ಕನ್ನಡ ಸೌರಭ

Share Button

ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದು
ಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡ
ಚಿಗುರುಲೆಗೆ ಸುಣ್ಣ ಲೇಪನ ಮಾಡಿ ಮಲೆನಾಡ ಅಡಕೆ ಜೊತೆ ಮೆದ್ದಾಗ ಮೂಡುವ ಕಡುಕೆಂಪು ಈ ಕನ್ನಡ
ಹಂಸಗಾಮಿನಿ ಬಾಲೆ ಕಸೆ ಲಂಗ ಹಳದಿ ಕುಸುರಿ ಕುಪ್ಪಸ ತೊಟ್ಟು
ಲಜ್ಜೆಯಿಂದ ಬಳ್ಳಿಯಂತೆ ಬಳುಕಿ ನಡೆಯುವಾಗ
ಬರುವ ಗೆಜ್ಜೆಯ ನಾದದಂತೆ ಈ ಕನ್ನಡ

ನೊರೆ ಹಾಲು ಕುಡಿದು ಸವಿನಿದ್ರೆಯಲಿರುವ ಕಂದ
ಕನಸಲಿ ಮೈ ಮರೆತು  ಕೆಂದುಟಿ ಬೀರಿ ನೀಡುವ ಮುಗುಳ್ನಗೆಯಂತೆ ಈ ಕನ್ನಡ
ಬಟಾ ಬಯಲಿನ ನಾಡಿನಲಿ ಮೋಡಗಳ ಚಿತ್ತಾರದ ಆಗಸದ ಕೆಳಗೆ
ಕರಿ ಮಣ್ಣಿನಲಿ ನೇಗಿಲಿನಿಂದ ಗೇಯ್ದ ಸಾಲುಗಳಲಿ ಇಣುಕುವ ಸಣ್ಣ ಮೊಳಕೆಯಂತೆ‌ ಈ ಕನ್ನಡ
ಹಚ್ಚ ಹಸಿರು ಹೊದ್ದ ಮಲೆಗಳ ಹಿನ್ನಲೆಯಲಿ
ಧೋ ಎಂದು ಸುರಿಯುವ ಮಳೆಗೆ ನವಿರಾಗಿ ಕಂಪಿಸುವ ಭತ್ತದ ತೆನೆಯಂತೆ ಈ ಕನ್ನಡ

ಅಗಾಧ ನೀಲ ಜಲರಾಶಿಯ ಮಧ್ಯೆ  ಕಣ್ಣು ಕುಕ್ಕುವ  ರವಿಯ ಕಿರಣಗಳ ಜೊತೆಗೆ ಸ್ಪರ್ಧೆಗೆ ಇಳಿದು
ತುಂಡುಡುಗೆಯ ಧರಿಸಿ ಮೀನು ಬೇಟೆಗೆ ಹೊರಟ ಬೆಸ್ತರ ರಟ್ಟೆಯ ಕಸುವಿನಂತೆ ಈ ಕನ್ನಡ
ಘಂಟೆ ನಾದದಲಿ ತುಂಬಿ ನಂದಾದೀಪಗಳ ಬೆಳಕಲಿ
ಜೀವಂತಿಕೆ ತೋರಿ ಶಾಂತಿ ನೀಡುವ ಮಂಗಳ ಮೂರುತಿಯ ಪ್ರಭೆಯಂತೆ ಈ ಕನ್ನಡ

ಕವಿದ ಕಾರಿರುಳಲಿ ಸುಳಿಯುವ ನಿದ್ದೆಯ ತೊರೆದು
ಗಡಿ ಕಾದು ರಕ್ಷಣೆ ನೀಡುವ ಸೈನಿಕನ ಪುಟ್ಟ ಬೆವರ ಹನಿಯಂತೆ ಈ ಕನ್ನಡ
ಅಸೌಖ್ಯದೀ ಬಳಲಿ ಬದುಕೇ ಬೇಡವೆನಿಸಿದವರ ಬಾಳಲ್ಲಿ
ಆರೋಗ್ಯದ ಭಾಗ್ಯ ನೀಡುವ ವೈದ್ಯರ ಕಿರುನಗೆಯಂತೆ ಈ ಕನ್ನಡ

ತನ್ನೆದೆಯ ಉಸಿರ ಬಸಿದು ಭೂಮಿಯ ಉಳುಮೆ ಮಾಡಿ
ಉಣ್ಣಲು ಅನ್ನ ನೀಡುವ ನೇಗಿಲಯೋಗಿಯ ಪವಿತ್ರ ಕಾಯಕವೇ ಈ ಕನ್ನಡ
ಬರುವ ಕಲಿಕಾರ್ಥಿಗಳ ಮಾತೃ ಪ್ರೇಮದೀ ನೋಡಿ
ತನ್ನ ಸಕಲ ವಿದ್ಯೆಗಳ ಧಾರೆಯೆರೆವ ಗುರುಗಳ ಮಮಕಾರವೇ ಈ ಕನ್ನಡ

ವಿವಿಧ ಯೋಜನೆಗಳ ರೂಪರೇಷೆ ತಯಾರಿಸಿ
ನಿರ್ಮಿತಿಗಳ ಸಾಕಾರಕೆ ಕಾರಣವಾಗಿ ನಗರ ನಾಡುಗಳ ನಿರ್ಮಾಣಕೆ ಶ್ರಮಿಸುವ ಅಭಿಯಂತರರ ಲೇಖನಿಯ ತುದಿಯೇ ಈ ಕನ್ನಡ
ದೈಹಿಕ ಆಯಾಸ ಮರೆತು ದೊರೆಯುವ ಸಣ್ಣ ಕೂಲಿಗೆ
ಹಗಲಿರುಳು ದುಡಿಯುವ ಹಲವು ಕಾರ್ಮಿಕರ ಮುದ್ದು ಮೊಗವೇ ಈ ಕನ್ನಡ

ಈ ಸೀಮೆಯ ಕಣಕಣದಲಿ ಈ ಭಾಷೆ ಬೆರೆತುಹೋಗಿದೆ
ಬೀಸುವ ಮಂದಪವನ ಸಹಾ ಸಂಗೀತದಲಿ ಈ ನುಡಿಗಳ ಉಲಿದಿದೆ
ಕೆಚ್ಚದೆಯ ವೀರರ ಕರುಣಾ ಮೂರ್ತಿ ಸಂತರ ವಚನಕಾರರ
ಸಂಪ್ರದಾಯ ಮುಂದುವರಿದಿದೆ
ಅಳಿವಿಲ್ಲ ಈ ಮಾತಿಗೆ ಸಾವಿಲ್ಲ ಈ ಸಂಸ್ಕೃತಿಗೆ
ಉಳಿಸಿ ಬೆಳಸುವ ಸಾತ್ವಿಕ ಜನರಿರಲು
ಗಳಿಸಿ ಹಂಚುವ ಮನಸ್ಸುಗಳು ನೆರೆದಿರಲು

ಕೆ.ಯಂ ಶರಣಬಸವೇಶ

9 Responses

 1. Vinoda says:

  Excellent anna

 2. ನಾಗರತ್ನ ಬಿ. ಅರ್. says:

  ವಾವ್ ಕನ್ನಡ ಸೌರಭ ವನ್ನು ಒಂದೇ ಕಡೆ ಸಿಗುವಂತೆ ಅಚ್ಚುಕಟ್ಟಾದ ಹೋಲಿಕೆ ಯೊಡನೆ ಕಟ್ಟಿಕೊಟ್ಟಿರುವ ಕವನ ಸೊಗಸಾಗಿದೆ ಧನ್ಯವಾದಗಳು ಸಾರ್

 3. ನಯನ ಬಜಕೂಡ್ಲು says:

  Beautiful.

 4. ಕನ್ನಡದ ಮುದ್ದು ಮುಖವನ್ನು ನಸುನಗುತ್ತಾ ಬಿಂಬಿಸಿರುವ ನಿಮಗೆ ವಂದನೆಗಳು

 5. Anonymous says:

  ಜೈ ಕನ್ನಡ, ಜೈ ತಾಯಿ ಭುವನೇಶ್ವರಿ

 6. B c n murthy says:

  ಜೈ ಕನ್ನಡ , ಜೈ ಭುವನೇಶ್ವರಿ ತಾಯಿ

 7. . ಶಂಕರಿ ಶರ್ಮ says:

  ಕನ್ನಡದ ಕಂಪಿನ ಚಿತ್ರಣವನ್ನು ಭಾವಪೂರ್ಣವಾಗಿ ತಮ್ಮ ಕವನದ ಮೂಲಕ ಚಿತ್ರಿಸಿದ ರೀತಿ ಬಹಳ ಸೊಗಸಾಗಿದೆ.

 8. Padma Anand says:

  ನಮ್ಮ ಕನ್ನಡದ ಹತ್ತು ಹಲವು ಚಂದದ ಮುಖಾರವಿಂದದ ಸೊಗಸಾದ ಪರಿಚಯ.

 9. ಶಿವಮೂರ್ತಿ.ಹೆಚ್. says:

  ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: