ಜ್ಯೋತಿರ್ಲಿಂಗ 5 : ವೈದ್ಯನಾಥೇಶ್ವರ

Share Button

ಬೋಲ್ ಭಂ, ಬೋಲ್ ಭಂ’, ಎನ್ನುವ ಭಕ್ತರ ಕೂಗು ಕೇಳಿಸುತ್ತಿದೆಯಾ ವೈದ್ಯನಾಥ. ಎಲ್ಲಿರುವೆ ನೀನು, ಏಕೆ ಕಾಡುವೆ ನಿನ್ನ ದರುಶನಕ್ಕಾಗಿ ಬರುವ ಭಕ್ತರನ್ನು? ಮಹಾರಾಷ್ಟ್ರದ ಪರ್ಲಿಯಲ್ಲಿರುವೆಯೋ, ಅಥವಾ ಜಾರ್ಖಂಡ್‌ನ ದೇವಘರ್ ನಲ್ಲಿರುವೆಯೋ, ಅಥವಾ ಹಿಮಾಚಲದ ಕಾಂಗ್ರಾ ನಗರದಲ್ಲಿರುವೆಯೋ ತಂದೆ? ಕನ್ವರ್ ಯಾತ್ರೆಯ ಸಮಯದಲ್ಲಿ,, ಬಿಹಾರದ ಸುಲ್ತಾನ್‌ಗಂಜ್‌ನಲ್ಲಿ ಹರಿಯುವ ಪುಣ್ಯಪಾವನೆಯಾದ ಗಂಗಾನದಿಯಿಂದ ನೀರನ್ನು ಕುಂಭಗಳಲ್ಲಿ ಹೊತ್ತು, ನಿನಗೆ ಅಭಿಷೇಕ ಮಾಡಲು ಸಹಸ್ರ ಸಹಸ್ರ ಜನ ಭಕ್ತರು ಬರುತ್ತಿರುವವರು. ನಿನ್ನ ನಾಮಸ್ಮರಣೆ ಮಾಡುತ್ತಾ, ಸುಮಾರು ೧೨೫ ಕಿ.ಮೀ. ದೂರವನ್ನು ಬರಿಗಾಲಲ್ಲೇ ಕ್ರಮಿಸುವರು. ಜಾತಿ, ಮತ, ಪಂಥಗಳ ಬೇಧವಿಲ್ಲದೆ, ಇಲ್ಲಿಗೆ ಬರುವ ಭಕ್ತರೆಲ್ಲಾ ಗಂಗೆಯ ಅಭಿಷೇಕ ಮಾಡಿ ಪೂಜಿಸುವರು. ವಿಶಾಲವಾದ ಪಾಣಿಪೀಠ, ಮಧ್ಯೆ ಪುಟ್ಟದಾದ ಸಾಲಿಗ್ರಾಮ ಶಿಲೆಯನ್ನು ಭಕ್ತಿಯಿಂದ ಆರಾಧಿಸುವ ಶಿವಭಕ್ತರು.

ದೇ, ನಿನ್ನನ್ನು ಕಾಣಲು, ಮೊದಲು ಪರ್ಲಿಗೆ ಬರುವೆ. ಮೇರು ಪರ್ವತದ ತಪ್ಪಲಿನಲ್ಲಿ, ನಾಗನಾರಾಯಣನೆಂಬ ಪರ್ವತದ ಮಡಿಲಲ್ಲಿರುವ ಸುಂದರವಾದ ಪಟ್ಟಣ ಇದು. ಇಲ್ಲಿ ಬ್ರಹ್ಮ, ವೇಣು, ಸರಸ್ವತಿ ನದಿಗಳು ಹರಿಯುತ್ತವೆ. ಈ ಪಟ್ಟಣಕ್ಕೆ ಇನ್ನೂ ಹಲವು ಹೆಸರುಗಳಿವೆ – ಕಾಂತಿಪುರ, ಮಧ್ಯರೇಖ, ವೈಜಯಂತಿ ಇತ್ಯಾದಿ. ನೀನು ನೆಲಸಿರುವ ಸ್ಥಳವನ್ನು ಚಿತಾಭೂಮಿ ಎಂದೂ ಕರೆಯುತ್ತಾರೆ. ಸ್ಮಶಾನವಾಸಿಯಾದ, ನಿನ್ನ ವಾಸ ರುದ್ರಭೂಮಿಯೇ ಅಲ್ಲವೇ? ಪರ್ಲಿಯ ಸುತ್ತ ಇರುವ ಬೆಟ್ಟ, ಗುಡ್ಡಗಳು, ಹಸಿರುಟ್ಟ ಕಾಡುಗಳು, ಬೆಟ್ಟದ ಕಣಿವೆಗಳಲ್ಲಿ ಝುಳುಝುಳು ಹರಿವ ನದಿಗಳೂ – ಯಾತ್ರಿಗಳ ಮನ ಸೆಳೆಯುತ್ತವೆ. ನಿನಗೆ ವೈದ್ಯನಾಥ ಎಂದು ಕರೆದವರು ಯಾರು? ನಿನ್ನ ಸುತ್ತ ಇರುವ ಬೆಟ್ಟ ಗುಡ್ಡಗಳಲ್ಲಿ ಹೇರಳವಾಗಿ ಬೆಳೆದಿರುವ ಅಮೂಲ್ಯವಾದ ಗಿಡ ಮೂಲಿಕೆಗಳನ್ನು ಕಂಡವರು ನಿನ್ನನ್ನು ವೈದ್ಯನಾಥನೆಂದು ಕರೆದಿರಬಹುದಲ್ಲವೇ?

ಈ ಕ್ಷೇತ್ರದ ಪೌರಾಣಿಕ ಕತೆಗಳೂ ಹತ್ತುಹಲವು. ಗೌರಿಯ ವರಪ್ರಸಾದವಾದ ಯೋಗೇಶ್ವರಿ ಎಂಬ ಕನ್ಯೆಯು ಶಿವನನ್ನು ವರಿಸಲು ಹಂಬಲಿಸುತ್ತಾ, ತಪಸ್ಸು ಮಾಡುತ್ತಿದ್ದಳು. ಅವಳ ಪ್ರೀತಿಗೆ ಒಲಿದ ಶಿವ, ಅವಳನ್ನು ವಿವಾಹವಾಗುತ್ತಾನೆ. ಆದರೆ, ಶಿವನ ಮದುವೆಗೆಂದು ಗಣವೃಂದ ಆಗಮಿಸಿದಾಗ ಮುಹೂರ್ತದ ವೇಳೆ ಮೀರಿತ್ತು. ಈಗಲೂ ಅವರೆಲ್ಲಾ ಅಲ್ಲಿಯೇ ಶಿಲಾಮೂರ್ತಿಗಳಾಗಿ ನಿಂತಿದ್ದಾರೆ. ಭಕ್ತರ ಕೋರಿಕೆಯ ಮೇರೆಗೆ ಶಿವನು ಅಲ್ಲಿಯೇ ನೆಲಸಿದ್ದಾನೆ ಎಂದು ಪ್ರತೀತಿ.

ಇನ್ನೊಂದು ಪೌರಾಣಿಕ ಕತೆ ಹೀಗಿದೆ. ದೇವ, ದಾನವರು ಸಮುದ್ರ ಮಂಥನದ ಸಮಯದಲ್ಲಿ ಉದ್ಭವವಾದ ಅಮೃತ ಮತ್ತು ಧನ್ವಂತರಿಗಾಗಿ ಕಾದಾಡುತ್ತಾರೆ. ಆಗ ವಿಷ್ಣು, ಈ ಅಮೂಲ್ಯ ವಸ್ತುಗಳನ್ನು ಶಿವಲಿಂಗದಲ್ಲಿ ಅಡಗಿಸಿಡುತ್ತಾನೆ. ದಾನವರು ಶಿವಲಿಂಗವನ್ನು ಸೀಳಿ, ಈ ವಸ್ತುಗಳನ್ನು ದೋಚಲು ಯತ್ನಿಸಿದಾಗ, ಕುಪಿತನಾದ ಮಹಾದೇವನು ಅಗ್ನಿಜ್ವಾಲೆಯ ರೂಪದಲ್ಲಿ ಪ್ರಕಟನಾಗಿ ಅವರನ್ನು ದಹಿಸುತ್ತಾನೆ. ದೇವತೆಗಳು ಭಕ್ತಿಯಿಂದ ಶಿವಲಿಂಗವನ್ನು ಸ್ಪರ್ಶಿಸಿದಾಗ, ಒಲಿದ ಶಿವನು, ಅವರಿಗೆ ಅಮೃತವನ್ನೂ ಹಾಗೂ ಧನ್ವಂತರಿಯನ್ನೂ ದಯಪಾಲಿಸುತ್ತಾನೆ. ಅವರಿಗೆ ಅಮೃತವನ್ನು ನೀಡಿದ್ದರಿಂದ ಅಮೃತೇಶ್ವರನೆಂದೂ, ಧನ್ವಂತರಿಯನ್ನು ನೀಡಿದ್ದರಿಂದ ವೈದ್ಯನಾಥನೆಂದೂ ಪ್ರಸಿದ್ದನಾಗುವನು. ದೇವತೆಗಳು ಅಮೃತವನ್ನು ಪಡೆಯಲು ವಿಷ್ಣುವು ಆಶೀರ್ವದಿಸಿದ್ದರಿಂದ ಈ ಸ್ಥಳಕ್ಕೆ ವೈಜಯಂತಿ ಎಂಬ ಹೆಸರೂ ಬಂದಿತು. ಈಗಲೂ ಯಾತ್ರಿಗಳು ಭಕ್ತಿಭಾವದಿಂದ ಶಿವಲಿಂಗವನ್ನು ಸ್ಪರ್ಶಿಸಿ ಪೂಜಿಸುವರು. ಇದರಿಂದ ಅವರವರ ಇಷ್ಟಾರ್ಥಗಳು ನೆರವೇರುವುವು ಎಂಬ ನಂಬಿಕೆ ಇದೆ.

ವೈದ್ಯನಾಥೇಶ್ವರ PC: Internet

ಇನ್ನೂ ಹಲವು ಪೌರಾಣಿಕ ಪ್ರಸಂಗಗಳು ಈ ಕ್ಷೇತ್ರದಲ್ಲಿ ನಡೆದಿದ್ದವು ಎಂಬ ಐತಿಹ್ಯವಿದೆ. ಅಲ್ಪಾಯುಷಿಯಾದ ಮಾರ್ಕಂಡೇಯನು- ಇಲ್ಲಿಯೇ ಜ್ಯೋತಿಸ್ವರೂಪನಾದ ಶಿವನನ್ನು ಪೂಜಿಸಿ ಯಮನನ್ನೇ ಸೋಲಿಸಿದ. ಇನ್ನು ಸಾವಿತ್ರಿ ಸತ್ಯವಾನರ ಕತೆ ಯಾರಿಗೆ ತಾನೇ ಗೊತ್ತಿಲ್ಲ? ಮಹಾ ಪತಿವ್ರತೆಯಾದ ಸಾವಿತ್ರಿಯು, ತನ್ನ ಪತಿಯಾದ ಸತ್ಯವಾನನನ್ನು, ಸಾವಿನ ದವಡೆಯಿಂದ ರಕ್ಷಿಸಿದ ಪುಣ್ಯಕ್ಷೇತ್ರ ಇದು.

ಬನ್ನಿ, ನಾವೀಗ ಜಾರ್ಖಂಡ್‌ನಲ್ಲಿರುವ ದೇವಘರ್‌ಗೆ ಹೋಗೋಣ. ‘ದೇವರ ಮನೆ’ ಎಂದೇ ಪ್ರಖ್ಯಾತವಾಗಿರುವ ವೈದ್ಯನಾಥನ ಪುಣ್ಯಕ್ಷೇತ್ರ ಇದು. ಇಲ್ಲಿನ ಜನಜನಿತವಾಗಿರುವ ಪೌರಾಣಿಕ ಪ್ರಸಂಗ, ನಮ್ಮ ರಾಜ್ಯದ ಗೋಕರ್ಣ ಕ್ಷೇತ್ರದ ಕತೆಯನ್ನೇ ಹೋಲುವುದು. ಲಂಕಾಧಿಪತಿಯಾದ ರಾವಣನು, ಕೈಲಾಸದಿಂದ ಶಿವನನ್ನು ತನ್ನ ನಾಡಿಗೆ ಕರೆದೊಯ್ಯಬೇಕೆಂಬ ಸಂಕಲ್ಪದೊಂದಿಗೆ ಹಲವು ವರ್ಷಗಳ ಕಾಲ ಕಠಿಣವಾದ ತಪಸ್ಸನ್ನು ಆಚರಿಸುವನು. ಶಿವನು ಪ್ರತ್ಯಕ್ಷನಾಗಲಿಲ್ಲ. ಛಲ ಬಿಡದ ರಾವಣಾಸುರನು, ತನ್ನ ಹತ್ತು ಶಿರಗಳನ್ನು ಒಂದೊಂದಾಗಿ ತುಂಡರಿಸಿ ಶಿವನಿಗೆ ಅರ್ಪಿಸುತ್ತಾನೆ. ಇನ್ನೇನು ಹತ್ತನೇ ಶಿರವನ್ನು ಕತ್ತಿರಸುವುದರಲ್ಲಿದ್ದ ರಾವಣನನ್ನು ತಡೆದ ಕರುಣಾಮಯಿಯಾದ ಶಿವನು ಪ್ರತ್ಯಕ್ಷನಾಗುವನು. ಅವನು ಕತ್ತರಿಸಿ ಹಾಕಿದ್ದ ಶಿರಗಳನ್ನು ಒಂದೊಂದಾಗಿ ಜೋಡಿಸುವನು. ಹಾಗಾಗಿ ಶಿವನಿಗೆ ವೈದ್ಯನಾಥೇಶ್ವರನೆಂಬ ಹೆಸರು ಬಂದಿದೆ. ಜೊತೆಗೆ ರಾವಣನ ಬೇಡಿಕೆಯನ್ನೂ ಈಡೇರಿಸಿದ. ಶಿವನು ಲಿಂಗರೂಪಿಯಾಗಿ, ರಾವಣನ ಜೊತೆ ಹೊರಟ. ಆದರೆ ಶಿವನು ರಾವಣನಿಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದ. ಲಂಕೆಗೆ ಹೋಗುವ ದಾರಿಯಲ್ಲೇನಾದರೂ ಶಿವಲಿಂಗವನ್ನು ನೆಲದ ಮೇಲಿಟ್ಟರೆ, ಅದು ಅಲ್ಲಿಯೇ ನೆಲೆಯಾಗುವುದು. ಇನ್ನು ದೇವತೆಗಳಿಗೆ ಎಲ್ಲಿಲ್ಲದ ಕಳವಳ, ಚಿಂತೆ. ರಾವಣನೇನಾದರೂ ಲಂಕೆಯಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿದರೆ, ಶಿವನ ಅನುಗ್ರಹದಿಂದ ಅಗಾಧ ಶಕ್ತಿಯನ್ನು ಪಡೆದ ರಾವಣನು, ಮೂರು ಲೋಕಗಳನ್ನೂ ಅಲ್ಲೋಲ ಕಲ್ಲೋಲ ಮಾಡಿಯಾನು ಎಂಬ ಕಾತರ. ರಾವಣನ ಪ್ರಯತ್ನ ಫಲಿಸದಿರಲು, ಒಂದು ತಂತ್ರವನ್ನು ಮಾಡಿದರು. ಇದ್ದಕ್ಕಿದ್ದಂತೆ ಮೋಡ ಕವಿದು ಕತ್ತಲಾಯಿತು. ಸಂಜೆ, ಮಹಾ ಬ್ರಾಹ್ಮಣನಾದ ರಾವಣನು ಸಂಧ್ಯಾವಂದನೆ ಮಾಡುವ ಸಮಯ. ಆದರೆ, ಶಿವಲಿಂಗವನ್ನು ಕೆಳಗಿಡುವಂತಿಲ್ಲ. ಆಗ ಅಲ್ಲಿಗೆ ಗಣಪತಿಯು, ಗೋವುಗಳನ್ನು ಕಾಯುತ್ತಿದ್ದ ಬಾಲಕನ ವೇಷದಲ್ಲಿ ಕಾಣಿಸುವನು. ಅಸುರನು, ಬಾಲಕನಿಗೆ ಶಿವಲಿಂಗವನ್ನು ನೀಡಿ, ತಾನು ಸಂಧ್ಯಾವಂದನೆ ಮುಗಿಸಿ ಬರುವವರೆಗೂ, ಶಿವಲಿಂಗವನ್ನು ನೆಲದ ಮೇಲಿಡಬಾರದೆಂಬ ಎಚ್ಚರಿಕೆ ನೀಡಿ ಹೊರಟ. ಆಗ ಗಣೇಶನು, ಲಿಂಗವನ್ನು ಹೊರಲಾರz, ನೆಲದ ಮೇಲೆ ಇಟ್ಟು ಬಿಡುತ್ತಾನೆ. ಕುಪಿತನಾದ ರಾವಣನು, ತನ್ನ ಬಲದಿಂದ ಲಿಂಗವನ್ನು ಮೇಲೆತ್ತಲು ಯತ್ನಿಸಿದಾಗ ಲಿಂಗವು ಮೂರು ಹೋಳಾಯಿತೆಂದೂ, ಒಂದು ಭಾಗವು ಮಹಾರಾಷ್ಟ್ರದ ಪರ್ಲಿಯಲ್ಲಿಯೂ, ಇನ್ನೊಂದು ಜಾರ್ಖಂಡ್‌ನ ದೇವಘರ್‌ನಲ್ಲಿಯೂ ಮತ್ತೊಂದು ಹಿಮಾಚಲದ ಕಾಂಗ್ರಾ ಪ್ರದೇಶದಲ್ಲಿದೆಯೆಂಬ ಪ್ರತೀತಿ.

ವೈದ್ಯನಾಥೇಶ್ವರ ಜ್ಯೋತಿರ್ಲಿಂಗದ ಇತಿಹಾಸವನ್ನು ತಿಳಿಯೋಣವೇ? ಶಿವಪುರಾಣದಲ್ಲಿ ಈ ಪ್ರದೇಶಕ್ಕೆ ‘ಚಿತಾಭೂಮಿ’ ಎಂದು ಹೆಸರಿಸಲಾಗಿದೆ. ಬಹುಶಃ ಕಾಪಾಲಿಕರು ಸಿದ್ದಿಗಳನ್ನು ಪಡೆಯಲು, ಮೃತ ದೇಹಗಳನ್ನು ಸುಡುತ್ತಿದ್ದ ಈ ಸ್ಥಳದಲ್ಲಿ, ತಾಂತ್ರಿಕ ವಿಧಿ ವಿಧಾನಗಳನ್ನು ಆಚರಿಸುತ್ತಿದ್ದಿರಬಹುದು. ಪುರಾಣ ಪ್ರಸಿದ್ದಿಯಾದ ಈ ಕ್ಷೇತ್ರದಲ್ಲಿ ಶ್ರೀರಾಮನು, ಸೀತೆಯೊಡನೆ ವೈದ್ಯನಾಥೇಶ್ವರನನ್ನು ಪೂಜಿಸಿದನೆಂಬ ಪ್ರತೀತಿಯೂ ಇದೆ. ಎಂಟನೇ ಶತಮಾನದಲ್ಲಿ ರಾಜಾ ಆದಿತ್ಯಸೇನ ಗುಪ್ತನು ಇಲ್ಲಿ ದೇಗುಲವನ್ನು ನಿರ್ಮಾಣ ಮಾಡಿದನು. ಅಕ್ಬರನ ಕಾಲದಲ್ಲಿ ಈ ಸ್ಥಳಕ್ಕೆ ವಿಶೇಷ ಮನ್ನಣೆ ದೊರೆತಿತ್ತು. 1700 ರಲ್ಲಿ ರಾಣಿ ಅಹಲ್ಯಾ ಬಾಯಿ ಹೋಲ್ಕರ್ ಈ ದೇಗುಲಕ್ಕೆ ಒಂದು ಹೊಸರೂಪವನ್ನೇ ನೀಡಿದಳು. ರಾಣಿಯು, ಈ ಕ್ಷೇತ್ರಕ್ಕೆ, ಅನೇಕ ಬಾರಿ ಭೇಟಿ ನೀಡಿದ್ದಳು. ನಂತರದಲ್ಲಿ, ನಾನಾರಾವ್ ಪೇಶ್ವೆಯವರು ವಿಶಾಲವಾದ ಮುಖ ಮಂಟಪವನ್ನು ನಿರ್ಮಿಸಿದರು. ರಾಜಾ ಶ್ರೀಮಂತ್ ಪೇಶ್ವೆಯವರು, ಈ ದೇಗುಲದ ನಿರ್ವಹಣೆಗಾಗಿ, ಹಲವು ಎಕರೆ ಭೂಮಿಯನ್ನು ಉಂಬಳಿಯನ್ನಾಗಿ ನೀಡಿದರು.
ಪರ್ಲಿಯ ವೈದ್ಯನಾಥೇಶ್ವರ ಜ್ಯೋತಿರ್ಲಿಂಗವು ಎತ್ತರವಾದ ಮಣ್ಣಿನ ದಿಬ್ಬದ ಮೇಲಿದ್ದು, ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಸುತ್ತಲೂ ಕೋಟೆಯಂತಹ ಗೋಡೆಗಳಿದ್ದು, ನಡುವೆ ಎತ್ತರವಾದ ಗೋಪುರವಿದೆ. ಗೋಪುರದ ಮೇಲೆ ಮೂರು ಸ್ವರ್ಣಲೇಪಿತ ಕಳಶಗಳಿವೆ. ಮೊದಲಿಗೆ ಈ ಕಳಶಗಳು ತಾಮ್ರದಿಂದ ಮಾಡಲ್ಪಟ್ಟಿದ್ದವೆಂದೂ, ನಂತರ ಚೋಳರ ರಾಣಿಯು ಚಿನ್ನದ ಲೇಪನ ಮಾಡಿಸಿದಳೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಲ್ಲಿರುವ ತ್ರಿಶೂಲದಲ್ಲಿ ಮೂರು ಶೂಲಗಳ ಬದಲಿಗೆ ಐದು ಶೂಲಗಳಿರುವುದರಿಂದ ಪಂಚಶೂಲ ಎಂದೇ ಕರೆಯುವರು. ಸುಂದರವಾಗಿ ಕೆತ್ತಲ್ಪಟ್ಟಿರುವ ಅಷ್ಟದಳದ ಪದ್ಮದ ಮಧ್ಯೆ ಒಂದು ಅಮೂಲ್ಯವಾದ ರತ್ನ ಇರುವುದರಿಂದ ಇದು, ಚಂದ್ರಕಾಂತಮಣಿ ಎಂದೇ ಪ್ರಸಿದ್ಧಿಯಾಗಿದೆ.

ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ, ಇದು ಹರಿಹರರಿಬ್ಬರೂ ಪೂಜಿಸಲ್ಪಡುವ ಸ್ಥಳ. ದೇವಾಲಯದ ಮುಂದಿರುವ ಸರೋವರದ ಹೆಸರು ಹರಿಹರ ತೀರ್ಥ. ಹಠಯೋಗ ಪ್ರದೀಪಿಕೆಯಲ್ಲಿ, ಸ್ವಾಮಿ ಸ್ವಾತ್ಮಾರಾಮರು ಬರೆದಿರುವಂತೆ – ಶಿವನ ಹೃದಯ ವಿಷ್ಣುವಾಗಿದ್ದಾನೆ ಹಾಗೂ ವಿಷ್ಣುವಿನ ಹೃದಯ ಶಿವನಾಗಿದ್ದಾನೆ. ಭಕ್ತರು ಶಿವನಿಗೆ ತುಳಸೀ ಹಾರವನ್ನು, ವಿಷ್ಣುವಿಗೆ ಬಿಲ್ವ ಪತ್ರೆಯ ಹಾರವನ್ನು ಅರ್ಪಿಸಿ ಪೂಜಿಸುವರು.

ಬೋಲ್ ಭಂ, ಬೋಲ್ ಭಂ ಎಂದು ಹಾಡುತ್ತಾ, ಕುಣಿಯುತ್ತಾ ಕಾವಡಿ ಹೊತ್ತು, ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಹಸ್ರ ಸಹಸ್ರ ಭಕ್ತರ ಆರಾಧ್ಯ ದೈವ ವೈದ್ಯನಾಥ. ಅಮೂಲ್ಯವಾದ ಔಷಧೀಯ ಸಸ್ಯಗಳುಳ್ಳ ಮೇರು ಪರ್ವತದ ವನಸಿರಿ, ವೈದ್ಯನಾಥನನ್ನು ಭಕ್ತರ ಪಾಲಿನ ಕಲ್ಪವೃಕ್ಷವನ್ನಾಗಿಸಿದೆ. ಗಂಗೆಯನ್ನು ತನ್ನ ಜಟೆಗಳಲ್ಲಿ ಬಂಧಿಸಿ, ಸರ್ಪವನ್ನು ಕೊರಳ ಮಾಲೆಯಂತೆ ಧರಿಸಿ, ಚಂದ್ರನನ್ನು ತಲೆಯಲ್ಲಿ ಮುಡಿದ ವೈದ್ಯನಾಥನು ಎಲ್ಲರ ರಕ್ಷಣೆ ಮಾಡುತ್ತಿರುವನು. ಯಾತ್ರಿಗಳು ಭಕ್ತಿಭಾವದಿಂದ ಸ್ಮಶಾನವಾಸಿಯಾದ ಶಿವನಿಗೆ ತಲೆಬಾಗುವರು.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 4 ) ಇಲ್ಲಿದೆ: http://surahonne.com/?p=34562

-ಡಾ.ಗಾಯತ್ರಿದೇವಿ ಸಜ್ಜನ್

6 Responses

 1. Padma Anand says:

  ಸುಂದರ ವಿವರಣೆಯೊಂದಿಗಿನ ವೈದ್ಯನಾಥೇಶ್ವರ ಇತಿಹಾಸ ಭಕ್ತಿ ಭಾವದಿಂದಿಗೆ ಮುದವನ್ನೂ ನೀಡಿತು. ಓಂ ನಮಃ ಶಿವಾಯ.
  ಅಭಿನಂದನೆಗಳು.

 2. ನಾಗರತ್ನ ಬಿ. ಅರ್. says:

  ಜ್ಯೋತಿರ್ಲಿಂಗ ಪರಿಚಯ ಮಾಲಿಕೆ ಯಲ್ಲಿ ಇಂದು ಪರಿಚಯಿಸಿರುವ ವೈದ್ಯನಾಥೇಶ್ವರನ ಐತಿಹಾಸಿಕ ಪೌರಾಣಿಕ ಕಥೆಗಳು ಬಹಳ ಮುದ ನೀಡಿದವು.ಸೊಗಸಾದ ನಿರೂಪಣೆ ಧನ್ಯವಾದಗಳು ಮೇಡಂ

 3. ನಯನ ಬಜಕೂಡ್ಲು says:

  Nice

 4. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು

 5. . ಶಂಕರಿ ಶರ್ಮ says:

  ಮಹಾಶಿವನ ಹಲವು ನಾಮರೂಪಗಳಲ್ಲಿ ಒಂದಾದ ವೈದ್ಯನಾಥೇಶ್ವರನ ಬಗ್ಗೆ ಪೂರಕ ಪೌರಾಣಿಕ ಕಥಾಹಿನ್ನೆಲೆಯೊಂದಿಗಿನ ಮಾಹಿತಿಯುಕ್ತ ಲೇಖನ…ಧನ್ಯವಾದಗಳು ಮೇಡಂ.

 6. Padmini Hegade says:

  Nice

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: