ಅವಿಸ್ಮರಣೀಯ ಅಮೆರಿಕ-ಎಳೆ 20
ಜಲಕನ್ಯೆಯರಿಗೆ ಟಾ…ಟಾ…
ಅದಾಗಲೇ ಮಧ್ಯಾಹ್ನ ಗಂಟೆ ಎರಡು.. ಎಲ್ಲರೂ ಹೊಟ್ಟೆ ತಣಿಸಲು ಕಾತರರಾಗಿದ್ದೆವು. ಊಟಕ್ಕಾಗಿ ತೊರೆಯ ಪಕ್ಕದ ಜಾಗಕ್ಕಾಗಿ ಕಾರಲ್ಲಿ ಸಾಗುವಾಗಲೇ, ರಸ್ತೆಯಿಂದ ಸ್ವಲ್ಪ ದೂರದಲ್ಲಿ ಕಾಣಿಸಿತು.. ಇನ್ನೊಂದು ವಿಶೇಷವಾದ ಜಲಪಾತ.. ಅದುವೇ Bridalveil Fall.. ಅಂದರೆ ಮದುಮಗಳಿಗೆ ತೊಡಿಸುವ ತೆಳುವಾದ ಬಟ್ಟೆಯಂತಹ (ವೇಲ್) ಜಲಪಾತ.
ಹೌದು.. ಅಲ್ಲಿಂದ 16ಕಿ.ಮೀ ದೂರದ ಸರೋವರದಿಂದ ಬರುವ ನೀರು, ಸುಮಾರು 188 ಮೀ. (617 ಅಡಿಗಳು) ಎತ್ತರದಿಂದ ಧುಮುಕುವ ಇದರ ಅಂದಕ್ಕೆ ಎಣೆ ಇಲ್ಲ.. ನೋಡಲೆರಡು ಕಣ್ಣುಗಳೂ ಸಾಲವು. ಸಮಯದ ಅಭಾವದಿಂದ ಈ ಜಲಪಾತದ ಬಳಿ ನಾವು ಹೋಗಲಿಲ್ಲವಾದ್ದರಿಂದ ಸುಮಾರು ಒಂದು ಕಿ.ಮೀ ದೂರದಿಂದ ವೀಕ್ಷಿಸಿದೆವು. ತೆಳುವಾದ ಬಿಳಿ ಬಟ್ಟೆಯು ಆಗಸದೆತ್ತರದಿಂದ ಭೂಮಿಗಿಳಿದಂತೆ ಭಾಸವಾಗುತ್ತಿತ್ತು. ಅತ್ಯಂತ ರಭಸದಿಂದ ಬೀಸುವ ಗಾಳಿಗೆ, ಇಡೀ ಜಲಪಾತದ ನೀರು, ಬಟ್ಟೆಯಂತೆ ಓಲಾಡುವುದನ್ನು ಅಷ್ಟು ದೂರದಿಂದಲೂ ಕಾಣಬಹುದು! ನೀರ ಹರಿವು ಕಡಿಮೆಯಿದ್ದಾಗ, ಜಲಪಾತದ ನೀರು ನೆಲಕ್ಕೆ ತಲಪದೆ ಮಧ್ಯದಲ್ಲೇ ನೀರ ಹನಿಗಳು ಗಾಳಿಯಲ್ಲಿ ತೇಲಿ ಹೋಗುವವು!
ಅತ್ಯಂತ ಮನಮೋಹಕ ದೃಶ್ಯವನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಾ ಕಾರು ಮುಂದಕ್ಕೆ ಸಾಗಿದಾಗ, ವಾಹನದ ಹಿಂದಕ್ಕೆ ಬಹುದೂರದಲ್ಲಿ ಆಗಸದೆತ್ತರ ತಲೆ ಎತ್ತಿ ನಿಂತಿರುವ Half Dome ನನ್ನ ಕಣ್ಣು ತುಂಬಿತು. Half Dome, ಈ ಕಣಿವೆಯ ಪೂರ್ವ ತುದಿಯಲ್ಲಿರುವ, ಅತ್ಯಾಕರ್ಷಕ ಗ್ರಾನೈಟ್ ಬೆಟ್ಟಗಳಲ್ಲೊಂದು. ಇದು ವಿಶೇಷವಾದ, ಗಮನ ಸೆಳೆಯುವ, ಅರ್ಧ ಗೋಳಾಕೃತಿಗಾಗಿ ಅತ್ಯಂತ ಪ್ರಸಿದ್ಧ. ನೆಲ ಮಟ್ಟದಿಂದ ಸುಮಾರು 2,696ಮೀ (8,846 ಅಡಿ)ಗಳಷ್ಟು ಎತ್ತರದ ಬೆಟ್ಟದಲ್ಲಿ, ಗ್ರಾನೈಟ್ ಕಲ್ಲಿನ ಭಾಗವೇ 4,737 ಅಡಿಗಳಷ್ಟು ಎತ್ತರಕ್ಕಿದೆ. ಇದು ಚಾರಣಪ್ರಿಯರ ಅತ್ಯಂತ ಪ್ರೀತಿಯ ತಾಣ. ಇಲ್ಲಿ ಚಾರಣ ಮಾಡುವವರು ಮೊದಲೇ ನೋಂದಣಿ ಮಾಡುವ ಅಗತ್ಯವಿದೆ. ಅಂದರೆ, ಇದಕ್ಕಾಗಿ ಹಲವು ವಾರಗಳ ತರಬೇತಿಯನ್ನು ಕಡ್ಡಾಯವಾಗಿ ಪಡೆಯಲೇ ಬೇಕಾಗುತ್ತದೆ. ಅಮೆರಿಕದಲ್ಲಿ ಇಂತಹ ಚಾರಣಗಳು ಸಾಮಾನ್ಯ ಹವ್ಯಾಸವಾಗಿರುವುದರಿಂದ ಅಲ್ಲಲ್ಲಿ ಸಾಕಷ್ಟು ಚಾರಣ ತರಬೇತಿ ಕೇಂದ್ರಗಳಿವೆ. ತರಬೇತಿಯಲ್ಲಿ ಉತ್ತೀರ್ಣವಾದ ಪತ್ರವನ್ನು ನೋಂದಣಿ ಜೊತೆಗೆ ಲಗತ್ತಿಸಲೇಬೇಕು. ಅಗತ್ಯವುಳ್ಳ ವಿವರಗಳನ್ನು ಅಲ್ಲಿಯ ರೇಂಜರ್ ಪರಿಶೀಲಿಸಿ ಸರಿಯಾಗಿದ್ದರೆ ಮಾತ್ರ ಆರೋಹಣಕ್ಕೆ ಅನುಮತಿ ನೀಡಲಾಗುತ್ತದೆ. ಅನುಮತಿ ಇಲ್ಲದೆ ಚಾರಣ ಮಾಡಿದವರಿಗೆ $5000 ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ಗ್ಯಾರಂಟಿ!
ಇಲ್ಲಿರುವ Half Domeನ್ನು ಏರಲು ಮಹಿಳೆಯರು ಪುರುಷರೆಂಬ ಭೇದವಿಲ್ಲದೆ ಅತ್ಯುತ್ಸಾಹದಿಂದ ಹೆಸರು ನೋಂದಾಯಿಸುವರು. ಈ ಬೆಟ್ಟವನ್ನು ಪೂರ್ತಿ ಏರುವುದಕ್ಕಾಗದಿದ್ದರೆ, ಅರ್ಧಕ್ಕಾದರೂ ತಲಪಿ, ಅಷ್ಟರಲ್ಲೇ ತೃಪ್ತಿ, ಹೆಮ್ಮೆ ಪಡುವವರೂ ಇದ್ದಾರೆ. ಅದಕ್ಕಾಗಿಯೇ ತಿಂಗಳುಗಟ್ಟಲೆ ತರಬೇತಿಯನ್ನೂ ನೀಡುವರು. ಹಾಗೆಯೇ ತರಬೇತಿ ಪಡೆದು ಚಾರಣ ಮಾಡಿರುವವರಲ್ಲಿ ನಮ್ಮಳಿಯನೂ ಒಬ್ಬ. ಬೆಳ್ಳಂಬೆಳಗ್ಗೆಯೇ, ಚಾರಣ ಸಮಯದಲ್ಲಿ ನೀರು, ಬಿಸ್ಕೆಟ್ ಗಳಂತಹ ಅಗತ್ಯ ವಸ್ತುಗಳನ್ನು ಅವರವರೇ ಹೊತ್ತೊಯ್ಯಬೇಕಾಗುತ್ತದೆ. ಹೀಗೆ ಬೆನ್ನಮೇಲೇರಿಸಿ ಸಾಗಬೇಕಾದ ತೂಕದಷ್ಟು ಸಾಮಾನುಗಳನ್ನು ಮನೆಯಿಂದ ಮೂಟೆಕಟ್ಟಿ ಹೊತ್ತೊಯ್ದು, ತರಬೇತಿ ಮುಗಿಸಿ ಬರುವಾಗ ಸಾಕಷ್ಟು ಆಯಾಸವಾಗುತ್ತಿದ್ದುದು ಸುಳ್ಳಲ್ಲ. ಬಳಿಕ ಚಾರಣಕ್ಕೆ ಹೊರಟಾಗ ನನಗೆ ಹೆಮ್ಮೆಯಾಗುವುದಕ್ಕಿಂತ ಹೆಚ್ಚು ಹೆದರಿಕೆಯೇ ಆಗಿತ್ತು. ನೆಲದಿಂದ ಚಾರಣಿಗರಿಗೆ ತುದಿ ತನಕ ತಲಪಲು, ಸುತ್ತು ಬಳಸಿ, ಸುಮಾರು 14 ಕಿ.ಮೀ ನಡೆಯಬೇಕಾಗುತ್ತದೆ. ದಿನಕ್ಕೆ ಒಂದು ಸಾವಿರಕ್ಕಿಂತಲೂ ಹೆಚ್ಚು ಹಾಗೂ ವರ್ಷವೊಂದಕ್ಕೆ 50,000 ಕ್ಕೂ ಹೆಚ್ಚು ಸಾಹಸೀ ಚಾರಣಿಗರು ಈ ಬೆಟ್ಟವೇರುವರು.
ಯೂಸೆಮಿಟಿ ಕಣಿವೆಯೇ ಸಮುದ್ರಮಟ್ಟದಿಂದ ಸುಮಾರು 4,000 ಅಡಿಗಳಷ್ಟು ಎತ್ತರದಲ್ಲಿ ಇರುವುದು. ಆದ್ದರಿಂದ, ವರ್ಷದಲ್ಲಿ ಬೇಸಿಗೆಕಾಲದ 6 ತಿಂಗಳು(ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೆ) ಮಾತ್ರ ಇದು ಚಾರಣಿಗರಿಗೆ ತೆರೆದಿರುತ್ತದೆ. ಚಳಿಗಾಲ ಸಹಿತದ ಉಳಿದ 6 ತಿಂಗಳು ಹಿಮಾಚ್ಛಾದಿತವಾಗಿರುತ್ತದೆ.
ಕೊನೆಯ 400ಮೀ ಎತ್ತರದ ಕಲ್ಲಿನ ಬೆಟ್ಟವು ಅತ್ಯಂತ ಕಡಿದಾಗಿದ್ದು, ಏರಲು ಕ್ಲಿಷ್ಟಕರ ಸವಾಲನ್ನು ಹಾಕುವಂತಿದೆ. ಅದಕ್ಕಾಗಿಯೇ, ಕಲ್ಲಿಗೆ ಬೋಲ್ಟಿನಿಂದ ಕಬ್ಬಿಣದ ಸಲಾಕೆಗಳನ್ನು ಖಾಯಂ ಆಗಿ ಸಿಕ್ಕಿಸಿ, ಅದಕ್ಕೆ ಬೆಟ್ಟದ ತುದಿವರೆಗೂ ಕಬ್ಬಿಣದ ಸರಪಳಿಯನ್ನು ಬಿಗಿದು ಚಾರಣಿಗರಿಗೆ ಅನುಕೂಲ ಮಾಡಿಕೊಟ್ಟಿರುವರು. ಇದನ್ನು ಚಳಿಗಾಲದಲ್ಲಿ ತೆಗೆದಿರಿಸುವರು. ಇಷ್ಟೆಲ್ಲಾ ಮುಂಜಾಗರೂಕತಾ ಕ್ರಮಗಳಿದ್ದರೂ ಅಪರೂಪಕ್ಕೆ ಅವಘಡಗಳು ಸಂಭವಿಸುವುದೂ ಇದೆ.
ಎಲ್ಲಾ ನೋಡಿ ಮುಂದುವರಿದು, ಊಟಕ್ಕೆ ನದೀತೀರದ ಚಂದದ ಜಾಗ ತಲಪಿದರೂ, ನಮ್ಮ ಜೊತೆಗಿನ ಸಹ ಪ್ರವಾಸಿ ಕುಟುಂಬದವರು ನಮ್ಮೊಡನೆ ಸೇರುವುದು ತಡವಾದುದರಿಂದ ಊಟ ಮುಗಿಸುವಾಗ ಮಧ್ಯಾಹ್ನ ಗಂಟೆ 3:30. ಅಲ್ಲಿಂದ ನಮ್ಮ ವಾಹನಗಳು ಬೆಟ್ಟವೇರಿದುವು; ಮೇಲಿನಿಂದ ಆಳವಾದ ಕಣಿವೆಯನ್ನು ವೀಕ್ಷಿಸಲು.
ಆಹಾ… ಮೇಲಿನಿಂದ ಕಾಣುವ ನೋಟವು ಅತ್ಯದ್ಭುತ! ಎತ್ತರದ ಬೆಟ್ಟದ ತುದಿಯಲ್ಲಿ ಅದಾಗಲೇ ಜನ ಸೇರಿದ್ದರು. ಎದುರುಗಡೆ ಆಳ ಕಣಿವೆಯು ಅತ್ಯಾಕರ್ಷಕವಾಗಿ ಹರಡಿತ್ತು. ನಾವಿದ್ದ ಕಣಿವೆಯಲ್ಲಿನ ಡೇರೆಗಳು ಬೆಳ್ಳಗಿನ ಪಕ್ಷಿಗಳು ರೆಕ್ಕೆ ಮುದುರಿ ಕುಳಿತಂತೆ ಕಾಣುತ್ತಿದ್ದವು. ದೂರ ದೂರಕ್ಕೆ, ನಾಲ್ಕೈದು ಜಲಪಾತಗಳು ಜೊತೆಗೆ ಧುಮ್ಮಿಕ್ಕುವ ಸೊಗಸು ಕಣ್ಣ ಒಂದೇ ನೋಟಕ್ಕೆ, ಒಮ್ಮೆಲೇ ಸಿಗುವುದು ಬಹಳ ಅಪರೂಪ.. ಇದನ್ನು ನೋಡುವ ಸೌಭಾಗ್ಯ ನನ್ನದಾದುದು.. ನಿಜಕ್ಕೂ ನಂಬಲಾಗುತ್ತಿಲ್ಲ! ಸಂಜೆಯ ಸೂರ್ಯನ ಕಿರಣಗಳು ಬೆಟ್ಟಗಳ ಶಿಖರಗಳನ್ನು ತನ್ನ ಬಂಗಾರದ ಬಣ್ಣದ ಲೇಪನದಿಂದ ಅಲಂಕರಿಸಿದ್ದುವು. ಇಡೀ ಸಾಲೇ, ವಸುಮತಿಯ ಕೊರಳಿಗೆ ತೊಡಿಸಿದ ಹಿರಣ್ಯ ಹಾರದಂತೆ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ಕಾಣುತ್ತಿದ್ದ ಬೆಳ್ನೊರೆ ಜಲಪಾತದ ಹರಿವು ವಸುಂಧರೆಯ ಮುಡಿಯ ಮಲ್ಲಿಗೆ ಮಾಲೆಯಂತೆ ಮನಸೆಳೆಯುತ್ತಿತ್ತು. ದಿಗಂತದಾಚೆ ಹರಡಿದ ಚೆಲು ನೋಟವನ್ನು ಕಣ್ತುಂಬಿಕೊಳ್ಳುತ್ತಿದ್ದವಳಿಗೆ ಅಳಿಯನ ಸ್ವರದಿಂದ ಎಚ್ಚರವಾಯ್ತು… “ಹೊರಡೋಣ.. ಹೊತ್ತಾಯ್ತು..”..
ಸಂಜೆ ಗಂಟೆ 5:30ರ ಸಮಯ…ಜಲಪಾತದ ಭೋರ್ಗರೆತದ ಸದ್ದು ದೂರವಾದರೂ, ಅದೇ ಗುಂಗಿನಲ್ಲಿ ಮನೆ ಕಡೆ ಹೊರಟಿತು…ನಮ್ಮ ದಂಡು, ಜಲ ಕನ್ಯೆಯರಿಗೆ ಟಾ…ಟಾ…ಹೇಳುತ್ತಾ…
ಮುಂದುವರಿಯುವುದು…..
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35252
–ಶಂಕರಿ ಶರ್ಮ, ಪುತ್ತೂರು.
ಅಮೆರಿಕ ಪ್ರವಾಸ ಕಥನ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ..
ಈ ಸಾರಿ ಯ ಜಲಪಾತದ ದೃಶ್ಯಾವಳಿ..ಚಾರಣ ಪ್ರಿಯರಿಗೆ ಕೊಡುವ ತರಬೇತಿ ಇವುಗಳ ಬಗ್ಗೆ ಉಪಯುಕ್ತ ಮಾಹಿತಿ…ಧನ್ಯವಾದಗಳು ಮೇಡಂ.
ಪ್ರೀತಿಯ ಪ್ರೋತ್ಸಾಹಕ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು, ನಾಗರತ್ನ ಮೇಡಂ.
Very nice
ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.
ಕಣ್ಣಿನ ಎದುರು ದೃಶ್ಯಗಳು ಮೂಡಿ ಬರುವಂತಿದೆ ನಿಮ್ಮ ವಿವರಣೆ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ಪ್ರಕೃತಿಯ ಸುಂದರತೆ ನಿಮ್ಮ ಕಾವ್ಯಾತ್ಮಕ ವಿವರಣೆಗಳಿಂದ ಮತ್ತಷ್ಟು ಅಂದಗಟ್ಟಿದೆ. ನಿಸರ್ಗ ವೈಭವದ ಅನಾವರಣ ಸೊಗಸಾಗಿ ಮೂಡಿ ಬಂದಿದೆ. ಅಭಿವಂದನೆಗಳು.