ಗುಲಾಬಿ ಸ್ವರ್ಗ…!!

Share Button

ಹೂವು ಯಾವುದೇ ಇರಲಿ..ಅದನ್ನು ನೋಡಿದಾಗ ನಮ್ಮ ಮನಸ್ಸು ಅರಳುವುದು ನಿಜ ತಾನೇ? ಅದರಲ್ಲಿಯೂ ಹೂಗಳ ರಾಣಿ ಎನ್ನುವ ಕಿರೀಟ ಹೊತ್ತ ಗುಲಾಬಿಯ ಅಂದವನ್ನು ನೋಡಿದಾಗ ಕೇಳಬೇಕೇ?! ನೂರಾರು ಜಾತಿಯ, ವಿವಿಧ ಬಣ್ಣಗಳ ಕೋಮಲೆ, ತನ್ನದೇ ಆದ ನವಿರು ಸುಗಂಧಕ್ಕೂ ಖ್ಯಾತಿಪಡೆದಿದೆ. ನಾನು ಅಮೆರಿಕದಲ್ಲಿರುವ ಮಗಳ ಮನೆಗೆ ಹೋಗಿದ್ದ ಸಮಯದಲ್ಲಿ ಅಲ್ಲಿಯ ಅತ್ಯಂತ ಸುಂದರ ಗುಲಾಬಿ ತೋಟಗಳನ್ನು ನೋಡುವ ಅವಕಾಶ ದೊರೆಯಿತು.. ಜೊತೆಗೆ ಮರೆಯಲಾಗದ ಅನುಭವವನ್ನೂ ನೀಡಿತು.   

ಒಂದು ದಿನ,  “ಅಮ್ಮ, ನಿನಗೆ ತುಂಬಾ ಇಷ್ಟವಾಗುವ ಒಂದು ಕಡೆಗೆ ಹೋಗೋಣ, ಆದರೆ ನೀನು ವಾಪಾಸ್ ಬರ್ತೀಯೋ ಇಲ್ವೋ ಸಂಶಯ!” ಎಂದಳು ಮಗಳು. ನನಗೋ ಕುತೂಹಲ.. ಏನಿರಬಹುದೆಂದು. ಆಮೇಲೆ ತಿಳಿಯಿತು, ಪಕ್ಕದ ಊರಿನ (ಕೌಂಟಿ) ಸ್ಯಾನ್ ಜೋಸ್ (San Jose) ಯಲ್ಲಿ ಅಲ್ಲಿಯ ಮುನ್ಸಿಪಲ್ ಗುಲಾಬಿ ಹೂವಿನ ತೋಟದ ಪ್ರದರ್ಶನವು  ಸಾರ್ವಜನಿಕರಿಗೆ  ವೀಕ್ಷಣೆಗಾಗಿ ತೆರೆದಿರುವುದೆಂದು. ಗುಲಾಬಿಯೆಂದರೆ ಪಂಚಪ್ರಾಣವಾಗಿರುವ ನನಗೆ  ಇನ್ನು ಕೇಳಬೇಕೇ … ಸಂಭ್ರಮದಿಂದ ಪುಟ್ಟ ಮಗುವಿನೊಂದಿಗೆ ಹೊರಟೆವು.    

ಸುಮಾರು 5.5 ಎಕ್ರೆ ಜಾಗದಲ್ಲಿ ಹರಡಿರುವ ಈ ವಿಶೇಷವಾದ ಗುಲಾಬಿ ಹೂಗಳಿಗೆ ಮಾತ್ರ  ಮೀಸಲಿಟ್ಟ ತೋಟವನ್ನು ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನ್ ಜೋಸ್ ಯಲ್ಲಿ ಮಾಡಲು, ಅಲ್ಲಿಯ ಮುನ್ಸಿಪಲ್ ಸದಸ್ಯರು 1927ರಲ್ಲಿ ಯೋಜನೆ ರೂಪಿಸಿದ್ದರು. ಆರು ವರ್ಷಗಳ ಬಳಿಕ, ಅಂದರೆ 1931ರಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ರೂಪುಗೊಂಡು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಿತು. ಇಲ್ಲಿ 650ಕ್ಕೂ ಹೆಚ್ಚು ವಿವಿಧ ರೀತಿಯ ಗುಲಾಬಿ ತಳಿಗಳಿದ್ದು, ಸುಮಾರು 3500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಅತ್ಯಂತ ಹೆಚ್ಚು ಹೂ ಬಿಡುವ ವಸಂತ ಕಾಲದ ಮಧ್ಯದಲ್ಲಿ; ಅಂದರೆ ಎಪ್ರಿಲ್, ಮೇ ತಿಂಗಳುಗಳಲ್ಲಿ ಸಾರ್ವಜನಿಕರಿಗೆ  ವೀಕ್ಷಿಸಲು ಅವಕಾಶವಿದೆ. ಇದಕ್ಕಾಗಿ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುವುದು. ಈ ಹೂದೋಟವು ಇಡೀ ಅಮೆರಿಕದಲ್ಲೇ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿರುವುದು ಇದರ ಹೆಗ್ಗಳಿಕೆ. ಇದು ಬೆಳಿಗ್ಗೆ 11ಗಂಟೆಯಿಂದ ಸಂಜೆ 7ಗಂಟೆ ವರೆಗೆ ತೆರೆದಿರುತ್ತದೆ. ಇದನ್ನು ನೋಡಲು ಕಡಿಮೆಯೆಂದರೂ ಸುಮಾರು ಎರಡು ಗಂಟೆಗಳಾದರೂ ಬೇಕು. ನಾವು ಅಲ್ಲಿಗೆ ತಲಪಿದಾಗ ಮಧ್ಯಾಹ್ನ ಮೂರು ಗಂಟೆ…

ಬಹು ಹಿತಕರವಾದ ವಾತವರಣ. ಮುಂಭಾಗದ ಗೇಟಿನ ಬಳಿಯಿಂದಲೇ, ಹತ್ತು ಮೀಟರ್ ಉದ್ದಕ್ಕೆ, ಎತ್ತರದ ಕಮಾನಿನಲ್ಲಿ ಹಬ್ಬಿದ್ದ ಗುಲಾಬಿ ಗಿಡದ ರೆಂಬೆಗಳಲ್ಲಿ ಅಚ್ಚ ಬಿಳಿ ಗುಲಾಬಿಯ ದೊಡ್ಡ ದೊಡ್ಡ ಗೊಂಚಲುಗಳು ಗಮನ ಸೆಳೆದುವು. ಮುಂದಕ್ಕೆ ನಮ್ಮ ಕಣ್ಣೆದುರಿಗೆ ಕಂಡು ಕೇಳರಿಯದ ಗುಲಾಬಿ ಸ್ವರ್ಗವು ಪ್ರತ್ಯಕ್ಷವಾಯ್ತು!

ಪ್ರತ್ಯೇಕ ಪ್ರತ್ಯೇಕ ಪಾತಿಗಳಲ್ಲಿ ನಿಗದಿ ಪಡಿಸಿದ ಬಣ್ಣದ ಗುಲಾಬಿ ಹೂಗಳು ಗೊಂಚಲುಗಳಲ್ಲಿ ನಳನಳಿಸುತ್ತಿದ್ದವು. ವಿಶೇಷ ಬಣ್ಣ, ಗಾತ್ರ, ಪರಿಮಳ!! ಆಹಾ… ಒಂದು ಕಡೆಗೆ ಬೊಗಸೆ ಗಾತ್ರದ ಬಿಳಿ ಗುಲಾಬಿ ರಾಣಿ ಮೆರೆಯುತ್ತಿದ್ದರೆ, ಇನ್ನೊಂದೆಡೆ ಎರಡು ಬೊಗಸೆ ಗಾತ್ರದ ಕಿತ್ತಳೆ ಬಣ್ಣದ ಗೆಳತಿ ತನ್ನ ಜೊತೆಗಾತಿಯರೊಡನೆ ನಕ್ಕು ನಲಿಯುತ್ತಿದ್ದಳು. ಹಳದಿ ಬಣ್ಣದ ಗುಂಪು ನಮ್ಮ ಬಳಿ ಬನ್ನಿರೆಂದು ಕರೆಯುವುದು ಕೇಳಿಸಿತೆಂದು ಹೋದರೆ, ಕೆಂಪು ಕನ್ನೆಯು ಸಿಟ್ಟಿನಿಂದ ಕೆನ್ನೆಯೂದಿಸಿ ಅವಳ ಸ್ನೇಹಿತೆಯೊರೊಡನೆ, ಅವಳ ಬಳಿ ಬರಲಿಲ್ಲವೆಂದು ನಮ್ಮನ್ನು ದೂರಿದಳು. ವಿಶೇಷವಾದ ನೇರಳೆ ಬಣ್ಣದ ಮುದ್ದು ಮೊಗದ ಪುಟಾಣಿಯು ತನ್ನ ವಿಶೇಷ ಸುವಾಸನೆಯಿಂದಾಗಿ ತೋಟದ ನಂಬರ್ ವನ್ ಕಿರೀಟವನ್ನು ಧರಿಸಿದ್ದಳು! ಕೆಲವು ಹೂಗಳ ಪಕಳೆಗಳಲ್ಲಿ ಎರಡೆರಡು ಬಣ್ಣಗಳನ್ನು ಹಚ್ಚಿತ್ತು.. ಕಣ್ಣಿಗೆ ಕಾಣದ ಕುಂಚ! ನನಗೋ ಯಾವುದನ್ನು ನೋಡುವುದೆಂದು ತಿಳಿಯದೆ ದಿಗ್ಮೂಢಳಾದೆ! ಪ್ರಪಂಚವನ್ನೇ ಮರೆತ ಪುಟ್ಟ ಮಗುವಿನಂತಾಗಿತ್ತು ಮನಸ್ಸು. ಗಿಡಗಳ ಪಾತಿಯ ಪಕ್ಕ ಬಿದ್ದ ರಾಶಿ ರಾಶಿ ಎಸಳುಗಳು ಮರುದಿನ ಬರುವ ತಮ್ಮ ಗೆಳತಿಯರನ್ನು ಕಾಯುತ್ತಾ ಮಲಗಿದ್ದವು…ತಮ್ಮದೇ ಮೆತ್ತನೆಯ ಹಾಸಿಗೆ ಮೇಲೆ!

ಹೂದೋಟದ ಮಧ್ಯದಲ್ಲಿರುವ ವಿಶಾಲವಾದ ಸುಂದರ ಕಾರಂಜಿಯು ಆ ಸುಂದರ ಸಂಜೆಯ ಸೊಬಗಿಗೆ  ಮುಕುಟವಿಟ್ಟಂತಿದೆ. ಅಲ್ಲಿರುವ ಯಾವುದೇ ಹೂವನ್ನೂ ಮುಟ್ಟುವಂತಿಲ್ಲ, ಆಘ್ರಾಣಿಸಿ ಆಸ್ವಾದಿಸಬಹುದು. ಇಲ್ಲಿರುವ ಪ್ರತಿಯೊಂದು ಗುಲಾಬಿ ತಳಿ ಬಗ್ಗೆಯೂ ಗಿಡದ ಪಕ್ಕದಲ್ಲಿ, ಅದರ ಹೆಸರು, ಮೂಲ, ಇಸವಿ ಎಲ್ಲವನ್ನೂ ಸ್ಪಷ್ಟವಾಗಿ ನಮೂದಿಸಲಾಗಿದೆ. ಅಲ್ಲದೆ  ಹೊಸದಾದ ಹತ್ತಾರು ತಳಿಗಳಿಗೆ ಇನ್ನೂ ಹೆಸರು ಇರಿಸಿಲ್ಲ… ಅದಕ್ಕಾಗಿ ಹೆಸರು ಸೂಚಿಸುವಂತೆಯೂ ವಿನಂತಿ ಫಲಕವಿದೆ.

ಇನ್ನೊಂದು ವಿಶೇಷವೆಂದರೆ, ಈ ಸಮಯದಲ್ಲಿ ಸಾವಿರಾರು ಮಂದಿ, ಗುಲಾಬಿಯೊಡನೆ ಫೋಟೋ  ತೆಗೆಸಿಕೊಳ್ಳಲೆಂದೇ ಬರುವರು. ಮದುವೆಯಾದ ನವಜೋಡಿಗಳಿಗೂ ಇದು ಛಾಯಾಚಿತ್ರಗಳಿಗಾಗಿ ಇರುವ ನಾಕ. ಅಂತಹ ಹಲವಾರು ಜೋಡಿಗಳ ಹಿಂದೆ ಮುಂದೆ ಛಾಯಾಗ್ರಾಹಕರು ಕ್ಯಾಮೆರಾ ಹಿಡಿದು ಓಡಾಡುವುದು ಕಂಡುಬಂತು. ಅಲ್ಲೇ ಪಕ್ಕದಲ್ಲಿ, ಸ್ವಲ್ಪ ಎತ್ತರಕ್ಕೆ ರಚಿಸಿರುವ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ವರ್ಷ ಮೊದಲೇ ನೋಂದಾಯಿಸಲೂ ದಕ್ಕದಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿ.  ಹೂದೋಟವು ಮುಚ್ಚುವ ಸಮಯವಾದರೂ ನನಗೆ ಹೊರಡುವ ಮನಸ್ಸೇ ಇಲ್ಲ.. ಮಗಳು ಹೇಳಿದ್ದು ನಿಜವಾಗಿತ್ತು! ಮನಸ್ಸಿಲ್ಲದ ಮನಸ್ಸಲ್ಲಿ ಹೊರಬಂದಾಗ ಅನ್ನಿಸಿದ್ದು.. ಜೀವಮಾನದಲ್ಲಿ ಮರೆಯಲಾಗದ ಸುಂದರ ಘಳಿಗೆಗಳು ಅದಾಗಿದ್ದವು…ಇಂದಿಗೂ.. ಈಗಲೂ ಅದನ್ನು ನೆನೆದರೆ ಬೇರೇನೂ ನೆನಪಾಗುವುದಿಲ್ಲ. ಇಂತಹ ದಿವ್ಯ ಅನುಭೂತಿಗೆ ಅವಕಾಶ ಕಲ್ಪಿಸಿದ ಮಕ್ಕಳಿಗೆ ಮಮತೆಯಿಂದ ಥ್ಯಾಂಕ್ಸ್!!

ನಾವಿದ್ದ ಸ್ಯಾನ್ ಫ್ರಾನ್ಸಿಸ್ಕೊದಿಂದ ಸುಮಾರು 700ಮೈಲು ದೂರದ ಒರೆಗಾನ್ ರಾಜ್ಯದ ಪೋರ್ಟ್ ಲ್ಯಾಂಡ್ ನಲ್ಲಿರುವ ನಮ್ಮ ಬಂಧುಗಳಲ್ಲಿಗೆ ನಾವು ಹೋಗಿದ್ದಾಗ, ಅಲ್ಲಿಯ ಗುಲಾಬಿ ತೋಟವೊಂದನ್ನು ವೀಕ್ಷಿಸುವ ಅವಕಾಶವೊದಗಿತು.. ನನಗೆ ಇನ್ನೊಮ್ಮೆ ನನ್ನ ಪ್ರಿಯ ಗುಲಾಬಿಯ ಭೇಟಿ! ಗುಲಾಬಿ ನಗರವೆಂದೇ ಪ್ರಸಿದ್ಧವಾದ ಈ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಲಾಬಿ ತಳಿಗಳನ್ನು ಪರೀಕ್ಷಿಸಿ ಅಭಿವೃದ್ಧಿಪಡಿಸುವಿಕೆ, ಅದಕ್ಕೆ ಬರಬಹುದಾದ ರೋಗಗಳಿಗೆ ಔಷಧಿ ಕಂಡುಹಿಡಿಯುವುದು, ಮಿಶ್ರ ಬಣ್ಣಗಳಿಗಾಗಿ ಪ್ರಯೋಗ ಇತ್ಯಾದಿಗಳ ಸಲುವಾಗಿಯೇ ಇರುವಂತಹ ತೋಟವಿದು. ಜಗತ್ತಿನೆಲ್ಲೆಡೆಯಿಂದ ಇವುಗಳಿಗಾಗಿ ಗುಲಾಬಿ ಗಿಡಗಳನ್ನು ಕಳುಹಿಸುವರು. ಸುಮಾರು 4.5ಎಕರೆಗಳಷ್ಟು ವಿಸ್ತಾರವಾಗಿರುವ ಪ್ರದೇಶದಲ್ಲಿ ಹತ್ತಾರು ಸ್ತರಗಳ ಪಾತಿಗಳಲ್ಲಿ ವಿವಿಧ ತಳಿಗಳನ್ನು ಬೆಳೆಸಲಾಗಿದೆ. ಇಲ್ಲಿ 650ಕ್ಕೂ ಹೆಚ್ಚು ಗುಲಾಬಿ ತಳಿಗಳಿದ್ದು, 10,000ಕ್ಕೂ ಹೆಚ್ಚು ಗುಲಾಬಿ ಗಿಡಗಳಿವೆ. ಎಪ್ರಿಲ್ ನಿಂದ ಅಕ್ಟೋಬರ್ ವರೆಗೆ ಅತ್ಯಂತ ಹೆಚ್ಚು ಹೂವುಗಳು ನಳನಳಿಸುವ ಕಾಲವಾಗಿದೆ.   ವರ್ಷವೊಂದರಲ್ಲಿ ಸುಮಾರು 7ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿಕೊಡುವರು.

ಪೋರ್ಟ್ ಲ್ಯಾಂಡ್ ನಲ್ಲಿರುವ ಗುಲಾಬಿ ತೋಟ

ಇಲ್ಲಿ, ಜೂನ್ ತಿಂಗಳು, ಗುಲಾಬಿ ಹೂಗಳು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅರಳುವ ಕಾಲ. ಅದೃಷ್ಟವೆಂಬಂತೆ, ನಾವು ಅಲ್ಲಿಗೆ ಭೇಟಿ ಕೊಟ್ಟುದೂ ಜೂನ್ ತಿಂಗಳ ಮೊದಲ ವಾರವಾಗಿತ್ತು. ಬೆಳಗ್ಗೆ ಹನ್ನೊಂದು ಗಂಟೆ.. ತಿಳಿ ಬಿಸಿಲಿನ ನಡುವೆ ಬೀಸುವ ತಂಪುಗಾಳಿಯು ಮನಸ್ಸನ್ನು ಅಹ್ಲಾದಗೊಳಿಸಿತ್ತು. ಹೂತೋಟದ ಮುಂಭಾಗದಲ್ಲಿಯೇ ಎತ್ತರಕ್ಕೆ ಬೆಳೆದ ಕೆಂಪುಗುಲಾಬಿ ಹೂವಿನ ಗಿಡಗಳ ಕಮಾನಿನಲ್ಲಿ ಎಲೆಗಳೇ ಕಾಣಲಾರದಷ್ಟು ಹೂವುಗಳು ಕಣ್ತುಂಬಿದವು. ಬೊಗಸಿಗಿಂತಲೂ ದೊಡ್ಡದಾದ ಹಳದಿ ಗುಲಾಬಿ ಹೂಗಳ ವಿಸ್ತಾರವಾದ ಪೊದೆಗಳು ಬೀಸುವ ಗಾಳಿಗೆ ತೊಯ್ದಾಡುತ್ತಿದ್ದವು. ನಮ್ಮೂರಲ್ಲಿ ಕಂಡು ಕೇಳರಿಯದಂತಹ ಬಣ್ಣಗಳ, ಹಲವು ಸುವಾಸನೆಗಳ ಹೂಗಳ ಸೊಬಗನ್ನು ಆಸ್ವಾದಿಸುತ್ತಾ, ವರ್ಣನೆಗೆ ನಿಲುಕದಷ್ಟು ಅಂದದ ಹೂಗಳ ನಡುವೆ ಗಂಟೆಗಳಷ್ಟು ಓಡಾಡಿದರೂ ದಣಿವು ಮೈಲು ದೂರ ಓಡಿತ್ತು!

ಪೋರ್ಟ್ ಲ್ಯಾಂಡ್ ನಲ್ಲಿ ಎಲ್ಲಿ ನೋಡಿದರೂ ರಸ್ತೆಯ ಇಕ್ಕೆಲಗಳಲ್ಲಿ, ರಸ್ತೆ ವಿಭಜಕಗಳಲ್ಲಿ ನೆಲದ ಮೇಲಿನ ಗಿಡಗಳಲ್ಲಿ, ಲೈಟ್ ಕಂಬಗಳ ತೂಗು ಕುಂಡಗಳಲ್ಲಿ ಅರಳಿ ನಿಂತಿರುವ ಗುಲಾಬಿ ಹೂಗಳ ವೈಭವವನ್ನು ನೋಡಲು ಎರಡೂ ಕಣ್ಣುಗಳು ಸಾಲವೆನಿಸುತ್ತವೆ! ಅಲ್ಲದೆ ಗೋಡೆಗಳಲ್ಲಿಯೂ, ಗುಲಾಬಿಯ ಬಳ್ಳಿಯಂತಿರುವ ತಳಿಯಲ್ಲಿರುವ ಪುಟ್ಟಪುಟ್ಟ ಹೂಗಳ ದೊಡ್ಡ ದೊಡ್ಡ ಗೊಂಚಲುಗಳಂತೂ, ಈ ಗುಲಾಬಿ ನಗರದ ವೈಭವವನ್ನು ವಿವಿಧ ರೀತಿಗಳಲ್ಲಿ ಸಾರಿ ಹೇಳುತ್ತವೆ.

ಅಂತೂ ಈ ಗುಲಾಬಿ ಸ್ವರ್ಗವು ಮರೆಯಲಾರದ ಅನುಭವವನ್ನು ನೀಡಿದ್ದಂತೂ ಸತ್ಯ. ಇತ್ತೀಚೆಗೆ ಮಗಳು ಕೊಟ್ಟಿದ್ದ, ಗುಲಾಬಿ ಹೂ ಪಕಳೆಗಳಿಂದ ತಯಾರಿಸಿದ ಅಚ್ಚ ಅತ್ತರಿನ ಸುವಾಸನೆಯು, ಎಲ್ಲಾ ಗುಲಾಬಿಗಳ ಕಥೆಯನ್ನು ಹೇಳಿದಂತಿತ್ತು!

-ಶಂಕರಿ ಶರ್ಮ.

17 Responses

 1. ನಯನ ಬಜಕೂಡ್ಲು says:

  ಗುಲಾಬಿ ಹೂವಿನಷ್ಟೇ ಸುಂದರವಾಗಿದೆ ಬರಹ.

  • ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

 2. Hema says:

  ಗುಲಾಬಿಯಷ್ಟೇ ಸೊಗಸಾದ ನವಿರಾದ ಬರಹ..ಸೂಪರ್

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗೆ ಧನ್ಯವಾದಗಳು… ಮಾಲಾ

 3. ನಾಗರತ್ನ ಬಿ. ಅರ್. says:

  ಗುಲಾಬಿಯೊಡನೆ ನಿಮ್ಮ ಆನಂದದ ಅನುಭವ ಚಿತ್ರಗಳ ಮೂಲಕ ಅನಾವರಣಗೊಳಿಸಿರವ ಪರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ

  • ಶಂಕರಿ ಶರ್ಮ says:

   ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

 4. Vathsala says:

  ಗುಲಾಬಿ ಹೂವಿನ ಚಿತ್ರಣ ಮನಸಿನಲ್ಲಿ ಘಾಡವಾಗಿ
  ಉಳಿಯುವಂತಿದೆ ನಿಮ್ಮ ಬರಹ ಶಂಕರಿಯವರೆ.

  • ಶಂಕರಿ ಶರ್ಮ says:

   ಓದಿ, ಮೆಚ್ಚಿ, ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು ..ವತ್ಸಲಾ ಮೇಡಂ

 5. padmini says:

  ಊಟಿಯ ಬಳಿಯ ಕೂನೂರಿನಲ್ಲಿಯೂ ಸೊಗಸಾದ ಗುಲಾಬಿ ತೋಟ ಇದೆ.

  • ಶಂಕರಿ ಶರ್ಮ says:

   ತಮ್ಮ ಅನುಭವದ ನುಡಿಗಳೊಂದಿಗಿನ ಸ್ಪಂದನೆಗೆ ನಮನಗಳು.

 6. ಗುಲಾಬಿ ಯಾರಿಗೆ ಪ್ರಿಯವಲ್ಲ ಹೇಳಿ?. ಅಂತೆಯೇ ಶಂಕರಿ ಶರ್ಮ ಪುತ್ತೂರು ಇವರ ಬರಹವೂ ಮೆಚ್ಚದವರು ಯಾರಿದ್ದಾರೆ?. ಬಹು ಚೆನ್ನಾಗಿ ಚಿಗುರಿ ನಿಂತ ಬರಹ.

  • ಶಂಕರಿ ಶರ್ಮ says:

   ಪ್ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ವಿಜಯಕ್ಕಾ.

 7. Padma Anand says:

  ಹೂಗಳ ರಾಣಿ ಗುಲಾಬಿಗಳ ಜಗತ್ಪ್ರಸಿದ್ಧ ತೋಟದಲ್ಲಿ ಸುತ್ತಾಡಿ ಅದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರಿ. ಗುಲಾಬಿಯ ಮನೋಹರ ವರ್ಣನೆಗೆ ಮನ ಸೋತಿದೆ. ಅಭಿನಂದನೆಗಳು.

  • ಶಂಕರಿ ಶರ್ಮ says:

   ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು..ಪದ್ಮಾ ಮೇಡಂ

 8. sudha says:

  beautiful writing as a rose. we have rose gardens in coonoor lalbagh delhi and other places.

  • ಶಂಕರಿ ಶರ್ಮ says:

   ತಮ್ಮ ಅನುಭವದ ನುಡಿಗಳೊಂದಿಗಿನ ಸ್ಪಂದನೆಗೆ ನಮನಗಳು…ಸುಧಾ ಮೇಡಂ.

 9. Anonymous says:

  ಸುಶೀಲಾ Sn ಭಟ್.

  ಶಂಕರಿ ನಿನ್ನ ಗುಲಾಬಿ ಹೂ ತೋಟದ ವಣ೯ನೆ ಓದಿದಾಗ ನಾನೇ ಹೋಗಿ ನೋಡಿದ ಅನುಭವ ಆಯಿತು. ಸಂತೋಷವಾಯಿತು. ಧನ್ಯವಾದಗಳು ನನ್ನ ಮನ ಹೂವಂತೆ ಅರಳಿಸಿದ್ದಕ್ಕೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: