ಅವಿಸ್ಮರಣೀಯ ಅಮೆರಿಕ-ಎಳೆ 19

Share Button

ಜಲಪಾತಗಳ ಜೊತೆಯಲ್ಲಿ…

ಬೆಳಗ್ಗೆ ಉಪಾಹಾರಕ್ಕೆ ಏನು ಮಾಡಲೆನ್ನುವ ತಲೆ ಬಿಸಿ ಇಲ್ಲದೆ, ಇದ್ದುದನ್ನೆ ಎಲ್ಲರು ಪರಸ್ಪರ ಹಂಚಿಕೊಂಡು ಬಹಳ ಖುಶಿಯಿಂದ ಹೊಟ್ಟೆ ತುಂಬಿಸಿ, ಜಲಪಾತ ವೀಕ್ಷಣೆಗೆ ಹೊರಟಾಗ ಮನಸ್ಸು ಕುತೂಹಲಗೊಂಡಿತ್ತು… ಈ ದಿನದ ಜಲಪಾತಗಳು ಹೇಗಿರಬಹುದೆಂದು. ಆ ದಿನವೇ ಹಿಂತಿರುಗುವುದರಿಂದ, ಎಲ್ಲಾ ಸಾಮಾನುಗಳನ್ನು ಕಾರಲ್ಲಿ ತುಂಬಿಸಲಾಯಿತು… ಮಧ್ಯಾಹ್ನದ ಊಟಕ್ಕಾಗಿ ಮೊಸರನ್ನ ಡಬ್ಬದೊಳಗೆ ಕುಳಿತಿತ್ತು.

ಮೊದಲಿಗೆ, ಸಮೀಪದಲ್ಲಿರುವ, ಅಲ್ಲಿಯದೇ ಹೆಸರು ಪಡೆದ ಪ್ರಸಿದ್ಧ ಯೊಸಮಿಟಿ ಜಲಪಾತದತ್ತ ಹೊರಟಾಗ ಅದಾಗಲೇ ಗಂಟೆ ಒಂಭತ್ತು. ಈ ಜಲಪಾತವು, ಇಲ್ಲಿರುವ ಎಲ್ಲಾ ಜಲಪಾತಗಳಲ್ಲಿಯೇ ಅತ್ಯಂತ ಎತ್ತರವಾದುದು ಮಾತ್ರವಲ್ಲದೆ ಬಹಳ ವಿಶಿಷ್ಟವಾದುದು.  ಸುಮಾರು 744 ಮೀ.(2,480 ಅಡಿ) ಎತ್ತರದಿಂದ ಈ ಅಗಾಧ ಜಲರಾಶಿಯು, ಮೂರು ಹಂತಗಳಲ್ಲಿ ಧುಮುಕುತ್ತದೆ. ಮೇಲಿನಿಂದ ಮೊದಲನೆಯ ಹಂತವು ಸುಮಾರು 440ಮೀ ಎತ್ತರವಿದ್ದರೆ, ಎರಡನೇ ಹಂತವು, ಎಂದರೆ ಮಧ್ಯ ಭಾಗದಲ್ಲಿ 206ಮೀ ಎತ್ತರದಿಂದ ಧುಮುಕುತ್ತದೆ. ಕೊನೆಯದಾದ ಮೂರನೇ ಹಂತವು 98ಮೀ ಎತ್ತರ ಮಾತ್ರವಿದೆ.

ನಮ್ಮ ಕಾರು ದಾರಿ ಮಧ್ಯದಲ್ಲಿ, ಸಂಚಾರ ದಟ್ಟಣೆಯಿಂದಾಗಿ ಮುಂದಕ್ಕೆ ಹೋಗಲಾಗದೆ, ರಸ್ತೆ ಪಕ್ಕದಲ್ಲಿ ಅದನ್ನು ನಿಲ್ಲಿಸಿ ಮುಂದಕ್ಕೆ ನಡೆದೇ ಹೋದೆವು. ಸ್ವಲ್ಪ ಸಮಯದಲ್ಲೇ, ನಾವು ಯೊಸಮಿಟಿ ಜಲಪಾತದ ಮೂರನೇ ಹಂತದ ತಳದಲ್ಲಿದ್ದೆವು. (Lower Yosmite Fall). ನೊರೆ ಹಾಲು ಧರೆಗಿಳಿದಂತೆ ಭರದಿ ಬೀಳುವ ಸೊಬಗನ್ನು, ಅದರ ತೊರೆಯಡ್ಡದ ಚಂದದ ಸೇತುವೆಯಲ್ಲಿ ನಿಂತು ನೋಡಿದರೆ ಹಿಂತಿರುಗಲು ಮನಸ್ಸು ಬಾರದು. ಅಲ್ಲಿ ನಮಗೆ ಕೊನೆಯ ಹಂತದ ಜಲಪಾತ ಮಾತ್ರ ಕಾಣಸಿಗುವುದು.  ಸ್ವಲ್ಪ ದೂರದಿಂದ ನೋಡಿದರೆ ಅದರ ಹಿಂಬದಿಯಲ್ಲಿ, ಎತ್ತರದಿಂದ ಭೋರ್ಗರೆದು ಧುಮುಕುವ ಎರಡನೇ ಹಂತದ ಜಲಪಾತದ ವಿಹಂಗಮ ನೋಟ ಅತಿ ನಯನ ಮನೋಹರ! ಅತಿ ಎತ್ತರದಲ್ಲಿರುವ ಮೊದಲಿನ ಹಂತದ ಜಲಪಾತದ ದರ್ಶನ ಕಣಿವೆಯೊಳಗಡೆಯಿಂದ ಸಾಧ್ಯವಾಗುವುದಿಲ್ಲ.

ಯೊಸಮೆಟಿ ಜಲಪಾತ

ಅಲ್ಲಿಂದ ಮುಂದಕ್ಕೆ ಹೋಗುವುದಿತ್ತು..Vernal Fall ಕಡೆಗೆ. ಮಗಳು ಮತ್ತು ಅವಳ ಗೆಳತಿ, ಅವರ ಪ್ರೀತಿಯ ಸೈಕ್ಲಿಂಗ್ ಹೋಗಲು ನಿರ್ಧರಿಸಿ, ಕಾರು ಪಾರ್ಕಿಂಗ್ ಪಕ್ಕದಲ್ಲಿದ್ದ ಬಾಡಿಗೆ ಸೈಕಲಲ್ಲಿ ಸುತ್ತಾಡಲು ಹೊರಟರು. ಮಗುವನ್ನು, ಅಳಿಯ ಬಟ್ಟೆಯ ಜೋಲಿಯಲ್ಲಿ(Sling) ಮೈಗೆ ಸುತ್ತಿಕೊಂಡು ತಯಾರಾದ. ನಾವು ಮೂರು ಮಂದಿ, ವಸಂತ ಸದೃಶ (ವರ್ನಲ್) ಜಲಪಾತದತ್ತ ಪಾರ್ಕಿನ ಬಸ್ಸಿನಲ್ಲಿ ಹೊರಟೆವು. ಹತ್ತು ನಿಮಿಷಗಳ ಪ್ರಯಾಣದ ಬಳಿಕ, ಜಲಪಾತಕ್ಕೆ ಹೋಗುವ ಕಾಲುದಾರಿ ಪಕ್ಕ ನಮ್ಮನ್ನು ಇಳಿಸಲಾಯಿತು. ವಾಹನವು ಜಲಪಾತದ ಬಳಿಗೆ ಹೋಗುವುದಿಲ್ಲವಾದ್ದರಿಂದ ನಾವು ಒಂದು ಮೈಲಿ ನಡೆಯಬೇಕಿತ್ತು.  ಸರಿ.. ಉತ್ಸಾಹದಿಂದ ನಮ್ಮ ನಡಿಗೆ ಪ್ರಾರಂಭವಾಯ್ತು… ಜೊತೆಗೆ ಅಗತ್ಯದ ಸಾಮಾನುಗಳ ದೊಡ್ಡ ಬ್ಯಾಗು ಸಹಿತ, ಪುಟ್ಟ ಮಗುವಿನೊಂದಿಗೆ.

ಕಲ್ಲು ಹಾಸಿನ ಚಂದದ ಕಾಲುದಾರಿಯಲ್ಲಿ ನೂರಾರು ಜನರು ಹೋಗಿ ಬರುತ್ತಿದ್ದರೂ, ಒಂದಿನಿತೂ ಕಸವಿಲ್ಲ. ಕಂಡವರೆಲ್ಲಾ ನಗುತ್ತಾ “ಹಾಯ್..” ಎನ್ನುವವರೇ. ಅವರ ಬಳಿ, “ಜಲಪಾತಕ್ಕೆ ಇನ್ನೆಷ್ಟು ದೂರವಿದೆ?” ಎಂದು ಕೇಳಿದರೆ, “ಇಲ್ಲೇ ಹತ್ರ” ಎನ್ನುವ ಉತ್ತರವನ್ನು ಪಡೆಯುತ್ತಾ, ಆ ಏರು ರಸ್ತೆಯಲ್ಲಿ ಎಷ್ಟು ನಡೆದರೂ ಜಲಪಾತ ಬಿಡಿ, ಅದರ ಸದ್ದೂ ಕೇಳಿಸಲಿಲ್ಲ. ದೂರದಲ್ಲಿರುವ ಬೆಟ್ಟಗಳಲ್ಲಿ  ಪುಟ್ಟ ಪುಟ್ಟ ಜಲಪಾತಗಳು, ಅಕ್ಕ ಪಕ್ಕದಲ್ಲೇ ಜುಳು ಜುಳು ಹರಿಯುವ ಹಲವಾರು ತೊರೆಗಳು, ನಡೆಯುತ್ತಿದ್ದ ನಮಗೆ ಹುಮ್ಮನಸ್ಸನ್ನೀಯುತ್ತಿದ್ದುವು.  ಬಾಯಾರಿದಾಗ, ಕೈಯಲ್ಲಿದ್ದ ಜ್ಯೂಸ್ ಬಾಟಲಿ ಖಾಲಿ ಮಾಡುತ್ತಾ, ಬ್ಯಾಗಿನಲ್ಲಿದ್ದ ಬಿಸ್ಕೆಟ್  ಚಪ್ಪರಿಸುತ್ತಾ ಅಂತೂ ಅರ್ಧ ತಾಸಿನಲ್ಲಿ ನೀರಿನ ಭೋರ್ಗರೆತದ ಸದ್ದು ಕೇಳಿದಾಗ ..”ಅಬ್ಬ.. ಜಲಪಾತ ಬಂತು!” ಎಂದು ಖುಷಿ ಪಟ್ಟರೆ..ಅದು ಜಲಪಾತವಾಗಿರದೆ ಅದರಿಂದ ಕೆಳಗೆ ಹರಿದು, ಕಲ್ಲಿನೆಡೆಯಲ್ಲಿ ಧುಮುಕಿ ಸಾಗುವ ನೀರಿನ ತೊರೆಯ ಸದ್ದಾಗಿತ್ತು. ಅಲ್ಲೇ ಇದ್ದ ಸೇತುವೆ ಕೆಳಗಡೆ, ದಟ್ಟ ಕಾಡಿನ ನಡುವಿನ ನೀರ ಹರಿವಿನ ಸುಂದರ ನೋಟ ಮರೆಯುವಂತೆಯೇ ಇಲ್ಲ. ಮುಂದೆ ಹತ್ತು ನಿಮಿಷಗಳಲ್ಲಿ  ನಮ್ಮ ಕಣ್ಮುಂದೆ ಇತ್ತು.. ಕೊರಕಲಿನ ಮಧ್ಯೆ ಬಿಳಿ ನೊರೆ ಚೆಲ್ಲುತ್ತಾ ಧುಮುಕುತ್ತಿರುವ ಅಗಾಧ ಜಲರಾಶಿ!

ಅದೇನೂ ಬಹಳ ಎತ್ತರದಿಂದ ಬೀಳುತ್ತಿರಲಿಲ್ಲವಾದ್ದರಿಂದ, ಇದರಲ್ಲೇನು ವಿಶೇಷತೆಯಿದೆ ಎಂದು ನನಗನಿಸಿದ್ದು ಸುಳ್ಳಲ್ಲ. ಆದರೆ ಬಳಿ ಬಂದಾಗ ಅದರ ಅಗಾಧತೆ ಅರಿವಾಯಿತು. ಈ ಜಲಪಾತದ ಎತ್ತರವು ಸುಮಾರು 96ಮೀ (317ಅಡಿ) ಮಾತ್ರವಾದರೂ, ಅದರಲ್ಲಿ ಹರಿಯುವ ನೀರಿನ ರಭಸವು, ಯೊಸಮಿಟಿ ಯಲ್ಲಿರುವ ಎಲ್ಲಾ ಜಲಪಾತಗಳಿಗಿಂತ ಅತಿ ಹೆಚ್ಚು.. ಇದುವೇ ಇದರ ಆಕರ್ಷಣೆ! ಅಲ್ಲಿ ಪ್ರವಾಸಿಗರ ಅನುಕೂಲತೆಗಾಗಿ ಮರಗಳ ಸುತ್ತಲೂ ಸುಂದರವಾದ ಕಟ್ಟೆ ಕಟ್ಟಿ, ದಣಿವಾರಿಸುವ ವ್ಯವಸ್ಥೆಯ ಜೊತೆಗೆ, ಕುಡಿಯುವ ನೀರು, ಕಸದ ಡಬ್ಬಗಳು, ಶೌಚಾಲಯ, ಹೀಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವರು. ಇಲ್ಲಿಂದ ಮೇಲಕ್ಕೇರಿ, ಜಲಪಾತದ ಮೇಲ್ಭಾಗವನ್ನು ತಲುಪಲು ಅನುಕೂಲವಾಗುವಂತೆ,  ಜಲಪಾತದ ಪಕ್ಕದಲ್ಲಿಯೇ ಹಾದುಹೋಗುವ, ಒಮ್ಮೆಗೆ ಒಬ್ಬರು ಮಾತ್ರ ನಡೆದಾಡಬಹುದಾದಂತಹ ಕೊರಕಲು ಕಲ್ಲಿನ ದಾರಿ.. ಅಕ್ಕಪಕ್ಕಗಳಲ್ಲಿ ಕೈಯಾಧಾರಕ್ಕಾಗಿ ದಪ್ಪನೆಯ, ಬಲವಾದ ಕಬ್ಬಿಣದ ಸಲಾಕೆಗಳನ್ನು ಅಳವಡಿಸಲಾಗಿದೆ.  ನಡೆದುಬಂದ ಆಯಾಸದಿಂದಾಗಿ  ಮೇಲೇರಲು ಆಗಲಾರದೆಂದುಕೊಂಡರೂ, ನನಗೇನೋ ಹೋಗಬೇಕೆಂಬ ಉತ್ಸಾಹ… ಅದಕ್ಕೆ ಅಳಿಯನ ಪ್ರೋತ್ಸಾಹ ಬೇರೆ. ನಮ್ಮವರು ಪುಟ್ಟ ಮಗುವಿನ ಜೊತೆ ಅಲ್ಲೇ ಉಳಿದು, ನಾವಿಬ್ಬರು  ಮೇಲೇರತೊಡಗಿದೆವು.

ವರ್ನಲ್ ಜಲಪಾತ

ನೀರು ಕೆಳಗೆ ಬೀಳುವ ರಭಸಕ್ಕೆ, ದಾರಿ ತುಂಬಾ ನೀರು ಮತ್ತು ಕಲ್ಲಲ್ಲಿ ಹಾವಸೆ ತುಂಬಿ ಜಾರುತ್ತಿತ್ತು. ಆಗಲೇ ನಾವೂ ಒದ್ದೆಯಾಗಿ ಬಿಟ್ಟಿದ್ದೆವು. ಅದರ ಸದ್ದಿಗೆ ಬೇರೇನೂ ಕೇಳಲಾರದಂತಾಗಿತ್ತು. ಹದಿನೈದು ನಿಮಿಷ ಏರುವುದರೊಳಗಾಗಿ , ಮುಂದಕ್ಕೆ ಹೆಜ್ಜೆ  ಇಡಲಾಗದಂತೆ, ನೀರಿನ ಜೊತೆಗೆ ರಭಸದ ಗಾಳಿಯು ನನ್ನನ್ನು ಕೊಳ್ಳದೆಡೆಗೆ ಸೆಳೆಯುವ ಅನುಭವವಾಗತೊಡಗಿತು! ಮುಖವು, ರಪ್ಪನೆ ರಾಚುತ್ತಿದ್ದ ನೀರಿನಿಂದ ನೋಯತೊಡಗಿತು.. ಜೊತೆಗೆ ಭಯವೂ ಆಯಿತೆನ್ನಿ. ಆದರೂ ಆ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುವುದು ಅಪ್ಯಾಯಮಾನವಾಗಿದ್ದುದು ಮಾತ್ರ ಸುಳ್ಳಲ್ಲ. ಉತ್ಸಾಹೀ ಯುವಕ ಯುವತಿಯರು  ಮೇಲಕ್ಕೆ ಹೋಗುವುದನ್ನು ನೋಡುತ್ತಾ, ಪೆಚ್ಚಾಗಿ ನಿಂತಿದ್ದೇ ಬಂತು.  ಅಳಿಯ ನನ್ನ ಸ್ಥಿತಿ ಕಂಡು, ಹಿಂತಿರುಗಲು ಸಲಹೆನ್ನಿತ್ತ. ಕೆಳಗಡೆ ತಾತ, ಮೊಮ್ಮಗಳದ್ದು ಏನು ಕಥೆಯೋ ಏನೋ ಎನ್ನುವ ಯೋಚನೆಯೂ ಇತ್ತು…   ಚಾರಣಪ್ರಿಯ ಅಳಿಯ ಮುಂದಕ್ಕೆ ಸಾಗಿದ.

ಕೆಳಗಡೆ ಬರುತ್ತಿರುವಾಗಲೇ ಮಗುವಿನ ಅಳು ಕೇಳುತ್ತಿದೆ.. ಏನೂ ತಿಳಿಯದ ತಾತ ಸಮಾಧಾನ ಮಾಡಲು ಯತ್ನಿಸಿದಷ್ಟು, ಅವಳ ಅಳು ತಾರಕಕ್ಕೇರಿತ್ತು…ಹಸಿವಿನಿಂದ. ಅವಳಮ್ಮನೂ ಜೊತೆಯಲ್ಲಿ ಇಲ್ಲದುದರಿಂದ,  ಕಾರು ನಿಲ್ಲಿಸಿದ ತಾಣಕ್ಕೆ ಆದಷ್ಟು ಬೇಗನೆ ಹಿಂತಿರುಗಬೇಕಿತ್ತು.  ನಾವು ಅಳಿಯನಿಗಾಗಿ ಕಾತರದಿಂದ ಕಾದು ಕುಳಿತೆವು. ಸ್ವಲ್ಪ ಹೊತ್ತಿನಲ್ಲಿ ಬಂದ ಅಳಿಯನ ಜೊತೆ ಅಳುವ ಮಗುವನ್ನು ಕಳುಹಿಸಿಕೊಟ್ಟು, ನಾವು ಇನ್ನೇನು ಹೊರಡಬೇಕು… ಅಷ್ಟರ ತನಕ ಅಲ್ಲೇ ಇದ್ದ ನನ್ನವರು, ಒಂದೆರಡು ನಿಮಿಷಗಳಲ್ಲಿ ಜನರ ಮಧ್ಯೆ ನಾಪತ್ತೆಯಾಗಿಬಿಟ್ಟರು. ನಾನು ಬ್ಯಾಗಿನ ಸಮೇತ  ಅಲ್ಲಿದ್ದ ಕಟ್ಟೆಯಲ್ಲಿ, ಅವರು ಬರುವರೆಂದು ಕಾದುಕುಳಿತೆ. ಸಮಯ ಓಡುತ್ತಿತ್ತು. ಎಷ್ಟು ಹೊತ್ತಾದರೂ ಕಾಣದಾಗ ಗಾಬರಿಯಾಯಿತು! ಆದರೆ ಯಾರಲ್ಲಿ ಕೇಳಲಿ…ಯಾರಲ್ಲಿ ಹೇಳಲಿ?? ಮಂಕಾಗಿ, ನಮ್ಮ ಗುಂಪಿನವರು ಯಾರಾದರೂ ಇರುವರೇನೋ ಎಂದು ಹುಡುಕಾಡಿದರೆ, ಯಾರೂ ಕಾಣ್ತಿಲ್ಲ! ಹದಿನೈದು ನಿಮಿಷ, ಹದಿನೈದು ಗಂಟೆಯಾಗಿತ್ತು! ಒಂಟಿಯಾಗಿ, ಅಪರಿಚಿತರ ನಡುವೆ ಅಸಹಾಯಕಳಾಗಿ ನಿಂತಿರುವ ಬೇಸರದಿಂದ ದು:ಖ ಉಕ್ಕಿ ಬರುವಂತಾದರೂ ತಡೆದುಕೊಂಡು, ಬ್ಯಾಗ್ ಸಮೇತ ವೇಗವಾಗಿ ಒಬ್ಬಳೇ ನಡೆದೆ…ಕಾರಿನ ಬಳಿಗೆ. ನನ್ನವರನ್ನು ಕಾರಿನ ಬಳಿಯಲ್ಲಿ ಕಂಡು ಸಮಾಧಾನವಾದರೂ, ಅಲ್ಲಿ ಎಲ್ಲರೂ ನಾನೆಲ್ಲಿರುವೆನೆಂದು ಗಾಬರಿಯಿಂದ ಹುಡುಕಲು ಹೊರಟಿದ್ದರು. ನನ್ನವರು, ನಾನು ಮೊದಲೇ ಹೋಗಿರಬಹುದೆಂದು ತಿಳಿದು ಕಾರಿನ ಬಳಿ ಬಂದು ನಾನು ಅಲ್ಲಿಯೂ ಇಲ್ಲದಾಗ ಗಾಬರಿಗೊಂಡಿದ್ದರು. ಅಂತೂ ಜಲಪಾತ ದರ್ಶನದ ಸುಂದರ ಅನುಭವವು ಇದರೊಂದಿಗೆ ಸೇರಿಹೋಗಿ, ಇನ್ನಿಲ್ಲದಂತೆ ಮಾಯವಾಯ್ತು!

ಅದಾಗಲೇ ಮಧ್ಯಾಹ್ನ ಗಂಟೆ ಎರಡು.. ಎಲ್ಲರೂ ಹೊಟ್ಟೆ ತಣಿಸಲು ಕಾತರರಾಗಿದ್ದೆವು. ಊಟಕ್ಕಾಗಿ ತೊರೆಯ ಪಕ್ಕದ ಜಾಗವನ್ನು ಹುಡುಕುತ್ತಾ ಕಾರಲ್ಲಿ ಸಾಗುವಾಗಲೇ, ಮಾರ್ಗ ಮಧ್ಯೆ ಕಾಣಿಸಿತು….ಏನದು..??  

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35187

ಮುಂದುವರಿಯುವುದು….

–ಶಂಕರಿ ಶರ್ಮ, ಪುತ್ತೂರು.  

6 Responses

 1. ಅಮೆರಿಕದ ಪ್ರವಾಸ ಕಥನದಲ್ಲಿ ಜಲಪಾತದ ವರ್ಣನೆ ಅನುಭವದ ಅಭಿವ್ಯಕ್ತಿ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಮೇಡಂ.

  • . ಶಂಕರಿ ಶರ್ಮ says:

   ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.

 2. ನಯನ ಬಜಕೂಡ್ಲು says:

  Very nice

 3. Dr Krishnaprabha M says:

  ಜಲಪಾತದ ದೃಶ್ಯ ನಮ್ಮ ಕಣ್ಣ ಮುಂದೆಯೇ ಇದೆ ಅಂದುಕೊಳ್ಳುವಂತಿದೆ ನಿಮ್ಮ ಸುಂದರ ವರ್ಣನೆ

 4. Padma Anand says:

  ಸುಂದರ ಜಲಪಾತದ ಸೊಬಗನ್ನು ಸವಿಯುತ್ತಲೇ ಪ್ರವಾಸದಲ್ಲಿ ಉಂಟಾಗಬಹುದಾದ ಗಲಿಬಿಲಿಗಳನ್ನೂ ರಸವತ್ತಾಗಿ ಕಟ್ಟಿಕೊಟ್ಟಿದ್ದೀರಿ. ಅಭಿವಂದನೆಗಳು ನಿಮಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: