ಮಣಿಪಾಲದ ಮಧುರ ನೆನಪುಗಳು..ಭಾಗ 9

Share Button

ಹರ್ಕೂರು ಮನೆ

ನಮ್ಮನ್ನು ಎರಡು ತಲೆಮಾರು ಹಿಂದಕ್ಕೆ ಕೊಂಡೊಯ್ದ ಸೊಗಸಾದ ಸಾವಿರಾರು ವಸ್ತುಗಳನ್ನು ವೀಕ್ಷಿಸಿ ಮುಂದುವರಿದಾಗ, ಮುಂಭಾಗದಲ್ಲಿಯೇ ಇದೆ … ಹರ್ಕೂರು ಮನೆ. ಈ ಮದ್ದಳೆ ಕಂಬಗಳ ಸಾಲಿನ ಹರ್ಕೂರು ಮನೆಯು ಗುತ್ತು ಮನೆಯೆಂದು ಕೂಡ ಗುರುತಿಸಿಕೊಂಡಿದೆ. ಇದು, ದಕ್ಷಿಣಕನ್ನಡದ ಬಂಟ ಸಮುದಾಯದವರಾಗಿದ್ದು, ಈ ಸಮುದಾಯದವರ ಘನಸ್ಥಿಕೆ, ಗಾಂಭೀರ್ಯ, ಸಿರಿವಂತಿಕೆ, ಸಾಂಸ್ಕೃತಿಕ ವೈಭವವನ್ನು ಎತ್ತಿ ತೋರಿಸುವಂತಿದೆ. ಮನೆಯ ಚಾವಡಿಯನ್ನು ಆಧರಿಸಿರುವ, ಯಾವುದೇ ಜೋಡಣೆಯಿಲ್ಲದೆ ಒಂದೇ ಮರದಿಂದ ಮಾಡಿದ ಬೃಹದಾಕಾರದ ಮದ್ದಳೆ ವಿನ್ಯಾಸದ ಕಂಬಗಳು ಈ ಮನೆಯ ವಿಶೇಷ.

ಆಕರ್ಷಣೆಗಳಲ್ಲೊಂದಾಗಿದೆ. ಆಯತಾಕಾರದಲ್ಲಿರುವ ಈ ಮನೆಯು, ಹೊರಗಡೆಗೆ ವಿಶಾಲವಾಗಿ ಕಂಡರೂ, ಒಳಗಡೆಗೆ ಹೋದಂತೆ ಸ್ಥಳಾವಕಾಶವು ಕಡಿಮೆ ಇದ್ದಂತೆ ಎನಿಸುತ್ತದೆ.    ವಿಶೇಷವೆಂದರೆ, ಮನೆಯ ಮೊಗಸಾಲೆಯಲ್ಲಿ ಯಜಮಾನ ಕುಳಿತರೆ ಇಡೀ ವ್ಯವಸಾಯದ ಭೂಮಿ ಕುಳಿತಲ್ಲಿಗೇ ಕಾಣುತ್ತಿದ್ದು, ಅವನು ಅಲ್ಲಿಂದಲೇ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವ ವ್ಯವಸ್ಥೆ ನಿಜಕ್ಕೂ ಸೋಜಿಗವೆನಿಸುತ್ತದೆ. ಚಾವಡಿಯಲ್ಲಿ ಸೊಗಸಾಗಿ ಜೋಡಿಸಿಟ್ಟಿರುವ ಸುಂದರವಾದ ವಿಶೇಷ  ಕೆತ್ತನೆಯುಳ್ಳ ನೇಗಿಲು, ನೊಗಗಳು, ಅಕ್ಕಿ, ಭತ್ತ ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸುವ ಗೆರಸೆ, ತಲೆಗೆ ಹ್ಯಾಟಿನಂತೆ ಉಪಯೋಗಿಸುವ, ಅಡಕೆ ಹಾಳೆಯಿಂದ ಮಾಡಿದ ಮುಟ್ಟಪ್ಪಾಳೆ ಇತ್ಯಾದಿಗಳು ಹರ್ಕೂರು ಮನೆಯಲ್ಲಿ ಕೃಷಿ ಪ್ರಧಾನ ಕೂಡು ಕುಟುಂಬವಿದ್ದುದನ್ನು ಸೂಚಿಸುತ್ತದೆ.   

ಹರ್ಕೂರು ಮನೆ

ಎದುರುಗಡೆಯೇ, ಒಳ ಕೋಣೆಗೆ ಹೋಗುವ ಬಾಗಿಲಿನ ಹೊಸಿಲಿನ ಬಲಪಕ್ಕಕ್ಕೆ ಮೊಸರು ಕಡೆಯುವ ಕಡೆಗೋಲಿನ ಸಹಿತದ ದೊಡ್ಡದಾದಪಾತ್ರೆಯೊಂದು ‘ನಾನಿದ್ದೇನೆ..ತಾಜಾ ಬೆಣ್ಣೆ ಬೇಕೇ?’ ಎಂದು ಕೇಳುತ್ತಾ ತಯಾರಾಗಿ ಕುಳಿತಿರುವುದು ಗೋಚರಿಸಿತು. ಮುಂದಕ್ಕಿರುವ ಅಡುಗೆಕೋಣೆಯಲ್ಲಿ ಅನ್ನದ ತಿಳಿನೀರು ಬಗ್ಗಿಸಲು ಉಪಯೋಗಿಸುವ ಮರದ ಓಡಮರಿಗೆ, ನೆಲದಲ್ಲಿರುವ ಒಲೆಯ ಮೇಲೆ ಹಾಗೂ ಅಕ್ಕಪಕ್ಕದಲ್ಲಿರುವ ಮಣ್ಣಿನ ಹಾಗೂ ತಾಮ್ರದ ಪಾತ್ರೆಗಳು ಅಡುಗೆ ಸಿದ್ಧತೆ ನಡೆಸಿವೆ.  ಅದರ ಪಕ್ಕದ ಬಾಣಂತಿ ಕೋಣೆಯಲ್ಲಿ, ಪುಟ್ಟ ಕಂದಮ್ಮಗಳನ್ನು ನೆನೆಯುತ್ತಿರುವ ಚಂದದ ತೊಟ್ಟಿಲು ಹಾಗೂ ಅಮ್ಮಂದಿರ ಮಂಚವು ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು.ಮುಂದಿನ ಕೋಣೆಗಳು ನಮ್ಮನ್ನು ಬೇರೊಂದು ವಿಸ್ಮಯ ಲೋಕಕ್ಕೆ ಒಯ್ದವು….

ತಂಜಾವೂರು ಚಿತ್ರಗಳು

ಒಳಗಡೆಯ ಬೇರೆ ಬೇರೆ  ಕೋಣೆಗಳ ಗೋಡೆಗಳಲ್ಲಿ ತಂಜಾವೂರು ಪರಂಪರೆಯುಳ್ಳ ತರಹ ತರಹದ ಕಲಾಕೃತಿಗಳನ್ನು ಜೋಡಿಸಿಟ್ಟಿರುವುದನ್ನು ಕಾಣಬಹುದು. ಮೂಲತ: ಮಧುರೆಯ ನಾಯ್ಡು ವಂಶಸ್ಥರು ಸುಮಾರು 16ರಿಂದ 18ನೆಯ ಶತಮಾನದ ವರೆಗಿನ ಅವಧಿಯಲ್ಲಿ ಈ ಶೈಲಿಗೆ ಪ್ರೋತ್ಸಾಹ- ಪೋಷಣೆಗಳನ್ನು ಒದಗಿಸಿದರು. ಮುತ್ತುಗಳು, ಉಪರತ್ನಗಳು, ಗಾಜಿನ ಚೂರುಗಳು  ಹಾಗೂ ಚಿನ್ನ ಮುಂತಾದ ಕಚ್ಚಾ ಸಾಮಗ್ರಿಗಳನ್ನು ವಿಶಿಷ್ಟ ಕುಸುರಿ ಕೆಲಸಕ್ಕೆ ಬಳಸಿಕೊಂಡು ಈ ತಂಜಾವೂರು ಶೈಲಿಯ ವರ್ಣಚಿತ್ರಗಳನ್ನು ರಚಿಸಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ದೇವ ದೇವತೆಗಳನ್ನೇ ವಸ್ತುವನ್ನಾಗಿಸಿಕೊಂಡಿವೆ. ಇಲ್ಲಿರುವ ಈ ತಂಜಾವೂರು ಕಲಾಕೃತಿಗಳ ಸಂಗ್ರಹಾಲಯವು ನಮ್ಮ ದೇಶದಲ್ಲಿಯೇ ಅಪೂರ್ವವಾದುದು. ಮರಾಠನಾಡಿನ ಸಮಕಾಲೀನನಾದ ಏಕೋಜಿಯಿಂದ ತಂಜಾವೂರು ರಾಜಸಂಸ್ಥಾನವು ಅರಂಭವಾಯಿತು. ಆಮೇಲೆ, ಎರಡನೇ ಸರ್ಫೋಜಿಯು ತಂಜಾವೂರು ಕಲಾಶೈಲಿಗೆ ವಿಶೇಷ ಪ್ರೋತ್ಸಾಹ ನೀಡಿದುದು ಮಾತ್ರವಲ್ಲದೆ ನೂರಾರು ಕಲಾಕೃತಿಗಳನ್ನು ಸಂಗ್ರಹಿಸಿಟ್ಟಿದ್ದನು. ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿ  ಅವುಗಳಿಗೆ ಸುರಕ್ಷತೆಯ ಸಮಸ್ಯೆ ಉಂಟಾಯಿತು. ಅತ್ಯಮೂಲ್ಯವಾದ ಈ ಅಸಂಖ್ಯ ತಂಜಾವೂರು ಶೈಲಿಯ ಕಲಾಕೃತಿಗಳು ಪರಕೀಯರ ಪಾಲಾಗುವುದನ್ನು ತಪ್ಪಿಸಲು ಅವನು ಅವುಗಳನ್ನೆಲ್ಲ ನೆಲಮಾಳಿಗೆಯಲ್ಲಿ ಭದ್ರವಾಗಿ ಅಡಗಿಸಿಟ್ಟಿದ್ದನು. ಆ ನಂತರದ ದಿನಗಳಲ್ಲಿ; ಪುಣೆ ಬಳಿಯ ಮಳವಳ್ಳಿಯೆಂಬ  ಊರಿನ ಕಲಾಸಕ್ತರ  ನೆರವಿನಿಂದಾಗಿ ಟ್ರಸ್ಟ್ ಒಂದು ಜನ್ಮತಾಳಿ ಕಲಾಕೃತಿಗಳೆಲ್ಲಾ ಸುರಕ್ಷಿತವಾಗಿ ಇರಿಸಲ್ಪಟ್ಟವು.  ಅಲ್ಲಿಂದಲೇ ಆ ಅತ್ಯಮೂಲ್ಯ ಕಲಾಕೃತಿಗಳು ಈ ಹೆರಿಟೇಜ್ ವಿಲೇಜ್ ಗೆ ತರಲ್ಪಟ್ಟು ವಸ್ತುಸಂಗ್ರಹಾಲಯವನ್ನು ಸೇರಿವೆ.

ತಂಜಾವೂರು ಚಿತ್ರಗಳು

ಸುಮಾರು 200ಕ್ಕೂ ಅಧಿಕ ವರ್ಣಚಿತ್ರಗಳು ಇಲ್ಲಿ ಪ್ರವಾಸಿಗರ ವೀಕ್ಷಣೆಗೆ ಪ್ರದರ್ಶನಕ್ಕಿಡಲ್ಪಟ್ಟಿವೆ. ಈ ವರ್ಣಚಿತ್ರಗಳ ಚೌಕಟ್ಟುಗಳು ಕೂಡಾ ತುಂಬಾ ಕಲಾತ್ಮಕವಾಗಿವೆ. ಗೋಡೆಗಳಲ್ಲಿ ತೂಗುಹಾಕಲಾದ ತಂಜಾವೂರು ಚಿತ್ರಕಲೆಗಳು, ಗಾಜಿನಲ್ಲಿ ಬರೆದ ಬಣ್ಣದ ಚಿತ್ರಗಳು, ಚಿನ್ನದ ರೇಕಿಗಳನ್ನು ಉಪಯೋಗಿಸಿ ಮಾಡಿದ ಚಿತ್ರಗಳು, ಪೇಪರು ತುಂಡರಿಸಿ ಬಣ್ಣ ಹಚ್ಚಿ ಮಾಡಿದ  ಚಿತ್ರಾಕೃತಿಗಳು,ಪ್ರಾಕೃತಿಕ ಬಣ್ಣಗಳನ್ನು ಬಳಸಿ, ಸುಮಾರು ಎರಡು ಮೀಟರ್ ಚಚ್ಚೌಕದ ಬಟ್ಟೆಯ ಮೇಲೆ ಬಿಡಿಸಿದ  ದೊಡ್ಡದಾದ ಕಲಂಕಾರಿ ಚಿತ್ರಗಳು ಅದ್ಭುತವಾಗಿವೆ. ಅವುಗಳನ್ನೆಲ್ಲಾ ನೋಡುತ್ತಾ ಸಮಯ ಸರಿದುದೇ ತಿಳಿಯಲಿಲ್ಲ. ಎಲ್ಲಾ ಕೋಣೆಗಳನ್ನು ದಾಟಿ ಮುಂದುವರಿದಂತೆಯೇ ಮುಂದಕ್ಕೆ,  ಕೊನೆಯದಾಗಿ ಎದುರುಗಡೆಗೆ ಇದೆ..  ಆ ಗುತ್ತು ಮನೆ ಯಜಮಾನನಿಗಾಗಿರುವ ವಿಶಾಲವಾದ ಶಯನಗೃಹ. ಅಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ತುಸು ಕಡಿಮೆ ಇದ್ದಂತೆನಿಸಿದರೂ, ನೂರಾರು ಪರ್ಷಗಳಷ್ಟು ಹಳೆಯ ಅತ್ಯಮೂಲ್ಯವಾದ  ಪ್ರತಿಯೊಂದು ವಸ್ತುಗಳನ್ನು, ಅತ್ಯದ್ಭುತ ಕಲಾಕೃತಿಗಳನ್ನು ಸುವ್ಯವಸ್ಥಿತವಾಗಿ ಕಾಪಿಟ್ಪುಕೊಂಡಿರುವುದರ ಬಗ್ಗೆ ಬಹಳ ಹೆಮ್ಮೆ  ಹಾಗೂ ಆಶ್ಚರ್ಯವೆನಿಸುತ್ತದೆ.

ಮುಂದುವರಿಯುವುದು……
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=33761

-ಶಂಕರಿ ಶರ್ಮ, ಪುತ್ತೂರು.

14 Responses

 1. ಆಶಾ ನೂಜಿ says:

  ಅಕ್ಕಾ ನನಗೂ ಹೋದಂತೆ ಆಯಿತು ಚಂದದ ಮಣಿಪಾಲದ ಮಧುರ ನೆನಪುಗಳು

 2. ನಾಗರತ್ನ ಬಿ. ಅರ್. says:

  ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ ನಿಮ್ಮ ಮಣಿಪಾಲ ಪ್ರವಾಸದ ಮಧುರ ನೆನಪು.. ಅದನ್ನು ಓದುಗರಿಗೆ ಉಣಬಡಿಸುವ ರೀತಿ ಯೂ ಚೆನ್ನಾಗಿದೆ.ಧನ್ಯವಾದಗಳು ಮೇಡಂ

  • . ಶಂಕರಿ ಶರ್ಮ says:

   ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

 3. ನಯನ ಬಜಕೂಡ್ಲು says:

  Beautiful

  • . ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

 4. dharmanna dhanni says:

  ಅರ್ಥಪೂರ್ಣವಾಗಿದೆ

  • . ಶಂಕರಿ ಶರ್ಮ says:

   ಓದಿ, ಮೆಚ್ಚಿ, ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು

 5. dharmanna dhanni says:

  ಅರ್ಥಪೂರ್ಣವಾದ ಬರಹ

 6. padmini says:

  ಕಲಾಕೃತಿಗಳನ್ನು ಸುವ್ಯವಸ್ಥಿತವಾಗಿ ಕಾಪಿಟ್ಪುಕೊಂಡಿರುವುದು ಚೆನ್ನಾಗಿದೆ.

 7. Padma Anand says:

  ಎಂದಿನಂತೆ ಸುಂದರ ವಿವರಣೆಗಳನ್ನೊಳಗೊಂಡು, ನಮ್ಮ ಹಿಂದಿನ ತಲೆಮಾರಿನ ಜನರ ನೈಪುಣ್ಯತೆಗೆ ತಲೆದೂಗುವಂತೆ ಮಾಡಿತು ʼಮಣಿಪಾಲದ ಮಧುರ ನೆನಪುಗಳುʼ

 8. Dr Krishnaprabha M says:

  ಆಹಾ…ಚಂದದ ಲೇಖನ… ನಮಗೆ ತಿಳಿಯದ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಲು ನಿಮ್ಮ ಲೇಖನ ಮಾಲೆ ಸಹಕಾರಿಯಾಗಿದೆ

 9. .ಮಹೇಶ್ವರಿ.ಯು says:

  ಖಂಡಿತವಾಗಿ ನೀವು ಈ ಲೇಖನ ಸರಣಿಯನ್ನು ಪುಸ್ತಕರೂಪದಲ್ಲಿ ತರಬೇಕು.ಶೈಕ್ಷಣಿಕ ಮೌಲ್ಯವುಳ್ಳ ಈ ಬರಹ ಅಲ್ಲಿಗೆ ಭೇಟಿ ನೀಡಲು ಪ್ರೇರಣೆಯಾಗಬಹುದು ಮತ್ತು ಒಂದು ಕೈಪಿಡಿಯೂ ಆಗಬಹುದು..ಕನ್ನಡದಲ್ಲಿ . ಸದಭಿರುಚಿಯನ್ನು ಬೆಳೆಸುವ ಇಂತಹ ಪುಸ್ತಕಗಳು ಖಂಡಿತ ಬೇಕು..ಮತ್ತೊಮ್ಮೆ ನಿಮಗೆ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: