ಇದು ಬೆಲ್ಲದಾ ಲೋಕವೇ….!
“ಲೇ, ಇವಳೇ… ಮನೆಗೆ ಯಾರು ಬಂದರು ಅಂತ ನೋಡೇ…..ಬಾಯಾರಿಕೆ ತೆಗೆದುಕೊಂಡು ಬಾ” ಅಂತ ಮನೆಯ ಯಜಮಾನನ ಮಾತು ಕಿವಿಗೆ ಬಿದ್ದ ಕೂಡಲೇ ನೀರಿನ ಚೊಂಬು ಮತ್ತು ಬೆಲ್ಲದ ತುಂಡುಗಳಿರುವ ಪುಟ್ಟ ತಟ್ಟೆಯ ಜೊತೆ ಬರುವ ಮನೆಯಾಕೆ ಬೆಲ್ಲ ಹಾಗೂ ನೀರನ್ನು ನೀಡಿ, ಬಂದವರ ಕಾಲಿಗೆ ನಮಸ್ಕರಿಸಿ “ಹೇಗಿದ್ದೀರಿ? ಕ್ಷೇಮವೇ? ಬಾಯಾರಿಕೆ ತೆಗೆದುಕೊಳ್ಳಿ” ಅಂತ ಸತ್ಕರಿಸುವುದು ಎಷ್ಟೋ ಮನೆಗಳಲ್ಲಿ ನಡೆಯುತ್ತಿತ್ತು. ಕೆಲವೊಮ್ಮೆ ಮನೆಯ ಯಜಮಾನ ಇಲ್ಲದೆ ಇರುವಾಗ, ಬಂದವರನ್ನು ಕುಳ್ಳಿರಿಸಿ “ಹೇಗಿದ್ದೀರಿ? ತೃಷೆಗೆ ಬೇಕಾ?” ಅಂತ ವಿಚಾರಿಸಿದ ಬಳಿಕ ನೀರು, ಬೆಲ್ಲ ತಂದಿಡುವುದು ವಾಡಿಕೆಯಾಗಿತ್ತು. ಹಳ್ಳಿಯ ಕೆಲವು ಮನೆಗಳಲ್ಲಿ ಇಂದಿಗೂ ಈ ಪದ್ಧತಿ ಮುಂದುವರಿದಿದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವಿದೆ. ಕಾಲ್ನಡಿಗೆಯಲ್ಲೇ ಅದೆಷ್ಟೋ ದೂರ ಕ್ರಮಿಸುತ್ತಿದ್ದ ದಿನಗಳಲ್ಲಿ ನೀರು ಹಾಗೂ ಬೆಲ್ಲ ನೀಡಿ, ಆಯಾಸ ಪರಿಹಾರ ನೀಗಿ ಚೈತನ್ಯ ತುಂಬುವ ಕಾಯಕ.
ನಾನಂತೂ ಬೆಲ್ಲಪ್ರಿಯೆ. ಈಗಲೂ ಇಷ್ಟಪಟ್ಟು ಬೆಲ್ಲ ತಿನ್ನುವುದು ನನಗೆ ತುಂಬಾ ಖುಷಿ. ದೈನಂದಿನ ಅಡುಗೆಯಲ್ಲಿ ಉಪ್ಪಿನ ಜೊತೆಗೆ ಬೆಲ್ಲವೂ ಬೇಕೇ ಬೇಕು. ಸಾರು, ಸಾಂಬಾರು, ತಂಬುಳಿ, ಮೇಲೋಗರ, ಪಲ್ಯ ಯಾವುದೇ ಇರಲಿ, ಒಂದು ಸಣ್ಣ ತುಂಡು ಬೆಲ್ಲ ಸೇರಿಸದಿದ್ದರೆ ಆ ಅಡುಗೆ ರುಚಿಯಾಗುವುದೇ ಇಲ್ಲ. ಆ ತರಹ ಅಭ್ಯಾಸ ಆಗಿಬಿಟ್ಟಿದೆ. ಹಾಗಾಗಿ ಅಡುಗೆಮನೆಯಲ್ಲಿ ಬೆಲ್ಲದ ಡಬ್ಬ ಖಾಲಿಯಾಗುವುದೇ ಇಲ್ಲ. ಸಕ್ಕರೆ ಹಾಕಿ ಮಾಡುವ ಸಿಹಿಗಿಂತ ಬೆಲ್ಲ ಬಳಸಿ ಮಾಡುವ ಸಿಹಿಗಳೇ ಜಾಸ್ತಿ. ಆರೋಗ್ಯಕ್ಕೂ ಒಳ್ಳೆಯದು. ಬೆಲ್ಲ ತಿನ್ನುವುದರಿಂದ, ಅಡುಗೆಯಲ್ಲಿ ಬೆಲ್ಲವನ್ನು ಬಳಸುವುದರಿಂದ ಹಲವು ಉಪಯೋಗಗಳಿವೆ. ಬೆಲ್ಲದ ಔಷಧೀಯ ಉಪಯೋಗಗಳನ್ನು ಬರೆದರೆ ಇನ್ನೊಂದು ಲೇಖನವನ್ನೇ ಬರೆಯಬಹುದು. ಒಟ್ಟಿನಲ್ಲಿ ಬೆಲ್ಲದ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆಂದು ಅತಿಯಾದ ಬೆಲ್ಲದ ಸೇವನೆಯೂ ಸಲ್ಲದು.
ಬೆಲ್ಲ ಅಂದ ಕೂಡಲೇ ನೆನಪುಗಳ ಸರಮಾಲೆ ಕಣ್ಣೆದುರು ಬರುವುದು. ನಾವು ಸಣ್ಣವರಿರುವಾಗ ಈಗಿನ ಹಾಗೆ ಹೊರಗಿನಿಂದ ಸಿಹಿ/ಕರಿದ ತಿಂಡಿಗಳನ್ನು ತರುವ ಪರಿಪಾಠ ಇರಲಿಲ್ಲ. ವಿಶೇಷ ದಿನಗಳಲ್ಲಿ ಅಥವಾ ಹಬ್ಬದ ಸಂದರ್ಭಗಳಲ್ಲಿ ಸಿಹಿತಿಂಡಿ ತಿನ್ನುವ ಅವಕಾಶ. ನನಗಿನ್ನೂ ಸರಿಯಾಗಿ ನೆನಪಿದೆ. ನಾನಾಗ ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ಬಡತನದ ದಿನಗಳು. ಮನೆಯಲ್ಲಿರುವ ಆರು ಜನರಿಗೆಂದು ಅಮ್ಮ ಆರು ಲೋಟ ನೀರು, ಅದಕ್ಕೊಂದು ಅಚ್ಚು ಬೆಲ್ಲ ಹಾಕಿ ಕುದಿಯಲು ಒಲೆಯಲ್ಲಿಟ್ಟು, ನೀರು ಕುದಿದ ಬಳಿಕ ಅದಕ್ಕೆ ಒಂದಿಷ್ಟು ಕಾಫಿಪುಡಿ ಮತ್ತು ಒಂದು ಲೋಟ ಹಾಲು ಸೇರಿಸಿ “ಕಾಫಿ” ಮಾಡುತ್ತಿದ್ದರು. ಒಂದು ದಿನ ಹಾಗೇ ನೀರು ಕುದಿಯಲು ಇಟ್ಟು ಅವರು ಯಾವುದೋ ಕೆಲಸಕ್ಕೆ ಹೋಗಿದ್ದಾಗ ನೀರಿನೊಳಗಿರುವ ಬೆಲ್ಲ ಕಂಡು ತಿನ್ನುವ ಆಸೆಯಾಗಿ ಸೌಟಿನಿಂದ ಆ ಬೆಲ್ಲ ತೆಗೆದು ಒಂದು ತುಂಡು ಮಾಡಿ ಇನ್ನೇನು ತಿನ್ನಬೇಕು ಅನ್ನುವಾಗ ಅಮ್ಮನ ಕಣ್ಣಿಗೆ ಬಿದ್ದು ಸಿಕ್ಕಿ ಬಿದ್ದೆನಲ್ಲಾ ಅಂತ ನಾಚಿಕೆಯಾಗಿತ್ತು. ಆಗಾಗ ಆ ವಿಷಯ ಜ್ಞಾಪಿಸಿ ತಮಾಷೆ ಮಾಡುತ್ತಿದ್ದರು ಅಮ್ಮ.
ನನ್ನ ತರಗತಿಯಲ್ಲಿ ಸ್ವಪ್ನ ಅಂತ ಇದ್ದಳು. ನಾವು ಆರನೇ ತರಗತಿಯಲ್ಲಿ ಓದುತ್ತಿರುವಾಗ ಸ್ವಪ್ನ ನನ್ನ ಬಳಿ ಬಂದು “ನನಗೊಂದು ಸಹಾಯ ಮಾಡುವೆಯಾ?” ಅಂದಳು. “ಉಪಾಧ್ಯಾಯರು ಕಲಿಸಿದ ಗಣಿತದ ಸಮಸ್ಯೆಗಳು ನನಗೆ ಸರಿಯಾಗಿ ಅರ್ಥ ಆಗಿಲ್ಲ. ನನಗೆ ಹೇಳಿ ಕೊಡುತ್ತೀಯಾ? ” ಅಂತ ಕೇಳಿದವಳಿಗೆ ಅವಳಿಗೆ ಅರ್ಥವಾಗದ ಗಣಿತದ ವಿಷಯವನ್ನು ಹೇಳಿಕೊಟ್ಟಿದ್ದೆ. ನಾನು ಲೆಕ್ಕ ಹೇಳಿ ಕೊಟ್ಟ ಮರುದಿನ ಕಾಗದದ ಪೊಟ್ಟಣ ನನ್ನ ಕೈಗೆ ಕೊಟ್ಟು “ನಿನಗೆ ಬೆಲ್ಲ ಅಂದರೆ ತುಂಬಾ ಇಷ್ಟ” ಅಂತ ನನ್ನಮ್ಮ ಹೇಳಿದರು. ಕಾಫಿಗೆಂದು ಹಾಕಿದ ಬೆಲ್ಲವನ್ನು ತಿಂದ ವಿಷಯವನ್ನು ನನ್ನಮ್ಮ ಸ್ವಪ್ನನ ಅಮ್ಮನ ಬಳಿ ಯಾವಾಗಲೋ ಹಂಚಿಕೊಂಡಿದ್ದರಂತೆ! ಆ ದಿನ ನನಗೆ ಬೇಕಿದ್ದಷ್ಟು ಬೆಲ್ಲ ತಿಂದಿದ್ದೆ!
“ಬಲ್ಲವರೇ ಬಲ್ಲರು ಬೆಲ್ಲದ ಸವಿಯ” ಅನ್ನುವ ಮಾತನ್ನು ನೂರು ಪ್ರತಿಶತ ಒಪ್ಪುವವಳು ನಾನು. ನಮ್ಮ ತುಳುನಾಡಿನಲ್ಲಿ “ಕೆಡ್ಡಸ” ಅನ್ನುವ ಆಚರಣೆಯ ಸಂದರ್ಭದಲ್ಲಿ ಹುರಿದ ಅಕ್ಕಿಹುಡಿಯ ಜೊತೆ ಬೆಲ್ಲ ಸೇರಿಸಿ ಮಾಡುವ ಒಂದು ತಿಂಡಿಯನ್ನು ಭೂಮಿ ತಾಯಿಗೆ ಸಮರ್ಪಿಸುತ್ತಾರೆ. ಭೂಮಿತಾಯಿಗೆ ಅರ್ಪಿಸಲೆಂದು ಬೆಳ್ತಿಗೆ ಅಕ್ಕಿಯಲ್ಲೂ, ಮಕ್ಕಳಿಗೆ ತಿನ್ನಲೆಂದು ಕುಚ್ಚಲಕ್ಕಿಯಲ್ಲೂ ಈ ಸಿಹಿತಿಂಡಿ ಮಾಡುತ್ತಿದ್ದರು ಅಮ್ಮ. ಆ ರುಚಿಗೆ ಮಾರು ಹೋದ ನೆನಪಿನಿಂದ ಕೆಲವೊಮ್ಮೆ ಅಮ್ಮನ ಕಣ್ಣು ತಪ್ಪಿಸಿ ಹಸಿಕುಚ್ಚಲಕ್ಕಿ ಹಾಗೂ ಬೆಲ್ಲ ತಿನ್ನುತ್ತಿದ್ದುದು ನೆನಪಿಗೆ ಬರುತ್ತಿದೆ. ಹಸಿ ಮುಳ್ಳುಸೌತೆಯ ಜೊತೆ ಬೆಲ್ಲ ಸೇರಿಸಿ ತಿನ್ನುವುದು, ಅವಲಕ್ಕಿ ಜೊತೆ ಬೆಲ್ಲ ತಿನ್ನುವುದು, ಏನೂ ಸಿಗದಿದ್ದರೆ ಬರೀ ಬೆಲ್ಲ ತಿನ್ನುವುದು ಇವೆಲ್ಲವೂ ಮರೆಯಲು ಸಾಧ್ಯವಿಲ್ಲ. ಮೊದಲೆಲ್ಲಾ ರೇಡಿಯೋದಲ್ಲಿ ಮಾರುಕಟ್ಟೆ ದರದ ಬಗ್ಗೆ ಮಾಹಿತಿ ನೀಡುವಾಗ ಬಿಳಿ ಬೆಲ್ಲ, ಕೆಂಪು ಬೆಲ್ಲ, ಕಪ್ಪು ಬೆಲ್ಲದ ಬೆಲೆ ಒಂದು ಕ್ವಿಂಟಾಲಿಗೆ ಎಷ್ಟು ಅನ್ನುವ ಮಾಹಿತಿ ಕೇಳುತ್ತಿದ್ದದ್ದು ಈಗಲೂ ನೆನಪಿದೆ. ಜೋನಿ ಬೆಲ್ಲ, ಒಳ್ಳೆಮೆಣಸು ಹಾಕಿ ತಯಾರಿಸಿದ ಖಾರದ ಬೆಲ್ಲ, ಬೇರೆ ಬೇರೆ ಬಣ್ಣ, ಆಕಾರಗಳಲ್ಲಿ ಸಿಗುವ ಬೆಲ್ಲ,… ನೆನಪಿಗೆ ಬರುತ್ತಿದೆ. ಇತ್ತೀಚೆಗೆ ಸೂಪರ್-ಮಾರ್ಕೆಟಿಗೆ ಹೋದಾಗ ಅಲ್ಲಿ ತೆಂಗಿನಕಾಯಿಯ ಬೆಲ್ಲವನ್ನು ನೋಡಿದೆ. ರುಚಿ ನೋಡಬೇಕೆಂದು ಕೊಂಡು ತಂದು ತಿಂದೆ.
“ಇಂಗು ತಿಂದ ಮಂಗನಂತೆ” ಅನ್ನುವ ಮಾತು ಬರಲು ಬೆಲ್ಲವೇ ಕಾರಣ ಅನ್ನುವುದಕ್ಕೆ ಪೂರಕವಾಗಿ ಕಥೆಯೊಂದನ್ನು ಕೇಳಿದ ನೆನಪು. ದಿನಸಿ ಅಂಗಡಿಗೊಂದು ಮಂಗ ದಿನವೂ ಬಂದು, ಬೆಲ್ಲ ಇಟ್ಟಿದ್ದ ಗೋಣಿಗೆ ಕೈ ಹಾಕಿ ಮನಸೋ ಇಚ್ಛೆ ಬೆಲ್ಲ ತಿಂದು ಹೋಗುತ್ತಿತ್ತಂತೆ. ಎಷ್ಟು ಓಡಿಸಿದರೂ, ಮಂಗ ಮತ್ತೆ ಮತ್ತೆ ಬಂದು ಉಪದ್ರ ಕೊಡುತ್ತಿತ್ತಂತೆ. ಅದೊಂದು ದಿನ ಮಂಗನಿಗೆ ಬುದ್ಧಿ ಕಲಿಸಬೇಕೆಂದು, ಬೆಲ್ಲದ ಗೋಣಿಯ ಮೇಲ್ಗಡೆ ಇಂಗಿನ ಉಂಡೆಗಳನ್ನು ಇಟ್ಟದ್ದು ಮಂಗನಿಗೆ ಗೊತ್ತಾಗದೆ, ಬೆಲ್ಲವೆಂದುಕೊಂಡು ಇಂಗನ್ನು ಬಾಯಿಗೆ ಹಾಕಿಕೊಂಡಿತಂತೆ. ಅಂದಿನಿಂದ “ಇಂಗು ತಿಂದ ಮಂಗನಂತೆ” ಅನ್ನುವ ಮಾತು ರೂಢಿಗೆ ಬಂತಂತೆ!
ಹಬ್ಬ ಹರಿದಿನಗಳಲ್ಲಿ, ಆಚರಣೆಗಳಲ್ಲಿ ಬೆಲ್ಲಕ್ಕೊಂದು ವಿಶೇಷ ಸ್ಥಾನ. ಮಕರಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ, ಯುಗಾದಿಯಲ್ಲಿ ಬೇವು ಬೆಲ್ಲ, ನಾಗರಪಂಚಮಿ, ಶ್ರೀಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ ಸಂದರ್ಭಗಳಲ್ಲಿ ಬೆಲ್ಲದ ಸಿಹಿತಿಂಡಿಗಳು,…. ಅಷ್ಟೇ ಅಲ್ಲ, ನಮ್ಮ ಜಿಲ್ಲೆಯಲ್ಲಿ ನಡೆಯುವ ನಾಗತಂಬಿಲ, ಭೂತ ತಂಬಿಲಗಳಲ್ಲೂ ಹೊದಳು(ಅಕ್ಕಿಯ ಅರಳು) ಮತ್ತು ಬೆಲ್ಲ ಬೇಕೇ ಬೇಕು. ದೇವರ ನಿತ್ಯಪೂಜೆಯ ಸಂದರ್ಭ ಸಮರ್ಪಿಸಲು ಹಣ್ಣು ಇಲ್ಲದಿದ್ದರೆ ಬೆಲ್ಲವನ್ನೇ ನೈವೇದ್ಯ ಮಾಡುತ್ತೇವೆ. ಕೆಲವೊಮ್ಮೆ ನೈವೇದ್ಯ ಮಾಡಿದ ಬೆಲ್ಲದ ತುಂಡಿನ ತುಂಬಾ ಇರುವೆಗಳು ಮುತ್ತಿಕೊಳ್ಳುತ್ತವೆ. ಎಷ್ಟೇ ಗಟ್ಟಿಯಾದ ಬೆಲ್ಲವಾಗಿದ್ದರೂ ಆ ಬೆಲ್ಲವನ್ನು ಪುಡಿ ಮಾಡಿ, ತನ್ನ ಗಾತ್ರಕ್ಕಿಂತ ದೊಡ್ಡದಾದ ಬೆಲ್ಲದ ಹರಳುಗಳನ್ನು ಹೊತ್ತು ಸಾಗುವ ಇರುವೆಗಳ ಸಾಲನ್ನು ನೋಡಿ ಆಶ್ಚರ್ಯಪಟ್ಟ ದಿನಗಳ ನೆನಪನ್ನು ಮತ್ತೆ ಕಣ್ಣೆದುರು ಮೂಡಿಸುತ್ತವೆ.
ಕೊನೆಗೊಂದು ಕಿವಿ ಮಾತು : “ಬೆಲ್ಲದಂತ ಮಾತನಾಡಿ ಬಿಟ್ಟು ಹೋದವಾ ಯಾರ ಮುಂದೆ ಹೇಳಬೇಕೋ ಮರುಗೋದಾ ಜೀವ”... ಅನ್ನುವ ಹಾಡೊಂದರ ಸಾಲಿನಲ್ಲಿ ಬೆಲ್ಲದಂತೆ ಸಿಹಿಯಾದ ಮಾತುಗಳನ್ನಾಡುವವರ ಮಾತುಗಳನ್ನು ನಂಬಬಾರದೆಂಬ ಕಿವಿಮಾತಿದೆ. ಹಾಗಾಗಿ ಬೆಲ್ಲದಂತ ಮಾತುಗಳೆಲ್ಲವನ್ನೂ ನಂಬಬೇಡಿ!
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಬೆಲ್ಲದಷ್ಟೇ ಸಿಹಿ ಸಿಹಿ ಬರಹ. ಲೇಖನದೊಳಗೆ ಅತಿಥಿ ಗಳನ್ನು ಉಪಚರಿಸುವ ಪದ್ದತಿಯ ಕುರಿತಾಗಿ ಉಲ್ಲೇಖಿಸಿದ್ದು ಸೊಗಸಾಗಿದೆ. ಈಗಲೂ ಹಲವು ಕಡೆ ಈ ಪದ್ದತಿ ಇದೆ.
ಸುಂದರ ಪ್ರತಿಕ್ರಿಯೆಗೆ ಮನದಾಳದ ವಂದನೆಗಳು ನಯನಾ
ಬಹಳ ಉಪಲಬ್ದ ಸಂದೇಶ.
ಬೆಲ್ಲದ ಲೇಖನ ಬೆಲ್ಲದಷ್ಟೇ ರುಚಿಕರವಾಗಿತ್ತು ಮೇಡಂ
ಮೆಚ್ಚುಗೆಗೆ ಧನ್ಯವಾದಗಳು
ಬೆಲ್ಲದಷ್ಟೇ ಸವಿಯಾದ ಲೇಖನ ಮೇಡಂ ಧನ್ಯವಾದಗಳು.
ಹಾರ್ದಿಕ ವಂದನೆಗಳು
ತುಂಬಾ ಒಳ್ಳೆಯ ಬರಹ ಅಕ್ಕಾ.ಬೆಲ್ಲದ ಸವಿಯ ಬಲ್ಲವರೇ ಬಲ್ಲರು.
ಚಂದದ ಸ್ಪಂದನೆಗೆ ಧನ್ಯವಾದಗಳು
ಒಳ್ಳೆ ಲೇಖನ ಮೇಡಂ., ನನಗೂ ಕೂಡ ಬೆಲ್ಲ ಅಚ್ಚು ಮೆಚ್ಚು. ಸಿಹಿ ತಿನ್ನಲು ಆಸೆ ಆದರೆ ಒಮ್ಮೊಮ್ಮೆ ಬೆಲ್ಲ ತಿನ್ನುವುದು ಉಂಟು. ಅದೇ ರೀತಿ ಹಲಸಿನ ಹಪ್ಪಳದ ಜೊತೆ ಕಾಯಿ ಬೆಲ್ಲ , ಬೊಂಡ ದ ಹೋಳಿನ ಜೊತೆ ಬೆಲ್ಲ, ಅವಲಕ್ಕಿ ಬೆಲ್ಲ, ನೀರುದೋಸೆ ಜೊತೆ ಬೆಲ್ಲ, ಬೆಲ್ಲ ದ ಪಾನಕ , ಬೆಲ್ಲವನ್ನು ಕಾಯಿಸಿ ಚಾಕೊಲೇಟ್ ತಿನ್ನುವುದು ಇವೆಲ್ಲಾ ತುಂಬಾ ಇಷ್ಟ. ಬೆಲ್ಲದ ಮಹತ್ವ ಹಾಗೂ ಉಪಯೋಗವನ್ನು ಅಚ್ಚುಕಟ್ಟಾಗಿ ಬರೆದಿರುವಿರಿ. ಆದರೆ ಇತ್ತೀಚೆಗೆ ಕಲಬೆರಕೆ ಯ ಬೆಲ್ಲ ಇರುವುದು ಖೇದಕರ ಸಂಗತಿ. ಜೋನಿ ಬೆಲ್ಲ, ಬೆಲ್ಲ ದ ರವೆ , ಬೆಲ್ಲ ಹಾಕಿದ ಪಾಯಸ ಇವೆಲ್ಲ ತುಂಬಾ ಇಷ್ಟ
ನೆಂಟರಿಗೆ ಮನೆಗೆ ಬಂದಾಗ ಬೆಲ್ಲ ಕೊಟ್ಟು ನೀರು ಕೊಡುವುದು ನಮ್ಮ ಸಂಪ್ರದಾಯ ಆದರೆ ಈಗಿನ ಜೀವನ ಶೈಲಿ ಇದರ ಮರೆತಂತಿದೆ.
ಮನೆಯಲ್ಲಿ ಬೆಲ್ಲ ಇಲ್ಲ ಅಂದರೆ ಅದು ಊಹಿಸುವುದು ತುಂಬಾ ಕಷ್ಟ. ಒಳ್ಳೆಯ ಲೇಖನ
ಸನ್ಮಿತ್ರ ಡಾ.ರವೀಶ್ ಅವರ ಪ್ರತಿಕ್ರಿಯೆ
ಬೆಲ್ಲದ ಕುರಿತಾದ ಸವಿ ಸವಿ ಲೇಖನ ಬಾಯಾರಿದಾಗ ತಣ್ಣನೆಯ ನೀರಿನೊಂದಿಗೆ ಜೋನಿಬೆಲ್ಲ ಸವಿದಂತೆ ಇತ್ತು.
ಚಂದದ ಪ್ರತಿಕ್ರಿಯೆಗೆ ಮನ ತುಂಬಿ ಬಂತು. ಪದ್ಮಾ ಅವರಿಗೆ ಧನ್ಯವಾದಗಳು
ಬೆಲ್ಲ ಪ್ರಿಯೆಯಾದ ನನಗೂ ಬೆಲ್ಲದಷ್ಟೇ ಸಿಹಿಯಾದ, ಸೊಗಸಾದ ಲೇಖನ ಬಹಳ ಇಷ್ಟವಾಯ್ತು… ಜೊತೆಗೆ ಇಂಗುತಿಂದ ಮಂಗನ ಕಥೆಯೂ ತಿಳಿಯಿತು.
ಚಂದದ ಪ್ರತಿಕ್ರಿಯೆಗೆ ಮನದಾಳದ ವಂದನೆಗಳು ಶಂಕರಿ ಅಕ್ಕನಿಗೆ
ಚಂದದ ಕಥೆ …ಬೆಲ್ಲ ತಿಂದಂತೆ ಆಯಿತು .ಅದೂ ಅಲ್ಲದೆ ,ಇಂಗು ತಿಂದ ಮಂಗನ ಎಂಬ ಕಥೆಯೂ ತಿಳಿಯಿತು ಪ್ರಭಾ
ನನ್ನ ಲೇಖನಗಳನ್ನು ಓದಿ ಸದಾ ಪ್ರೋತ್ಸಾಹಿಸುವ ನಿಮಗೆ ಧನ್ಯವಾದಗಳು ಅಕ್ಕ
ಬೆಲ್ಲದಷ್ಟೇಸವಿಯಾದ ಬರಹ. ಚಾಕಲೇಟ್ ಬಿಸ್ಕೆಟ್ ಗಳನ್ನೆಲ್ಲಾ ಕಾಣದ ಆ ಬಾಲ್ಯದಲ್ಲಿ ಪದಾಥ೯ಕ್ಕೆ ಬೆಲ್ಲ ಹಾಕುವಾಗ ಅಮ್ಮ ಒಂದು ಚೂರು ಬೆಲ್ಲವನ್ನು ಮುರಿದು ನಮ್ಮ ಬಾಯಿಗೆಇಡುತ್ತಿದ್ದುದನ್ನು ಅಮೃತೋಪಮವಾದ ಆ ರುಚಿಯನ್ನು ನೆನೆದು ಕೊಳ್ಳುವಂತೆ ಮಾಡಿತು
ಯಾವ ಚಾಕಲೇಟಿಗೂ ಹೋಲಿಸಲಾಗದ ಬೆಲ್ಲದ ರುಚಿಯನ್ನು ಬಲ್ಲವರೇ ಬಲ್ಲರು. ತಮ್ಮ ಆಪ್ತ ಪ್ರತಿಕ್ರಿಯೆ ಓದಿ ಮನಸ್ಸಿಗೆ ಬೆಲ್ಲ ಸವಿದಷ್ಟೇ ಸಂತಸವಾಯಿತು. ಧನ್ಯವಾದಗಳು ಮೇಡಂ
ಬೆಲ್ಲದಷ್ಟೇ ಸಿಹಿಯಾಗಿದೆ ,ಈ ಲೇಖನ.
ಇಂಗು ತಿಂದ ಮಂಗ ನಾ ಮೂಲ ಇಂದು ತಿಳಿಯಿತು. ಧನ್ಯವಾದಗಳು.
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ