ಹೂಗಿಡವೇ ಕಾರಣವಾಯ್ತು ಈ ಲೇಖನಕೆ!

Share Button

ಮನೆಯಂಗಳದಲ್ಲೊಂದು ಪುಟ್ಟ ಗಿಡ ಮೊಳಕೆಯೊಡೆದಿತ್ತು. ದಿನಗಳುರುಳಿದಂತೆ   ಗಿಡ ಹುಲುಸಾಗಿ ಬೆಳೆದು ಮೊಗ್ಗುಗಳನ್ನು ಬಿಟ್ಟಿತು. ಕೆಲದಿನಗಳಲ್ಲೇ ಗಿಡದೊಡಲು ಗಾಢ ಕೆಂಪು ಬಣ್ಣದ ಹೂಗಳಿಂದ ತುಂಬಿತ್ತು. ಹೂಗಳಿಗೆ ಹೇಳಿಕೊಳ್ಳುವಂತಹ ವಿಶೇಷ ಪರಿಮಳವಿಲ್ಲ. ಆದರೆ ಮನಮೋಹಕ ಬಣ್ಣದಿಂದಲೇ ನೋಡುಗರನ್ನು ತನ್ನೆಡೆಗೆ ಆಕರ್ಷಿಸುವ ವಿಶೇಷ ಶಕ್ತಿ. ದಿನಗಳು ಕಳೆದಂತೆ, ಅರಳಿದ ಹೂವುಗಳಿದ್ದ ಜಾಗದಲ್ಲಿ ಕಾಯಿ/ಕೋಡುಗಳು ಜೋತಾಡುತ್ತಿದ್ದವು. ಮತ್ತೆ ಕೆಲವು ದಿನ ಕಳೆದಾಗ ಕೋಡುಗಳು ಒಡೆದು ಬೀಜಗಳು ಚೆಲ್ಲಾಪಿಲ್ಲಿ!

ಸ್ವಲ್ಪ ದಿನಗಳ ಬಳಿಕ ನೋಡಿದರೆ ಆ ಗಿಡದ ಸನಿಹ ನೂರಾರು ಪುಟ್ಟಸಸಿಗಳು. ಆ ಪುಟ್ಟಸಸಿಗಳಲ್ಲಿ ಕೆಲವು ಮಾತ್ರ ಹುಲುಸಾಗಿ ಬೆಳೆದು ಹೂವುಗಳನ್ನು ಬಿಡಲಾರಂಭಿಸಿದವು. ಅಯ್ಯೋ, ಇದರಲ್ಲೇನು ವಿಶೇಷ ಅಂತ ನಿಮಗನಿಸಿರಬಹುದು. ಇಲ್ಲಿಯೇ ಇರುವುದು ವಿಶೇಷ. ಗಾಳಿಯ ಮೂಲಕವೋ ಅಥವಾ ಇನ್ನಾವುದೋ ರೀತಿಯಲ್ಲಿ ತಾನಾಗಿ ಹುಟ್ಟಿ ಬೆಳೆದ ಈ ಗಿಡ ನನ್ನಲ್ಲಿ ಹಲವು ಯೋಚನೆಗಳನ್ನು ಹುಟ್ಟಿ ಹಾಕಿಸಿದ್ದಂತೂ ಸತ್ಯ. ಜೀವನದಲ್ಲಿ ಕೇಳಿದ ಕೆಲವು ಕಥೆಗಳು, ಮಾತುಗಳು, ನೋಡಿದ ಘಟನೆಗಳು ಮತ್ತೊಮ್ಮೆ ನೆನಪಾಗುವಂತಾಯಿತು. ಹಾಗೆಯೇ ಗಿಡವೊಂದು ಸಾರುವ ಜೀವನಸತ್ಯದ ಅರಿವಾಯಿತು ಸಹಾ.

ಬೇರೂರಲು ಸ್ವಲ್ಪ ಸ್ಥಳ ಸಿಕ್ಕರೆ ಸಾಕು, ಅಲ್ಲಿಯೇ ಹುಲುಸಾಗಿ ಬೆಳೆಯುವ ಈ ಗಿಡ ಆತ್ಮವಿಶ್ವಾಸವನ್ನು ಪ್ರತಿನಿಧಿಸಿತು- ಸೂಜಿ ಮೊನೆಯಷ್ಟು ಜಾಗ ಸಿಕ್ಕಿದರೂ ನಾನು ಬೆಳೆಯಬಲ್ಲೆ ಅನ್ನುವಂತೆ!  ಕೆಲವು ಹೂವಿನ ಗಿಡಗಳಿಗೆ ನೀರು, ಗೊಬ್ಬರ, ಪೋಷಕಾಂಶಗಳನ್ನು ಒದಗಿಸಿದರೂ ಹುಲುಸಾಗಿ ಬೆಳೆಯುವುದಿಲ್ಲ. ಕೆಲವೊಮ್ಮೆ ಮಣ್ಣು ಹಳೆಯದಾದರೆ ಅಂದರೆ ಸತ್ವ ಕಳೆದುಕೊಂಡಿದ್ದರೆ ಕೆಲವು ಗಿಡಗಳು ಮಕಾಡೆ ಮಲಗಿ ಬಿಡುತ್ತವೆ. ಇನ್ನು ಕೆಲವು ಗಿಡಗಳಿಗೆ ಹುಳುಹುಪ್ಪಟೆಗಳ ಕಾಟ. ಆದರೆ ಈ ಗಿಡ ಹಾಗಲ್ಲ. ಸಿಕ್ಕಿದ ನೀರು ಪೋಷಕಾಂಶಗಳಲ್ಲೇ ಹುಲುಸಾಗಿ ಬೆಳೆಯುತ್ತದೆ. ವಿಶೇಷ ಆರೈಕೆಯನ್ನು ಬೇಡುವುದಿಲ್ಲ.

ಕೆಲವೊಂದು ಹೂವುಗಳ ಬಣ್ಣ ಕಂಡಾಗ, ಈ ಬಣ್ಣ ಎಲ್ಲಿಂದ ಬಂದಿತು ಅನಿಸುತ್ತದೆ. ಈ ಹೂಗಳ ಬಣ್ಣ ಗಾಢ ಕೆಂಪು. ಇಲ್ಲೇ ಇರುವುದು ವಿಶೇಷ. ಈ ಗಿಡದ ಬೇರು, ಕಾಂಡ ಎಲ್ಲವೂ ಕೆಂಪು ಬಣ್ಣ (ಎಲೆಯನ್ನು ಬಿಟ್ಟು!). ಬೇರು ಹೀರಿಕೊಳ್ಳುವ ಜೀವಜಲವೇ ಕೆಂಪು ಬಣ್ಣಕ್ಕೆ ತಿರುಗಿತೇನೋ ಅನಿಸುವ ಭಾವ. ತಾಯಿ ತನ್ನುದರದಲ್ಲಿರುವ ಶಿಶುವಿಗೆ ತನ್ನ ರಕ್ತ ಹಂಚುವಂತೆ, ಗಿಡದ ಬೇರಿನಿಂದಲೇ ಕಾಂಡದ ಮೂಲಕ ಹೂವುಗಳಿಗೆ ಕೆಂಪು ಬಣ್ಣ ಹರಿದು ಬಂತೇ ಅನ್ನುವ ಪ್ರಶ್ನೆ ಮನದೊಳಗೆ ಮೂಡಿದ್ದಂತೂ ಸತ್ಯ. ಅರಳಿದ ಹೂವುಗಳೆಲ್ಲವೂ ಕೋಡುಗಳಾಗಿ ಬೆಳೆಯುವುದು ಇನ್ನೊಂದು ಅಚ್ಚರಿ. ಬೆಳೆದ ಕೋಡನ್ನು ಮುಟ್ಟಿದರೆ “ನೀನು ಕೋಡು ಒಡೆಯಬೇಡ. ನಾನೇ ಸಿಡಿಯುವೆ” ಅನ್ನುವಂತೆ ಗಿಡದ ಕೋಡು ತನ್ನಷ್ಟಕ್ಕೆ ಸಿಡಿದು ಬೀಜಗಳನ್ನು ಹೊರಚೆಲ್ಲುವ ಪರಿಯು ಪ್ರಕೃತಿಯ ವಿಸ್ಮಯವೇ ಸರಿ.

ಕೋಡಿನಿಂದ ಸಿಡಿದು ಮಣ್ಣಿಗೆ ಬಿದ್ದ ಪ್ರತಿಯೊಂದು ಬೀಜವೂ ಮೊಳಕೆಯೊಡೆದು ಸಸಿಯಾಗುವುದರಿಂದ ಅಲ್ಲೊಂದು ಪುಟ್ಟ ಸಸಿಗಳದೇ ಲೋಕ. ಆ ದೃಶ್ಯ ಕಂಡಾಗ ಶ್ರೀದೇವಿ ಮಹಾತ್ಮೆ ಕಥೆಯಲ್ಲಿ ಬರುವ ರಕ್ತಬೀಜಾಸುರನ ನೆನಪು. ರಕ್ತಬೀಜಾಸುರನ ರಕ್ತ ಬಿದ್ದಲ್ಲೆಲ್ಲಾ ಮರಿ ರಕ್ತ ಬೀಜಾಸುರರು ಹುಟ್ಟಿ ಬರುವಂತೆ, ಗಿಡದ ಬೀಜ ಬಿದ್ದಲ್ಲೆಲ್ಲಾ ಅಗಣಿತ ಸಸಿಗಳು!ಆದರೆ ಎಲ್ಲಾ ಸಸಿಗಳು ಹುಲುಸಾಗಿ ಬೆಳೆಯುವುದಿಲ್ಲ. ಕೆಲವು ಮಾತ್ರ ಬೆಳೆಯುತ್ತವೆ. “ನೀನೊಬ್ಬನಾದರೂ ಬದುಕು” ಎಂದು ತಾವು ತಿನ್ನದೆ ಆಹಾರವನ್ನೆಲ್ಲಾ ಶಕುನಿಗೆ ಬಿಟ್ಟುಕೊಟ್ಟು ತಾವು ಪ್ರಾಣ ತೆತ್ತ ಶಕುನಿಯ ಸಹೋದರರ ಹಾಗೆ ಒಂದೆರಡು ಗಿಡ ಬೆಳೆಯುತ್ತದೆ! ಉಳಿದ ಗಿಡಗಳು ಅಲ್ಲಿಯೇ ಮುರುಟುತ್ತವೆ. ಈ ದೃಶ್ಯ ಕಂಡಾಗ ನನಗೆ ನೆನಪಿಗೆ ಬಂದದ್ದು ಡಾರ್ವಿನ್ನನ ವಾದ “Struggle for existence, survival of the fittest”.

ನಮ್ಮ ಚೆಲುವು ನೋಡಿ ಖುಷಿಪಡಿ. ಆದರೆ ನಮ್ಮನ್ನು ಗಿಡದಲ್ಲಿಯೇ ಇರಲು ಬಿಡಿ” ಅನ್ನುವ ಹಾಗೆ ಈ ಗಿಡದ ಹೂವುಗಳ ವರ್ತನೆ. ಮಲ್ಲಿಗೆಯಂತಹ ಕೆಲವು ಹೂವುಗಳು ಗಿಡದಲ್ಲಿದ್ದರೂ ಒಂದು ದಿನ ಮಾತ್ರ ತಾಜಾತನ ಉಳಿಸಿಕೊಳ್ಳುತ್ತದೆ. ಮರುದಿನ ಉದುರಿ ಹೋಗುತ್ತದೆ, ಆದರೆ ಈ ಗಿಡದ ಹೂವುಗಳ ವಿಶೇಷ ಏನು ಗೊತ್ತಾ? ಗಿಡದಲ್ಲಿಯೇ ಇರಲು ಬಿಟ್ಟರೆ ವಾರಗಟ್ಟಲೆ ಗಿಡದಲ್ಲಿ ನಳನಳಿಸುವ ಈ ಹೂವುಗಳು, ಗಿಡದಿಂದ ಬೇರ್ಪಡಿಸಿದರೆ ಬೇಗನೇ ಬಾಡಿ ಹೋಗುವುವು. ಇಷ್ಟೆಲ್ಲಾ ಹೇಳಿದರೂ ಯಾವ ಹೂವೆಂದು ಹೇಳಲಿಲ್ಲ ಅಂತ ನಿಮಗೆ ಅನಿಸಿರಬಹುದು. ನಾವು ಈ ಹೂವಿಗೆ ಚಿಟ್ಟೆ ಹೂವು ಅನ್ನುತ್ತೇವೆ. ಕೆಲವರು ಗೌರಿ ಹೂವು ಅನ್ನುತ್ತಾರೆ. ಕೆಂಪು, ಬಿಳಿ, ಗುಲಾಬಿ, ಬಿಳಿಮಿಶ್ರಿತ ಕೆಂಪು,..ಹೀಗೆ ಹಲವು ಬಣ್ಣಗಳಲ್ಲಿ ಇರುವ ಈ ಹೂವುಗಳು ಸೌಂದರ್ಯದ ಖನಿಗಳು ಅಂದರೆ ಖಂಡಿತಾ ತಪ್ಪಾಗಲಾರದು.

ಡಾ. ಕೃಷ್ಣಪ್ರಭ ಎಂ, ಮಂಗಳೂರು

23 Responses

  1. ಮಹೇಶ್ವರಿ ಯು says:

    ಚೆನ್ನಾಗಿದೆ

  2. ಆಶಾ ಪೂಜಿ says:

    ಆಹಾ ! ಎಷ್ಟು ಚೆನ್ನಾಗಿ ಗೌರಿ ಹೂವಿನ ಹೊಗಳಿ ಬರೆದಿಪ್ರಭಾ ನನಗಂತೂ ಖುಷಿ ಆಯಿತು

    • Dr Krishnaprabha M says:

      ಮತ್ತೆ ಮತ್ತೆ ಹುಟ್ಟಿ ಬೆಳೆದು ಗಿಡದ ತುಂಬಾ ಹೂವುಗಳನ್ನು ಬಿಡುವ ಈ ಗಿಡ ತುಂಬಾ ಇಷ್ಟ ಆಯಿತು

  3. ಹೌದು ಇದು ಹೂದೋಟಕ್ಕೆ ಮಾತ್ರವಲ್ಲ ನಮ್ಮ ಮನದ ತೋಟಕ್ಕೂ ಮುದನೀಡುವುದು ಇದರ ವೀಕ್ಷಣೆ…
    ಚೆನ್ನಾಗಿದೆ ಮನದಲ್ಲರಳಿ , ಸುರಹೊನ್ನೆಯಲಿ ಪಸರಿಸಿದ್ದು.

    • sudha says:

      it is a balsam. in mysore bengaluru called karna kundala.

      • Dr Krishnaprabha M says:

        ಹೌದು. ಕರ್ಣಕುಂಡಲ ಅನ್ನುವ ಹೆಸರಿದೆ ಅಂತ ಗೊತ್ತಾಯಿತು. ಪ್ರತಿಕ್ರಿಯೆಗೆ ಧನ್ಯವಾದಗಳು

    • Dr Krishnaprabha M says:

      ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ವಿಜಯಕ್ಕ

  4. ನಾಗರತ್ನ ಬಿ. ಅರ್. says:

    ಒಂದು ಹೂವಿನ ಗಿಡದಿಂದ ಇಷ್ಟು ವಿಷಯಗಳ ಅನಾವರಣ.ಸೊಗಸಾದ ನಿರೂಪಣೆ ಚೆನ್ನಾಗಿ ಮೂಡಿ ಬಂದಿದೆ ಮೇಡಂನಿಮ್ಮ ಲೇಖನ. ದನ್ಯವಾದಗಳು

    • Dr Krishnaprabha M says:

      ಹೌದು. ತುಂಬಾ ದಿನಗಳಿಂದ ಈ ಹೂವಿನ ಬಗ್ಗೆ ಬರೆಯಬೇಕೆಂಬ ತುಡಿತ ಇತ್ತು. ಯಾಕೋ ಎಲ್ಲಾ ರೀತಿಯಲ್ಲಿ ಈ ಹೂವು ತುಂಬಾ ಆಪ್ತವಾಯಿತು. ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.

  5. ನಯನ ಬಜಕೂಡ್ಲು says:

    ಚಂದದ ಲೇಖನ

  6. Chandra Shekhara says:

    ಚೆನ್ನಾಗಿದೆ ಲೇಖನ

  7. padmini says:

    ನಿರೂಪಣೆ ಚೆನ್ನಾಗಿದೆ.

  8. Anonymous says:

    ಸಾದಾ ಹೂವೊಂದರ ಜೀವನವನ್ನು ಬಿಚ್ಚಿಟ್ಟ ಪರಿ, ತಮ್ಮ ಲೇಖನದಲ್ಲಿ ಬಹಳ ಆತ್ಮೀಯವಾಗಿ ಮೂಡಿಬಂದಿದೆ. ವಿವಿಧ ಹೆಸರುಗಳನ್ನು ಇರಿಸಿಕೊಂಡಿರುವ ಈ ಹೂವು, ತನ್ನ ಬಣ್ಣ ಹಾಗೂ ಎಲ್ಲಿಯೂ ಒಗ್ಗಿಕೊಳ್ಳುವ ಸರಳ ಜೀವನಕ್ಕೆ ಉದಾಹರಣೆಯಂತಿದೆ.

    • Dr Krishnaprabha M says:

      ನೀವು ಹೇಳಿದ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ಸರಳ ಜೀವನಕ್ಕೆ ಉದಾಹರಣೆಯಾಗಿದೆ ಈ ಗಿಡ

  9. Padma Anand says:

    ಸೌಂದರ್ಯದ ಖನಿಗಳ ಸುಂದರ ವಿವರಣೆಯೊಂದಿಗೆ ಜೀವನ ಸತ್ಯಗಳನ್ನೂ ಮೇಳೈಸಿರುವ ಪರಿ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು

    • ಡಾ. ಕೃಷ್ಣಪ್ರಭ ಎಂ says:

      ಚಂದದ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು ಮೇಡಂ

  10. ಗೀತಾ ಪೂರ್ಣಿಮಾ says:

    ಲೇಖನ ತುಂಬಾ ಚೆನ್ನಾಗಿದೆ.‌

Leave a Reply to ಮಹೇಶ್ವರಿ ಯು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: