ಗಂಗೇಚ…..
“ಗಂಗೇಚ, ಯಮುನೇಚೈವ, ಗೋದಾವರಿ ಸರಸ್ವತಿ…..”…ಇದೇನಪ್ಪಾ ಶ್ಲೋಕ ಶುರುವಾಯ್ತು ಅಂದ್ಕೊಡ್ರಾ? ಹೌದು..ಎಲ್ಲಾ ಪವಿತ್ರ ಜಲಗಳೂ ಬಾವಿ ನೀರಿನಲ್ಲಿ ಸೇರಿರುತ್ತವೆ ಎಂಬ ನಂಬಿಕೆಯೊದಿಗೆ, ಮನೆಯ ಒತ್ತಟ್ಟಿಗೇ ಇದ್ದ ಮಣ್ಣುಕಟ್ಟೆಯ ಬಾವಿಯಿಂದ ಬೆಳ್ಳಂಬೆಳಗ್ಗೆ ನೀರು ಸೇದಿ, ಅದೇ ತಣ್ಣೀರನ್ನು ತಲೆಗೆ ಮೈಗೆ ಸುರಿದುಕೊಂಡು ನನ್ನಜ್ಜ ಸ್ನಾನಮಾಡುತ್ತಿದ್ದುದು ನನ್ನ ಚಿಕ್ಕಂದಿನ ನೆನಪುಗಳಲ್ಲೊಂದು. ಮೊದಲೆಲ್ಲಾ, ಹೊಸ ಮನೆಗೆ ಅಡಿಪಾಯ ಹಾಕುವಾಗ, ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಬಾವಿ ಇರಬೇಕು; ಹಾಗೆ ಇದ್ದರೇನೇ ಆ ಮನೆಗೆ ಒಳ್ಳೆಯ ಲಕ್ಷಣ ಇರುತ್ತದೆ ಎನ್ನುವುದು ರೂಢಿ. ನನ್ನ ಚಿಕ್ಕಂದಿನ ದಿನಗಳ ನೆನಪುಗಳು ಇಂತಹ ಬಾವಿಯೊಂದಿಗೆ ಬೆಸೆದುಕೊಂಡಿವೆ. ಮಣ್ಣಿನ ಕಟ್ಟೆಯ ನಮ್ಮ ಬಾವಿಯು ಮನೆಯ ಅತೀ ಸಮೀಪವೇ ಇದ್ದುದರಿಂದ ನೀರನ್ನು ಎಳೆದು ತರಲು ಮನೆಯ ಮಹಿಳೆಯರಿಗೆ ಅಂತಹ ಕಷ್ಟವೇನೂ ಇರಲಿಲ್ಲ. ಆದರೆ ಬಚ್ಚಲು ಕೋಣೆಯು ಸುಮಾರು ನೂರು ಮೀಟರ್ ದೂರವಿದ್ದ ದನದ ಹಟ್ಟಿಯ ಪಕ್ಕದಲ್ಲಿತ್ತು. ಮನೆಯಲ್ಲಿ, ಚಿಕ್ಕಪ್ಪಂದಿರೆಲ್ಲಾ ಇದ್ದ ಒಟ್ಟು ಕುಟುಂಬ ನಮ್ಮದಾಗಿತ್ತಲ್ಲದೆ, ಅಲ್ಲಿಯ ಹಂಡೆ ತುಂಬಿಸುವ ಕೆಲಸವು ಮನೆಯ ಹೆಂಗಸರದ್ದೇ ಆಗಿತ್ತು. ನಾನಿನ್ನೂ ಏಳೆಂಟು ವರ್ಷದವಳಿರಬೇಕು; ಅವರೊಡನೆ ಸಣ್ಣ ತಂಬಿಗೆಯಲ್ಲಿ ನೀರು ಹಿಡಿದು ಹೋಗುತ್ತಿದ್ದ ನೆನಪು. ಬಾವಿಯ ಕಬ್ಬಿಣದ ರಾಟೆ ಎಣ್ಣೆ ಇಲ್ಲದೆ ಕುಂಯ್ ಗುಟ್ಟಿದಾಗ, ಅದಕ್ಕೆ ಎಣ್ಣೆಯನ್ನು ಬಾವಿಯ ಮೇಟ್ಟಲೇರಿ ಬಾಗಿ ಹಾಕುವುದನ್ನು ನೋಡಲೇ ನನಗೆ ಭಯವಾಗುತ್ತಿತ್ತು! ಮಳೆಗಾಲದಲ್ಲಿ ಒಂದೇ ಎಳೆತಕ್ಕೆ ಏರಿ ಬರುವ ಬಿಂದಿಗೆ ಮಜಾ
ಕೊಡುತ್ತಿತ್ತು.
ಹೀಗೆ ನಮ್ಮ ಜೀವನದಲ್ಲಿ ಅಮೂಲ್ಯವಾದ ಸ್ಥಾನವೊಂದನ್ನು ಪಡೆದಿದ್ದ ಬಾವಿಗಳು ಇಂದು ನಾಪತ್ತೆಯಾಗಿ, ಮಾಯವಾಗುತ್ತಿರುವ ಅಂತರ್ಜಲವನ್ನು ಹುಡುಕುತ್ತಾ ಪಾತಾಳದತ್ತ ಸಾಗುತ್ತಿರುವ ಕೊಳವೆ ಬಾವಿಗಳು ಎಲ್ಲೆಲ್ಲೂಕಂಡುಬರುವುದು ಶೋಚನೀಯ. ನನ್ನ ಬಾಲ್ಯದ ಬದುಕಿನ ಜೊತೆ ಜೊತೆಗೇ ಬೆಸೆದ ಬಾವಿ ಬಂಧ ಅಂತಿಂತಹದ್ದಲ್ಲ! ಬಾವಿ ರಾಟೆಯ ಕರಕರ ಸದ್ದು, ಕೊಡ ನೀರಿನಲ್ಲಿ ಮುಳುಗುವಾಗಿನ ಜುಳುಜುಳು ದನಿ, ಕೊಡದ ಕುತ್ತಿಗೆಯನ್ನು ಸುತ್ತಿದ ಹಗ್ಗ ಸಡಿಲಾಗಿ ಅಥವಾ ಹಗ್ಗವೇ ತುಂಡಾಗಿ, ಕೊಡ ನೀರಿಗೆ ಬೀಳುವ ಧಡಾರ್ ಶಬ್ದ…ಹೀಗೆ ಒಂದೇ, ಎರಡೇ..?! ಎಲ್ಲವನ್ನೂ ಕೇಳುತ್ತಾ ಬೆಳೆದವಳಿಗೆ, ಈಗಿನ ಕೊಳವೆಬಾವಿ ನೀರು, ಬಾಟಲಿ ನೀರಿನ ರುಚಿಗಳು ಹೇಗೆಸೇರಲು ಸಾಧ್ಯ ಹೇಳಿ?
ನನ್ನ ಈ ಬಾವಿ ಪ್ರೀತಿಗೇ ಇರಬೇಕು…ಈಗ ನಾವು ವಾಸವಾಗಿರುವ ಅರೆ ಪಟ್ಟಣದ ಪುಟ್ಟ ಜಾಗದಲ್ಲಿ ಒಂದಲ್ಲ… ಎರಡೆರಡು ಬಾವಿಗಳನ್ನು ಭಗವಂತ ಒದಗಿಸಿದ್ದಾನೆ! ಅಡುಗೆ ಮನೆಯ ಅಗತ್ಯತೆಗಳಿಗೆ ಆಳವಾದ ಬಾವಿಯ ನೀರನ್ನು ಸೇದಿಯೇ ಉಪಯೋಗಿಸುತ್ತೇವೆ. ಈ ನೀರು ಸೇದುವ ಹಂಬಲಕ್ಕಾಗಿಯೇ ಬಾವಿಗೆ ಪಂಪನ್ನು ಅಳವಡಿಸಲೇ ಇಲ್ಲ! ಆದ್ದರಿಂದ ದಿನಾ ನೀರು ಸೇದುವ ವ್ಯಾಯಾಮ ನಡೆದಿದೆ. ಎಲ್ಲಿ ಹೋಗುವುದಿದ್ದರೂ ನನ್ನ ಕೈಚೀಲದಲ್ಲಿ ಬಾವಿಯ ಸಿಹಿನೀರಿನ ಬಾಟಲಿ ತಪ್ಪುವುದಿಲ್ಲ! ಇದರಿಂದಾಗಿ, ಹೋದಕಡೆಗಳಲ್ಲಿ, ಅಗತ್ಯವಿದ್ದವರಿಗೆ ಈ ಸಿಹಿನೀರನ್ನು ಕೊಟ್ಟು ಬಾಯಿ ಚಪ್ಪರಿಸುವಂತೆ ಮಾಡಿದ್ದೇನೆ! ಹಳ್ಳಿ ಕಡೆಗಳಲ್ಲಿ ಇಂದಿಗೂ ಕೆಲವು ಮನೆಗಳ ಅಂಗಳದಲ್ಲಿ ಬಾವಿಯು ಹೆಮ್ಮೆಯಿಂದ ಶೋಭಿಸುತ್ತಿರುವುದು ಕಂಡರೆ ಖುಶಿ ಎನಿಸುತ್ತದೆ. ಯಾವುದೇ ಮನೆಗೆ ಹೋದರೂ, ಅಂಗಳದಲ್ಲಿ ಬಾವಿ ಕಂಡರೆ, ಅದರೊಳಗೆ ನೀರು ಎಷ್ಟಿದೆಯೆಂದು, ನನ್ನಂತೆ ಬಾವಿಯೊಳಗೆ ಬಾಗಿ ನೋಡದವರು ಇಲ್ಲವೆಂದೇ ನನ್ನೆಣಿಕೆ. ನಮ್ಮ ಮನೆಯಂಗಳದಲ್ಲಿರುವ ಬಾವಿಗೂ ಮನೆಗೆ ಬಂದವರು ಇಣುಕು ಹಾಕಿ, “ಅಬ್ಬಾ…ಎಷ್ಟು ಆಳದಲ್ಲಿದೆ ನೀರು!” ಎಂದು ಉದ್ಗಾರವೆತ್ತಿದಾಗ, ಬಾವಿ ಮನಸ್ಸಿಗೆ ನೋವಾಗಬಾರದೆಂದು ನಾನು ಅದರ ಸಹಾಯಕ್ಕೆ ಬರುವೆನು…”ಆಳದಲ್ಲಿದ್ದರೂ, ಅದರ ನೀರನ್ನು ಕುಡಿದರೆ ಮತ್ತೆ ಬೇರೇನೂ ಬೇಡ ನೋಡಿ!”
ಹೌದು, ನಮ್ಮ 42 ಅಡಿಗಳಷ್ಟು ಆಳದ ಬಾವಿಯಲ್ಲಿ, ಎಷ್ಟೇ ಮಳೆನೀರು ಸುರಿದರೂ, ಸದಾ ಇರುವುದು ಕೇವಲ ಐದು ಅಡಿ ನೀರು ಮಾತ್ರ! ಬಾವಿ ತೋಡುವ ಸಮಯದಲ್ಲಿ, ಕೆಳಗಡೆಗೆ ಶಿಲಾಬಂಡೆ(ಕರ್ಗಲ್ಲು)ಯು ಅಡ್ಡ ಬಂದಾಗ ಅದನ್ನು ಸ್ಪೋಟಿಸಲಾಯಿತು. ಆ ಸಮಯದಲ್ಲಿ ನೀರೇನೋ ಬಂತು…ಆದರೆ ಬಂಡೆಯ ಪದರದಲ್ಲಿ ಬಿರುಕುಂಟಾಗಿ ನೀರು ಒಂದು ಹಂತದಿಂದ ಮೇಲೇರದೆ ಅದರ ಮೂಲಕ ಹರಿದುಹೋಗುತ್ತದೆ… ಇದರಿಂದಾಗಿ ನೀರಿನ ಮಟ್ಟವು ಪೂರ್ತಿ ವರ್ಷ, ನಾಕೈದು ಅಡಿಗಳಷ್ಟು ಎತ್ತರಕ್ಕೆ ಒಂದೇ ಸಮನಾಗಿರುತ್ತದೆ. ಕರಿಬಂಡೆಯೊಳಗಡೆಯಿಂದ ಜಿನುಗುವ ಸಿಹಿನೀರು ಅತ್ಯಂತ ರುಚಿಯಾಗಿದ್ದು, ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬಿಸಿಯಾಗಿಯೂ ಇರುತ್ತದೆ.
ಪ್ರತೀ ವರ್ಷ ನರಕಚತುರ್ದಶಿ ಹಬ್ಬಕ್ಕಾಗಿ, ಬಾವಿಕಟ್ಟೆಯನ್ನು ತೊಳೆದು, ರಂಗೋಲಿ ಹಾಕಿ, ಶೃಂಗರಿಸಿ, ಹಣತೆ ಬೆಳಗಿಸಿಟ್ಟು ಮುಸ್ಸಂಜೆ ಹೊತ್ತಿಗೆ ಬಾವಿಯೊಳಗಿನ ಗಂಗಾದೇವಿಯನ್ನು ಘಂಟಾನಾದಗಳೊಂದಿಗೆ ಪೂಜಿಸಿ, ನೀರನ್ನು ಸೇದಿ, ಬಚ್ಚಲು ಹಂಡೆಗೆ ತುಂಬಿಸುವ ಭಾಗ್ಯ ನಮ್ಮ ಕೇರಿಯಲ್ಲಿ, ನಮಗೆ ಮಾತ್ರ ಇದೆಯೆನ್ನಲು ಹೆಮ್ಮೆಯೆನಿಸುತ್ತದೆ. ಇತ್ತೀಚೆಗೆ ಒಮ್ಮೆ ತೋಟದೊಳಗೆ ನಾಯಿಗಳ ಜಗಳದ ಸಮಯದಲ್ಲಿ ಒಂದು ನಾಯಿಯು ಬಾವಿಗೆ ಹಾಕಿದ್ದ ಪ್ಲಾಸ್ಟಿಕ್ ಪರದೆಯನ್ನೂ ಹರಿದು ಪಂಪು ಇರುವ ಬಾವಿಯೊಳಗೆ ಬಿತ್ತು. ಅತೀವ ನಾಯಿ ಪ್ರಿಯರಾದ ಅದರ ಯಜಮಾನರು ಹರಸಾಹಸದಿಂದ ಅದನ್ನು ಮೇಲೆತ್ತಿ ಕಾಪಾಡಿದರು. ಆದರೆ, ಆ ತನಕವೂ ಏನೂ ತೊಂದರೆ ಇಲ್ಲದೆ ಬರೇ ಪರದೆಯ ಹಿಂದೆ ಅಡಗಿದ್ದ ಬಾವಿಗಳ ಬಾಯಿಗಳನ್ನು ಕಬ್ಬಿಣದ ಪರದೆಯ ಹಿಂದೆ ಮುಚ್ಚಲಾಯಿತು…! ಹೀಗೆ, ನನ್ನ ಮತ್ತು ಬಾವಿಯೊಂದಿಗಿನ ಅವಿನಾಭಾವ ಸಂಬಂಧವು ನಿರಂತರ ಮುಂದುವರಿಯುತ್ತಿದೆ!
–ಶಂಕರಿ ಶರ್ಮ, ಪುತ್ತೂರು.
ಚೆಂದದ ಬರಹ. ನಾಯಿಗಳ ರೇಸ್ ಅನ್ನು ಒಳಗೊಂಡ ಬಾವಿಪುರಾಣ ಸೊಗಸಾಗಿದೆ!
ಬರಹವನ್ನು ಬಹಳ ಚಂದಕ್ಕೆ ಪ್ರಕಟಿಸಿ, ಮೆಚ್ಚಿ ಪ್ರೋತ್ಸಾಹಿಸಿದ ಹೇಮಮಾಲಾ ಅವರಿಗೆ ಧನ್ಯವಾದಗಳು.
ಹ..ಹ್ಹ.. ಬಾವಿಯೊಂದಗಿನ ನಿಮ್ಮ ಸಂಬಂಧ ನೆನಪು ಹಾಗೂ ನಾಯಿಯ ಯಜಮಾನನ ಪ್ರೀತಿ.ಎಲ್ಲವನ್ನು ಒಳಗೊಂಡ ನಿಮ್ಮ ಲೇಖನ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯಿತು.. ಧನ್ಯವಾದಗಳು ಮೇಡಂ.
ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.
ಚೆನ್ನಾಗಿದೆ ಬರಹ
ಧನ್ಯವಾದಗಳು ಆಶಾ ಅವರಿಗೆ.
ನಮ್ಮ ತಾತಾನ ಮನೆಯಲ್ಲಿ ಬಾವಿಯಿಂದ ನೀರು ಸೇದುತ್ತಿದ್ದ ನೆನಪುಗಳನ್ನು ನಿಮ್ಮ ಚೆಂದದ ಲೇಖನ
ನೀಡಿತು,ತುಂಬಾ ಚೆನ್ನಾಗಿ ದೆ
ಓದಿ, ಮೆಚ್ಚಿ, ಸವಿನೆನಪುಗಳೊಂದಿಗೆ ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು .. ವಿದ್ಯಾ ಮೇಡಂ.
ಬಾವಿಯ ಕುರಿತಾದ ಚಂದದ ಬರಹ. ನಿಮ್ಮನ್ನು ಭೇಟಿಯಾದಾಗ, ನಿಮ್ಮ ಕೈ ಚೀಲದಲ್ಲರುವ ಪುಟ್ಟ ಬಾಟಲಿಯ ಸಿಹಿನೀರನ್ನು ಕುಡಿಯುವ ಆಸೆಯಾಗಿದೆ
ಚಂದದ ಬರಹ