ನೆನಪಿನ ಡಬ್ಬಿ

Share Button

ಜಾತಸ್ಯ ಮರಣಂ ಧ್ರುವಂ….”  ಜನನ ಆಕಸ್ಮಿಕ, ಜೀವನ ಅನಿವಾರ್ಯ, ಮರಣ ನಿಶ್ಚಿತ. ಸೃಷ್ಟಿ-ಸ್ಥಿತಿ-ಲಯವೇಪ್ರಕೃತಿಯ ನಿಯಮ. ನಮ್ಮ ಒಪ್ಪಿಗೆ ಇಲ್ಲದೆ ಈ ಜಗತ್ತಿಗೆ ಬಂದವರು ನಾವೆಲ್ಲಾ. ನಮ್ಮ ಅಪ್ಪಣೆ ಇಲ್ಲದೆ ಸಾಯುವವರು.  ಈ ಜನನ-ಮರಣದ ನಾಲ್ಕುದಿನಗಳ ಈ ಹೋರಾಟದ ಬದುಕಿನಲ್ಲಿ ಎಷ್ಟೊಂದು ಮಜಲುಗಳು. ಒಮ್ಮೆ ಸಂತೋಷ, ಮತ್ತೊಮ್ಮೆದುಃಖ, ಒಮ್ಮೆ ನಲಿವು, ತಕ್ಷಣವೇ ನೋವು. ಒಮ್ಮೆಜಯ, ಕೂಡಲೇ ನಿರಾಸೆಯ ಛಾಯೆ. ಪ್ರಪಂಚವನ್ನು ಬಹಳ ಸುಂದರವಾಗಿ ಮತ್ತು ಸುವ್ಯವಸ್ಥಿತವಾಗಿ ಸೃಷ್ಟಿಸಿರುವ ನಿಯಾಮಕನು ಕೆಲವೊಂದು ವಿಕಲ್ಪಗಳನ್ನು ಜೊತೆಯಾಗಿರಿಸಿರುವ ಉದ್ದಿಶ್ಯವೇನು ಎಂಬ ಕುತೂಹಲ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಮೂಡಿರುತ್ತದೆ. ಯಾಕೆಂದರೆ ಯಾವುದು ಸುಲಭ ಗ್ರಾಹ್ಯವಲ್ಲವೋ ಅವೆಲ್ಲವನ್ನು ಸಂದೇಹಿಸುವುದು ಸಹಜ ಸ್ವಭಾವ. ಯೋಗ್ಯ ಅರಿವಿರಬೇಕಷ್ಟೆ.

ಅಯ್ಯೋ! ಏನಿದು, ವತ್ಸಲಳಿಗೆ ಯಾಕೇ ಆಧ್ಯಾತ್ಮದಚಿಂತನೆ  ಎಂದು ಹೂಗುಡುತ್ತಿದ್ದೀರಾ?ನನ್ನ ಪ್ರಕಾರ ಎಲ್ಲದಕ್ಕೂ ಆತ್ಮವೇ ಆದಿ, ಹಾಗಾಗಿ ಸಂತೋಷಕ್ಕೂ ಆತ್ಮವೇ ಚೈತನ್ಯದಾಯಕ, ದುಃಖಕ್ಕೂಆತ್ಮವೇ ಪೂರಕ. ಇರಲಿ, ಈ ಬದುಕಿನ ಅನೇಕಾನೇಕ ಘಟ್ಟಗಳಲ್ಲಿ ಪ್ರಮುಖವಾದದ್ದೂ, ನಾವು ಜೀವನದಲ್ಲಿ ಆರ್ಥಿಕವಾಗಿ ಸಬಲವಾಗುವ ಕಾಲಘಟ್ಟ, ಯಾಕೆಂದರೆ, ನಮ್ಮಬದುಕು ಇನ್ನೊಬ್ಬರ ಹಂಗಾಗಬಾರದಲ್ಲವೇ? ಋಣದ ಎಳೆಯೊಳಗೆ ಸಿಲುಕಿ ಜರ್ಜರಿತವಾಗಬಾರದು ನಮ್ಮ ಬದುಕು. ಇದೇ ಅಲ್ಲವೇ  ಬದುಕಿನಸಾರ-ಸತ್ವ. ಉದ್ಯೋಗಮ್ ಸುಸಂಸ್ಕೃತ ಲಕ್ಷಣಂ ಎಂದು ನಂಬಿರುವ ಆಧುನಿಕ ಕಾಲವನ್ನು ಸಾಕ್ಷೀಕರಿಸಿರುವವರು ನಾವಲ್ಲವೇ. ವ್ಯವಹಾರದ ಬದುಕು , ಭಾವನಾತ್ಮಕ ಬದುಕಿನ ಒಂದು ಭಾಗ. ಹಾಗಾಗಿ ಎರಡು ದೋಣಿಯಲ್ಲಿ ಪಯಣಿಸುವ ನಾವು ಜೀವನ ದರ್ಶನವೆಂಬ ಪ್ರವಾಸ ಮಾಡುವಲ್ಲಿ ಎಡವಬಾರದಷ್ಟೇ. ಪ್ರಯಾಣಿಕರು ಹಲವಾರು. ಕೆಲವರು ಅಬಾಧಿತರು. ಇನ್ನು ಕೆಲವರು ಬಾಧಿತರು. ನನಗೆ ವಿದ್ಯಾರ್ಹತೆ ದೈವ ನೀಡಿದ ಶ್ರೀರಕ್ಷೆ,ತಂದೆ-ತಾಯಿಯ ಕುಲುಮೆಯ ಶ್ರಮ. ನನ್ನ 23ನೇ ವಯಸ್ಸಿನಲ್ಲಿ  ನನಗೆ ಒಲಿದು ಬಂದ ನೌಕರಿಯ ಪ್ರಾಪ್ತಿಯ ಸಂತೋಷದ ಘಳಿಗೆ,  ನನ್ನ ಜೀವನದಮಹತ್ತರ ಘಟ್ಟ. ಈ ಸಾಧನೆಯ ಹಿಂದಿನ ಕಾಣದ ಕೈಗಳೆಷ್ಟೋ, ಅವರನ್ನೆಲ್ಲಾ ನೆನಪಿಸಿಕೊಳ್ಳುವ ಈ ಕ್ಷಣ ಅಮೃತ ಘಳಿಗೆ.

1986 ಮೇ ತಿಂಗಳಲ್ಲಿ ನನ್ನ ಪದವಿ ಪೂರೈಸಿದ ಸಾಕ್ಷಿಯಾಗಿ ಫಲಿತಾಂಶದ ಅಂಕ ಪತ್ರ ನನ್ನ ಕೈಸೇರಿತು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಂ.ಸ್ಸಿಗೆ ಅರ್ಜಿ, ಬಿ.ಎಡ್ಜ್ ಅರ್ಜಿ, ಡಿಪ್ಲೊಮಾ ಕೋರ್ಸಿಗೆ ಅರ್ಜಿ ಗುಜುರಾಯಿಸಿದ್ದಾಯಿತು. ಇಲ್ಲಿ ನನ್ನ ಅರ್ಜಿಗಳು ಸಮಯಕ್ಕೆ ಸರಿಯಾಗಿ ತಲುಪಲು ಸಹಾಯ ಮಾಡಿದ್ದು ಅಂಚೆ ಇಲಾಖೆಯ ಅಂಚೆ ಪೇದೆ ಎನ್ನುವುದು ಉತ್ಪ್ರೇಕ್ಷೆಯೇನಲ್ಲ. ಅವನ ಪ್ರಾಮಾಣಿಕ ಸೇವೆಗೊಂದು ನನ್ನ ಸಲಾಂ. ಅರ್ಜಿ ಸಲ್ಲಿಸಿದ ಮೇಲೆ, ಸೀಟು ದೊರಕಿದೆಯೋ ಇಲ್ಲವೋ ಎಂಬ ಆತಂಕ! ಪ್ರತಿ ದಿನವೂ ಅಂಚೆಯವನೋಡನೆ ವಿಚಾರಣೆ, ಅವನೂ ನಮ್ಮ ಕುಟುಂಬದವರಲ್ಲಿ ಒಬ್ಬನಾಗಿ ಹೋಗಿದ್ದ. ಒಮ್ಮೊಮ್ಮೆ ಅವನಿಗೂ ಕಾಫೀ ಉಪಚಾರ ನಡೆಯುತ್ತಿತ್ತು. ಎಂ.ಸ್ಸಿಗೆ ಸೀಟು ಸಿಕ್ಕಿರುವ ಅಂಗೀಕೃತ ಪತ್ರ ಹೊತ್ತು ತಂದ ಆ ಅಂಚೆ ಪೇದೆಗೆ ಒಬ್ಬಟ್ಟಿನ ಔತಣ ನೀಡುವಷ್ಟು ಸಂಭ್ರಮ. ಆ ಉದ್ಯೋಗ ಹೆಚ್ಚಿನ ಸಂಬಳ ತರದಿದ್ದರೂ ಆ ಹುದ್ದೆ ಎಲ್ಲರ ಬದುಕಿನಲ್ಲಿ ಗೌರವ ಪೂರ್ವಕವಾಗಿತ್ತು. ಅಂಚೆ ಪೇದೆಗೆ ಸಿಗುತ್ತಿದ್ದ ಮಾಸಿಕ ವರಮಾನ ಅವನ ಎಲ್ಲಾ ಅಗತ್ಯತೆಗಳನ್ನೂ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ವಾಸ್ತವಿಕ ಅಂಶ. ಹಾಗೆಯೇ ಅವನ ಸಂಪಾದನೆ ಆ ನಿಸ್ವಾರ್ಥ ಸೇವೆಗೆ ಪೂರಕವಾಗಿರಲಿಲ್ಲ. ಆ ಕಾರಣಕ್ಕಾಗೋ ಏನೋ ಅವನೊಡನೆ ನಮ್ಮ ಪೀಳಿಗೆಯ ಜನರಲ್ಲಿ ಒಂದು ಅವಿನಾಭಾವ ಸಂಬಂಧ ಮೂಡಿಸಿತ್ತು. ಲಂಚ ರಿಶುವತ್ತಿನ ಲಾಲಸೆ ಅವನಿಗೆ ರವಷ್ಟು ಇಲ್ಲದ ನಿಸ್ವಾರ್ಥ ಸೇವೆ.

ವಿದ್ಯಾಭ್ಯಾಸ ಒಂದು ಅಂತಿಮ ಹಂತಕ್ಕೆ ಬಂದ ಮೇಲೆ ವಿವಿಧ ಇಲಾಖೆಗಳಲ್ಲಿ ನೌಕರಿಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭ. ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಯಾವ ಕೆಲಸಕ್ಕೂ ಅರ್ಹರೂ ಎಂದು ನಂಬಿದ್ದ ಕಾಲವದು. ಸಂಗೀತ, ನೃತ್ಯ, ಕಸೂತಿ ಅವರವರ ಅಪೇಕ್ಷಣೀಯ ಹವ್ಯಾಸವಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿನನ್ನ ದಿನಚರಿಯಾಗಿತ್ತು. ದಿನಪತ್ರಿಕೆ ತರಿಸದ ನಮ್ಮ ಮನೆಯಲ್ಲಿ ಸ್ನೇಹಿತರ ಸಹಾಯದಿಂದ ಹಾಗೂ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನನ್ನ ಹೆಸರನ್ನು ಧಾಖಲಿಸಿ, ಅದರ ಮೂಲಕ ಹಾಗೂ ರೇಡಿಯೊದಲ್ಲಿ ಬರುತ್ತಿದ್ದ ಉದ್ಯೋಗ ವಾರ್ತೆ ಮೂಲಕ ವಿಷಯ ಸಂಗ್ರಹಿಸುತ್ತಿದ್ದ ಸಮಯವದು.

ಇಲ್ಲೂ ಕೂಡ ಅಂಚೆ ಪೇದೆಗೆ ಶರಣಾಗಿದ್ದನಾನು ಪ್ರತಿದಿನವೂ ಅವನ ಕ್ಷೇಮ ಸಮಾಚಾರದವಿನಿಮಯದೊಂದಿಗೆ ನನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದ ಕಾಲವದು. ಬ್ಯಾಂಕುಗಳಿಗೆ,ರೈಲ್ವೆ ಇಲಾಖೆಗೆ, ಹಾಗೂ ಇತರೆ ಸರ್ಕಾರಿ ಇಲಾಖೆಯಕೆಲಸಗಳಿಗೆ ಅರ್ಜಿ ಹಾಕುವಾಗ ಅಂಚೆ ಪೇದೆಯ ಸಹಾಯ ಹಸ್ತವನ್ನು ಮರೆಯಲಾಗದು. ಅಂತೂ, ನನ್ನ ಭಾಗ್ಯದ ಬಾಗಿಲು ತೆರೆದ ಸಂಧರ್ಭವೇನನಗೆ ಭಾರತೀಯ ಜೀವ ವಿಮಾ ನಿಗಮದಲ್ಲಿ ಸಹಾಯಕಿಯಾಗಿ ಕೆಲಸ ಸಿಕ್ಕ ಆ ಸಂತೋಷದ ಕ್ಷಣ. ಕೆಲಸದ ಆದೇಶ ಪತ್ರ ತಂದು ಕೊಟ್ಟ ಆ ಪೇದೆಗೆ ನಾನು  ಶರಣು. ಬಹುಶಃ ಸಾಸಿವೆಯಷ್ಟು ಪ್ರಾಮಾಣಿಕತೆ ಉಳಿದಿರುವ ಸಂಸ್ಥೆ ಎಂದರೆ ಅಂಚೆಇಲಾಖೆ. ಆಗ ನಮ್ಮ ಎಲ್ಲಾ ವ್ಯವಹಾರಗಳು ನಿರ್ದಿಷ್ಟಸ್ಥಳಕ್ಕೆ, ನಿರ್ದಿಷ್ಟ ಸಮಯಕ್ಕೆ ತಲುಪಲು ಇದ್ದ ಸಂಪರ್ಕ ಸಾಧನವೆಂದರೆ ಅಂಚೆ ಇಲಾಖೆಯೊಂದೇ.

ಈಗಿನ ಹಾಗೆ ತಂತ್ರಜ್ಞಾನದ ಯುಗವಾಗಿರಲಿಲ್ಲ. ಸ್ಥಳೀಯ ದೂರವಾಣಿಗಳು ಇದ್ದರೂ ಅದರ ಉಪಯುಕ್ತತೆ ಸೀಮಿತವಾಗಿತ್ತು ಹಾಗೂ ಅದು ಶ್ರೀಮಂತ ಮನೆತನದ ಸ್ವತ್ತಾಗಿತ್ತು. ಟೆಲಿಗ್ರಾಮ್, trunk call, money order, ಶುಭಾಶಯ ಪತ್ರಗಳು ಮಾತ್ರ ಹೆಚ್ಚು ಬಳಕೆಯಲ್ಲಿದ್ದ ಕಾಲವದು. ಟ್ರಿನ್, ಟ್ರಿನ್ ಶಬ್ಧದೊಂದಿಗೆ ತುಳಿ ಬಂಡಿ ಏರಿ ಮನೆ ಮನೆಗೆ ಬರುತ್ತಿದ್ದ ಅಂಚೆ ಪೇದೆ ಹಗಲು-ರಾತ್ರಿ ಎನ್ನದೆ, ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದ ಕರ್ಮ ಯೋಗಿ. ಅವನ ಸಮಸ್ಯೆಗಳನ್ನು ಆಲಿಸುವಷ್ಟು ವ್ಯವಧಾನವಿರದ ನಾವು ಎಷ್ಟು ಸ್ವಾರ್ಥಿಗಳು ಎಂಬಖೇದತೆ ಈಗ ಕಾಡುತ್ತದೆ. ಸರಕು ರವಾನೆ ಮಾಡುತ್ತಿದ್ದ ಅಂಚೆ ಪೇದೆಗೆ ಯಾವ ಸವಲತ್ತುಗಳು ಇರುತ್ತಿರಲಿಲ್ಲ. ಮಳೆ, ಚಳಿ, ಗಾಳಿ ಎಂತ ವೈಪರೀತ್ಯ ಹವಾಮಾನದಲ್ಲೂ ಅವನ ಸೇವೆ ಲಭ್ಯ.ಅಂಚೆ ಪೇದೆಗೆ ಹೆದರಿರುವ ಸಂಧರ್ಭವೂ ಉಂಟು. ಅವನುಏರುದನಿಯಲ್ಲಿ “ಟೆಲಿಗ್ರಾಮ್ “ಎಂದು ಅಬ್ಬರಿಸಿದಾಗ ಹೃದಯವೇ ಕೈಗೆ ಬಂದಂತಾಗುತ್ತಿತ್ತು. ಅಂಚೆ ಪೇದೆಯೊಡನೆ ಇದ್ದ ಸಂಬಂಧ ಇಂದಿಗೂ ನಮ್ಮಮನಸಿನಲ್ಲಿ ಅಳಿಸಲಾಗದ ಅನುಬಂಧ. ಒಟ್ಟಾರೆ ಅಂಚೆ ಇಲಾಖೆ ಮನುಷ್ಯರ ನಡುವೇ  ಸ್ನೇಹದ ಕೊಂಡಿ ಬೆಸೆಯುವ ಗ್ರಾಹಕ ಸೇವಾ ಸಂಸ್ಥೆಯಾಗಿದ್ದಂತೂ ಖಂಡಿತ.

ಅಂಚೆ ಪೇದೆ ನಮಗೆಲ್ಲಾ ದೈವ ಸ್ವರೂಪಿ ಧೂತ. ಸೋತಾಗ ಆಪತ್ಭಾಂದವನಾಗಿ, ನೋವಿಗೆ ಸಾಂತ್ವಾನದ ಮಡಿಲಾಗಿ, ಸಂತೋಷದ ಘಳಿಗೆಗೆ ಸಾಕ್ಷಿಯಾಗಿ ಭಗವಂತನೇ ಕಳಿಸಿರುವ ಧೂತನೆ ಈ ಅಂಚೆ ಪೇದೆ.ಭಾಂಧವ್ಯ ಬೆಸೆಯುವ ಕೊಂಡಿಯಾಗಿ ನಿಲ್ಲುತ್ತಾನೆಈ ಅತ್ಯದ್ಭುತ ಪಾತ್ರಧಾರಿ. ಸಮಯ ಪರಿಪಾಲನೆ ಹಾಗೂ ಶಿಸ್ತಿನ ಸಿಪಾಯಿ. ನಗರ ಪ್ರದೇಶದಲ್ಲಿ ಓದಿರುವ ನಮಗೆ ಮಾದರಿಯಾಗಿರುವ ಈ ಅಂಚೆ ಪೇದೆ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಸಮುದಾಯದ ಕಣ್ಮಣಿಯಾಗಿದ್ದ. ಪತ್ರವನ್ನು ಓದಿ ವಿಷಯ ಅರ್ಥಪಡಿಸುತ್ತಿದ್ದ ಇವನ ಸೇವಾ ಮನೋಭಾವಕ್ಕೆ ಹಳ್ಳಿಯ ಜನ ತಮ್ಮ ಪಾಲಿನ ದೇವರೆಂದೇ ತಿಳಿದು ರಾಜಮರ್ಯಾದೆ ಮಾಡುತ್ತಿದ್ದ ಕಾಲವದು. ತಮ್ಮ ಮನೆಯಶುಭ ಸಮಾರಂಭಗಳಿಗೆ ಕರೆಯುವ ಸಂಪ್ರದಾಯವು ಇರುತ್ತಿತ್ತು. ಮದುವೆ ಸಂಬಂಧಗಳನ್ನು ಬೆಸೆಯುವಲ್ಲಿ ,ಪ್ರೀತಿ ಮಾಡುವವರಲ್ಲಿ ಕೊಂಡಿಯಂತೆ ಕೆಲಸಮಾಡುವ ಈ ಅಂಚೆ ಪೇದೆ all time favourite ಆಗಿದ್ದ. ಈಗಲೂ ನನ್ನ ಕಚೇರಿಗೆ ಬಂದು ಪತ್ರಗಳನ್ನು ವಿಲೇವಾರಿ ಮಾಡುವ ಅಂಚೆ ಪೇದೆಗೆ ಶುಭೋದಯ ಹೇಳದ ದಿನಗಳಿಲ್ಲ. ಅವನೊಡನೆ ಸಂವಾದ ಅಪ್ಯಾಯಮಾನ.

ಅಂಚೆ ಕಚೇರಿ, ಅಂಚೆಯಣ್ಣ ಎಲ್ಲಾ ಸ್ಮಾರ್ಟ್:
ನವ ಉದಾರೀಕರಣ ನೀತಿಯ ಪ್ರಭಾವ ಇಂದುಅಂಚೆ ಕಚೇರಿಯನ್ನು ಮಾರುಕಟ್ಟೆಯಲ್ಲಿ ಮುಕ್ತಗೊಳಿಸಿ, ವಿವಿಧ ಖಾಸಗಿ ಸಂಸ್ಥೆಗಳೊಡನೆಸ್ಪರ್ಧೆಗೆ ಅನುವು ಮಾಡಿಕೊಟ್ಟಿದೆ. ಇಂದಿನ ಯುವ ಪೀಳಿಗೆಗೆ ಅರ್ಥವಾಗದ ಸತ್ಯವೊಂದಿದೆ ಎಂದಾದರೆ ಈ ಅಂಚೆ ಪೇದೆ ಹಾಗೂ ನಮ್ಮ ಪೀಳಿಗೆಯ ಸಂಬಂಧದ ವಿಚಾರ. ಇದು ವ್ಯಕ್ತಪಡಿಸಲು ಅಸಾಧ್ಯವಾದ ವಿಷಯ. ಅವರ ಮನೋಮಂಡಲಕ್ಕೆ ನಿಲುಕದ ಸೂಕ್ಷ್ಮ ಸಂಗತಿ. ಕಾರಣದೇಶದ ಸರ್ವತೋಮುಖ ಬೆಳವಣಿಗೆಗೆ ಹಾಗೂ ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ಸಂಬಂಧ ಕುದುರಿಸಲು ತಂತ್ರಜ್ಞಾನದ ಅಳವಡಿಕೆ ಅತೀ ಅಗತ್ಯವೆಂಬ ಸಿಂಧುವನ್ನು ನಾವೆಲ್ಲಾ ಜತನ ಮಾಡಿಕೊಳ್ಳಲೇಬೇಕಾದ ಆನಿವಾರ್ಯತೆಯ ಸಂಧರ್ಭದಲ್ಲಿದ್ದೇವೆ. ಹಾಗಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ courier ಸೇವೆಗಳು, ಉದಾಹರಣೆ: Fedex, DHL, professional courier..ಎಲ್ಲವೂ ಡಿಜಿಟಲ್. ಎಲ್ಲಾ ಆಧುನಿಕಸೇವಾ ಸೌಲಭ್ಯಗಳೊಂದಿಗೆ  ನಾ ಮುಂದು-ನೀ ಹಿಂದು ಎಂದು ಅನಾರೋಗ್ಯಕರ ಸ್ಪರ್ಧೆಯಲ್ಲಿ ಗ್ರಾಹಕನ ಅತೃಪ್ತಿಗೆ ಕಾರಣವಾಗಿರುವ ಸಂಧರ್ಭಗಳೂ ಉಂಟು. ಭಾವನೆಗಳು ಶೂನ್ಯವಾಗಿದ್ದು ಕೇವಲ ವ್ಯಾಪಾರ-ಲಾಭದಾಯಕ ಉದ್ದಿಮೆಯಾಗಿ ಮಾರ್ಪಾಟಾಗಿರುವುದು ನಮಗೆ ಗೋಚರ.  ಬದಲಾವಣೆ ಹಾಗೂ ಸವಾಲುಗಳು ಬದುಕಿನ ಅನಿವಾರ್ಯತೆಯಲ್ಲವೇ. ಭರವಸೆಯೇ ಬದುಕಿನ ಮೂಲವೆಂದು ಅರಿತು ಪಯಣಿಸುವ ಪ್ರಯಾಣಿಕರಲ್ಲವೇ ನಾವು-ನೀವೆಲ್ಲಾ.

ಕಾಲಾಯ ತಸ್ಮೈನಮಃ ನಿಮಗೆಲ್ಲಾ ನವರಾತ್ರಿಯ ಶುಭ ಕೋರುತ್ತಾ ನನ್ನನೆನಪಿನ ಡಬ್ಬಿಯನ್ನು ಮುಚ್ಚುತ್ತಿದ್ದೇನೆ. ಹೀಗೆ ಹಲವಾರು ನೆನಪಿನ ರುಚಿ-ರುಚಿಯಾದ ಸ್ವಾದಭರಿತ ತಿನಿಸುಗಳೊಂದಿಗೆ ಮತ್ತೆ ಭೇಟಿಯಾಗೋಣ.

-ಹೆಬ್ಬಾಲೆ ವತ್ಸಲ.

7 Responses

 1. ನಾಗರತ್ನ ಬಿ. ಅರ್. says:

  ನೆನಪಿನ ಡಬ್ಬಿಯಲ್ಲಿ ಅಂಚೆಅಣ್ಣನೊಡನೆ ತಮಗಿದ್ದ ಅವಿನಾಭಾವ ಸಂಬಂಧ.. ಅದಕ್ಕೆ ಕಾರಣಗಳನ್ನು ಕೊಡುತ್ತಾ ಅಧ್ಯಾತ್ಮ ದ ಎಳೆಯನ್ನು ನವಿರಾಗಿ ಪಸರಿಸಿ ರುವ ನಿಮ್ಮ ಲೇಖನ ಮುದಕೊಟ್ಟಿತು.ಧನ್ಯವಾದಗಳು ಮೇಡಂ

 2. ನಯನ ಬಜಕೂಡ್ಲು says:

  ಸೊಗಸಾಗಿದೆ ನೆನಪಿನ ಡಬ್ಬಿ

 3. padmini says:

  ಅಂಚೆ ಪೇದೆ.ಭಾಂಧವ್ಯದ ಕತೆ ಚೆನ್ನಾಗಿದೆ.

 4. ಶಂಕರಿ ಶರ್ಮ says:

  ಹೌದು ಮೇಡಂ… ಅಂಚೆ ಪೇದೆಯೊಂದಿಗೆ ಇದ್ದ ಭಾವನಾತ್ಮಕ ಸಂಬಂಧ ಊಹೆಗೂ ನಿಲುಕದ್ದು. ತಮ್ಮ ನೆನಪಿನ ಡಬ್ಬಿಯಿಂದ ಹೊರಬಂದಂತಹ ಸಿಹಿ ನೆನಪುಗಳು ನಮ್ಮವೂ ಹೌದು!..ಸಕಾಲಿಕ ಲೇಖನ ಬಹಳ ಇಷ್ಟವಾಯ್ತು.

 5. Prakash says:

  ಅಂಚೆ ಅಣ್ಣನ ದಿನಚರಿ, ಅವನ ಮತ್ತು ಗ್ರಾಹಕರ ನಡುವಿನ ಅವಿನಾಭವ ಸಂಬಂದದ ಕುರಿತು ಸೊಗಸಾಗಿ ಬರೆದಿದ್ದೀರಿ.

 6. Padma Anand says:

  ಂಚೆಯಣ್ಣನೊಡನೆಯ ಅವಿನಾಭಾವ ಸಂಬಂಧದ ಆಪ್ತ ಲೇಖನ ನನ್ನ ನೆನಪುಗಳನ್ನೂ ಮೆಲಕು ಹಾಕುವಂತೆ ಮಾಡಿತು. ಚೆಂದದ ಲೇಖನಕ್ಕಾಗಿ ಅಭಿನಂದನೆಗಳು.

 7. Dr Krishnaprabha M says:

  ಅಂಚೆಯಣ್ಣನ ಕುರಿತು ಬರೆದಷ್ಟೂ ಮುಗಿಯದ ನೆನಪುಗಳು ಮನದಂಗಳದಲ್ಲಿ ಪಸರಿಸಿವೆ. ಹೀಗೂ ಇತ್ತೇ ಅಂತ ನಮ್ಮ ಮಕ್ಕಳು ಆಶ್ಚರ್ಯಪಡುವಷ್ಟು

Leave a Reply to Prakash Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: