ಹೆಡತಲೆಯ ವಿಸ್ಮಯ

Share Button

ನಾನು ಹಲವಾರು ಬಾರಿ ‘ಹೆಡತಲೆ’ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಹಲವು ದೇವಸ್ಥಾನಗಳು ನಮ್ಮಲ್ಲಿ ಕೆಲವು ಭಾವನೆಗಳನ್ನು, ನೆನಪುಗಳನ್ನು ಅಚ್ಚಳಿಯದೆ ಉಳಿಸಿಬಿಡುತ್ತವೆ. ಅಂತಹ ಒಂದು ಭವ್ಯ ಸುಂದರ ವಿಸ್ಮಯಕಾರಿ ದೇವಸ್ಥಾನದ ದರ್ಶನವೇ ಈ ಲೇಖನಕ್ಕೆ ಪ್ರೇರಣೆ.

‘ಹೆಡತಲೆ’ ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಹನ್ನೆರಡು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟಗ್ರಾಮ. ಇದಕ್ಕೆ ಈ ಹೆಸರು ಬಂದಿರುವ ಪ್ರಸಂಗವೂ ರೋಚಕವೇ. ಹಿಂದೆ ಈ ಪ್ರದೇಶದಲ್ಲಿ ಕೌಂಡಿನ್ಯ ಮಹರ್ಷಿಗಳು ವಾಸವಿದ್ದರಂತೆ. ಒಬ್ಬ ಮಹಾರಾಕ್ಷಸ ಈ ಭಾಗದಲ್ಲಿ ಸಾಕಷ್ಟು ತೊಂದರೆ ನೀಡುತ್ತ’ ಇದ್ದುದರಿಂದ ಎಲ್ಲರೂ ಸೇರಿ ಮಹರ್ಷಿಗಳ ಮೊರೆ ಹೋಗಿ ಪ್ರಾರ್ಥಿಸಲಾಗಿ ಅವರು ವಿಷ್ಣುವಿನ ಪ್ರಾರ್ಥನೆಯಿಂದ ರಾಕ್ಷಸ ಸಂಹಾರವಾಯಿತು. ಆ ರಾಕ್ಷಸನ ಹೆಮ್ಮರದಂತಿದ್ದ ಬಾಹುಗಳು ಬಿದ್ದ ಜಾಗ ‘ಹೆಮ್ಮರಗಾಲ’ ಎಂಬ ಗ್ರಾಮವೂ, ಅವನ ತಲೆ ಆ ಗ್ರಾಮದ ಎಡಭಾಗಕ್ಕೆ ಬಿದ್ದಿದ್ದರಿಂದ ‘ಎಡತಲೆ’ ಎಂಬ ಹೆಸರೂ ಬಂದು, ಅಪಭ್ರಂಶದಿಂದ ‘ಹೆಡತಲೆ’ ಯಾಗಿದೆ. ಹೆಮ್ಮರಗಾಲದಲ್ಲಿ ಇವತ್ತಿಗೂ ಪ್ರಸಿದ್ಧವಾದ ಪುರಾತನ ಸಂತಾನ ಗೋಪಾಲನ ದೇವಸ್ಥಾನವಿದೆ.

ಹೆಡತಲೆಯಲ್ಲಿರುವ ಶ್ರೀ ಲಕ್ಷ್ಮಿಕಾಂತ ದೇವಸ್ಥಾನ ಹಲವು ವಿಸ್ಮಯಗಳ ಆಗರ. ಈ ದೇವಸ್ಥಾನ ಹೊಯ್ಸಳ ಶೈಲಿಯಲ್ಲಿದ್ದು, 1382 ರಲ್ಲಿ 3 ನೇ ಬಲ್ಲಾಳ ಸ್ಥಾಪಿಸಿದ ಬಗ್ಗೆ ಉಲ್ಲೇಖಗಳಿವೆ. ದೇವಸ್ಥಾನದ ಮುಂಭಾಗದಲ್ಲೇ ಒಂದು ಆನೆಯ ವಿಗ್ರಹವಿದೆ. ಆದರೆ ಅದಕ್ಕೆ ಮುಖವಿಲ್ಲ. ದಾಖಲೆಗಳ ಪ್ರಕಾರ ಓರ್ವ ಶಿಲ್ಪಿ ಬೆಳಗಾಗುವುದರಲ್ಲೇ ಆನೆಯ ವಿಗ್ರಹ ಕೆತ್ತುವುದಾಗಿ ಪ್ರಮಾಣಿಸಿ, ರಾತ್ರಿಯೆಲ್ಲ ಕಡೆದರೂ ಸೂರ್ಯೋದಯ ಆಗುವಷ್ಟರಲ್ಲಿ ತಲೆಭಾಗ ಮಾತ್ರ ಬಾಕಿ ಉಳಿದಿತ್ತು. ಅವನು ಅದನ್ನು ಹಾಗೆಯೇ ಬಿಟ್ಟು ಜಿಗುಪ್ಸೆಯಿಂದ ನಾಪತ್ತೆಯಾದ ಎಂಬ ಮಾತಿದೆ. ಪ್ರಾಕಾರದ ಮೇಲೆ ಬಾಳೆಗೊನೆ ಚಿತ್ತಾರ, ನಾಲ್ಕು ಹುಲಿಗಳ ಲಾಂಛನ ಹೊಯ್ಸಳ ಶೈಲಿಯನ್ನು ಧೃಢೀಕರಿಸುತ್ತದೆ. ಒಳಗೆ ಗರ್ಭಗುಡಿಯಲ್ಲಿ ಲಕ್ಷ್ಮಿಕಾಂತನ ಸುಂದರ ವಿಗ್ರಹ,ಬಲಭಾಗದಲ್ಲಿ ಲಕ್ಷ್ಮೀನರಸಿಂಹ, ಎಡಭಾಗದಲ್ಲಿ ವೇಣುಗೋಪಾಲಸ್ವಾಮಿಯ ವಿಗ್ರಹಗಳಿವೆ. ಮೂರು ವಿಗ್ರಹಗಳು ಮೂಲ ಸನ್ನಿಧಿಯಲ್ಲಿರುವುದರಿಂದ ಈ ಕ್ಷೇತ್ರಕ್ಕೆ ತ್ರಿಕೂಟಚಲ ಎಂಬ ಹೆಸರೂ ಇದೆ. ಇದಲ್ಲದೆ ಒಂದು ಅಂಡಾಳ್ ಸನ್ನಿಧಿ ಹಾಗೂ ಚನ್ನಕೇಶವ ವಿಗ್ರಹಗಳೂ ರಾರಾಜಿಸುತ್ತಿವೆ. ಲಕ್ಷ್ಮೀಕಾಂತವಿಗ್ರಹದಲ್ಲಿ ಶಂಖ, ಚಕ್ರ ಕೈಯ ಮುಂದೆ, ಗಧಾಪದ್ಮ ಮೇಲೆ ಇರುವುದು ವಿಶೇಷ. ಇನ್ನೊಂದು ವಿಸ್ಮಯಕಾರಿ ಅಂಶವೆಂದರೆ ಲಕ್ಷ್ಮಿನರಸಿಂಹ ವಿಗ್ರಹದ ಮುಂದೆ ಒಂದು ಪೀಠವಿದೆ. ಅದರ ಮೇಲೆ ಕುಳಿತು ಅಷ್ಟೋತ್ತರ ವೇಳೆ ವಿಗ್ರಹದ ಕಣ್ಣನ್ನು ಏಕಾಗ್ರಚಿತ್ತರಾಗಿ ದಿಟ್ಟಿಸುತ್ತಿದ್ದರೆ ಒಂದು ವಿಶೇಷ ಅನುಭವವಾಗಿರುವುದನ್ನು ಹಲವಾರು ಭಕ್ತರು ಹೇಳುತ್ತಾರೆ. ವೇಣುಗೋಪಾಲ ಸ್ವಾಮಿಯ ಹಿಂದೆ ಆದಿಶೇಷ ಇರುವುದು ಇಲ್ಲಿ ಮಾತ್ರ ಎಂಬುದು ವಿಶೇಷ. ಹಿಮವತ್ ಗೋಪಾಲಸ್ವಾಮಿ ಹಾಗೂ ಸಂತಾನಗೋಪಾಲನ ವಿಗ್ರಹಗಳಲ್ಲಿ ಇದು ಇಲ್ಲ.

ಇನ್ನೊಂದು ವಿಸ್ಮಯಕಾರಿ ಸಂಗತಿ ಮಂಗಳಾರತಿಯ ಸಮಯದ್ದು. ಮೂಲ ದೇವರಿಗೆ ಮಂಗಳಾರತಿಯಾದ ಮೇಲೆ, ಅರ್ಚಕರು ಎಲ್ಲಾ ವಿದ್ಯುದ್ದೀಪಗಳನ್ನು ಆರಿಸಿ ಅಂಡಾಳ್‌ಗೆ ಮಂಗಳಾರತಿ ಮಾಡುತ್ತಾರೆ. ದೇವಿಯ ಕಣ್ಣುಗಳು ಮುಚ್ಚಿರುತ್ತವೆ. ಅರ್ಚಕರು ಅಮ್ಮ ನಿನ್ನ ಕಣ್ಣನ್ನು ತೆರೆದು ದರ್ಶನ ಕೊಡು ಎಂದು ಕೇಳಿಕೊಳ್ಳಿ ಎನ್ನುತ್ತಾರೆ. ಮಂಗಳಾರತಿಯ ಜ್ವಾಲೆಯನ್ನು ನಿಧಾನವಾಗಿ ಮೇಲಿನಿಂದ ಕೆಳಕ್ಕೆ ತಂದಾಗ ದೇವಿಯ ಮುಚ್ಚಿದ ಕಣ್ಣು ತೆರೆದು ಪ್ರಜ್ವಲಿಸಿ ನಿಮ್ಮನ್ನೇ ನೋಡುತ್ತಿರುವಂತೆ ಕಾಣುತ್ತದೆ. ಇದು ನಿಜಕ್ಕೂ ಎಂಥವರಿಗೂ ಮೈನವಿರೇಳಿಸುವ ಕ್ಷಣ. ಎಂಥ ನಾಸ್ತಿಕನೂ ನಿಬ್ಬೆರಗಾಗಿ ಕ್ಷಣಕಾಲ ತಬ್ಬಿಬ್ಬಾಗುವುದಂತೂ ನಿಜ. ಇದು ಶಿಲ್ಪಿಯ ಕಲಾಕೃತಿಯ ಕೈಚಳಕವೋ, ದೇವೀಮಹಾತ್ಮೆಯೋ ಎಂಬ ದ್ವಂದ್ವ ನಮ್ಮನ್ನು ಕಾಡುವುದಂತು ನಿಜ.

ಇನ್ನು ದೇವಸ್ಥಾನದ ಗರ್ಭಗುಡಿಯಿಂದ ಹೊರಬಂದು ಗರುಡಗಂಬ ದಾಟಿದ ಮೇಲೆ ಕೂಡಲೇ ಕಾಣುವುದು ಒಂದು ಚಾವಡಿ. ಇದು ‘ಹದಿನಾರು ಮುಖದ ಚಾವಡಿ’ ಎಂದೇ ಪ್ರಸಿದ್ಧ. ಇದನ್ನು ಭೀಮಣ್ಣ ದಂಡನಾಯಕ ಎಂಬ ಪಾಳೇಗಾರ ಕಟ್ಟಿಸಿದ ಎಂಬುದಕ್ಕೆ ದಾಖಲೆಗಳಿವೆ. ಇದೂ ಒಂದು ವಿಸ್ಮಯದ ತಾಣ. ಈ ಚಾವಡಿಗೆ 16 ಕಲ್ಲಿನ ಪೀಠಗಳಿವೆ. 3 ಅಡಿ ಎತ್ತರದ ಒಂದು ಪೀಠ ಎತ್ತರದ ಸ್ಥಳದಲ್ಲಿದೆ. ಐತಿಹ್ಯದ ಪ್ರಕಾರ ಭೀಮಣ್ಣ ದಂಡನಾಯಕನಿಗೆ 16 ಜನ ಹೆಣ್ಣು ಮಕ್ಕಳು ಹಾಗೂ ಅವರಿಗೆಲ್ಲ ವಿವಾಹವಾದಾಗ ಅಳಿಯಂದಿರು ಸೇರಿ 32 ಮಂದಿಯಾಯ್ತು. ವರ್ಷಕ್ಕೊಮ್ಮೆ ಹೆಣ್ಣುಮಕ್ಕಳು ಹಾಗೂ ಅಳಿಯಂದಿರಿಗೆ ಈ ಚಾವಡಿಗೆ ಆಹ್ವಾನ, ಸಂತೋಷ ಕೂಟದ ಸಲುವಾಗಿ ಬೆಳಗಿನಿಂದ ಸಂಜೆಯವರೆಗೂ ಎಲ್ಲರೂ ಒಟ್ಟಿಗೆ ಇರುತ್ತಿದ್ದರು. ಈ ಹದಿನಾರು ಜನ ಅಳಿಯಂದಿರನ್ನು ಗುರುತಿಸಲು ಹಾಗೂ ಸಂಜೆಯ ಒಂದು ಸಮಾವೇಶಕ್ಕೆ ಈ ಚಾವಡಿಯ ಪರಿಕಲ್ಪನೆ ದಂಡನಾಯಕದು. ದೊಡ್ಡಮಗಳು ಅಳಿಯನಿಂದ ಪ್ರಾರಂಭವಾಗಿ 16 ಜೋಡಿಗಳು ಕ್ರಮವಾಗಿ 16 ಪೀಠದಲ್ಲಿ ಕುಳಿತಿರುತ್ತಾರೆ. ಪಾಳೇಗಾರ ಹಾಗೂ ಅವನ ಪತ್ನಿ ಚಾವಡಿಯ ಕೊನೆಯ ಮಧ್ಯದಲ್ಲಿ ಎತ್ತರದ ಪೀಠದಲ್ಲಿ ಅಸೀನರಾಗುತ್ತಾರೆ. ಚಾವಡಿಯ ಮಧ್ಯಭಾಗ ಸಂಗೀತ, ನೃತ್ಯ ಇತ್ಯಾದಿಗಳಿಗೆ ಮೀಸಲು.

ಪೀಠಗಳ ವ್ಯವಸ್ಥೆಯೇ ಒಂದು ವಿಸ್ಮಯ. ಹಿಂದಿನಪರಂಪರೆಯಲ್ಲಿ ಪಾಳೇಗಾರರ ಪತ್ನಿಯರು ಅಳಿಯಂದಿರ ಮುಖವನ್ನು ನೋಡುವಂತಿರಲಿಲ್ಲ. ಈ ಪೀಠಗಳ ವ್ಯವಸ್ಥೆ ಹೇಗಿದೆಯೆಂದರೆ ಪಾಳೇಗಾರನಿಗೆ 16 ಹೆಣ್ಣು ಮಕ್ಕಳೂ, 16 ಅಳಿಯಂದಿರೂ ಕಾಣಿಸುತ್ತಾರೆ. ಆದರೆ ಆತನ ಪತ್ನಿಗೆ ಕೇವಲ 16 ಹೆಣ್ಣುಮಕ್ಕಳು ಮಾತ್ರ ಕಾಣಿಸುತ್ತಾರೆ. ಯಾವ ಅಳಿಯಂದಿರೂ ಕಾಣಿಸುವುದಿಲ್ಲ. ಆದರೆ ಅವರ ಮಾತು ಕೇಳಿಸುತ್ತದೆ. ಈ ವಿಸ್ಮಯವನ್ನು ಅಲ್ಲಿನ ಅರ್ಚಕರು ಯಥಾವತ್ತಾಗಿ ಮಾಡಿ ತೋರಿಸುತ್ತಾರೆ. ಪಾಳೇಗಾರನ ಇಚ್ಛೆಯಂತೆ ಓರ್ವ ವಾಸ್ತುಶಿಲ್ಪಿ ಈ ತೆರನಾದ ಪೀಠ ವ್ಯವಸ್ಥೆ ತಯಾರು ಮಾಡಿದ್ದಾನಂತೆ. ಇದು ಇಂದಿನ ವಾಸ್ತುಶಾಸ್ತ್ರಕ್ಕೆ ಸವಾಲಿನಂತಿದೆ. ಈ ವಾಸ್ತುಶಿಲ್ಪಿಯ ಚಮತ್ಕಾರ ನಿಪುಣತೆ ನಿಜಕ್ಕೂ ಬೆರಗಾಗುವಂಥಹುದು. ಅಷ್ಟಕ್ಕೂ ಈ ಚಾವಡಿ 350 ವರ್ಷ ಹಳೆಯದು.

1998 ರವರೆಗೆ ಶಿಥಿಲವಾದ ಈ ದೇವಸ್ಥಾನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಟಿ.ವಿ.ಎಸ್.ಮೋಟಾರ್‍ಸ್ ರವರು ಅದ್ಭುತವಾಗಿ ಜೀರ್ಣೋದ್ಧಾರ ಮಾಡಿ, ಮೂಲ ದೇವಸ್ಥಾನಕ್ಕೆ ಒಂದಿಷ್ಟು ಚ್ಯುತಿ ಬರದಂತೆ ಪುನರ್ ಸ್ಥಾಪಿಸಿದ್ದಾರೆ. ಇದೊಂದು ನಿಜಕ್ಕೂ ಅದ್ಭುತವಾದ ಕೊಡುಗೆ. ಈ ಗ್ರಾಮದ ಪ್ರಸಿದ್ಧ ಗುರುಗಳಾದ ಶ್ರೀರಂಗಪ್ರಿಯ ಸ್ವಾಮಿಗಳು ಇದಕ್ಕೆ ಮೂಲಪ್ರೇರಕ ಎಂಬುದರಲ್ಲಿ ಎರಡು ಮಾತಿಲ್ಲ. ದೇವಸ್ಥಾನದ ಪ್ರಾಕಾರ, ಪರಿಸರ, ವಾತಾವರಣ ಎಲ್ಲ ಸ್ವಚ್ಛವಾಗಿದೆ. ದೇವಸ್ಥಾನದ ಉಸ್ತುವಾರಿಯನ್ನು ಪ್ರಧಾನ ಅರ್ಚಕರಾದ ಶ್ರೀ ನಾರಾಯಣರವರು ನಿರ್ವಹಿಸುವುದಲ್ಲದೆ, ಅದರ ಇತಿಹಾಸವನ್ನು ರಸವತ್ತಾಗಿ ವರ್ಣಿಸುವುದು ನಮ್ಮನ್ನು ಮಾತ್ರ ಮುಗ್ಧರನ್ನಾಗಿಸುತ್ತದೆ. ದೇವಸ್ಥಾನದಿಂದ ಹೊರಬಂದಾಗ ಮನಸ್ಸಿಗೆ ಒಂದು ಆಹ್ಲಾದಕರ, ವಿಶಿಷ್ಟ ಅನುಭವ ಆಗುವುದರಲ್ಲಿ ಸಂಶಯವಿಲ್ಲ.

ನೀವೇಕೆ ಒಮ್ಮೆ ಈ ಗುಡಿಯ ದರ್ಶನ ಮಾಡಿ ಪಾವನವಾಗಬಾರದು?

ಕೆ. ರಮೇಶ್

11 Responses

 1. Savithri bhat says:

  ನಮ್ಮ ಕರ್ನಾಟಕ ದಲ್ಲಿಯೆ ಎಸ್ಟೊಂದು ಅದ್ಭುತ ಕ್ಷೇತ್ರ ಇದೆಯೆಂದು ತಿಳಿದು ತುಂಬಾ ಸಂತಸವಾಯಿತು.. ವಿವರಣೆಯ ಲೇಖನ ತುಂಬಾ ಚೆನ್ನಾಗಿದೆ..ಧನ್ಯವಾದಗಳು

 2. ನಾಗರತ್ನ ಬಿ. ಅರ್. says:

  ತುಂಬಾ ಖುಷಿ ಆಯ್ತು ಸಾರ್ ನಾನು ಆ ದೇವಸ್ಥಾನವನ್ನು ನೋಡಿದ್ದೇನೆ ಅದರ ಹಿನ್ನೆಲೆ ಯನ್ನು ಕೇಳಿ ನನ್ನ ಕಾದಂಬರಿಯ ಲ್ಲಿ ಸಾಂದರ್ಭಿಕ ವಾಗಿ ಬಳಸಿಕೊಂಡಿದ್ದೇನೆ. ನಿರೂಪಣೆ ಸೂಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಸಾರ್.

 3. B c n murthy says:

  ನಾನು ಹಲವಾರು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ, ನಿಮ್ಮ ಈ ದೇವಸ್ಥಾನದ ಬಗೆಗಿನ ಉತ್ತಮ ಲೇಖನ ಓದಿ ಮತ್ತೊಮ್ಮೆ ಹೋಗುವ ಮನಸಾಗಿದೆ.

 4. ನಯನ ಬಜಕೂಡ್ಲು says:

  Beautiful

 5. ಈಗಲೇ ದೇಗುಲಕ್ಕೆ ಭೇಟಿ ನೀಡುವ ಮನಸ್ಸಾಗುತ್ತಿದೆ ನಿಮ್ಮ ಲೇಖನವನ್ನು ಓದಿದ ಮೇಲೆ

 6. Hema says:

  ಸೊಗಸಾದ ಬರಹ. ನಾವು ಹೆಡತಲೆಗೆ ಮತ್ತು ಹೆಮ್ಮರಗಾಲಕ್ಕೆ ಭೇಟಿ ಕೊಟ್ಟಿದ್ದೆವು.

 7. . ಶಂಕರಿ ಶರ್ಮ says:

  ಹೆಡತಲೆಯ ಗ್ರಾಮದ ವಿಶೇಷತೆ, ಹೆಸರಿನ ಹಿಂದಿರುವ ರೋಚಕ ಕಥೆ, ಹೊಯ್ಸಳ ಶೈಲಿಯಲ್ಲಿರುವ ಶ್ರೀ ಲಕ್ಷ್ಮಿಕಾಂತ ದೇವಸ್ಥಾನ, ದಂಡನಾಯಕ ಕಟ್ಟಿಸಿದ ಹದಿನಾರು ಮುಖ ಚಾವಡಿ, ಅಲ್ಲಿಯ ಆಸನಗಳ ವಿಶೇಷ ವ್ಯವಸ್ಥೆ…ಈ ಎಲ್ಲವೂ ಸೇರಿ ಆ ಪುಟ್ಟ ಹಳ್ಳಿಗೆ ವಿಶೇಷ ಮೆರುಗನ್ನಿತ್ತಿವೆ… ಒಮ್ಮೆಯಾದರೂ ನೋಡುವ ಬಯಕೆಯನ್ನು ಹುಟ್ಟಿಸುವುದು ನಿಜ! ಸೊಗಸಾದ ಲೇಖನ ಸರ್.

 8. Padma Anand says:

  ಹಲವಾರು ವಿಶೇಷಗಳನ್ನೊಳಗೊಂಡ ಮಾಹಿಪೂರ್ಣ ಸೊಗಸಾದ ಲೇಖನ. ನಾವೂ ಭೇಟಿಕೊಟ್ಟಿದ್ದೆವಾದರೂ ಇಷ್ಟು ವಿವರಗಳು ತಿಳಿದಿರಲೇ ಇಲ್ಲ, ವಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: