ಜ್ಯೋತಿರ್ಲಿಂಗ 3-ಉಜ್ಜಯಿನಿಯ ಮಹಾಕಾಲೇಶ್ವರ
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ ಮಾಡಿ, ಮಹಾಕಾಲನ ಭಸ್ಮಾರತಿ ನೋಡಲು ದೇಗುಲಕ್ಕೆ ಹೋಗಿದ್ದೆವು. ಪ್ರತಿದಿನ ಆರು ನೂರು ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೂರೂವರೆ ಹೊತ್ತಿಗೇ, ಭೂಮಿಯೇ ನಡುಗಿದಂತಹ ಅನುಭವ, ಗಂಟೆ, ಜಾಗಟೆಗಳ ಸದ್ದು, ಶಂಖ, ಡಮರುಗಗಳ ಶಬ್ದ ಕೇಳಿಬಂತು. ಆಗಲೇ, ಉದ್ದುದ್ದ ಜಟೆಗಳನ್ನು ಬಿಟ್ಟು, ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದ, ನಾಲ್ಕಾರು ನಗ್ನರಾದ ಭಸ್ಮಧಾರಿಗಳು, ಕೈಯಲ್ಲಿ ಡಮರುಗ ಹಿಡಿದು – ‘ಶಂಭೋ ಶಂಕರ, ಜೈ ಭೋಲೇನಾಥ್, ಜೈ ಮಹಾಕಾಲೇಶ್ವರ, ಹರ ಹರ ಮಹಾದೇವ್’ ಎನ್ನುತ್ತಾ ದೇಗುಲ ಪ್ರವೇಶಿಸಿದರು. ಉಸಿರು ಬಿಗಿ ಹಿಡಿದು ನೋಡುತ್ತಿದ್ದಂತೆ, ಅವರು ಶಿವಲಿಂಗದ ಪ್ರದಕ್ಷಿಣೆ ಮಾಡುತ್ತಾ, ಚಿತಾಭಸ್ಮವನ್ನು ಮಹಾಕಾಲನ ಮೇಲೆ ತೂರ ತೊಡಗಿದರು. ಅದೂ ಆಗ ತಾನೆ ಸುಟ್ಟಿದ್ದ ಚಿತೆಯ ಬಿಸಿಯಾದ ಭಸ್ಮವೆಂದು, ಪಕ್ಕದಲ್ಲಿದ್ದವರು ಹೇಳುತ್ತಿದ್ದರು. ಕೆಲವು ಕ್ಷಣ, ಅಲ್ಲಿ ಏನೂ ಕಾಣುತ್ತಿರಲಿಲ್ಲ. ಆ ಸ್ಥಳವನ್ನೆಲ್ಲಾ ಭಸ್ಮವೇ ಆವರಿಸಿಕೊಂಡಿತ್ತು. ಭಸ್ಮವು ಶುದ್ಧತೆ, ಅವಿನಾಶಿ ಹಾಗೂ ಅಮರತ್ವದ ಪ್ರತೀಕವೆಂಬ ನಂಬಿಕೆ. ‘ಹರ ಹರ ಮಹಾದೇವ್’ ಎಂಬ ಮಂತ್ರ ದೇಗುಲದಲ್ಲಿ ಪ್ರತಿಧ್ವನಿಸುತ್ತಿತ್ತು. ಎಲ್ಲವೂ ಶಿವಮಯವಾಗಿತ್ತು. ಹುಟ್ಟು ಸಾವಿಲ್ಲದ, ಆದಿ ಅಂತ್ಯವಿಲ್ಲದ, ಅಲೌಕಿಕ, ಅನಂತವಾದ ಮಹಾಕಾಲನ ಸನ್ನಿಧಿಯಲ್ಲಿ, ನಾನೆಲ್ಲಿದ್ದೇನೆ, ಎನ್ನುವುದನ್ನೇ ಮರೆತ ಅನುಭವವಾಗಿತ್ತು. ಅಘೋರೀ ಸಂಪ್ರದಾಯದಂತೆ, ಬ್ರಾಹ್ಮೀ ಮುಹೂರ್ತದಲ್ಲಿ, ಭಸ್ಮಾರತಿಯನ್ನು ಮಾಡುವರು. ಆದರೆ ಇತ್ತೀಚಿನ ವರ್ಷಗಳಲ್ಲಿ, ಚಿತಾಭಸ್ಮದ ಬದಲಾಗಿ, ಗೋವಿನ ಸಗಣಿಯ ಜೊತೆಗೆ ಕೆಲವು ವಿಶೇಷ ಕಟ್ಟಿಗೆಗಳಿಂದ ತಯಾರಿಸಿದ ಭಸ್ಮವನ್ನು ಬಳಸುವರು.
ಮಹಾಕಾಲನು ಸಮಯದ ಸಂಕೇತ, ಜೊತೆಗೇ ಯಮನ ಪ್ರತಿರೂಪವೂ ಆಗಿದ್ದಾನೆ. ಸೃಷ್ಟಿಯ ಲಯದ ಸಂಕೇತವಾದ ಈ ಜ್ಯೋತಿರ್ಲಿಂಗವು, ತಾಂತ್ರಿಕ ಸಂಪ್ರದಾಯದಂತೆ, ದಕ್ಷಿಣ ದಿಕ್ಕಿನೆಡೆ ಮುಖ ಮಾಡಿರುವುದರಿಂದ ‘ದಕ್ಷಿಣಮುಖೀ ಜ್ಯೋತಿರ್ಲಿಂಗ’ ಎಂಬ ಹೆಸರನ್ನು ಪಡೆದಿದ್ದಾನೆ. ಶಿಪ್ರಾ ನದಿಯ ತೀರದಲ್ಲಿರುವ ಈ ಸ್ಥಳದಲ್ಲಿ, ಹನ್ನೆರಡು ವರ್ಷಕ್ಕೊಮ್ಮೆ ಕುಂಭಮೇಳವನ್ನು ಅದ್ಧೂರಿಯಿಂದ ಆಚರಿಸಲಾಗುವುದು. ದೇಶದ ಮೂಲೆಮೂಲೆಯಿಂದ ಸಹಸ್ರ ಸಹಸ್ರ ಜನ ಆಗಮಿಸುವರು. ಕುಂಭಮೇಳದ ಧಾರ್ಮಿಕ ಹಿನ್ನೆಲೆಯನ್ನು ತಿಳಿಯೋಣ ಬನ್ನಿ. ಬೃಹಸ್ಪತಿಯು (Jupiter) ಸೂರ್ಯನ ಸುತ್ತ ಒಂದು ಪರಿಭ್ರಮಣ ಮಾಡಲು ತೆಗೆದುಕೊಳ್ಳುವ ಕಾಲ ಹನ್ನೆರಡು ವರ್ಷಗಳು. ಈ ಗ್ರಹದ ಪರಿಭ್ರಮಣದ ಸಮಯದಲ್ಲಿ, ಭೂಮಿಯ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಶಕ್ತಿ, ಚೈತನ್ಯ ಪ್ರವಹಿಸುವುದು. ಅಂತಹ ಸ್ಥಳಗಳಲ್ಲಿ, ನಲವತ್ತೆಂಟು ದಿನ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದವರಿಗೆ ಮುಕ್ತಿಯು ಲಭಿಸುವುದೆಂಬ ನಂಬಿಕೆ ಇದೆ. ಸದ್ಗುರುಗಳು ಈ ಕ್ರಿಯೆಯನ್ನು ‘ಭೂತ ಶುದ್ದಿ’ ಎಂದು ಕರೆಯುವರು. ಪ್ರಕೃತಿಯಲ್ಲಿರುವ ಪಂಚಭೂತಗಳಾದ – ಜಲ, ಪೃಥ್ವಿ, ಆಕಾಶ, ವಾಯು ಮತ್ತು ಅಗ್ನಿ – ಯಿಂದಲೇ ಸೃಷ್ಟಿಯ ಪ್ರಕ್ರಿಯೆ ನಡೆದಿರುವುದು ಅಲ್ಲವೇ? ಹಾಗಾಗಿ, ಪಂಚಭೂತಗಳಿಂದಲೇ ಸೃಷ್ಟಿಯಾಗಿರುವ ಮಾನವನ ಕಲ್ಯಾಣಕ್ಕಾಗಿ, ಈ ಕುಂಭಮೇಳವನ್ನು ಆಚರಿಸಲಾಗುವುದು. ಭಾರತದಲ್ಲಿ ನಾಲ್ಕು ಸ್ಥಳಗಳಲ್ಲಿ ಕುಂಭಮೇಳವನ್ನು ಆಚರಿಸಲಾಗುವುದು. – ಗಂಗಾ ನದೀ ತೀರದಲ್ಲಿರುವ ಹರಿದ್ವಾರ, ಶಿಪ್ರಾ ನದೀ ತೀರದಲ್ಲಿರುವ ಉಜ್ಜಯಿನಿ, ಗೋದಾವರಿ ನದೀ ತೀರದಲ್ಲಿರುವ ನಾಸಿಕ್ ಹಾಗೂ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿರುವ ಅಲಹಾಬಾದ್.
ಉಜ್ಜಯಿನಿಯಲ್ಲಿರುವ ಮತ್ತೊಂದು ಪ್ರಮುಖ ದೇವಾಲಯ, ಶಿವನ ಅಂಶವಾದ ಕಾಲಭೈರವೇಶ್ವರನದು. ಈ ಕ್ಷೇತ್ರದಲ್ಲಿ ಒಂದು ವಿಶಿಷ್ಟವಾದ ಸಂಪ್ರದಾಯವಿದೆ. ಕಾಲಭೈರವೇಶ್ವರನು ಸುರಾಪಾನ ಮಾಡುವನೆಂಬ ನಂಬಿಕೆ ಭಕ್ತರದ್ದು. ಹಾಗಾಗಿ, ಇಲ್ಲಿಗೆ ಬರುವ ಭಕ್ತರು, ಶಿವನ ಪೂಜೆಗೆ ಹೂವು, ಹಣ್ಣು, ಕರ್ಪೂರದ ಜೊತೆಗೆ ಒಂದು ಮದ್ಯ ಅಥವಾ ವಿಸ್ಕಿ, ಬ್ರಾಂಡಿ, ಬಿಯರ್ ಬಾಟಲಿಯನ್ನೂ ನೈವೇದ್ಯವೆಂದು ಅರ್ಪಿಸುವರು. ಪುರೋಹಿತರು, ಕಾಲಭೈರವನ ಬಾಯಿಯ ಬಳಿಯಿರುವ ಬಟ್ಟಲಿಗೆ ಅರ್ಧ ಶೀಷೆ ಬ್ರಾಂಡಿಯನ್ನು ಸುರಿದು, ಉಳಿದದ್ದನ್ನು ಭೈರವನ ಪ್ರಸಾದವೆಂದು ಭಕ್ತರಿಗೆ ನೀಡುವರು. ಕೆಲವು ಕ್ಷಣದಲ್ಲಿಯೇ ಬೈರವನು ಭಕ್ತರು ಅರ್ಪಿಸಿದ ಸುರೆಯನ್ನು ಹೀರಿ ಬಿಡುವನು. ಪ್ರತಿದಿನ ಸರಾಸರಿ 250 ಬಾಟಲಿಯನ್ನು ಭಕ್ತರು ನೈವೇದ್ಯವೆಂದು ಅರ್ಪಿಸುವರು. ಅಂತೂ ಕಾಲಭೈರವನ ದೆಸೆಯಿಂದ ನಾವೂ ಮೊದಲ ಬಾರಿಗೆ ಬಿಯರ್ ರುಚಿ ನೋಡುವಂತಾಯಿತು. ಶಿವನ ಆಟವನ್ನು ಕಂಡು ವಿಸ್ಮಿತರಾದೆವು.
ಇಲ್ಲಿ ‘ಹರಿಸಿದ್ದಿ’ ಎಂಬ ಶಕ್ತಿ ಪೀಠವೂ ಇದೆ. ಸತೀದೇವಿಯ ಮೇಲ್ದುಟಿ ಬಿದ್ದಿರುವ ಸ್ಥಳವೆಂಬ ನಂಬಿಕೆ. ಇಲ್ಲಿನ ಸಾಂದೀಪಿನೀ ಆಶ್ರಮದಲ್ಲಿ, ಕೃಷ್ಣ, ಬಲರಾಮ, ಸುಧಾಮರು ವಿದ್ಯೆ ಕಲಿತರೆಂಬ ಪ್ರತೀತಿಯೂ ಇದೆ.
ಮಹಾಕಾಲೇಶ್ವರನ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣವೇ? ಹಿಂದೆ ಉಜ್ಜನಿಯು ‘ಅವಂತಿ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ಪಟ್ಟಣವನ್ನು ಮಹಾಶಿವಭಕ್ತನಾದ ಚಂದ್ರಸೇನನೆಂಬ ರಾಜನು ಆಳುತ್ತಿದ್ದನು. ಪ್ರಜೆಗಳೂ ಸುಖ ಸಮೃದ್ಧಿಯಿಂದ ಬಾಳುತ್ತಿದ್ದರು. ಹೀಗಿರುವಾಗ ಅಲ್ಲಿಗೆ ದೂಷಣನೆಂಬ ರಕ್ಕಸನು ಬಂದು ಪ್ರಜೆಗಳನ್ನು ಶೋಷಿಸತೊಡಗಿದನು. ಈ ರಕ್ಕಸನು, ಬ್ರಹ್ಮನಿಂದ ಒಂದು ವರ ಪಡೆದಿದ್ದ – ಅವನಿಚ್ಛೆಯಂತೆ ಅದೃಶ್ಯನಾಗುವ ವರ. ಹೀಗಾಗಿ, ದೂಷಣನನ್ನು ಹೇಗೆ ಸೋಲಿಸುವುದು ಎಂಬುದೇ ಎಲ್ಲರ ಚಿಂತೆಯಾಗಿತ್ತು. ಒಮ್ಮೆ, ಮಹಾರಾಜನು ಶಿವಪೂಜೆಯನ್ನು ಮಾಡುತ್ತಿರುವಾಗ, ಶ್ರೀಕರನೆಂಬ ಐದು ವರ್ಷದ ಬಾಲಕನು, ತಾನೂ ಶಿವಪೂಜೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಾನೆ. ಆದರೆ, ಅಲ್ಲಿದ್ದ ಸೈನಿಕರು, ಆ ಬಾಲಕನನ್ನು ತಡೆದು, ಊರಿನ ಹೊರವಲಯದಲ್ಲಿದ್ದ ಶಿಪ್ರಾ ನದೀ ತೀರದಲ್ಲಿ ಬಿಟ್ಟು ಬರುತ್ತಾರೆ. ಅಲ್ಲಿಯೇ ಶಿವಧ್ಯಾನದಲ್ಲಿ ನಿರತನಾದ ಬಾಲಕನಿಗೆ, ಹೊರದೇಶದ ದೊರೆಗಳು ರೂಪಿಸುತ್ತಿದ್ದ ಸಂಚು ಕೇಳಿಬರುವುದು. ರಿಪುದಮನ ಮತ್ತು ಸಿಂಗಾಧಿತ್ಯ ಎಂಬ ನೆರೆ ರಾಜ್ಯದ ದೊರೆಗಳು, ದೂಷಣನ ಜೊತೆಗೂಡಿ ಅವಂತೀ ಪ್ರದೇಶದ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿದ್ದರು. ಈ ವಿಷಯವನ್ನು, ಬಾಲಕನು ವೃದ್ಧಿ ಎಂಬ ಪುರೋಹಿತನಿಗೆ ತಿಳಿಸುತ್ತಾನೆ. ಇವನು ರಾಜನಿಗೆ ಶತ್ರುಗಳ ಆಕ್ರಮಣದ ಮಾಹಿತಿ ನೀಡುತ್ತಾನೆ. ತಮ್ಮ ರಾಜ್ಯವನ್ನು ಶತ್ರುಗಳಿಂದ ಕಾಪಾಡು ಎಂದು ಶಿವನ ಮೊರೆ ಹೋಗುತ್ತಾರೆ. ಶತ್ರುಗಳ ಆಕ್ರಮಣದಿಂದ ಚಂದ್ರಸೇನನು ಸೋಲುವ ಹಂತಕ್ಕೆ ಬಂದಾಗ, ಶಿವನು ಮಹಾಕಾಲನ ರೂಪದಲ್ಲಿ ಅವತರಿಸಿ, ಶತ್ರುಗಳನ್ನು ಸಂಹರಿಸುತ್ತಾನೆ. ಅಂದಿನಿಂದ, ಭಕ್ತರ ಕೋರಿಕೆಯ ಮೇರೆಗೆ ಶಿವನು, ಮಹಾಕಾಲೇಶ್ವರ ಜ್ಯೋತಿರ್ಲಿಂಗ ಸ್ವರೂಪದಲ್ಲಿ ಅಲ್ಲಿಯೇ ನೆಲಸುತ್ತಾನೆ.
ಇಲ್ಲಿರುವ ಮತ್ತೊಂದು ಪೌರಾಣಿಕ ಕತೆ ಹೀಗಿದೆ. ಸಮುದ್ರ ಮಂಥನದ ಸಮಯದಲ್ಲಿ ಹಲವಾರು ಅಮೂಲ್ಯ ವಸ್ತುಗಳು ಉದ್ಭವವಾಗುತ್ತವೆ. ದೇವ ದಾನವರಿಬ್ಬರೂ, ಆ ವಸ್ತುಗಳನ್ನು ಪಡೆಯಲು ಕಾದಾಡುತ್ತಾರೆ. ‘ಅಮೃತ’ ವು ಉದ್ಭವವಾದಾಗ, ಅವರ ಮಧ್ಯೆ ದೊಡ್ಡ ಕಾಳಗವೇ ನಡೆಯುತ್ತದೆ. ಆಗ ಕೆಲವು ಅಮೃತದ ಹನಿಗಳು ನೆಲದ ಮೇಲೆ ಬೀಳುತ್ತವೆ. ಅವುಗಳಲ್ಲಿ ಒಂದು ಅಮೃತದ ಬಿಂದು ಉಜ್ಜಯಿನಿಯಲ್ಲಿ ಬಿದ್ದುದರಿಂದ – ಈ ಕ್ಷೇತ್ರವು ಭಕ್ತರಿಗೆ ಮೋಕ್ಷದಾಯಕವೆಂದೂ ನಂಬಲಾಗುತ್ತದೆ. ಈ ಪಟ್ಟಣವು ಬ್ರಹ್ಮನಿಂದ ನಿರ್ಮಿತವಾದದ್ದೆಂಬ ನಂಬಿಕೆಯೂ ಇದೆ.
ಇನ್ನು ಐತಿಹಾಸಿಕ ವಿವರಗಳನ್ನು ತಿಳಿಯೋಣ ಬನ್ನಿ. ಈ ದೇಗುಲವು ನಯನ ಮನೋಹರವಾದ ರುದ್ರ ಸಾಗರ ಸರೋವರದ ತೀರದಲ್ಲಿದೆ. ಆರನೇ ಶತಮಾನದಲ್ಲಿ ರಾಜಾ ಚಂದ್ರಪ್ರದ್ಯೋತನ ಪುತ್ರ ಕುಮಾರಸೇನನು ಈ ದೇಗುಲವನ್ನು ಕಟ್ಟಿಸಿದನು. ಹನ್ನೆರಡನೇ ಶತಮಾನದಲ್ಲಿ ರಾಜಾ ಉದಯಾದಿತ್ಯನು, ಈ ದೇಗುಲವನ್ನು ಪುನರ್ ನಿರ್ಮಾಣ ಮಾಡಿದನು. 1235 ರಲ್ಲಿ ಆಕ್ರಮಣ ಮಾಡಿದ ದೊರೆ ಇಲ್ತುಮಿಶ್ ನು ಈ ದೇಗುಲವನ್ನು ಧ್ವಂಸ ಮಾಡಿ, ಶಿವಲಿಂಗವನ್ನು ಕೋಟಿ ತೀರ್ಥ ಕುಂಡದಲ್ಲಿ ಎಸೆದನು. ನಂತರದ ದಿನಗಳಲ್ಲಿ ಹಲವು ರಾಜರು – ಭೂಮಿಜರು, ಚಾಲುಕ್ಯರು, ಮರಾಠರು, ಈ ದೇಗುಲವನ್ನು ಪುನರ್ ನಿರ್ಮಾಣ ಮಾಡಿದರು. ಹದಿನೆಂಟನೇ ಶತಮಾನದಲ್ಲಿ ಬಾಜೀರಾವ್ ಪೇಶ್ವನ ದಂಡನಾಯಕನಾಗಿದ್ದ ರಾಣೋಜಿ ಶಿಂಧೆಯು ಈ ದೇಗುಲವನ್ನು ಕೆಂಪು ಸ್ಯಾಂಡ್‌ಸ್ಟೋನ್‌ನಿಂದ ಭವ್ಯವಾಗಿ ನಿರ್ಮಿಸಿದನು. ಆಗ ಚಲಾವಣೆಯಲ್ಲಿದ್ದ ನಾಣ್ಯಗಳ ಮೇಲೆ ಮಹಾಕಾಲನ ಮುದ್ರೆಗಳೂ ಕಂಡು ಬರುತ್ತವೆ.
ಉಜ್ಜಯಿನಿ ಎಂದಾಕ್ಷಣ ನೆನಪಿಗೆ ಬರುವುದು, ಮಹಾಕವಿ ಕಾಳಿದಾಸನಿಂದ ರಚಿಸಲ್ಪಟ್ಟ ಮೇಘಧೂತ ನಾಟಕದಲ್ಲಿ ಬರುವ ವರ್ಣನೆ. ಉಜ್ಜಯಿನಿಯ ಸಂಪದ್ಭರಿತವಾದ ಮಾರುಕಟ್ಟೆಗಳು, ವೈಯ್ಯಾರದಿಂದ ನರ್ತಿಸುವ ಶಿಪ್ರಾ ನದಿ, ಭವ್ಯವಾದ ದೇಗುಲಗಳು, ಅರಮನೆಗಳು ಹಾಗೂ ಇಲ್ಲಿನ ಸುಂದರ ತರುಣ, ತರುಣಿಯರ ವಿವರಗಳು ಈ ನಾಟಕದಲ್ಲಿವೆ. ಎರಡನೇ ಚಂದ್ರಗುಪ್ತನ ಕಾಲದಲ್ಲಿ ‘ನವರತ್ನಗಳು’ ಎಂದೇ ಹೆಸರುವಾಸಿಯಾಗಿದ್ದ ಪಂಡಿತೋತ್ತಮರ ಸಾಲಿನಲ್ಲಿ ಕಂಗೊಳಿಸುವ ಕವಿ ಕಾಳಿದಾಸ . ‘ಭಾರತದ ಶೇಕ್ಸ್‌ಪಿಯರ್’ ಎಂದೇ ಪ್ರಸಿದ್ಧಿಯಾಗಿರುವ ನಾಟಕಕಾರ. ಇದು ಮತ್ತೊಬ್ಬ ಪ್ರಸಿದ್ಧ ಸಂಸ್ಕೃತ ಕವಿ ಭತೃಹರಿಯ ವಾಸಸ್ಥಾನವೂ ಆಗಿದೆ. ಮಹಾರಾಜ ವಿಕ್ರಮಾದಿತ್ಯನ ಮಲಸಹೋದರನಾಗಿದ್ದ ಭತೃಹರಿಯು, ಅರಮನೆಯನ್ನು ತೊರೆದು ಊರ ಹೊರಗಿರುವ ಗುಹೆಯಲ್ಲಿ ವಾಸ ಮಡುತ್ತಾನೆ. ಈ ಗುಹೆಯಲ್ಲಿ ಭತೃಹರಿಯ ಮೂರ್ತಿ ಇದೆ. ಈ ಸ್ಥಳದಲ್ಲಿ ನಾಥ ಸಂಪ್ರದಾಯದ ಯೋಗಿಗಳು ಸಹ ವಾಸ ಮಾಡುತ್ತಿದ್ದರು. ಕಾಳಿದಾಸನು ಅವರೊಂದಿಗೆ ತತ್ವಜ್ಞಾನದ ವಿಷಯಗಳನ್ನು ಚರ್ಚಿಸುತ್ತಿದ್ದನು ಎಂಬ ಮಾಹಿತಿಯೂ ದೊರೆತಿದೆ. ಮೂರು ಸಾವಿರ ವರ್ಷಗಳ ಹಿಂದೆಯೇ, ರೋಮ್ ನಗರಕ್ಕೆ, ಉಜ್ಜಯಿನಿಯಿಂದ ಸುಂದರವಾದ ಬಾಟಿಕ್ ಪ್ರಿಂಟಿನ ಹತ್ತಿ ಬಟ್ಟೆಗಳು ರಫ್ತಾಗುತ್ತಿದ್ದವು ಎಂಬ ಮಾಹಿತಿಯೂ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಉಜ್ಜಯಿನಿಯು, ಐದನೇ ಶತಮಾನದಲ್ಲಿ, ಭಾರತದ ಸ್ವರ್ಣಯುಗವೆಂದೇ ಗುರುತಿಸ್ಪಟ್ಟಿದೆ.
ಖಗೋಳಶಾಸ್ತ್ರಜ್ಞರ ಪ್ರಕಾರ ಉಜ್ಜಯಿನಿಯು – ಭಾರತದ ಗ್ರೀನ್‌ವಿಚ್ ಎಂದೇ ಕರೆಯಲ್ಪಟ್ಟಿದೆ. ಉಜ್ಜಯಿನಿಯಲ್ಲಿ ನಿರ್ಧರಿಸಲ್ಪಟ್ಟ ಸಮಯವನ್ನು ಭಾರತದೆಲ್ಲೆಡೆ ಅನುಸರಿಸಲಾಗುತ್ತಿತ್ತು. ದೇಶದಲ್ಲಿ ‘ಕರ್ಕಾಟಕ ಸಂಕ್ರಾತಿ ವೃತ್ತ'(Tropic of Cancer) ರೇಖೆ ಹಾದು ಹೋಗಿರುವುದರಿಂದ ಇದನ್ನು ಭೌಗೋಳಿಕವಾದ ಕೇಂದ್ರಬಿಂದುವೆಂದು ಪರಿಗಣಿಸಲಾಗಿದೆ.
ಮಹಾಕಾಲೇಶ್ವರ ದೇವಾಲಯದ ವಾಸ್ತುಶಿಲ್ಪ, ಶಿಲ್ಪ ಕಲೆ ಎಲ್ಲರ ಮನ ಸೂರೆಗೊಳ್ಳುತ್ತವೆ. ಈ ದೇಗುಲವನ್ನು ಐದು ಅಂತಸ್ತಿನಲ್ಲಿ ಕಟ್ಟಲಾಗಿದೆ. ನೆಲ ಅಂತಸ್ತಿನಲ್ಲಿ ಮಹಾಕಾಲೇಶ್ವರನ ಜ್ಯೋತಿರ್ಲಿಂಗವಿದೆ, ಎರಡನೆಯ ಅಂತಸ್ತಿನಲ್ಲಿ ಓಂಕಾರೇಶ್ವರ ಲಿಂಗವಿದ್ದು, ಐದನೆಯ ಅಂತಸ್ತಿನಲ್ಲಿ ನಾಗಚಂದ್ರೇಶ್ವರ ಲಿಂಗವಿದೆ. ದೇಗುಲದ ಪ್ರಾಂಗಣದಲ್ಲಿ ಹಲವು ಸುಂದರವಾದ ಮೂರ್ತಿಗಳಿವೆ. ಈ ದೇಗುಲದ ಗೋಪುರ ಎತ್ತರವಾಗಿದ್ದು, ಮಹಾಕಾಲನ ಕೀರ್ತಿಯನ್ನು ಎಲ್ಲೆಡೆ ಪಸರಿಸಿದೆ. ಸ್ವಯಂಭುವಾದ ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಗಾತ್ರ ಬೇರೆಲ್ಲಾ ಜ್ಯೋತಿರ್ಲಿಂಗಗಳಿಗಿಂತ ದೊಡ್ಡದಾಗಿದ್ದು, ದ್ವಾದಶ ಜ್ಯೋತಿರ್ಲಿಂಗಗಳ ಸರಣಿಯಲ್ಲಿ, ಮೂರನೆಯ ಸ್ಥಾನವನ್ನು ಅಲಂಕರಿಸಿದೆ. ಇದು ರಾಜಾ ವಿಕ್ರಮಾದಿತ್ಯನು ಆಳಿದ ಪ್ರದೇಶ. ಕವಿರತ್ನ ಕಾಳಿದಾಸನು ನೆಲೆಸಿದ್ದ ನಾಡು. ವರಾಹಮಿಹಿರನ ಸಾಧನೆಯ ಬೀಡು. ಹಲವು ಮಕ್ಕಳಿಗೆ ವೇದ ಉಪನಿಷತ್ತುಗಳನ್ನು ಬೋಧಿಸಿದ ಜ್ಞಾನ ದೇಗುಲ. ಅಂದಿನ ಕಾಲದಲ್ಲಿ – ‘ಭಾರತದ ಸಾಂಸ್ಕೃತಿಕ ಕೇಂದ್ರ’ ಎಂದೇ ಹೆಸರುವಾಸಿಯಾಗಿದ್ದ ಈ ನಾಡು, ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ರಂಗಗಳಲ್ಲಿ ವಿಶೇಷ ಮನ್ನಣೆ ಗಳಿಸಿತ್ತು.
ಜ್ಯೋತಿರ್ಲಿಂಗ ಲೇಖನ ಸರಣಿಯ ಇತರ ಲೇಖನಗಳು ಇಲ್ಲಿವೆ :
1-ಸೌರಾಷ್ಟ್ರದ ಸೋಮನಾಥ http://surahonne.com/?p=34427
2-ಶ್ರೀಶೈಲ ಮಲ್ಲಿಕಾರ್ಜುನ http://surahonne.com/?p=34441
–-ಡಾ.ಗಾಯತ್ರಿದೇವಿ ಸಜ್ಜನ್
Very nice. ಕುತೂಹಲಕಾರಿಯಾಗಿದೆ ಈ ಭಾಗ.
Thanks
ಸೊಗಸಾದ ಬರಹ, ನಾವು ಈ ಡಿಸೆಂಬರ್ ಕೊನೆಯ ವಾರದಲ್ಲಿ ಉಜ್ಜಯಿನಿಗೆ ಭೇಟಿ ಕೊಡಲಿದ್ದೇವೆ. ಈ ಮಾಹಿತಿ ಮುಂಚಿತವಾಗಿ ಸಿಕ್ಕಿದ್ದುದು ಖುಷಿಯಾಯಿತು. ತಮ್ಮ ಬರಹವನ್ನು ನಮ್ಮ ತಂಡದವರಿಗೆ ಫಾರ್ ವರ್ಡ್ ಮಾಡಿದ್ದೇನೆ. ಥ್ಯಾಂಕ್ಸ್.
ವಾವ್ ಸೊಗಸಾದ ನಿರೂಪಣೆಯಿಂದ ಉಜ್ಜಯಿನಿ ಯ ಮಹಾಕಾಲೇಶ್ವರನ ಪರಿಚಯಮಾಡಿರುವ ನಿಮಗೆ ಧನ್ಯವಾದಗಳು ಮೇಡಂ.
Thanks a lot
ಚಿತಾಭಸ್ಮದ ಆರತಿ ಹಾಗೂ ಪೂರಕ ಕಥೆಯೊಂದಿಗೆ ಮಹಾಕಾಳೇಶ್ವರನ ಸುಂದರ ದರ್ಶನ!
ಬಹಲ ಚೆನ್ನಾಗಿದೆ. ನಾನು ಮಹಾಕಾಲನ ಈ ದರ್ಶನ ಪಡೆದು ಬಂದೆ.
ಚಿತಾಭಸ್ಮದ ಆರತಿ ಕುತೂಹಲಕಾರಿಯಾಗಿದೆ.
ಕುತೂಹಲಭರಿತ ವಿವರಗಳನ್ನೊಳಗೊಂಡ ಮಾಹಿತಿಪೂರ್ಣ ಲೃಖನಕ್ಕಾಗಿ ಅಭಿನಂದನೆಗಳು.