ಸಮಕಾಲೀನ ತ್ಯಾಗರಾಜರು ಮತ್ತು ದಾಸಪಂಥೀಯರು

Share Button

ಜನವರಿ ತಿಂಗಳು ಸಂಕ್ರಾಂತಿ ಹಬ್ಬಕ್ಕೆ ಪ್ರಸಿದ್ಧ ಆಗಿರುವಂತೆ (ಈ ವರ್ಷ 22ರಂದು ನಡೆದ) ತ್ಯಾಗರಾಜರ ಆರಾಧನೆಗೂ  ಸುಪ್ರಸಿದ್ಧ. ತಮಿಳುನಾಡಿನ ತಿರುವೈಯಾರಿನಲ್ಲಿ ಇರುವ ಅವರ ಸಮಾಧಿಯ ಬಳಿ ಅವರು ಮುಕ್ತಿ ಪಡೆದ ಬಹುಳ ಪಂಚಮಿಯಂದು ದಿನವಿಡೀ ತ್ಯಾಗರಾಜರ ಕೃತಿಗಳನ್ನು ಬಗೆ ಬಗೆಯ ವಿದ್ವಾಂಸರು, ವಿವಿಧ ತಂಡಗಳಲ್ಲಿ ಹಾಡಿ ಕೃತಕೃತ್ಯರಾಗುತ್ತಾರೆ. ಕರ್ನಾಟಕದಲ್ಲಿ ತ್ಯಾಗರಾಜರ ಆರಾಧನೆಯನ್ನು ಪುರಂದರದಾಸರ ಆರಾಧನೆಯೊಂದಿಗೆ ಕೂಡಿಸಿ ವಿದ್ವಾಂಸರು ಸಂಗೀತ ಸೇವೆಯನ್ನು ಮಾಡಿ ಸಂತೋಷಪಡುತ್ತಾರೆ. ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹ ಎಂದು ಗೌರವಾನ್ವಿತರಾಗಿದ್ದಾರೆ. ಆದರೆ ಅವರನ್ನು ದಾಸಪಂಥದ ದಿಗ್ಗಜರು ಎಂದು ಗಮನಿಸುವುದು ಅವರ ಮತ್ತು ಅವರಂತೆ ದಾಸಪಂಥಕ್ಕೆ ತಮ್ಮದೇ ಆದ ಕಾಣಿಕೆಯನ್ನು ಕೊಟ್ಟಿರುವುದನ್ನು ಗಮನಿಸುವುದು ಅವರ ನಡೆಗೆ ತ್ಯಾಗರಾಜರಂತೆ ಸಮಕಾಲೀನ ಮಹತ್ವ ಇದೆ ಎಂಬ ಕಾರಣಕ್ಕಾಗಿಯೂ ಹೌದು ಎಂಬುದು ಈ ಲೇಖನದ ಆಶಯ.

ದಾಸರು ಅಥವಾ ಹರಿದಾಸರೆನ್ನುವವರು ಯಾವುದೇ ನಿರ್ದಿಷ್ಟ ಕುಲ, ಜಾತಿ, ವರ್ಗಕ್ಕೆ ಸೇರಿದವರಾಗಿರಲಿಲ್ಲ. ಅವರ ಮುಖ್ಯ ನಿಲುವು “ನರಸೇವೆ ಮಾಡಬಾರದು; ಯಾವುದೇ ರೀತಿಯ ಭೇದಭಾವ ಮಾಡಬಾರದು; ದೈವಭಕ್ತಿಗೆ ವಿರುದ್ಧವಾದ ಯಾವ ತಪ್ಪು ಗ್ರಹಿಕೆ ಮತ್ತು ನಡೆವಳಿಕೆಯನ್ನು ರೂಢಿಸಿಕೊಳ್ಳಬಾರದು” ಎಂಬುದಾಗಿತ್ತು. ಕರ್ನಾಟಕದಲ್ಲಿ ೧೫-೧೬ನೇ ಶತಮಾನಗಳಲ್ಲಿ ವಿಜಯನಗರ ಸಾಮ್ರಾಜ್ಯದ ಪೋಷಣೆಯಲ್ಲಿ ದಾಸಪಂಥ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಇದರ ನೇತೃತ್ವವನ್ನು ವಹಿಸಿದ ಯತಿತ್ರಯರು ಶ್ರೀಪಾದರಾಯರು, ವ್ಯಾಸತೀರ್ಥರು, ವಾದಿರಾಜರು ಆಗಿದ್ದರೆ, ಜನರ ಮಧ್ಯೆ ಓಡಾಡಿ ಜನರಲ್ಲಿ ಜಾಗೃತಿ ಮೂಡಿಸಿದ ಮಹನೀಯ ತ್ರಯರು ಶ್ರೀಪಾದರಾಯ, ಪುರಂದರದಾಸ ಮತ್ತು ಕನಕದಾಸರು. ೧೭, ೧೮ನೇ ಶತಮಾನಗಳಲ್ಲಿ ದಾಸಪಂಥವನ್ನು ಪ್ರಚುರಪಡಿಸಿದವರು ವಿಜಯದಾಸ, ಜಗನ್ನಾಥದಾಸ, ಪ್ರಸನ್ನವೆಂಕಟದಾಸ, ಮಹೀಪತಿದಾಸ, ಗೋಪಾಲದಾಸ ಮೊದಲಾದವರು.

ತ್ಯಾಗರಾಜರು (4.5.1767-6.1.1847) ತಮಿಳುನಾಡಿನ ತಿರುವೈಯಾರಿನಲ್ಲಿ ಹುಟ್ಟಿ ಬೆಳೆದವರು. ಅವರ ಹಿರಿಯರು ರಾಜ-ಮಾನ್ಯತೆ ಪಡೆದು ಬಂದು ಅಲ್ಲಿ ನೆಲೆಸಿದ ವಲಸಿಗರು. ಅವರು ಮೂಲತಃ ಆಂದ್ರಪ್ರದೇಶದ ವೈದಿಕ ಮುಳಕನಾಡು ಬ್ರಾಹ್ಮಣ ಕುಟುಂಬದವರು. ತ್ಯಾಗರಾಜರ ಮನೆಮಾತು ತೆಲುಗು. ಅವರ ಅಪ್ಪನ ತಂದೆ ಶ್ರೀ ಗಿರಿರಾಜ ಕವಿ ತೆಲುಗು ಭಾಷೆಯಲ್ಲಿ ಸಂಗೀತ ರಚನೆಗಳನ್ನು, ನಾಟಕಗಳನ್ನು ಮತ್ತು ಕವಿತೆಗಳನ್ನು ರಚಿಸಿದ ಕವಿಯೇ ಆಗಿದ್ದರು. ತ್ಯಾಗರಾಜರ ತಂದೆ ರಾಮಬ್ರಹ್ಮಂ ಆಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೆ ಏರಿದ್ದವರು. ತ್ಯಾಗರಾಜರ ತಾಯಿ ಭದ್ರಾಛಲ ರಾಮದಾಸ ಮತ್ತು ಪುರಂದರದಾಸರ ಕೃತಿಗಳನ್ನು ಹಾಡಬಲ್ಲವರು. ತಂದೆ ಘನವೈಣಿಕ ವಿದ್ವಾಂಸರು. ಈ ಪರಂಪರಾತ್ಮಕ ಹಿನ್ನೆಲೆಯಲ್ಲಿ ತ್ಯಾಗರಾಜರು ಸಂಗೀತ, ಶಾಸ್ತ್ರ, ಪುರಾಣ, ಮಹಾಕಾವ್ಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಪ್ರಹ್ಲಾದ ಭಕ್ತಿ ವಿಜಯಂ ಮತ್ತು ನೌಕಾಚರಿತಂ ಎನ್ನುವ ಗೇಯ-ನಾಟಕ-ಕಾವ್ಯಗಳನ್ನು ತೆಲುಗು ಭಾಷೆಯಲ್ಲಿ ರಚಿಸಿದರು ಮತ್ತು ಸಾವಿರಾರು ಸಂಗೀತ-ಕವಿತೆ ಎನ್ನಬಹುದಾದ ಸಣ್ಣ ಸಣ್ಣ ಗೇಯಕೃತಿಗಳನ್ನು ರಚಿಸಿದರು. ಇವುಗಳನ್ನು ಪ್ರಬಂಧ ಪ್ರಕಾರಕ್ಕೆ ಸೇರಿದವು ಎಂದು ಸಾಹಿತ್ಯ-ಇತಿಹಾಸಕಾರರು ಗುರುತಿಸುತ್ತಾರೆ. ತೆಲುಗು ಸಾಹಿತ್ಯದ ಶ್ರೀಮಂತಿಕೆಗೆ ಅದ್ಭುತವಾದ ಕಾಣಿಕೆ ಶ್ರೀ ತ್ಯಾಗರಾಜರು.

ಸಾಹಿತ್ಯದ ಪ್ರಮುಖ ಪ್ರಯೋಜನ ಸದ್ವಿಚಾರವೊಂದು ಜನಸಮೂಹವನ್ನು ಮುಟ್ಟುವಂತಾಗುವುದು. ಸಂಸ್ಕೃತ ಸುಭಾಷಿತೋಕ್ತಿಯೊಂದು ಸಾಹಿತ್ಯಾಸಕ್ತಿ ಮತ್ತು ಸಂಗೀತಕ್ಕೆ ತೆರೆದುಕೊಳ್ಳುವ ಕಿವಿ ಮತ್ತು ಮನಸ್ಸು ಇರುವುದು ಸೂಕ್ತ ಎನ್ನುತ್ತದೆ. ಇದನ್ನು ಅರಿತಿದ್ದ ತ್ಯಾಗರಾಜರು ತಮ್ಮ ಗ್ರಹಿಕೆಯನ್ನು ಸಾಹಿತ್ಯಾತ್ಮಕವಾಗಿ ವ್ಯಕ್ತಪಡಿಸಿದಂತೆ ಹಾಡಾಗಿಯೂ ಅಭಿವ್ಯಕ್ತಪಡಿಸಬಲ್ಲವರು. ತಮ್ಮ ವಿಚಾರ-ಭಾವವನ್ನು ಪ್ರಕಟಪಡಿಸುವ ರಾಗಗಳ ಜ್ಞಾನವೂ ಅವರಿಗೆ ಚೆನ್ನಾಗಿಯೇ ಇತ್ತು. ಅವರು ತಾವು ಸವಿದ ಸಾಹಿತ್ಯ-ಗಾನ-ರುಚಿಯನ್ನು ತಮ್ಮ ಸುತ್ತಲಿನ ಜನಸಾಮಾನ್ಯರಿಗೂ ತಲುಪಿಸಿದ್ದಾರೆ. ತಮ್ಮಂಥ ಶಿಷ್ಯ-ಪರಂಪರೆಯನ್ನು ಬೆಳೆಸಿ ತಲೆತಲೆಮಾರುಗಳಿಗೂ ದಾಟಿಸುತ್ತಿದ್ದಾರೆ. 

ತ್ಯಾಗರಾಜರ ತೆಲುಗು ಸರಳವಾದದ್ದು, ಸುಂದರವಾದದ್ದು. ಅದಕ್ಕೆ ಪದ-ಲಾಲಿತ್ಯವಿದೆ, ಮನಸ್ಸನ್ನು ಆರ್ದ್ರಗೊಳಿಸುವ ತನಿಸ್ಪರ್ಶವಿದೆ. ಅದು ಆಸ್ಥಾನ-ಭಾಷೆ ಅಲ್ಲದಿದ್ದರೂ ಅದಕ್ಕೆ ವಿಷಯ-ಗಾಂಭೀರ್ಯವಿದೆ, ಎದ್ದುಕಾಣುವ ಆಲಂಕಾರಿಕತೆಯೂ ಇದೆ. ಅವರ ರಚನೆಯಲ್ಲಿಯ ಉಪಮೆಗಳು, ಗಾದೆಗಳು, ನಾಣ್ಣುಡಿಗಳು ಅವರ ರಚನೆಯನ್ನು ಎಲ್ಲರೂ ತಮ್ಮದೇ ಅಭಿವ್ಯಕ್ತಿಯೆಂದು ತಮ್ಮದಾಗಿಸಿಕೊಳ್ಳುವಂತೆ ಅಡಕಗೊಂಡಿವೆ. ಅವರ ರಚನೆಗಳಲ್ಲಿಯ ವಿಡಂಬನೆ, ಹುಸಿಕೋಪ, ವ್ಯಂಗ್ಯ, ಲೋಕಾನುಭವಗಳು ಅವರ ರಚನೆಗಳನ್ನು ಹಚ್ಚಹಸಿರಾಗಿಸಿವೆ, ಆಪ್ಯಾಯಮಾನವಾಗಿಸಿವೆ. ಅದಕ್ಕಿಂತ ಹೆಚ್ಚಾಗಿ ಎಲ್ಲರೂ ಆತ್ಮಶೋಧನೆ ಮಾಡಿಕೊಳ್ಳಲು ಪ್ರೇರಕ ಆಗಿವೆ. ಅವರ ಸಂವಾದದ ಭಾಷೆ ಅವರ ಕೃತಿಗಳನ್ನು ಎಲ್ಲರಿಗೂ ಆಪ್ತವಾಗಿಸುತ್ತವೆ.

ತ್ಯಾಗರಾಜರು

ತ್ಯಾಗರಾಜರ ಪ್ರತಿಯೊಂದು ಗೇಯ-ರಚನೆಯೂ ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳನ್ನು ಹೊಂದಿವೆ. ಶಾಸ್ತ್ರದ ಭಾಷೆಯಲ್ಲಿ ಪಲ್ಲವಿಯನ್ನು ಸೂತ್ರವೆಂದೂ, ಅನುಪಲ್ಲವಿಯನ್ನು ವೃತ್ತಿಯೆಂದೂ, ಚರಣಗಳನ್ನು ಸೂತ್ರದ ಭಾವವನ್ನು ವಿಸ್ತರಿಸಿದ ಭಾಷ್ಯೆಯೆಂದೂ ಹೇಳಬಹುದು. ಪಲ್ಲವಿಯು ಸಂಕ್ಷಿಪ್ತವಾಗಿ ವಿಷಯವನ್ನು ಪ್ರಸ್ತಾಪಿಸಿದರೆ ಅನುಪಲ್ಲವಿಯು ವಿಷಯಕ್ಕೆ ಚೌಕಟ್ಟನ್ನು ಕಟ್ಟಿಕೊಡುತ್ತದೆ. ಚರಣಗಳು ಮಂಡನೆಯಾದ ವಿಷಯವನ್ನು ಸೂಕ್ತವಾಗಿ ವಿಸ್ತರಿಸಿ ಸ್ಪಷ್ಟಪಡಿಸುತ್ತವೆ. 

ಶಾಸ್ತ್ರೀಯ ಮತ್ತು ಜನಪದೀಯ ಪರಂಪರೆಯ ಹಿನ್ನೆಲೆಯಲ್ಲಿ ತ್ಯಾಗರಾಜರು ತೆಲುಗು ಸಾಹಿತ್ಯದ ಪರಿಭಾಷೆಯನ್ನು ಕರ್ನಾಟಕ ಸಂಗೀತದ ಪರಿಭಾಷೆಯನ್ನಾಗಿಸಿದರು. ಕರ್ನಾಟಕ ಸಂಗೀತಕ್ಕೆ ಭಕ್ತಿ-ಪರಿಮಳದ ಹೂಗಳನ್ನು ಅರ್ಪಿಸಿದರು ಎನ್ನುವುದು ಕನ್ನಡಕ್ಕೂ ತೆಲುಗು ಭಾಷೆಗೂ ಬಾಂಧವ್ಯವನ್ನು ಕಲ್ಪಿಸಿದ ಒಂದು ರೀತಿ. ಕರ್ನಾಟಕದ ಭಾಷೆ ಮತ್ತು ಸಾಹಿತ್ಯದೊಂದಿಗೆ ತ್ಯಾಗರಾಜರನ್ನು ಬೆಸೆದಿರುವ ಒಂದು ಪರಂಪರೆ ಕರ್ನಾಟಕದ ಕನ್ನಡಿಗರ ದಾಸಪಂಥ. ತ್ಯಾಗರಾಜರು ದಾಸಪಂಥದ ದಿಗ್ಗಜರಾದ ಪುರಂದರದಾಸರನ್ನು ತಮ್ಮ ಗುರು ಎಂದೇ ಪರಿಗಣಿಸಿದ್ದರು.

ತ್ಯಾಗರಾಜರಂತೆ (ಹರಿ)ದಾಸಪಂಥದ ಅನುಯಾಯಿಗಳಾದ ಪುರಂದರದಾಸರೇ ಮೊದಲಾದವರ ಜೀವಿತೋದ್ದೇಶವು ಜನಸಾಮಾನ್ಯರನ್ನು ಅಸಾಮಾನ್ಯರಾಗಿಸುವುದು. ಈ ದೃಷ್ಟಿಯಿಂದ ದಾಸರ ರಚನೆಗಳು ಇವತ್ತಿನ ಬಂಡಾಯ ಕಾವ್ಯಕ್ಕೆ ಸಂವಾದಿಯಾದದ್ದು ಆಗಿದ್ದರೆ ತ್ಯಾಗರಾಜರ ರಚನೆಗಳನ್ನು ಆಧ್ಯಾತ್ಮಿಕ ಬಂಡಾಯ-ಭಾವಗೀತೆ ಎಂದು ಪರಿಗಣಿಸಬಹುದು. ಮನಸ್ಸು, ದೇಹ, ಬುದ್ಧಿಗಳನ್ನು ಇನ್ನೊಬ್ಬರಿಗೆ ಅಧೀನವಾಗಿಸಿ ಕಡು ದಾಸ್ಯದಲ್ಲಿ ಮುಳುಗಿಹೋಗಿರುವುದನ್ನು ಕಂಡು ಪರಿತಪಿಸುವ ದಾಸರ ಮನಸ್ಥಿತಿಗೆ ಒಂದು ಉದಾಹರಣಾ ಗೀತೆ ಪುರಂದರದಾಸರ “ಕಾಯಲಾರೆನೋ ಕೃಷ್ಣಾ ಕಂಡವರ ಬಾಗಿಲನು ನಾಯಿಕುನ್ನಿಗಳಂತೆ ಪರರ ಮನೆ ಬಾಗಿಲನು”. ಇದು ವ್ಯಕ್ತಿಯ ದೀನ ಮತ್ತು ಹೀನಾಯಸ್ಥಿತಿಯನ್ನು ಬಾಗಿಲಲ್ಲಿ ಕಾಯ್ದುಕೊಂಡು ಬಿದ್ದಿರುವ ನಾಯಿಮರಿಗೆ ಹೋಲಿಸುತ್ತಿದೆ: 

“ಉದಯದಲಿ ಎದ್ದು ಸಂಧ್ಯಾಹ್ನ ವಿಧಿಗಳ ಬಿಟ್ಟು ಪದುಮನಾಭನ ಸೇವೆಯನೂ ಮಾಡದೆ ಮೊದಲೇ ನಿನ್ನರ್ಚಿಸದೆ ಪರರ ಸದನವ ಪೊಕ್ಕು ಒದಗಿ ಸೇವೆಯ ಮಾಡೆ ಅವರ ಮನೆ ಬಾಗಿಲನು ಕಾಯಲಾರೆನೋ ಕೃಷ್ಣಾ” ಇದು ಗೀತೆಯ ಮೊದಲನೆಯ ಚರಣ. ಬುದ್ಧಿ, ವಿವೇಕಗಳಿಂದ ಬದುಕನ್ನು ಕಟ್ಟಿಕೊಳ್ಳಬಹುದಾದ ಸಾಮರ್ಥ್ಯವನ್ನು ದೈವಕೃಪೆಯಿಂದ ಪಡೆದಿರುವ ವ್ಯಕ್ತಿ ಅದನ್ನು ಬಳಸಿಕೊಳ್ಳುವುದನ್ನು ಬಿಟ್ಟು ಇನ್ನೊಬ್ಬನ ಮನೆಯಲ್ಲಿ ಗೇಯುವುದಕ್ಕೆ ಹೋಗುವ ದುಸ್ಥಿತಿಯ ಚಿತ್ರಣ ಇದು. 

“ಕಲ್ಲುಕರಗಿಸಬಹುದು ಹರಿಗಡಲೆಯೊಳು ಅದರ ತೈಲವನೆ ತೆಗೆದಾದರುಣಲು ಬಹುದು ಬಲ್ಲಿದರ ಮನಸು ಮೆಚ್ಚಿಸಲಾರೆ ಹರಿಯೆ ಹಲ್ಲು ಕಿರಿ ಕಿರಿದು ಹಂಬಲಿಸಿ ಬಾಯಿಬಿಡುತಾ ಅವರ ಮನೆ ಬಾಗಿಲನು ಕಾಯಲಾರೆನೋ ಕೃಷ್ಣಾ” – ಎಂದು ಮಾಡಲು ಹೊರಟ ಸೇವೆಯ ಕಾಠಿನ್ಯವನ್ನು ವರ್ಣಿಸುತ್ತಾ ಈ ಎರಡನೆಯ ಚರಣ “ಕಲ್ಲನ್ನಾದರೂ ಕರಗಿಸಬಹುದು, ಅದನ್ನು ಅರೆದು ಎಣ್ಣೆಯನ್ನಾದರೂ ತೆಗೆಯಬಹುದು, ಆದರೆ ಯಜಮಾನನ ಮನಸ್ಸನ್ನು ಮಾತ್ರ ತೃಪ್ತಿಪಡಿಸಲು ಆಗುವುದಿಲ್ಲ” – ಎಂದು ಯಜಮಾನನ ಮದೋನ್ಮತ್ತತೆಯನ್ನು ಎತ್ತಿ ತೋರಿಸುತ್ತಿದೆ.

ಇದಕ್ಕೆ ಸಂವಾದಿಯಾದ ತ್ಯಾಗರಾಜರ ಒಂದು ರಚನೆ – “ನಿಧಿ ಚಾಲಾ ಸುಖಮಾ ರಾಮುನಿ ಸ|ನ್ನಿಧಿ ಸೇವ ಸುಖಮಾ ನಿಜಮುಗಾ ಬಲ್ಕು ಮನಸಾ||” ಇದು ಸಂಪತ್ತು ನಿಜವಾಗಿ ಸುಖವನ್ನು ಕೊಡುತ್ತದೆಯೋ ಅಥವಾ ಪುರುಷೋತ್ತಮನಾದ ಶ್ರೀರಾಮನ ಸನ್ನಿಧಿಯಲ್ಲಿ ಇರುವುದು ನಿಜಸುಖವನ್ನು ಕೊಡುತ್ತದೆಯೋ ಎಂದು ಕೇಳುವುದರೊಂದಿಗೆ ನೇರವಾಗಿ ಒಬ್ಬ ಯಾಕೆ ಅತಿಯಾದ ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾನೆ ಎಂದರೆ ಅವನಿಗೆ ಅಷ್ಟು ಹಣದ ಗೀಳು ಎಂದು ಹೇಳಿಬಿಡುತ್ತದೆ. ಬದುಕಿನಲ್ಲಿ ಹಣಕ್ಕೆ ಮೊದಲ ಪ್ರಾಮುಖ್ಯತೆಯೋ ಮನಸ್ಸು ಬುದ್ಧಿಗಳನ್ನು ಉದಾತ್ತಗೊಳಿಸುವ ದೈವಭಕ್ತಿಗೆ ಮೊದಲ ಪ್ರಾಮುಖ್ಯತೆಯೋ ಯೋಚಿಸು ಎಂದು ವ್ಯಕ್ತಿಯನ್ನು ಜಾಗೃತಗೊಳಿಸಲು ಬಯಸುತ್ತದೆ. 

“ದಧಿ ನವನೀತ ಕ್ಷೀರಮು ರುಚೋ ದಾಶರಥಿ ಜ್ಞಾನ ಭಜನಾ ಸುಧಾರಸ ರುಚೋ” ಎಂದು ಕೇಳಿಕೊಳ್ಳಲು ಪ್ರೇರೇಪಿಸುವ ಇದರ ಮೊದಲ ಚರಣ ಹಾಲು ಬೆಣ್ಣೆ ತುಪ್ಪ ಮೊಸರು ಇತ್ಯಾದಿ ಷಡ್ರಸಗಳು ಇಂದ್ರಿಯಗಳನ್ನೆಲ್ಲಾ ತಣಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳುತ್ತದೆ. ಆದರೆ ಆ ರುಚಿಯ ಬೆನ್ನು ಹತ್ತಿದರೆ ಸ್ವಾಭಿಮಾನವನ್ನು ಎತ್ತಿಹಿಡಿಯುವ, ವ್ಯಕ್ತಿತ್ವಕ್ಕೊಂದು ಘನತೆ ಕೊಡುವ ದೈವಸ್ಮರಣೆ ಉಂಟುಮಾಡುವ ಅಮೃತದ ರುಚಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತದೆ. ಸಂಪತ್ತಿನಿಂದ ದೇಹದ ಬೇಡಿಕೆಗಳು ಪೂರೈಕೆಯಾಗಿ ತಾನು ಸುಖವಾಗಿದ್ದೇನೆ ಎನ್ನುವ ಭಾವವನ್ನು ಸಂಪತ್ತು ಮೂಡಿಸುತ್ತದೆ. ಆದರೆ ಅದು ಸಂಪತ್ತಿಗಾಗಿ ಏನನ್ನು ಬೇಕಾದರೂ ಒಪ್ಪಿಕೊಳ್ಳುವ ಅತಿಯಾದ ಗುಲಾಮಗಿರಿಗೂ ತಳ್ಳುತ್ತದೆ. ಇಂಥ ಮಮತೆಯ ಬಂಧನಕ್ಕೆ ಸ್ವ-ಇಚ್ಛೆಯಿಂದ ಕಟ್ಟುಹಾಕಿಕೊಳ್ಳುವುದರ ಬದಲಿಗೆ ಸರ್ವ ಸ್ವಾತಂತ್ರ್ಯವನ್ನು ಕೊಡುವ ದೈವಸ್ತುತಿಯನ್ನು ಮಾಡುವುದು ಒಳ್ಳೆಯದಲ್ಲವೇ ಎಂದು ವಿವೇಚಿಸಲು ಕೇಳಿಕೊಳ್ಳುತ್ತದೆ ಗೀತೆ.

ಈ ಸಂಗೀತ-ಕವಿತೆಗೆ ಪೂರಕವಾದದ್ದು ಪುರಂದರ ದಾಸರ ಕೃತಿ “ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ| ಸುಜ್ಞಾನಿಗಳ ಕೂಡೆ ಜಗಳವೆ ಲೇಸು|| ಉಂಬುಡುವುದಕ್ಕಿರುವ ಅರಸನೋಲಗಕಿಂತ| ತುಂಬಿದೂರೊಳಗೆ ತಿರಿದುಂಬುವುದೆ ಲೇಸು| ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ| ನಂಬಿ ಹರಿದಾಸರೊಳು ಪೊಂದಿ ಹಾಡುವುದೆ ಲೇಸು|| ಒಡನೆ ಹಂಗಿಸುವವನ ಹಾಲೋಗರಕಿಂತ| ಕುಡಿನೀರು ಕುಡಿದುಕೊಂಡಿರುವುದೆ ಲೇಸು| ಬಿಡದೆ ಬಡಿದಾಡುವವರ ನೆರೆಯಲಿಹುದಕ್ಕಿಂತ| ಅಡವಿಯೊಳಜ್ಞಾತವಾಸವೇ ಲೇಸು|| ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ| ಹಸನಾದ ಹಾಳುಗುಡಿಯೆ ಲೇಸು| ಬಿಸಜಾಕ್ಷ ಪುರಂದರವಿಠ್ಠಲನ ನೆನೆನೆನೆದು| ವಸುಧೆಯೊಳು ಚಿರಕಾಲವಿರುವುದೆ ಲೇಸು||”

ಇಂಥ ರಚನೆಗಳು ದೈವಭಕ್ತಿಪರವಾದ ಭಕ್ತಿಪಂಥಗಳು ತಲೆಯೆತ್ತಿದ್ದಾಗ ರೂಪುಗೊಂಡವುಗಳಾದರೂ ಇವು ಒಳಗೊಳ್ಳುವ ಚಿಂತನೆಯ ಸಾರ ವ್ಯಕ್ತಿಯ ವಿಶಿಷ್ಟತೆಯನ್ನು ಎತ್ತಿಹಿಡಿಯುವ ಪ್ರಜಾಪ್ರಭುತ್ವದ ಆಶಯವೇ ಆಗಿದ್ದು ಸಾರ್ವತ್ರಿಕವಾದದ್ದು; ಮಾನವೀಯವೇ ಆಗಿದ್ದು ಸಾರ್ವಕಾಲಿಕವಾದದ್ದು. ಇವು ಮನುಷ್ಯನ ಘನತೆಯನ್ನು ಎತ್ತಿಹಿಡಿಯಲು ಬಯಸುತ್ತಿವೆ. ಗುಲಾಮಗಿರಿಯನ್ನು ಖಂಡಿಸುತ್ತಿವೆ. ದಾಸ-ದಾಸ್ಯ ಮನೋಭಾವವನ್ನು ವಿರೋಧಿಸುತ್ತಿವೆ. ನಮ್ಮ ಆಸೆ ಆಕಾಂಕ್ಷೆಗಳನ್ನು ಸ್ವಾವಲಂಬಿಯಾಗಿ ಪೂರೈಸಿಕೊಳ್ಳಬೇಕು ಎನ್ನುತ್ತಿವೆ.  

ತ್ಯಾಗರಾಜರನ್ನು ದಾಸಪಂಥೀಯರೊಂದಿಗೆ ಒಂದುಗೂಡಿಸಿದುದರಲ್ಲಿ ಕಾವೇರಿ ನದಿಯೂ ಒಂದು. ಕರ್ನಾಟಕದಲ್ಲಿ ಭಕ್ತಿಪಂಥವನ್ನು ಪ್ರಚುರಪಡಿಸಿದವರಲ್ಲಿ ಶ್ರೀಪಾದರಾಯರು ಅತ್ಯಂತ ಪ್ರಮುಖರು ಕಾವೇರಿಯನ್ನು ಕಂಡಾಗ ಶ್ರೀಪಾದರಾಯರಿಗೆ ಆದ ದರ್ಶನ: ||ಕಂಗಳಿದ್ಯಾತಕೋ ಕಾವೇರಿರಂಗನ ನೋಡದಾ|| ಜಗಂಗಳೊಳಗೆ ಮಂಗಳಮೂರುತಿ ರಂಗನ ಶ್ರೀಪಾದಂಗಳ ನೋಡದ|| ಎಂದಿಗಾದರೊಮ್ಮೆ ಜನರು| ಬಂದು ಭೂಮಿಯಲ್ಲಿ ನಿಂದು| ಚಂದ್ರ ಪುಷ್ಕರಣಿ ಸ್ನಾನವ ಮಾಡಿ| ಆನಂದದಿಂದಲಿ ರಂಗನ ನೋಡದ|| ಹರಿ ಪಾದೋದಕ ಸಮ ಕಾವೇರಿ| ವಿರಜಾನದಿಯ ಸ್ನಾನವ ಮಾಡಿ| ಪರಮ ವೈಕುಂಠ ರಂಗಮಂದಿರ| ಪರವಾಸುದೇವನ ನೋಡದ|| ಶ್ರೀಪಾದರಾಯರು ಈ ಗೀತೆಯಲ್ಲಿ ಹರಿಯ ಪಾದದಿಂದ ಉದ್ಭವಳಾದ ಗಂಗೆಯೇ ಆಗಿಬಿಟ್ಟಿರುವ ಕಾವೇರಿಯನ್ನು ಎಲ್ಲರಿಗೂ ಆನಂದವನ್ನು ಉಂಟುಮಾಡುವ ರಂಗನಾಥನೊಂದಿಗೆ ಸಮೀಕರಿಸಿದ್ದಾರೆ . 

ಇದೇ ಕಾವೇರಿಯನ್ನು ಕಂಡ ಜಗನ್ನಾಥದಾಸರಿಗೆ ಅನಿಸಿದುದು:  “ಕಾವೇರಿ ಕಲುಷಾಪಹಾರಿ ಪಾವನ| ಶರೀರ ಶುಭತೋಷಕಾರಿ|| ||ಶ್ರೀ ವಾಸುದೇವ ರಂಗೇಶನಾಲಯಕೆ ನೀ|ನಾವರಣಳಾಗಿಪ್ಪೆ ವಿರಜೆಯಂತೇ| ದೇವ ಋಷಿ ಗಂಧರ್ವ ಪಿತೃಪ ನರವರರಿಂದ| ಸೇವನೀಯಳಾಗಿ ಸರ್ವಾರ್ಥ ಪೂರೈಪೆ|| ಜಲಚರಾನ್ವೇಷಣ ಲುಬ್ಧಸಾಲಿಗ್ರಾಮ| ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ| ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ| ಸಲಿಲ ಮಂದಿರೆ ನಿನ್ನ ಕರುಣಕೇನೆಂಬೆ|| ರವಿ ತುಲಾ ರಾಶಿಗೈದಿದ ಸಮಯದೊಳಗೊಂದು| ದಿವಸ ಮಜ್ಜನ ಗೈವ ಮಾನವರಿಗೆ| ಪವನಾಂತರಾತ್ಮಕನ ಪಾದಕಮಲವ ತೋರಿ| ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ||” ಜಗನ್ನಾಥದಾಸರಿಗೆ ಕಾವೇರಿ ಸಕಲ ಪಾಪರಾಶಿಯನ್ನು ನಿವಾರಿಸಿ ಭಗವಂತನ ಹೃದಯವಾಸಿಯಾಗುವ ಸೌಭಾಗ್ಯವನ್ನು ಕರುಣಿಸುವ ಅಪಾರ ಕರುಣಮಯಿಯಾಗಿ ಕಾಣುತ್ತಾಳೆ.

ಪ್ರಸನ್ನವೆಂಕಟದಾಸರು ಕಾವೇರಿಯನ್ನು ಭಾವಿಸಿದುದು ಹೀಗೆ: “ಕಾವೇರಿ ಜಲ ಸೋಕಿದಾ ವಾತ ಸಂಗದಿ| ಆವ ದೇಶವು ಧನ್ಯವೋ| ಪಾವನಾತ್ಮಳ ಪ್ರಥಮ ಜಾವದಲಿ ಮಜ್ಜನವ| ಗೈವ ಸುಜನರೇ ಧನ್ಯರೋ| ಆದಿ ಮಧ್ಯಾಂತರಂಗರ ಸೇವೆಯನು ಮಾಡಿ| ಸಾಧಿಸಿದೆ ಮಾಂಗಲ್ಯವ|| ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ|ಮಾದರದಿ ಸೇವಿಸುವರು| ಚೋಳಮಂಡಲ ಭಾಗ್ಯ ಪೇಳಸಾಧ್ಯವೆ ನಿನ್ನ|‌ ಲಾಲನೆಯ ಪಡೆಯುತಿರಲು|| ಕೇಳುವೆನು ನಿನ್ನಯ ಕೃಪಾಲವದಿ ತನುಮನವ| ಕೀಳು ವಿಷಯಕೆ ಬಿಡದಿರು| ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು ಮಾನ್ಯಳಾಗಿರುವೆ ಮಾತೆ| ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ|ಸನ್ನಮುಖಿ ನಿಶ್ಚಯವಿದು||” ಪ್ರಸನ್ನದಾಸರಿಗೆ ಕಾವೇರಿ ಜನರಿಗೆ ಇಹದಲ್ಲಿ ಸಕಲ ಸುಖ ಸಂಪತ್ತುಗಳನ್ನು ಕೊಡುವವಳೂ ಹೌದು, ಆ ಸುಖ ಸಂಪತ್ತಿನಲ್ಲಿ ಮತಿಹೀನನಾಗಿ ತನ್ನತನವನ್ನು ಕಳೆದುಕೊಳ್ಳದಂತೆ ಜನರನ್ನು ಕಾಪಿಡುವವಳೂ ಹೌದು ಎಂಬ ಧನ್ಯತೆ. 

ಈ ಎಲ್ಲ ಭಾವಗಳನ್ನು ತ್ಯಾಗರಾಜರ “ಸಾರಿ ವೆಡಲಿನ” ಎನ್ನುವ ಕೃತಿ ಮಲ್ಲಿಗೆಮಾಲೆಯಂತೆ ಹೆಣೆಯುತ್ತದೆ: “ಸಾರಿ ವೆಡಲಿನ ಈ ಕಾವೇರಿನಿ ಜೂಡರೇ|| ವಾರು ವೀರನುಚು ಜೂಡಕ ತಾನ|ವ್ವರಿಗಾಭೀಷ್ಟಮುಲ ನೊಸಂಗುಚು|| ದೂರಮುನನೊಕ ತಾವುನ ಗರ್ಜನ ಭೀ|ಕರಮೊಕ ತಾವುನ ನಿಂಡು ಕರುಣತೋ| ನಿರತಮುಗನೊಕ ತಾವುನ ನಡುಚುಚು| ವರ ಕಾವೇರಿ ಕನ್ಯಕಾಮಣಿ|| ಸಾರಿ ವೆಡಲಿನ ಈ ಕಾವೇರಿನಿ ಜೂಡರೇ|| ವೇಡುಕಗಾ ಕೋಕಿಲಮು ಮ್ರೊಯಗನು| ವೇಡುಚು ರಂಗೇಶುನಿ ಜೂಚಿ ಮರಿ ಈರೇಡು ಜಗಮುಲಕು ಜೀವನಮೈನ| ಮೂಡು ರೆಂಡು ನದಿ ನಾಥುನಿ ಜೂಡ|| ಸಾರಿ ವೆಡಲಿನ ಈ ಕಾವೇರಿನಿ ಜೂಡರೇ|| ರಾಜರಾಜೇಶ್ವರಿಯನಿ ಪೊಗಡುಚು| ಜಾಜಿ ಸುಮಮುಲ ಧರಾಮರ ಗಾನಮುಲು| ಪೂಜಲಿರುಗಡಲ ಸೇಯಗ ತ್ಯಾಗರಾಜ ಸನ್ನುತುರಾಲೈ ಮುದ್ದುಗ|| ಸಾರಿ ವೆಡಲಿನ ಈ ಕಾವೇರಿನಿ ಜೂಡರೇ|| ಇದೊಂದು ಪ್ರಕೃತಿಕೇಂದ್ರಿತ ಸೌಂದರ್ಯಾನುಭೂತಿಯನ್ನು ಉಂಟುಮಾಡುವ ಸುಂದರ ಭಾವಗೀತೆಯೂ ಹೌದು. 

ಕಾವೇರಿ ಕರ್ನಾಟಕದ ತಲಕಾವೇರಿಯಲ್ಲಿ ಉಗಮವಾಗಿ ಮಂದಗಮನೆಯಾಗಿ ಸಾಗುತ್ತಿದೆ. ಸಣ್ಣ ಪುಟ್ಟ ಹೊಳೆಗಳನ್ನೆಲ್ಲಾ ಜೊತೆಗೂಡಿಕೊಂಡು ಮೈತುಂಬಿ ದಾರಿಯ ಇಕ್ಕೆಲಗಳನ್ನೂ ಹಚ್ಚ ಹಸಿರಾಗಿಸುತ್ತಾ ಕಲಕಲ ಎಂದು ಸಂತೋಷದಿಂದ ಮುಂದುವರೆಯುತ್ತಿದೆ. ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಎರಡಾಗಿ ಶ್ರೀರಂಗನಿಗೆ ಪ್ರದಕ್ಷಿಣೆ ಮಾಡಿ ಹರಿದಿದೆ, ಪಂಚನದ ಕ್ಷೇತ್ರದಲ್ಲಿ ಶ್ರೀರಂಗನ ದರ್ಶನ ಪಡೆದು ಪಾವನೆಯಾಗಿದೆ. ಅದರ ಸಂತೋಷ ಸುತ್ತಲಿನ ಪರಿಸರದಲ್ಲಿ ಅರಳುತ್ತಿದೆ. ಇದನ್ನು ಭಾವಿಸಿ “ಆಕರ್ಷಕ ನಡಿಗೆಯ ಕಾವೇರಿಯನ್ನು ನೋಡಿರೇ” ಎಂದು ಆರಂಭವಾಗುವ ತ್ಯಾಗರಾಜರ ಈ ಸಂಗೀತ-ಕವಿತೆ –  “ಉದಾತ್ತ ಭಾವದ ಹರಿವಿನ ಕಾವೇರಿಯನ್ನು ನೋಡಿರೇ|| ಒಂದೆಡೆ ದೂರದಲ್ಲಿ ಭಯಂಕರವಾಗಿ ಗರ್ಜಿಸುವ, ಇನ್ನೊಂದೆಡೆ ಕರುಣಾಮೂರ್ತಿಯಾಗುವ, ಒಂದೆಡೆ ಮೆಲ್ಲನೆ ಚಂದಾಗಿ ನಡೆಯುವ, ಇನ್ನೊಂದೆಡೆ ವೇಗವಾಗಿ ಧಾವಿಸುವ|| ಶೋಭಾಯಮಾನ ಕಾವೇರಿಯನ್ನು ನೋಡಿರೇ||೧|| ಕೋಗಿಲೆಗಳು ಇಂಪಾಗಿ ಉಲಿಯುವುದನ್ನು ಕೇಳುತ್ತಾ, ಮುಂದಕ್ಕೆ ಸಾಗಿ ರಂಗೇಶನನ್ನು ಪೂಜಿಸಿ, ಪಂಚನದೀಶ್ವರನ ಬಳಿಗೆ ಬಂದು ೧೪ ಲೋಕದಲ್ಲಿರುವವರಿಗೆಲ್ಲ ಅವರು ಇವರು ಎಂದು ಭೇದವೆಣಿಸದೆ ಜೀವದಾಯಿಯಾಗುವ ಮತ್ತು ಎಲ್ಲರ ಅಭೀಷ್ಟಗಳನ್ನು ಈಡೇರಿಸುವ|| ಕರುಣಾಮಯಿ ಕಾವೇರಿಯನ್ನು ನೋಡಿರೇ|| ಎರಡೂ ದಡದಲ್ಲಿರುವ ಭೂಸುರರಿಂದ ರಾಜರಾಜೇಶ್ವರಿ ಎಂದು ಜಾಜಿ ಹೂಗಳಿಂದ ಆರಾಧಿಸಲ್ಪಡುವ|| ಕನ್ಯಕಾಮಣಿ(=ಸಾಗರಕನ್ನಿಕೆ=ಲಕ್ಷ್ಮಿ) ಕಾವೇರಿಯನ್ನು ನೋಡಿರೇ||”  ಎಂದು ರಸಿಕ-ಆರಾಧಕರನ್ನು ಆಹ್ವಾನಿಸುತ್ತಿದೆ. 

ಭಾರತದ ನದಿಗಳು ಭೌತಿಕಸುಖ-ಸೌಖ್ಯವನ್ನುಂಟುಮಾಡುತ್ತವೆ ಎಂಬ ಕಾರಣದಿಂದಾಗಿ ಮಾತ್ರವಲ್ಲದೆ ಭೌತಿಕ ಜೀವನಕ್ಕೆ ಕೊಡಬಹುದಾದ ಆಧ್ಯಾತ್ಮಿಕ ಆಯಾಮವನ್ನು ಅರ್ಥಮಾಡಿಸುತ್ತವೆ ಎಂಬ ಕಾರಣದಿಂದಾಗಿಯೂ ಅವು ಪವಿತ್ರ ಎಂದು ಪರಿಗಣಿತ. ನದಿಗಳ ದಂಡೆಯಲ್ಲಿ ವಾಸಿಸುತ್ತಿದ್ದ ಕವಿ-ವಾಗ್ಗೇಯಕಾರರು ನದಿಗಳ ಬಗೆಗಿನ ಭಕ್ತಿಭಾವದಲ್ಲಿ ಮಿಂದಿರುವುದು ಇದಕ್ಕೆ ಒಂದು ಸಾಕ್ಷಿ. ಅವರಿಗೆ ನದಿಯ ಮಧುರ ಭಾವವೂ ಪರಿಚಿತ, ಅದರ ಭಯಾನಕ ಮುಖವೂ ಪರಿಚಿತ. ಅವರು ಆ ಅರಿವನ್ನು ಬದುಕನ್ನು ಸಹ್ಯ ಆಗುವಂತೆ ವ್ಯಕ್ತಪಡಿಸುವ ರೀತಿ ಮಾತ್ರ ವಿಶಿಷ್ಟ, ಮತ್ತು ಮನನೀಯ. ಅವರು ಸರಳ ಭಾಷೆಯಲ್ಲಿಯೇ ಘನಗಂಭೀರ ಚಿಂತನೆಯನ್ನು ಜನಸಾಮಾನ್ಯರಿಗೂ ತಲುಪಿಸುವುದೊಂದು ಅದ್ಭುತ. 

ಕಾವ್ಯದ ಭಾವಗಳನ್ನು ಪ್ರಕೃತಿ ಮತ್ತು ಮಾನವಿಕ ಭಾವಗಳೊಂದಿಗೆ ಹೊಂದಿಸುವ ಒಂದು ಚಿಂತನ ಪ್ರಕಾರ ಕಾವ್ಯಮೀಮಾಂಸೆಯಲ್ಲಿದೆ. ಅದು ಕಾವ್ಯಭಾವ ಅಥವಾ ರಸಗಳನ್ನು “ಕುರಿಂಜಿ, ಪಾಲೈ, ಮುಲ್ಲೈ, ಮರುತಂ, ನೈತಲ್”‌ ಎಂದು ಐದಾಗಿ ವಿಭಾಗಿಸುತ್ತದೆ.  ಕುರಿಂಜಿ ಸೂಚಿಸುವ ಪ್ರಾಕೃತಿಕ ಸಂಗತಿ ಪರ್ವತ, ಮಾನವಿಕ ಸಂಗತಿ ಐಕ್ಯತೆ, ಮಿಲನ; ಪಾಲೈ ಸೂಚಿಸುವ ಪ್ರಾಕೃತಿಕ ಸಂಗತಿ ಶುಷ್ಕತೆ, ಮಾನವಿಕ ಸಂಗತಿ ವಿರಹ, ಬೇರ್ಪಡುವಿಕೆ; ಮುಲ್ಲೈ ಸೂಚಿಸುವ ಪ್ರಾಕೃತಿಕ ಸಂಗತಿ ಮೂಲೆ, ಮಾನವಿಕ ಸಂಗತಿ ಕಾಯುವಿಕೆ, ನಿರೀಕ್ಷೆ; ಮರುತಂ ಸೂಚಿಸುವ ಪ್ರಾಕೃತಿಕ ಸಂಗತಿ ನದಿ, ಮಾನವಿಕ ಸಂಗತಿ ಹುಸಿ ಕೋಪ; ನೈತಲ್‌ ಸೂಚಿಸುವ ಪ್ರಾಕೃತಿಕ ಸಂಗತಿ ಸಮುದ್ರ ತೀರ, ಮಾನವಿಕ ಸಂಗತಿ ಶೋಕ, ಪರಿತಾಪ. ಕಾವೇರಿಯನ್ನು ಕುರಿತ ಮೇಲಿನ ರಚನೆಗಳು ಈ ಐದೂ ಭಾವಗಳನ್ನು ನದಿಯ ಹರಿವಿನೊಂದಿಗೆ ಸಮ್ಮಿಳಿತವಾಗಿಸಿರುವುದು ಈ ರಚನೆಗಳ ಕಾವ್ಯವಿಶೇಷ.

ಒಂದು ಕೃತಿ ಸಾಹಿತ್ಯಕವಾಗಿ ಮಹತ್ವವುಳ್ಳದ್ದಾಗಿರಬೇಕಾದರೆ ಅದು ವಿಷಯವೊಂದನ್ನು ಪ್ರಸ್ತಾಪಿಸುವುದರಿಂದ ಆರಂಭವಾಗಿ ಅದರ ಎಲ್ಲಾ ತಿರುವುಗಳೊಂದಿಗೆ ಪಡೆಯುವ ಮುಕ್ತಾಯವನ್ನು ಹೊಂದಿರಬೇಕಾಗಿರುತ್ತದೆ ಎನ್ನುತ್ತಾರೆ ಕನ್ನಡದ ಮಹತ್ವದ ಕವಿ ಗೋಪಾಲ ಕೃಷ್ಣ ಅಡಿಗರು. ತ್ಯಾಗರಾಜರ ಕೃತಿ ರಾಗವೊಂದನ್ನು ಮಂದರದ ಷಡ್ಜದಿಂದ ಅತಿ ತಾರದ ಷಡ್ಜದ ವರೆಗೆ ವಿಸ್ತರಿಸುವಂತೆ ವಿಷಯ-ಭಾವವೊಂದನ್ನು ಕೃತಿಯ ಸಾಹಿತ್ಯದಲ್ಲಿಯೂ ವಿಸ್ತರಿಸುತ್ತದೆ. ಇದಕ್ಕೆ ಒಂದು ಉದಾಹರಣೆ “ಭಕ್ತಿ ಭಿಕ್ಷಮೀಯವೇ” ಕೃತಿ. ಇದರಲ್ಲಿ ಎಂಥ ಭಕ್ತಿ-ಭಿಕ್ಷೆ ಬೇಕು ಎನ್ನುವುದನ್ನು ಅತ್ಯಂತ ಪರಿಣಾಮಕಾರಿಯಾದ ಉಪಮೆಯೊಂದಿಗೆ ತ್ಯಾಗರಾಜರು ವಿವರಿಸುತ್ತಾರೆ: 

“ಓ ರಾಮಾ, ಭಕ್ತಿ ಭಿಕ್ಷೆಯನ್ನು ನೀಡು| ಅತ್ಯಂತ ಸಾತ್ವಿಕವಾದ ಭಕ್ತಿ ಭಿಕ್ಷೆಯನ್ನು ನೀಡು|| ತ್ರಿಮೂರ್ತಿಗಳ ಶಕ್ತಿಗಳಿಗಿಂತ ಮಿಗಿಲಾದ ಭಕ್ತಿಭಿಕ್ಷೆಯನ್ನು ನೀಡು|| ಎಲ್ಲದರಿಂದ ಮುಕ್ತಿ ದೊರಕಿಸಿಕೊಡುವ ಭಕ್ತಿಭಿಕ್ಷೆಯನ್ನು ನೀಡು||” ಎನ್ನುತ್ತಾ ತ್ಯಾಗರಾಜರು ಪಲ್ಲವಿ, ಅನುಪಲ್ಲವಿ ಮತ್ತು ಮೊದಲ ಚರಣಗಳಲ್ಲಿ ಭಕ್ತಿಭಿಕ್ಷೆಯ ವಿವಿಧ ಮಜಲುಗಳನ್ನು ವಿಸ್ತರಿಸುತ್ತಾರೆ. ಎರಡನೆಯ ಮತ್ತು ಕೊನೆಯ ಚರಣಗಳಲ್ಲಿ “ಪ್ರಾಣವೇ ಇಲ್ಲದವನಿಗೆ ಬಂಗಾರದ ಪೇಟ, ವಜ್ರಾಭರಣಗಳ ತೊಡಿಗೆಗಳನ್ನು ಇಟ್ಟು ಅಲಂಕರಿಸಿದರೇನು? ಎಲ್ಲಾ ನಿಷ್ಫಲ. ಹಾಗೆಯೇ ಮುಕ್ತಿಯನ್ನು ದೊರಕಿಸಿಕೊಡುವ ನಿಜ ಭಕ್ತಿ ಇಲ್ಲದಿದ್ದರೆ ಶಾಸ್ತ್ರಾಗಮ ಪುರಾಣಗಳನ್ನು ಓದಿದರೂ, ಜಪ ತಪ ಮಾಡಿದರೂ ಅವೆಲ್ಲ ನಿಷ್ಫಲವೇ ಎಂದು ಸೂಕ್ತ ಉಪಮೆಯೊಂದಿಗೆ ವಾದಿಸುತ್ತಾರೆ. ವ್ಯಕ್ತಿತ್ವದ ಆಭರಣವೇ ನಿಜ-ಭಕ್ತಿ ಎನ್ನುವ ಚಿಂತನೆಯನ್ನು ಸಶಕ್ತವಾಗಿ ಮಂಡಿಸುತ್ತಾರೆ. 

ಇಂಥಹುದೇ ಇನ್ನೊಂದು ಕೃತಿ “ನೀ ಚಿತ್ತಮು ನಿಶ್ಚಲಮು ನಿರ್ಮಲಮನಿ ನಿನ್ನೇ ನಮ್ಮಿನಾನು| ನಾ ಚಿತ್ತಮು ವಂಚನಚಂಚಲಮೈನ ನನುವಿಡನಾಡಕುಮಿ, ಶ್ರೀರಾಮ|| ಗುರುವು ಚಿಲ್ಲಗಿಂಜ ಗುರುವೇ ಭ್ರಮರಮು| ಗುರುಡೇ ಭಾಸ್ಕರುಡು ಗುರುಡೇ ಭದ್ರುಡು| ಗುರುಡೇ ಯುತ್ತಮಗತಿ ಗುರುವು ನೀವನುಕೊಂಟಿ| ಧರನು ದಾಸುನಿ ಬ್ರೋವ ತ್ಯಾಗರಾಜನುತ|| “ನಿನ್ನ ಚಿತ್ತವು ನಿಶ್ಚಲವಾದುದು, ನಿರ್ಮಲವಾದುದು, ಅದರಿಂದಾಗಿ ನಿನ್ನನ್ನು ನಂಬಿದ್ದೇನೆ. ನನ್ನ ಚಿತ್ತವಾದರೋ ಮೋಸಗಾರ ಮತ್ತು ಚಂಚಲ. ನೀನು ನನ್ನ ಕೈಬಿಡಬಾರದು| ಗುರು ಕೆಸರು ನೀರನ್ನು ತಿಳಿಗೊಳಿಸುವ ಸಾಲ್ಲಾಕಿ ಬೀಜ(=ತಂಪುಬೀಜ=ಚಿಲ್ಲಗಿಂಜ); ಗುರು ಶಿಷ್ಯನನ್ನು ತನ್ನಂತೆ ರೂಪಾಂತರಿಸುವ ಭ್ರಮರ; ಕತ್ತಲನ್ನು ಕಳೆದು ಬೆಳಕನ್ನು ಬೀರುವ ಸೂರ್ಯ, ಗುರುತ್ವವೇ ಅತ್ಯುತ್ತಮಗತಿ; ನಿನ್ನನ್ನು ಇಂಥ ಗುರುವೆಂದು ನಂಬಿರುವ ನನ್ನನ್ನು ನೀನು ಕಾಪಾಡಬೇಕು” ಎನ್ನುವ ಈ ರಚನೆ ನಂಬುವಿಕೆಯಿಂದ ಆರಂಭವಾಗುತ್ತದೆ. ನಂಬುವುದಕ್ಕೆ ಕಾರಣವನ್ನು ಹೇಳುತ್ತದೆ. ನಂಬುವುದಕ್ಕೆ ಇರುವ ಆಧಾರಗಳನ್ನು ಬಹುಮುಖಿಯಾಗಿ ಗುರುತಿಸುತ್ತದೆ. ಕೊನೆಯಲ್ಲಿ ನಂಬುವಿಕೆಯ ಫಲವಾದ ಸದ್ಗತಿಯನ್ನು ಕೋರಿಕೊಳ್ಳುತ್ತದೆ.

ಇದೇ ರೀತಿ ಪರಿಣಾಮಕಾರಿಯಾದ ದಾಸರ ಕೃತಿಗಳಲ್ಲಿ ಒಂದು ಪುರಂದರದಾಸರ “ನಿಂದಕರಿರಬೇಕು”. ನಿಂದಕರಿರಬೇಕು| ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ|| ಅಂದಂದು ಮಾಡಿದ ಪಾಪದ ಮಲಗಳ| ತಿಂದು ಹೋಗುವರಯ್ಯ ನಿಂದಕರು| ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ| ಪೊಂದಿದ ಪುಣ್ಯವನೊಯ್ಯುವರಯ್ಯ|| ದುಷ್ಟ ಜನರು ಈ ಸೃಷ್ಟಿಯೊಳಿದ್ದರೆ| ಶಿಷ್ಟ ಜನರಿಗೆಲ್ಲ ಕೀರ್ತಿಗಳು| ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು| ಇಷ್ಟೇ ವರವನು ಬೇಡುವೆನಯ್ಯ|| ದುರುಳ ಜನಂಗಳು ಚಿರಕಾಲವಿರುವಂತೆ| ಕರವ ಮುಗಿದು ವರವ ಬೇಡುವೆನು| ಪರಿಪರಿ ತಮಸಿಗೆ ಗುರಿಯಹರಲ್ಲದೆ| ಪರಮ ದಯಾನಿಧೆ ಪುರಂದರ ವಿಠಲ||  ಇದು ನಿಂದಕರನ್ನು ಕುರಿತ ವಿಡಂಬನಾತ್ಮಕ ಧನಾತ್ಮಕ ಚಿಂತನೆ. ಇಲ್ಲಿ ನಿಂದೆಯಿಂದ ವ್ಯಕ್ತಿತ್ವ ಘನತೆಯುಳ್ಳದ್ದಾಗಿ ಹೇಗೆ ರೂಪುಗೊಂಡೀತು ಎನ್ನುವುದರ ಸಮರ್ಥನೆ ತಾರ್ಕಿಕವಾಗಿ ಮತ್ತೆ ಅನುಭವಾತ್ಮಕವಾಗಿ ಸುಸ್ಪಷ್ಟ.

ಇಂಥ ರಚನೆಗಳು ಮಾತು ಮತ್ತು ಧಾತುಗಳನ್ನು ಅಚ್ಚುಕಟ್ಟಾಗಿ ಹೊಂದಿಸಿರುವುದರೊಂದಿಗೆ ಸಾಹಿತ್ಯದ ಘನ ಉದ್ದೇಶವೊಂದಾದ ಮನಸ್ಸಿನ ಉದಾತ್ತೀಕರಣವನ್ನು ಸಾಧಿಸುವ ಸಮಕಾಲೀನ ಮಹತ್ವವುಳ್ಳ ರಚನೆಗಳೂ ಆಗಿವೆ, ತೆಲುಗು ಮತ್ತು ಕನ್ನಡ ಸಂಗೀತ-ಸಾಹಿತ್ಯ ದಿಗ್ಗಜರ ಸಮಾನಾಂತರ ಪ್ರತಿಭೆಯ ದಿಗ್-ದರ್ಶಕಗಳೂ ಆಗಿವೆ.

-ಪದ್ಮಿನಿ ಹೆಗಡೆ 

5 Responses

 1. ನಯನ ಬಜಕೂಡ್ಲು says:

  ಮಾಹಿತಿಪೂರ್ಣ

 2. ನಾಗರತ್ನ ಬಿ. ಅರ್. says:

  ದಾಸಪಂತೀಯರಾದ ತ್ಯಾಗ ರಾಜರ ಪರಿಚಯ ಮಾಲಿಕೆ.ಬಹಳ ಸೊಗಸಾಗಿ ಮೂಡಿ ಬಂದಿದೆ. ಬಹಳ ಮಹತ್ವದ ಮಾಹಿತಿಯನ್ನು ತಿಳಿಸಿದೆ ನಿಮಗೆ ಧನ್ಯವಾದಗಳು ಮೇಡಂ.

 3. Hema says:

  ಉತ್ತಮ ಮಾಹಿತಿಯುಳ್ಳ ಬರಹ.

 4. Padmini Hegade says:

  ಸಹೃದಯಿ ಹೇಮಾ ಮೇಡಂ, ನಾಗರತ್ನ ಮೇಡಂ, ನಯನ ಮೇಡಂ ಅವರಿಗೆ ಧನ್ಯವಾದಗಳು. ಓದುಗ ಸುಮನಸ್ಕರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು
  ಪದ್ಮಿನಿ ಹೆಗಡೆ

 5. . ಶಂಕರಿ ಶರ್ಮ says:

  ಕೀರ್ತನೆಗಾರ, ಸಂಗೀತ ದಿಗ್ಗಜ, ಸ್ವತ: ಸಾಹಿತ್ಯ ರಚನೆಗಾರರಾದ ತ್ಯಾಗರಾಜರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನ ಬಹಳ ಇಷ್ಟವಾಯ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: