛದಲ್ಲಿಯೂ ಈ ಹೂವಿಗೆ ಅಗ್ರ ಸ್ಥಾನ. ಮಲ್ಲಿಗೆ ಹೂವು ಭಟ್ಕಳ,ಮಂಗಳೂರಿನಲ್ಲಿ ತುಂಬಾ ಪ್ರಸಿದ್ಧಿ. ಮದುವೆಯ ಸೀಸನ್ ನಲ್ಲಿ ಈ ಹೂವು ತುಂಬಾ ದುಬಾರಿ. ಆದರೂ ಸಮಾರಂಭಗಳಿಗೆ ಈ ಹೂವನ್ನು ತಂದೇ ತರುತ್ತಾರೆ. ಮಲ್ಲಿಗೆ ಮೊಗ್ಗಿನ ಹಾರವನ್ನು ಆಭರಣಕೊಳ್ಳುವಾಗ ಹೆಚ್ಚಿನ ಮಹಿಳೆಯರು ಕೊಳ್ಳಲು ಇಷ್ಟಪಡುತ್ತಾರೆ.
ಪಾರಿಜಾತ ಹೂವಿಗೂ ಕೃಷ್ಣನಿಗೂ,ಬಹಳ ದೊಡ್ಡ ನಂಟು. ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ.ಇಂದ್ರನ ನಂದನವನದಲ್ಲಿದ್ದು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾರಿಜಾತ ಹೂವಿನ ಗಿಡವನ್ನು ನೆಟ್ಟರು.
ಸಂಪಿಗೆ ಹೂವಿನ ಪರಿಮಳವೆಂದರೆ ನನಗೆ ಬಲು ಇಷ್ಟ. ದೇವಸ್ಥಾನದಲ್ಲಿ ತೀರ್ಥದೊಂದಿಗೆ ನೀಡಿದ ಬಾಡಿದ ಹೂವನ್ನಾದರೂ ನಾನು ಮುಡಿದುಕೊಳ್ಳುತ್ತೇನೆ. ಅಶೋಕ, ಡೇರೆ,ಗೊಂಡೆ,ಜೀನಿಯ,ಸೇವಂತಿಗೆ,ಮುಂತಾದ ಹೂವನ್ನು ಮಲೆನಾಡ ಕಡೆ ಮನೆಗಳಲ್ಲಿ ಜಾಸ್ತಿ ಕಾಣಬಹುದು.ಒಬ್ಬೊಬ್ಬ ದೇವರಿಗೆ ಒಂದೊಂದು ಹೂವು ಪ್ರೀತಿ. ಗಣೇಶನಿಗೆ ಕೆಂಪು ಬಣ್ಣದ ಹೂವುಗಳು ಅದರಲ್ಲೂ ಕೆಂಪು ದಾಸವಾಳ ಬಹಳ ಇಷ್ಟ.ಈಶ್ವರನಿಗೆ ಬಿಲ್ವಪತ್ರೆ,ಎಕ್ಕದ ಹೂವು(ಕೆಲವರು ಗಣೇಶನಿಗೂ ಎಕ್ಕದ ಹೂವು ಇಷ್ಟ ಎನ್ನುವರು),ಕೃಷ್ಣನಿಗೆಪಾರಿಜಾತ ಹೂವು,ಹೀಗೆ ನಾನಾ ಬಗೆಯ ಹೂವುಗಳು ಒಬ್ಬೊಬ್ಬರಿಗೆ ಪ್ರೀತಿ.ಎಕ್ಕದ ಹೂವನ್ನು ದಾರದಲ್ಲಿ ಪೋಣಿಸಿ ಮಾಲೆ ಕಟ್ಟುತ್ತಾರೆ.ದೇವರಿಗೆ ಹೇಳಿಕೊಳ್ಳುವ ಹರಕೆಗಳಲ್ಲಿ ಹೂವಿನ ಹರಕೆಯೂ ಒಂದು.ಅಂಕೋಲಾ ಬಳಿಯ ಆವರ್ಸಾದಲ್ಲಿ ಯುದ್ಧದಲ್ಲಿ ಗೆದ್ದರೆ ದೇವರಿಗೆ ನೂರಾರು ರೂಪಾಯಿ ಬೆಲೆ ಬಾಳುವ ಸಂಪಿಗೆ ಹೂವುಗಳನ್ನು ನೀಡುತ್ತೇನೆ ಎಂದು ಹರಕೆ ಕಟ್ಟಿಕೊಂಡ ಶ್ರೀಮಂತ ವರ್ತಕನೊಬ್ಬ,ಯುದ್ಧ ಮುಗಿದ ನಂತರ ಹೂವನ್ನು ಹುಡುಕಿದರೆ ಎಲ್ಲಿಯೂ ಹೂವು ಸಿಗದಾಯಿತಂತೆ. ಕೊನೆಗೆ ಒಬ್ಬ ಹೂವಾಡಗಿತ್ತಿಯ ಬಳಿಯಿದ್ದ ಒಂದೇ ಸಂಪಿಗೆ ಹೂವಿಗೆ ನೂರಾರು ರೂಪಾಯಿ ನೀಡಿ, ಅದನ್ನು ದೇವರಿಗೆ ಅರ್ಪಿಸಿದನಂತೆ .ಆಗ ದೇವರಿಗೆ ಆ ಹೂವಿನಿಂದ ಸಂತೃಪ್ತಿಯಾಗಿ ತನ್ನ ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿದನಂತೆ(ಭಾರವಾಗಿ ಕುತ್ತಿಗೆ ವಾಲಿಸು) ಈಗಲೂ ಆ ಮೂರ್ತಿಯಿದೆಯೆಂದು ಕೇಳಿದ್ದೇನೆ.ಕೆಲವು ಹೂವುಗಳು ದೇವರ ಪೂಜೆಯಲ್ಲಿ ನಿಷಿದ್ಧವೆನ್ನುವ ಪ್ರತೀತಿಯಿದೆ. ಸಂಪಿಗೆ ಹೂವನ್ನು ಈಶ್ವರನಿಗೆ ಅರ್ಪಿಸುವುದು ಹಿತವಲ್ಲ, ಅಲ್ಲದೆ ಕೆಂಪು ಬಣ್ಣದ ಹೂವುಗಳನ್ನೂ ಅರ್ಪಿಸಬಾರದು ಎಂದು ಕೇಳಿದ್ದೇನೆ. ಬಿಳಿಯ ಹೂವುಗಳೆಂದರೆ ಬಲು ಪ್ರೀತಿಯಂತೆ.
ಹೂವುಗಳೆಂದರೆ ಹೆಣ್ಣಿಗೆ ಬಲು ಪ್ರೀತಿ. ಯಾವುದೇ ಹೂವನ್ನಾದರೂ ನೀಡಿದಾಗ ಅವಳ ಮನ ಮುದಗೊಳ್ಳುತ್ತದೆ. ಹೂವಿನಿಂದ ಹೆಣ್ಣಿನ ಅಂದ ಇನ್ನೂ ಹೆಚ್ಚುತ್ತದೆ.ಹೂವು ಹೆಣ್ಣಿಗೆ ಭೂಷಣ, ಹೆಣ್ಣು ಹೂವಿಗೆ ಭೂಷಣ ಎನ್ನಬಹುದು.ಮನೆಗೆ ಬಂದ ಮುತ್ತೈದೆಯರಿಗೆ, ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮದೊಂದಿಗೆ ಹೂವನ್ನು ನೀಡುವ ಸಂಪ್ರದಾಯವೂ ನಮ್ಮಲ್ಲಿದೆ. ಚಿಕ್ಕ ಮಕ್ಕಳಿಗೂ ಹೂವು ಮುಡಿಯುವಾಸೆ. ಕೇಳಿ ಎರಡು ಜಡಿಯೋ, ಜುಟ್ಟು ಕಟ್ಟಿಕೊಂಡು ಹೂವನ್ನುಮುಡಿಯುತ್ತಾರೆ, ಇಲ್ಲಿದಿರೆ ತಲೆಯ ಮೇಲೆ ಹೇರ್ ಬ್ಯಾಂಡ್ ನಂತೆ ಹೂವನ್ನು ಮುಡಿಯುತ್ತಾರೆ.
ತರಹೇವಾರಿ ಬಣ್ಣದ ಹೂವುಗಳಿಗಾಗಿ ಎಲ್ಲರೂ ಹುಡುಕುತ್ತಾರೆ.ನರ್ಸರಿಗೆ ಹೋಗಿ ಅಥವಾ ತೋಟಗಾರಿಕೆ ಹವ್ಯಾಸವಿರುವ ಗೆಳೆಯ ಗೆಳತಿಯರ ಬಳಿ ಮಳೆಗಾಲದಲ್ಲಿ ಹೂವಿನ ಗಿಡಗಳಿಗಾಗಿ ಮೊದಲೇ ಬುಕ್ ಮಾಡಿ ಇಟ್ಟಿರುತ್ತಾರೆ.ನನಗೆ ಕೇಸರಿ ದಾಸವಾಳದ ಗಿಡ ಬೇಕು,ಬಿಳಿ ಗುಲಾಬಿಯದ್ದು ನನಗೆ,ಪಾರಿಜಾತದ ಗೆಲ್ಲು ನನಗೆ ಬೇಕು ಎಂದೆಲ್ಲ ಮೊದಲೇ ಕೇಳಿತ್ತು,ಅದನ್ನು ಮರೆಯದೇ ಮಳೆಗಾಲದಲ್ಲಿ ಅವರ ಬಳಿ ಕೇಳಿ ಗಿಡ ನೆಡುವ ಹವ್ಯಾಸಿಗಳು ಹಲವರು. ಸಂಜೆಯ ಹೊತ್ತು ಮೊಗ್ಗು ತೆಗೆದಿಡುವ ಕೆಲವರು, ಬೆಳಿಗ್ಗೆ ಹೂವನ್ನು ತೆಗೆದು ದೇವರ ಪೂಜೆ ಮಾಡುತ್ತಾರೆ. ಸಂಜೆ ಮೊಗ್ಗು ತೆಗೆದಿಟ್ಟರೆ ನೀರಿನಲ್ಲಿ ಹಾಕಿಡುವರು.ಮೊಗ್ಗನ್ನು ಸಂಜೆಯೇ ಪೋಣಿಸಿ,ಕಟ್ಟಿ ಇಡುವರು.ಮನೆಯಲ್ಲಿ ಹೆಂಗಸರಿಗೆ ಈ ಕಾರ್ಯವೆಂದರೆ ಬಲು ಇಷ್ಟ. ನಮ್ಮ ಮನೆಯಲ್ಲಿ ತರಾತುರಿಯಲ್ಲಿ ಕೆಲಸ ಮಾಡುವ ಅತ್ತೆ ಮಾರನೇ ದಿನದ ಪೂಜೆಗೆ ಮಧ್ಯಾಹ್ನ ಊಟದ ಮೊದಲೇ ಮೊಗ್ಗು ಕಿತ್ತು ತಂದು,ಮಾಲೆ ಕಟ್ಟಿ ತಯಾರಿ ನಡೆಸುತ್ತಾರೆ. ಅವರ ಗೆಳತಿಯ ಮನೆಯಲ್ಲಿ ಮಲ್ಲಿಗೆಯ ಮೊಗ್ಗು ತೆಗೆದು ಕಟ್ಟಿ ನಮಗೆ ಒಂದು ಮಾಲೆ ಹೂವು ಕಳಿಸುವ ಅಭ್ಯಾಸ. ಅವರ ಮನೆಗೆ ಹೋದಾಗ ಮೊಗ್ಗು ಕಿತ್ತು ಮುಗಿದಿದ್ದರೆ ಕುಳಿತುಕೊಳ್ಳಿ,ಮಾಲೆ ಕಟ್ಟಿಕೊಡುತ್ತೇನೆ ಎಂದು ಮಾವನವರಿಗೆ ಚಹಾ ಮಾಡಿಕೊಟ್ಟು,ಚಹಾ ಕುಡಿಯುವಷ್ಟರಲ್ಲಿ ಮಾಲೆ ಕಟ್ಟಿ ಕಳಿಸುತ್ತಾರೆ.ನಾನು ಹೋದಾಗ ನಿನಗೆ ಇದನ್ನು ಕಟ್ಟಲು ಹೇಳಿಕೊಡುತ್ತೇನೆ ಎಂದು ಕೂರಿಸುತ್ತಾರೆ. ಮಳೆಗಾಲದಲ್ಲಿ ಆ ಗಿಡ ನೀಡುವೆ,ಅದಕ್ಕೆ ಇಷ್ಟು ಗೊಬ್ಬರ ಹಾಕಬೇಕು ,ಹಿಂಡಿ ಹಾಕುವ ಕೆಲಸವಿದೆ ಎಂದು ಹೂವಿನದ್ದೇ ಮಾತುಕತೆ.
ಇನ್ನೂ ದೊಡ್ಡಮ್ಮನ ಮನೆಯಲ್ಲಿ ಅವರಿಗೆ ಗಿಡದ್ದೇ ಧ್ಯಾನ. ಇರುವುದು ಬಾಡಿಗೆ ಮನೆಯಾದರೂ ಮನೆಯ ಮುಂದೆ ಹೂಗಿಡಗಳನ್ನು ಚೆನ್ನಾಗಿ ಬೆಳೆಸಿದ್ದಾರೆ. ಮನೆಯ ಯಜಮಾನರು ಬಂದಾಗ ಅವರಿಗೆ ಅಚ್ಚರಿ ಮನೆಯನ್ನು ಇಷ್ಟು ಚೆನ್ನಾಗಿ ಇಟ್ಟುಕೊಂಡಿದೀರಾ ಎಂದು. ನಮ್ಮ ಮನೆಗೆ ಬರುವಾಗ ತರಹೇವಾರಿ ಹೂಮಾಲೆ ತೆಗೆದುಕೊಂಡು ಬರುವರು ಉಂಡೆ,ಚಕ್ಕುಲಿಯೊಂದಿಗೆ.
ಹೂವಿನ ಕುರಿತು ಅನೇಕ ಕಾದಂಬರಿ,ಕಥೆ,ಸಿನೆಮಾಗಳು ಮೂಡಿಬಂದಿವೆ.’ಹೂವೊಂದು ಬಳಿ ಬಂದು…‘,’ಬಾಡಿಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ..’, ‘ನಲಿವ ಗುಲಾಬಿ ಹೂವೆ…’ ,’ಹೂವೇ ಹೂವೇ ನಿನ್ನ ನಗುವಿಗೆ ಕಾರಣ ಯಾರೇ…. ‘ ಹೀಗೆ ಅನೇಕ ಹಾಡುಗಳು ನಮ್ಮ ಮನದಲ್ಲಿ ಅರಳಿ ನಿಲ್ಲುವಂತೆ ಮಾಡಲು ಹೂವೇ ಕಾರಣ.
ಬರುವಾಗ ತೊಟ್ಟಿಲಿಗೆ ಹೂ ಮೂಡಿಸಿ ಸ್ವಾಗತ, ನಂತರದ ದಿನಗಳಲ್ಲಿ ದೇವರಿಗೆ, ಮುಡಿಯಲು ಎಂದೆಲ್ಲ ಹೂವು,ಹಬ್ಬ ಹರಿದಿನಗಳಲ್ಲಿ ಉಡುಗೊರೆಯಾಗಿ, ಹೂಗುಚ್ಛಗಳಲ್ಲಿ ಸೇರಿ, ಶುಭಕಾರ್ಯದಲ್ಲಿ ಭಾಗಿಯಾಗಿ, ಆರೋಗ್ಯ ಹದಗೆಟ್ಟರೆ ಬೇಗ ಸುಧಾರಿಸಲಿ ಎಂದು ನೀಡುವ ಹೂವು, ಇಹಲೋಕಕ್ಕೆ ಹೋರಾಟಗಳು ನಮಗೆ ಸಂಗಾತಿಯಾಗಿರುವ ಈ ನಮ್ಮ ಗೆಳತಿಗೆ ನಾವು ಧನ್ಯವಾದ ಅರ್ಪಿಸಲೇ ಬೇಕು. ನಿಮಗೊಂದು ಹೂವು ಕಳಿಸುತ್ತಿದ್ದೇನೆ ಶುಭಾಶಯಗಳೊಂದಿಗೆ.
-ಸಾವಿತ್ರಿ ಶ್ಯಾನುಭಾಗ,ಕುಂದಾಪುರ
Nice article
ತಮಗೆ ತಿಳಿದಂತೆ ಹೂವನ್ನು ನೋಡಿ ರುವ ರೀತಿ ಅದರ ಬಗ್ಗೆ ಕೊಟ್ಟಿರುವ ಮಾಹಿತಿ ಅದರ ಹಿನ್ನೆಲೆ ವಿವರಿಸಿರುವ ಲೇಖನ ಚೆನ್ನಾಗಿದೆ.. ಧನ್ಯವಾದಗಳು
ಹೆಣ್ಣನ್ನು ಹೂವಿಗೆ ಹೋಲಿಸುವ ಕವಿ ಸಮಯ ಮರೆಯಲಾದೀತೆ ? ಹುಿವಿನನ ಬಗ್ಗೆ ತುಂಬಾ ಚಂದದ ಬರಹ
ಸುಜಾತಾ ರವೀಶ್
ಲೇಖನ ಚೆನ್ನಾಗಿದೆ.
ಲೇಖನ ಓದಿದಾಗ ನಾನೇ ಚಂದದ ಹೂತೋಟವೊಂದನ್ನು ಹೊಕ್ಕಂತೆನಿಸಿತು. ಚಿಕ್ಕಂದಿನ ಸವಿನೆನಪುಗಳನ್ನು ನವಿರಾಗಿ ಹೊರತೆಗೆದು, ಹೂವಿನಂತೆ ಹೊಸ ಕಂಪನ್ನು ಬೀರತೊಡಗಿತು. ನೂರಾರು ಬಣ್ಣದ ಹೂಗಳಂತೆ ಮನಸೆಳೆಯುವ ಸೊಗಸಾದ ಲೇಖನ…ಧನ್ಯವಾದಗಳು ಮೇಡಂ.
ನವಿರಾದ ಹೂವನ್ನು ಕುರಿತಾದ ನಿಮ್ಮ ಲೇಖನ ಓದಿದಾಗ, ನನ್ನ ಪ್ರೀತಿಯ ಹೂವೊಂದು ಬಳಿ ಬಂದು ನನ್ನದೆಗೆ ತಾಕಿದಂತಾಯಿತು.