ದೇವರ ಬೆಟ್ಟ….

Share Button
ಕೃಷ್ಣಪ್ರಸಾದ ಗಾಂವಕರ್

ಬುಲೆಟನ್ನು ಕೊಂಡು ಎರಡು ಮೂರು ವರ್ಷಗಳೇ ಕಳೆದಿದ್ದರೂ ಮನೆ ಸಾಮಾನು ತರುವ ಕೈಂಕರ್ಯದಲ್ಲಿ ಅದನ್ನು ತೊಡಗಿಸಿದ್ದು ಬಿಟ್ಟರೆ ದೂರದ ಬೈಕ್ ಪಯಣದ ಕನಸು ಇನ್ನೂ ಕನಸಾಗಿಯೇ ಇತ್ತು. ದೂರ ಪಯಣದ ಹಂಬಲ, ಅಂಜಿಕೆಗಳೊಂದಿಗೆ ಎಲ್ಲಿಗೆ ಹೋಗುವುದು , ಹೇಗೆ ಹೋಗುವುದು , ಯಾರು ಜೊತೆ ಹೋಗುವುದು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವೇನೋ ಎಂಬಂತೆ ಗೆಳೆಯನೊಬ್ಬ ಬುಲೆಟೊಂದನ್ನು ಖರೀದಿಸಿಯೇಬಿಟ್ಟ. ತಿಂಗಳು ಕಳೆದರೂ ಪ್ರವಾಸದ ಚರ್ಚೆಯಾಯಿತೇ ವಿನಃ ಪ್ರವಾಸವಾಗಲೇ ಇಲ್ಲ. ಗೆಳೆಯ ಬೇರೆಯವರೂಂದಿಗೆ ಪ್ರವಾಸ ಮಾಡಿದನೇ ವಿನಃ ನನ್ನ ಸರದಿ ಬರಲೇ ಇಲ್ಲ. ಗೆಳೆಯನ ಮೇಲಿನ ಸಿಟ್ಟು ಹಾಗೂ ಹತಾಶೆ ಅಂತರ್ಜಾಲವನ್ನು ಜಾಲಾಡಲು ಪ್ರೇರೇಪಿಸಿತು. ಫಲಿತಾಂಶ ಬೆಂಗಳೂರು ಮೋಟಾರ್ ಸೈಕಲ್ ಕ್ಲಬ್ ನ ವಿವರ. ಒನ್ ಲೈನ್ನಲ್ಲಿ ಒಂದಿಷ್ಟು ಓದು, ಒಂದೆರಡು ದೂರವಾಣಿ ಕರೆ
ಮಾಡುವಷ್ಟರಲ್ಲಿ ವಾರಾಂತ್ಯಕ್ಕೆ ಬೈಕ್ ಪ್ರವಾಸವೆಂದು ನಿಗದಿಯಾಗೇ ಬಿಟ್ಟಿತು. ಶನಿವಾರ ನಸುಕಿನಲ್ಲಿ ಹೊಸೂರು ರಸ್ತೆಯಲ್ಲಿನ ಮೊದಲೇ ನಿಗದಿಯಾದ ಸ್ಥಳದಲ್ಲಿ ಹಾಜರಿಯನ್ನೂ ಹಾಕಿದ್ದಾಯಿತು. ಎಲ್ಲಾ ಹೊಸ ಮುಖಗಳು. ಪರಿಚಯಸ್ತರೇ ಇರುವ ಗುಂಪಿನ ಒಂದೋ ಎರಡೋ ಅಪರಿಚಿತರಲ್ಲಿ ನಾನೂ ಒಬ್ಬ. ಪರಿಚಯಸ್ತರೆಲ್ಲ ಸೇರಿ ಹಿಂದಿನ ಪ್ರವಾಸಗಳ ಬಗ್ಗೆ, ಅಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮೆಲುಕು ಹಾಕುವಾಗ ನನ್ನ ಹಾಗೇ ಏನು ಮಾಡಬೇಕೆಂದರಿಯದೇ ಚಡಪಡಿಸುತ್ತಿರುವ ಇನ್ನೊಂದು ಆತ್ಮದ ಪರಿಚಯ. “ಮೊದಲ ನೋಟದಲ್ಲೇ ಪ್ರೇಮ” ಎಂಬಂತೆ ಮೊದಲ ಮಾತಿನಲ್ಲೇ ಏನೋ ಸಲಿಗೆ. ಕೃತಕ ಔಪಚಾರಿಕತೆಗಳಿಲ್ಲ, ಅವು ತರುವ ದೂರವಿಲ್ಲ. ಇದ್ದದ್ದನ್ನು ಇದ್ದ ಹಾಗೆ ಯಾವ ಹಿಂಜರಿಕೆಯೂ ಇಲ್ಲದೆ ಹೇಳುವ ಸರಳತೆ ಅವನಲ್ಲಿ. ಹೀಗಾಯ್ತು ಪರಿಚಯಸ್ತರ ನುಡುವಿನ ಅಪರಿಚಿತರ ಪರಿಚಯ.

ಮೈ ಮುಖಗಳಿಗೆ ರಾಚುವ ತಂಗಾಳಿಯನ್ನು ಭೇದಿಸುತ್ತಾ, ಕೇಳಿದವರ ಎದೆಯನ್ನು ಝಲ್ಲೆನಿಸುವ ಸದ್ದು ಮಾಡುತ್ತಾ ಒಂದರ ಹಿಂದೆ ಒಂದರಂತೆ ಸಾಲಿನಲ್ಲಿ ಸಾಗೇಬಿಟ್ಟಿತು ಬೈಕ್ ಗಳ ಸವಾರಿ. ಆ ಅನುಭವವೋ ರೊಮಾಂಚನ, ಎಚ್ಚರಿಕೆ ಹಾಗೂ ಅಂಜಿಕೆಗಳ ಮಿಶ್ರಣ. ಹೀಗೆ ಪ್ರತಿ ಎಪ್ಪತ್ತು ಎಂಬತ್ತು ಕಿಲೋಮೀಟರ್ಗೊಮ್ಮೆ ಬೆಳಿಗ್ಗಿನ ತಿಂಡಿ ಬ್ರೇಕ್, ಟಿ ಬ್ರೇಕ್, ಇನ್ನೇನೋ ಬ್ರೇಕ್ ಎನ್ನುತ್ತಾ ಬಂದೇಬಿಟ್ಟಿತು ಬಡವರ ಊಟಿ ಎಂದೇ ಹೆಸರುವಾಸಿಯಾದ ದೂರದ ತಮಿಳುನಾಡಿನ ಯಲಗಿರಿಯ ತುದಿ.

ಎಲ್ಲಾ ಗಿರಿಧಾಮಗಳಂತೆ ಇಲ್ಲಿಯೂ ತಿಳಿಬಿಸಿಲು, ಮೈಗೆ ಹಿತವೆನಿಸುವ ಚಳಿ, ಮಂಜನ್ನೇ ಹೊದ್ದಿರುವ ಒಂದು ಸುಂದರ ಕೆರೆ, ಅದರ ಸುತ್ತ ಅದರಿಂದ ತುಸು ದೂರದಲ್ಲಿ ಕೈಗೆಟಕುವ ದರದಲ್ಲಿ ಸಿಗುವ ಪ್ರವಾಸಿ ಮಂದಿರಗಳು. ಮಧ್ಯಾಹ್ನದ ಊಟ ಮುಗಿಸಿ ಕೆರೆಯ ದರ್ಶನಕ್ಕೆಂದು ಹೊರಟರೆ ಮುಂಜಾನೆ ಪರಿಚಯವಾದ ಗೆಳೆಯನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ. ಇದ್ದದ್ದನ್ನೆಲ್ಲ ಅನುಭವಸುವ, ನೊಡಿದ್ದನ್ನೆಲ್ಲ ತಿಳಿದುಕೊಳ್ಳುವ ಕುತೂಹಲವಿರುವ ವ್ಯಕ್ತಿತ್ವ. ಕೆರೆಯ ದಾರಿಯಲ್ಲಿ ಮಾರುವ ವಿವಿಧ ತಿಂಡಿಗಳನ್ನೂ, ಇನ್ನೂ ಕಂಡರಿಯದ ಹಣ್ಣುಗಳನ್ನು ಪರೀಕ್ಷಿಸುವ, ಸವಿಯುವ ಅವನು ಆಸಕ್ತಿ, ಆ ಮಾರಾಟಗಾರರಿಂದ ಊರಿನಲ್ಲಿರುವ ಸ್ಥಳಗಳ ಬಗ್ಗೆ, ವಿಷಯಗಳ ಬಗ್ಗೆ ಹಾವಭಾವದಿಂದ, ಬರುವ ಅಲ್ಪ ಸ್ವಲ್ಪ ಭಾಷೆಯಿಂದ ತಿಳಿದುಕೊಳ್ಳುವ ಅವನು ಚಾತುರ್ಯ ಅಚ್ಚರಿ ತಂದರೂ ಅನುಕರಣೀಯವೆನಿಸಿತು. ಹೀಗೆ ತಿಳಿದುಕೂಂಡ ವಿಷಯಗಳಲ್ಲಿ ಸಾಮಿಮಲೈ ಬೆಟ್ಟ ಹಾಗೂ ಅಲ್ಲಿಗೆ ಮಾಡಬಹುದಾದ ಚಾರಣವೂ ಒಂದು. ಕೆರೆಯಲ್ಲಿನ ದೋಣಿ ವಿಹಾರ, ಸಂಜೆಯ ಬೊನ್ ಫೈಯರ, ಅದರ ಸುತ್ತ ನರ್ತನ ಇತ್ಯಾದಿ ಮುಗಿಸಿ ಬರೀ ವಾರಾಂತ್ಯದ ಪ್ರವಾಸವಾದ್ದರಿಂದ ನಾಳೆ ಬೆಳಿಗ್ಗೆ ಹತ್ತಕ್ಕೆ ತಿರುಗಿ ಬೆಂಗಳೂರಿಗೆ ಹೊರಡುವುದೆಂದು ನಿರ್ಧರಿಸಿದ ಗುಂಪು ಯಲಗಿರಿಯ ಪ್ರಶಾಂತ ರಾತ್ರಿಯಲ್ಲಿ ತಣ್ಣನೆಯ ಗಾಳಿಗೆ ದಣಿದ ಮೈಯನ್ನೊಡ್ಡಿ ಮಲಗಿತು. ಹೊಸ ಜಾಗಕ್ಕೆ ಬಂದು ಏನೂ ನೋಡದೆ ಏನೂ ಮಾಡದೆ ಹಾಗೆಯೇ ಹೋಗುವುದೇ? ಎಂದು ನಾನು ಮತ್ತು ಗೆಳೆಯ ನಸುಕಿನಲ್ಲೆದ್ದು ಸಾಮಿಮಲೈ ಬೆಟ್ಟದ ಚಾರಣ ಮುಗಿಸಿ ಹತ್ತು ಗಂಟೆಯ ಒಳಗೆ ತಿರುಗಿ ಬರುವುದೆಂದು ನಿರ್ಧರಿಸಿದೆವು.

ಅರುಣೋದಯದ ಸಮಯ. ಸಾಮಿಮಲೈನ ಹಾದಿ ಹಳ್ಳಿ ಮನೆಗಳ ಅಂಗಳ ದಾಟುತ್ತಾ ಹಳ್ಳಿಯ ಹಿಂಬದಿಗೆ ಬರಬೇಕು. ಹಳ್ಳಿಯ ಜನರೋ ವಿಶಾಲ ಹೃದಯಿಗಳು ಹಸನ್ಮುಖರು. ಕೆಲವೂಮ್ಮೆ ಕೇಳಿದಾಗ ಇನ್ನೂ ಕೆಲವು ಸಲ ಅವರಾಗಿಯೇ ಸಾಮಿಮಲೈಗೆ ದಾರಿತೋರಿಸುವ, ಸ್ವಾಮಿಯ ಬಗ್ಗೆ ಅವನು ಪವಾಡಗಳ ಬಗ್ಗೆ ಅವರ ಭಾಷೆಯಲ್ಲಿ ಹೇಳುವ ಎಲ್ಲಿಲ್ಲದ ಹುರುಪು. ಅದೆಷ್ಟು ಜನರಿಗೆ ಯಾವ ಅಪೇಕ್ಷೆಯೂ ಇಲ್ಲದೇ ಅದೇ ವಿಷಯವನ್ನು ಅದೇ ಸಂಗತಿಯನ್ನು ಅದೆಷ್ಟು ಬಾರಿ ಹೇಳಿದ್ದಾರೋ… ಸ್ವಾಮಿಯ ದರ್ಶನ, ಸಾಮಿ ಪೂಜೆ ಅವರ ಉದ್ದೇಶವಾದರೆ ಚಾರಣ ನಮ್ಮ ಗುರಿ. ದೇವರ ಬಗ್ಗೆ ಯೋಚಿಸಿಯೇ ಇರಲಿಲ್ಲ.

ಸಾಮಿಮಲೈನಲ್ಲೊಂದು ಸಾಮಿಯೂ(ದೇವರು) ಇದ್ದಾನೆಂದು ತಿಳಿದಿದ್ದು ಆಗಲೇ. ಹಳ್ಳಿಯ ಹಿಂಬದಿಗೆ ಬಂದರೆ ಹಳ್ಳಿಗರ ಹೃದಯದಷ್ಟೇ ವಿಶಾಲವಾದ ಬಯಲು. ಬಯಲು ಮುಗಿಯುತ್ತಿದ್ದಂತೆ ಬೆಟ್ಟ ಹತ್ತುವ ಪ್ರಕ್ರಿಯೆ ಪ್ರಾರಂಭ. ಮೊದಮೊದಲು ಅಷ್ಟೇನು ಕಠಿಣವೆನಿಸದ ಮೆಟ್ಟಿಲು ದಾರಿ ಬರುಬರುತ್ತಾ ಕಡಿದಾಗುತ್ತ ಗುರಿ ತಲುಪಲು ಪರಿಶ್ರಮ ಮತ್ತು ಛಲ ಮುಖ್ಯ ಎನ್ನುವ ಸತ್ಯವನ್ನು ನೆನಪಿಸುತ್ತದೆ. ಕಷ್ಟಕ್ಕೆ ನೆರವು ಎಂಬಂತೆ ಆ ಮೆಟ್ಟಿಲು ದಾರಿಯಲ್ಲೊಂದು ಹಳ್ಳಿ ಹೆಂಗಸಿನ ತಾತ್ಕಾಲಿಕ ಅಂಗಡಿ. ಅಂಗಡಿಯೇನು ಬಂತು, ಒಂದೋ ಎರಡೋ ಬುಟ್ಟಿಯಲ್ಲಿ ಆ ಜಾಗದ ವಿಶೇಷ ಹಣ್ಣುಗಳು,ತಿನಿಸುಗಳು ಮತ್ತು ಅವಳ ಐಷರಾಮಕ್ಕೊಂದು ಮುರುಕು ಮಣೆ. ಮನೆಯವರ ಹೊಲದಲ್ಲಿನ ಕೂಲಿ ಎರಡೊತ್ತಿನ ಊಟಕ್ಕಾದರೆ ಬಹುಷಃ ಇದು ಮೂರನೇ ಹೊತ್ತಿನ ಊಟದ ಉಪಾಯ. ಸುತ್ತಲಿನ ಪರಿಸರದ ಪ್ರಶಾಂತತೆಯೊಂದಿಗೆ ಪೈಪೋಟಿ ಮಾಡುತ್ತಿರುವ ಅವಳ ಮುಖದಲ್ಲಿನ ಶಾಂತಿ. ತುಂಬಾ ಗಿರಾಕಿಗಳು ಬರಬಹುದೆಂಬ ನಿರೀಕ್ಷೆಯಿಲ್ಲ, ಬರಲಿಲ್ಲವೆಂದು ಆತಂಕವಿಲ್ಲ. ಸೂರ್ಯೇದಯದಿಂದ ಸಾಯಂಕಾಲದವರೆಗೆ ಕಾಯುವ ತಾಳ್ಮೆ. ಹೇಳುವುದಾದರೆ ದೇವರ ಗುಡ್ಡದ ಬುಡದಲ್ಲಿ ಅಕ್ಷರಶಃ ಆಧ್ಯಾತ್ಮದ ಆಚರಣೆ.ಗೆಳೆಯನೋ ಯಾವಾಗಲೂ ನನ್ನಿಂದ ಹತ್ತು ಮೆಟ್ಟಿಲು ಮುಂದು. ನಾನು ಹತ್ತು ಹತ್ತಿದರೆ ಅವನು ಇಪ್ಪತ್ತು. ವಯಸ್ಸಿನಲ್ಲಿ ಕಿರಿಯನು ಅಷ್ಟೇ ಅಲ್ಲ ಬಹಳಷ್ಟು ಚಾರಣ ಮಾಡಿದ ಅನುಭವ. ಹಾಗಾಗಿ ಹೀಗೆ ಎಂದು ನನ್ನನ್ನು ನಾನು ಸಮರ್ಥಿಸಿಕೊಂಡಿದ್ದು. ಹೀಗೆ ನಡೆನಡೆಯುತ್ತಾ ನೋಡುನೋಡುತ್ತಾ ಚಾರಣದ ಕೊನೆಯ ಹಂತವನ್ನು ತಲುಪಿಯೇ ಬಿಟ್ಟೆವು. ಕೊನೆಯ ಹಂತ ಬಲು ಕಡಿದಾದ, ಮೆಟ್ಟಿಲುಗಳಿಲ್ಲದ, ಬರೀ ಕಲ್ಲುಬಂಡೆಗಳನ್ನು ಬಳಸಿಕೊಂಡು ಹೋಗುವ ದಾರಿ. ಪ್ರತಿ ಹೆಜ್ಜೆಯೂ ಪ್ರಯಾಸವೇ. ಇಷ್ಟೆಲ್ಲ ಹತ್ತಿದ್ದೇವೆ ಇಲ್ಲಿಂದಲೇ ತಿರುಗಿ ಹೋದರೆ ಆಗಬಹುದಲ್ಲಾ ಎನ್ನುವಷ್ಟು ಸುಸ್ತು. ಹಾಗೋ ಹೀಗೋ ನಮ್ಮನ್ನು ನಾವೇ ಎಳೆದುಕೊಂಡು ಬಂಡೆಯೊಂದನೇರಿದ್ದೇ ತಡ ಒಮ್ಮೆಲೇ ಮುಖಕ್ಕೆ ರಾಚಿದ ತಂಗಾಳಿ. ರಭಸ ಕೊಂಚ ಜೋರಾಗಿಯೇ ಇತ್ತೆನ್ನಬೇಕು. ಶಿಖರದ ತುದಿಯನ್ನು ತಲುಪಿಯೇ ಬಿಟ್ಟಿದ್ದೆವು. ರೋಮಾಂಚನ… ಎದುರಿಗೆ ಎತ್ತರದಿಂದ ಕಾಣುವ ಯಲಗಿರಿಯ ಸುಂದರ ನೋಟ ಮನಸ್ಸಿಗೆ ಮುದಕೊಟ್ಟರೆ ಬಸವಳಿದ ಮೈಗೆಲ್ಲ ತಂಗಾಳಿಯ ಸೇವೆ.

ಒಂದೆರಡು ನಿಮಿಷ ಸುಧಾರಿಸಿಕೊಂಡು ಉಸಿರಾಟವನ್ನು ಹದಗೊಳಿಸಿ ಹಿಂತಿರುಗಿ ನೋಡಿದರೆ ಬೆಟ್ಟದ ತುದಿಯಲ್ಲೊಂದು ಬೃಹದಾಕಾರದ ಬಂಡೆ. ಬಂಡೆಯ ಬುಡದಲ್ಲೊಂದು ಸಣ್ಣ ಗುಡಿ. ಇದೇ ಇರಬೇಕು ಸಾಮಿಯ ಗುಡಿ. ತಿರುಪತಿಯ ಆಢಂಬರವಿಲ್ಲ, ಜನ ಜಂಗುಳಿಯಿಲ್ಲ, ಒತ್ತಡವಿಲ್ಲ. ಎಲ್ಲೆಲ್ಲೂ ಶಾಂತಿ. ಒಂದೊಮ್ಮೆ ದೇವರಿದ್ದರೂ ಇಂಥಾ ಸ್ಥಳದಲ್ಲೇ ಇರಬಹುದೆಂಬ ಯೋಚನೆ ಮನದಲ್ಲಿ. ನಮ್ಮನ್ನು ಬಿಟ್ಟು ಒಂದೋ ಎರಡೋ ತಲೆಗಳು ಅಲ್ಲೊಂದು ಇಲ್ಲೊಂದು ಬಂಡೆಗಳ ಮೇಲೆ ವಿಶ್ರಮಿಸುತ್ತಿದ್ದವು. ಬೆಳಿಗ್ಗೆ ಹೊರಡುವ ಅವಸರದಲ್ಲಿ ನೀರಿನ ವ್ಯವಸ್ಥೆ ಮಾಡಕೊಳ್ಳದ್ದರಿಂದ ತುಂಬಾ ಬಾಯಾರಿಕೆ. ಈ ಗುಡ್ಡದ ಮೇಲೆ ಬಂಡೆಗಳ ನಡುವೆ ಎಲ್ಲಿರಬೇಕು ನೀರಿನ ವ್ಯವಸ್ಥೆ!. ಚಾರಣದ ಉದ್ದೇಶ ಹಾಗೂ ಗುರಿ ಕೈಗೂಡಿದ್ದರೂ ತಿರುಗುವ ಬದಲು ಅಲ್ಲಿನ ವಾತಾವರಣ ನಮ್ಮನ್ನು ಗುಡಿಯ ಹತ್ತಿರ ಸೆಳೆದೊಯ್ಯಿತು.

ಗುಡಿಯ ಹೊರಗೊಂದು ಬಡ ಜೀವ ಎರಡೂ ತೊಡೆಗಳನ್ನು ಎದೆಗೆ ಅವಚಿಕೊಂಡು ಕುಂತಿತ್ತು. ಉಡುಗೆ ತೊಡುಗೆ ನೋಡಿದರೆ ಪೂಜಾರಿ ಎನಿಸಲಿಲ್ಲ. ಆದರೂ ಸಾಮಿಯ ಸೇವಕ ಹೌದು. ನಮ್ಮ ಬರುವನ್ನು ನೋಡಿ ಎದ್ದು ಗುಡಿಯೊಳಗೆ ಹೊರಟ ಆ ಜೀವದ ನಡೆ ಆಶ್ಚರ್ಯಕರವಾಗಿತ್ತು. ಗುಡಿಯೋ ಎಷ್ಟು ಚಿಕ್ಕದಾಗಿತ್ತೆಂದರೆ ಒಳ ಹೊರಟ ಜೀವ ತನ್ನ ತಲೆಯ ಮೇಲಿನ ಪ್ರೀತಿಯಿಂದ ಸೊಂಟ ಬಗ್ಗಿಸಿಕೊಂಡೇ ಒಳ ನಡೆದಿತ್ತು. ತುಂಬಾ ಸಾಮಾನ್ಯವಾದ ಸಾಮಿ ಗುಡಿಯನ್ನು, ಒಳಗಿರುವ ಸರಳ ಸ್ವಾಮಿಯನ್ನು, ಸುತ್ತಲಿನ ವಾತಾವರಣವನ್ನು ನೋಡುತ್ತಾ ನೋಡುತ್ತಾ ತನ್ನಷ್ಟಕ್ಕೆ ಕೈಗಳೆರಡೂ ಕೂಡಿಕೊಂಡು ನಮಸ್ಕರಿಸಿದವು. ಭಕ್ತಿಯೋ ಗೌರವವೋ ಅಥವಾ ಇದು ಭಿನ್ನವಾಗಿದೆ ಎಂಬ ಖುಷಿಯೋ ತಿಳಿಯದು. ಅಷ್ಟರಲ್ಲಿ ಗುಡಿಯೊಳಗೆ ಹೋದ ಜೀವ ಕೈಯಲ್ಲೊಂದು ನೀರು ತುಂಬಿದ ಬಿಂದಿಗೆಯೊಂದಿಗೆ ಹೊರಗೆ ಬಂತು. ಬಿಂದಿಗೆಯನ್ನು ನಮ್ಮ ಮುಂದಿಟ್ಟು ಮತ್ತದೇ ತೂಡೆ ಎದೆಯನ್ನಪ್ಪಿದ ಭಂಗಿಗೆ ಮರುಳಿತು. ಯಾವ ಅಪೇಕ್ಷೆಯೂ ಇಲ್ಲ, ಯಾವ ನಿರೀಕ್ಷೆಯೂ ಇಲ್ಲ, ತಾನು ತನ್ನಿಂದಾದ ಸೇವೆಯನ್ನು ಮಾಡಿದ್ದೇನೆಂಬ ಹೆಮ್ಮೆಯಿಲ್ಲ. ನಿರ್ಲಿಪ್ತ ಮುಖಭಾವ…. ಮೂರು ಕಿಲೋಮೀಟರ್ ಗೂ ಹೆಚ್ಚು ಮೆಟ್ಟಿಲು ದಾರಿಯನ್ನು ಹತ್ತಿಬಂದ ನಮಗೆ ಆ ತಣ್ಣೀರಿಗಿಂತ ಮಿಗಿಲಾದ ವರ ಇನ್ನೊಂದಿರಲಿಲ್ಲ.

ಯಲಗಿರಿಯ ಸಾಮಿಮಲೈ ಗುಡಿ

ಮತ್ತದೇ ತಿರುಪತಿಯ ಯೋಚನೆ ತಲೆಯಲ್ಲಿ. ಅದೆಂತಹ ವ್ಯತ್ಯಾಸ ಅದೆಂತಹ ವೈರುಧ್ಯ. ಉಳ್ಳವರಿಗೆ ಬೇರೆಯೇ ಸಾಲಿಲ್ಲ, ಬೇಗ ದರ್ಶನವಿಲ್ಲ, ವರಪ್ರಸಾದಕ್ಕೆ ಕಾಸಿಲ್ಲ, “ಜರಗಂಡಿ ಜರಗಂಡಿ” ಎಂದು ಹೊರ ನೂಕುವ ದೈವಮಾನವರಿಲ್ಲ, ಆಢಂಬರವಿಲ್ಲ… ಎಲ್ಲರೂ ಒಂದೆಯೇ ಎಲ್ಲರಿಗೂ ತಣ್ಣೀರಿನ ಪ್ರಸಾದವೇ. ಯಾರ ಹಂಗಿಲ್ಲದೆ ಮನ ತಣಿಯುವಷ್ಟು ಹೊತ್ತು ಕಣ್ಣುಮುಚ್ಚಿ ಕೂಡಬಹುದು. ಕುಂತಲ್ಲೇ ಶಾಂತಿಯ, ನಿರಾಳತೆಯ ಅನುಭವ. ದೇವರು ನಿಜವಾಗಿಯೂ ಹತ್ತಿರದಲ್ಲಿದ್ದಾನೆ… ಬೆನ್ನಮೇಲೆ ಲಘುವಾದ ಗೆಳೆಯನ ಹೊಡೆತ ಮತ್ತೆ ನನ್ನನ್ನು ವಾಸ್ತವಕ್ಕೆ ಕರೆತಂದಿತ್ತು. ಇನ್ನೊಮ್ಮೆ ತಣ್ಣೀರು ಕುಡಿದು ಮರು ಪ್ರಯಾಣವನ್ನು ಪ್ರಾರಂಭಿಸಿದೆವು. ದೇಹ ಬೆಟ್ಟವನ್ನಿಳಿಯುತ್ತಿದ್ದರೂ ಮನಸ್ಸು ಇನ್ನೂ ಸಾಮಿಮಲೈನ ತುದಿಯನ್ನು ಬಿಟ್ಟಿರಲಿಲ್ಲ.

ಪ್ರಶಾಂತ ವಾತಾವರಣ, ಸುತ್ತಲೂ ತುಂಬಿರುವ ಸರಳತೆ, ಸಾಮಿ ಸೇವಕನ ನಿರಾಳ ಭಾವ, ಹಣ್ಣು ಮಾರುವ ಹೆಣ್ಣಿನ ಮುಖದಲ್ಲಿನ ಶಾಂತಿ.. ಇವೆಲ್ಲವನ್ನು ಮೆಲುಕು ಹಾಕುತ್ತಿದ್ದರೆ ಮೈ ಮನವೆಲ್ಲ ಹಗುರವಾದ ಅನುಭವ. ದೂರದಲ್ಲಿ ಅಸ್ಪಷ್ಟ ಬುಲೆಟ್ ನ ಸದ್ದು. ಹೌದು ಅದು ಬುಲೆಟ್ ಶಬ್ದವೆ. ಅವರು ನಮ್ಮವರೇ. ಗಂಟೆ ಹನ್ನೊಂದಾದರೂ ಹೊಸಬರಿಬ್ಬರೂ ಕಾಣದಿದ್ದಾಗ ಹುಡುಕಿಕೊಂಡು ಬಂದಿದ್ದರು. ಎಲ್ಲರನ್ನೂ ಕಾಯಿಸಿದ ಬಗ್ಗೆ ಪಶ್ಚಾತ್ತಾಪವಿದ್ದರೂ, ದೇವರ ಬೆಟ್ಟದ ಅನುಭವ ತಪ್ಪಿಸಿಕೊಳ್ಳಲು ಯೋಗ್ಯವಾಗಿರಲಿಲ್ಲ ಎಂಬ ಸಮಾಧಾನ. ಬಹಳ ವರ್ಷಗಳ ಹಿಂದೆ ತಿರುಪತಿಗೆ ಹೋದಾಗಿನಿಂದ, ಅಲ್ಲಿನ ವಿಧಿ ವಿಧಾನಗಳನ್ನು ನೋಡಿದಾಗಿನಿಂದ ಕಾಡುತ್ತಿದ್ದ “ಅಲ್ಲಿಗೆ ಮತ್ತೆ ಹೋಗಬೇಕೇ?” ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ದೇವರನ್ನು ಸನಿಹದಿಂದ ನೋಡಲು, ನನ್ನನ್ನು ನಾನು ಸನಿಹದಿಂದ ನೋಡಲು ದೇವರ ಬೆಟ್ಟ(ಸಾಮಿ ಮಲೈ) ನಂಥ ಜಾಗಗಳಿಗೆ ಹೋಗಬೇಕೇ ವಿನಃ ತಿರುಪತಿಗಲ್ಲ ಎಂಬ ಜ್ಞಾನೋದಯದೊಂದಿಗೆ ಗಲಾಟೆಯ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಬೆಂಗಳೂರು ಸೇರಿದೆವು.

ದೇವರ ಬೆಟ್ಟದ ಮೌನ ಇನ್ನೂ ಕಾಡುತ್ತಿತ್ತು… ಕಾಡುತ್ತಿದೆ…


-‘ಕಿಟ್ಟು

14 Responses

 1. ಇಂತಹ ಮಧುರವಾದ ಸುಂದರವಾದ ಚಾರಣದ ಅನುಭವ ಕಟ್ಟಿಕೊಟ್ಟ ನಿಮಗೆ ಧನ್ಯವಾದಗಳು

 2. Sandeep Nayak says:

  very nice

 3. ನಯನ ಬಜಕೂಡ್ಲು says:

  ಬ್ಯೂಟಿಫುಲ್.

 4. ದೇವರ ಬೆಟ್ಟದ ಚಾರಣದ ಅನುಭವ ಲೇಖನ ಮುದ ಕೊಟ್ಟಿತು ಮಾತ್ರ ವಲ್ಲ ಚಿಂತನಾ ಬರಹವಾಗಿತ್ತು. ಧನ್ಯವಾದಗಳು ಸಾರ್

  • ಕಿಟ್ಟು says:

   ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು…

 5. Hema says:

  ಸೊಗಸಾದ ನಿರೂಪಣೆ..ಚೆಂದದ ಪ್ರವಾಸಕಥನ.

 6. . ಶಂಕರಿ ಶರ್ಮ says:

  ಪ್ರಕೃತಿ ಮಡಿಲಿನಲ್ಲಿ ಪ್ರಶಾಂತವಾಗಿ ಕುಳಿತ ದೇವನ ದರುಶನ ಭಾಗ್ಯ ಪಡೆದು, ಆ ಭಾಗ್ಯವನ್ನು ನಮಗೂ ಉಣಿಸಿದ, ಜೊತೆಗೆ ನಮ್ಮನ್ನು ಚಿಂತನೆಗೆ ಹಚ್ಚಿದ ತಮ್ಮ ಲೇಖನ ಬಹಳ ಮುದನೀಡಿತು.

 7. ವಿದ್ಯಾ says:

  ನಿರೂಪಣೆಯ ಶೈಲಿ,, ನಮ್ಮ ಗಮನಕ್ಕೆ ಬಾರಾದ ಚಿಕ್ಕ ಚಿಕ್ಕ ಸಂಗತಿಗಳನ್ನು ವಿಶೇಷವಾಗಿ ಬರೆದ ಬರಹ,ನಮ್ಮನ್ನು ಜೊತೆಗೆ ಚಾರಣ ಮಾಡಿಸಿದಂತಿತ್ತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: