ಕಾದಂಬರಿ: ನೆರಳು…ಕಿರಣ1

Share Button


”ಅಜ್ಜೀ..ಅಜ್ಜೀ, ಇಲ್ಲಿಗೆ ಬರುತ್ತೀಯಾ?” ಮೊಮ್ಮಗಳ ಕರೆ ಪಡಸಾಲೆಯಲ್ಲಿ ಬತ್ತಿ ಹೊಸೆಯುತ್ತ ಕುಳಿತಿದ್ದ ಭಾಗ್ಯಮ್ಮನವರ ಕಿವಿಗೆ ಬಿತ್ತು. ”ಏನು ಕೂಸೇ? ಬಂದೆ ತಡಿ, ನಿನ್ನ ಕುಲಪುತ್ರ ಇನ್ನು ಮಲಗಿಲ್ಲವೇನು?” ಎನ್ನುತ್ತಾ ನಡುಮನೆಗೆ ಬಂದರು. ”ಅಜ್ಜೀ ನಾನು ಹಾಲು ಮಾಡಿಕೊಂಡು ತರ್‍ತೀನಿ, ಹೊಟ್ಟೆ ತುಂಬಿಲ್ಲಾಂತ ಕಾಣುತ್ತೆ. ಎದೆ ತುಂಬಾ ಹಾಲಿದ್ದರೂ ಈ ನನ್ಮಗಾ ಕಚ್ಚಿ ಕುಡಿಯೋದೇ ಇಲ್ಲ” ಎಂದು ದೂರಿದಳು.

”ಹಹ್ಹಾ ! ಆಕ್ಷೇಪಣೆಯ ಅಕ್ಷತೆ ಹಾಕೋದು ನಿಲ್ಲಿಸು, ನೀನೂ ಹೀಗೇ ಮಾಡುತ್ತಿದ್ದೆ. ಅಮ್ಮನಂತೆ ಮಗನೂ. ನೂಲಿನಂತೆ ಸೀರೆ. ಗಾದೆಮಾತು ಕೇಳಿಲ್ಲವೇನು? ಇಲ್ಲಿ ತಾಯಿಯಂತೆ ಮಗಳಿಗೆ ಬದಲಾಗಿ ಮಗನಿದ್ದಾನೆ ಅಷ್ಟೇ. ಹೋಗು ಬೇಗ ಬಾ” ಎಂದರು ಅಜ್ಜಿ.

”ಆಹಾ, ಮುಮ್ಮಗನ ಪರವಾಗಿ ವಕಾಲತ್ತು ವಹಿಸುವುದು ನೋಡು. ಅಮ್ಮ ಹೇಳೋದು ನಿಜ. ನೀನು ಅವಳನ್ನು ಬೈದಷ್ಟು, ಅಡ್ಡಿ ಮಾಡಿದಷ್ಟು ನನಗೆ ಮಾಡಲಿಲ್ಲವಂತೆ. ಈಗ ಈ ಬೊಮ್ಮಟೆಯ ಪರ ನೀನು” ಎಂದು ನಗೆಚಟಾಕಿ ಹಾರಿಸುತ್ತಾ ಮಗುವನ್ನು ಅಜ್ಜಿಯ ಕೈಗೆ ಕೊಡಲು ಮುಂದಾದಳು ಮೊಮ್ಮಗಳು ರಶ್ಮಿ.

”ಏ ಕೂಸೇ, ಎತ್ತಿ ಮಡಿಲಿಗೆ ಹಾಕಿಕೊಂಡು ಸಂಭಾಳಿಸುವಷ್ಟು ಕಸುವು ಎಲ್ಲಿ ಉಳಿದಿದೆ ನನ್ನಲ್ಲಿ. ತೊಟ್ಟಿಲಿಗೆ ಹಾಕು, ನೀನು ಹಾಲು ಮಾಡಿಕೊಂಡೋ, ಕಾಯಿಸಿಕೊಂಡೋ ಬರುವವರೆಗೆ ನಾನು ಹಾಗೇ ತೂಗುತ್ತಿರುತ್ತೇನೆ” ಎಂದರು ಭಾಗ್ಯಮ್ಮ.
”ಓ..ಸಾರಿ ಅಜ್ಜೀ, ನೀನು ಆಡೋದು ನೋಡಿ ನಿನಗೆ ವಯಸ್ಸಾಗಿದೆ ಅನ್ನೋದೇ ಮರೆತುಹೋಗಿದೆ. ಇನ್ನೇನು ನೀನು ಶತಕದ ಸಮೀಪಕ್ಕೆ ಬರುತ್ತಿದ್ದೀ ಅಲ್ವಾ ಅಜ್ಜೀ?” ಎನ್ನುತ್ತಾ ಮಗುವನ್ನು ತೊಟ್ಟಿಲಿಗೆ ಹಾಕಿ ಒಳನಡೆದಳು ರಶ್ಮಿ.

ಅಮ್ಮನ ಕೈಯಿಂದ ತೊಟ್ಟಿಲಿಗೆ ಬದಲಾದ ಮಗು ಅಳಲು ಪ್ರಾರಂಭಿಸಿತು. ”ಅರೆ, ಪುಟ್ಟಾ ಇಷ್ಟೊತ್ತು ತೆಪ್ಪಗೆ ಅಮ್ಮನ ಮಡಿಲಲ್ಲಿ ಇದ್ದೋನು ಈಗ ವರಲಲಿಕ್ಕೆ ಶುರುಮಾಡಿದ್ಯಾ. ನಿನ್ನ ಹೆತ್ತಮ್ಮ ನಿನ್ನ ಎಲ್ಲೂ ಹಾಕಿಲ್ಲವೋ, ನಿನ್ನ ಮುತ್ತಾತ ಅವರಜ್ಜ ಮಾಡಿದ ತೊಟ್ಟಿಲನ್ನು ಕಾಲಕ್ಕೆ ತಕ್ಕಂತೆ ತಿದ್ದಿ ತೀಡಿ ನಾಜೂಕು ಮಾಡಿದ್ದಾರೆ. ಈ ಊರಿನ ಎಷ್ಟೋ ಕಂದಮ್ಮಗಳು ಇದೇ ತೊಟ್ಟಿಲಲ್ಲಿ ಮಲಗಿ ತೂಗಿಸಿಕೊಂಡು ಆಡಿ ಬೆಳೆದಿವೆ. ಅಷ್ಟೇ ಏಕೆ, ನಿಮ್ಮಜ್ಜಿ, ನಿಮ್ಮ ಅಮ್ಮ ಕೂಡ ಇದರಲ್ಲೇ ಮಲಗಿ ತೂಗಿಸಿಕೊಂಡು ಬೆಳೆದಿದ್ದಾರೆ. ಇದೀಗ ನಿನ್ನ ಸರದಿ”ಎಂದು ಹೇಳುತ್ತಾ ತೊಟ್ಟಿಲಿಗೆ ಕಟ್ಟಿದ್ದ ದಾರವನ್ನು ಹಿಡಿದು ಜಗ್ಗುತ್ತಾ ತೂಗತೊಡಗಿದರು.

ಹಾಗೇ ತೊಟ್ಟಿಲಿನ ಅಂದಚಂದ ಭಾಗ್ಯಮ್ಮನ ಕಣ್ಣು ತುಂಬತೊಡಗಿತು. ಕರೀಮರವನ್ನು ಕಡೆದು ಮಾಡಿದ್ದ ತೊಟ್ಟಿಲು. ಸೊಳ್ಳೆಪರದೆ ಕಟ್ಟಲು ಅನುಕೂಲವಾಗುವಂತೆ ಸುತ್ತಲೂ ಜಾಗಬಿಡಲಾಗಿತ್ತು. ತೊಟ್ಟಿಲಿನ ಮಧ್ಯಭಾಗದಲ್ಲಿ ಇಳಿಬಿಟ್ಟಿದ್ದ ಗಿರಿಗಟ್ಟಳೆ ತೂಗಿದಾಗಲೆಲ್ಲ ತೊನೆದಾಡುತ್ತಿತ್ತು. ಅದರ ಸುತ್ತಲೂ ಪುಟ್ಟಪುಟ್ಟ ಗಿಳಿಗಳಾಕಾರದ ಗೊಂಬೆಗಳು. ಮನೆಯ ಯಾವ ಮೂಲೆಗಾದರೂ ಎತ್ತಿ ಕೊಂಡೊಯ್ಯಬಹುದಾದ ಸ್ಟ್ಯಾಂಡಿನಾಕಾರದ ರಚನೆಯಿತ್ತು. ಬಹಳ ಮುಂದಾಲೋಚನೆಯಿಟ್ಟು ತಯಾರಿಸಿದ್ದರು. ಹೂಂ..ಏನು ಮಾಡಿದರೇನು? ಬದುಕಿ ಬಾಳಬೇಕಾದವರು ಯಾವುದೋ ಮೂಢನಂಬಿಕೆಯ ಲೆಕ್ಕಾಚಾರದ ನೆರಳಿನಲ್ಲಿ ಸಿಲುಕಿ ಈ ಲೋಕದಿಂದಲೇ ನಡೆದುಬಿಟ್ಟರು. ಭಾಗ್ಯಮ್ಮನ ನೆನಪಿನಾಳದಲ್ಲಿ ಹುದುಗಿದ್ದ ಬಾಳಿನ ಬುತ್ತಿ ಬಿಚ್ಚಿಕೊಂಡಿತು.

ಆಗ ಬೆಂಗಳೂರು ಈಗಿನಷ್ಟು ವಿಪರೀತ ದಟ್ಟಣೆಯಾಗಿರಲಿಲ್ಲ. ಪ್ರಶಾಂತವಾಗಿತ್ತು. ಎಲ್ಲಿಂದ ಎಲ್ಲಿಗೆ ಬೇಕಾದರೂ ಆತಂಕವಿಲ್ಲದೆ ಸಮಯಕ್ಕೆ ಸರಿಯಾಗಿ ತಲುಪಬಹುದಿತ್ತು. ಬೆಂಗಳೂರಿನ ಶಿವನಳ್ಳಿಯೆಂಬ ಬಡಾವಣೆಯಲ್ಲಿ ಶ್ಯಾಮಭಟ್ಟರು ಮತ್ತು ಅವರ ಧರ್ಮಪತ್ನಿ ಕೌಸಲ್ಯಾ ವಾಸವಾಗಿದ್ದರು. ಅವರೊಟ್ಟಿಗೆ ತಂದೆ ಮಾಧವಭಟ್ಟರು, ತಾಯಿ ಗೌರಮ್ಮನವರೂ ಇದ್ದರು. ಶ್ಯಾಮಭಟ್ಟರು ಸರ್ಕಾರಿ ಕಚೇರಿಯೊಂದರಲ್ಲಿ ಗುಮಾಸ್ತರಾಗಿದ್ದರು. ಶ್ಯಾಮಭಟ್ಟರೊಡನೆ ಒಡಹುಟ್ಟಿದವರು ಇಬ್ಬರು ಸೋದರರು. ತಂದೆಯ ಕಾಲದಲ್ಲಿಯೇ ಅವರೆಲ್ಲ ಬೇರೆಯಾಗಿ ಅದೇ ಊರಿನಲ್ಲಿದ್ದರೂ ಬೇರೆಬೇರೆ ವಾಸ್ತವ್ಯದಲ್ಲಿದ್ದರು. ಹಬ್ಬ ಹರಿದಿನಗಳಲ್ಲಿ, ಹಿರಿಯರ ಪೂಜೆ ಆರಾಧನೆಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಿದ್ದರು. ಬಹತೇಕ ಈ ಆಚರಣೆಗಳೆಲ್ಲವೂ ಶ್ಯಾಮಭಟ್ಟರ ಮನೆಯಲ್ಲಿಯೇ ನಡೆಯುತ್ತಿದ್ದವು. ಕಾರಣ ಹಿರಿಯರಿದ್ದ ಮನೆ, ಮತ್ತು ಹೆತ್ತವರ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರಿಂದ ಅಲ್ಲಿಯೇ ಎಲ್ಲರೂ ಸೇರುತ್ತಿದ್ದರು. ಬಹಳ ಸಂಪ್ರದಾಯಸ್ಥ ಕುಟುಂಬ. ಪೂಜೆ, ಪುನಸ್ಕಾರಗಳಲ್ಲಿ ಅತೀವ ಶ್ರದ್ಧೆ. ಬೆಳಗ್ಗೆ ಐದುಗಂಟೆಗೆ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ ಸ್ನಾನ, ದೇವರಪೂಜೆ, ನಂತರ ಊಟಮಾಡಿ ಕಛೇರಿಗೆ ಹೊರಡುತ್ತಿದ್ದರು ಶ್ಯಾಮಭಟ್ಟರು. ಸಂಜೆ ಮನೆಗೆ ಹಿಂತಿರುಗಿದ ನಂತರ ಮತ್ತೊಮ್ಮೆ ಸ್ನಾನ, ಸಂಧ್ಯಾವಂದನೆ ಮುಗಿಸಿಯೇ ಊಟಮಾಡುತ್ತಿದ್ದುದು. ಮನೆಯಿಂದ ಹೊರಗಡೆ ಏನನ್ನೂ ತಿನ್ನುವ, ಕುಡಿಯುವ ಅಭ್ಯಾಸವನ್ನಿಟ್ಟುಕೊಂಡಿರದ ವ್ಯಕ್ತಿ. ಅವರಿಗೆ ಮದುವೆಯಾದ ಹತ್ತು ವರ್ಷಗಳ ನಂತರ ಹುಟ್ಟಿದ ಮಗನೇ ಶಂಭುಭಟ್ಟ. ತಮ್ಮ ಮಗನಿಗೆ ಅದೇ ಹೆಸರಿಡಲು ಕಾರಣವೆಂದರೆ ಅವರ ಮುತ್ತಾತ. ಏಕೆಂದರೆ ತಮ್ಮ ಮಗ ಹುಟ್ಟುವ ಮೊದಲು ಹುಟ್ಟಿದ್ದ ಮಕ್ಕಳಿಬ್ಬರು ಅಲ್ಪಾಯುಗಳಾಗಿದ್ದರು. ಶ್ಯಾಮಭಟ್ಟರ ಮುತ್ತಾತನವರು ಹತ್ತಿರ ಹತ್ತಿರ ಶತಕದ ಅಂಚನ್ನು ಯಾವೊಂದು ರೋಗರುಜಿನವಿಲ್ಲದೆ ಬದುಕನ್ನು ನಡೆಸಿ ದ್ಯವಾಧೀನರಾಗಿದ್ದರು. ಅವರ ಆರೋಗ್ಯ, ಆಯುಸ್ಸು ನನ್ನ ಮಗನಿಗೂ ಬರಲಿ ಎಂಬ ಆಸೆಯಿಂದ ಅದೇ ಹೆಸರನ್ನು ಅವನಿಗೆ ಇಟ್ಟಿದ್ದರು. ನಂಬಿಕೆಯ ಬಲವೋ, ದೃವರ ಆಶೀರ್ವಾದವೋ ಮಗ ಶಂಭುಭಟ್ಟ ಒಳ್ಳೆ ಹುಣ್ಣಿಮೆಯ ಚಂದ್ರನಂತೆ ನಳನಳಿಸುತ್ತಾ ಬಾಲ್ಯಕ್ಕೆ ಕಾಲಿಟ್ಟನು. ಮನೆಯವರೆಲ್ಲರ ಅಕ್ಕರೆಯ ಸಕ್ಕರೆಯ ಕೂಸಾಗಿ ಬೆಳೆದನು.

ಅತಿಯಾದ ಮುದ್ದಿನಿಂದಲೋ ಏನೋ ಓದಿನ ಕಡೆ ಹೆಚ್ಚು ಒಲವು ಬೆಳೆಸಿಕೊಳ್ಳುವುದರಲ್ಲಿ ಶಂಭುಭಟ್ಟ ಸೋತುಹೋದ. ಹಾಗೂ ಹೀಗೂ ಎಸ್.ಎಸ್.ಎಲ್.ಸಿ., ವರೆಗೆ ಬಂದ ಅವನು ಘಜನಿಮಹಮ್ಮದನ ದಂಡೆಯಾತ್ರೆಯಂತೆ ಪ್ರಯತ್ನಿಸಿದರೂ ಮುಂದಿನ ಪರೀಕ್ಷೆ ಪೂರ್ತಿಮಾಡಲಾಗದೆ ವಿದ್ಯೆಗೆ ಶರಣು ಹೊಡೆದ. ಅದರಿಂದ ಮನೆಯವರ್‍ಯಾರೂ ತಲೆಕೆಡಿಸಿಕೊಳ್ಳಲೇ ಇಲ್ಲ. ಇರಲು ಮನೆಯಿದೆ. ಊಟಕ್ಕೆ ಗೇಣಿಗೆ ಕೊಟ್ಟಿರುವ ಹೊಲ, ಗದ್ದೆಯಿದೆ. ಓದಿನಲ್ಲಿ ಆಸಕ್ತಿಯಿಲ್ಲದಿದ್ದರೇನು, ವ್ಯವಸಾಯದ ಕಡೆಗೆ ಒಲವಿದೆ. ಅದನ್ನೇ ನೋಡಿಕೊಳ್ಳುತ್ತಾನೆ. ಮನೆಯ ಮಗ ಕಣ್ಮುಂದೆಯೇ ಇರುತ್ತಾನೆಂದುಕೊಂಡರು.

ಮಗನಿಗೆ ಇಪ್ಪತ್ತು ತುಂಬಿ ಇಪ್ಪತ್ತೊಂದಕ್ಕೆ ಕಾಲಿಡುತ್ತಿದ್ದಂತೆ ಅವನಿಗೊಂದು ಮದುವೆ ಮಾಡಬೇಕೆಂದು ಕನ್ಯೆಯ ಹುಡುಕಾಟ ನಡೆಸಿದರು. ಅಪ್ಪ ಸರ್ಕಾರಿ ನೌಕರಿಯಲ್ಲಿದ್ದಾರೆ, ಮಗ ಓದಿಯೂ ಇಲ್ಲ. ಗೇಣಿಗೆ ಕೊಟ್ಟಿರುವ ಹೊಲಗದ್ದೆಗಳ ಮೇಲುಸ್ತುವಾರಿಯನ್ನು ನೋಡುತ್ತಿದ್ದಾನೆ. ಒಟ್ಟುಕುಟುಂಬ ಬೇರೆ, ಹೀಗೆ ಹಲವಾರು ಕಾರಣಗಳನ್ನು ಮುಂದಿಟ್ಟುಕೊಂಡು ಹೆಣ್ಣು ಹೆತ್ತವರು ಹಿಂದುಮುಂದು ನೋಡುತ್ತಿದ್ದರು. ಇದು ಶ್ಯಾಮಭಟ್ಟರಿಗೆ ಅರ್ಥವಾಗದೆ ಇದ್ದ ಸಂಗತಿಯೇನಲ್ಲ. ಆ ಸಮಯದಲ್ಲಿ ಅವರ ಕಣ್ಮುಂದೆ ಬಂದ ಕನ್ಯೆಯೆಂದರೆ ಪತ್ನಿ ಕೌಸಲ್ಯಾಳ ತವರಿನ ಕಡೆ ಇದ್ದ ಲಕ್ಷ್ಮೀ ಎಂಬ ಹುಡುಗಿ.

ಲಕ್ಷ್ಮೀ ಪಾಪದ ಹೆಣ್ಣುಮಗಳು. ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡವಳು. ಅಪ್ಪ ಎಲ್ಲಿಗೆ ಹೋದ ಎಂದು ತಿಳಿಯದ ಅವಳನ್ನು ಅಜ್ಜಿಯೇ ಸಾಕಿ ಬೆಳೆಸಿದ್ದರು. ಅಲ್ಲಿ ಆ ಹುಡುಗಿ ಅತ್ತೆ ಮಾವಂದಿರೊಡನೆ ಹೊಂದಿಕೊಂಡು ಅವರೆಲ್ಲರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡಿದ್ದಳು. ತಕ್ಕಮಟ್ಟಿಗೆ ಓದುಬರಹವನ್ನೂ ಕಲಿತಿದ್ದಳು. ಮನೆಗೆಲಸದಲ್ಲೂ ಜಾಣೆ. ಮೊದಲಿನಿಂದಲೂ ನೋಡಿದ್ದ ಹುಡುಗಿ. ನಮ್ಮ ಮನೆಗೆ ಆ ಹುಡುಗಿ ಸರಿಹೊಂದುತ್ತಾಳೆಂದು ಆಲೋಚಿಸಿ ಹೆಂಡತಿಯೊಡನೆ ಚರ್ಚಿಸಿ ಅವಳ ಕಡೆಯವರಿಗೆ ಹೇಳಿಕಳುಹಿಸಿದರು. ಎರಡೂ ಮನೆಯವರ ಒಪ್ಪಿಗೆ ಜೊತೆಗೆ ಜಾತಕಗಳು ಕೂಡಿ ಬಂದಿದ್ದರಿಂದ ಲಕ್ಷ್ಮಿ ಶಂಭುಭಟ್ಟರ ವಿವಾಹ ನಡೆದು ಶ್ಯಾಮಭಟ್ಟರ ಸೊಸೆಯಾಗಿ ಮನೆಗೆ ಕಾಲಿರಿಸಿದಳು. ಚಿಕ್ಕಂದಿನಿಂದಲೂ ಪರರಾಶ್ರಯದಲ್ಲೇ ಬೆಳೆದ ಲಕ್ಷ್ಮಿಗೆ ಹೊಸಜಾಗದಲ್ಲಿ ಹೊಂದಾಣಿಕೆ ಕಷ್ಟವೆನಿಸಲಿಲ್ಲ. ಕ್ರಮೇಣ ಕಟ್ಟಕೊಂಡ ಗಂಡ ಕೆಟ್ಟವನೇನಲ್ಲ, ಆದರೆ ಶ್ರಮಜೀವಿಯಲ್ಲ ಎನ್ನುವ ವಿಚಾರವೂ ತಿಳಿಯಿತು.

ತಿಂಗಳುಗಳು ಉರುಳಿದಂತೆ ಬಾಳಸಂಗಾತಿಯೊಬ್ಬನೇ ಅಲ್ಲ, ಮನೆಯ ಹಿರಿಯರೂ ಕೂಡ ಹೆಚ್ಚು ಕಷ್ಟಪಡದೆ ಬದುಕು ನಡೆಸುತ್ತಿದ್ದಾರೆಂಬ ಸತ್ಯವೂ ಮನದಟ್ಟಾಯಿತು. ಏಕೆಂದರೆ ಅವಳು ಹುಟ್ಟಿ ಬೆಳೆದು ಇಲ್ಲಿಗೆ ಬರುವವರೆಗೆ ಅಜ್ಜಿಯ ಪಾಲನೆಯಲ್ಲಿದ್ದರೂ ಸೋದರಮಾವನ ಆಶ್ರಯದಲ್ಲಿದ್ದ ಲಕ್ಷ್ಮಿಗೆ ಜಮೀನುಗಳ ಗೇಣಿ, ಗುತ್ತಿಗೆ ಇವುಗಳ ಬಗ್ಗೆ ತಿಳಿಯದಿದ್ದುದೇನಿರಲಿಲ್ಲ. ಆಕೆಯ ಸೋದರಮಾವ ರಾಮಣ್ಣನವರು ಅಡಿಗೆ ಕಂಟ್ರಾಕ್ಟರರು. ಅವರಿಗೆ ಸ್ವಲ್ಪ ಜಮೀನೂ ಇತ್ತು. ಅದನ್ನು ಅವರು ಗೇಣಿಗೆ ಕೊಟ್ಟಿದ್ದರು. ಆದರೂ ಆಗಂದಾಗ್ಗೆ ಜಮೀನಿನ ನಿಗರಾನಿ ಮಾಡಲು ಹೋಗಿಬರುತ್ತಿದ್ದರು. ಅಷ್ಟರಲ್ಲೇ ತಮಗಿದ್ದ ಇಬ್ಬರು ತಂಗಿಯರ ಮದುವೆ ಮಾಡಿದ್ದರು. ತಾವು, ಮಡದಿ ರತ್ನಮ್ಮ, ಇಬ್ಬರು ಮಕ್ಕಳು, ತಮ್ಮ ಹೆತ್ತಮ್ಮನವರ ಜೊತೆಯಲ್ಲಿ ಸಂಸಾರದ ನೊಗಹೊತ್ತು ಸಾಗಿಸಿದ್ದರು. ಮನೆಯಲ್ಲಿ ಯಾರೊಬ್ಬರೂ ಕೆಲಸವಿಲ್ಲದೆ ಖಾಲಿ ಕುಳಿತದ್ದು ನೆನಪೇ ಇಲ್ಲ. ಹಬ್ಬ ಹರಿದಿನಗಳಲ್ಲಿ ವಿಶೇಷ ಸಿಹಿತಿಂಡಿಗಳ ತಯಾರಿಕೆಗೆ ಸಹಾಯಹಸ್ತ ನೀಡುತ್ತಿದ್ದರು. ಪೂಜೆಗೆ ಬೇಕಾದ ಹತ್ತಿಯ ನಾನಾ ರೀತಿಯ ಹಾರಗಳು, ಗೆಜ್ಜೆವಸ್ತ್ರ ತಯಾರಿಕೆ, ವಿವಾಹಗಳ ವೇಳೆಯಲ್ಲಿ ಬೀಗರಿಗೆ ಕೊಡುವ ಹಲವು ಅಲಂಕಾರಿಕ ಸಾಮಾನುಗಳ ತಯಾರಿಕೆ, ಹೀಗೆ ಹತ್ತಾರು ಕೈಕೆಲಸಗಳನ್ನು ಮಾಡುತ್ತಿದ್ದರು. ಇಲ್ಲಿ ನೋಡಿದರೆ ಊಹುಂ, ಯಾವ ಚಟುವಟಿಕೆಯೂ ಇರಲಿಲ್ಲ. ಹೀಗೇ ಹತ್ತಾರು ಯೋಚನೆಗಳಲ್ಲಿಯೇ ಲಕ್ಷ್ಮಿಯ ದಿನ ಕಳೆಯುತ್ತಿದ್ದವು.

ವಿವಾಹವಾಗಿ ಒಂದು ವರ್ಷದೊಳಗೇ ಲಕ್ಷ್ಮೀ ಮೊದಲನೇ ಮಗಳಿಗೆ ಜನ್ಮ ನೀಡಿದಳು. ಹಿರಿಯರಿಗೆ ಹಿಗ್ಗೋಹಿಗ್ಗು. ಚಂದನದ ಗೊಂಬೆಯಂತಿದ್ದ ಆ ಮಗುವಿಗೆ ಮುತ್ತಜ್ಜಿಯ ಹೆಸರು ಭಾಗ್ಯಮ್ಮ ಎಂದು ನಾಮಕರಣ ಮಾಡಿದರು. ಹೆಸರು ಲಕ್ಷ್ಮಿಗೆ ಹಳೆಯದೆಂದು ಇರುಸುಮುರಿಸಾದರೂ ಬಾಯಿಬಿಡಲಿಲ್ಲ. ಮತ್ತೆರಡು ವರ್ಷಕ್ಕೆ ಇನ್ನೊಂದು ಮಗು, ಅದೂ ಹೆಣ್ಣು ಮಗುವಾಯಿತು. ಅದಕ್ಕೆ ತನ್ನಾಸೆಯಂತೆ ‘ಭಾವನಾ’ ಎಂದು ಹೆಸರಿಡಲು ಆಶಿಸಿದಾಗ ಹಿರಿಯರ್‍ಯಾರೂ ಪ್ರತಿರೋಧ ತೋರದೇ ಅಸ್ತು ಎಂದರು.

ವಾಸ್ತವಿಕತೆಯ ಅರಿವಿದ್ದ ಲಕ್ಷ್ಮೀ ಇಬ್ಬರು ಮಕ್ಕಳಾದರು, ಸಾಕಿನ್ನು ಎಂಬ ಅವಳ ಮಾತನ್ನು ಮನೆಯ ಹಿರಿಯರು ಸಾರಾಸಗಟಾಗಿ ತಳ್ಳಿಹಾಕುತ್ತಾ ಲಕ್ಷ್ಮೀ, ನಮ್ಮ ಮನೆತನದಲ್ಲಿ ಸಂತಾನವೇ ಅಪರೂಪ. ಅಂಥಹುದರಲ್ಲಿ ದೇವರು ನಿನಗೆ ಕರುಣಿಸುತ್ತಿರುವಾಗ ಅದ್ಯಾಕೆ ಬೇಡವೆನ್ನುತ್ತಿ? ಎರಡು ಹೆಣ್ಣಾಗಿವೆ, ಒಂದಾದರೂ ಗಂಡಾಗಲಿ ಬಿಡು. ಆನಂತರ ನೀನು ಹೇಳಿದಂತೆ ಸಾಕುಮಾಡಿಸೋಣ ಎಂದು ಅವಳನ್ನು ತಡೆದುಬಿಟ್ಟರು.

ಮೂರನೆಯ ಸಲ ಗರ್ಭ ನಿಂತಾಗ ಪರೀಕ್ಷೆ ಮಾಡಿದ ವೈದ್ಯರು ಅವಳಿ ಮಕ್ಕಳಾಗುತ್ತವೆ ಎಂದಾಗ ಲಕ್ಷ್ಮಿ ಹೌಹಾರಿದಳು. ಗಂಡನ ಸೋಮಾರಿತನ, ಮನೆಯ ಹಿರಿಯರ ಮುಂದಾಲೋಚನೆಯಿಲ್ಲದ ಧೋರಣೆಗಳಿಂದ ನಲುಗಿಹೋದಳು. ಮಕ್ಕಳನ್ನು ಹಡೆದುಬಿಟ್ಟರಾಯಿತೇ? ಮುಂದೇನೂ ಆಲೋಚನೆಯಿಲ್ಲದೆ? ಇದಕ್ಕೇ ಇವರ ಕುಟುಂಬಕ್ಕೆ ಹೆಣ್ಣು ಕೊಡಲು ಜನ ಹಿಂದುಮುಂದು ನೋಡುತ್ತಿದ್ದುದು ಎಂದರ್ಥವಾಯಿತು. ತುಂಬಾ ಆಲೋಚಿಸಿ ಒಂದು ನಿರ್ಧಾರಕ್ಕೆ ಬಮದಳು ಲಕ್ಷ್ಮಿ. ತನ್ನನ್ನು ನೋಡಿಕೊಳ್ಳುತ್ತಿದ್ದ ವೈದ್ಯರಿಗೆ ಪರಿಸ್ಥಿತಿಯನ್ನು ವಿವರಿಸಿ ಈ ಸಾರಿ ಯಾವ ಮಕ್ಕಳಾದರೂ ಸರಿ, ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್ ಮಾಡಿಬಿಡಿ. ಮುಂದೆ ಮಕ್ಕಳಾದರೆ ಜೀವಕ್ಕೆ ಅಪಾಯವೆಂದು ನಮ್ಮವರಿಗೆ ಹೇಳಿ ಎಂದು ವಿನಂತಿಸಿಕೊಂಡಳು. ವೈದ್ಯರಿಂದ ಈ ಮಾತು ಕೇಳಿದ ಮನೆಯ ಹಿರಿಯರು ”ಹಾಗೇನು !ಅವ್ವಯ್ಯಾ, ಬೇಡಿ ಡಾಕ್ಟರಮ್ಮಾ, ದೊಡ್ಡ ಜೀವಕ್ಕೆ ಅಪಾಯವೆಂದರೆ ಸಾಕುಮಾಡಿ” ಎಂದು ಒಪ್ಪಿಕೊಂಢರು.

ದಿನತುಂಬಿ ಮತ್ತೆ ಇಬ್ಬರು ಹೆಣ್ಣು ಮಕ್ಕಳಿಗೇ ಜನ್ಮ ನೀಡಿದಳು ಲಕ್ಷ್ಮಿ. ”ಅಪುತ್ರಸ್ಯ ಗತಿರ್ನಾಸ್ಥಿ” ಎಂಬ ನಂಬಿಕೆಗೆ ಬದ್ಧರಾಗಿದ್ದ ಹಿರಿಯ ತಲೆಗಳಿಗೆ ನಿರಾಸೆಯಾದರೂ ವೈದ್ಯರ ಎಚ್ಚರಿಕೆ ನೆನಪಾಗಿ ಕುಟುಂಬ ಯೋಜನೆ ಆಪರೇಷನ್ನಿಗೆ ಮುದ್ರೆಯೊತ್ತಿದರು.
ಅಂತೂ ಲಕ್ಷ್ಮೀ ಮದುವೆಯಾಗಿ ಕೇವಲ ಆರೇಳು ವರ್ಷಗಳೊಳಗೆ ನಾಲ್ಕು ಹೆಣ್ಣುಮಕ್ಕಳ ತಾಯಿಯಾದಳು. ಅವಳಿ ಮಕ್ಕಳಿಗೆ ‘ವೀಣಾ,’ ‘ವಾಣಿ’ ಎಂದು ಹೆಸರನ್ನಿಟ್ಟು ಭಗವಂತಾ ಸದ್ಯಕ್ಕೆ ಈ ಘಟ್ಟದಿಂದ ಪಾರುಮಾಡಿದೆ ಎಂದು ನಮಿಸಿದಳು.

ವರ್ಷಗಳುರುಳಿದಂತೆ ಮನೆಯ ಹಿರಿಯರು ಒಬ್ಬರ ಹಿಂದೊಬ್ಬರು ಲೋಕದಿಂದ ಸರಿದು ಹೋದಾಗ ಶಂಭುಭಟ್ಟರಿಗೆ ನಿಜವಾದ ಸಂಸಾರವೆಂದರೇನೆಂಬ ಅರಿವು ಆಗತೊಡಗಿತು. ತಂದೆಯಿದ್ದಾಗ ಅವರಿಗೆ ಬರುತ್ತಿದ್ದ ನಿವೃತ್ತಿವೇತನ, ಹೊಲ ಗದ್ದೆಗಳಿಂದ ಬರುತ್ತಿದ್ದ ದವಸಧಾನ್ಯಗಳಿಂದ ಮನೆ ನಡೆಯುತ್ತಿತ್ತು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇದ್ದವರಿಗೆ ಮುಂದೇನೂ ತೋಚದಂತಾಯಿತು. ಆಗ ಅವರಿಗೆ ಆಗಾಗ್ಗೆ ಹೆಂಡತಿ ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದವು. ”ರೀ.. ಗೇಣಿಗೆ ಕೊಟ್ಟಿರುವ ಹೊಲಗದ್ದೆಗಳನ್ನು ಬಿಡಿಸಿಕೊಂಡು ಕೂಲಿ ಆಳುಗಳ ಸಹಾಯದಿಂದ ನೀವೇ ಸ್ವಂತ ಬೇಸಾಯ ಮಾಡಿದರೆ ಹೇಗೆ? ಕಾಲವನ್ನು ಉಪಯುಕ್ತವಾಗಿ ಕಳೆದಂತಾಗುತ್ತದೆ. ನಿಮಗೆ ಅಭ್ಯಾಸವಿಲ್ಲವೆಂದು ನನಗೆ ಗೊತ್ತು. ಮಾಡುತ್ತಾ ಮಾಡುತ್ತಾ ರೂಢಿಯಾಗುತ್ತೆ. ಆದಾಯವೂ ಹೆಚ್ಚಾಗುತ್ತೆ” ಎಂದಾಗಲೆಲ್ಲ ಅವಳ ಮಾತುಗಳು ಕೇಳಿಸಲಿಲ್ಲವೆಂಬಂತೆ ಇದ್ದೆ. ಈಗ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು.

ನಾನು ಲಕ್ಷ್ಮಿ ಹೇಳಿದಂತೆ ಜಮೀನುಗಳೆಲ್ಲವನ್ನೂ ಗೇಣಿಯಿಂದ ಬಿಡಿಸಿಕೊಂಡು ಸ್ವಂತ ಬೇಸಾಯಕ್ಕೆ ತೊಡಗಿದರೆ ಜನ ”ಓಹೋ ! ಹಾರುವಯ್ಯ ನೇಗಿಲು ಹಿಡಿಯಲು ಹೊರಟಿದ್ದಾನೆ ನೋಡ್ರೋ” ಎಂದು ಆಡಿಕೊಳ್ಳುತ್ತಿದ್ದರು. ಇದೇ ಊರಿನಲ್ಲಿರುವ ಚಿಕ್ಕಪ್ಪಂದಿರು ತಮ್ಮ ಪಾಲಿಗೆ ಬಂದಿದ್ದ ಭೂಮಿಯನ್ನೇ ನಂಬಿ ನೇಗಿಲು ಹಿಡಿದು ಮಕ್ಕಳ ಕಾಲಕ್ಕೆ ಮತ್ತಷ್ಟು ಹೊಲಗಳನ್ನು ಹೆಚ್ಚಿಸಿಕೊಂಡು ಜಮೀನುದಾರರ ಸಾಲಿಗೆ ಸೇರ್ಪಡೆಯಾಗಿ ಮೆರೆಯುತ್ತಿದ್ದಾರೆ. ಅವರೆದುರಿನಲ್ಲಿ ಎಂದೂ ಹಿಡಿಯದ ನೇಗಿಲು ಹಿಡಿದು ಗೆಲ್ಲಬಲ್ಲೆನೇ? ಇವೆಲ್ಲ ಬೇಡ, ಬೇರೆ ಏನಾದರೂ ಕೆಲಸಕ್ಕೆ ಸೇರಿದರೆ ಹೇಗೆ.. ಹೆ..ಹೆ..ನಾನು ಓದಿರುವ ಘನಂದಾರಿ ವಿದ್ಯೆಗೆ ಯಾವ ಕೆಲಸ ಸಿಕ್ಕೀತು. ಅಯ್ಯೋ ಏನೂ ತೋಚುತ್ತಲೇ ಇಲ್ಲವಲ್ಲಾ. ಈ ದ್ವಂದ್ವದಲ್ಲಿ ಸಿಕ್ಕಿ ತೊಳಲಾಡುತ್ತಲೇ ಶಂಭುಭಟ್ಟರು ತಿಂಗಳೆರಡನ್ನು ಕಳೆದೇಬಿಟ್ಟರು. ಕೊನೆಗೊಂದು ದಿನ ತಡೆಯಲಾರದೆ ತನ್ನ ಹೆಂಡತಿಯ ಮುಂದೆ ಮನಸ್ಸಿನಲ್ಲಾಗುತ್ತಿದ್ದ ತಳಮಳವನ್ನು ಬಿಚ್ಚಿಟ್ಟರು ಶಂಭುಭಟ್ಟರು.

(ಮುಂದುವರಿಯುವುದು)

ಬಿ.ಆರ್,ನಾಗರತ್ನ, ಮೈಸೂರು

19 Responses

 1. Hema says:

  ಕಾದಂಬರಿಯ ಶುಭಾರಂಭ ಚೆನ್ನಾಗಿದೆ..ಅಭಿನಂದನೆಗಳು

 2. ನಯನ ಬಜಕೂಡ್ಲು says:

  ಆರಂಭದಲ್ಲಿಯೇ ಆಪ್ತವಾಗಿ ಓದಿಸಿಕೊಂಡು ಹೋಗುತ್ತಿರುವ ಕಾದಂಬರಿ. ತುಂಬಾ ಚೆನ್ನಾಗಿದೆ.

 3. sudha says:

  ನಮಸ್ಕಾರ. ಒಳ್ಳೆಯ ಕಥೆ ಇದೆ

 4. ನಾಗರತ್ನ ಬಿ. ಅರ್. says:

  ಧನ್ಯವಾದಗಳು ನಯನ ಮತ್ತು ಹೇಮಾ ರವರಿಗೆ.ಪ್ರತಿಕ್ರಿಯೆಗಳು ಬರಹಕ್ಕೆ ಚೈತನ್ಯ ನೀಡುತ್ತವೆ ಮತ್ತೊಮ್ಮೆ ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ.

 5. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಸುಧಾ ಮೇಡಂ.

 6. ಎಚ್ ಭೀಮರಾವ್ ವಾಷ್ಠರ್ says:

  ಸೊಗಸಾದ ಸಾಹಿತ್ಯ . ಕಾದಂಬರಿಯ ಮೊದಲ ಭಾಗ ತುಂಬಾ ಚೆನ್ನಾಗಿ ಮೂಡಿಬಂದಿದೆ . ಗ್ರಾಮೀಣ ಜನಜೀವನದ ಚಿತ್ರಣ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರಿ . ಹಾರ್ದಿಕ ಅಭಿನಂದನೆಗಳು ನಾಗರತ್ನ ಮೇಡಂ ……

 7. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಸಾರ್

 8. . ಶಂಕರಿ ಶರ್ಮ says:

  ಕಥೆಯ ಮೊದಲ ಕಂತು… ಸೊಗಸಾಗಿ ಮೂಡಿಬಂದಿದೆ

 9. ನಾಗರತ್ನ ಬಿ. ಅರ್. says:

  ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ಶಂಕರಿ ಮೇಡಂ

 10. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಶಂಕರಿ ಶರ್ಮಾ ಮೇಡಂ

 11. Padmini Hegade says:

  ಶುಭಾರಂಭ!

 12. ವಿದ್ಯಾ says:

  ಅಜ್ಜಿ ಮತ್ತು ತೊಟ್ಟಿಲು,,, ನಮ್ಮ ಮನೆಯ ಹಿರಿಯರ ತೊಟ್ಟಿಲ್ಲನ್ನು ನೆನಪಿಸಿತು,,,ಕಾದಂಬರಿಯ ಭಾಗದ ಕೊರತೆಯನ್ನು ನೆರಳು ಧಾರವಾಹಿ ತುಂಬಿದೆ

 13. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಪ್ರಿಯ ಸೋದರಿ

 14. Anonymous says:

  ಬರಹ ಆಪ್ತವಾಗಿದೆ .. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ .. ಚೆಂದ .. ಗೆಳತೀ

 15. ಸುಂದರ ಪ್ರಾರಂಭ ಗೆಳತಿ, ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ

 16. Manjula says:

  ಒಂದು ಕಾಲಘಟ್ಟದ ಬದುಕಿನ ಚಿತ್ರಣವನ್ನು ಚೆನ್ನಾಗಿ ಮೂಡಿಸಿರುವಿರಿ ಅಭಿನಂದನೆಗಳು

 17. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಗೆಳತಿ ವೀಣಾ

 18. ನಾಗರತ್ನ ಬಿ. ಅರ್. says:

  ಧನ್ಯವಾದಗಳು ಮಂಜುಳಾ ಮೇಡಂ

 19. Anonymous says:

  ಒಬ್ಬ ಹೆಣ್ಣು ಉದ್ಯಮಶೀಲಳಾಗಿ, ತನ್ನ ಮನೆಯ ಒಳಿತಿಗಾಗಿ ವೈದ್ಯರಲ್ಲಿ ಮನವಿ ಇಟ್ಡ ನಾಯಕಿ ಅತ್ಯಂತ ಸನಿಹವಾಗ್ತಾಳೆ ನಮ್ಮ ಮನಕ್ಕೆ…..ತುಂಬಾ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: