ನೂರರಲ್ಲಿ ಲಕ್ಷದಷ್ಟು ಸಂತೋಷ

Share Button

ಸಾಮಾನ್ಯವಾಗಿ ಸಣ್ಣಪುಟ್ಟ ಸಹಾಯಗಳನ್ನು ಎಲ್ಲರೂ ಮಾಡುತ್ತಾರೆ, ಆದರೆ ಕೆಲವು ಭಾವುಕ ಅನುಭವಗಳನ್ನು ಹಂಚಿಕೊಳ್ಳಲು ಮನಸು ಬಯಸುತ್ತದೆ, ಹಾಗಾಗಿ ಹಂಚಿಕೊಂಡಿದ್ದೇನೆ. ನನ್ನಾಕೆಯೊಂದಿಗೆ ಆಭರಣಗಳ ಅಂಗಡಿಗೆ ಹೋಗಿದ್ದೆ, ಅಂಗಡಿಯ ಮಾಲೀಕರು ಪರಿಚಯದವರು ಹಾಗಾಗಿ ಹೋದ ವಿಷಯಕ್ಕೆ ಮುಂಚೆ ಕೆಲ ನಿಮಿಷ ಹಾಗೆಯೇ ಮಾತನಾಡುತ್ತ ಕುಳಿತೆ. ಅಷ್ಟರಲ್ಲಿ ಅಂಗಡಿಯಲ್ಲಿ ಖರೀದಿಗೆ ಬಂದಿದ್ದವರಿಗೆ ಅಂಗಡಿಯಲ್ಲಿ ಕೆಲಸ ಮಾಡುವವರು ತೋರಿಸಿದ ವಸ್ತುವಿನ ಬೆಲೆಯನ್ನು ಮಾಲೀಕರು ಅವರಿಗೆ ತಿಳಿಸಿದರು, ಅದಕ್ಕೆ ಅವರುಗಳು ಅಷ್ಟು ಕೊಡಲಾಗುವುದಿಲ್ಲ ಕಡಿಮೆ ಮಾಡಿ ಎನ್ನುತ್ತಿದ್ದರು.

ಆಗ ನಾನು ಅವರ ಕಡೆ ಗಮನ ಹರಿಸಿದೆ, ಹಳ್ಳಿಯಿಂದ ಬಂದಿದ್ದ ಮುಗ್ದ ಬಡ ಜನ ಅನ್ನಿಸಿತು. ಸುಮಾರು ಅರವತ್ತೈದು ದಾಟಿರುವ ಬಿಳಿ ತಲೆ ಕೂದಲಿನ ಹೆಂಗಸು, ಕತ್ತಿನಲ್ಲಿ ಮಾಸಿರಿವ ಬಿಳಿಯ ದಾರ, ಕೈಯಲ್ಲಿ ಹಳೆಯ ಗಾಜಿನ ಬಳೆ ,ಹಳೆಯ ಸೀರೆಯಾದರೂ ಶುದ್ಧವಾಗಿದ್ದ ಸೀರೆ, ನೋಡಿದರೆ ಮಗಳ ಜೊತೆಗೆ ಬಂದಿದ್ದ ತಾಯಿ ಇರಬಹುದು ಎನ್ನಿಸಿತು. ಇನ್ನು ಮಗಳು ಇದ್ದದ್ದರಲ್ಲಿ ಊರಿಗೆ ಬರುವಾಗ ಅಚ್ಚುಕಟ್ಟಾಗಿ ಹೋಗಬೇಕೆಂದೇ ಇರಬಹುದು ಎಣ್ಣೆ ಹಾಕಿ ಬಾಚಿದ ತಲೆ ಜಡೆಯ ಮೇಲ್ಬಾಗದಲ್ಲಿ ಒಂದು ಸೇವಂತಿಗೆ ಹೂ, ಕತ್ತಿನಲ್ಲಿ ಕರಿಮಣಿ ಸರ, ಹಣೆಯಲ್ಲಿ ಕುಂಕುಮ, ಮುಂಗೈನಲ್ಲಿ ಹಳೆಯದು ಎನ್ನಬಹುದಾದ ದಾರ,  ಜೊತೆಗೆ ಗಾಜಿನ ಬಳೆ, ಕಿವಿಯಲ್ಲಿ ಓಲೆ , ಇವರಿಬ್ಬರ ಜೊತೆಗೆ ತನ್ನಪಾಡಿಗೆ ಆಚೀಚೆ ನೋಡುತ್ತಾ, ಕೂರುತ್ತ,  ನಿಲ್ಲುತ್ತಾ ಆಡುತ್ತಿದ್ದ ಐದು ವರುಷದ ಹೆಣ್ಣು ಮಗು, ಇಲ್ಲಮ್ಮ ಇಷ್ಟಕ್ಕೆ ಬರುವುದಿಲ್ಲ ಮಾಲೀಕರು ಎಂದಾಗ ಮತ್ತೆ ನನ್ನ ಮನಸ್ಸು ಆ ವ್ಯವಹಾರದ ಕಡೆಗೆ ತಿರುಗಿತು. ಆಕೆ ನೀಡಿದ್ದ ಹಣದ ಕಡೆಗೊಮ್ಮೆ ನೋಡಿದೆ, ಐನೂರ ಒಂದು ನೋಟಿನ ಮೇಲೆ ನೂರರ ಎರಡು ನೋಟುಗಳಿದ್ದವು.ಈಗ ಮಾಲೀಕರು ಅವರ ಧ್ಯಾನವನ್ನು ಸಂಪೂರ್ಣ ನನ್ನೆಡೆಗೆ ನೀಡಿ ಹೇಳಿ ಸಾರ್ ಎಂದು ಮಾತಿಗಾರಂಭಿಸಿದರು.

ಅಷ್ಟರಲ್ಲಿ ಆಕೆಯ ತಾಯಿ ಆವರು ಕೊಡಕ್ಕಿಲ್ಲ ಬಾವ್ವ ಎಂದು ಹೊರಟು ಬಿಟ್ಟರು, ಅವರು ಬಾಗಿಲ ಬಳಿ ಹೋಗುವಷ್ಟರಲ್ಲಿ ಮಾಲೀಕರು ಇನ್ನು ನೂರು ರೂಪಾಯಿ ಕೊಟ್ಟರೆ ಬರುತ್ತದೆ ಇಲ್ಲದಿದ್ದರೆ ಆಗಲ್ಲ ಎಂದರು, ಅದಕ್ಕೆ ಮಗಳು ಇಲ್ಲ ನಾನು ನೂರು ರೂಪಾಯಿ ಊರಿಗೆ ಹೋಗಲು ಬಸ್ಸಿಗೆ ಇಟ್ಟುಕೊಂಡಿದ್ದೇನೆಂದು ಹೇಳುವಾಗ ಆ ಮುಗ್ದ ಮೊಗದಲ್ಲಿ ಇದನ್ನು ಪಡೆದೇ ಹೋಗಬೇಕೆಂಬ ಆಸೆಯನ್ನು ನೋಡಿ ನನಗೇಕೋ ಕರುಳು ಕಿವುಚಿ ಬಂದಂತಾಯಿತು. ಮಾಲೀಕರಿಗೆ ಸಣ್ಣ ಧನಿಯಲ್ಲಿ ಕೊಟ್ಟು ಬಿಡಿ ಸಾರ್ ನೂರು ರೂಪಾಯಿ ನಾನು ಕೊಡುತ್ತೇನೆ ಎಂದು ಹೇಳಿದೆ, ಅವರು ಅದನ್ನು ಆಕೆಗೆ ನೀಡಲು ಕೆಲಸದವರಿಗೆ ಹೇಳಿದರು, ಏನಿರಬಹುದೆಂದು ಕುತೂಹಲದಿಂದ ನೋಡಿದೆ?, ಸಣ್ಣದೊಂದು ಮೂಗುತಿ!!

ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ

ಆ ಮಗಳು ಆ ಮೂಗುತಿಯನ್ನು ಅಲ್ಲಿಯೇ ಮೂಗಿನ ಮೇಲೆ ಧರಿಸಿದರು, ಮತ್ತು ಹೊರಟರು. ಹೊರಡುವಾಗ ತಾಯಿ ಮಗಳು ಒಬ್ಬರನ್ನೊಬ್ಬರು ನೋಡಿಕೊಳ್ಳುವಾಗ ಅವರ ಮೊಗದಲ್ಲಿ ಕಂಡ ಆ ಸಂತೋಷ ನೋಡಿ ಮನಸ್ಸಿನಲ್ಲಿ ನನಗೂ ತೃಪ್ತಿಯಾದಂತೆನಿಸಿತು.  ನೂರು ರೂಪಾಯಿಯಲ್ಲಿ ಲಕ್ಷ ರೂಪಾಯಿ ಮೌಲ್ಯದ ಆ ನಗು ನನ್ನನ್ನು ವಿಸ್ಮಯಗೊಳಿಸಿತ್ತು.

ಅವರು ಹೋದ ಮೇಲೆ ಮಾಲೀಕರು ಬೇಡವೆಂದು ಹೇಳಿದರೂ ಬಲವಂತವಾಗಿ ನೂರು ರೂಪಾಯಿ ನೀಡಿ ಅವರು ತೆರೆಯಲಿರುವ ಹೊಸ ಅಂಗಡಿಗೆ ಬರುವುದಾಗಿ ಹೇಳಿ ನನ್ನಾಕೆಯೊಂದಿಗೆ ಹೊರಟು ಬಂದೆ. ಎಲ್ಲರಿಗೂ ಕೈಗೆಟಕುವ ವಸ್ತುವಲ್ಲ ಎಂದೇ ಇರಬೇಕು ಚಿನ್ನದ ಮೇಲೆ ವ್ಯಾಮೋಹವಿಲ್ಲ ನನಗೆ ಎನಿಸುತ್ತದೆ. ಚಿನ್ನದ ಸರಕ್ಕಿಂತ ದೇವರ ಹೆಸರಿನ ಕಪ್ಪು ದಾರವೇ ನನ್ನ ಕುತ್ತಿಗೆಗೆ ಆಭರಣವೆನಿಸುತ್ತದೆ.

ನಟೇಶ

10 Responses

 1. ಸುಂದರವಾದ ಅನುಭವ
  ಪರರಿಗೆ ದಾರಿದೀಪವಾಗಿದೆ

 2. padmini says:

  ನನಗೂ ತೃಪ್ತಿಯಾದಂತೆನಿಸಿತು!

 3. ನಾಗರತ್ನ ಬಿ. ಅರ್. says:

  ಮಾನವೀಯತೆ ಮೌಲ್ಯಗಳನ್ನು ಜೀವನದಲ್ಲಿ ಸದಾ ಇರಲೇಬೇಕೆಂಬ ತುಡಿತ ವಿದ್ದವರಿಗೆ ಈ ಸೂಕ್ಷ್ಮ ಅಂಶಗಳು ಗೋಚರವಾಗುತ್ತದೆ ಎಂದು ನಿಮ್ಮ ಲೇಖನ ದಿಂದ ಅರ್ಥವಾಗಿ ಮನಸ್ಸು ತುಂಬಿ ಬಂತು ಧನ್ಯವಾದಗಳು ಸಾರ್.ಅದಕ್ಕೆ ಸ್ಪಂದಿಸುವ ಗುಣ ತುಂಬಾ ಒಳ್ಳೆಯದು ಸಾರ್.

 4. Samatha.R says:

  ಮನ ಮುಟ್ಟಿದ ಬರಹ…ತುಂಬಾ ಚೆನ್ನಾಗಿದೆ

 5. ನಯನ ಬಜಕೂಡ್ಲು says:

  ಬ್ಯೂಟಿಫುಲ್

 6. ಕೆ. ರಮೇಶ್ says:

  ಸುಂದರ ಅನುಭವ ದ ಚಿತ್ರಣ.

 7. Hema says:

  ಬರಹ ಬಹಳ ಇಷ್ಟವಾಯಿತು. ಪರರ ಸಂತಸದಲ್ಲಿ ತಾವೂ ಖುಷಿಪಡುವ ತಮ್ಮ ಹೃದಯವಂತಿಕೆಗೆ ಶರಣು.

 8. . ಶಂಕರಿ ಶರ್ಮ says:

  ನಿಸ್ವಾರ್ಥಸೇವೆಯಿಂದ ಸಿಗುವ ಸಂತಸ ಕೋಟಿ ರೂಪಾಯಿಗಿಂತಲೂ ಮಿಗಿಲು…ಬೆಲೆಕಟ್ಟಲಾಗದು! ಒಳ್ಳೆಯ ಕೆಲಸ ಮಾಡಿದಿರಿ ಸರ್..ಸೊಗಸಾದ ನಿರೂಪಣೆ ಮುದನೀಡಿತು.

 9. Padma Anand says:

  ಜೀವನದಲ್ಲಿ ಸಣ್ಣ ಸಣ್ಣ ಸ್ಪಂದನೆಗಳು ನೀಡುವ ಸಂತಸ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಅನುಭವ ಲೇಖನ

 10. B c n murthy says:

  ಎಲ್ಲರಿಗೂ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: