ಕಾರ್ನೆಲಿಯಾ ಸೊರಾಬ್ಜಿ
ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ, ಮೊದಲ ಮಹಿಳಾ ಮುಖ್ಯಮಂತ್ರಿ, ಮೊದಲ ವೈದ್ಯೆ, ಮೊದಲ ಶಿಕ್ಷಕಿ ಇರುವಂತೆ ಮೊದಲ ವಕೀಲೆ ಕೂಡಾ ಇರುವ ಕುರಿತು ನಿಮಗೆಷ್ಟು ಗೊತ್ತು? ಹೌದು, ಕಾರ್ನೆಲಿಯಾ ಸೊರಾಬ್ಜಿ ಯವರು ಭಾರತದ ಮೊಟ್ಟಮೊದಲ ಮಹಿಳಾ ವಕೀಲರು. ಕೇವಲ ಇದೊಂದೇ ಅಲ್ಲ ತಮ್ಮ ಜೀವಮಾನದಲ್ಲಿ ಹಲವು ಮೊದಲುಗಳನ್ನು ಸಾಧಿಸಿದ ಹೆಗ್ಗಳಿಕೆ ಇವರದ್ದು.
ಕಾರ್ನೆಲಿಯಾ ಸೊರಾಬ್ಜಿ ೧೫ ನವಂಬರ್ 1866 ರಲ್ಲಿ ಪಾರ್ಸಿ ಜನಾಂಗದವರಾದ ಫ್ರಾನ್ಸಿನಾ ಮತ್ತು ಕರ್ಸೆದ್ಜಿ ಸೊರಾಬ್ಜಿ ದಂಪತಿಗೆ ಅವರ ಒಂಭತ್ತು ಮಕ್ಕಳಲ್ಲಿ ಒಬ್ಬರಾಗಿ ಆಗಿನ ಬ್ರಿಟಿಷ್ ಇಂಡಿಯಾದ ನಾಶಿಕ್ ನಲ್ಲಿ ಜನಿಸಿದರು. ತಮ್ಮ ಬಾಲ್ಯವನ್ನು ಕರ್ನಾಟಕದ ಬೆಳಗಾವಿಯಲ್ಲಿಯೂ ಹಾಗೂ ಮುಂದಿನ ಕೆಲವು ವರ್ಷಗಳು ಪುಣೆಯಲ್ಲಿ ಕಳೆದರು. ಪ್ರಾಥಮಿಕ ಶಿಕ್ಷಣವನ್ನು ಆರಂಭದ ಕೆಲವು ವರ್ಷ ಮನೆಯಲ್ಲಿ ಪಡೆದರು. ಪ್ರೌಢಶಾಲಾ ಶಿಕ್ಷಣವನ್ನು ಬಹುತೇಕ ಮಿಷನ್ ಶಾಲೆಗಳಲ್ಲೇ ಅಭ್ಯಸಿಸಿದರು.
ಕಾಲೇಜು ಶಿಕ್ಷಣವನ್ನು ಬಾಂಬೆ ಪ್ರೆಸಿಡೆನ್ಸಿಯ ಡೆಕ್ಕನ್ ಕಾಲೇಜಿನಲ್ಲಿ ಪಡೆದರು. ತಮ್ಮ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಬಾಂಬೆ ಪ್ರೆಸಿಡೆನ್ಸಿಗೆ ಅಗ್ರಸ್ಥಾನ ಗಳಿಸುವ ಮೂಲಕ ಉನ್ನತ ವ್ಯಾಸಂಗವನ್ನು ಇಂಗ್ಲೆಂಡ್ ನಲ್ಲಿ ಮಾಡುವ ಸಲುವಾಗಿ ಅಂದಿನ ಸರ್ಕಾರದ ವಿದ್ಯಾರ್ಥಿವೇತನಕ್ಕೂ ಅರ್ಹತೆ ಪಡೆದುಕೊಂಡರು. ಅಲ್ಲದೆ, ಬಾಂಬೆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಭಾರತದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಆದರೆ ಕಾರ್ನೆಲಿಯಾ ಸೊರಾಬ್ಜಿ ಯವರು ಪದವಿ ಶಿಕ್ಷಣದ ನಂತರ ನೇರವಾಗಿ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್ ಗೆ ತೆರಳುವ ಬದಲು ತಮಗೊಲಿದ ವಿದ್ಯಾರ್ಥಿವೇತನವನ್ನು ನಿರಾಕರಿಸಿ ಕೂಡಲೇ ಗುಜರಾತ್ ನ ಪುರುಷರ ಕಾಲೇಜಿನಲ್ಲಿ ತಾತ್ಕಾಲಿಕ ಅಧ್ಯಾಪಕ ವೃತ್ತಿಗೆ ಸೇರಿಕೊಂಡರು.ತನ್ಮೂಲಕ ಪುರುಷರ ಕಾಲೇಜಿನಲ್ಲಿ ಪಾಠ ಮಾಡಿದ ಮೊದಲ ಮೊದಲ ಮಹಿಳಾ ಅಧ್ಯಾಪಕರು ಎನಿಸಿಕೊಂಡರು. ಮುಂದೆ ತಮ್ಮ ಉನ್ನತ ವ್ಯಾಸಂಗವನ್ನು ಇಂಗ್ಲೆಂಡ್ ನಲ್ಲಿ ಮುಂದುವರಿಸುವ ಸಲುವಾಗಿ 1888 ರಲ್ಲಿ ಇಂಡಿಯನ್ ನ್ಯಾಷನಲ್ ಅಸೋಸಿಯೇಶನ್ ಗೆ ಪತ್ರ ಬರೆದು, ಅವರ ಸಹಾಯ ಪಡೆದು 1889 ರಲ್ಲಿ ಇಂಗ್ಲೆಂಡ್ ಗೆ ತೆರಳಿದರು.
1894 ರಲ್ಲಿ ಭಾರತಕ್ಕೆ ಹಿಂದುರುಗಿದ ನಂತರ ಅನೇಕ ಮಹಿಳಾ ಪರ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಪರ್ದಾನಾಶಿನ್ ಮಹಿಳೆಯರ ಅಳಲಿಗೆ ದನಿಯಾಗುವ ಮೂಲಕ ಮಹಿಳೆಯರ ಪರವಾದ ಹೋರಾಟದಲ್ಲಿ ದಿಟ್ಟ ಹೆಜ್ಜೆ ಇಟ್ಟರು. ಆದರೆ ಪರ್ದಾನಾಶಿನ್ ಮಹಿಳೆಯರ ಪರವಾಗಿ ನ್ಯಾಯಾಲಯದಲ್ಲಿ ದನಿಯೆತ್ತಲು ವೃತ್ತಿಪರ ನಿಲುವು ಹೊಂದಿರದ ಕಾರಣ ಭಾರತೀಯ ಕಾನೂನು ಪದವಿ ಪಡೆಯುವತ್ತ ತಮ್ಮ ದಿಶೆ ಬದಲಿಸಿದರು.
1892 ರಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯನ್ನು ಪಡೆದರು. ಅಲ್ಲದೆ, 1899 ರಲ್ಲಿ ಅಲಹಾಬಾದ್ ಉಚ್ಛ ನ್ಯಾಯಾಲಯದ ಮೇಲ್ವಿಚಾರಕ ಪರೀಕ್ಷೆ ಕಟ್ಟಿ ತೇರ್ಗಡೆ ಹೊಂದಿದರು. ಈ ಮೂಲಕ ಇವರು ಕಾನೂನು ಪದವಿ ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿ ಭಾರತದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ ಕೀರ್ತಿ ಹೊಂದಿದರು.
ಆದರೆ ಅಂದಿನ ದಿನಗಳಲ್ಲಿ ಮಹಿಳೆ ಕಾನೂನು ವೃತ್ತಿಯನ್ನು ಅಭ್ಯಾಸಿಸುವುದನ್ನು ತಡೆ ಹಿಡಿದಿದ್ದರ ಸಲುವಾಗಿ ಕಾರ್ನೇಲಿಯಾ ಸೊರಾಬ್ಜಿಯವರು ಪದವಿ ಪಡೆದ ತಕ್ಷಣಕ್ಕೆ ವಕೀಲರಾಗಿ ಗುರುತಿಸಿ ಕೊಳ್ಳಲಾಗಲಿಲ್ಲ. 1904 ರಲ್ಲಿ ಬಂಗಾಳದ ವಾರ್ಡ್ ಗಳ ನ್ಯಾಯಾಲಯಕ್ಕೆ ಸಹಾಯಕರಾಗಿ ನೇಮಕಗೊಂಡರು. ಅಲ್ಲಿಂದ 1907 ರ ವೇಳೆಗೆ ಬಿಹಾರ, ಒರಿಸ್ಸಾ ಹಾಗೂ ಅಸ್ಸಾಂ ನ ಪ್ರಾಂತ್ಯಗಳಲ್ಲಿ ಕಾರ್ಯ ನಿರ್ವಹಿಸಿದರು. ಮುಂದಿನ 20 ವರ್ಷಗಳ ಸೇವೆಯಲ್ಲಿ 600 ಮಹಿಳೆಯರು ಮತ್ತು ಅನಾಥರ ಕಾನೂನುಬದ್ಧ ಹೋರಾಟಗಳಿಗೆ ಸ್ಪಂದಿಸಿದರು.
ಸತತ ಹೋರಾಟ ಹಾಗೂ ನಿರಂತರ ಪ್ರಯತ್ನಗಳ ಫಲವಾಗಿ 1924 ರಲ್ಲಿ ಕಾರ್ನೆಲಿಯಾ ಸೊರಾಬ್ಜಿ ಯವರು ನ್ಯಾಯಾಲಯದಲ್ಲಿ ಕಾನೂನು ವೃತ್ತಿಯನ್ನು ಅಭ್ಯಸಿಸಲು ಅನುಮತಿ ಪಡೆದುಕೊಂಡರು. ಕೊಲ್ಕತಾ ನ್ಯಾಯಾಲಯದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಅಲ್ಲಿಯೂ ಪುರುಷ ಸಮಾಜ ಒಡ್ಡುವ ಅಡೆತಡೆಗಳು ಇವರನ್ನು ಹೊರತಾಗಿಸಲಿಲ್ಲ. ಆದಕಾರಣ ಕೆಲವೇ ವರ್ಷಗಳಲ್ಲಿ ಅಂದರೆ 1929 ರಲ್ಲಿ ಉಚ್ಛ ನ್ಯಾಯಾಲಯದಿಂದ ನಿವೃತ್ತಿ ಹೊಂದಿ ಪುನಃ ಇಂಗ್ಲೆಂಡ್ ಗೆ ತೆರಳಿ ನೆಲೆಸಿದರು.
ಬಾಲ್ಯ ವಿವಾಹ ರದ್ದತಿ, ವಿಧವೆಯರ ಸ್ಥಾನಮಾನ, ಸ್ವಾವಲಂಬನೆ, ಶೈಕ್ಷಣಿಕ ಪ್ರಗತಿ, ಮಹಿಳಾ ಹಕ್ಕುಗಳು, ಹಿಂದೂ ಸಂಸ್ಕೃತಿ-ಸಂಪ್ರದಾಯಗಳನ್ನು ಕಾಪಾಡುವುದು ಮುಂತಾದ ಕ್ರಾಂತಿಕಾರಿ ಸಮಾಜ ಸುಧಾರಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸಿದರು.
ಇದರೊಂದಿಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಹಾಗೂ ಬ್ರಿಟನ್ ನಲ್ಲಿ ಕಾನೂನು ವ್ಯಾಸಂಗ ಮಾಡಿದ ಮೊದಲ ಮಹಿಳೆ. ಮಿಗಿಲಾಗಿ ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ಮೊಟ್ಟಮೊದಲ ಭಾರತೀಯಳು ಎನಿಸಿಕೊಂಡರು. ಒಟ್ಟಾರೆ ಇಂತಹ ಹಲವು ಗಮನಾರ್ಹ ಮೊದಲುಗಳನ್ನು ಸಾಧಿಸಿದ ಕಾರ್ನೆಲಿಯಾ ಸೊರಾಬ್ಜಿಯವರು 6 ಜುಲೈ 1954 ರಲ್ಲಿ ಇಂಗ್ಲೆಂಡ್ ನಲ್ಲಿ ನಿಧನರಾದರು.
ಸ್ವಭಾವತಃ ಗಟ್ಟಿಗಿತ್ತಿ, ಹುಟ್ಟು ಹೋರಾಟಗಾರ್ತಿ, ಅಪ್ಪಟ ದೇಶಪ್ರೇಮಿ, ಶೈಕ್ಷಣಿಕ ಕ್ರಾಂತಿಕಾರಿಣಿ, ಲೇಖಕಿ, ಸಮಾಜ ಸುಧಾರಕಿಯಾಗಿದ್ದ ಕಾರ್ನೆಲಿಯಾ ಸೊರಾಬ್ಜಿಯವರ ಸಾಧನೆಗಳನ್ನು, ಕೊಡುಗೆಗಳನ್ನು ಸ್ಮರಿಸುವುದಿರಲಿ ಕಡೇಪಕ್ಷ ನಮ್ಮ ದೇಶದ ವಿದ್ಯಾರ್ಥಿಗಳಿಗೆ ಅವರ ಪಠ್ಯಪುಸ್ತಕದಲ್ಲಿ ಭಾರತದ ಮೊಟ್ಟಮೊದಲ ವಕೀಲೆ ಎಂದು ಸಹ ಪರಿಚಯ ಮಾಡಿಕೊಡದಿರುವುದು ಅತ್ಯಂತ ವಿಷಾದನೀಯ.
-ಮೇಘನಾ ಕಾನೇಟ್ಕರ್
ಮಾಹಿತಿ ಕೃಪೆ: ಗೂಗಲ್ ಹಾಗೂ ಬ್ರಿಟಿಷ್ ಲೇಖಕರ ಆಂಗ್ಲ ಪುಸ್ತಕಗಳು
ಸೂಪರ್. ಮಾಹಿತಿಪೂರ್ಣ ಲೇಖನ
ಅತ್ಯಂತ ಉಪಯುಕ್ತ ಮಾಹಿತಿ ನೀಡಿರುವ ಲೇಖನ ಮೇಡಂ
ತೆರೆಮರೆಯ ಸಾಧಕಿಯನ್ನು ಪರಿಚಯಿಸಿದ ಸುಂದರ ಲೇಖನ.
ಪುರುಷಪ್ರಧಾನ ಸಮಾಜದಲ್ಲಿ ಹೋರಾಟ ನಡೆಸಿ, ಮಹಿಳಾ ವಕೀಲವೃತ್ತಿಯ ಘನತೆಯನ್ನು ಎತ್ತಿ ಹಿಡಿದ ಅಪೂರ್ವ ಮಹಿಳೆಯೊಬ್ಬರ ಸಾಧನೆಯ ಬಗ್ಗೆ ಅಪರೂಪದ, ಸೊಗಸಾದ ಲೇಖನ…ಧನ್ಯವಾದಗಳು ಮೇಡಂ.