ದುಡ್ಡು ಹೆಚ್ಚಾದಾಗ ಏನು ಮಾಡೋದು….
ಕರೋನಾ ಕಾಲದ ಲಾಕ್ ಡೌನ್ ನಿಂದಾಗಿ ಕಡ್ಡಾಯವಾಗಿ ಮನೆಯಲ್ಲೇ ಉಳಿಯುವ ಹಾಗಾಗಿ ಹೊತ್ತು ಕಳೆಯುವುದು ತ್ರಾಸದಾಯಕವಾಗಿತ್ತು. ಆದರೂ ಆರೋಗ್ಯ ಚೆನ್ನಾಗಿರಬೇಕು ಅಂದರೆ ಬೇರೆ ದಾರಿಯಿರಲಿಲ್ಲ.ಇದರ ಒಂದೇ ಧನಾತ್ಮಕ ಅಂಶ ಎಂದರೆ ಗಂಡ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿದ್ದು. ದಿನಾ ಎದ್ದು ಕೆಲಸಕ್ಕೆ ಹೋಗುವಾಗ ಮಕ್ಕಳೊಟ್ಟಿಗೆ ಅಷ್ಟು ಮಾತನಾಡಲು ಪುರುಸೊತ್ತೇ ಇರೋಲ್ಲ.ಸಿಗೋ ಒಂದು ಭಾನುವಾರವೂ ಮನೆ ಕ್ಲೀನ್ ಮಾಡೋದ್ರಲ್ಲಿ ಕಳೆದು ಹೋಗುತ್ತಿತ್ತು. ಮಕ್ಕಳು ಕೂಡ ಶಾಲೆ,ಓದು ಅಂತ ತೊಡಗಿಸಿಕೊಂಡು ಏನಾದರೂ ಮಾತನಾಡಿದರೂ ಅದು,ಓದು,ಬರಹ,ಹೋಂವರ್ಕ್ ಇವುಗಳ ಸುತ್ತಲೇ ಸುತ್ತುತ್ತಿತ್ತು.
ಆಗ ಮಕ್ಕಳಿಗೂ ಪಾಠಗಳು ಆನ್ಲೈನ್ ನಲ್ಲಿಯೇ ಆಗುತ್ತಿದ್ದು, ದಿನಾ ಸ್ವಲ್ಪ ಹೊತ್ತಾದರೂ ಹರಟೆ ಹೊಡೆಯಲು ಸಿಗುತ್ತಿದ್ದರು. ಮಕ್ಕಳು ಅದ್ಯಾವಾಗ ಇಷ್ಟು ದೊಡ್ಡವರಾದರು ಅಂತ ಅವರ ಮಾತುಗಳ ಕೇಳುವಾಗೆಲ್ಲ ಅನ್ನಿಸುತ್ತೆ. ನಾನಂತೂ ಟಿವಿ ನೋಡೋದು ಬಿಟ್ಟು ವರ್ಷಗಳೇ ಕಳೆದು ಹೋಗಿವೆ. ಮಕ್ಕಳು ಚಿಕ್ಕವರಿದ್ದಾಗ ಮೂರೋತ್ತು ಕಾರ್ಟೂನ್ ನೋಡಿಕೊಂಡು ಇರುತ್ತಿದ್ದರು. ಅವರು ನೋಡಿಯಾದ ಬಳಿಕ ರಿಮೊಟ್ ಗಂಡನ ಕೈಗೆ ಹೋಗಿ ಅವರು,ಸುದ್ದಿ ವಾಹಿನಿಗಳೆಲ್ಲವನ್ನ ನೋಡಿಯಾದ ಮೇಲೆ ನನ್ನ ಕೈಗೆ ರಿಮೋಟ್ ಬರುವಷ್ಟರಲ್ಲಿ ರಾತ್ರಿ ಹತ್ತೂವರೆಯಾಗಿರುತ್ತಿತ್ತು. ಇನ್ನು ಆ ಸಮಯದಲ್ಲಿ ನಿದ್ದೆ ತೂಗಿಕೊಂಡು ಬಂದು,”ಛೆ, ಹಾಳಾಗ್ ಹೋಗ್ಲಿ ಬಿಡು”ಅಂತ ರೇಗಿ ಹೋಗಿ ,ರಿಮೋಟ್ ಎಸೆದು ಸುಮ್ಮನಾಗುತ್ತಿದ್ದೆ .ಹಾಗಾಗಿ ನಾನು ಟಿವಿ ನೋಡುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಮ್ಮಿ.
ಈಗೆಲ್ಲಾ ನ್ಯೂಸ್,ಮನರಂಜನೆ ಎಲ್ಲವನ್ನೂ ಸ್ಮಾರ್ಟ್ ಫೋನ್ ಗಳು ಬೆರಳ ತುದಿಯಲ್ಲೇ ಒದಗಿಸುವಾಗ ಟಿವಿ ಯಾರಿಗೆ ಬೇಕು ಹೇಳಿ? ನನಗಂತೂ ಟಿವಿಯಲ್ಲಿ ಈಗೀಗ ವಾಹಿನಿಗಳ ಬದಲಾಯಿಸುವುದು ಕೂಡ ಗೊತ್ತಿಲ್ಲ. ನನ್ನ ಮಕ್ಕಳು ನೋಡೋ ವಾಹಿನಿಗಳು ಕೂಡ ಈಗಲೇ ನನಗೆ ಗೊತ್ತಾಗಿದ್ದು. ಎಲ್ಲಾ ಇಂಗ್ಲಿಷ್ ವಾಹಿನಿಗಳೇ. ಆ ಕಾರ್ಯಕ್ರಮಗಳ ತಲೆಬುಡವೂ ನನಗೆ ಅರ್ಥವಾಗೋಲ್ಲ. ಇನ್ನು ಆ ಉಚ್ಚಾರಣೆ ಅರ್ಥ ಮಾಡಿಕೊಂಡು ಯಾವುದಾದ್ರೂ ಧಾರಾವಾಹಿ ನೋಡ್ಬೇಕು ಅಂದ್ರೆ ಮಗ ಇಲ್ಲ ಮಗಳು ದುಭಾಷಿಯಂತೆ ಕೆಲಸ ಮಾಡಬೇಕು. ಕನ್ನಡ ವಾಹಿನಿಗಳ ನೋಡುವ ಎಂದರೆ ನನ್ನ ಗಂಡ ಕೇವಲ ಸುದ್ದಿ ವಾಹಿನಿಗಳನ್ನು ಮಾತ್ರ ಕನ್ನಡದವುಗಳನ್ನು ಹಾಕಿಸಿದ್ದಾರೆ. ಸುದ್ದಿಯನ್ನು ಅತಿರಂಜಿತವಾಗಿ ಮಾಡಿ,ನಕಾರಾತ್ಮಕ ಅಂಶಗಳನ್ನೇ ವೈಭವೀಕರಿಸಿ ತೋರಿಸುವ ಅವುಗಳಲ್ಲಿ ಯಾವುದಾದರೂ ಒಂದನ್ನು ಈ ಕಾಲದಲ್ಲಿ ಒಂದು ವಾರ ಬಿಡದೆ ನೋಡಿದರೆ ಸಾಕು , ಬದುಕುವ ಆಸೆಯೇ ಹೊರಟು ಹೋಗಿ ಬಿಡುತ್ತದೆ. ಹತ್ತಾರು ವರ್ಷಗಳ ಅಂತರದಲ್ಲಿ ಟಿವಿ ಹೀಗೆ ಬದಲಾಗಿರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಆದ್ರೂ ಹೊತ್ತು ಕಳೆಯಬೇಕಲ್ಲ ಹಾಗಾಗಿ ಎಲ್ಲರೂ ಏನು ನೋಡುತ್ತಾರೋ ಅದನ್ನೇ ಒಂದತ್ತು ನಿಮಿಷ ನಾನೂ ನೋಡುತ್ತೇನೆ.
ಹೀಗೆ ಒಂದು ದಿನ ಯಾವುದೋ ಒಂದು ಸುದ್ದಿವಾಹಿನಿಯನ್ನು ಎಲ್ಲರೂ ಒಟ್ಟಿಗೆ ಕೂತು ನೋಡುವಾಗ ಬಿಲ್ ಗೇಟ್ಸ್ ಅವನ ಹೆಂಡತಿ ಮೆಲಿಂಡಾ ಗೇಟ್ಸ್ ಡೈವೋರ್ಸ್ ತೆಗೆದುಕೊಂಡ ಸುದ್ದಿ ಬರುತ್ತಿತ್ತು. ನನ್ನ ಮಗ ಇದ್ದಕ್ಕಿದ್ದಂತೆ,”ಅಮ್ಮ ಬಿಲ್ ಗೇಟ್ಸ್ ಅವನ ಹೆಂಡತಿಗೆ ಪರಿಹಾರವಾಗಿ ಎಷ್ಟು ದುಡ್ಡು ಕೊಡಬಹುದು”ಎಂದ. ಅರೆ! ನನಗೇನು ಗೊತ್ತಿರಲು ಸಾಧ್ಯ?ನನಗೆ ನಗು ಬಂದು,”ಮಗನೇ,ಅದನ್ನು ಲೆಕ್ಕ ಹಾಕುವಷ್ಟು ಗಣಿತ ನನಗೆ ಗೊತ್ತಿಲ್ಲ ಕಣೋ”ಎಂದು ನಕ್ಕೆ. ನನ್ನ ಮಗಳಿಗೆ ಅದಕ್ಕಿಂತಲೂ ಇನ್ನೂ ದೊಡ್ಡ ಒಂದು ಅನುಮಾನ ಕಾಡಿ ಅಣ್ಣನನ್ನು ಕೇಳಿದಳು “ಲೋ,ಅವನು ಅಷ್ಟೊಂದು ದುಡ್ಡು ಹೇಗೆ ಮಾಡಿರ್ಬಹುದೋ” ಅಂದಿದ್ದಕ್ಕೆ ಕಕ್ಕಾಬಿಕ್ಕಿಯಾಗುವ ಸರದಿ ನನ್ನ ಮಗನದ್ದು. ಅವನು ಪ್ರಶ್ನೆಯನ್ನು ಅಪ್ಪನಿಗೆ ವರ್ಗಾಯಿಸಿದ. ನನ್ನ ಗಂಡ ನಗುತ್ತಾ, “ಅದು ಗೊತ್ತಿದ್ದಿದ್ದರೆ, ನಾನೂ ಅಷ್ಟು ದುಡ್ಡು ಮಾಡ್ತಾ ಇರ್ಲಿಲ್ವಾ. ಗೊತ್ತಿಲ್ಲ .”ಅಂದ್ರು.
ನನ್ನ ಮಗ ಈಗ ಬಿಲ್ ಗೇಟ್ಸ್ ನ ಪ್ರವರವನ್ನೆಲ್ಲ ಗಳಹಲಾರಂಭಿಸಿದ.ಅವನಷ್ಟೇ ಅಲ್ಲ,ಪ್ರಪಂಚದಲ್ಲಿ ಇರೋ ಬರೋ ಶ್ರೀಮಂತರೆಲ್ಲರ ಕಥೆಗಳು, ಅವರ ಜೀವನ ಶೈಲಿ ಎಲ್ಲಾ ಸೇರಿಸಿ ಸೇರಿಸಿ ಕೊರೆದ.
ನಾನು ನನ್ನ ಗಂಡ ಇಬ್ಬರೂ ಮಧ್ಯಮವರ್ಗದ ಕುಟುಂಬಗಳಲ್ಲಿ ಹುಟ್ಟಿ ಬೆಳೆದವರು. ಹಾಸಿಗೆ ಇರೋಷ್ಟು ಕಾಲು ಚಾಚಬೇಕು ಅನ್ನೋದು ಪಾಲಿಸಿಕೊಂಡು ಬಂದಂತಹ ತಂದೆ ತಾಯಂದಿರ ಮಕ್ಕಳು.ಅವರಂತೂ ದೈನಂದಿನ ಜೀವನಾವಶ್ಯಕತೆಗಳ ಹೊರತು ದುರ್ವ್ಯಯ ಮಾಡಿದವರೇ ಅಲ್ಲ. ನಮ್ಮ ಕೆಲಸಗಳೂ ಕೂಡಾ ಅಂತಾ ದೊಡ್ಡ ಮೊತ್ತದ ಸಂಬಳ ತರುವಂತಹವುಗಳಲ್ಲದಿದ್ದರೂ,ಇಬ್ಬರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಒಂದು ಸ್ವಂತದ ಮನೆ ಕಟ್ಟಿಕೊಂಡು, ಸಂತೃಪ್ತ ಜೀವನ ನಡೆಸಲು ಏನೂ ಕೊರತೆಯಿಲ್ಲ. ಜೊತೆಗೆ ಬರುವ ವರಮಾನದಲ್ಲೆ ಭವಿಷ್ಯದಲ್ಲಿ ಮಕ್ಕಳ ಉನ್ನತ ವಿದ್ಯಾಭ್ಯಾಸ, ಮದುವೆ ಇತ್ಯಾದಿಗಳಿಗೆ ಉಳಿಸಬೇಕಾದ ಜವಾಬ್ದಾರಿಯೂ ಇದೆ. ತುಂಬಾ ದುಡ್ಡು ಮಾಡಬೇಕು ,ಐಷಾರಾಮಿ ಜೀವನ ನಡೆಸಬೇಕು ಅಂತ ಯಾವತ್ತೂ ಅನ್ನಿಸಿಲ್ಲ. ನಮ್ಮ ನಮ್ಮ ಸಾಮರ್ಥ್ಯ, ಕೌಶಲಗಳು, ನಮ್ಮ ಮನೋಭಾವ, ನಂಬಿಕೆಗಳು, ಹಿರಿಯರು ಕಲಿಸಿರುವ ಸರಳ ಜೀವನದ ಮೌಲ್ಯಗಳ ಮೀರಿ ಬದುಕುವ ಆಸೆಯೂ ಇಲ್ಲ.
ಆದರೆ ಮಕ್ಕಳಿಗೆ ಶ್ರೀಮಂತ ಜನರ ಜೀವನ ಶೈಲಿ ಯಾವಾಗಲೂ ಬೆರಗು ಮೂಡಿಸುತ್ತದೆ. ಅವರಿಗೆ ಯಾವಾಗಲೂ ಕಾಡುವ ಒಂದು ಪ್ರಶ್ನೆ,”ಅಷ್ಟೊಂದು ದುಡ್ಡು ಏನ್ಮಾಡ್ತಾರೆ,“ಅಂತ.
ಹಾಗೆ ಆ ದಿನವೂ ನನ್ನ ಮಗ ತನ್ನ ಕೊರೆತವನ್ನೆಲ್ಲ ನಿಲ್ಲಿಸಿದ ಮೇಲೆ ಅವರಪ್ಪನನ್ನು ಕೇಳಿದ,”ಅಪ್ಪಾ,ನಿನ್ನ ಹತ್ರ ಇದ್ದಕ್ಕಿದ್ದಂತೆ ತುಂಬಾ ದುಡ್ಡು ಬಂದ್ರೆ ಏನ್ ಮಾಡ್ತೀಯ”. ನನ್ನ ಗಂಡ ಒಂದರೆಕ್ಷಣ ಸುಮ್ಮನಿದ್ದು,”ಈಗೊಂದು ಮನೆ ಇದೆ ಆಮೇಲೆ ಇದೇ ತರಹದ್ದು ಇನ್ನೊಂದು ಕಟ್ಟಿದರೆ ನಿಮ್ಮಿಬ್ಬರಿಗೂ ಒಂದೊಂದು ಮನೆಯಾಗುತ್ತೆ ಅಲ್ವಾ”,ಅಂದರು.
ನನ್ನ ಮಗ ಬಿದ್ದೂ ಬಿದ್ದೂ ನಗುತ್ತಾ “ಅಯ್ಯೋ ಅಪ್ಪ,ಬಾಯಿ ಮಾತಿಗಾದ್ರು,ನೂರಾರು ಎಕರೆ ಕಾಫಿ ತೋಟ ಮಾಡ್ತೀನಿ, ಒಂದು ಜೆಟ್ ವಿಮಾನ ತೊಗೊಳ್ತಿನಿ, ಏನಾದ್ರೂ ಹೇಳಬಹುದಲ್ಲ, ನೀನು ಬಿಡು ಕನಸಲ್ಲೂ ಜಾಸ್ತಿ ದುಡ್ಡು ನೋಡಲ್ಲ”ಎಂದು ಅಣಕಿಸಿದ.
ನನ್ನ ಗಂಡ ನಗುತ್ತಾ,”ತಲೆಹರಟೆ ಸಾಕು, ಎದ್ದು ಹೋಗಿ ಓದ್ಕೊ, ಇಲ್ಲದೇ ಹೋದರೆ, ನಿಜವಾಗಿಯೂ ಸಿಗೋದು ಇರಲಿ, ಕನಸಲ್ಲೂ ನಿನಗೆ ಕೆಲಸ ಸಿಗೊಲ್ಲ,”ಎಂದು ಎಚ್ಚರಿಸಿ ಹೋದರು.
ಇನ್ನು ಮಕ್ಕಳಿಬ್ಬರ ಗಮನ ನನ್ನ ಕಡೆಗೆ ತಿರುಗಿತು. “ಅಮ್ಮ ನೀನು ಅಕಸ್ಮಾತ್ ಬಿಲ್ ಗೇಟ್ಸ್ ಅಷ್ಟು ದುಡ್ಡು ಮಾಡಿದ್ದಿದ್ದರೆ ಏನ್ ಮಾಡ್ತಾ ಇದ್ದೆ”ಎಂದರು.
ನಾನು ನನ್ನ ಜೀವನದಲ್ಲಿ ಮಾಡಿರುವ ದುಬಾರಿ ಖರ್ಚು ಅಂದರೆ ನನ್ನ ಸೀರೆಗಳ ಮೇಲೆ ಮಾಡಿರುವುದು. ಸರಿ ತೊಗೊ ನನ್ನ ಬುರುಡೆಗೆ ತಕ್ಷಣ ಹೊಳೆದ “ಹಾಗೇನಾದ್ರೂ ಆಗಿದ್ದಿದ್ರೆ ನಾನು ದಿನ ಮೈಸೂರ್ ಸಿಲ್ಕ್ ಸೀರೆ ಉಟ್ಟುಕೊಂಡು ಶಾಲೆಗೆ ಹೋಗ್ತಿದ್ದೆ.”ಎಂದೆ. ಕೇಳಿದ ಮಕ್ಕಳಿಬ್ಬರೂ ಹೊಟ್ಟೆ ಹಿಡಿದುಕೊಂಡು ನಗುತ್ತಾ,”ಅಯ್ಯೋ ನಮ್ಮ ಮಿಡಲ್ ಕ್ಲಾಸ್ ಮಮ್ಮಿ,ಅಷ್ಟೊಂದು ದುಡ್ಡು ಇದ್ದಿದ್ರೇ ನೀನ್ಯಾಕೆ ಸ್ಕೂಲ್ ಟೀಚರ್ ಕೆಲ್ಸ ಮಾಡ್ತಿದ್ದೆ ಹೇಳು, ಯಾವುದಾದರೂ ಕಂಪನಿ ಸಿ ಇಓ ಆಗಿರುತ್ತಿದ್ದೆ ಅಲ್ವಾ” ಎಂದು ಅಣಕಿಸಿದರು.
ನನಗೂ ನಗು ಬಂದು ಪೆಚ್ಚು ನಗೆ ನಕ್ಕು ಸುಮ್ಮನಾದೆ. ತಮಾಷೆ ಏನೇ ಇರಲಿ ಈ ದುಡ್ಡು ಅನ್ನೋದು ನನ್ನ ಮಟ್ಟಿಗೆ ಹೆಚ್ಚಾದರೂ ಕಷ್ಟ,ಕಡಿಮೆಯಾದರೆ ಇನ್ನೂ ಕಷ್ಟ. ಹೆಚ್ಚಾದರೆ ಹೇಗೆ ಖರ್ಚು ಮಾಡೋದು ಅನ್ನೋದು ಹೊಳೆಯೊಲ್ಲ, ಕಡಿಮೆಯಾದರೆ ಖರ್ಚು ಹೇಗೆ ಕಮ್ಮಿ ಮಾಡೋದು ಅನ್ನೋದು ತಿಳಿಯಲ್ಲ. ಯಾರೋ ಮಹಾನುಭಾವರು ಹೇಳಿರುವ ಹಾಗೆ, ದುಡ್ಡು ಅನ್ನೋದು ಊಟಕ್ಕೆ ಉಪ್ಪಿರುವಷ್ಟು ಇದ್ದರೆ ಸರಿ. ಉಪ್ಪು ಕಡಿಮೆಯಾದರೆ ಊಟ ರುಚಿಸೋಲ್ಲ, ಹೆಚ್ಚಾದರೆ ದಾಹ ತೀರೊಲ್ಲ.
ಆದ್ರೆ ಈ ಕಾಲದಲ್ಲಿ ಮನುಷ್ಯರನ್ನು ಅಳತೆಮಾಡುವ ಅಳತೆಗೋಲು ದುಡ್ಡೇ ಆಗಿ ಬಿಟ್ಟಿದೆ. ಯಶಸ್ಸು, ಹಣ ,ಅಧಿಕಾರ ಹೆದರಿಸುವಷ್ಟು ಬೇರೇನೂ ಭೀತಿ ತಾರದಾಗಿದೆ. ಎಲ್ಲರ ಬದುಕಿನ ಮೂಲ ಮಂತ್ರ ಹೆಚ್ಚು,ಹೆಚ್ಚು ಹಣ ಮಾಡುವುದು.ಅದಕ್ಕಾಗಿ ಯಾವುದೇ ವಾಮಮಾರ್ಗದಲ್ಲಿ ಸಾಗಲೂ ಕೆಲವರು ಸಿದ್ಧ. ನೀತಿ ನಿಯಮ ನೈತಿಕತೆ ಎಲ್ಲವನ್ನೂ ಗಾಳಿಯಲ್ಲಿ ತೂರಿ ದುಡ್ಡು ಮಾಡುವ ಏಕೈಕ ಉದ್ದೇಶವೇ ಹಲವರದು.ಸುತ್ತ ಮುತ್ತಲಿನ ಕೆಲವು ಉದಾಹರಣೆಗಳ ನೋಡಿದಾಗ ವಿಷಾದವಾಗುತ್ತದೆ. ಇರಲು ಒಂದು ಮನೆ, ಉಂಡು ಉಡಲು ಸಾಕಾಗುವಷ್ಟು ಹಣ ಇದ್ದರೆ ಸಾಲದೆ. ಒಂದು ಮನೆ ಸಾಲದು ಅಂತ ಮತ್ತೊಂದು ಮಗದೊಂದು ಮನೆಗಳು, ಸೈಟ್ ಗಳ ಮೇಲೆ ಸೈಟ್ ಗಳ ಕೊಂಡು ಗುಡ್ಡೆ ಹಾಕಿಕೊಳ್ತಾರೆ. ಚಿನ್ನವಂತು ಕಿಲೋಗಟ್ಟಲೆ.ಬೇನಾಮಿ ಆಸ್ತಿಗಳಿಗಂತು ಲೆಕ್ಕವಿಲ್ಲ. ಮೊನ್ನೆ ಯಾರೋ ಸಿನೆಮಾ ತಾರೆಯ ಆಸ್ತಿ ವಿವರ ನೋಡಿ ದಂಗಾಗಿ ಹೋದೆ. ಬರಿ ಭಾರತದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಕೂಡ ದೊಡ್ಡ ದೊಡ್ಡ ಬಂಗಲೆಗಳು. ವಿಲಾಸಿ, ಐಷಾರಾಮಿ ಕಾರುಗಳು,ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿ ಇತ್ಯಾದಿ .ಅದೆಲ್ಲವನ್ನೂ ಏಕ ಕಾಲದಲ್ಲಿ ಏನೂ ಬಳಸೊಲ್ಲವಷ್ಟೆ. ತಲೆ ಮೇಲೊಂದು ಸೂರು, ತಿನ್ನಲು ಹಿಡಿ ಅನ್ನ ಸಾಲದೇ ಅಂತ ನನಗಂತೂ ಯಾವಾಗಲೂ ಅನ್ನಿಸುತ್ತೆ. ಟಾಲ್ಸ್ಟಾಯ್ ಅವರ “ಮನುಷ್ಯನಿಗೆ ಎಷ್ಟು ಭೂಮಿ ಬೇಕು” ಕಥೆ ನೆನಪಾಗುತ್ತದೆ.
ನಮ್ಮ ಸುತ್ತ ಮುತ್ತ ನೋಡಿದರೆ ಸಾಕು, ದುಡ್ಡು ಹೆಚ್ಚಿರೋರು, ಕಡಿಮೆ ಇರೋರ ನಡುವಿನ ಕಂದಕ ದಿನದಿಂದ ದಿನಕ್ಕೆ ಅಗಲವಾಗುತ್ತಲೆ ಇದೆ. ಬಂಧು ಬಳಗದವರಲ್ಲೇ ಅಸಮಾನ ಆರ್ಥಿಕ ಸ್ಥಿತಿ ಬೇರೆ ಬೇರೆ ಗುಂಪುಗಳ ಸೃಷ್ಟಿ ಮಾಡಿಬಿಟ್ಟಿದೆ. ಅಕ್ಕ ಕೋಟ್ಯಾಧಿಪತಿಯಾಗಿದ್ದರೆ ತಂಗಿ ಕೆಳಮಧ್ಯಮ ವರ್ಗದವಳಾಗಿರಬಹುದು. ಅಣ್ಣನಿಗೆ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕು ವಿದೇಶದಲ್ಲಿ ಡಾಲರ್ ಗಳಲ್ಲಿ ಕಮಾಯಿಸುತ್ತಿದ್ದರೆ ತಮ್ಮ ಟ್ಯಾಕ್ಸಿ ಓಡಿಸುತ್ತಾ ದಿನ ನಿತ್ಯದ ಖರ್ಚಿಗೆ ಹೈರಾಣಾಗಿ ಹೋಗುತ್ತಿರಬಹುದು. ಯಾವುದಾದರೂ ಮದುವೆ ಸಮಾರಂಭಕ್ಕೆ ಹೋದರಂತೂ ಈ ಅಂತರ ಢಾಳಾಗಿ ಎದ್ದು ಕಣ್ಣಿಗೆ ರಾಚುತ್ತದೆ. ಬೆಲೆಬಾಳುವ ವಿಧವಿಧದ ರೇಷ್ಮೆ ಸೀರೆಯುಟ್ಟು, ತಲೆಗೆ ಕಿರೀಟವೊಂದನ್ನು ಬಿಟ್ಟು ಇನ್ನೆಲ್ಲಾ ರೀತಿಯ ಬಂಗಾರದೊಡವೆಗಳ ಹೇರಿಕೊಂಡು ಊಟ ಮಾಡುತ್ತಿರುವ ಹೆಂಗಸರ ಎಲೆ ತೆಗೆಯಲು ಬರುವ ಹರಕು ಸೀರೆಯ, ಕೊರಳಿಗೊಂದು ಕರಿದಾರದ ಹೆಂಗಸರ ಕಂಡಾಗ ನಮ್ಮ ಸಮಾಜ ಎಲ್ಲಿಂದ ಎಲ್ಲಿಗೆ ತಲುಪಿದೆ ಅನ್ನಿಸುತ್ತದೆ.
ನನ್ನ ಪರಿಚಯದ ಶಿಕ್ಷಕ ದಂಪತಿಯೋರ್ವರ ಮಗ ಓದುವುದರಲ್ಲಿ ತುಂಬಾ ಜಾಣ, ಇಂಜಿನಿಯರಿಂಗ್ ಮುಗಿಸಿ ಒಳ್ಳೆ ಕಂಪನಿಯೊಂದರಲ್ಲಿ ಕೆಲಸ ಹಿಡಿದ. ಶಿಕ್ಷಕರಾಗಿರುವ ಅವರಪ್ಪನಿಗೆ ವರ್ಷಕ್ಕೆ ಬರುತ್ತಿರುವಷ್ಟು ಸಂಬಳ ಆತನಿಗೆ ಒಂದು ತಿಂಗಳಿಗೇ ಸಿಗುತ್ತದೆ. ಅವರ ಮನೆಗೆ ಹೋದಾಗ ಅವನ ತಂದೆ ಮಾತನಾಡುತ್ತಾ ,”ಅಲ್ಲ ಮೇಡಂ,ಇಷ್ಟೊಂದು ಸಂಬಳ ಅದು ಹೇಗೆ ಮತ್ತೆ ಯಾಕೆ ಕೊಡ್ತಾರೆ, ನನಗಂತೂ ಅರ್ಥವಾಗೊಲ್ಲ, ನಾನು ಈ ಸಂಬಳ ಕಾಣೋಕೆ ಇಪ್ಪತ್ತೈದು ವರ್ಷ ಕತ್ತೆ ಥರ ದುಡಿಬೇಕಾಯ್ತು. ಇವನಿಗೆ ನೋಡಿ ಒಂದು ತಿಂಗಳಿಗೇ ನನ್ನ ಒಂದು ವರ್ಷದಷ್ಟು ಸಂಬಳ ಸಿಗುತ್ತೆ. ಈ ಅರ್ಥ ವ್ಯವಸ್ಥೆ ವ್ಯವಹಾರ ನನಗಂತೂ ಅರ್ಥ ಆಗೋಲ್ಲ. ಇಷ್ಟು ದಿನ ಹೇಗೋ ಇರುವುದರಲ್ಲಿ ತೃಪ್ತಿಯಾಗುವಂತೆ ಜೀವನ ನಡೆಸಿದ್ದೇವೆ. ಈಗ ಏಕಾಏಕಿ ಇಷ್ಟೊಂದು ದುಡ್ಡು ಏನ್ ಮಾಡೋದು ಅನ್ನೋದೇ ಗೊತ್ತಾಗುತ್ತಿಲ್ಲ. ಗುರುತು ಪರಿಚಯವಿರದಿದ್ದರೂ ಎಂಥೆಂಥದೋ ಕಡೆಯಿಂದ ನನ್ನ ಮಗನಿಗೆ ಮದುವೆಗೆ ಆಫರ್ ಗಳು ಬರ್ತಾ ಇವೆ.ನನಗಂತೂ ಲೋಕ ಏನಾಗುತ್ತಿದೆ ಅನ್ನಿಸುತ್ತಿದೆ,”ಎಂದು ವಿಷಾದದಿಂದ ನುಡಿದರು.
“ಅಷ್ಟೊಂದು ದುಡ್ಡು ಏನ್ ಮಾಡೋದು” ಅನ್ನುವುದು ನಮ್ಮಂಥ ಮಧ್ಯಮ ವರ್ಗದವರ ಪ್ರಶ್ನೆ ಮಾತ್ರ. ದುಡ್ಡು ಹೇಗೆ ಖರ್ಚು ಮಾಡೋದು ಅನ್ನೋದನ್ನ ಕೆಲವರ
ನೋಡಿ ಕಲೀಬೇಕು. ಯಾರೋ ಒಬ್ಬಳು ತನ್ನ ನಾಯಿಯೊಂದಿಗೆ ಪ್ರಯಾಣ ಮಾಡುವುದಕ್ಕಾಗಿ ಒಂದು ವಿಮಾನದ ಇಡೀ ಬ್ಯುಸಿನೆಸ್ ಕ್ಲಾಸ್ ನ್ನ ಬುಕ್ ಮಾಡಿಕೊಂಡು ಹೋದಳಂತೆ. ತಮ್ಮ ಮಕ್ಕಳ ಮದುವೆಗೆ ನೂರಾರು ಕೋಟಿ ಖರ್ಚು ಮಾಡುವ ಸೂಪರ್ ರಿಚ್ ಗಳ ಬಗ್ಗೆ ಮೀಡಿಯಾಗಳೂ ವಾರಗಟ್ಟಲೆ ವರದಿ ಮಾಡುತ್ತವೆ. ಆ ಮದುವೆಗಳ ವೈಭವ ಸಾರಲು ಒಂದು ಕಾದಂಬರಿಯನ್ನೇ ಬರೆದು ಬಿಡಬಹುದು ಬಿಡಿ. ಬಟ್ಟೆಗಳಿಗೆಲ್ಲ ಚಿನ್ನದ ನೂಲುಗಳೇ, ವಡವೆಗಳೆಲ್ಲ ವಜ್ರವೇ, ಊಟೋಪಚಾರಗಳೆಲ್ಲ ಬೆಳ್ಳಿಯ ತಟ್ಟೆ ಲೋಟಗಳಲ್ಲೇ. ಇಷ್ಟೊಂದು ಅಶ್ಲೀಲವಾಗಿ ಶ್ರೀಮಂತಿಕೆಯ ಪ್ರದರ್ಶನ ಹಿಂದೆಂದೂ ಇರಲಿಲ್ಲವೇನೋ. ಎಳೆ ಚಿನ್ನದ್ದಾಗಲಿ, ಹತ್ತಿಯದ್ದಾಗಲಿ ಮುಚ್ಚುವ ಮೈ ಮಾತ್ರ ಎಲ್ಲರದೂ ಒಂದೇ. ತಟ್ಟೆ ಬೆಳ್ಳಿಯದ್ದಾಗಲಿ ಮುತ್ತುಗದ ಎಲೆಯದ್ದಾಗಿರಲಿ ತಿನ್ನುವ ಅನ್ನ ಮಾತ್ರ ಅದೇ.
ಬೇಸರವೆಂದರೆ ಈ ಅದ್ಧೂರಿ ಮದುವೆಗಳ ಅನುಸರಿಸುವುದು ಮಧ್ಯಮ ವರ್ಗದವರಲ್ಲಿ ಕೂಡ ಹರಡಿ ಹೋಗಿದೆ. ಮುಂಚೆ ಚಪ್ಪರ, ಧಾರೆ, ಕರೆನೆರೆಗಳಲ್ಲಿ ಮುಗಿದು ಹೋಗುತ್ತಿದ್ದ ಮದುವೆಗಳು ಈಗ ಪ್ರಿವೆಡ್ಡಿಂಗ್ ಫೋಟೋ ಶೂಟ್, ಬ್ಯಾಚುಲರ್ ಪಾರ್ಟಿ, ಹಲ್ದಿ, ಸಂಗೀತ್, ಚಪ್ಪರ, ಮದುವೆ,ರಿಸೆಪ್ಶನ್,ಭರ್ಜರಿ ಬೀಗರೂಟ, ಹನಿಮೂನ್, ಅಂತ ಖರ್ಚು ಹೇಗೆ ಹೆಚ್ಚಿಸೋದು ಅನ್ನೋದನ್ನ ತಿಳಿಸಿ ಕೊಡುತ್ತಿವೆ. ಆ ಮದುವೆಗಳಲ್ಲಿ,ಬಟ್ಟೆಬರೆ, ವಡವೆ ವಸ್ತ್ರ, ಊಟತಿಂಡಿ, ಮದುವೆ ಮನೆ ಮತ್ತು ಛತ್ರಗಳ ಅಲಂಕಾರ, ಅತಿಥಿ ಸತ್ಕಾರ ,ಇತ್ಯಾದಿ ಇತ್ಯಾದಿಗಳಿಗೆ ಮಾಡುವ ಖರ್ಚುಗಳಲ್ಲಿ ಒಂದು ಊರು ಉದ್ಧಾರ ಮಾಡಬಹುದು ಬಿಡಿ.
ನಮ್ಮ ಭಾರತೀಯ ಸಮಾಜದ ಮೂಲ ಮಂತ್ರವಾಗಿದ್ದ ಸರಳ ಜೀವನದ ಸೂತ್ರ ಎಲ್ಲಿ ಕಾಣೆಯಾಯಿತು ಎಂದು ವಿಷಾದವಾಗುತ್ತದೆ.
-ಸಮತಾ.ಆರ್
Super
Nice
ತುಂಬಾ ಚೆನ್ನಾಗಿ ಮೂಡಿ ಬಂದಿದೆ
Nice Samatha
ವಾವ್ ಅಷ್ಟೊಂದು ದುಡ್ಡು ಬಂದ್ರೆ ಏನು ಮಾಡೋದು..
ಈ ಪ್ರಶ್ನೆ ಚಿಕ್ಕಂದಿನಲ್ಲಿ ಕಾಡಿದರೂ… ಮುಂದೆ ಹೇಗೆ ಮಾಡುತ್ತಾರೆ…ಈಗ ಬೇಡ. ಕಾಪಾಡೋಕೆ ಬರಲ್ಲ ನೆಮ್ಮದಿ ಹಾಳಾಗುತ್ತದೆ. ಆರೋಗ್ಯ ಸಾಕು. ಅದೇ ನೆಮ್ಮದಿಯ ತಳಹದಿ ಎನ್ನುವಂತಾಗಿದೆ… ಒಳ್ಳೆಯ ವಿಚಾರ ಮಂಥನ ಉತ್ತಮ ಲೇಖನ ಧನ್ಯವಾದಗಳು ಮೇಡಂ
ದುಡ್ಡು.ಅಗತ್ಯವಿರುವಷ್ಟು ಬೇಕು ನಿಜ,ಜಾಸ್ತಿಯಾದರೆ ಅಮೃತವೂ ವಿಷವೇ. ಎನ್ನುವ ವಿಷಯ ಚೆನ್ನಾಗಿ ಮೂಡಿಬಂದಿದೆ
Super mada.
Super madam
reality. very disgusting nature of people.
Very nice
Super
ದುಡ್ಡು ಬಂದಿದ್ದರೆ ಏನ್ಮಾಡುತ್ತಾರೆ
ಸಣ್ಣ ತಲೆ ನೋವು ಬಂದರೆ, 1 ರೂಪಾಯಿಯ ಗುಳುಗೆ/ ಮಾತ್ರೆ ತಗೋಳೋದು ಬಿಟ್ಟು CT scan ಮಾಡಿಸುತ್ತಾರೆ.
ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಚೆನ್ನಾಗಿದೆ.
ಚಿಂತನಾರ್ಹ ಬರೆಹ ಸಮತಾ
ಉತ್ತರಕ್ಕಾಗಿ ಬಹಳ ಯೋಚಿಸಬೇಕಾದಂತಹ ಪ್ರಶ್ನೆ…ನಮ್ಮಂತಹವರಿಗೆ! ಸಮಾಜದ ಕೊಂಕುಗಳನ್ನು ಯಥಾವತ್ತಾಗಿ ಬಿಂಬಿಸಿದ ಲೇಖನ ಬಹಳ ಆತ್ಮೀಯವೆನಿಸಿತು.
ಕೆಳ ಮಧ್ಯಮ ವರ್ಗದ ವಿಚಾರಗಳ ಮಂಥನ ನೈಜವಾಗಿ
ಮೂಡಿದೆ. ಹೌದು, ಅವಶ್ಯಕತೆಗೂ ಮೀರಿದ ಹಣ ವರ್ಜ್ಯವೇ ಹೊರತು ಊರ್ಜ್ಯವಲ್ಲವೆಂಬ ನಿಜ ಸತ್ಯ
ಎಲ್ಲರಿಗೂ ವೇದ್ಯವಾದರೆ ಒಳಿತು.
ಬದಲಾದ ಕಾಲಘಟ್ಟದ ವಿವಿಧ ಮಜಲುಗಳ ಸುಂದರ, ವಿಸ್ಮಯ ಹಾಗೂ ವಿಷಾದಪೂರಿತ ಚಿತ್ರಣ ಲೇಖನದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಆಹಾ,,,… ಎಷ್ಟು ಚೆನ್ನಾಗಿ ಬರೆದಿರುವಿರಿ. ಚಿಂತನೆಗೆ ಹಚ್ಚುವ ಹಾಸ್ಯಮಿಶ್ರಿತ ಲೇಖನ
Exactly madam…well narrated..