‘ಜೀವನ’ವೆನ್ನುವ ನೀರು.

Share Button

ಹಳ್ಳಿಗಳಲ್ಲಿ ಶುದ್ಧನೀರಿನ ಒಂದು ಪ್ರಮುಖ ಆಶ್ರಯ ಅಂದರೆ ಬಾವಿ. ನೀರು ಜೀವನಾಧಾರ ವಾಗಿರುವುದರಿಂದಲೇ ಅದಕ್ಕೆ ‘ಜೀವನ’ ಎಂಬ ಹೆಸರೂ ಇದೆ.ಕೆರೆಯನ್ನು ಕಟ್ಟಿಸುವದು, ಬಾವಿಯನ್ನು ತೋಡುವುದು -ಇವೆಲ್ಲ ಪುಣ್ಯ ಕಾರ್ಯಗಳು ಎಂಬುದಾಗಿ ಶಾಸನಗಳು ,ನಮ್ಮ ಕಾವ್ಯಗಳು ಸಾರುತ್ತವೆ. ಬಹೂಪಯೋಗಿಯಾದ ಕೆರೆಯನ್ನು ಕಟ್ಟಿಸು ,ಬಾವಿಯನ್ನು ನಿರ್ಮಿಸು, ದೇವಾಲಯವನ್ನು ಕಟ್ಟು, ಸೆರೆಯಲ್ಲಿ ಸಿಕ್ಕಿದ ಅನಾಥರನ್ನು ಬಿಡಿಸು – ಎಂದಿತ್ಯಾದಿ ಪುಣ್ಯಕಾರ್ಯಗಳನ್ನು ಕೈಗೊಳ್ಳುವಂತೆ ತಾಯಿಯಾದ ಸಿಂಗಾಂಬಿಕೆ ತನ್ನ ಮಗನಾದ ಲಕ್ಷ್ಮೀಧರ ಶಿಶುವಾಗಿರುವಾಗ ಅವನಿಗೆ ಹಾಲು ನೀಡುತ್ತ ಕಿವಿಯಲ್ಲಿ ಉಸುರಿದಳೆಂದು ವರ್ಣಿಸುವ ಪದ್ಯ ವಿಜಯನಗರದ ಇಮ್ಮಡಿ ದೇವರಾಯನ ಪ್ರಧಾನಿ ಲಕ್ಷ್ಮೀಧರನ ಶಾಸನದಲ್ಲಿ ಬರುತ್ತದೆ.

ಊರಿನ ಜೀವನದಲ್ಲಿ ಇಂತಹ ನೀರಿನ ಆಶ್ರಯಗಳು ಪ್ರಮುಖ ಪಾತ್ರವಹಿಸುತ್ತಿದ್ದವು..ಒಂದು ರೀತಿಯಲ್ಲಿ ಬಾವಿ ಅಥವಾ ಕೆರೆಗಳು ಊರಿನ ಹೆಂಗಳೆಯರು ಪರಸ್ಪರ ಭೇಟಿಯಾಗಿ ಸುಖದು:ಖಗಳನ್ನು ಹಂಚಿಕೊಳ್ಳುವ ತಾಣವೂ ಆಗಿತ್ತು. ‘ಊರಿಗೆ ಬಂದವಳು ನೀರಿಗೆ ಬಾರದೆ ಇರುತ್ತಾಳೆಯೇ‘ ಎಂಬ ಗಾದೆಮಾತು ಹಾಗೆಯೇ ಹುಟ್ಟಿಕೊಂಡಿರಬೇಕು. ಹೆಣ್ಣಿನ ಭಾವಕೋಶದಲ್ಲಿ ಬಾವಿಗೆ ಒಂದು ಪ್ರತ್ಯೇಕ ಸ್ಥಾನವಿತ್ತು. ಹಿಂದೆ ಜನಪದರಲ್ಲಿ ಋತುಮತಿಯಾದ, ಹಾಗೆಯೇ ಪ್ರಸವಿಸಿದ ಹೆಣ್ಣುಮಗಳನ್ನು ‘ಬಾವಿ ಮುಟ್ಟಿಸುವುದು’ ಎಂಬ ಆಚರಣೆಯ ಮೂಲಕ ಆಕೆ ಸೂತಿಕವನ್ನು ಕಳೆದು ಪರಿಶುದ್ಧಳಾದಳು ಎಂದು ಸಾರಲಾಗುತ್ತಿತ್ತು. ಆ ದಿನ ಆಕೆ ಬಾವಿಯಿಂದ ಒಂದು ಕೊಡ ನೀರನ್ನು ತರಬೇಕಿತ್ತು. ಬಾವಿ ನೀರಿನ ಕುರಿತಾದ ಪಾವಿತ್ರ್ಯದ ನಂಬಿಕೆಯ ಹಿನ್ನಲೆ ಈ ಆಚರಣೆಯ ಹಿಂದೆ ಇದೆ. ಹಾಗೆ ನೋಡಿದರೆ ನೀರು ಎನ್ನುವುದೇ ನಮ್ಮ ಜನಪದರಲ್ಲಿ ಅನೇಕಾನೇಕ ನಂಬಿಕೆಗಳನ್ನು, ಆಚರಣೆಗಳನ್ನು ಹುಟ್ಟುಹಾಕಿದ ಅದ್ಭುತವಾದ ಸಂಗತಿ.ಅದಿರಲಿ. ಪ್ರಸ್ತುತ ಬರಹವನ್ನು ಬಾವಿಗೆ ಸಂಬಂಧಿಸಿ ನನ್ನ ನೆನಪುಗಳಿಗೆ ಸೀಮಿತಗೊಳಿಸಬೇಕಾಗಿದೆ.

ವಿದ್ಯುತ್ ಯಂತ್ರಗಳು , ಪೆಟ್ರೋಲ್ ಡೀಸೆಲ್ ನಿಂದ ನಡೆಸುವ ಪಂಪುಗಳು ಇನ್ನೂ ಹಳ್ಳಿಗಳನ್ನು ತಲುಪದ ಕಾಲವದು. ಮನೆಯಲ್ಲಿ ಅಡುಗೆ ಕೋಣೆಯ ಅಗತ್ಯಗಳಿಂದ ಹಿಡಿದು ದನಕರುಗಳ ಬಾಯಾರಿಕೆ, ಸ್ನಾನ-ಎಲ್ಲದಕ್ಕೂ ಬಾವಿಯಿಂದ ನೀರು ಸೇದಿಯೇ ತುಂಬಿಕೊಳ್ಳಬೇಕಾಗಿತ್ತು. ನಮ್ಮ ಮನೆಯಲ್ಲಿ ಅಂಗಳದ ಹತ್ತಿರವಿರುವ ಬಾವಿಯಿಂದ ಈ ನೀರನ್ನು ಸೇದುವ ಕಾರ್ಯಕ್ರಮ ಬೆಳಗ್ಗೆ ಮತ್ತು ಸಾಯಂಕಾಲ ಸಾಮಾನ್ಯವಾಗಿ ಜರಗುತ್ತಿತ್ತು. ಪೂಜೆಗೆ ಅಗತ್ಯವಿರುವ ನೀರನ್ನು ಅಪ್ಪ, ದೊಡ್ಡಪ್ಪ. ಅಣ್ಣ -ಹೀಗೆ ಗಂಡುಸರು ಸೇದುತ್ತಿದ್ದರೆ ಮಿಕ್ಕ ಅಗತ್ಯಗಳಿಗೆ ತುಂಬಿಕೊಳ್ಳುವಂಥದ್ದು ಅಕ್ಕಂದಿರ ದಿನಚರಿಯ ಭಾಗವಾಗಿತ್ತು. ಅಕ್ಕಂದಿರು ಜೊತೆಯಾಗಿ ನೀರನ್ನು ಸೇದುತ್ತಿದ್ದ ದೃಶ್ಯ ನನ್ನ ಮನದಲ್ಲಿ ಸ್ಥಿರವಾಗಿದೆ. ಇದಲ್ಲದೆ ನಮ್ಮ ಮನೆಯ ಕಾಂಪೌಂಡ್ ( ನಮ್ಮ ಸ್ಥಳೀಯ ಭಾಷೆಯಲ್ಲಿ ಅದನ್ನು ದರೆ ಎಂದು ಸರಳವಾಗಿ ಹೇಳುತ್ತಿದ್ದರು. ಅದು ಕೇವಲ ಕಲ್ಲುಗಳನ್ನು ಪೇರಿಸಿಟ್ಟ ರಚನೆ ಅಷ್ಟೇ.)ನಿಂದ ಹೊರಗೆ ಒಂದು ‘ಕಲ್ಲಮರಿಗೆ ‘ಇತ್ತು ( ಅಂದರೆ ಕಲ್ಲಿನಿಂದ ನಿರ್ಮಿಸಿದ ಟಾಂಕಿ). ಇದರಲ್ಲಿ ನೀರು ಸದಾ ತುಂಬಿಕೊಂಡಿರುವಂತೆ ಅವರು ನೋಡಿಕೊಳ್ಳುತ್ತಿದ್ದರು. ಈ ಟಾಂಕಿಯಿಂದ ನಮ್ಮ ದನಗಳು ಮಾತ್ರವಲ್ಲ ಇತರರ ದನಗಳು ಕೂಡ ಬಂದು ನೀರು ಕುಡಿಯುತ್ತಿದ್ದವು. ಒಮ್ಮೊಮ್ಮೆ ಬೇಸಿಗೆಯಲ್ಲಿ ಒಟ್ಟಿಗೇ ಸುಮಾರು ದನಗಳು ನೀರು ಕುಡಿಯಲು ಬಂದಾಗ ಅಕ್ಕಂದಿರಿಗೆ ಸಾಕುಬೇಕಾಗುತ್ತಿತ್ತು. ಮಧ್ಯಾಹ್ನ ಊಟ ಮಾಡಲು ಕುಳಿತಾಗ ದನಗಳು ಬಂದು ನೀರು ಖಾಲಿಯಾದದ್ದು ಗೊತ್ತಾದ ಕೂಡಲೇ ಊಟ ಅರ್ಧದಲ್ಲೇ ಬಿಟ್ಟು ನೀರನ್ನು ಸೇದಿ ತುಂಬಿದ ಸಂದರ್ಭಗಳೂ ಇದ್ದವು. ಹಾಗೆಂದು ಆ ಪದ್ಧತಿ ಮಾತ್ರ ಹಾಗೆಯೇ ಮುಂದುವರಿದಿತ್ತು. ಅಕ್ಕಂದಿರಿಗೆ ಅವರ ಮುಟ್ಟಿನ ದಿನಗಳಲ್ಲಿ ಮಾತ್ರ ಇದರಿಂದ ವಿನಾಯಿತಿ. ಯಾಕೆಂದರೆ ಅವರು ಬಾವಿಯನ್ನು ಮುಟ್ಟುವಂತಿರಲಿಲ್ಲ.

ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ಹೊಲದಲ್ಲಿ ನಾವು ಮತ್ತು ನಮ್ಮ ಆಳುಗಳು ತರಕಾರಿ ಬೆಳೆಯುತ್ತಿದ್ದೆವು. ಇದಕ್ಕೆ ಅಗತ್ಯವಾದ ನೀರನ್ನು ಅಲ್ಲಿಯೇ ಇದ್ದ ಬಾವಿಯಿಂದ ಏತದ ಮೂಲಕವೇ ತೆಗೆದುಕೊಂಡು ಅದನ್ನು ಚಿಕ್ಕ ಹೊಂಡಗಳಿಗೆ ಹಾಯಿಸಿ ತುಂಬಿಕೊಂಡು ಬಳಿಕ ಮಣ್ಣಿನ ಕೊಡಗಳಿಂದ ಗಿಡಗಳಿಗೆ ಉಣಿಸಲಾಗುತ್ತಿತ್ತು. ಬಾವಿಗೆ ಅಡ್ಡವಾಗಿ ಗಟ್ಟಿಯಾದ ಮರದ ಕಾಂಡಗಳನ್ನು ಹಾಕಿ ಅದನ್ನು ದೃಢವಾಗಿ ಬಲಿದು ಬಳಿಕ ಅದರ ಮೇಲೆ ನಿಂತುಕೊಂಡು ‘ಈಂದು’ ಅಥವಾ ಈಚಲ ಮರದ ಬೊಡ್ಡೆಯಿಂದ ತಯಾರಿಸಲಾದ ‘ಜೊಟ್ಟೆ’ ಎಂದು ನಾವು ಸ್ಥಳೀಯವಾಗಿ ಕರೆಯುತ್ತಿದ್ದ ಸಾಧನದಿಂದ ನೀರನ್ನು ನಮ್ಮ ದೊಡ್ಡಪ್ಪ ಅಥವಾ ಅಣ್ಣ ಮೊಗೆಯುತ್ತಿದ್ದರು. ಅದು ತುಂಬಿಕೊಂಡ ನೀರು ಬಾವಿಯಿಂದ ಮೇಲಕ್ಕೆ ಬರಲು ಸಹಾಯಕವಾಗುವಂತೆ ಅಪ್ಪ, ಮತ್ತು ನಮ್ಮ ಕೆಲಸದ ಆಳು ಮಾಲಿಂಗ -ಅವರು ಜೊಟ್ಟೆಯನ್ನು ಕಟ್ಟಿದ ಗಳುವಿಗೆ ಗಟ್ಟಿಯಾಗಿ ಬಿಗಿದು ಇಳಿಬಿಟ್ಟ ಹಗ್ಗಗಳನ್ನು ಹಿಡಿದು ಏಕಕಾಲದಲ್ಲಿ ಎಳೆದು ಜಿಗಿಯುತ್ತಿದ್ದರು. .ಹೀಗೆ ಮೇಲಕ್ಕೆ ಬಂದ ಜೊಟ್ಟೆಯಲ್ಲಿನ ನೀರನ್ನು ದೊಡ್ಡಪ್ಪ ಮೊಗಚುತ್ತಿದ್ದರು. ಮತ್ತೆ ಜೊಟ್ಟೆಯನ್ನು ಬಾವಿಗೆ ಇಳಿಸಲಾಗುತ್ತಿತ್ತು. .ಇದು ಪುನರಾವರ್ತನೆಯಾಗಿ ಅಗತ್ಯವಿದ್ದಷ್ಟು ನೀರನ್ನು ಬಾವಿಯಿಂದ ಮೇಲಕ್ಕೆ ತಂದ ಬಳಿಕ ನೀರು ಹೊಯ್ಯುವ ಕೆಲಸ. ಹೀಗೆ ಒಮ್ಮೆಲೆ ಮಗುಚಿಕೊಂಡ ನೀರು ಕಣಿಯಲ್ಲಿ ಹೋಗಿ ಸ್ವಲ್ಪವೇ ದೂರದಲ್ಲಿ ನಿರ್ಮಿಸಲಾದ ಚಿಕ್ಕಚಿಕ್ಕಹೊಂಡಗಳನ್ನು ತುಂಬಿಕೊಳ್ಳುತ್ತಿತ್ತು. ಈ ಸೋಜಿಗವನ್ನು ಆಗ ಚಿಕ್ಕವರಾಗಿದ್ದ ನಾನೂ ಮತ್ತು ತಮ್ಮ ನೋಡಿ ಸಂಭ್ರಮಿಸುತ್ತಿದ್ದೆವು. ಆದರೆ ದೊಡ್ಡಪ್ಪ ತಮ್ಮ ಎರಡೂ ಕಾಲುಗಳನ್ನು ಬಾವಿಗೆ ಅಡ್ಡವಾಗಿ ಹಾಕಿದ ಅಡ್ಡಗಳಲ್ಲಿ ಊರಿ ನೀರು ಮೊಗಚುವುದನ್ನು ನೋಡುತ್ತಿದ್ದರೆ ‘ಅಬ್ಬಾ ಎಲ್ಲಿಯಾದರೂ ಕಾಲುತಪ್ಪಿ ಬಾವಿಗೆ ಬಿದ್ದು ಬಿಟ್ಟರೆ ‘ಎಂದು ನಮಗೆ ಆತಂಕವಾಗುತ್ತಿತ್ತು. ಆದರೆ. ಪುಟ್ಟ ಪುಟ್ಟ ತಂಬಿಗೆಗಳಲ್ಲಿ ಹೊಂಡದಿಂದ ನೀರು ಮೊಗೆದು ತರಕಾರಿ ಗಿಡಕ್ಕೆ ನೀರು ಹನಿಸಲು ನಮಗೂ ಖುಷಿಯಾಗುತ್ತಿತ್ತು.

ಏತ ನೀರಾವರಿ, ಸಾಂದರ್ಭಿಕ ಚಿತ್ರ (ಅಂತರ್ಜಾಲ ಕೃಪೆ)

ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಬತ್ತಿದರೆ ದೂರದ ಸುರಂಗದಿಂದ ಮನೆಯ ಅಗತ್ಯಗಳಿಗೆ ನೀರನ್ನು ತರಬೇಕಿತ್ತು ( ಸುರಂಗ-ನೀರನ್ನು ಪಡೆಯುವುದಕ್ಕಾಗಿ ಭೂಮಿಗೆ ಸಮಾನಾಂತರವಾಗಿ ನಮ್ಮ ಹಿರಿಯರು ಕೊರೆದ ಸುರಂಗದಲ್ಲಿ ಸ್ಫಟಿಕದಂತಹ ನೀರು ಲಭ್ಯವಿತ್ತು. ಆ ನೀರು ಹರಿದು ಬಂದು ಕೆರೆಯಲ್ಲಿ ಸಂಗ್ರಹಗೊಂಡರೆ ಅದನ್ನು ಅಡಕೆಯ ಗಿಡಗಳಿಗೆ ಚೇಪುವ ವ್ಯವಸ್ಥೆ ಇತ್ತು. ಈ ಸುರಂಗ ತೋಡುವ ಸಾಹಸ ಸಣ್ಣದೇನಲ್ಲ. ಮತ್ತು ಇದು ಭೂಗರ್ಭವನ್ನು ಸೀಳುವ ಬೋರ್ ವೆಲ್‌ಗಿಂತ ಅತ್ಯಂತ ಪರಿಸರ ಸ್ನೇಹಿಯಾಗಿರುವ ವಿದ್ಯೆ.). ಚಿಕ್ಕ ತಂಬಿಗೆಗಳನ್ನು ಹಿಡಿದು ಹಿರಿಯರೊಂದಿಗೆ ಸುರಂಗಕ್ಕೆ ಹೋದರೆ ಅಲ್ಲಿಯೇ ನಮ್ಮ ಸ್ನಾನದ ಕಾರ್ಯಕ್ರಮ ನಡೆಯುತ್ತಿತ್ತು. ಬಳಿಕ ನಾವೂ ಸಹ ನಮ್ಮ ನಮ್ಮ ತಂಬಿಗೆಗಳಲ್ಲಿ ನೀರನ್ನು ತುಂಬಿ ತರುತ್ತಿದ್ದ ನೆನಪು ಹಸಿರಾಗಿದೆ.ಮಳೆಗಾಲದಲ್ಲಿ ಮೈದುಂಬಿಕೊಂಡ ಬಾವಿಯಲ್ಲಿ ನೀರು ನೀಲಿಯಾಗಿ ಶೋಭಿಸುತ್ತಿತ್ತು. ಕೆಲವೊಮ್ಮೆ ಬಾವಿಯಿಂದ ನೀರು ತುಂಬಿ ತುಳುಕಿ ಅದು ಪುಟ್ಟತೊರೆಯಾಗಿ ಹರಿಯುತ್ತಿದ್ದುದನ್ನು ನೋಡುವುದೇ ಒಂದು ಸೊಗಸು. ಸುತ್ತ ಕಟ್ಟೆಯಿಲ್ಲದ ನಮ್ಮ ತೋಟದ ಬಾವಿಯಲ್ಲಿ ನೀರು ತುಂಬಿಕೊಂಡಾಗ ಚಿಕ್ಕಪ್ಪನ ಮಗ ಅಣ್ಣ ‘ಧುಡುಂ’ ಎಂದು ಧುಮುಕಿ ನಾನಾ ಭಂಗಿಗಳಲ್ಲಿ ಈಜುತ್ತಿದ್ದುದು, ನಮಗೆ ಅತ್ಯಂತ ಖುಷಿಯ ನೆನಪು.

ಇನ್ನು ಶಾಲೆಯ ನೆನಪನ್ನು ಕೆದಕಿದರೆ ನಾನು ಓದುತ್ತಿದ್ದ ಶಾಲೆಯ ಪರಿಸರದಲ್ಲಿ ಸ್ವಲ್ಪ ಆಳವಿರುವ ಒಂದು ಬಾವಿ ಇತ್ತು ಇದರಿಂದ ನೀರು ಸೇದಿ ಕುಡಿಯುವ ನೀರಿನ ಪಾತ್ರೆಗೆ ತುಂಬುವುದು ಸೀನಿಯರ್ ವಿದ್ಯಾರ್ಥಿಗಳ ಕರ್ತವ್ಯವಾಗಿತ್ತು .ಹಾಗೆ ಏಳನೆ ಕ್ಲಾಸಿಗೆ ತಲಪುವಾಗ ನನಗೂ ಇದರ ಅನುಭವವಾಯಿತು. ನಾವು ಇಬ್ಬಿಬ್ಬರು ಜೊತೆಯಾಗಿ ನೀರನ್ನು ಸೇದುವುದು ರೂಢಿ. ಇದಲ್ಲದೆ ಶಾಲೆಯ ಹೂಗಿಡಗಳಿಗೂ ಅಧ್ಯಾಪಕರು ಸಿದ್ಧಪಡಿಸಿದ ವೇಳಾಪಟ್ಟಿಯಂತೆ ನೀರನ್ನು ಸೇದಿ ಹನಿಸಬೇಕಿತ್ತು. ‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುತ್ತಾರಲ್ಲ. ಅಂತಹ ಒಂದು ಅನುಭವವನ್ನು ನಾನಿಲ್ಲಿ ಹಂಚಿಕೊಳ್ಳಬೇಕು. ಶಾಲಾದಿನಗಳಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಮಾಡುವುದು, ‘ಠೂ ಬಿಡುವುದು’ ಬಹುತೇಕ ಎಲ್ಲರ ಅನುಭವಕ್ಕೂ ಬಂದಿರಬಹುದು. ನಮ್ಮ ತರಗತಿಯಲ್ಲಿದ್ದ ನಮ್ಮ ಸಹಪಾಠಿಯೊಬ್ಬಳು ವಯಸ್ಸಿನಲ್ಲಿ ಒಂದೆರಡು ವರ್ಷಕ್ಕೆ ದೊಡ್ಡವಳಿದ್ದಿರಬೇಕು.ಆಕೆ ಉಳಿದವರ ಮೇಲೆ ಯಾಜಮಾನ್ಯವನ್ನು ಸ್ಥಾಪಿಸುತ್ತಿದ್ದಳು. ಅವಳು ಹೇಳಿದಂತೆ ಉಳಿದವರು ಕೇಳಬೇಕಿತ್ತು. ಅವಳಿಗೆ ಹೂ ತಂದುಕೊಡದೆ ಉಳಿದವರು ಮುಡಿಯುವಂತಿಲ್ಲ. ಆಕೆ ಕರೆದಲ್ಲಿಗೆ ಹೋಗಬೇಕು. ಎಲ್ಲಿಯಾದರೂ ಇಂತಹ ವಿಷಯಗಳಲ್ಲಿ ಉಲ್ಲಂಘನೆಯಾದರೆ ಆಂಥವಳಲ್ಲಿ ಕೋಪ ಮಾಡಬೇಕು. ಅಂದರೆ ಎಲ್ಲರೂ ಅವಳಲ್ಲಿ ‘ಠೂ’ ಬಿಡಬೇಕಿತ್ತು. ಹೀಗೆ ಒಮ್ಮೆ ನನ್ನ ಸರದಿಯೂ ಬಂತು. ವೇಳಾಪಟ್ಟಿಯ ಪ್ರಕಾರ ಅಂದು ನನಗೂ ನೀರು ಸೇದಿ ಹಾಕುವ ಕರ್ತವ್ಯವಿತ್ತು. ಆದರೆ ‘ಠೂ ‘ಬಿಟ್ಟಕಾರಣ ಯಾರೂ ನನ್ನ ಜೊತೆ ಸೇರುತ್ತಿಲ್ಲ. ಕೊಡವನ್ನು ಇಳಿಸಿಯಾಯಿತು. ನೀರು ತುಂಬಿಯೂ ಆಯಿತು. ಒಬ್ಬಳೇ ನೀರು ಸೇದುವ ಪಾಡು. ನಾನು ಒಂದಿಷ್ಟು ಮೇಲಕ್ಕೆ ಎಳೆದರೆ ಮತ್ತೆ ಅರ್ಧದಷ್ಟು ಕೆಳಗೆ ಹೋದಂತೆ ಅನಿಸುತ್ತಿತ್ತು. ಮಾತ್ರವಲ್ಲ ನಾನು ಹಾಗೆ ಕಷ್ಟಪಟ್ಟು ಸೇದುವುದನ್ನು ‘ಠೂ’ ಬಿಟ್ಟವರೆಲ್ಲ ನಿಂತು ನೋಡುತ್ತಿದ್ದಾರೆ!. ಅಷ್ಟರಲ್ಲಿ ತಾಂಬೂಲ ಮೆಲ್ಲುವ ಅಭ್ಯಾಸವಿದ್ದ ನಮ್ಮ ಅಧ್ಯಾಪಕರೊಬ್ಬರು ಉಗುಳುವುದಕ್ಕಾಗಿ ಹೊರಗೆ ಬಂದವರು ನಾನು ಒಬ್ಬಳೇ ನೀರು ಸೇದಲು ಕಷ್ಟಪಡುವುದನ್ನೂ ಉಳಿದವರೆಲ್ಲ ಅದರ ಚಂದ ನೋಡುವುದನ್ನೂ ನೋಡಿಬಿಟ್ಟರು. ಅವರು ಕೂಡಲೇ ಈ ಬಗ್ಗೆ ವಿಚಾರಿಸಿ ಅವರಿಗೆ ಚೆನ್ನಾಗಿ ಛೀಮಾರಿ ಹಾಕಿದರು. ಬಳಿಕ ಅಧ್ಯಾಪಕರ ಕೊಠಡಿಗೆ ಕರೆದು ರಾಜಿಮಾಡಿಸಿ ಹಾಗೆ ಮಾಡದಂತೆ ಬುದ್ಧಿ ಹೇಳಿದರು. ಆದರೆ ಆಕೆ ಮಾತ್ರ ಆ ಚಾಳಿಯನ್ನು ಮತ್ತೆಯೂ ಮುಂದುವರಿಸಿದ್ದಳು. ನನಗೆ ನಾನು ಅಜ್ಜಿಯಿಂದ ಕೇಳಿದ ಕತೆಗಳಲ್ಲಿ ಬರುವ ಹಾಗೆ ಯಾವ ಮಾಯಕದಲ್ಲಿ ಪಾರ್ವತೀಸಮೇತನಾಗಿ ಶಿವ ಪ್ರತ್ಯಕ್ಷನಾಗಿ ಇವಳಿಂದ ಪಾರಾಗಿ ಬಿಡುತ್ತೇನೋ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು. ಆದರೆ ಹಾಗೇನೂ ಆಗಲಿಲ್ಲ!.

ಏಳನೆ ತರಗತಿಯ ವಾರ್ಷಿಕ ಪರೀಕ್ಷೆ ಮುಗಿದಮೇಲೆ ಬೀಳ್ಕೊಡುವ ಸಮಾರಂಭವಿರುತ್ತದಲ್ಲ. ನನಗೆ ಕಲಿತಂತಹ ಶಾಲೆಯನ್ನೂ ಗುರುಗಳನ್ನೂ ಬಿಟ್ಟುಹೋಗುವದು ಬೇಸರವೆನಿಸಿದರೂ ಇವಳಿಂದ ಪಾರಾಗುತ್ತೇನಲ್ಲವೆನಿಸಿ ಸಂತೋಷವಾಗಿತ್ತು. ಬಾವಿಯ ಕುರಿತು ಹೇಳಹೊರಟು ಪುರಾಣ ಇಷ್ಟುದ್ದ ಬೆಳೆಯಿತು. ಕ್ಷಮಿಸಿ.
ಮುಗಿಸುವ ಮುನ್ನ ಹೇಳಲೇಬೇಕಾದ್ದು ಸ್ವಂತ ಬಾವಿಯನ್ನೂ ಹೊಂದಿರದ ಬಾವಿಯನ್ನು ಮುಟ್ಟಬಾರದೆಂಬ ಕಾರಣಕ್ಕೆ ನೀರನ್ನು ಇತರ ಅದೃಷ್ಟಶಾಲಿಗಳಿಂದ ಯಾಚಿಸಿಯೇ ಪಡೆಯಬೇಕಾಗಿದ್ದ ನಮ್ಮದೇ ಸೋದರ ಸೋದರಿಯರ ಬಗ್ಗೆ. ಬಹು: ನಾನು ಇದನ್ನು ವಿವರಿಸುವ ಅಗತ್ಯವಿಲ್ಲ. ಸರಕಾರಿ ಬಾವಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾದ ಮೇಲೆ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗಿದೆಯೆನ್ನಬಹುದು. ಸುದೀರ್ಘಕಾಲ ಈ ಸಮುದಾಯ ನೀರಿಗಾಗಿ ಅನುಭವಿಸಿದ ಸಂಕಟ ,ನೋವುಗಳನ್ನು ನಾನು ಊಹಿಸಬಲ್ಲೆ. ಅವರ ನೋವನ್ನು ಎಲ್ಲರಿಗಿಂತ ಚೆನ್ನಾಗಿ ಅರ್ಥೈಸಿಕೊಂಡ ಗಾಂಧೀಜಿ, ಕುದ್ಮಲ್ ರಂಗರಾಯರು, ಅಂಬೇಡ್ಕರ್- ಇವರೆಲ್ಲರ ನೆನಪಾಗಿ ಕಣ್ಣುತುಂಬಿಕೊಳ್ಳುತ್ತದೆ.

ಮಹೇಶ್ವರಿ.ಯು

9 Responses

 1. ನಾಗರತ್ನ ಬಿ. ಅರ್. says:

  ಜೀವನ ಎನ್ನುವ ನೀರು ಅರ್ಥಪೂರ್ಣ ವಾದ ಲೇಖನ ಬಹಳ ಆಪ್ತವಾಗಿ ಬರೆದಿದ್ದೀರಿ ಮೇಡಂ ಧನ್ಯವಾದಗಳು.

 2. ನಯನ ಬಜಕೂಡ್ಲು says:

  ಬಾವಿಯ ಕುರಿತಾದ ಬರಹ ಅಪರೂಪದ ವಿಚಾರಗಳನ್ನು ಒಳಗೊಂಡಿದೆ.

 3. B C Narayana murthy says:

  ಬಾಲ್ಯದ ಬಾವಿಯೊಂದಿಗಿನ ಅನುಭವವನ್ನು ಚೆನ್ನಾಗಿ ಹಂಚಿಕೊಂಡಿದ್ದೀರಿ

 4. Anasuya M R says:

  ಮನ ಮುಟ್ಟುವ ಬರಹ

 5. Hema says:

  ಬಾವಿಯ ಜೊತೆಗೆ ಥಳಕು ಹಾಕಿದ ನಿಮ್ಮ ಬಾಲ್ಯದ ನೆನಪುಗಳ ಮೆರವಣಿಗೆ…ಚೆನ್ನಾಗಿದೆ.

 6. . ಶಂಕರಿ ಶರ್ಮ says:

  ತಮ್ಮ ಗೆಳತಿಯ ಕಾರುಬಾರು ನೋಡಿ ನಿಜಕ್ಕೂ ಬೇಜಾರಾಯ್ತು. ಚಿಕ್ಕಂದಿನ ಸವಿ ನೆನಪುಗಳನ್ನು ತಮ್ಮ ಮನದ ಬಾವಿಯಿಂದ ಮೊಗೆದುಣಿಸಿದ ತಮಗೆ ಧನ್ಯವಾದಗಳು ಮೇಡಂ.

 7. Savithri bhat says:

  ಬಾವಿಯ ಆಳದಿಂದ ಮೊಗೆದ ಸಿಹಿ,ಕಹಿ ನೆನಪುಗಳ ಮಾಲೆ ಬಹಳ ಚೆನ್ನಾಗಿತ್ತು ಮೇಡಂ

 8. ಮಹೇಶ್ವರಿ ಯು says:

  ಎಲ್ಲ ರಿಗೂ ಪ್ರೀತಿಪೂರ್ವಕ ಧನ್ಯವಾದಗಳು

 9. ಬಾಲ್ಯದ ನೆನಪುಗಳೊಂದಿಗೆ ಬೆಸೆದ ನೀರಿನ ಚಿತ್ರಣ ಮನೆ ಮುಟ್ಟುವಂತೆ ಮೂಡಿಬಂದಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: