ಬಾವಿಯಿಂದ ಬೋರ್ವೆಲ್ ಕಡೆ ಪಯಣ

Share Button

”ಬಾವಿಯೊಳಗಿನ ಕಪ್ಪೆ” ಎನ್ನುವ ಕಥೆ ಎಲ್ಲರಿಗೂ ತಿಳಿದಿರುವುದೇ ತಾನೇ? ಹಿಂದೊಮ್ಮೆ ನಮ್ಮ ಹಿರಿಯರು ಹೀಗೆ ಇದ್ದರು. ತಮ್ಮ ಪುಟ್ಟ ಪರಿಧಿಯಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಅವರದೇ ಆದ ಪ್ರಪಂಚದಲ್ಲಿ ನೆಮ್ಮದಿಯಾಗಿದ್ದರು. ಅವಿಭಕ್ತ ಕುಟುಂಬದಲ್ಲಿದ್ದ ಸದಸ್ಯರ ಪರಸ್ಪರ  ಸಹಕಾರದೊಂದಿಗೆ ಬೇರೊಂದು ಪ್ರಪಂಚದ ಗೊಡವೆಯಿಲ್ಲದ ಸರಳ ಸುಂದರ ಬದುಕಾಗಿತ್ತು. ಬಾವಿಯಲ್ಲಿದ್ದ ಕಪ್ಪೆಗೆ ತಾನು ಹುಟ್ಟಿನಿಂದ ಕಂಡ ಆ ಸಣ್ಣ ವಿಸ್ತಾರದ ಜಗತ್ತು ಸಾಕಾಗಿತ್ತು. ಆದರೆ ಕಾಲಕ್ರಮೇಣ ಬಾವಿಯಿಂದಾಚೆಗೆ ಇರುವ ಆಧುನಿಕತೆಯ ಗಾಳಿ ಬೀಸಿದಾಗ ,ಆ ಹೊಸ ಜಗತ್ತಿಗೆ ತಮ್ಮನ್ನೂ ತೆರೆದುಕೊಳ್ಳುತ್ತಾ ಹೊರಟರು. ಪರಿವರ್ತನೆ ಜಗದ ನಿಯಮ ಅಲ್ಲವೇ? ಹೀಗಿರುವಾಗ ಎಲ್ಲವೂ ಬದಲಾಗಬೇಕಾಯಿತು.

ನನ್ನ ಮಗನ ಕಡೆಯಿಂದ ಇಂದು ಬೆಳಿಗ್ಗೆ  ಪ್ರಶ್ನೆಯೊಂದು ತೂರಿಬಂತು. “ಪಪ್ಪಾ , ಈಗ ವಾಟರ್ ಫಿಲ್ಟರ್ ನೀರು ಕುಡಿಯುತ್ತಿದ್ದೇವೆಯಲ್ಲ , ಇದಕ್ಕೂ ಮೊದಲು ಈ ರೀತಿಯಲ್ಲಿ ಇತ್ತಾ? ” ಆಗ ನನ್ನ ಪತಿರಾಯರು ” ಇಲ್ಲಾ ಕಣೋ, ಮೊದಲು ಬಾವಿಯಿಂದ ನೀರನ್ನು ಸೇದಿ ನೀರಿನ ಹಂಡೆಯಲ್ಲಿ ಶೇಖರಿಸಿ ಕುಡಿಯುತ್ತಿದ್ದೆವು. ಆ ನೀರಿನಿಂದ ಆರೋಗ್ಯ ಚೆನ್ನಾಗಿತ್ತು.ಯಾವ ತೊಂದರೆಗಳೂ ಇರಲಿಲ್ಲ. ಮೊದಲು ಯಾವುದೇ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದ ಕಾರಣ ಅಂತರ್ಜಲದ ನೀರು ಶುದ್ಧವಾಗಿದ್ದು ಬಾವಿಯ ನೀರು ಕುಡಿಯಲು ಯೋಗ್ಯವಾಗಿತ್ತು. ಆದರೆ ಈಗ ಎಲ್ಲವೂ ವಿಷಮಯವಾಗಿ ವಾಟರ್ ಫಿಲ್ಟರ್ ಗಳ ಮೊರೆಹೋಗಬೇಕಾಗಿದೆ ” ಎಂದು ಸಹಜವಾಗಿ ಬೇಸರ‌ ವ್ಯಕ್ತಪಡಿಸಿದರು.

ಹೌದಲ್ಲವೇ, ನೈಸರ್ಗಿಕವಾಗಿ  ದೊರೆಯುವ ನೀರು, ಗಾಳಿ, ಮಣ್ಣು ಎಲ್ಲವೂ ಮೊದಲಿನಂತಿಲ್ಲ. ಹೀಗೆ ಬಾವಿ ವಿಚಾರ ಬಂದಾಗಲೆಲ್ಲಾ ನನ್ನ ತವರೂರಿನ  ದೊಡ್ಡ ಕಲ್ಲಿನ ಬಾವಿಕಣ್ಣು ಮುಂದೆ ಬರುತ್ತದೆ. ಕೆರೆಯ ಮಧ್ಯೆ ವಿಶಾಲವಾದ ಕಲ್ಲಿನ ಹಾಸನ್ನು ಹೊಂದಿರುವ ಬಾವಿಯದು. ಊರಿನ ಪ್ರಮುಖ ಬಾವಿಯಾಗಿದ್ದು ಬಾಲ್ಯದಲ್ಲಿ ನಮ್ಮ ಮನೆಗೂ ಇದೇ ಬಾವಿಯ ನೀರೇ ಆಧಾರವಾಗಿತ್ತು. ನನ್ನ ಅಪ್ಪ  ಎರಡು ಬಿಂದಿಗೆಯನ್ನ ನೀರಿನ ಅಡ್ಡೆಯಲ್ಲಿಟ್ಟು ನೀರನ್ನು ಪೂರೈಸುತ್ತಿದ್ದ, ಅದರಿಂದ ಭುಜಗಳೆರಡು ನೋವಾಗಿದ್ದ ಕಥೆಯನ್ನು ಸದಾ ನೆನಪಿನ ಬುತ್ತಿಯಿಂದ ತೆಗೆದು ನಮಗೆ ವಿವರಿಸುತ್ತಾರೆ. ಅವರು ಹಾಗೆ ಹೇಳುವಾಗಲೆಲ್ಲಾ ನಿಜಕ್ಕೂ ಅಚ್ಚರಿ ಆಗುತ್ತದೆ. ಕಾರಣ ಹತ್ತು ಹನ್ನೆರಡು ಮಂದಿ ಇರುವ ಮನೆಯೊಂದಕ್ಕೆ ಅದೆಷ್ಟು ಬಿಂದಿಗೆಗಳ ನೀರು ಹೊತ್ತಿರಬಹುದು ಆ ಭುಜಗಳು. ಅಪ್ಪನೊಂದಿಗೆ ಅಮ್ಮನೂ ನೀರಿನ ಎರಡೆರಡು ಬಿಂದಿಗೆಗಳನ್ನು ಹೊತ್ತು ತರುತ್ತಿದ್ದರು. ಚಿಕ್ಕವರಿದ್ದಾಗ ನಾವು ಅವರೊಟ್ಟಿಗೆ ನೀರು ಸೇದಲು ಹೋಗುತ್ತಿದ್ದೆವು. ಅಲ್ಲಿ ಜನಗಳ ಸಂದಣಿಯೇ ಇರುತ್ತಿತ್ತು. ಆ ಮೊದಲೇ ಯಾರಾದರೂ ಬಾವಿಯ ರಾಟೆಗೆ ಇಳಿಬಿಟ್ಟ ಹಗ್ಗದ ಕುಣಿಕೆಗೆ ಬಿಂದಿಗೆಯ ಕುತ್ತಿಗೆಯನ್ನು ಬಿಗಿದು ನಿಧಾನವಾಗಿ ಬಾವಿಯೊಳಗೆ ಅಮ್ಮ ಹಗ್ಗವನ್ನು ಬಿಡುತ್ತಿದ್ದಳು. ನಾವು ಬೇರೊಂದು ಕಡೆಯಿಂದ ಇಣುಕಿ ಇಣುಕಿ ನೋಡುತ್ತಿದ್ದೆವು. ಅಮ್ಮ ಆ ಬಿಂದಿಗೆಯನ್ನು ಒಂದೆರಡು ಸಲ ಆ ಕಡೆ ಈ ಕಡೆ ಮಾಡಿ ನೀರು ತುಂಬಿದ ಕೂಡಲೇ ಹಗ್ಗವನ್ನು ಎಳೆಯುವಾಗ ನಾವೂ ಕೈ ಜೋಡಿಸಿ ಖುಷಿ ಪಡುತ್ತಿದ್ದೆವು. ನಂತರ ಅಮ್ಮ ತಲೆಯ ಮೇಲೂ ,ನಡುವಿನಲ್ಲೊಂದೂ ಬಿಂದಿಗೆ ಹೊತ್ತು ಮನೆಯ ಕಡೆಗೆ ಹೊರಡುತ್ತಿದ್ದಳು. ನಾವೂ ಅವಳ ಹಿಂದೆ ನಡೆದು ಬಿಡುತ್ತಿದ್ದೆವು.

ಚಿತ್ರಕೃಪೆ: ಅಂತರ್ಜಾಲ

ಒಂದೆರಡು ವರ್ಷಗಳ ನಂತರ ನಾನೂ, ನನ್ನ ಅಕ್ಕನೊಂದಿಗೆ ಸೇರಿ ಬಾವಿಯಿಂದ ನೀರು ತರುವಾಗ ಅದರ ಕಷ್ಟದ ಅರಿವಾಯಿತು. ಎಲ್ಲರೂ ಅವರು ದಿನಂಪ್ರತಿ ಬಳಸುವಷ್ಟು ನೀರನ್ನು ತಾವೇ ಹೊತ್ತು ತರುವುದಾಗಿದ್ರೆ ಮಾತ್ರ ಆ ನೀರಿನ ಮೌಲ್ಯ ಅರಿವಾಗುತ್ತದೆ. ಹೀಗೆ ನಮ್ಮೂರಿನ ಬಾವಿ ಬಹಳ ವರ್ಷಗಳವರೆಗೂ ಜನರೆಲ್ಲರಿಗೂ ಅವಶ್ಯಕ ನೀರಿನ ಮೂಲವಾಗಿತ್ತು. ಆದರೆ ನನ್ನ ಅಪ್ಪ ಈ ಕೆಲಸದಿಂದ ರೋಸಿಹೋಗಿದ್ದರು. ಹಬ್ಬ ಹರಿದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ ನೀರನ್ನು ಸಂಗ್ರಹಿಸುವುದು ಸಾಹಸವೇ ಆಗಿತ್ತು. ಅಂತೂ ಅವರು ಹೋರಾಟ ನಡೆಸಿ ನಮ್ಮ ಬೀದಿಗೆ ಮೊದಲ ನಲ್ಲಿಯನ್ನು ಹಾಕಿಸಿದರು. ಅಂದು ಅವರಿಗೆ ಹೇಳತೀರದಷ್ಟು ಆನಂದವಾಗಿತ್ತು. ಮನೆಯ ಬಾಗಿಲಿಗೆ ಗಂಗೆ ಬಂದಳು. ಬಹಳ ವರ್ಷಗಳ ಕಷ್ಟ ಬಗೆಹರಿಸುವ ಮೊದಲ ಹೆಜ್ಜೆ ಇದಾಗಿತ್ತು. ಆದರೂ ಕೆಲವೊಮ್ಮೆ ನೀರಿನ ಕೊರತೆಯಾದಾಗ  ಬಾವಿಯ ನೀರಿನ ಅನಿವಾರ್ಯತೆ ಇತ್ತು. ಆದರೆ ಈಗಿನ ನಮ್ಮ ಮಕ್ಕಳಿಗೆ ಇಂಥ ಬಾವಿಯೊಂದರ ಹಿಂದೆ ಸಾವಿರಾರು ಕಥೆಗಳಿವೆ ಎಂಬ ಅರಿವೂ ಇಲ್ಲ. ಇದು ಕೇವಲ ನಮ್ಮ ಊರಿನ, ನಮ್ಮ ಮನೆಯದಲ್ಲ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ ತಾನೇ?

ಇತ್ತೀಚಿನ ದಿನಗಳಲ್ಲಿ ಮನೆ ಮನೆಗೆ ನಲ್ಲಿ ಅಥವಾ ಬೋರ್ವೆಲ್ ಇರುವ ಕಾರಣ ಬಾವಿಗಳು ಅವುಗಳ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬೇಕಾಯಿತು. ಆದರೂ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿ ಊರಿಗೆ ಹೊಸದಾಗಿ ಬಂದ ಮಧುಮಗಳಿಗೆ ನೀರು ಹೊರಿಸಿ ಕರೆದುಕೊಂಡು ಬರುವ ಶಾಸ್ತ್ರ ಹಳ್ಳಿಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಅದಕ್ಕೆ ಗಾದೆಯೇ ಇದೆ ನೋಡಿ. ಊರಿಗೆ ಬಂದೋಳು , ನೀರಿಗೆ ಬರಲ್ವಾ? ಇದರರ್ಥ ಆಗಿನ ಕಾಲದಲ್ಲಿ ಪ್ರತಿಯೊಂದು ಮನೆಗೂ ಬಾವಿಯೇ ನೀರಿನ ಮೂಲ ಆಕರವಾಗಿದ್ದ ಕಾರಣ ಯಾರಾದರೂ ಇಲ್ಲಿಗೆ ಬರಲೇಬೇಕು ಎನ್ನುವುದಾಗಿತ್ತು.  ಈ ಪದ್ಧತಿಯೂ ಕಾಲಕ್ರಮೇಣ ಇಲ್ಲವಾಗಬಹುದು.
ಆದರೆ ಡಿವಿಜಿಯವರು ಹೀಗೆ ಹೇಳುತ್ತಾರೆ
“ಋತು ಚಕ್ರ ತಿರುಗುವುದು; ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು;
ಕ್ಷಿತಿ ಗರ್ಭ ಧರಿಸುವಳು; ಮತ್ತುದಿಸುವುದು ಜೀವ ;
ಸತತ ಕೃಷಿಯೇ ಪ್ರಕೃತಿ ” –  ಮಂಕುತಿಮ್ಮ

ಮತ್ತೆ ಕಾಲವೊಂದು ಬರಲಿದೆ ಹಳೆಯದನ್ನು ಮರುಕಳಿಸುವಂತೆ ಮಾಡುತ್ತದೆ . ಮುಚ್ಚಿದ ಬಾವಿಗಳು ತೆರೆದು ನೀರನ್ನು ಒಡಲಲ್ಲಿ ತುಂಬಿಸಿಕೊಳ್ಳುವಂತಾಗಲಿದೆ . ಅಂತರ್ಜಲದ ಮಟ್ಟವನ್ನು ಹೆಚ್ಚಳ ಮಾಡಿಕೊಳ್ಳಲೇಬೇಕಾದ  ಅನಿವಾರ್ಯತೆ ಎಲ್ಲರ ಪಾಲಿಗಿದೆ. ಊರಿಗೊಂದು ಬಾವಿ ಹಾಗೂ ಆ ಬಾವಿಯೊಂದಿಗಿನ ಆಪ್ತ ಭಾವ ಸದಾ ಕಾಡುವುದು. ಸಮಯ ಕಳೆದಿದೆ ಹೊಸತನಕ್ಕೆ ನಾವೆಲ್ಲಾತೆರೆದುಕೊಂಡರೂ   “ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ ?”

– ಸರಿತಾ ಮಧು, ನಾಗೇನಹಳ್ಳಿ

20 Responses

 1. ಮಾಂತೇಶ್ ಬಂಜೇನಹಳ್ಳಿ says:

  ಸವಿಸ್ತಾರವಾಗಿಸಿದ್ದೀರಿ. ಅಭಿವಂದನೆಗಳು.

 2. ಮನಸುಳಿ ಮೋಹನ್ says:

  ಸ್ಪಷ್ಟ ಅನುಭವದ ನಿಮ್ಮ ಈ ಲೇಖನ ನನ್ನ ಮನಸ್ಸನ್ನು ಹಳೆಯ ದಿನಗಳತ್ತ ಹೊರಳುವಂತೆ ಮಾಡಿತು.. ಓದುವಾಗ ಏನೋ ವಿವರಿಸಲಾಗದ ಒಂದು ಭಾವ ಸುಳಿದು ಹೋಯಿತು..

 3. Savithri bhat says:

  ಮಧುರ ಹಾಗೂ ನೋವಿನ ನೆನಪುಗಳನ್ನು ಸುಂದರವಾಗಿ ನಿರೂಪಿಸಿದ್ದೀರಿ..ಧನ್ಯವಾದಗಳು

 4. ನಾಗರತ್ನ ಬಿ. ಅರ್. says:

  ನೆನಪಿನಂಗಳದಿಂದ ಹೆಕ್ಕಿ ತಂದ ಬಾವಿಯೊಳಗಿಂದ ಬೋರ್ವೆಲ್ ನವರೆಗಿನ ಲೇಖನ ಚಿಂತನೆ ಗೆ ಹಚ್ಚುವಂತೆ ಮಾಡಿದೆ.ಧನ್ಯವಾದಗಳು ಮೇಡಂ.

 5. ಶ‌ಶಿಕಲ.ಎನ್ says:

  ಸಹಜ ಸುಂದರವಾದ ಬಾಲ್ಯದ ನೆನಪುಗಳು.

 6. B C Narayana murthy says:

  ಬಾವಿ ನೀರು ಸೇದಿ ತೊಟ್ಟಿ ತುಂಬಿಸಿ ಖುಷಿ ಪಡುವ ಕಾಲ ಒಂದಿತ್ತು, ಈಗಲೂ ಎಷ್ಟೋ ಮನೆಗಳಲ್ಲಿ ಬಾವಿಯನ್ನು ಕಾಪಾಡಿಕೊಂಡಿದ್ದಾರೆ, ಲೇಖನ ಚೆನ್ನಾಗಿದೆ.

 7. ನಯನ ಬಜಕೂಡ್ಲು says:

  ಸೊಗಸಾಗಿದೆ ಬರಹ. ಕಾಲ ಬದಲಾಗಿದ್ದರೂ, ಪರ್ಯಾಯ ವ್ಯವಸ್ಥೆ ಗಳು ಇದ್ದರೂ ಬಾವಿ ನೀರಿನ ರುಚಿಗೆ ಸಾಟಿ ಬೇರೆ ಯಾವುದೂ ಇಲ್ಲ

 8. Anonymous says:

  ತುಂಬಾ ಸೊಗಸಾಗಿದೆ ಮೇಡಂ.. ನಿಮ್ಮ ಬರಹ ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಹಾಗೆಯೇ ನೀರಿನ ಸಂರಕ್ಷಣೆಯ ಅಗತ್ಯತೆಯನ್ನು ಇಳಿಸಿದ್ದೀರಿ..

 9. dharmanna dhanni says:

  ಅರ್ಥಪೂರ್ಣವಾದ ಬರಹ. ಧನ್ಯವಾದಗಳು

 10. ಸರಿತಾ ಮಧು says:

  ಎಲ್ಲರಿಗೂ ಧನ್ಯವಾದಗಳು

 11. Natraj says:

  ಪ್ರಕೃತ್ತಿಗೆ ವಿರುದ್ದವಾದ ಜೇವನ,ಮಿತಿಮಿರಿದ ಜನಸಂಖ್ಯೆ. ಅವಶ್ಯಕತೆಗಿಂತ ಹೆಚ್ಚು ಬೇಕುಗಳು ನಮ್ಮ ಜೀವನ ಶೈಲಿಯನ್ನು ಪಿಲ್ಟರ್ ನೀರನ್ನು ಕುಡಿಸುತ್ತಿವೆ. .ಹಿಂದಿನ ಪ್ರಕೃತಿಯೊಟ್ಟಿಗಿನ ಬದುಕು ಸುಂದರವಾಗಿತ್ತು. ಲೇಖನ ಅದ್ಬುತವಾಗಿದೆ.

 12. Hema says:

  ಬಹಳ ಸೊಗಸಾದ ಬರಹ…

 13. . ಶಂಕರಿ ಶರ್ಮ says:

  ಹೌದು.. ಬಾವಿಯೂ ಇನ್ನುಹಳೆ ನೆನಪುಗಳ ಪಟ್ಟಿಗೆ ಸೇರಿಹೋಗಲಿದೆ ಎನ್ನಿಸುತ್ತದೆ..ಸೊಗಸಾದ ಬರಹ ಮೇಡಂ.

 14. R.S. Gajanana Pericharan says:

  ……ದಶಕಗಳಾಚೆ ಹೋಗಿಬಿಟ್ಟಿದ್ದೆ. ಬಹಳ insightful ಅರ್ಥಪೂರ್ಣ ಬರಹ…ಧನ್ಯವಾದಗಳು

 15. ಡಾ.ಕೃಷ್ಣಪ್ರಭ says:

  ಚಂದದ ಲೇಖನ…ಬಾವಿ…ಬೋರ್ ವೆಲ್, ನಳ್ಳಿ…..ಈಗಂತೂ ಬಾವಿ ಇದ್ದರೂ ಅದರಲ್ಲಿ ಕಲುಷಿತ ನೀರು….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: