ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 10
(ಕಳೆದ ಸಂಚಿಕೆಯಿಂದ ಮುಂದುವರಿದುದು)
ಸಯೋನಾರಾ, ಸಯೋನಾರಾ
24 ಏಪ್ರಿಲ್ 2019
ಇಂದು ಟೋಕಿಯೋದಿಂದ ನಮ್ಮ ದೇಶಕ್ಕೆ ಹೊರಡುವ ದಿನ. ಅಂದರೆ ನಿಪ್ಪಾನ್ (ಜಪಾನ್) ನಿಂದ ಭಾರತಕ್ಕೆ ಜಪಾನಿಗೆ ‘ಸಯೋನಾರಾ’ ಹೇಳಲು ತಯಾರಾದೆವು. ಬೆಳಿಗ್ಗೆ ಎಂಟು ಗಂಟೆಗೆ ನರಿಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದೆವು. ನಮ್ಮ ಗಮ್ಯ ಮೊದಲು ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣವಾಗಿತ್ತು. ಅಲ್ಲಿ ಐದಾರು ಗಂಟೆಗಳ ಕಾಲ ಕಾಯುವುದಿತ್ತು. ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಅಲ್ಲಿಯ ಸಿಬ್ಬಂದಿ ಒರಟಾಗಿ ವರ್ತಿಸುತ್ತಾರೆ. ದೂರನ್ನು ಅಲ್ಲೇ ದಾಖಲಿಸಿದೆವು. ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಸಮುದ್ರ ಮಂಥನವನ್ನು ಸುಂದರ ವಿಗ್ರಹಗಳಿಂದ ಮಾಡಿ ಒಂದೆಡೆ ಇಟ್ಟಿದ್ದಾರೆ.ಅದನ್ನು ಹೋಗಿ ನೋಡಿ ಬಂದೆವು. ಹಾಗೂ ಹೀಗೂ ಕಾಲಹರಣ ಮಾಡಿ ಬೆಂಗಳೂರಿನ ವಿಮಾನವನ್ನೇರಿದೆವು.
25 ಏಪ್ರಿಲ್ 2019
ಬೆಳಗಿನ ಜಾವ ಒಂದು ಗಂಟೆಗೆ ಬೆಂಗಳೂರನ್ನು ಸೇರಿ ನೆಲಮುಟ್ಟಿದೆವು. ಜಪಾನ್ ಪ್ರವಾಸ ನೆನಪಿನ ಪುಟಗಳನ್ನು ಸೇರಲು ಅಣಿಯಾಯಿತು.
ಜಪಾನಿನ ಜನ ಮತ್ತು ಜಪಾನ್
ಎರಡನೆಯ ಮಹಾಯುದ್ಧದಲ್ಲಿ ಅಪಾರ ನಷ್ಟ ಮತ್ತು ನೋವನ್ನು ಅನುಭವಿಸಿದ ಜಪಾನ್ ಶೀಘ್ರವಾಗಿ ಮತ್ತೆ ಎದ್ದು ನಿಂತಿದೆ. ಜಪಾನ್ ಬಹಳ ಮುಂದುವರೆದ ದೇಶ. ಆದರೂ ತನ್ನ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಸಾಧಾರಣ ಎತ್ತರದ ಗೌರವರ್ಣದ ಜಪಾನೀಯರು ಬಹಳ ಮೆಲ್ಲಗೆ ಮಾತನಾಡುತ್ತಾರೆ. ನಮ್ಮ ಹಾಗೆ ಮೊಬೈಲ್‌ನಲ್ಲಿಯೂ ಕಿರುಚುವುದಿಲ್ಲ. ಎಲ್ಲರೂ ಕೆಲಸಕ್ಕೆ ಕಪ್ಪು ಡ್ರೆಸ್ ಧರಿಸುತ್ತಾರೆ. ಹೆಂಗಸರು ಕಪ್ಪು ಕೋಟು ಮತ್ತು ಪ್ಯಾಂಟ್, ಗಂಡಸರು ಕಪ್ಪು ಡ್ರೆಸ್ ಜೊತೆಗೆ ಕಪ್ಪು ಟೈ ಧರಿಸುತ್ತಾರೆ. ಕೆಲವರು ಮಾಸ್ಕ್ ಹಾಕಿಕೊಳ್ಳುತ್ತಾರೆ. ಆರೋಗ್ಯದ ದೃಷ್ಟಿಯಿಂದ. ಎಲ್ಲರೂ ಬೆಳಿಗ್ಗೆ ಏಳು ಗಂಟೆಗೇ ಸಾಧಾರಣ ರೈಲು ಅಥವಾ ಬುಲೆಟ್ ರೈಲನ್ನು ಹಿಡಿದು ಕೆಲಸಕ್ಕೆ ಧಾವಿಸುತ್ತಾರೆ. ರೈಲಿನಲ್ಲಿ ಬಹಳ ಜನದಟ್ಟಣೆ ಇದ್ದಾಗ, ಹೋಗುವಾಗ ನಿಲ್ದಾಣದಲ್ಲಿ ಜನರನ್ನು ರೈಲಿನ ಒಳಗೆ ತಳ್ಳಲು ಸಹಾಯಕರು ಇರುತ್ತಾರೆ! ರೈಲು ನಿಲ್ದಾಣದ ನೆಲದ ಮೇಲೆ ಬ್ರೈಲ್‌ನ ಹಾಗೆ ಉಬ್ಬುಗಳಿರುವ ಒಂದು ಸಾಲು ಟೈಲ್ಸ್ ಇರುತ್ತವೆ. ದೃಷ್ಟಿ ಇಲ್ಲದವರು ಇದರ ಸಹಾಯದಿಂದ ಹೋಗಬಹುದು. ಧೂಮಪಾನಕ್ಕೆ ರೈಲಿನ ಬೇರೆ ಸ್ಥಳ ಇರುತ್ತದೆ. ಟೋಕಿಯೋನಲ್ಲಿ 20 ಮಿಲಿಯ ಜನ ಪ್ರತಿದಿನ ಓಡಾಡುತ್ತಾರೆ. ನಮ್ಮಂತೆಯೇ ಜಪಾನೀಯರು ಅಪರಿಚಿತರನ್ನು ಅಷ್ಟಾಗಿ ಗ್ರೀಟ್ ಮಾಡುವುದಿಲ್ಲ ಎನ್ನಿಸಿತು. ಅಂದರೆ ನೋಡಿದ ಕೂಡಲೇ ನಗುವುದು, ಹಲೋ ಹೇಳುವುದು. ಜಪಾನೀಯರು ಬಗ್ಗಿ ವಂದಿಸುತ್ತಾರೆ. ಅಷ್ಟಾಗಿ ಕೈ ಕುಲುಕುವುದಿಲ್ಲ.
ಜಪಾನೀಯರು ಅಷ್ಟು ಸುಲಭವಾಗಿ ಯಾರನ್ನೂ ಹತ್ತಿರ ಬಿಟ್ಟು ಕೊಳ್ಳುವುದಿಲ್ಲ ಮತ್ತು ತಮ್ಮಲ್ಲಿಯೇ ಒಗ್ಗಟ್ಟಾಗಿ ಇರುತ್ತಾರೆ ಎಂದು ವಾಪಸ್ಸು ಬರುವಾಗ ವಿಮಾನದಲ್ಲಿ ಸಿಕ್ಕಿದ್ದ ಯುವತಿ ಹೇಳಿದಳು. ಇವಳು ಜಪಾನಿಗೆ ಆಗಾಗ ತನ್ನ ಉದ್ಯಮದ ಸಲುವಾಗಿ ಹೋಗುತ್ತಿರುತ್ತಾಳೆ. ಅಲ್ಲಿ ಮೀಟಿಂಗ್‌ಗಳು ಇರುತ್ತವೆ. ಸುಲಭವಾಗಿ ಜಪಾನೀ ಭಾಷೆಯನ್ನು ಮಾತನಾಡುತ್ತಾಳೆ. ಸಭೆಗಳಲ್ಲಿ ಇವಳಿಗೆ ತಿಳಿಯದೆ ಮಾತನಾಡಬೇಕೆಂದರೆ ‘ಕಾಂಜಿ’ ಎನ್ನುವ ಜಪಾನಿ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದಳು. ಜಪಾನೀಯರು ಒಳ್ಳೆಯವರು ಆದರೆ ತಮ್ಮ ಗುಟ್ಟು ನಡೆಗಳನ್ನು ಬಿಟ್ಟುಕೊಡುವುದಿಲ್ಲ ಎಂದಳು. ಈ ಯುವತಿ ಬೆಂಗಳೂರಿನಲ್ಲಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾಳೆ.
ಜಪಾನೀಯರು ಕೆಲಸ ಮುಗಿಸಿ ವಾಪಸ್ಸು ಮನೆಗೆ ಬರುವುದು ರಾತ್ರಿ ಎಂಟು ಗಂಟೆಯ ಮೇಲೆ ಎನ್ನಿಸಿತು. ಆಗಲೂ ರೈಲಿನಲ್ಲಿ ಗಲಾಟೆ ಮಾಡದೆ ನಿಲ್ಲುತ್ತಾರೆ ಅಥವಾ ಕೂರುತ್ತಾರೆ. ಅಪರೂಪಕ್ಕೆ ಒಬ್ಬರು ಪುಸ್ತಕ ಹಿಡಿದು ಓದುವವರನ್ನು ನೋಡಿದೆ. ಇಲ್ಲದಿದ್ದಲ್ಲಿ ತಮ್ಮ ಫೋನನ್ನು ನೋಡುತ್ತಿರುತ್ತಾರೆ. ಬುಲೆಟ್ ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ ವೇಳೆ ಅಲ್ಲಿಯೇ ಏನಾದರೂ ಉಪಾಹಾರ ತಿಂದು ಹೋಗುತ್ತಾರೆ. ಬಹುಶಃ ಮನೆಗೆ ಹೋಗಿ ಅಡುಗೆ ಮಾಡುವರೋ? ಗೊತ್ತಿಲ್ಲ. ಬೆಳಗಿನ ವೇಳೆ ನಾವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಿದ್ದ ತಾಯಂದಿರನ್ನು ನೋಡಿದೆ. ಕೆಲವರು ಮಕ್ಕಳನ್ನು ಸೈಕಲ್ ಹಿಂದೆ ಬಹಳ ಚೆನ್ನಾಗಿರುವ ಆಸನದಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿದೆ. ಮನೆ ಅಥವಾ ಅಂಗಡಿ ಕ್ಲೀನ್ ಮಾಡುವ ಹೆಂಗಸರೂ ತಮ್ಮ ಎಲ್ಲಾ ಸಲಕರಣೆಗಳನ್ನು ಸೈಕಲ್‌ನಲ್ಲಿಟ್ಟುಕೊಂಡು ಹೋಗುತ್ತಾರೆ. ಪಾದಚಾರಿ ಮಾರ್ಗದಲ್ಲೂ ಸೈಕಲ್ ಓಡಿಸುತ್ತಾರೆ.
ಜಪಾನೀಯರು ತಮ್ಮ ಕೆಲಸದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ. ಹೆಂಡತಿ ಮಕ್ಕಳಿಗಿಂತ ಕೆಲಸವೇ ಜಾಸ್ತಿ. ಅತಿಯಾಗಿ ದುಡಿಯುತ್ತಾರೆ. ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇದೆಷ್ಟು ಅವರನ್ನು ಆವರಿಸಿಕೊಂಡಿದೆಯೆಂದರೆ ಕೆಲಸ ಪೂರೈಸಲು ಆಗದಿದ್ದಾಗ ತಪ್ಪಾದಾಗ ಅಥವಾ ಸರಿಯಾಗದಿದ್ದಾಗ ಒತ್ತಡಕ್ಕೆ ಆತ್ಮಹತ್ಯೆಗೆ ಶರಣಾಗುವುದೂ ಉಂಟು. ಇದನ್ನು ಕರೋಜಿಸಾಟ್ಸು ಎಂದು ಕರೆಯುತ್ತಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಈ ಪದ ಹುಟ್ಟಿಕೊಂಡಿತು. ಕಚೇರಿ ಕೆಲಸದ ಅತಿಯಾದ ಒತ್ತಡ, ಇದರಿಂದುಂಟಾಗುವ ಮಾನಸಿಕ ಒತ್ತಡ, ಕುಟುಂಬದ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳು ‘ಕರೊ ಜಿಸಾಟ್ಸು’ಗೆ ಕಾರಣವಾಗುತ್ತಿವೆ.
ದಿನವೊಂದಕ್ಕೆ ಹದಿನಾಲ್ಕು ಗಂಟೆಗಳಿಗೂ ಮೀರಿ ಕೆಲಸ ಮಾಡುವವರಲ್ಲಿ ಇದು ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ರೀತಿಯ ಆತ್ಮಹತ್ಯೆ ಇತರ ದೇಶಗಳಲ್ಲಿ ಮತ್ತು ಭಾರತದಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಶೋಚನೀಯ. ಆಪಾನಿನಲ್ಲಿ ‘ಕರೊ ಜಿಸಾಟ್ಸು’ ಪದದಂತೆ ಅದಕ್ಕೆ ಸಂಬಂಧಿಸಿದ ಜೋಕುಗಳೂ ಇವೆಯಂತೆ. ಒಂದು ದಿನ ಬಾಸ್ ತನ್ನ ಆರ್ಥಿಕ ಮ್ಯಾನೇಜರ್‌ನನ್ನು ಕರೆಯಲು ಸೆಕ್ರೆಟರಿಗೆ ಹೇಳಿದನಂತೆ. ಅವಳು ಅವರು ಕರೊಜಿಸಾಟ್ಸು ಮಾಡಿಕೊಂಡಿದ್ದಾರೆ? ಎಂದು ಉತ್ತರ ಕೊಟ್ಟಳು. ‘ಹಾಗಾದರೆ ಅವರಿಗೆ ಕರ್ತವ್ಯ ನಿಷ್ಠೆ ತೋರಿದ್ದಕ್ಕೆ ಸಂಬಳ ಜಾಸ್ತಿ ಮಾಡು’ ಎಂದನಂತೆ.
ಟೋಕಿಯೋದಲ್ಲಿರುವ ಶಿಬುಯ ಎನ್ನುವ ಸ್ಥಳದಲ್ಲಿರುವ ಸ್ಕ್ರಾಂಬಲ್ ರಸ್ತೆ ದಾಟುವ ಸ್ಥಳ ಪ್ರಪಂಚದಲ್ಲಿಯೇ ಪ್ರಸಿದ್ಧ. ಸ್ಕ್ರಾಂಬಲ್ ಎಂದರೆ ಹೋರಾಡು, ಸೆಣಸಾಡು ಎನ್ನುವ ಅರ್ಥ ಬರುತ್ತದೆ. ಇಲ್ಲಿ ಅನೇಕ ರಸ್ತೆಗಳು ಒಂದಕ್ಕೊಂದು ಅಡ್ಡಹಾಯುತ್ತವೆ. ಎಲ್ಲಿಗೆ ಹೋಗಬೇಕು ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದಲ್ಲಿ ದಾರಿ ತಪ್ಪುತ್ತದೆ. ರಸ್ತೆ ದಾಟುವಾಗ ಹೋರಾಡಿ, ಸೆಣಸಾಡಿಯೇ ದಾಟಬೇಕು. ಜನಸಂಚಾರ ಜಾಸ್ತಿ ಇದ್ದಾಗ ಸುಮಾರು 3000 ಜನ ಇರಬಹುದು.
ಜಪಾನಿನಲ್ಲಿ ಎಲ್ಲವೂ ತುಟ್ಟಿ ಎಂದೇ ಅನಿಸುತ್ತದೆ. ಬಹುಶಃ ಅದಕ್ಕೇ ಹೋಟೆಲ್‌ಗಳಲ್ಲಿ ಹಣ್ಣುಗಳನ್ನು ಇಡುತ್ತಿರಲಿಲ್ಲ. ಇಲ್ಲಿಯ ಸ್ಟಾಬೆರ್ರಿ ಬಹಳ ರುಚಿಯಂತೆ. ಆದರೆ ಕೇವಲ 12 ಕ್ಕೆ 1000 ಯೆನ್! ನಮ್ಮ ಮಾರ್ಗದರ್ಶಿ ಶ್ರೀ ಪ್ರಭುಜೀ ಅವರಿಗೆ ಶಾಪಿಂಗ್ ಮಾಡಲು ಸಮಯ ನೀಡುವುದಕ್ಕೆ ಮನಸ್ಸೇ ಇರುತ್ತಿರಲಿಲ್ಲ. ಒಂದೆರಡು ದಿನ ಟೋಕಿಯೋದಲ್ಲಿ ಸಂಜೆ ವಿರಾಮ ಇದ್ದುದರಿಂದ ನಾವೇ ಗುಂಪು ಕಟ್ಟಿಕೊಂಡು ಊರು, ಅಂಗಡಿ ನೋಡಿಬರಲು ಹೋದೆವು. ಜಪಾನ್ ಕೂಡ ಇತರ ಮುಂದುವರೆದ ರಾಷ್ಟ್ರಗಳಂತೆಯೇ ಇದೆ. ಎಲ್ಲಾ ದೊಡ್ಡ ಅಂಗಡಿಗಳು, ಮಾಲ್‌ಗಳು ಇವೆ. ಫ್ಯಾಮಿಲಿ ಮಾರ್ಟ್ ಎನ್ನುವ ಮಾಲ್‌ನಷ್ಟು ದೊಡ್ಡದಲ್ಲದ ಅಂಗಡಿಗಳು ಚೀನಾದಂತೆ ಇಲ್ಲೂ ಬಹಳ ಇವೆ.
ಇದಲ್ಲದೆ ಸೆವೆನ್ ಸೆವೆನ್ ಎನ್ನುವ ಇನ್ನೊಂದು ಸರಪಳಿ ಸ್ಟೋರ್‍ಸ್ ಇವೆ. ಕೆಲವೆಡೆ ಇವುಗಳಲ್ಲಿ ಯಾರೂ ಇರುವುದಿಲ್ಲ. ಆದರೂ ನೀವು ಒಳಗೆ ಹೋಗಿ ವ್ಯಾಪಾರ ಮಾಡಬಹುದು. ‘ಡೈಸೋ’ ಎನ್ನುವ ದೊಡ್ಡ ಮಾಲ್‌ಗಳ ಸರಣಿಯಿದೆ. ಇವುಗಳಲ್ಲಿ ನಿಮಗೆ ಎಲ್ಲಾ ರೀತಿಯ ಸಾಮಾನುಗಳೂ ಲಭ್ಯ. ದಿನಸಿ, ತರಕಾರಿಯಿಂದ ಹಿಡಿದು ಸೂಜಿ, ಛತ್ರಿ ಮತ್ತು ಪ್ಲಾಸ್ಟಿಕ್ ಹೂಗಳು ಇವೆ. ಜಪಾನಿನಲ್ಲಿ ಹಾಗೂ ಚೀನಾದಲ್ಲಿ ತಯಾರಾದ ವಸ್ತುಗಳಿವೆ. ಸಾಮಾನ್ಯ ದರ ‘ಡೈಸೋ’ನಲ್ಲಿ ನೂರು ಯೆನ್. ಅಂದರೆ ನಮ್ಮ ಅರವತ್ತೆರಡು ರೂಪಾಯಿಗಳು. ಇದಕ್ಕಿಂತ ಬೆಲೆ ಜಾಸ್ತಿ ಇದ್ದರೆ ಅದರ ಮೇಲೆ ನಮೂದಿಸುತ್ತಾರೆ. ಒಂದೆರಡು ಸಾಮಾನುಗಳನ್ನು ಇಲ್ಲಿ ಕೊಂಡೆವು. ಈಗ ನಮ್ಮ ದೇಶದಲ್ಲಿಯೇ ಎಲ್ಲವೂ ಲಭ್ಯವಿರುವುದರಿಂದ ಮಾಲ್‌ನಲ್ಲಿ ಕೊಳ್ಳುವುದಕ್ಕೆ ಏನಿರುತ್ತದೆ? ಆ ದೇಶದ ಸಂಸ್ಕೃತಿಯ ವಿಶೇಷತೆಯನ್ನು ಬಿಂಬಿಸುವ ವಸ್ತುಗಳಾದರೆ ಕೊಳ್ಳಬಹುದು.
ಗಮನ ಸೆಳೆದದ್ದು ಜಪಾನೀಯರ ಶಿಸ್ತು. ಮಾಲ್ ಗೆ ಹೋದಾಗ ನಾವು ಕೊಳ್ಳುವುದನ್ನು ಹಾಕಿಕೊಳ್ಳಲು ಬುಟ್ಟಿಯನ್ನು ಹಿಡಿಯುತ್ತೇವಲ್ಲವೇ? ಇವು ಅಂದವಾಗಿ ಮಾಲ್‌ನ ಪ್ರವೇಶ ದ್ವಾರದಲ್ಲಿಯೇ ಜೋಡಿಸಿ ಇಟ್ಟಿರುತ್ತಾರೆ. ಯಾರೆಂದರೆ ಗಿರಾಕಿಗಳು! ಅಲ್ಲಿಯೇ ಒಂದು ದೊಡ್ಡ ಮೇಜು ಇರುತ್ತದೆ. ಮೇಜಿನ ಮೇಲೆ ನಾವು ಕೊಂಡ ಸಾಮಾನುಗಳನ್ನು ಅವರು ನೀಡಿದ ಕವರ್‌ಗಳಲ್ಲಿ ಹಾಕಿಕೊಳ್ಳಬೇಕು. ನಂತರ ಬುಟ್ಟಿಯನ್ನು ಅಲ್ಲೇ ಜೋಡಿಸಿ ಇಡಬೇಕು. ಇಂತಹ ವಿಷಯಗಳನ್ನು ನಾವೂ ನಮ್ಮ ದೇಶದಲ್ಲಿ ಪಾಲಿಸಿದರೆ ಎಷ್ಟು ಚೆನ್ನ ಅನ್ನಿಸಿತು. ಹಾಗೆಯೇ ಹೋಟೆಲ್‌ನಲ್ಲಿ ಬೆಳಿಗ್ಗೆ ತಿಂಡಿ ತಿಂದ ತಟ್ಟೆಯನ್ನು ತೆಗೆದುಕೊಂಡು ಹೋಗಿ ಒಂದು ಕಡೆ ಇರುವ ರ್‍ಯಾಕ್ ನಲ್ಲಿ ಇಡಬೇಕು. ಬಹುಶಃ ಇದು ಇನ್ನೂ ದುಬಾರಿ ಹೋಟೆಲ್‌ನಲ್ಲಿ ಇಲ್ಲವೇನೋ. ಆದರೆ ನಾವು ತಂಗಿದ್ದ ಹೋಟೆಲ್ ಲ್ಯೂಮಿಯೆರ್ ನಲ್ಲಿ ಈ ವ್ಯವಸ್ಥೆ ಇತ್ತು. ಛತ್ರಿಗಳನ್ನು ಇಡಲು ಕಟ್ಟಡಗಳ ಹೊರಗಡೆ ನಿಲುಗಡೆ ಇರುತ್ತದೆ. ಕೆಲಸ ಮುಗಿಸಿ ಬಂದು ತೆಗೆದುಕೊಳ್ಳಬಹುದು, ಯಾರೂ ಕದಿಯುವುದಿಲ್ಲ.
ಜಪಾನಿಗರು ಪ್ರಕೃತಿಯ ಆರಾಧಕರು. ಟೋಕಿಯೋ ಅಂತಹ ಮಹಾ ನಗರಗಳಲ್ಲಿ ಮರಗಳು ಅಷ್ಟಾಗಿ ಕಾಣಿಸಲಿಲ್ಲ. ಆದರೂ ಇರುವ ಕಾಡುಗಳನ್ನು ಸಂರಕ್ಷಿಸಿದ್ದಾರೆ. ಚೆರ್ರಿ ಹೂವಿನ ಕಾಲದಲ್ಲಿ ಮರದ ಕೆಳಗೆ ಕುಳಿತು ಹೂಗಳನ್ನು ನೋಡಿ ಸಂತೋಷಿಸುತ್ತಾರೆ. ಇದಕ್ಕಾಗಿ ತಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಪ್ರವಾಸ ಹಮ್ಮಿಕೊಳ್ಳುತ್ತಾರೆ. ಸಿಕಾಡ ಎನ್ನುವ ಜೀರುಂಡೆಯ ಹಾಡನ್ನೂ ಹೀಗೆಯೇ ಸವಿಯುತ್ತಾರೆ. ವಿಮಾನ ನಿಲ್ದಾಣದಲ್ಲಿ ನಮ್ಮ ಲಗೇಜನ್ನು ನೀಡುವ ಮುಂಚೆ ಧೂಳು ಒರೆಸಿ ಕೊಡುತ್ತಾರೆ. ಶುಚಿತ್ವ ಜಪಾನಿಗರಿಗೆ ತುಂಬಾ ಮುಖ್ಯ. ತಂಪು ಪಾನೀಯದ ಕ್ಯಾನ್ ಮೇಲೆ ಅದರ ಹೆಸರನ್ನು ಬ್ರ್ವೆಲ್ ಲಿಪಿಯಲ್ಲಿ ನಮೂದಿಸಿರುತ್ತಾರೆ. ಎಟಿಎಮ್‌ಗಳಲ್ಲಿ ವಯೋವೃದ್ಧರು ಕೋಲು ಹಿಡಿದುಕೊಂಡು ಬಂದರೆ ಅದನ್ನು ಇಡಲು ವ್ಯವಸ್ಥೆ ಇದೆ. ಅತಿ ಹೆಚ್ಚು ಎಟಿಎಮ್‌ಗಳನ್ನು ಹೊಂದಿರುವ ದೇಶ ಜಪಾನ್. ಆಸ್ಪತ್ರೆಗಳಲ್ಲಿ ಅರ್ಜಿ ನಮೂನೆಗಳನ್ನು ತುಂಬುವಾಗ ಕನ್ನಡಕ ತರದಿದ್ದರೆ, ಅಲ್ಲಿಯೇ ಪಕ್ಕದಲ್ಲಿ ಹಲವು ಕನ್ನಡಕಗಳನ್ನು ಇಟ್ಟಿರುತ್ತಾರಂತೆ.
ಒಟ್ಟಿನಲ್ಲಿ ಜಪಾನ್ ಪ್ರವಾಸ ಒಂದು ಹೊಸ ಅನುಭವ ನೀಡಿತು. ನಾವು ಇನ್ನೂ ಶಿಸ್ತಿನಿಂದ ಇದ್ದು ಹೆಚ್ಚು ಸಾಧಿಸಬಹುದು ಎನ್ನುವ ಅರಿವು ಮೂಡಿತು.
(ಮುಗಿಯಿತು)
ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33670
ಒಟ್ಟು ಹತ್ತು ಕಂತುಗಳಲ್ಲಿ ಸುಲಲಿತವಾಗಿ, ಮೂಡಿ ಬಂದ ಡಾ.ಸುಧಾ ಅವರ ಪ್ರವಾಸಕಥನವು ಬಲು ಸೊಗಸಾಗಿ ನಮ್ಮನ್ನು ಜಪಾನ್ ಸುತ್ತಾಡಿಸಿತು. ಅವರಿಗೆ ಧನ್ಯವಾದಗಳು. – ಹೇಮಮಾಲಾ.
-ಡಾ.ಎಸ್.ಸುಧಾ, ಮೈಸೂರು
ಇಡೀ ಜಪಾನ್ ಸುತ್ತಾಡಿ ಬಂದ ಅನುಭವವನ್ನು ನೀಡಿದಂತಹ ಲೇಖನ ಸರಣಿ, ತುಂಬಾ ಸೊಗಸಾಗಿ ಮೂಡಿ ಬಂತು.
Thanks nayana for your encouragement.
dear Hemamala
thanks for giving me this opportunity to share my experiences and thoughts about Japan. i thank all the readers of surahonne. i thank them for the encouragement.
Regards
sudha
ಧನ್ಯವಾದಗಳು.ಜಪಾನ್ ಪ್ರವಾಸಕಥನವು ಬಹಳ ಸೊಗಸಾಗಿ, ಮಾಹಿತಿಪೂರ್ಣವಾಗಿ ಮೂಡಿ ಬಂದಿದೆ.
Thanks hemamala
ವಾವ್ ಜಪಾನ್ ಪ್ರವಾಸದ ಕಥನಾ ನಿರೂಪಣಾ ಶೈಲಿ ನನಗೆ ಬಹಳ ಮುಂದೆ ತಂದಿತು.ನಮ್ಮನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ ಬಂದಂತಹ ಅನುಭವ ಆಯಿತು… ಧನ್ಯವಾದಗಳು ಮೇಡಂ.
Thanks nagarathna for your ever present encouragement
ಉತ್ತಮವಾದ ಪ್ರವಾಸ ಕಥನ
Thanks gayathri sajjan.
ಲೇಖನ ಸರಣಿ ಮಾಹಿತಿಪೂರ್ಣವಾಗಿ ಮೂಡಿ ಬಂದಿದೆ.
Yes. i have collected information from different sources. thanks.
ಹೌದು.. ಜಪಾನ್ ಎಂದರೆ ಶಿಸ್ತು .. ಪ್ರವಾಸದ ಅತ್ಯಮೂಲ್ಯ ನೆನಪುಗಳನ್ನು, ಅತ್ಯಂತ ಸುಂದರ ಚಿತ್ರಗಳೊಂದಿಗೆ ಹಂಚಿಕೊಂಡಿರುವಿರಿ.. ಧನ್ಯವಾದಗಳು ಸುಧಾ ಮೇಡಂ.
Thanks shankari sharma for your good words for every episode.
ಸೊಗಸಾದ ನಿರೂಪಣೆ, ಸುಂದರ ಪ್ರದೇಶಗಳ ಮನೋಜ್ಞ ವರ್ಣನೆಯಿಂದಾಗಿ ಪ್ರವಾಸೀ ಕಥನ ʼಅಯ್ಯೋ, ಮುಗಿದೇ ಹೋಯಿತಲ್ಲಾʼ ಎನಿಸುವಂತೆ ಮೂಡಿಬಂತು, ಅಭಿನಂದನೆಗಳು.