ಪುಸ್ತಕ ಪರಿಚಯ: ‘ಮಾತ್ರೆ ದೇವೋ ಭವ’

Share Button
ಲೇಖಕಿ: ಆರತಿ ಘಟಿಕಾರ್

ಹೆಸರು: ಮಾತ್ರೆ ದೇವೋ ಭವ
ಲೇಖಕರ ಹೆಸರು: ಆರತಿ ಘಟಿಕಾರ್
ಪ್ರಕಾಶಕರು: ತೇಜು ಪಬ್ಲಿಕೇಶನ್
ಒಟ್ಟು ಪುಟಗಳು: 120
ಮೊದಲ ಮುದ್ರಣ: 2018
ಬೆಲೆ: ರೂ. 140/-
********** **********

ಹಾಸ್ಯ ಎನ್ನುವುದು ಕಥೆ ಕಾದಂಬರಿಯ ಹಾಗೆ ಕಲ್ಪನೆಯಲ್ಲಿ ಹುಟ್ಟುವುದಲ್ಲ. ಹಾಗೆ ಹುಟ್ಟಿದರೂ ಅದರಲ್ಲಿ ಸ್ವಾದವಿರುವುದಿಲ್ಲ.  ಹಾಸ್ಯವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಆಗಾಗ ಘಟಿಸಿದಾಗಲೇ ನಕ್ಕು ನಗಿಸಿ ಮನ ಹಗುರವಾಗಿಸುವ ಚಂದದ ಪ್ರಬಂಧವೊಂದು ಹುಟ್ಟಿಕೊಳ್ಳುತ್ತದೆ. ಗಂಭೀರ ಸಾಹಿತ್ಯವೊಂದು ಸಮಾಜದಲ್ಲಿ ತನ್ನದೇ ಅಲೆಗಳನ್ನು ಹರಿಸುವ ಮೂಲಕ ಬದುಕಿನ ಮೌಲ್ಯಗಳನ್ನು ತಿಳಿಸಲೆತ್ನಿಸಿದರೆ ಹಾಸ್ಯ ಸಾಹಿತ್ಯವು ನಗುವಿನ ಕಚಗುಳಿ ಇಡುತ್ತಲೇ ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸುತ್ತಾ ಅದನ್ನು ತಿದ್ದಿಯೂ ಬಿಡುತ್ತದೆ.

ಹಾಸ್ಯ ಸಾಹಿತ್ಯ ರಚಿಸುವ ಬರಹಗಾರರು ಸ್ವಭಾವದಲ್ಲಿ ಧಾರಾಳವಾಗಿ ಇರಬೇಕು. ಹಾಸ್ಯ ಪ್ರಜ್ಞೆ ಉಳ್ಳವರಾಗಿರಬೇಕು. ಅಂದರೆ ಮಾತ್ರ ಹಾಸ್ಯ ಸಾಹಿತ್ಯವು ಬರಹಗಾರರಿಗೆ ಒದಗಿ ಬರುವ ಎಲ್ಲ ಸನ್ನಿವೇಶಗಳಲ್ಲಿ ವಿಭಿನ್ನತೆಯನ್ನು ಹುಡುಕಿ, ಹೆಕ್ಕಿ, ಅದಕ್ಕೆ ಹಾಸ್ಯದ ಸ್ಪರ್ಶ ನೀಡಿ ಅಕ್ಷರ ರೂಪಕ್ಕಿಳಿಸಿ ಅಬಾಲವೃದ್ಧರಾದಿಯಾಗಿ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಆದರೆ ಹಾಸ್ಯವೊಂದು ಯಾವತ್ತಿಗೂ ಜಾತಿ-ನೆಲ-ಭಾಷೆಯನ್ನು ಅವಹೇಳನ ಮಾಡುವ, ಇತರರ ದೌರ್ಬಲ್ಯವನ್ನು ಮೂದಲಿಸುವ, ಅಶ್ಲೀಲತೆಯನ್ನು ಬಿಂಬಿಸುವ ವಸ್ತುವಾಗಬಾರದು. ಈ ನಿಟ್ಟಿನಲ್ಲಿ ಹಾಸ್ಯ ಸಾಹಿತ್ಯದಲ್ಲಿ ಕೃಷಿ ಮಾಡುವ ಬರಹಗಾರರು ಸಾಕಷ್ಟು ನಿಗರ್ವಿ ಹಾಗೂ ಪ್ರಬುದ್ಧರಾಗಿರಬೇಕು ಆಗಲೇ ಒಂದು ಉತ್ತಮ ಹಾಸ್ಯ ಸಾಹಿತ್ಯ ಓದುಗರ ಮನ ಗೆಲ್ಲುತ್ತದೆ.

ಇಂದು ನಾನೀಗ ಹೇಳಹೊರಟಿರುವುದು ತಮ್ಮ ಜೀವನದ ಒಂದೊಂದೇ ಹಾಸ್ಯ ಪ್ರಸಂಗಗಳನ್ನು ನಮ್ಮ ಕೈಲಿಟ್ಟು ಓದಿಸುತ್ತಾ ನಗೆ ಗುಳಿಗೆಗಳನ್ನು ತಿನ್ನಿಸಿ ಮನರಂಜನೆ ನೀಡುವುದರ ಜೊತೆಗೆ ಮೊಂಡುತನ ಸಾಧಿಸುವ ಮೆದುಳಿಗೆ ಆರತಿ ಎತ್ತುವ ಲೇಖಕಿ ಆರತಿ ಘಟಿಕಾರ್ ರವರ ಚೊಚ್ಚಲ ಹಾಸ್ಯ ಬರಹಗಳ ಸಂಕಲನ “ಮಾತ್ರೆ ದೇವೋ ಭವ” ಕುರಿತು.

ಹನಿಗವನಗಳ ಮೂಲಕ ನಗೆ ಚಟಾಕಿ ಹಾರಿಸುತ್ತಿದ್ದ ಲೇಖಕಿ ಇಲ್ಲಿ ಮೊಟ್ಟಮೊದಲ ಬಾರಿಗೆ ಲಲಿತ ಪ್ರಬಂಧ ರಚಿಸುವ ಪ್ರಯತ್ನ ಮಾಡಿದ್ದಾರೆ. ಇವರ ಮನೆಯಲ್ಲಿ ಸಂಗೀತದ ಸ್ವರ ಮಾಧುರ್ಯ, ಸಾಹಿತ್ಯದ ಪದ ಲಾಲಿತ್ಯ, ಹಾಸ್ಯದ ರಸದೌತಣದ ಸಮೃದ್ಧಿಯೆ ತುಂಬಿದೆ. ಇದೇ ಈ ಸಂಕಲನದ ಹುಟ್ಟಿಗೆ ಕಾರಣವಾಗಿದೆ ಎಂದರೆ ಅತಿಶಯವೆನಿಸದು.

ಇದರಲ್ಲಿ ಲೇಖಕಿಯು ಕೆಲವರ್ಷಗಳ ಕಾಲ ದೂರದ ದುಬೈನಲ್ಲಿ ವಾಸವಿದ್ದ ಸಂದರ್ಭದಲ್ಲಿ ಮನೆ, ಕಚೇರಿ, ಮಾರುಕಟ್ಟೆ, ನೆರೆಹೊರೆಯವರಲ್ಲಿ ಘಟಿಸಿದ ಹಾಸ್ಯ ಪ್ರಸಂಗಗಳನ್ನು ತಮ್ಮದೇ ಶೈಲಿಯಲ್ಲಿ ಒಂದೊಂದು ಗುಳಿಗೆಗಳಾಗಿ ಓದುಗರಿಗೆ ಉಣ ಬಡಿಸಿದ್ದಾರೆ. ಅದರಲ್ಲೂ ಸ್ಥೂಲವಿರುವ ದಢೂತಿ ದೇಹ, ವಿವಿಧ ಭಾಷೆಗಳ ಸಮ್ಮಿಶ್ರಣ, ತುಂಟ ಮಕ್ಕಳು, ಹಾಸ್ಯದ ಮೂಲಕ ಮಡದಿಯ ತಪ್ಪು ಒಪ್ಪುಗಳ ಗುಣಗಾನ ಮಾಡುವ ಪತಿರಾಯ, ನಿತ್ಯವೂ ನಡೆಯುವ ಬಗೆಬಗೆ ವಿದ್ಯಮಾನಗಳು, ಹಾಸ್ಯದ ಹೊನಲು ಹರಿಸುವ ಸ್ನೇಹಿತರ ಬಳಗ ಇವೆಲ್ಲವೂ ಒಂದು ಸಮಗ್ರ ಹಾಸ್ಯ ಸಾಹಿತ್ಯ ಘಟಿಸಲು ಪ್ರೇರಣೆ ನೀಡುವ ಆಣಿಮುತ್ತುಗಳು.

ಪ್ರಸ್ತುತ “ಮಾತ್ರೆ ದೇವೋ ಭವ” ಸಂಕಲನದಲ್ಲಿ ಅಡುಗೆ, ಅತಿಥಿಗಳ ಉಪಚಾರ, ಡಯಟ್, ಶಾಪಿಂಗ್, ಸಾಮಾಜಿಕ ಜಾಲತಾಣ, ಕ್ಲೀನಿಂಗ್ ಟಿಪ್ಸ್, ಮನೆಗೆಲಸದ ಅಚ್ಚುಕಟ್ಟುತನ, ಕೆಲಸದವರ ಮೂಗು ತೂರಿಸುವಿಕೆ, ಹಣಕಾಸಿನ ನಿರ್ವಹಣೆ, ಪ್ರವಾಸ, ವಿದೇಶ ವಾಸ, ಮಕ್ಕಳ ಬುದ್ಧಿವಂತಿಕೆ ಇದರೊಂದಿಗೆ ತಮ್ಮ ಜೀವನದಲ್ಲಿ ತಾವು ಮಾಡಿಕೊಂಡ ಯಡವಟ್ಟು, ಅನುಭವಿಸಿದ ಪಜೀತಿ, ಪೀಕಲಾಟಗಳನ್ನೆಲ್ಲ ನವಿರು ಹಾಸ್ಯದ ಮೂಲಕ ಸೊಗಸಾಗಿ ವರ್ಣಿಸಿದ್ದಾರೆ.

ಹೇಗೆ ಹಾಸ್ಯ ಸಾಹಿತ್ಯದಲ್ಲಿ ಬರಹಗಾರರ ಸ್ವಭಾವ ಧಾರಾಳವಾಗಿರಬೇಕೊ ಹಾಗೆ ಪದಪುಂಜ ಹೆಣೆಯುವಲ್ಲಿ ಜಿಪುಣವಾಗಿರಬೇಕು. ಸನ್ನಿವೇಶಗಳನ್ನು ವಿವರಿಸುವಾಗ ಕೊಂಚ ಬಿಗಿತನ ಕಾಯ್ದುಕೊಂಡು ಓದುಗರಲ್ಲಿ ವಿಚಾರ ಶಕ್ತಿ ತುಂಬುವ ಪ್ರಯತ್ನ ಮಾಡಿದಾಗ ಹಾಸ್ಯವು ತೂಕದಿಂದ ವಿಜೃಂಭಿಸುತ್ತದೆ. ಈ ಸುಂದರ ಅವಕಾಶವನ್ನು ಲೇಖಕಿ ಇಲ್ಲಿ ಕೈಚೆಲ್ಲಿದ್ದಾರೆ ಎನ್ನಬಹುದು. 

ಆದರೆ ಇದು ಅವರ ಚೊಚ್ಚಲ ಕೃತಿಯಾದ್ದರಿಂದ ಇಂತಹ ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸುವುದು ಒಳಿತು. ಅದರಲ್ಲೂ ಖುದ್ದು ಲೇಖಕಿಯ ತಾಯಿಯೂ ಜನಪ್ರಿಯ ಹಾಸ್ಯ ಸಾಹಿತಿ ಸುಧಾ ಸರನೋಬತ್. ಹಾಗಾಗಿ ಹಾಸ್ಯ ಮನೋಭಾವ ರಕ್ತಗತವಾಗಿ ಬಂದಿರುವುದು ಗಮನಾರ್ಹ. “ಮಾತ್ರೆ ದೇವೋ ಭವ” ನಂತರ ಸುಮ್ಮನೇ ಕುಳಿತುಕೊಳ್ಳದೆ ಮತ್ತಷ್ಟು ಚುರುಕಾಗಿ “ವಠಾರ ಮೀಮಾಂಸೆ” ಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿರುವುದು ಶ್ಲಾಘನೀಯ. ಲೇಖಕಿ ಆರತಿ ಘಟಿಕಾರ್ ಅವರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಚೆಂದ ಚೆಂದದ ಕೃತಿಗಳು ಮೂಡಿಬರಲಿ ಎಂದು ಹಾರೈಸುವೆ. 

ಮೇಘನಾ ಕಾನೇಟ್ಕರ್ 

7 Responses

 1. ನಯನ ಬಜಕೂಡ್ಲು says:

  ಇದರಲ್ಲಿರುವ ಎಲ್ಲ ಹಾಸ್ಯ ಲೇಖನಗಳೂ ಚೆನ್ನಾಗಿವೆ, ನಗೆಗಡಲಲ್ಲಿ ತೇಲಿಸುತ್ತವೆ. ಸೊಗಸಾಗಿದೆ ಪುಸ್ತಕ ಪರಿಚಯ

 2. Hema says:

  ಪುಸ್ತಕ ಪರಿಚಯ ಚೆನ್ನಾಗಿದೆ, ಓದಬೇಕು ಅನ್ನಿಸಿತು.

 3. . ಶಂಕರಿ ಶರ್ಮ says:

  ಸೊಗಸಾದ ಶೀರ್ಷಿಕೆಯನ್ನು ಹೊತ್ತ ಹಾಸ್ಯ ಬರಹಗಳ ಸಂಕಲನದ ವಿಶ್ಲೇಷಣೆ ಜೊತೆಗೆ ಬರಹಗಾರ್ತಿಯವರ ಬಗೆಗೂ ಬಹಳಷ್ಟು ವಿಶೇಷ ಮಾಹಿತಿಗಳನ್ನು ಒಳಗೊಂಡ ಲೇಖನ ಇಷ್ಟವಾಯ್ತು.. ಧನ್ಯವಾದಗಳು, ಮೇಘನಾ ಮೇಡಂ.

 4. ನಾಗರತ್ನ ಬಿ. ಅರ್. says:

  ಪುಸ್ತಕ ಪರಿಚಯ ಮಾಡಿಕೊಟ್ಟರೀತಿ ಚೆನ್ನಾಗಿದೆ ಪುಸ್ತಕ ಕೊಂಡು ಓದುವ ಹಂಬಲ ಹುಟ್ಟಿಸುವಂತಿದೆ.ಧನ್ಯವಾದಗಳು ಮೇಡಂ.

 5. ಶಿರೋನಾಮೆ ನೋಡಿದ ತಕ್ಷಣ ಏನಪ್ಪ ಇದು!! ಅಕ್ಷರ ತಪ್ಪಿಹೋಯಿತಾ ಅಥವಾ ಮಾತ್ರೆಯ ಪುರಾಣವೋ ಎನ್ನಿಸಿ ಕುತೂಹಲ ಮೂಡುವುದಂತೂ ಸತ್ಯ..

 6. ವಿದ್ಯಾಶ್ರೀ ಅಡೂರ್ says:

  ಸೂಪರ್ ಮೇಡಂ

 7. Padma Anand says:

  ಪುಸ್ತಕ ಮತ್ತು ಲೇಖಕಿಯ ಪರಿಚಯ ಸೊಗಸಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: