ಕವಿಯೇ ಕವಿತೆಯೋ,ಕವಿತೆಯೊಳು ಕವಿಯೋ..
ಭಾವಪ್ರಪಂಚದ ದೊರೆಗೆ
ಕಂಡಿದ್ದೆಲ್ಲಾ ಕವಿತೆ,
ಸ್ಪುರಣೆಗೊಳ್ಳಲು
ಹುಲ್ಲುಕಡ್ಡಿಯೇ ಸಾಕಾಯಿತು
ಚಿಮ್ಮಿಸುತಾ ಪದಗಳ ಒರತೆ..
ಹಾಗೆಂದು ಸರಳವೇನಲ್ಲ
ಕವಿ ನೇಯುವ ಕವನ,
ಒಳಗೊಳಗೇ ಬೇಯಬೇಕು
ನೋಯಬೇಕು
ವಿಷಯದ ಒಡಲಾಳವ ಭೇದಿಸಿ
ಆಶಯ ಮೂಡಿಸಬೇಕು..
ನೋವಲಿದ್ದಾಗ ಖುಷಿಯ
ನಗುನಗುತಲಿರುವಾಗ ದುಃಖದುಮ್ಮಾನಗಳ
ತಾನಲ್ಲದ ಪಾತ್ರಕೆ ಪರಕಾಯ ಪ್ರವೇಶ,
ಅನುಭವ ಕಲ್ಪನೆಗಳ ಸಮ್ಮಿಲನದ
ಅಂಕೆಯಲಿರಬೇಕಾದ ಭಾವಾವೇಶ ..
ಶೀರ್ಷಿಕೆ ನಗಣ್ಯವಾಗದೇ
ಸೆಳೆತದ ಮಳೆಯಲಿ
ಓದುಗ ಮಹಾಶಯ ತೋಯಬೇಕು,
ಒಳಗಣ ಪದಗಳ ಲಾಲಿತ್ಯದಿ
ಅಮೃತ ವಿಷವಾಗದ ಹಾಗೆ
ಹದವರಿತು
ವಿಷಯ ಬಿಂಬಿಸಬೇಕು..
ಬಿರುದು ಸನ್ಮಾನಗಳಿಗೆ ಹಿಗ್ಗದೇ
ಟೀಕೆ ಟಿಪ್ಪಣಿಗಳಿಗೆ ಕುಗ್ಗದೇ
ಸಮಚಿತ್ತದ ಸಾಹಿತ್ಯ
ಕೃಷಿಯಾಗಬೇಕು,
ಅದೊಂತರಾ ನಿರಂತರ ನಶೆಯಾಗಿ
ಕೊನೆಗೆ ಕವಿಯೇ ಕವಿತೆಯಾಗಿ
ಕವಿತೆಯದು ಬರೀ ಕವಿತೆಯಲ್ಲ
ಸಾಹಿತ್ಯ ಸೇವೆಯಾಗಬೇಕು.
–ಆಶಾ ಹೆಗಡೆ
ಕವಿ, ಕವಿತ್ವ,ಸೊಗಸಾಗಿ ಮೂಡಿಸಿರುವ ಕವಯಿತ್ರಿ ಗೆ ವಂದನೆಗಳು
ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ. ಕವಿಯ ಕೃಷಿಯನ್ನು ಎಷ್ಟು ಚೆನ್ನಾಗಿ ಬಣ್ಣಿಸಿದ್ದೀರಾ ಮೇಡಂ. ಅಭಿನಂದನೆಗಳು
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಬಣ್ಣಿಸಿದ್ದೀರಾ ಕವಿಯ ಕೃಷಿಯನ್ನು. ಕವಿಯ ಹೊಣೆಗಾರಿಕೆ ಜೊತೆಗೆ ಆತನಿಗೆ ಒಳ್ಳೆಯ ಕಿವಿಮಾತು ಹೇಳಿದ್ದೀರಾ. ಅಭಿನಂದನೆಗಳು ತಮಗ.
ಧನ್ಯವಾದಗಳು ಸರ್
ಕವಿಯ ಕಲ್ಪನೆ ಅವನ ಹೊಣೆಗಾರಿಕೆ ಬಗ್ಗೆ ವಿಸ್ತೃತ ವಾಗಿ ಕವಿತೆ ಯು ಮೂಲಕ ತಿಳಿಸಿರುವ ರೀತಿ ಬಹಳ ಸೊಗಸಾಗಿ ಮೂಡಿಬಂದಿದೆ. .. ಅಭಿನಂದನೆಗಳು ಮಗು
ತುಂಬಾ ಧನ್ಯವಾದಗಳು ಮೇಡಂ
ರವಿ ಕಾಣದ್ದನ್ನು ಕವಿ ಕಾಣುವನಂತೆ!…ಕವಿ ಕಾವ್ಯ ಭಾವದ ಲಹರಿ ಬಹಳ ಚೆನ್ನಾಗಿ ಮೂಡಿಬಂದಿದೆ.. ಕವನದಲ್ಲಿ.
ಧನ್ಯವಾದಗಳು ಮೇಡಂ
ಕವಿ ಮತ್ತು ಕವಿತೆಯ ಒಡಲಾಳದ ಭಾವಗಳ ಅನಾವರಣ ತವಿತೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಧನ್ಯವಾದಗಳು ಮೇಡಂ