ಬೆಟ್ಟದ ಹೂವು-ನೀಲ ಕುರಂಜಿ.
ಸಂಪೂರ್ಣ ಗೃಹಬಂಧಿಯಾಗಿ ಮಾಡಿದ್ದ ಈ ಕರೊನತನು-ಮನಗಳೆರಡನ್ನೂ ಬಾಡಿದ ಹೂವಿನಂತೆ ಹೈರಾಣು ಮಾಡಿಬಿಟ್ಟಿತ್ತು. ಇದರಿಂದ ಹೊರಬರಲುನನ್ನ ಹತ್ತಿರದ ಸಂಭಂಧಿಕರೊಡನೆ ಪ್ರವಾಸ ಆನುಭವ ಸವಿಯಲು ಸಿದ್ಧವಾಯಿತು ನನ್ನ ಮನಸ್ಸು. ಹೊರಟಿದ್ದ ಸ್ಥಳವಾದರೂ ಎಂತಹುದು-ಕೊಡಗಿನ ರಾಜಧಾನಿ, ಕರ್ನಾಟಕದ ಕಾಶ್ಮೀರ-ಮಡಿಕೇರಿ! ಆಹಾ! ಮನಸ್ಸಿನಲ್ಲೇ ” ಮಡಿಕೇರಿ ಸಿಪಾಯಿ” ಹಾಡು ಗುನುಗಿದ್ದಾಯಿತು. ಸಿದ್ಧತೆ ಸಂಭ್ರಮದಲ್ಲಿ ಸಾಗಿತು. ಸೂರ್ಯೋದಯದ ಕವಿಕುವೆಂಪು ವಿರಚಿತ ಪಕ್ಷಿ ಕಾಶಿಯ ಕವನ ನೆನಪಿಗೆ ಬಂತು.
ಮಲೆಯ ನಾಡೆನಗೆ ತಾಯಿಮನೆ
ಕಾಡು ದೇವರ ಬೀಡು
ಗಿರಿಯ ಮುಡಿ ಶಿವನ ಗುಡಿ
ಬನವೆಣ್ಣೆ ಮೊದಲಿನಾ ಮನದನ್ನೆ.
ಬೆಳಿಗ್ಗೆ 10.30ಕ್ಕೆ ಮೈಸೂರನ್ನು ಬಿಟ್ಟ ನಮ್ಮ 6ಜನರ ತಂಡ ನೇರವಾಗಿ ಮಡಿಕೇರಿಯ ಸುಪ್ರಸಿದ್ಧ ರೆಸಾರ್ಟ್ “ಕ್ಲಬ್ ಮಹೀಂದ್ರಾ”ಗೆ ಮಧ್ಯಾಹ್ನ 3.00 ಗಂಟೆಗೆ ತಲುಪಿತು. ಮೃಷ್ಟಾನ್ನ ಭೋಜನ ನಮ್ಮನ್ನು ಸುಂದರ ನಗುವಿನೊಂದಿಗೆ ಸ್ವಾಗತಿಸಿತು. ಭೂರಿಭೋಜನ ಸವಿದ ನಾವುಗಳು ನಮಗೆ ಕಾದಿರಿಸಿದ್ದ ಕೋಣೆಗೆ ತೆರಳಿ, ಕೆಲವು ಕಾಲ ವಿಶ್ರಮಿಸಿದೆವು. ಸಂಜೆ ತಂಗುದಾಣದ ಸಂಕ್ಷಿಪ್ತ ದರ್ಶನವನ್ನುಕಣ್ಣು ತುಂಬಿಸಿ, ಸಂಜೆಯ ಮನೋರಂಜನೆ ಕಾರ್ಯಕ್ರಮಕ್ಕೆ ಧಾವಿಸಿದೆವು. ಸರಿ ಸುಮಾರು 150 ಲಕ್ಸುರಿ ಕೋಣೆಗಳುಳ್ಳ ಅಂದಾಜು 4-5 ಎಕರೆ ವಿಸ್ತೀರ್ಣದಲ್ಲಿ ಪ್ರಕೃತಿಯ ಗರ್ಭದಲ್ಲೇ ನಿರ್ಮಾಣವಾಗಿರುವ ತಂಗುದಾಣದ ವಿನ್ಯಾಸ ಕೊಡಗಿನ ಸಂಸ್ಕೃತಿಯ ಪ್ರತಿಬಿಂಬವಾಗಿರುವುದು ವಿಶೇಷ. ಪ್ರತಿ ಕಟ್ಟಡಕ್ಕೂ ಆಕರ್ಷಣೀಯ ಹೆಸರು ಇಟ್ಟಿದ್ದು, ನಮ್ಮ ಬ್ಲಾಕ್ ಹೆಸರು” ಜುಜುಬಾ “ಆಗಿತ್ತು. ಅದನ್ನು ನಾವೆಲ್ಲಾ” ಜುಜುಬಿ ” ಎಂದು ಹಾಸ್ಯ ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದೆವು. ಮಡಿಕೇರಿಯ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಸೌಲಭ್ಯವೇರ್ಪಟ್ಟಿದ್ದು ನಮಗೆ ಹಿತ ತಂದಿತ್ತು. ಎಲ್ಲಿ ನೋಡಿದರಲ್ಲಿ ಹಸಿರಿನ ಹಂದರ! ಕತ್ತಲೆಯ ನಡುವೆ ಚುಕ್ಕಿ ಚಂದ್ರಮನಂತೆ ಹೊಳೆಯುವ ದೀಪಗಳು ನಮ್ಮನ್ನು ಬೇರೇ ಲೋಕಕ್ಕೆ ಸೆಳೆದಿತ್ತು. ಪಕ್ಷಿಗಳ ಝೇಂಕಾರ ಸೀಟಿ ಹೊಡೆಯುವ ರೀತಿಯಲ್ಲೇ ನಮ್ಮನ್ನೂ ಬೆರಗುಗೊಳ್ಳುವಂತೆ ಮಾಡಿತ್ತು. ರಾತ್ರಿಯ ರಸಪ್ರಶ್ನೆ ಕಾರ್ಯಕ್ರಮ ಮುಗಿಸಿ ಭೋಜನ ಮಾಡಿ ಮರುದಿನದ ಕಾರ್ಯಕ್ರಮದ ಪಟ್ಟಿಮಾಡಿ ಶುಭರಾತ್ರಿಯ ಹಾರೈಕೆಯೊಂದಿಗೆ ಚುಮು ಚುಮು ಚಳಿಯ ಅನುಭವ ಸವಿಯುತ್ತಾ ನಿದಿರೆಗೆ ಜಾರಿದೆವು.
ಸೌಂದರ್ಯಾನುಭವ ಜಾಗ್ರತಗೊಳ್ಳುವುದೇ ಪಕ್ಷಿ ಸಂಕುಲದ ನಾನಾ ಸ್ವರಗಳ ಆಲಾಪನೆಯೊಂದಿಗೆ ಬೆಳಗಿನ ಅನಾವರಣ. ಋತುಮಾನಕ್ಕನುಸಾರವಾಗಿ ವಾತಾವರಣದ ತೆರವು. ಒಮ್ಮೊಮ್ಮೆ ಹನಿ-ಹನಿ ಮಳೆಯ ಹನಿ. ಮತ್ತೊಮ್ಮೆ ಮೋಡ ಮುಸುಕಿದ ಕಪ್ಪು ಕಾರ್ಮೋಡ.ಅಂತರದಲ್ಲೇ, ಸೂರ್ಯ ರಶ್ಮಿಯ ಇಣುಕಾಟ. ತಕ್ಷಣವೇ, ಮಂಜು ಮಿಶ್ರಿತ ತಣ್ಣನೆಯ ಗಾಳಿ.ಎಷ್ಟೊಂದು ವೈವಿಧ್ಯಮಯ ಹವಾಮಾನ. ಪಕ್ಷಿಗಳಕಲರವವೇ ನಮಗೆಲ್ಲಾ ಸುಪ್ರಭಾತ. ಧನ್ಯತೆಯ ಉದ್ಗಾರ ಪ್ರಕೃತಿ ಮಾತೆಗೆ ಸಲ್ಲಿಸಿದ ನಾವೆಲ್ಲಾ ಬೆಳಗು 5.30ಗೆ ಸೂರ್ಯ ಉದಯವೀಕ್ಷಣೆಗೆ ರಾಜ ಸೀಟ್ ಎಂಬ ಜಾಗಕ್ಕೆ ತೆರಳಿದೆವು. ಮಂಜಿನ ನಡುವೆಯೇ ಬೆಳಗಿನ ವ್ಯಾಯಾಮ, ಸೂರ್ಯ ನಮಸ್ಕಾರ ಮಾಡಿ ಮನಸು-ದೇಹವನ್ನು ಸಮತೋಲನಕ್ಕೆ ತಂದ ಅನುಭವ ವಾಹ್, ವರ್ಣಿಸಲಸದಳ. ಕೊಡಗಿನ ದೊರೆ ದೊಡ್ಡವೀರರಾಜೇಂದ್ರ ನಗರ ದರ್ಶನ ಮಾಡಲು ಬರುತ್ತಿದ್ದ ಸ್ಥಳವೇ ರಾಜ ಸೀಟ್.
ಜನರ ಜೀವನ ಹಾಗೂಆರೋಗ್ಯದ ಬಗ್ಗೆ ತೀವ್ರ ಕಾಳಜಿ ಹೊಂದಿದ್ದ ಅಲ್ಲಿನ ದೊರೆಗಳ ರಾಷ್ಟ್ರ ಪ್ರೇಮ, ವಿಭಿನ್ನ ಆಚಾರ-ವಿಚಾರಸಂಪ್ರದಾಯ, ಸಂಸ್ಕೃತಿ ಹಾಗೂ ಅತಿಥಿ ಸತ್ಕಾರ ಇಂದಿಗೂ ಹೆಸರುವಾಸಿ. ನಂತರ ಅಲ್ಲಿನ ಓಂಕಾರೇಶ್ವರ ದೇವಾಲಯದ ವೀಕ್ಷಣೆ. ದೇವಾಲಯದ ಮಧ್ಯಭಾಗದ ಕಲ್ಯಾಣಿ , ಹನುಮಂತನ ಗುಡಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿ ನಿಂತಿದೆ. ಕೋವಿಡ್ ನಿಯಮಾವಳಿಯಂತೆ ದೇವರ ದರ್ಶನ ನಮಗೆ ಪ್ರಾಪ್ತಿಯಾಗಲು ಸಾಧ್ಯವಾಗಲಿಲ್ಲ. ಅಲ್ಲಿನ ಇಗ್ಗುತಪ್ಪ ದೇವಾಲಯ ವಿಶೇಷವಾಗಿರುತ್ತದೆ.
ಹಿಂದಿನ ವೀರ ರಾಜೇಂದ್ರ ಪೇಟೆಯೇ ಈಗಿನ ವಿರಾಜಪೇಟೆ ಎಂಬ ಸಂಗತಿ ನಮ್ಮ ಅರಿವಿಗೆ ಬಂತು. ಅಲ್ಲಿನ ರಾಜರುಗಳು ಉದಾತ್ತತೆಗೆ ಹೆಸರುವಾಸಿಯಾಗಿದ್ದು, ಹಲವಾರು ಮನೆತನದವರಿಗೆ ಉಳಲು ಭೂಮಿ ಗದ್ದೆಗಳನ್ನು ದಾನವಾಗಿನೀಡಿರುತ್ತಾರೆ ಎಂಬ ವಿಷಯ ತಿಳಿದಾಗ ಸಂತೋಷವಾಯಿತು. ನಮ್ಮ ಮುಂದಿನ ವೀಕ್ಷಣೆ “ನಿಶಾನಿ ಮೊಟ್ಟೆ”ಎಂಬ ವಿಶಿಷ್ಟ ಮಂಜಿನ ಬೆಟ್ಟ. ಸುತ್ತಲೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದು ಕಾಡಿನ ಸಸ್ಯ,ಕಾಡಿನ ಪ್ರಾಣಿಗಳಿಂದ ತುಂಬಿದ ಹಸಿರು ಹುಲ್ಲುಗಾವಲು. ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ನಮ್ಮ ಗುಂಪಲ್ಲಿ ಇದ್ದ ಯುವ ಪ್ರತಿಭೆ ಹರ್ಷ ಚಾರಣಮಾಡಿಕೊಂಡೆ ಆ ಜಾಗಕ್ಕೆ ಬಂದಿಳಿದಿದ್ದ. ಅಲ್ಲಿನ ಟ್ರೀ ಹೌಸ್ ಎಂಬ ತಂಗುದಾಣ ನಿಜಕ್ಕೂ ಯುವ ಪ್ರೇಮಿಗಳ ಪ್ರಣಯದಾಟಕ್ಕೆ ಅಪ್ಯಾಯಮಾನವಾಗಿದೆ. ನಮ್ಮಂತ ಮಧ್ಯ ವಯಸ್ಕರಿಗೂ ಪ್ರೇರಣೆಯಾಗದೆ ಇರದು. ಕಾವೇರಿನದಿಯ ದಡದಲ್ಲಿ ಇರುವ ಈ ರುದ್ರ ರಮಣೀಯಜಾಗ ಕವಿ ಹೃದಯಕ್ಕೆ ಲಗ್ಗೆ ಇಡದೆ ಹೋಗದು. ಮಾರ್ಗ ಮಳೆಯ ಕಾರಣ ಮಣ್ಣಿನಿಂದ ಹೂತುಹೋಗಿದ್ದು ನಮ್ಮ ವಾಹನ ಆ ಉತ್ತುಂಗಶ್ರೇಣಿಯನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗದೇ ಹಿಂತಿರುಗಿ ಬರುವಂತಾಗಿದ್ದು ತುಂಬಾ ಬೇಸರವಾಗಿತ್ತು . ಆದರೂ ವಾಹನಹಿಮ್ಮುಖವಾಗಿ ಬಂದು ಮುಖ್ಯ ರಸ್ತೆಯನ್ನುತಲುಪುವ ಸಾಹಸವನ್ನು ನಾವೆಲ್ಲಾ ಅನುಭೂತಿಗೊಳಿಸಿದ್ದು ಮರೆಯಲಾಗದು. ಇಲ್ಲಿಚಾಲಕನ ನಿಯಂತ್ರಣ ಸಾಮರ್ಥ್ಯ ಹೊಗಳಿಕೆಗೆಅರ್ಹ.ನಮ್ಮ ಹೋಟೆಲ್ಲಿಗೆ ಹಿಂತಿರುಗಿ ಬೆಳಗಿನ ಶುಚಿ-ರುಚಿ ಉಪಹಾರಮುಗಿಸಿ ಮುಂದಿನ ಪ್ರಯಾಣ ಮಂದಲ ಪಟ್ಟಿ ಕಡೆಗೆ.
ನೀಲಿ ಹೂಗಳ ಕಣಿವೆ
ಮಡಿಕೇರಿಯಿಂದ 18 ಕಿಲೋಮೀಟರ್ ಪ್ರಯಾಣದ ಅಂತರದಲ್ಲಿ ಸಿಗುವುದೇ ಮಂದಲ ಪಟ್ಟಿ ಎಂಬಸ್ಥಳ. ಇಲ್ಲಿವರೆಗೂ ನಾವುಗಳು ನಮ್ಮ ಸ್ವಂತ ವಾಹನದಲ್ಲೇ ಬರಬಹುದು. ಇಲ್ಲಿನ ಚೆಕ್ ಪೋಸ್ಟ್ಅರಣ್ಯ ವಿಭಾಗದ ವ್ಯಾಪ್ತಿಗೆ ಬರುವುದರಿಂದಹಾಗೂ ಸುಮಾರು 5ಕಿಲೋಮೀಟರ್ ದಾರಿದುರ್ಗಮವಾಗಿದ್ದು ಕೇವಲ ಜೀಪ್ ಅಥವಾ ದ್ವಿಚಕ್ರ ವಾಹನಗಳು ಮಾತ್ರ ಚಲಿಸಲು ಅನುಮತಿ ಇರುತ್ತದೆ.ಇದು ಪುಷ್ಪಗಿರಿ ಅರಣ್ಯವಾಗಿದ್ದು, ಸುಬ್ರಹ್ಮಣ್ಯದ ಕುಮಾರ ಪರ್ವತದುದ್ದಗಲಕ್ಕೂ ಚಾಚಿಕೊಂಡಿರುತ್ತದೆ. ಈ ಪ್ರಯಾಣ ನಿಜಕ್ಕೂಅವಿಸ್ಮರಣೀಯ. ಸ್ವರ್ಗ ಧರೆಗಿಳಿದ ಮಂದಲಪಟ್ಟಿ. ಹಾದಿ ಉದ್ದಕ್ಕೂ ಸಣ್ಣ-ಸಣ್ಣ ತೊರೆಗಳ ವೀಕ್ಷಣೆ. ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ಬಣ್ಣದಚಿತ್ತಾರ. ಬಣ್ಣಕ್ಕೆ ಕಾರಣ? ವಿಸ್ಮಯ ಜಗತ್ತುತೆರೆದುಕೊಳ್ಳುತ್ತದೆ. ಅದೇ ನೀಲಿ ಕುರಂಜಿ ಹೂಗಳಹಾಸು ಇಡೀ ಬೆಟ್ಟವನ್ನೇ ಆಲಿಂಗನ ಮಾಡಿಬಿಟ್ಟಿದೆ. ಈ ಅಪರೂಪದ ಹೂವಿನ ಬಗ್ಗೆ ತಿಳಿದ ಮಾಹಿತಿ ಇಲ್ಲಿದೆ. ಪ್ರಪಂಚದ ಘಟ್ಟ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಅರಳುವ ಹೂಗಳು ಈ ಕುರಂಜಿ ಹೂಗಳು. ನಮ್ಮದೇಶದಲ್ಲಿ ಕರ್ನಾಟಕದ ನೀಲಿಗಿರಿ ಬೆಟ್ಟ, ಕುಮಾರ ಪರ್ವತ ಹಾಗೂ ಕೇರಳದ ಮುನ್ನಾರ್ ಪ್ರದೇಶದಲ್ಲಿ ಮಾತ್ರ ನೋಡಲಿಕ್ಕೆ ಸಿಗುವಂತಹದು. ಇದೊಂದು ಏಕ ಜೀವ ಚಕ್ರದ ಗಿಡವಾಗಿದ್ದು ಇದರಲ್ಲಿ ಸುಮಾರು70 ಪ್ರಭೇಧಗಳಿವೆ. ಭಾರತದಲ್ಲಿ 47 ಬಗೆಯ ಹೂಗಳಿವೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿ ಸಮತೋಲನವಾಗಿದ್ದಾಗ ಮಾತ್ರ ಅರಳುವ ಹೂವು. ಇದರಲ್ಲಿ 5, 7, 12, 14 ಹಾಗೂ 16 ವರ್ಷಕ್ಕೊಮ್ಮೆ ಅರಳುವ ಜಾತಿ ಪ್ರಭೇಧಗಳಿವೆ.ಕುಮಾರ ಪರ್ವತ ಹಾಗೂ ಕೋಟೆಬೆಟ್ಟ ವ್ಯಾಪ್ತಿಯಲ್ಲಿ ಕಂಗೊಳಿಸುವ ಹೂಗಳು ಘಾಡನೀಲಿ ಬಣ್ಣ ಹೊಂದಿರುತ್ತವೆ. ಇದಕ್ಕೆ ಸಸ್ಯ ಶಾಸ್ತ್ರದ ಪ್ರಕಾರ ಸ್ಪೋಬಿಲಾಂತಸ್ ಕುಂತಿಯಾನ ಎಂಬ ಹೆಸರಿದೆ. ತಿಳಿ ನೀಲಿ ಬಣ್ಣದ ಹೂಗಳು ಇರುತ್ತವೆ. ಎಲೆಗಳು ತೊಟ್ಟುಗಳನ್ನು ಹೊಂದಿರುತ್ತದೆ. ಕೆಲವುಜಾತಿಯ ಹೂ ನೇರಳೆ ಬಣ್ಣದಿಂದ ಕೂಡಿದ್ದು ಎಲೆಗಳು ತೊಟ್ಟುಗಳನ್ನು ಹೊಂದದೆ ನೇರವಾಗಿಕಾಂಡಕ್ಕೆ ಅಂಟಿಕೊಂಡಂತೆ ಬೆಳೆಯುತ್ತದೆ. ಮಡಿಕೇರಿಯಲ್ಲಿ ದಟ್ಟ ಮಂಜು ಇರುವುದರಿಂದ ನೋಡಲು ಸ್ಪಷ್ಟವಾಗಿರುವುದಿಲ್ಲ. ವಾತಾವರಣ ತಿಳಿಯಾದಾಗ ಅರಳಿರುವ ನೀಲಿ ಕುರಂಜಿ ಸಮೂಹ ಕಣ್ ತುಂಬಿಕೊಳ್ಳುವ ಅವಕಾಶ ಅದ್ಭುತವಲ್ಲವೇ. ಇನ್ನೊಂದು ಕೌತುಕದ ವಿಷಯವೇನೆಂದರೆ, ಹಿಂದಿನ ಕಾಲದ ಜನ ಈ ಹೂವನ್ನುನೋಡಿ ವಯಸ್ಸು ಲೆಕ್ಕ ಹಾಕುತ್ತಿದ್ದರು ಎಂಬಮಾತು ಪ್ರಚಲಿತವಾಗಿದೆ. ಪೂಜೆಗೂ ಸಲ್ಲುತ್ತದೆ, ಮುಡಿಗೂ ಸಲ್ಲುತ್ತದೆ.
ಪಶ್ಚಿಮ ಘಟ್ಟದ ವನಸಿರಿ
ಈ ನೀಲಿ ಕುರಂಜಿ ಸೀರೀ
ಮೋಡಿ ಮಾಡಿತು ಮಡಿಕೇರಿ.
ಈ ಭೂರಮೆಯ ಸೊಬಗನ್ನು ಸವಿಯುತ್ತಾ ನೆನಪಿನ ಚಿತ್ರಗಳನ್ನು ಕ್ಯಾಮರಾ ಕಣ್ಣುಗಳಿಂದ ಕ್ಲಿಕ್ಕಿಸುತ್ತಾ ಮನದ ಛಾಯೆಯಲ್ಲಿ ಮುದ್ರಿಸುತ್ತಾ ಪುಷ್ಪಗಿರಿ ಪರ್ವತಾರಣ್ಯದ ಸೌಂದರ್ಯವನ್ನು ಆಸ್ವಾದಿಸುವ ಯೋಗ ನಮ್ಮದಾಯಿತು. ಹಿಂತಿರುಗಿ ಬರುವಾಗ ಮಾರ್ಗ ಮಧ್ಯದಲ್ಲಿ ಸಿಗುವ ಚಪ್ಪಂದಿಕೆರೆಯನ್ನು ವೀಕ್ಷಿಸಿದೆವು. ಸುತ್ತಲೂ ಹಸಿರು ಕೋಟೆ,ಮಧ್ಯದಲ್ಲಿ ಸಣ್ಣ ಕೆರೆ, ಕೆರೆಯಲ್ಲಿ ಹಸಿರು ರಹಿತಆಕರ್ಷಣೀಯ ಮರಗಳು-ಅಬ್ಬಾ, ಎಂತಹ ನೋಟ! ಭೌಗೋಳಿಕ ಸಿರಿ ಸಂಪತ್ತು ಎಂದರೆ ಇದೇನಾ!?ಅದರ ಗುಂಗಿನಲ್ಲೇ ನಮ್ಮ ಹೋಟೆಲ್ಲಿಗೆ ಹಿಂತಿರುಗಿ ಹೊಟ್ಟೆ ಪೂಜೆ ಸಲ್ಲಿಸಿ, ಸ್ವಲ್ಪ ವಿಶ್ರಾಂತಿ ಪಡೆದು ರಾತ್ರಿಯ ಮನೋರಂಜನೆಯ ಭಾಗವಾಗಿ ನರ್ತನ ಕೂಟದಲ್ಲಿ ಪಾಲ್ಗೊಂಡೆವು. ಮರುದಿನ, ಪಕ್ಷಿಗಳ ಸುಪ್ರಭಾತದೊಂದಿಗೆ ನಾವುಗಳು ಅಲ್ಲಿಯ ಕಾಫಿ ತೋಟದಲ್ಲಿ ವಾಯು ವಿಹಾರ ಮಾಡಿ, ಸ್ವಲ್ಪ ವ್ಯಾಯಾಮಮಾಡಿ ಬಿಸಿ-ಬಿಸಿ ಕಾಫಿ ಕುಡಿದು ಕೋಣೆಗೆ ಹಿಂತಿರುಗಿ ನಮ್ಮ ನಿತ್ಯದ ಕಾರ್ಯಗಳನ್ನೂ ಮುಗಿಸಿ ಬೆಳಗಿನ ಉಪಹಾರ ಮುಗಿಸಿದೆವು. ತಂಗುದಾಣದ ಹಚ್ಚ ಹಸಿರು ನೆನಪಿನ ಛಾಯಾ ಚಿತ್ರವನ್ನು ತೆಗೆಸಿ ರೆಸೋರ್ಟ್ಗೆ ಬೈ ಬೈ ಹೇಳಿ ಅಬ್ಬಿ ಜಲಪಾತ ನೋಡಲು ತೆರಳಿದೆವು. ತುಂಬಾ ಹಿರಿದಾದ ಜಲಪಾತವಾಗಿರದಿದ್ದರೂ ನೋಡಲು ತುಂಬಾ ಆಕರ್ಷಣೀಯವಾದ ನೋಟ. ಹಾಲಿನ ನೊರೆಯಂತ ನೀರಿನ ಚಿತ್ತಾರದ ನರ್ತನ, ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸಿಗೆ ಸೊಂಪು. ಹಾಗೆಯೇ, ಮಾರ್ಗದಲ್ಲಿ ಚಿಕ್ಲಿಹೊಳೆ ಎಂಬ ಅತ್ಯದ್ಭುತ ಅಣೆಕಟ್ಟು ನೋಡುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ಹೆಚ್ಚೇನೂ ಪ್ರಚಲಿತ ವಾಗದ ಈ ಅಣೆಕಟ್ಟಿನ ವಿಶೇಷ ಎಂದರೆ ಚಕ್ಕಲಿ ಆಕಾರದಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತದೆ. ಪ್ರಾಯಶಃ, ಈ ಕಾರಣಕ್ಕೆ ಚಿಕ್ಲಿಹೊಳೆ ಎಂಬ ಹೆಸರು ಬಂದಿರಬಹುದು. ವನ್ಯಜೀವಿ ಸಂಪನ್ಮೂಲಗಳಿಂದ ಸಮೃದ್ಧ ವಾಗಿಐತಿಹಾಸಿಕವಾಗಿ ಹಾಗೂ ನಾಡು-ನುಡಿಗಳಿಂದದೇಶಕ್ಕೆ ಮಾದರಿ ಎನಿಸುವ ರೀತಿಯಲ್ಲಿ ಜೀವಸಂಪತ್ತನ್ನು ಹೊಂದಿರುವ ಕೆಚ್ಚೆದೆಯ ಯೋಧರ ಕೇಂದ್ರ ಸ್ಥಾನ ಮಡಿಕೇರಿಯ ಪ್ರವಾಸ ನಿಜಕ್ಕೂಮನಸಿಗೆ ಸಾರ್ಥಕತೆಯ ಭಾವ ತಂದಿತು. ಶರೀರದಲ್ಲಿ ತಾಕತ್ತು ಇರುವಾಗ್ಲೇ ಹೋಗಬೇಕಾದ ಇನ್ನೆಷ್ಟೋ ಜಾಗಗಳ ಕಣಜ ಈ ಕೊಡಗು ಸಾಮ್ರಾಜ್ಯ.ನಮ್ಮ ಈ ಪ್ರವಾಸ ಸುಸಂಪನ್ನವಾಗುವಲ್ಲಿ ಬಲವಾದ ಕೈಜೋಡಿಸಿದ ಸುಪ್ರಿಯಾ-ಹರ್ಷರವರಿಗೆ ನನ್ನ ಅಭಿನಂದನೆಗಳು.
ಹೋಗುವೆನು ನಾ ಮಡಿಕೇರಿಗೆ
ನನ್ನ ಒಲುಮೆಯಾ ಗೂಡಿಗೆ
ಬರಮಾಡಿಕೊಳ್ಳುವೆಯಾ ನಿನ್ನ ಮಡಿಲಿಗೆ
ಕಾಯುತ್ತಲಿರುವೆನು ನಾನು ನಿತ್ಯವೂ ನಿನ್ನ ಕರೆಗೆ.
–ಹೆಬ್ಬಾಲೆ ವತ್ಸಲ.
ತುಂಬಾ ಸುಂದರವಾಗಿದೆ ಬರಹವೂ, ಚಿತ್ರಗಳೂ.
ಧನ್ಯವಾದಗಳು ನಯನರವರೆ ನಿಮ್ಮ ಪ್ರತಿಕ್ರಿಯೆಗೆ.
ನಿಮ್ಮ ಜೊತೆಗೆ ನಾವೂ ಪ್ರವಾಸ ಮಾಡಿದ ಅನುಭವಾದಂತಾಯಿತು ನಿಮ್ಮ ಅನುಭವವನ್ನು ಅಭಿವ್ಯಕ್ತಿ ಸುವ ರೀತಿ ಚೆನ್ನಾಗಿದೆ ಮೂಡಿ ಬಂದಿದೆ. ಮೇಡಂ ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆ ನನಗೆ ಧನ್ಯತೆಯ ಭಾವ ಮೂಡಿಸಿದೆ, ನಾಗರತ್ನರವರೆ.
ಚೆಂದದ ಪ್ರವಾಸಕಥನ..
ಧನ್ಯವಾದಗಳು ಹೇಮ.
ಸುಂದರ ಚಿತ್ತಾರದ ಬರಹ
ನಮ್ಮ ನಾಡಿನ ಐತಿಹಾಸಿಕತೆ, ಪ್ರಾಕೃತಿಕತೆಯ ಸೌಂದರ್ಯವನ್ನು ತೆರೆದಿಟ್ಟ ಸೊಗಸಾದ ಲೇಖನ
ಕನ್ನಡಿಗರ ಕಾಶ್ಮೀರ, ಮಡಕೇರಿಯ ಪ್ತವಾಸ ಕಥನ ಮನಸ್ಸಿಗೆ ಮುದ ನೀಡಿತು. ನನ್ನ ನೆನಪಿನ ಕೊಡಗಿನ ಪ್ರವಾಸವನ್ನು ಜ್ಞಾಪಿಸಿತು.
ಕೊಡಗಿನ ಹಸಿರು ವೈಭವವನ್ನು ಮನತುಂಬಿಕೊಂಡು ಆಸ್ವಾದಿಸಿದ ತಮಗೆ ಅಭಿನಂದನೆಗಳು. ಅಲ್ಲಿಯ ಪ್ರಕೃತಿ ಸಿರಿ, ನಿಸರ್ಗದ ನಗು ನೋಡಿದಷ್ಟು ದಣಿಯದು. ಚಂದದ ಪ್ರವಾಸ ಕಥನ.