ವಿಶ್ವ ಮಲೇರಿಯಾ ದಿನ-ಎಪ್ರಿಲ್ 25

Share Button

ಸೊಳ್ಳೆ ಎನ್ನುವ ಪುಟ್ಟ ಕೀಟವು ನಮ್ಮ ದೊಡ್ಡದಾದ ಶರೀರವನ್ನು ಸಣ್ಣದಾಗಿ ಒಮ್ಮೆ ಕಚ್ಚಿಬಿಟ್ಟರೂ ಸಾಕು ದದ್ದು, ನವೆ ಗ್ಯಾರಂಟಿ! ಹಳ್ಳಿಯಲ್ಲೇ ಹುಟ್ಟಿ ಬೆಳೆದ ಮಂದಿಗೆ, “ಇದೇನು ಮಹಾ…ದಿನಕ್ಕೆ ಸಾವಿರ ಕಚ್ಚುತ್ತವೆ ಬಿಡಿ, ನಮಗೇನೂ ಆಗೋದೇ ಇಲ್ಲಪ್ಪ!” ಎಂದು ಕೈ ಝಾಡಿಸಿ ಬಿಡಬಹುದು. ಪ್ರಕೃತಿಯ ಶುದ್ಧ ವಾತಾವರಣದಲ್ಲಿರುವ ಸೊಳ್ಳೆಗಳು ಅಪಾಯಕಾರಿ ಅಲ್ಲದಿರಬಹುದು. ಆದರೆ, ಎಲ್ಲೆಲ್ಲೂ ಕೊಳಚೆ ತುಂಬಿರುವ ನಗರ ಪ್ರದೇಶ, ಕೊಳೆಗೇರಿಗಳು, ಸುತ್ತುಮುತ್ತಲು ಗಲೀಜು ನೀರು ತುಂಬಿರುವ ಸ್ಥಳಗಳಲ್ಲಿ ಉಗಮವಾಗುವ ಅನಾಫಿಲಿಸ್ ಹೆಸರಿನ ಸೊಳ್ಳೆಗಳು …ಅದರಲ್ಲೂ ಹೆಣ್ಣು ಸೊಳ್ಳೆಗಳು,  ಮಲೇರಿಯಾಕಾರಕ ಪ್ಲಾಸ್ಮೋಡಿಯಂ ಪರಾವಲಂಬಿ ರೋಗಾಣುಗಳನ್ನು ತಮ್ಮೊಡಲಲ್ಲಿ ಹೊತ್ತೊಯ್ದು, ಅವುಗಳು ಇತರ ಪ್ರಾಣಿಗಳಿಗೆ ಕಚ್ಚಿದಾಗ ರೋಗಾಣುಗಳು ನೇರವಾಗಿ ಪ್ರಾಣಿಯ ರಕ್ತವನ್ನು ಸೇರುತ್ತವೆ. ಹೀಗೆ, ಮುಂದಕ್ಕೆ ರೋಗ ಪೀಡಿತ ಜೀವಿಯಿಂದ ಸೊಳ್ಳೆಗಳ ಮೂಲಕವೇ ಹರಡುವ ಈ ಭಯಾನಕ ವ್ಯಾಧಿಗೆ ಹೆಚ್ಚಾಗಿ ಪುಟ್ಟ ಮಕ್ಕಳೇ ಬಲಿ ಪಶುಗಳು.

ವಿಪರೀತ ತಲೆನೋವು, ಬಿಟ್ಟು ಬಿಟ್ಟು ಬರುವ ಚಳಿಜ್ವರ, ವಾಂತಿ, ಬೇಧಿ, ಇದರಿಂದಾಗಿ ಶರೀರ ನಿರ್ಜಲೀಕರಣಗೊಳ್ಳುವಿಕೆ, ಸುಸ್ತು, ಶರೀರ ಹಳದಿ ಬಣ್ಣಕ್ಕೆ ತಿರುಗುವುದು…ಇವೆಲ್ಲವೂ ಸಾಮಾನ್ಯ ಲಕ್ಷಣಗಳಾದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಜೀವಹಾನಿ ತಪ್ಪದು. ಈ ದಿನಗಳಲ್ಲಿ ಡೆಂಗ್ಯು ಎಂಬ ಇದರ ಸಮೀಪ ಬಂಧು ಕೂಡಾ ಸೇರಿಕೊಂಡು ಜನರನ್ನು ಸತಾಯಿಸುತ್ತಿದೆ.

ಜಗತ್ತಿನಾದ್ಯಂತ ಸುಮಾರು 106 ರಾಷ್ಟ್ರಗಳಲ್ಲಿ 3.3ಶತಕೋಟಿ ಜನರು ಮಲೇರಿಯಾದ ಕಬಂಧ ಬಾಹುಗಳಿಗೆ ಸಿಲುಕಿ ನರಳುತ್ತಿದ್ದಾರೆ…ಲಕ್ಷಗಟ್ಟಲೆ ಸಾವುಗಳು ಸಂಭವಿಸುತ್ತಿವೆ. ಹೆಚ್ಚಾಗಿ, 95% ಸಾವುಗಳು, ಆಫ್ರಿಕಾ ಖಂಡದ ಬಹಳ ಹಿಂದುಳಿದ ಘಾನಾ, ಕಾಂಬೋಡಿಯಾ, ನೈಜೀರಿಯಾ, ಕೇನ್ಯಾಗಳಂತಹ ದೇಶಗಳಲ್ಲಿನ 5 ವರ್ಷ ವಯಸ್ಸಿಗಿಂತಲೂ ಕೆಳಗಿನ ಮಕ್ಕಳಲ್ಲೇ ಸಂಭವಿಸುತ್ತಿರುವುದು ಕಂಡುಬರುತ್ತಿದೆ. ಆಫ್ರಿಕಾದಲ್ಲಿ ಮಲೇರಿಯಾ ಪಿಡುಗನ್ನು ಎದುರಿಸುವ ನಿಟ್ಟಿನಲ್ಲಿ  ಪೂರ್ತಿಖಂಡದಾದ್ಯಂತ ನಡೆಯುತ್ತಿರುವ ಪ್ರಯತ್ನಗಳಿಂದ ವಿಶ್ವ ಮಲೇರಿಯಾ ದಿನವು ಹೊರಹೊಮ್ಮಿತು. 2007ರ ಮೇ ತಿಂಗಳಿನಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿಯು ತನ್ನ 60ನೇ ಅಧಿವೇಶನದಲ್ಲಿ ವಿಶ್ವ ಮಲೇರಿಯಾ ದಿನವನ್ನು ಜಗತ್ತಿನಾದ್ಯಂತ ಆಚರಿಸಲು ನಿರ್ಣಯ ಕೈಗೊಂಡಿತು.

ಈ ದಿನಗಳಲ್ಲಿ; ಮಲೇರಿಯಾ ರೋಗದ ಬಗ್ಗೆ ಜನ ಸಾಮಾನ್ಯರಿಗೆ ಸರಿಯಾದ ತಿಳುವಳಿಕೆ, ಅದರ ತಡೆಗಟ್ಟುವಿಕೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು, ಅದರ ನಿಯಂತ್ರಣ, ಚಿಕಿತ್ಸೆ ಹಾಗೂ ಸಮುದಾಯ ಆಧಾರಿತ ಚಟುವಟಿಕೆಗಳನ್ನು ವರ್ಷಪೂರ್ತಿ ಸರಿಯಾದ ಅನುಷ್ಠಾನದ ಮಾಹಿತಿಗಳ ಜೊತೆ ಹರಡುವುದು ಇತ್ಯಾದಿಗಳು ಇದರ ಮೂಲ ಉದ್ದೇಶವಾಗಿದೆ. ಇದರ ಮೊದಲೇ , ಆಫ್ರಿಕಾದಲ್ಲಿ 2001ರಲ್ಲಿ ಪ್ರಾರಂಭವಾದ ಆಫ್ರಿಕಾ ಮಲೇರಿಯಾ ದಿನವನ್ನು ಎಪ್ರಿಲ್ 25ರಂದು ಆಚರಿಸಲಾಗಿತ್ತು. ಆದ್ದರಿಂದ ಅದೇ ದಿನವನ್ನೇ, ಅಂದರೆ,  ಪ್ರತೀ ವರ್ಷ ಎಪ್ರಿಲ್ 25ನೇ ತಾರೀಕಿನಂದು ಅಂತಾರಾಷ್ಟ್ರೀಯ ಆಚರಣೆಯನ್ನಾಗಿ ವಿಶ್ವ ಮಲೇರಿಯಾ ದಿನವನ್ನು ಆಚರಿಸುವುದರೊಂದಿಗೆ ಮಲೇರಿಯಾದ ಮಹಾ ಪಿಡುಗನ್ನು ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯಲಾರಂಭಿಸಿವೆ. ಅಲ್ಲದೆ ಏಷ್ಯಾ, ಲ್ಯಾಟಿನ್ ಅಮೆರಿಕ, ಮಧ್ಯ ಪ್ರಾಚ್ಯ, ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಹೆಚ್ಚು ಕಂಡುಬರುವ ಈ ರೋಗಕ್ಕಾಗಿ,  ವೈದ್ಯಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಸೊಳ್ಳೆಗಳ ಮೂಲಕ ಹರಡುವ ರೋಗದ ಮೇಲೆ ಲಸಿಕೆ ಸಂಶೋಧನೆ ನಡೆದಿದ್ದು, ಈಗಾಗಲೇ ಲಸಿಕಾ ಅಭಿಯಾನವು, ರೋಗವು ಅತಿ ಹೆಚ್ಚು ಕಾಣಸಿಗುವ ಆಫ್ರಿಕದ ರಾಷ್ಟ್ರಗಳಲ್ಲಿ ಐದು ವರ್ಷಗಳ ಕೆಳಗಿನ ಪುಟ್ಟ ಮಕ್ಕಳಿಗೆ ನೀಡುವ ಮೂಲಕ ಪ್ರಾರಂಭವಾಗಿದೆ.

ನಮ್ಮ ದೇಶದಲ್ಲಿ ಮಲೇರಿಯಾಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್, ಅತ್ಯಂತ ಪ್ರಭಾವಶಾಲಿ ಔಷಧಿಯಾಗಿದೆ. ಇದನ್ನು ಪಡೆಯುವ ಮೂಲವಸ್ತು ಸಿಂಕೋನಾ ಮರದ ತೊಗಟೆಯಾಗಿದೆ. ಇದರಿಂದ ಪಡೆಯುವ ಕ್ವಿನೈನ್ ಸಲ್ಫೇಟ್, ಬಳಕೆಯಲ್ಲಿರುವ ಎಲ್ಲಾ ಔಷಧಿಗಳಿಗಿಂತ ಅತಿ ಕಡಿಮೆ ಅಡ್ಡಪರಿಣಾಮ ಹೊಂದಿರುವುದು ಇದರ ಪರಿಣಾಮಕಾರಿ ಬಳಕೆಗೆ ಪೂರಕವಾಗಿದೆ. ಸಿಂಕೋನಾ ಗಿಡಗಳನ್ನು ಹಿಮಾಲಯದ ತಪ್ಪಲಾದ ಡಾರ್ಜಿಲಿಂಗ್ ಗೆ 1864ರಲ್ಲಿ ಬ್ರಿಟಿಷರಿಂದ ತರಲ್ಪಟ್ಟಿದ್ದು, ಸುಮಾರು 6,900ಎಕರೆ ಪ್ರದೇಶದಲ್ಲಿ ಇಂದಿಗೂ ಬೆಳೆಯಲಾಗುತ್ತಿದೆ.

“ಮಲೇರಿಯಾ ರೋಗದ ಹೊರೆಯನ್ನು ಕಡಿಮೆ ಮಾಡಲು ಮತ್ತು ಜೀವ ಉಳಿಸಲು ನಾವೀನ್ಯತೆಯನ್ನು ಬಳಸಿಕೊಳ್ಳಿ”* ಎನ್ನುವ ಈ ವರ್ಷದ ಧ್ಯೇಯವಾಕ್ಯವು, ರೋಗ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆಗೆ ಸಾಕಷ್ಟು ಒತ್ತುನೀಡಿದೆ. ಪ್ರಪಂಚದಾದ್ಯಂತ ಇಂತಹ ಕೆಲಸಗಳು ನಡೆಯುತ್ತಿದ್ದರೂ, ಮೂಲಭೂತವಾಗಿ ಬೇಕಾಗಿರುವ ಇದರ ಬಗೆಗಿನ ಅರಿವು ಮೂಡಿಸುವ ಕ್ರಮಗಳು ಹಾಗೂ ಸಂಪೂರ್ಣ ಸ್ವಚ್ಛತೆಯ ಕಡೆಗೆ ಜನಸಾಮಾನ್ಯರ ಗಮನಕ್ಕಾಗಿ ಸರಿಯಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಿಕೆ ಅತ್ಯಗತ್ಯ.  ಮಲೇರಿಯಾ ಸೊಳ್ಳೆಗಳ ಉಗಮಸ್ಥಾನವಾದ, ದಿನಗಟ್ಟಲೆ ಹರಿವಿಲ್ಲದೆ ನಿಂತ ನೀರು ಅಥವಾ ಅಲ್ಲಲ್ಲಿ ಸಂಗ್ರಹವಾಗಿರುವ ಅನಗತ್ಯ ನೀರಿಗೆ ಮುಕ್ತಿ ನೀಡಬೇಕಿದೆ. ಜನಸಂಖ್ಯಾ ನಿಯಂತ್ರಣವೂ ಇದರಲ್ಲಿ ತನ್ನ ಪಾಲನ್ನು ಬೇಡುತ್ತದೆ.

ಪೂರ್ಣರೂಪದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ, ಪ್ರತಿಯೊಂದು ಹಂತದಲ್ಲೂ ಒಗ್ಗೂಡಿ ನಡೆಯಬೇಕಿದೆ. ಈಗಿನ ದಿನಗಳಲ್ಲಿ, ದಿನಕ್ಕೊಂದು ಹೊಸ ರೋಗಗಳ ಉತ್ಪತ್ತಿಯಾಗುತ್ತಿರುವುದು ಮನುಕುಲವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ಸ್ವಚ್ಛ, ಸ್ವಸ್ಥ,ಆರೋಗ್ಯವಂತ ಮನುಕುಲವು ಬೆಳೆಯುವಂತಾಗಲಿ.‌‌‌.. ಬೆಳಗುವಂತಾಗಲಿ ಎಂದು ಹಾರೈಸೋಣವಲ್ಲವೇ…?

ಶಂಕರಿ ಶರ್ಮ, ಪುತ್ತೂರು.

5 Responses

 1. ಮಲೇರಿಯಾ ರೋಗದ ಬಗ್ಗೆ ಉತ್ತಮ ಮಾಹಿತಿ ಹಾಗೂ ಎಚ್ಚರಿಕೆ ಯ ಸಂದೇಶವನ್ನು ಲೇಖನ ದ ಮೂಲಕ ಕೊಟ್ಟಿರುವ ನಿಮಗೆ ಧನ್ಯವಾದಗಳು ಮೇಡಂ.

  • . ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ಮೇಡಂ.

 2. ಕೆ. ರಮೇಶ್ says:

  ಉತ್ತಮ ಮಾಹಿತಿ ಇರುವ ಲೇಖನ. ಧನ್ಯವಾದಗಳು ಮೇಡಂ.

 3. ನಯನ ಬಜಕೂಡ್ಲು says:

  ಮಾಹಿತಿಪೂರ್ಣ

 4. Padma Anand says:

  ಮಲೆರಿಯಾ ಕುರಿತ ಎಲ್ಲ ವಿವರಗಳನ್ನು ಒಳಗೊಂಡಿರುವ ಲೇಖನ ಮಾಹಿತಿಪೂರ್ಣವಾಗಿಯೂ ಎಚ್ಚರಿಸುವಂತೆಯೂ ಉಪಯುಕ್ತವಾಗಿ ಮೂಡಿ ಬಂದಿದೆ.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: