ಭದ್ರ ಭ್ರಾತೃ ಪ್ರೇಮಿ ಭರತ

Share Button

ಭಾರತದ ಕುಟುಂಬ ವ್ಯವಸ್ಥೆ ಹಿರಿದಾದುದು. ಭದ್ರತೆ, ಪವಿತ್ರತೆ, ಬಂಧುತ್ವ, ಅನ್ಯೋನ್ಯತೆ ಮೊದಲಾದ ಮೌಲ್ಯಗಳಿಂದೊಡಗೂಡಿ ಆದರ್ಶವಾದುದು. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಹೇಗಿರಬೇಕೆಂಬ ಮಾರ್ಗದರ್ಶನ ನಮ್ಮ ಪುರಾಣಗಳಿಂದ,ಸನಾತನ ಸಂಸ್ಕೃತಿಯಿಂದ ವೇದ್ಯ. ಸತೀಧರ್ಮ, ಪತಿಧರ್ಮ, ಪಿತನ ಧರ್ಮ, ತಂದೆ-ತಾಯಿಯರ ಧರ್ಮ ಹೀಗೆ ಪ್ರತಿಯೊಬ್ಬರ ಕರ್ತವ್ಯವನ್ನೂ ತಿಳಿಸಿ ಹೇಳುತ್ತವೆ ನಮ್ಮ ವೇದೋಪನಿಷತ್ತುಗಳು.

ರಾಮಾಯಣವೆಂಬ ಮಹಾಪುರಾಣದ ಪ್ರಸ್ತಾಪ ಮಾಡಿದ ತಕ್ಷಣ ನಮ್ಮ ಸ್ಮೃತಿಪಟಲಕ್ಕೆ ಮೊದಲು ಬರುವವನು ಪಿತೃವಾಕ್ಯ ಪರಿಪಾಲಕ ಶ್ರೀರಾಮಚಂದ್ರ, ಮಾತೃವಾಕ್ಯ ಪಾಲಿಸಿದವ (ಅಮ್ಮ ಹೇಳಿದಂತೆ ಅಣ್ಣನೊಂದಿಗೆ ವನವಾಸಕ್ಕೆ ತೆರಳಿದವ) ಲಕ್ಷಣ. ಸತಿಧರ್ಮ ಅನುಸರಿಸಿದವಳು ಸೀತೆ, ರಾಮ-ಲಕ್ಷಣ ನಿಕಟ ಸಹೋದರರು. ಅಣ್ಣನಾದ ರಾಮನ ನೆರಳಿನಂತೆ ಲಕ್ಷಣ ಇದ್ದರೂ ಭ್ರಾತೃಪ್ರೇಮ ಎಂದರೇನೆಂದು ತಿಳಿಸಿ ಜಗತ್ತಿಗೆ ಆದರ್ಶಪ್ರಾಯನಾಗಿ ಇನ್ನೊಬ್ಬನಿದ್ದಾನೆ. ಅವನೇ ಭರತ.

ಸೂರ್ಯವಂಶದವನೂ ಸಾಕೇತ ಸಾಮ್ರಾಜ್ಯವನ್ನಾಳಿದವನೂ ಆದ ದಶರಥನ ಪುತ್ರನೇ ಭರತ, ಅರ್ಥಾತ್ ಶ್ರೀರಾಮಚಂದ್ರನ ಇನ್ನೊಬ್ಬ ಸಹೋದರ. ಕೇಕೆಯ ದೇಶದ ಅಶ್ವಪತಿರಾಜನ ಮಗಳಾದ ಕೈಕೆ ದಶರಥನ ಕಿರಿಯ ರಾಣಿ, ಇವಳ ಪುತ್ರನೇ ಭರತ, ಇವನ ಪತ್ನಿ ಕುಶಧ್ವಜನ ಪುತ್ರಿಯಾದ ಮಾಂಡವಿ, (ಜನಕರಾಜನ ತಮ್ಮನ ಮಗಳು).

ಮಂಥರೆಯೆಂಬ ದಾಸಿಯ ದುರ್ಬೋಧನೆಯ ಮಾತಿನ ಮೋಡಿಗೆ ಮರುಳಾದಳು ಕೈಕೆ. ಇವಳ ಹಠದಿಂದ ಶ್ರೀರಾಮನಿಗೆ ಆಗಬೇಕೆಂದು ನಿರ್ಣಯಿಸಿದ ಪಟ್ಟಾಭಿಷೇಕ ತಪ್ಪಿ ಹೋಯ್ತು . ಭರತನಿಗೆ ರಾಜ್ಯಾಡಳಿತ, ಶ್ರೀರಾಮನಿಗೆ ಹದಿನಾಲ್ಕು ಸಂವತ್ಸರಗಳ ವನವಾಸವೂ ಆಗಬೇಕೆಂದಾಯ್ತು. ತನ್ಮೂಲಕ ಪುತ್ರಶೋಕದಿಂದ ದಶರಥನಿಗೆ ಅಕಾಲ ಮರಣ ಇವುಗಳೆಲ್ಲ ರಾಮಾಯಣದ ದುರಂತ ಸನ್ನಿವೇಶಗಳು.

ಭರತನು ಬಾಲ್ಯಾವಸ್ಥೆಯಲ್ಲಿ ಬೆಳೆದದ್ದು ಮಾತಾಮಹನ ಊರಾದ ಕೇಕೆಯ ದೇಶದಲ್ಲಿ ಎಂದು ತಿಳಿದು ಬರುತ್ತದೆ. ಅಂತೆಯೇ ರಾಮ ಪಟ್ಟಾಭಿಷೇಕವೆಂದು ತೀರ್ಮಾನವಾದ ಕೊನೆಗೆ ಅದು ಕೈ ತಪ್ಪಿ ರಾಮನಿಗೆ ವನವಾಸ, ಭರತನಿಗೆ ರಾಜ್ಯಾಭಿಷೇಕವು ತೀರ್ಮಾನವಾದಾಗಲೂ ಭರತನು ತನ್ನೂರಲ್ಲಿ ಇಲ್ಲದೆ ತಾಯಿಯ ತವರುಮನೆಯಲ್ಲಿಯೇ ಇದ್ದ. ಈ ಆಘಾತದಿಂದ ಚೇತರಿಸಿಕೊಳ್ಳಲಾಗದ ಪಿತನು ಸ್ವರ್ಗಸ್ಥನಾದ ಮೇಲೆಯೇ ಅವನು ಊರಿಗೆ ಬಂದದ್ದು. ಅದೂ ವಿಷಯ ನೇರವಾಗಿ ತಿಳಿಸದೆ  ಜರೂರು ಬರಬೇಕೆಂದು ಮಾತ್ರ ತಿಳಿಸಿ ಕರೆಸಿಕೊಂಡದ್ದು. ಭರತನು ಬಂದು ವಿಷಯ ತಿಳಿದಾಗ ಮೂರ್ಛೆ ಹೋಗುತ್ತಾನೆ. ಮೂರ್ಛೆಯಿಂದ ತಿಳಿದೆದ್ದ ಭರತನು ಆರೈಕೆ ಮಾಡಿದ ತನ್ನಮ್ಮನನ್ನು ಕಂಡು ಕ್ರೋಧಗೊಂಡವನು ಹೇಳುತ್ತಾನೆ. ”ಅಮ್ಮಾ…ಇದು ನೀನು ನನ್ನನ್ನು ಕೊಂದದ್ದಕ್ಕೆ ಸಮ. ನನ್ನ ಜೀವ ಕೊನೆಯಾದ ಮೇಲೆ ನನಗೀ ರಾಜ ದೊರಕಿ ಏನು ಪ್ರಯೋಜನ ?  ತಂದೆಯನ್ನು ಕೊಂದು ಅವರಿಗೆ ಸಮನಾದ ಅಣ್ಣನನ್ನು ಕಾಡಿಗೆ ಕಳುಹಿಸಿದ ನೀನು ಈ ಕುಲಕ್ಕೇ ಕುಲನಾಶಿಯಂತೆ ಬಂದೆ!” ಎಂದು ಧಿಕ್ಕರಿಸುತ್ತಾನೆ.

ತಾಯಿಯ ಹಠದಿಂದಲೇ ತಂದೆ ಭರತನಿಗೇ ರಾಜ್ಯವನ್ನು ಕೊಡುತ್ತಾನೆ. ಆದರೆ ಅದನ್ನು ದಿಟ್ಟವಾಗಿ ನಿರಾಕರಿಸುತ್ತಾ ಅಣ್ಣನಿಗಿರುವ ಕಾನನಕ್ಕೆ ಬಂದು ‘ನೀನೇ ಹಿಂತಿರುಗಿ ಬಂದು ರಾಜ್ಯವನ್ನಾಳಬೇಕೆಂದು ಭರತ ಅಂಗಲಾಚುತ್ತಾನೆ. ನಾನು ನಿನ್ನ ಶಿಷ್ಯ. ದಾಸಾನು ದಾಸ, ನೀನು ಪ್ರಸನ್ನನಾಗಿ ರಾಜ್ಯಕ್ಕೆ ಹಿಂತಿರುಗಿ ಬಂದು ಅಭಿಷಿಕ್ತನಾಗು’ ಎಂದು ಪರಿಪರಿಯಾಗಿ ಪ್ರಾರ್ಥಿಸುತ್ತಾನೆ ಭರತ. ತಾನಾಗಿ ಬಯಸದಿದ್ದರೂ ತನ್ನ ಕೈಗೆ ಬಂದ ಅಧಿಕಾರವನ್ನು ಸ್ವೀಕರಿಸಲು ತಯಾರಿಲ್ಲ. ಮಾತ್ರವಲ್ಲ ಅದು ಸಲ್ಲಬೇಕಾದವನಿಗೇ ಸಲ್ಲಬೇಕೆಂದು ಅವನನ್ನು ಒಪ್ಪಿಸುವ ಶತಃಪ್ರಯತ್ನ ಮಾಡುವ ಬುದ್ದಿ ರಾಜರುಗಳಿಗೆ ಇತಿಹಾಸದಲ್ಲೂ ವಿರಳ. ವರ್ತಮಾನ ಕಾಲದವರಿಗೆ ಇದನ್ನ ಊಹಿಸುವುದಕ್ಕೂ ಸಾಧ್ಯವೇ..? ರಾಜ್ಯಕ್ಕೆ ಹಿಂತಿರುಗಿ ಬರಲು ಎಷ್ಟು ಮಾತ್ರಕ್ಕೂ ಒಪ್ಪದ ರಾಮನಲ್ಲಿ  ‘ಅಣ್ಣ… ನೀನು ವನವಾಸದಲ್ಲಿರುವ ಹದಿನಾಲ್ಕು ವರ್ಷಗಳ ಕಾಲ ನಿನ್ನ ಈ ಪಾದುಕೆಗಳನ್ನು ಪ್ರತಿನಿಧಿಯನ್ನಾಗಿರಿಸಿಕೊಂಡು ರಾಜ್ಯಭಾರ ಮಾಡುತ್ತೇನೆ. ಅದರೊಳಗೆ ನೀನು ಬರಬೇಕು. ಮತ್ತೆ ಒಂದೇ ಒಂದು ದಿನ ಹೆಚ್ಚಾದರೂ ನಾನು ಬದುಕಿ ಉಳಿಯಲಾರೆ’ ಎನ್ನುವ ಭರತನ ಭ್ರಾತೃಪ್ರೇಮ ವರ್ಣಿಸಲಸದಳ. ಭರತನಿಗೆ ಅಯೋಧ್ಯೆಗೆ ಹೋಗಲು ಮನಸ್ಸಾಗದೇ ಸಮೀಪದ ನಂದೀ ಗ್ರಾಮದಲ್ಲಿ ಇರತೊಡಗಿದನು.

ವಸಿಷ್ಠರಿಂದ ಭರತನಿಗೆ ಕೆಲವು ಧರ್ಮ ಪರೀಕ್ಷೆಗಳು ಒಡ್ಡಲ್ಪಟ್ಟವು. ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದಲ್ಲಿರಿಸಿ  ರಾಮನ ಪ್ರತಿನಿಧಿಯಾಗಿ ರಾಜ್ಯಭಾರ ಮಾಡುತ್ತೇನೆ ಎಂದರೂ, ಮಾರನೆ ದಿನ ಪ್ರಾತಃಕಾಲ ರಾಜೋಚಿತವಾದ ಚಾಮರಗಳನ್ನೆಲ್ಲ  ಹಾಕಿಸಿ ಸಿದ್ದಗೊಳಿಸುತ್ತಾರೆ., ಅಪ್ಪಿ-ತಪ್ಪಿ ಭರತನು ಅಧಿಕಾರ ಬಯಕೆಯಿಂದ ಅದರಲ್ಲಿ ಅಲಂಕರಿಸುತ್ತಾನೋ  ಎಂದು ನೋಡುವುದಕ್ಕೆ! ಆದರೆ ಭರತನು ಆ ಧರ್ಮ ಪರೀಕೆಯಲಿ ಗೆದ್ದಿದ್ದನು. ಅವನು ರಾಜಾಸನವನ್ನು ಕಣ್ಣಿಗೊತ್ತಿಕೊಂಡು ಅದರಲ್ಲಿ ರಾಮನಿರುವಂತೆ ಭಾವಿಸಿ ಪಕ್ಕದಲ್ಲಿ ಮಂತ್ರಿಯ ಆಸನದಲ್ಲಿ ಕುಳಿತನಂತೆ!

ಅದು ಕಾಡಿನಲ್ಲಿ ಹದಿನಾಲ್ಕು ವರ್ಷ ಕಳೆದರೆ, ಭರತ ನಾಡಿನಲ್ಲದ್ದೂ ಅಣ್ಣನ ಅನುಪಸ್ಥಿತಿಯನ್ನು  ತಪಸ್ವಿಯಂತೆ ಕಳೆಯುತ್ತಾನೆ. ರಾಮನ ಸೇವೆಯಂದೇ ಭಾವಿಸಿ ರಾಜ್ಯಭಾರವನ್ನು ಕೈಗೊಳ್ಳುತ್ತಾನೆ.

ವನವಾಸದಲ್ಲಿದ್ದ, ರಾಮ, ಲಕ್ಷ್ಮಣ, ಸೀತೆಯರು ಚಿತ್ರಕೂಟ ಪರ್ವತದಲ್ಲಿದ್ದರು.ಅಯೋಧ್ಯೆಯಿಂದ ಈ ಪ್ರದೇಶಕ್ಕೆ ಹೋಗಲು ಗಂಗಾನದಿ ದಾಟಬೇಕಿತ್ತು. ಅಲ್ಲಿ ಗುಹನೆಂಬ ಬೇಡರ ರಾಜ ದೋಣಿ ನಡೆಸುತ್ತಿದ್ದ, ರಾಮನನ್ನು ರಾಜ್ಯಕ್ಕೆ ಹಿಂತಿರುಗಿ ಕರೆತರಲು ಪರಿವಾರದವರೊಂದಿಗೆ ಬರುತ್ತಿದ್ದ ಭರತನನ್ನು ಕಂಡು ಗುಹನಿಗೆ ಮೊದಲು ಸಂದೇಹವುಂಟಾಗಿತ್ತು. ಮತ್ತೆ ಭರತನಿಂದ ನಿಜ ವಿಷಯ ತಿಳಿದು ಗುಹನಿಗೆ ಭರತನ ದೊಡ್ಡತನದ ಬಗ್ಗೆ ಮೆಚ್ಚಿಕೆಯಾಯ್ತು. ಗುಹನು ಭರತನನ್ನು ಶ್ಲಾಘಿಸಿದ ರೀತಿ ಮನೋಜ್ಞವಾದುದು.

ಧನ್ಯಸ್ವಂ ತ್ವಯಾ ತುಲ್ಯಂ ಪಶ್ಯಾಮಿ ಜಗತೀತಲೇ
ಅಯತ್ನಾದಾಗತಂ ರಾಜ್ಯಂ ಯಂ ತ್ಯಕ್ತು ಮಹೇಚ್ಛಸಿ!!

ಯತ್ನವಿಲ್ಲದೇ ಬಂದ ರಾಜ್ಯವನ್ನು ತ್ಯಜಿಸುತ್ತಿರುವ ನೀನು ಧನ್ಯ. ನಿನ್ನಂತಹವನನ್ನು ಕತ್ತಿನಲ್ಲಿ ಬೇರೆ ಯಾರನ್ನೂ ಕಾಣೆ ಎನ್ನುತ್ತಾನೆ ‘ಗುಹ’ ಭರತನ ಭ್ರಾತೃಪ್ರೇಮವನ್ನು ನೋಡಿ.

ನಿಷ್ಕಲ್ಮಶ ಪ್ರೇಮವಿದ್ದಾಗ ತ್ಯಾಗ ಸಹಜವಾಗಿರುತ್ತದೆ. ತ್ಯಾಗವೇ ಅಮರತ್ವಕ್ಕೆ ದಾರಿ. ಬಹ್ರತನು ರಾಜ್ಯಭೋಗಕ್ಕೆ ಆಸೆಪಟವನೇ ಅಲ್ಲ, ಹದಿನಾಲ್ಕು ವರ್ಷ ರಾಜ್ಯವಾಳಿದರೂ ಎಳ್ಳಷ್ಟೂ ಅಧಿಕಾರ ಮದ ತಲೆಗೆ ಏರಲಿಲ್ಲ. ಇವನ ರಾಜ್ಯಾಡಳಿತ ಸಮೃದ್ಧವಾಗಿ ಶಾಂತವಾಗಿತ್ತೆಂದು  ಕವಿಗಳ ವರ್ಣನೆ.  ಆದ್ದರಿಂದಲೇ  ಈತನ ಹೆಸರು ಇಂದಿಗೂ ನಮ್ಮ ದೇಶಕ್ಕೆ  ಅಂಟಿಕೊಂಡಿದೆ. ಕುಟುಂಬದ ಸ್ವಾರ್ಥತೆಯನ್ನು ನಿರ್ಮೂಲ ಮಾಡುವುದು ಪ್ರತೀಕಾರದಿಂದಲ್ಲ, ತ್ಯಾಗದಿಂದ ಎಂಬುದು ವಾಲ್ಮೀಕಿ ಮಹರ್ಷಿಯ ಸಂದೇಶ. ಮಹತ್ತನ್ನು  ಸಾಧಿಸಲು ತ್ಯಾಗದ ಅವಶ್ಯಕತೆ ತುಂಬಾ ಇದೆ ಎಂಬುದು ಎಲ್ಲ ಕಾಲದಲ್ಲಿಯೂ ನಿಲ್ಲುವ ಚಿರನೂತನ ಸತ್ಯ. ಕುಟುಂಬವನ್ನು ಮಾತ್ರವಲ್ಲದೆ  ಸಮಾಜವನ್ನೂ ಪರಿಷ್ಕರಿಸುವ ಪ್ರಧಾನ ಸಾಧನವೆಂದರೆ  ತ್ಯಾಗ. ಭರತನ ಭ್ರಾತೃಪ್ರೇಮ, ನಿಸ್ವಾರ್ಥ, ತ್ಯಾಗ ಮೊದಲಾಗ ಗುಣಮೌಲ್ಯಗಳು ಮಾನವ ಕುಲಕ್ಕೆ ಆದರ್ಶಪ್ರಾಯವಾಗಿ ಚಿರತ್ವವನ್ನು ಪಡೆದಿವೆ. 

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. ನಯನ ಬಜಕೂಡ್ಲು says:

  Nice

 2. . ಶಂಕರಿ ಶರ್ಮ says:

  ಅತ್ಯುಚ್ಚ ಮಟ್ಟದ ಭರತನ ಭಾತೃಪ್ರೇಮವನ್ನು ಸರಳವಾಗಿ ಅಕ್ಷರರೂಪಕ್ಕಿಳಿಸಿದ ವಿಜಯಕ್ಕನವರ ಸೊಗಸಾದ ಪೌರಾಣಿಕ ಕಥಾಪ್ರಸಂಗವು ಬಹಳ ಚೆನ್ನಾಗಿದೆ.

 3. ನಾಗರತ್ನ ಬಿ. ಅರ್. says:

  ಭರತನಿಗೆ ರಾಮನ ಮೇಲಿದ್ದ ಸೋದರನ ಪ್ರೇಮವನ್ನು ಅತ್ಯಂತ ಸರಳ ಸುಂದರ ವಾಗಿ ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ ಮೇಡಂ ಧನ್ಯವಾದಗಳು.

 4. ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.

 5. Padma Anand says:

  ಭರತನ ಭಾತೃಪ್ರೇಮದ ಕುರಿತಾದ ಸೊಗಸಾದ ಕಥಾನಕವನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದೀರಿ. ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: