ಮಣಿಪಾಲದ ಮಧುರ ನೆನಪುಗಳು..ಭಾಗ 8

Share Button

ವ್ಯಾಪಾರದ ಬೀದಿ

ನವಾಯತ್ ಮುಸ್ಲಿಂ ಮನೆಯವರ ವೈಭವೋಪೇತ ಜೀವನ ಶೈಲಿಯನ್ನು ವೀಕ್ಷಿಸಿ ಹೊರಬಂದಾಗ ಕಾಣಿಸಿತು..ಏನದು ಕಾಣುತ್ತಿರುವುದು?… ವ್ಯಾಪಾರದ ಬೀದಿ..!! L ಆಕಾರದಲ್ಲಿರುವ ಪುಟ್ಟ ರಸ್ತೆಯ ಇಕ್ಕೆಲಗಳಲ್ಲಿ  ವಿವಿಧ ರೀತಿಯ  ಸಣ್ಣ ಸಣ್ಣ ಅಂಗಡಿಗಳ  ಮಾದರಿಗಳನ್ನು ಸೃಷ್ಟಿಸಿದ್ದರು..  ಅಲ್ಲಿ ಏನುಂಟು..ಏನಿಲ್ಲ.!!.  ಹಳೆಯ ಕಾಲದ, ವಿಚಿತ್ರ ಮಾದರಿಯ  ವಸ್ತುಗಳು ತುಂಬಾ  ತುಂಬಿದ್ದುವು.. ಈ ಪುಟ್ಟ ಕೋಣೆಗಳಲ್ಲಿ! 

ಅದೆಷ್ಟೋ ವರ್ಷಗಳಿಂದ ಯಾವುದೋ ಮನೆ ಅಥವಾ ಆಫೀಸುಗಳ ಗೋಡೆಗಳಲ್ಲಿ  ವಿರಾಜಮಾನವಾಗಿ, ನೂರಾರು ಜನರಿಗೆ ಕರಾರುವಕ್ಕಾದ ಸಮಯವನ್ನು ನೀಡುತ್ತಾ, ಯಜಮಾನನ ಕೈಯಲ್ಲಿ ಕಿವಿ ಹಿಂಡಿಸಿಕೊಳ್ಳುತ್ತಿದ್ಧ ವಿವಿಧ ರೀತಿಯ ಹಲವಾರು ಗಡಿಯಾರಗಳು ಸಣ್ಣ ಕೋಣೆಯ ಮೂರೂ  ಗೋಡೆಗಳಲ್ಲಿ  ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರೆ, ಅದೆಷ್ಟೋ ಜನರ ಬಟ್ಟೆ ಹೊಲಿದು ಬಸವಳಿದ ಹಳೆಯ ಹೊಲಿಗೆ ಯಂತ್ರಗಳು ಸ್ತಬ್ಧವಾಗಿ ಕುಳಿತಿದ್ದವು. ಲಕ್ಷಗಟ್ಟಲೆ  ಅಕ್ಷರಗಳನ್ನು ಬಡಿದೂ ಬಡಿದೂ ಸುಸ್ತಾಗಿ ಮಲಗಿದ ಟೈಪ್ ರೈಟರ್ ಗಳು, ಯಾರಾದರೂ ಕ್ಷೌರಕ್ಕೆ ಬರುವರೇನೋ ಎಂದು  ಸಿದ್ಧವಾಗಿರಿಸಿದ ಕುರ್ಚಿ ಜೊತೆಗೆ ಗೋಡೆಯಲ್ಲಿ ನೇತುಹಾಕಿರುವ ದೊಡ್ಡದಾದ ಕನ್ನಡಿಯನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ವರ್ಷಗಟ್ಟಲೆ ಅಡುಗೆ ಮಾಡೀ ಮಾಡೀ ಬೇಸತ್ತ ವಿವಿಧ ರೀತಿಯ ಹಳೆಯ ಸೀಮೆಎಣ್ಣೆ ಸ್ಟೌವ್ ಗಳು ಒಂದೆಡೆ ಇದ್ದರೆ, ಇನ್ನೊಂದೆಡೆಗೆ, ಚೊಕ್ಕವಾಗಿ ಜೋಡಿಸಿಟ್ಟಿರುವ ಹತ್ತಾರು ಚಂದದ ಸಣ್ಣ ದೊಡ್ಡ ಮಣ್ಣಿನ ಪಾತ್ರೆಗಳು ಶಿಸ್ತಾಗಿ ಕುಳಿತಿದ್ದವು.  ನೂರಾರು ಮೈಲಿ ಓಡಿ, ಊರೂರು ಸುತ್ತಿ ಸಾಕಾಗಿ ವಿಶ್ರಾಂತಿ ಪಡೆಯುತ್ತಿವೆ, ಹತ್ತಾರು ಸೈಕಲ್ ಗಳು. ವಿವಿಧ ಗಾತ್ರಗಳ, ರೂಪಗಳ, ಚಂದದ ಚಿತ್ರಗಳುಳ್ಳ ಕನ್ನಡಿಗಳು ಫಳ ಫಳ ಹೊಳೆಯುತ್ತ ನಮ್ಮನ್ನು ತಮ್ಮ ಬಳಿಗೆ ಕರೆಯುತ್ತಾ ನಿಂತಿದ್ದರೆ; ಪಕ್ಕದ  ಬಳೆ ಅಂಗಡಿಯಲ್ಲಿರುವ ಕೆಂಪು ಹಸಿರು ಬಳೆಗಳು, ನಮ್ಮನ್ನು ತೊಡುವ ಹೆಂಗೆಳೆಯರೆಲ್ಲಿ? ..ಎಂದು ಕಾಯುತ್ತಾ ಕುಳಿತಿದ್ದವು. ಅದೆಷ್ಟೋ ಮನೆಗಳನ್ನು ಬೆಳಗಿದ್ದ ಸೀಮೆಎಣ್ಣೆ ಬುಡ್ಡಿಗಳು, ದೀಪಗಳು, ಸಂಭ್ರಮದ ಸಮಾರಂಭಗಳನ್ನು ಝಗಝಗಿಸುವಂತೆ ಮಾಡಿದ್ದ ಹತ್ತಾರು ಪೆಟ್ರೋಮೆಕ್ಸ್ ದೀಪಗಳು ಮಂಕಾಗಿ ನಮ್ಮನ್ನೇ ನೋಡುತ್ತಿದ್ದವು. ನೂರಾರು ಮನೆಗಳನ್ನು, ಅಂಗಡಿಗಳನ್ನು ಸುರಕ್ಷಿತವಾಗಿ ಕಾದಿದ್ದ ತರಹೇವಾರು ಬೀಗಗಳು ಗೋಡೆಯಲ್ಲಿ ತೂಗಾಡುತ್ತಿದ್ದರೆ,  ಪಕ್ಕದ ಇನ್ನೊಂದು ಕೋಣೆಯಲ್ಲಿ ಬೃಹದಾಕಾರದ ಮಣ್ಣಿನ ಜಾಡಿಗಳನ್ನು ಕಂಡಾಗ ಚಿಕ್ಕಂದಿನಲ್ಲಿ ನಮ್ಮ  ಮನೆಯಲ್ಲಿ   ಬೆಲ್ಲ, ಹಲಸಿನ ತೊಳೆ ಇತ್ಯಾದಿಗಳನ್ನು ಅಂತಹ ಜಾಡಿಗಳಲ್ಲಿ ಹಾಕಿ ಸಂರಕ್ಷಿಸಿ ಇರಿಸುತ್ತಿದ್ದುದು ನೆನಪಿಗೆ ಬಂತು. ಜೊತೆಗೆ ನಮ್ಮ ಗೈಡ್ ತಿಳಿಸಿದ ವಿಶೇಷ ಮಾಹಿತಿಯೊಂದನ್ನು ನಂಬಲಾರದಾದೆ.. ಯಾವುದೋ ಒಂದು ಪಂಗಡದಲ್ಲಿ,  ವೃದ್ಧಾಪ್ಯದಿಂದಾಗಿ ಸಾವು ಸಂಭವಿಸಿದರೆ, ಅವರ ಶರೀರವನ್ನು ಅಂತಹ ಜಾಡಿಗಳಲ್ಲಿ  ಹಾಕಿಡುತ್ತಿದ್ದರಂತೆ! ಇನ್ನುಳಿದ ಪೂರ್ತಿ ಮಾಹಿತಿ ಅವರಿಗೂ ಲಭ್ಯವಿರಲಿಲ್ಲ . ಆ ಜಾಡಿಗಳನ್ನು ಸರಿಯಾಗಿ ನೋಡಲೂ ಸ್ವಲ್ಪ ಭಯವಾಯಿತೆನ್ನಿ! ಇನ್ನೊಂದು ಕಡೆಗೆ ಹಳೆ ಕಡತಗಳು, ಪೆಟ್ಟಿಗೆಗಳನ್ನು ಪೇರಿಸಿಟ್ಟಿದ್ದರು. 

ಪೆಟ್ರೋಮೆಕ್ಸ್ ದೀಪಗಳು

ಎದುರು ಬದಿ ಅಂಗಡಿಯಲ್ಲಿ ಚಂದದ ತರಹೇವಾರು ತೊಟ್ಟಿಲುಗಳು ಪುಟ್ಟ ಕಂದನ ಕಿಲಕಿಲ ನಗುವನ್ನು ಕೇಳಿ ತೂಗಲು ಸಿದ್ಧವಾಗಿ ಕುಳಿತಿವೆ. ಕತ್ತಲಿನಿಂದ ಬೆಳಕಿನೆಡೆಗೆ ದಾರಿ ತೋರುವ ಸಣ್ಣ ದೊಡ್ಡ ಟಾರ್ಚ್ ಗಳು ನೋಡಲೇ ಚಂದ. ಬೆಂಕಿಯಲ್ಲಿ ಕಾದು ಬಿಸಿಯಾಗಿ.. ಅದೆಷ್ಟೋ ಅಡಿಗೆ ಮಾಡಿ, ಸಾವಿರಾರು ಜನರ ಜಿಹ್ವೆ ತಣಿಸಿದ ತಾಮ್ರ, ಹಿತ್ತಾಳೆ ಪಾತ್ರೆಗಳು ಮಂಕಾಗಿ ಮಲಗಿವೆ. ತರಹೇವಾರು ಪಾನೀಯಗಳನ್ನು ತುಂಬಿ ಜಂಬದಿಂದ ಮೆರೆಯುತ್ತಿದ್ದ ಬಾಟಲಿಗಳು ತಮ್ಮ ಖಾಲಿತನವನ್ನು ತೋರಿಸಲಾಗದೆ ನಾಚಿ ಪೆಚ್ಚುಮುಖ ಹಾಕಿಕೊಂಡಿದ್ದರೆ, ಅಲ್ಲೇ ಪಕ್ಕದ  ಅಂಗಡಿಯಲ್ಲಿರಿಸಿದ್ದ ಹತ್ತಾರು ಬೇರೆ ಬೇರೆ ಮಹನೀಯರ ಮುಖವಾಡಗಳಲ್ಲಿ ಅತ್ಯಂತ ನೈಜತೆ ಎದ್ದು ಕಾಣುತ್ತಿವೆ. ಅವುಗಳಲ್ಲಿ ಗಾಂಧಿ ತಾತನ ನಗುಮುಖವಂತೂ, ನಮ್ಮನ್ನು ಒಂದರೆ ಕ್ಷಣ ನಿಂತು ನೋಡುವಂತೆ ಮಾಡಿದುದು ಸುಳ್ಳಲ್ಲ.  ಒಂದಕ್ಕಿಂತ ಒಂದು ಮಿಗಿಲಾದ ವಸ್ತುಗಳು‌..ನೋಡಿ ಮುಗಿಯದಷ್ಟು ವೈವಿಧ್ಯಮಯ ಬಹು ಉಪಯೋಗೀ ಸಲಕರಣೆಗಳ ನೋಟ ಕಣ್ತುಂಬುತ್ತವೆ. ಇಂತಹ ಅದ್ಭುತ ಹಳೆ ವಸ್ತುಗಳ ಸಂಗ್ರಹಕ್ಕಾಗಿ ಶೆಣೈಯವರು ಪಟ್ಟ ಶ್ರಮ ಸಾರ್ಥಕವಾದಂತೆನಿಸಿ ಮನ ತುಂಬಿಬಂತು.        

ಇನ್ನೂ ಮುಂದಕ್ಕೆ, ಸವಿಯಾದ ಬೆಲ್ಲ ಮಾಡುವ ಆಲೆಮನೆ ಮತ್ತು ತೆಂಗಿನೆಣ್ಣೆ ತೆಗೆಯುವ ಗಾಣದ ಪುಟ್ಟ ಮಾದರಿಗಳು ಆಶ್ಚರ್ಯ ಹುಟ್ಟಿಸುತ್ತವೆ. ಚಿಕ್ಕ ಕೈಮಗ್ಗದ ಮಾದರಿಯು ಬಟ್ಟೆ ನೇಯಲು ತಯಾರಿ ನಡೆಸಿದೆ. ಪಕ್ಕದ ಪುಟ್ಟ ಶಾಲಾಕೊಠಡಿಯು ಮಕ್ಕಳು, ಮೇಸ್ಟ್ರು ಇಲ್ಲದೆ ಬಿಕೋ ಅನ್ನುತ್ತಿದೆ. ಅದರ ಗೋಡೆ ತುಂಬ ಮಕ್ಕಳಿಗಾಗಿ ವಿವಿಧ ಪ್ರಾಣಿ ಪಕ್ಷಿಗಳ ಚಿತ್ರಗಳು,ಅಲ್ಲೇ ಪಕ್ಕದಲ್ಲಿ ಭೂಪಟ, ಕರಿಹಲಗೆ..ಈ ಎಲ್ಲವನ್ನೂ ಕಂಡಾಗ ಶೆಣೈಯವರ ಸೃಜನಶೀಲತೆಗೆ ಬೆರಗಾಗಿ ಹೋದೆವು! ಇನ್ನೊಂದೆಡೆ ಹತ್ತಿಯನ್ನು  ಹದ ಮಾಡಿ ಹಾಸಿಗೆ ಮಾಡುವ ಪುಟ್ಟ ಅಂಗಡಿಯಲ್ಲಿ ಹತ್ತಿ ಮೂಟೆಗಳು ಉರುಳಿ ಬಿದ್ದಿವೆ. ಇಂಪಾದ ಹಾಡುಗಳನ್ನು ಕೇಳಿಸುತ್ತಿದ್ದ  ಗ್ರಾಮಾಫೋನ್ ಗಳ ಅಂಗಡಿ, ನಾವೆಂದೂ ಕಂಡೇ ಇಲ್ಲದ ವಿವಿಧ ರೀತಿಯ ರೇಡಿಯೋಗಳು “ಇದು ಆಕಾಶವಾಣಿ…”  ಎಂದು ಉಲಿಯದೆ ಸ್ತಬ್ಧವಾಗಿವೆ.  ಎಲ್ಲಾ ಸಂಗ್ರಹಗಳನ್ನು ಕೂಲಂಕಷವಾಗಿ ನೋಡಬೇಕಾದರೆ ದಿನವಿಡೀ ಸಾಲದೇನೋ .. ಹಾಗೆಯೇ ಎರಡು ಕಣ್ಣುಗಳೂ ಸಾಲವೇನೋ ಅನ್ನಿಸುತ್ತದೆ. ಪುಟ್ಟ ರಸ್ತೆಯ ಇಕ್ಕೆಲಗಳಲ್ಲಿರುವ ಈ ಮಾದರಿ ಅಂಗಡಿಗಳ ವೀಕ್ಷಣೆಯು; ಶೆಣೈಯವರ  ಸಮರ್ಥ ವಸ್ತು ಸಂಗ್ರಹಣೆಯ ಅಗಾಧತೆಯನ್ನು ನಮ್ಮ ಮುಂದೆ ಬಿಚ್ಚಿಟ್ಟು, ನಮ್ಮನ್ನು ನೂರಾರು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದು ನಿಲ್ಲಿಸುತ್ತದೆ! ಅದಾಗಲೇ ಮಧ್ಯಾಹ್ನದ ಉರಿ ಬಿಸಿಲು ತಲೆ ಬಿಸಿ ಮಾಡಲು ಪ್ರಾರಂಭಿಸಿತ್ತು.. ಹಾಗೆಯೇ ಮುಂದಕ್ಕೆ  ಕಾಣುತ್ತಿದೆಯಲ್ಲಾ..ಚಂದದ ಮನೆ….   ಬನ್ನಿ ನೋಡೋಣ…

ಮುಂದುವರಿಯುವುದು…..

-ಶಂಕರಿ ಶರ್ಮ, ಪುತ್ತೂರು.                                                                

13 Responses

 1. ನಾಗರತ್ನ ಬಿ. ಅರ್. says:

  ವಸ್ತು ಸಂಗ್ರಹಾಲಯದವರ್ಣನೆ ವಾವ್ ನಿಮ್ಮ ಕಲ್ಪನಾ ಚಾತುರ್ಯ ಕ್ಕೆ ಉದಾಹರಣೆಯಂತೆ ಓದಿಸಿಕೊಂಡು ಹೋಯಿತು.. ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ.ಧನ್ಯವಾದಗಳು ಮೇಡಂ.

  • ಶಂಕರಿ ಶರ್ಮ says:

   ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

 2. ನಯನ ಬಜಕೂಡ್ಲು says:

  ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಲೇಖನ ಸರಣಿ. ಆ ಜಾಡಿಗಳ ವಿಚಾರ ಕುತೂಹಲಕಾರಿಯಾಗಿದೆ, ಸ್ವಲ್ಪ ಹೆಚ್ಚಿಗೆ ಮಾಹಿತಿ ಸಿಗುತಿದ್ದರೆ ಚೆನ್ನಾಗಿತ್ತು.

  • ಶಂಕರಿ ಶರ್ಮ says:

   ಹೌದು.. ನನಗೂ ಜಾಡಿ ಬಗ್ಗೆ ಹೆಚ್ಚು ತಿಳಿಯುವ ಆಸೆಯಿಂದ ಗೈಡ್ ಲ್ಲಿ ಕೇಳಿದಾಗ, ಅವರಿಗೂ ಅದಕ್ಕಿಂತ ಜಾಸ್ತಿ ತಿಳಿದಿರಲಿಲ್ಲ. ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

 3. sudha says:

  Very nice way of presenting things.

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗೆ ಧನ್ಯವಾದಗಳು..ಸುಧಾ ಮೇಡಂ

 4. ಮಹೇಶ್ವರಿ ಯು says:

  ನೀವು ವಿವರಿಸುವ ರೀತಿಯಿಂದ ನಿಮ್ಮ ಜೊತೆ ಯೇ ನಾವೂ ಇದ್ದಂತೆ ಭಾಸವಾಗುತ್ತದೆ. ಇದೊಂದು ಶೈಕ್ಷಣಿಕ ಮೌಲ್ಯವುಳ್ಳ ಉಪಯುಕ್ತ ಸರಣಿ

  • ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ಮಹೇಶ್ವರಿ ಮೇಡಂ.

 5. Anonymous says:

  ಸುಂದರ ಬರಹ

  ಸುಜಾತಾ ರವೀಶ್

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗೆ ಧನ್ಯವಾದಗಳು..ಸುಜಾತಾ ಮೇಡಂ.

 6. Padma Anand says:

  ಶಣೈ ಅವರ ಸಂಗ್ರಹಣೆ, ನಿಮ್ಮ ಲೇಖನದ ಮೂಲಕ ನಮಗೂ ತಲುಪುವಂತೆ ಆಯಿತು. ನಿಜಕ್ಕೂ ಸರಣಿ ಬಲು ಸುಂದರವಾಗಿ ಸಾಗಿ ಬರುತ್ತಿದೆ.

  • ಶಂಕರಿ ಶರ್ಮ says:

   ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು..ಪದ್ಮಾ ಮೇಡಂ

 7. ಆಶಾ says:

  ಒಳ್ಳೆಯ ಬರಹ…ತುಂಬಾ ವಿಷಯ ತಿಳಿದುಕೊಳ್ಳುತ್ತಿದ್ದೇನೆ ಈ ಬರಹದಿಂದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: