ಕೈಕೇಯಿ-ಒಂದು ಸ್ವಗತ
ನಾನು ಕೈಕೇಯಿ. ನಾನಾರೆಂದು ಲೋಕಕ್ಕೇ ತಿಳಿದಿದೆ. ದಶರಥ ಮಹಾರಾಜನ ಕಿರಿಯ ಅಚ್ಚುಮೆಚ್ಚಿನ ರಾಣಿ. ನಾನು ಸುಂದರಿ, ಬುದ್ಧಿವಂತೆ ಹಾಗೂ ಜಾಣೆ ಎಂದು ಪ್ರಸಿದ್ಧಳಾಗಿದ್ದೆ. ಆದರೇನು ನಾನೋರ್ವ ನತದೃಷ್ಟೆ. ರಾಮಾಯಣದ ಕೊನೆಯವರೆಗೂ ಎಲ್ಲರಿಂದ ಹಂಗಿಸಿಕೊಂಡ ಪಾಪಿ ಎಂದರೆ ಅತಿಶಯೋಕ್ತಿಯಲ್ಲ. ನಾನು ಕಳಂಕಿತಳು, ರಾಮಾಯಣದ ಸೂತ್ರಧಾರಿಣಿ, ಯುದ್ಧ ಪ್ರಚೋದಿಸಿದವಳು, ದಶರಥನ ಸಾವಿಗೆ ನಾನೇ ಕಾರಣ ಎಂದು ಎಲ್ಲರೂ ನನ್ನ ಕಡೆ ಬೊಟ್ಟು ಮಾಡಿ ನನ್ನನ್ನು ಖಳನಾಯಕಿಯಂತೆ ಬಿಂಬಿಸಿದ್ದಾರೆ. ನಾನೆಲ್ಲವನ್ನೂ ನುಂಗಿ, ಸಹಿಸಿ, ಮೌನವಾಗಿ ನನ್ನ ಕರ್ತವ್ಯ ಮಾಡಿದೆ ಅಷ್ಟೇ ಎಂಬ ಸಮಾಧಾನ ನನಗಿದೆ.
ದಶರಥ ಮಹಾರಾಜ ಶಂಭಾಸುರನ ಜೊತೆಗೆ ಯುದ್ಧಕ್ಕೆ ಹೊರಟಾಗ ನಾನು ರಾಜನ ರಥದ ಸಾರಥ್ಯ ವಹಿಸಿದ್ದೆ. ಕಾರಣ ನಾನು ಅದರಲ್ಲಿ ನಿಷ್ಣಾತಳಾಗಿದ್ದೆ. ಯುದ್ಧದಲ್ಲಿ ರಥದ ಚಕ್ರದ ಅಚ್ಚು ಕಳಚಿ ಇನ್ನೇನು ರಥ ಬೀಳಬೇಕು ಎಂದಾಗ ನಾನು ನನ್ನ ಕೈಬೆರಳಿಟ್ಟು ಚಾಕಚಕ್ಯತೆಯಿಂದ ಯುದ್ಧ ಮುಂದುವರಿಸಿ ಶಂಭಾಸುರನ ವಧೆಗೆ ಅನುವು ಮಾಡಿಕೊಟ್ಟೆ. ರಾಜ ಬಹಳ ಸಂತುಷ್ಟನಾಗಿ ತಕ್ಷಣ ನನಗೆ ಎರಡು ವರ ದಯಪಾಲಿಸಿದ್ದು ಎಲ್ಲರಿಗೂ ಗೊತ್ತು. ನಾನದನ್ನು ಯಾವಾಗಲಾದರೂ ಕೇಳುತ್ತೇನೆ ಎಂದು ಮಾತು ಮುಗಿಸಿದೆ. ನನಗಾಗ ಅದರ ಅಗತ್ಯವಾಗಲೀ, ಇಚ್ಛೆಯಾಗಲೀ ಇರಲಿಲ್ಲ.
ಇಷ್ಟರಲ್ಲಿ ದಶರಥ ಮಹಾರಾಜ ಕಾಡಿನ ಬೇಟೆಗೆ ಹೋಗಿ ತನ್ನ ಶಬ್ಧವೇಧಿ ಚಾತುರ್‍ಯದಿಂದ ಬಿಟ್ಟ ಬಾಣ ಶ್ರವಣ ಕುಮಾರ ಎಂಬ ಬಾಲಕನಿಗೆ ಬಿತ್ತು. ನೀರು ತುಂಬುತ್ತಿದ್ದ ಬಿಂದಿಗೆಯ ಶಬ್ಧ ದಶರಥನಿಗೆ ಆನೆ ನೀರು ಕುಡಿಯುವ ಹಾಗೆ ಕೇಳಿಸಿತ್ತು. ನೋಡಿದಾಗ ಬಾಲಕನಿಗೆ ಬಾಣ ತಗುಲಿತ್ತು. ದಶರಥನಿಗೆ ನೀರನ್ನು ಕೊಟ್ಟು ತನ್ನ ಮುಪ್ಪಿನ ತಂದೆತಾಯಿಗೆ ನೀರು ಕುಡಿಸಬೇಕೆಂದು ಹೇಳಿ ಪ್ರಾಣಬಿಟ್ಟ. ದಶರಥ ನೀರನ್ನು ಕೊಟ್ಟು ವಿಷಯ ತಿಳಿಸಿದಾಗ ಅವರು ಪುತ್ರ ಶೋಕದಿಂದ ಗೋಳಾಡಿ ದಶರಥನಿಗೆ ನಿನಗೂ ನಮ್ಮ ಹಾಗೆಯೇ ಪುತ್ರಶೋಕದಿಂದ ಅಂತ್ಯ ಬರಲಿ ಎಂಬ ಶಾಪ ನೀಡಿ ಅಸುನೀಗುತ್ತಾರೆ.
ಖಿನ್ನನಾದ ದಶರಥನ ಸ್ಥಿತಿ ನೋಡಿ ನನಗೆ ಸಂಶಯ ಬಂದು ರಥದ ಸಾರಥಿ, ಅಂಗರಕ್ಷಕನನ್ನು ಗೌಪ್ಯವಾಗಿ ವಿಚಾರಿಸಿದಾಗ ಖಿನ್ನತೆಗೆ ಕಾರಣ ತಿಳಿದು ನನಗೆ ಆಘಾತವಾಯಿತು. ತಕ್ಷಣ ಅರಮನೆ ಜ್ಯೋತಿಷರನ್ನು ನನ್ನ ಕೋಶಕ್ಕೆ ಬರಮಾಡಿ ಎಲ್ಲರ ಜಾತಕ ಪರಿಶೀಲಿಸಲು ವಿನಂತಿಸಿದೆ. ಅವರು ಯಾವ ಮಕ್ಕಳಿಗೂ ತೊಂದರೆ ಇಲ್ಲ. ದೀರ್ಘಾಯುಷ್ಯವಿದೆ. ಇಬ್ಬರು ಮಕ್ಕಳು ರಾಜನಿಂದ ದೂರವಾಗಬಹುದು ಹಾಗೂ ಯಾರು ಸಿಂಹಾಸನದಲ್ಲಿರುವರೋ ಅವರು ಅಂತ್ಯ ಕಾಣುವ ಸಾಧ್ಯತೆ ಅಧಿಕ ಹಾಗೂ ಇದು 14 ವರ್ಷಗಳೊಳಗೆ ಆಗಬಹುದು ಎಂದು ಹೇಳಿದಾಗ ನನಗೆ ದಿಕ್ಕೇ ತೋಚದಾಯಿತು. ಪರಿಸ್ಥಿತಿಯ ತೀವ್ರತೆ ಅರಿವಾಯಿತು. ಎಲ್ಲರನ್ನು ಉಳಿಸುವ ಬಗೆ ಹೇಗೆ ಎಂದು ಯೋಚಿಸಿದಾಗ ಮಹಾರಾಜ ದಶರಥ ನೀಡಿದ ಎರಡು ವರ ನನ್ನ ರಕ್ಷಣೆಗೆ ಬರಬಹುದು ಎನಿಸಿತು. ನಾನು ತಕ್ಷಣ ಕಾರ್‍ಯಪ್ರವೃತ್ತಳಾದೆ. ದಶರಥನ ಸಾವು ನಿಶ್ಚಿತ. ರಾಮ ರಾಜನಾದರೆ ಅವನ ಸಾವು ನಿಶ್ಚಿತ. ದಶರಥನಿಗಿಂತ ರಾಮನ ಪ್ರಾಣಮುಖ್ಯ ಅನಿಸಿತು ನನಗೆ. ಇಬ್ಬರನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಏನಾದರೂ ಆದರೆ ನನ್ನ ಮಗ ಭರತನನ್ನು ನಾನು ಬಲಿಕೊಡಲು ತಯಾರಾಗಿದ್ದೆ. ಕಾರಣ ಸಣ್ಣ ಮಗುವಿನಿಂದಲೂ ರಾಮ ನನಗೆ ಅತ್ಯಂತ ಪ್ರಿಯ, ಯಾಕೋ ಗೊತ್ತಿಲ್ಲ. ಅವನಿಗೆ ಅವನಮ್ಮನಿಗಿಂತ ನಾನೇ ಹೆಚ್ಚು ಊಟ ಉಣಿಸಿದ ನೆನಪು. ಸರಿ, ದಶರಥನ ಬಳಿ ಎರಡು ವರ ಜ್ಞಾಪಿಸಿ ಅದನ್ನು ಈಡೇರಿಸಲು ಬೇಡಿದೆ. ರಾಮನಿಗೆ 14 ವರ್ಷ ವನವಾಸ, ನನ್ನ ಮಗ ಭರತನ ತಕ್ಷಣದ ಪಟ್ಟಾಭಿಷೇಕ. ಇದರಿಂದ ಎಲ್ಲ ಸರಿ ಹೋಗುವ ನಿರೀಕ್ಷೆ ನನ್ನದಾಗಿತ್ತು. ದಶರಥ ನನ್ನನ್ನು ಕ್ರೂರಿ ಎಂದ. ಮಗ ಭರತನಂತೂ ನನ್ನನ್ನು ಸ್ವಾರ್ಥಿ ಎಂದು ಹಂಗಿಸಿದ. ಅಯೋಧ್ಯೆಯ ಜನರಂತೂ ನನ್ನನ್ನು ಇಲ್ಲ ಸಲ್ಲದ ಮಾತುಗಳಿಂದ ಚುಚ್ಚಿದರು. ಆದರೂ ನಾನು ಸ್ವಲ್ಪವೂ ವಿಚಲಿತಳಾಗಲಿಲ್ಲ, ನಾನು ನನ್ನ ಪಟ್ಟು ಸಡಿಲಿಸಲಿಲ್ಲ. ದಶರಥನ ಪ್ರಾಣ, ರಾಮನ ಪ್ರಾಣ ಉಳಿಸುವ ಆಸೆ ನನ್ನದಾಗಿತ್ತು. ಭರತನನ್ನು ಪರಿಸ್ಥಿತಿಯ ಬಲಿಪಶು ಮಾಡಲು ನಿರ್ಧರಿಸಿದೆ. ಇಷ್ಟೆಲ್ಲ ಆದರೂ ಪ್ರಪಂಚ ಮಾತ್ರ ನನ್ನನ್ನು ಓರ್ವ ಖಳನಾಯಕಿಯಂತೆ ನೋಡಿದೆ, ನೋಡುತ್ತಿದೆ. ನನಗಂತೂ ಎರಡು ಅಮೂಲ್ಯ ಜೀವ ಉಳಿಸಿದ ಮಹದಾಸೆ ಈಡೇರಿದ ತೃಪ್ತಿ, ಸಂತೋಷ ಇದೆ.
ಈಗ ಹೇಳಿ ನಾನು ಮಾಡಿದ ತಪ್ಪಾದರೂ ಏನು? ನನಗೆ ಜಗತ್ತಿಗೆ ತಿಳಿಸುವ ಒಂದೇ ಒಂದು ಅವಕಾಶ ಸಿಗಲಿಲ್ಲ ಎಂಬ ಕೊರಗು ಇದೆ. ಆದರೆ ಅದಕ್ಕೆ ನಾನು ಬೇಸರಿಸುತ್ತಿಲ್ಲ. ಈಗಲಾದರೂ ಜಗತ್ತು ನನ್ನನ್ನು ಕ್ಷಮಿಸುವುದಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಆದರೆ ರಾಮ ಕಾಡಿಗೆ ಹೋಗಿ ರಾಕ್ಷಸರ ಕಾಟವನ್ನು, ರಾವಣ ಸಂಹಾರ ಮಾಡಿದ್ದನ್ನು ಮಹರ್ಷಿಗಳು ದೇವತೆಗಳು ಸುಪ್ರೀತರಾಗಿ ನನ್ನನ್ನು ಮನಸಾರೆ ವಂದಿಸಿದ್ದು ಮಾತ್ರ ನನ್ನ ಮನಸ್ಸಿಗೆ ಪೂರ್ಣ ಶಾಂತಿ ಹಾಗೂ ತೃಪ್ತಿ ನೀಡಿದೆ.
ಮೂಲ ಮತ್ತು ಪ್ರೇರಣೆ : ಆಧ್ಯಾತ್ಮ ರಾಮಾಯಣ
–ಕೆ. ರಮೇಶ್
ವಾವ್ ಅಪರೂಪದ ಮಾಹಿತಿಯನ್ನು ಅದ್ಯಾತ್ಮ ರಾಮಾಯಣದಿಂದ ಹೆಕ್ಕಿ ತೆಗೆದು.. ನಿರೂಪಿಸಿರುವ ಬರಹ ಕೈಕೇಯ ಸ್ವಗತ…ಸೊಗಸಾಗಿ ಮೂಡಿಬಂದಿದೆ.
ಧನ್ಯವಾದಗಳು ಸಾರ್
ಧನ್ಯವಾದಗಳು ಮೇಡಂ
ರಾಮಾಯಣದ ಖಳನಾಯಕಿಯಾಗಿ ಚಿತ್ರೀಕರಿಸಲ್ಪಡುವ ಕೈಕೇಯಿಯ ಮನದಾಳದ ಮಾತುಗಳಿಗೆ ರೂಪು ಕೊಟ್ಟ ಪರಿ ಅನನ್ಯ!
ಚೆನ್ನಾಗಿದೆ
ಚೆನ್ನಾಗಿ ದೆ ಸರ್
ಕೈಕೇಯಿಯ ಒಡಲಾಳದ ಭಾವಗಳನ್ನು ಖಳನಾಯಕಿಯೆಂದೇ ಬಿಂಬಿತವಾಗಿರುವ ಅವಳ ಬಗ್ಗೆ ಮರುಕ ಹುಟ್ಟಿಸುವ ಮಾತುಗಳನ್ನಾಗಿ ಪರಿವರ್ತಿಸುವಲ್ಲಿ ಲೇಖನ ಸಫಲವಾಗಿದೆ.