“ಮಾವೆಂಬ ಭಾವ”
ಹಣ್ಣುಗಳ ರಾಜ ಮಾವು ಎಂದು ಹೇಳಲ್ಪಡುವ ರುಚಿಕಟ್ಟಾದ ಮಾವಿನ ಹಣ್ಣಿನ ಕಾಲ ಈಗ. ವರ್ಷಕ್ಕೆ ಎರಡೋ, ಮೂರೋ ತಿಂಗಳು ಸಿಗುವ ಈ ಹಣ್ಣಿನ ರುಚಿಯ ಹೇಗೆ ಬಣ್ಣಿಸಲಿ? ಮಾವಿನ ಹಣ್ಣು ಇರುವುದು ಅದನ್ನು ತಿಂದು ರುಚಿಯನ್ನು ಆಸ್ವಾದಿಸಲು ಎಂದು, ಅದನ್ನು ಬಣ್ಣಿಸುವುದಕ್ಕಲ್ಲಾ ಎನ್ನುತ್ತೀರಾ….., ಹೌದೌದು, ನೀವು ಹೇಳುವುದು ಸರಿ, ಇರಿ, ಒಂದು ಹಣ್ಣು ತಿಂದು ಬರುತ್ತೇನೆ . . . . .
ಅಬ್ಬಾ, ಹೇಗೂ ಈಗ ಮಾವಿನ ಹಣ್ಣಿನ ಕಾಲ ಅಲ್ಲವಾ, ಮನೆಯಲ್ಲಿ ತಂದಿದ್ದ ಬಾದಾಮಿ ಹಣ್ಣುಗಳು ಇದ್ದವು. ಒಂದು ಉಂಡೆ ಹಣ್ಣನ್ನು ತಿಂದು ಬಂದೆ, ರುಚಿಯಾಗಿತ್ತು. ಸಧ್ಯ, ಮನೆಯಲ್ಲಿ ಯಾರೂ ಇಲ್ಲ, ಇದ್ದಿದ್ದರೆ,- ಅಯ್ಯೋ ಮಧುಮೇಹ ಇದೆ, ಒಂದು ಹೋಳು ತಿಂದು ಚಪಲ ತೀರಿಸಿಕೊಳ್ಳಿ ಸಾಕು – ಎನ್ನುತ್ತಿದ್ದರು. ಆದರೆ ಆಗ, ತೃಪ್ತಿ ಎಂಬುದು ಮರೀಚಿಕೆ ಅಷ್ಟೆ.
ರುಚಿ ರುಚಿಯಾದ ರಸಭರಿತ ಮಾವು ಯಾರಿಗಿಷ್ಟವಿಲ್ಲ ಹೇಳಿ? ನೀವೆಲ್ಲಾ ಕೇಳಿರಬಹುದು, ಒಂದು ಗಾದೆ ಇದೆ, “ಉಂಡು(ಉಂಡೆ) ಮಾವು, ಹಸಿದು (ಹಿಸಿದು) ಹಲಸು” ಅಂತ. ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ಈ ಗಾದೆಯನ್ನು ಕುರಿತು ಜೋರಾದ ಚರ್ಚೆಯೇ ನಡೆದಿತ್ತು. ಆಗಲೂ ಮಾವಿನ ಹಣ್ಣಿನ ಕಾಲ. ಊರಿನಿಂದ ನಮ್ಮ ತಂದೆಯ ಚಿಕ್ಕಪ್ಪನ ಮಗ ಬಂದಿದ್ದರು. ಊಟವಾದ ನಂತರ ಅಮ್ಮ ಕೇಳಿದರು – ಮಾವಿನ ಹಣ್ಣಿದೆ ಹೆಚ್ಚಿ ಕೊಡಲೆ? – ಎಂದು. ಆ ಚಿಕ್ಕಪ್ಪ, – ಅಯ್ಯೋ ಅತ್ತಿಗೆ, ಗಾದೆಯೇ ಕೇಳಿದಲ್ಲವೇ, ಉಂಡೆ ಮಾವು, ಹಿಸಿದು ಹಲಸು ಎಂದು, ಉಂಡೆ ಹಣ್ಣೆ ಕೊಡಿ ರಸ ಹೀರಿ, ಹೀರಿ ಹಾಗೇ ತಿನ್ನುತ್ತೇನೆ. ಹಾಗೇ ತಿಂದರೇ ಅದರ ರುಚಿ ಹೆಚ್ಚು. ಅದೇ ಹಲಸಿನ ಹಣ್ಣಾದರೆ ಹಿಸಿದು, ಹಿಸಿದು ಬೀಜ ತೆಗೆದು ತಿನ್ನಬೇಕು – ಎಂದರು.
ಅಮ್ಮ, – ಅಯ್ಯೋ, ಆ ಗಾದೆಯ ಅರ್ಥ, ಉಂಡ ಮಾವು, ಅಂದರೆ ಊಟವಾದ ನಂತರ ಮಾವಿನ ಹಣ್ಣನ್ನು ತಿನ್ನಬೇಕು, ಹಸಿದು ಹಲಸು, ಅಂದ್ರೆ, ಹೊಟ್ಟೆ ಹಸಿದಿದ್ದಾಗ ಹಲಸಿನ ಹಣ್ಣು ತಿನ್ನಬೇಕು ಅಂತ. ಇಬ್ಬರೂ ಗಾದೆಯ ಅರ್ಥ ಕುರಿತು ವಾದಿಸಲು ಪ್ರಾರಂಭಿಸಿದರು. ನಂತರ ಅಪ್ಪ ಬಂದು, – ಆ ಗಾದೆಗೆ ಎರಡೂ ಅರ್ಥಗಳು ಹೊಂದುವುದಂತೂ ಹೌದು, ಒಂದೊಂದು ಪ್ರದೇಶದಲ್ಲಿ ಒಂದೊಂದು ಅರ್ಥ ಜಾಸ್ತಿ ಬಳಕೆಯಲ್ಲಿರಬಹುದು, ನೀವಿಬ್ಬರೂ ಇಲ್ಲಿ ವಾದ ಮಾಡುತ್ತಿದ್ದರೆ ಒಳಗಿಟ್ಟಿರುವ ಮಾವಿನ ಹಣ್ಣುಗಳೆಲ್ಲ ನಮ್ಮ ಪುಟ್ಟ ಕಳ್ಳ ಬೆಕ್ಕುಗಳ(ಮಕ್ಕಳ) ಪಾಲಾಗುತ್ತೆ ಅಷ್ಟೆ. ನಡೆಯಿರಿ ಎಲ್ಲರೂ ಹಣ್ಣು ತಿನ್ನೋಣ ಎಂದು ಸಮಾಧಾನಿಸಿದರು.
ನಮ್ಮ ತಾಯಿ ಅಗ್ರಹಾರದ ಜಗುಲಿಯಲ್ಲಿ ಕುಳಿತು ಮಾವಿನ ಹಣ್ಣು ಹೊತ್ತು ತರುವ ಹೆಂಗಳೆಯರ ಹತ್ತಿರವೆಲ್ಲಾ ಚೌಕಾಶಿ ಮಾಡಿ ಒಂದು ರೂಪಾಯಿಗೆ 5 ರಿಂದ 6 ಹಣ್ಣುಗಳನ್ನು ಕೊಳ್ಳುತ್ತಿದ್ದುದು ಈಗಲೂ ಜ್ಞಾಪಕ ಬರುತ್ತದೆ. ಸಂಜೆಯ ಹೊತ್ತು ಕಾಫಿಗೆ ಬದಲಾಗಿ ಮಾವಿನ ಹೋಳುಗಳನ್ನು ಕಾಯಿಸಿ ತಣ್ಣಗಾಗಿಸಿದ ಕೆನೆಹಾಲಿನಲ್ಲಿ ಹಾಕಿ, ಸೀಕರಣೆ ಮಾಡಿ ಕೊಡುತ್ತಿದ್ದುದು, ಈಳಿಗೆ ಮಣೆಯಲ್ಲಿ ಹೆಚ್ಚುವ ಕ್ರಿಯೆಯಲ್ಲಿ ನಾನು, ನಮ್ಮ ಚಿಕ್ಕ ಅಣ್ಣ ಕುಳಿತು ತಿರುಳು ತೆಗೆದು ಬಿಟ್ಟ ಸಿಪ್ಪೆ, ಓಟೆಗಳನ್ನು ಚೀಪಲು ಪೈಪೋಟಿಯ ಮೇಲೆ ಜಗಳವಾಡುತ್ತಿದ್ದುದು, ನಿನ್ನೆ ಮೊನ್ನೆ ನಡೆದಂತೆ ಬಾಲ್ಯದ ಸವಿ ನೆನಪುಗಳು ಕಾಡುತ್ತವೆ. ಹಾಂ, ಸೀಕರಣೆ ಎಂದ ಕೂಡಲೇ ನಮ್ಮ ಉತ್ತರ ಕರ್ನಾಟಕದ ಜನ ಹೋಳಿಗೆಯನ್ನು ಸೀಕರಣೆಯೊಂದಿಗೆ ತಿಂದರೆ, ಉತ್ತರ ಭಾರತದ ಜನ ಪೂರಿ-ರಸ್ಎನ್ನುತ್ತಾ ಪೂರಿಯನ್ನು ಮಾವಿನ ಹಣ್ಣಿನ ಗಟ್ಟಿ ರಸದೊಂದಿಗೆ ಸೇವಿಸುತ್ತಾರೆ. ಮಾವಿನ ಹಣ್ಣಿನ ಕಾಲದಲ್ಲಿ ನಮ್ಮ ಮನೆಯಲ್ಲೀ ಪೂರಿ-ಸಾಗು-ಸೀಕರಣೆಯ ಸಂಭ್ರಮ ನಾಲ್ಕಾರು ಭಾರಿಯಾದರೂ ನಡೆಯುವುದು ತಪ್ಪುವುದಿಲ್ಲ.
ಮುಂಚಿನ ಕಾಲದಲ್ಲಿ ಮೊದಲು ರಸಪುರಿ, ನಂತರ ಬಾದಾಮಿ, ನಂತರ ನೀಲಂ, ಜೀರಿಗೆ ಮಾವು, ನಂತರ ತೋತಾಪುರಿ ಬರುತಿತ್ತು. ಈಗ ಎಲ್ಲೆಲ್ಲವೂ ಒಟ್ಟೊಟ್ಟಿಗೆ ಬರುತ್ತದೆ. ಜಾಗತೀಕರಣದ ಪ್ರಭಾವವೋ ಕಾಣೆ, ನಮಗೆ ಹೊಸ ಹೊಸ ತಳಿಗಳಾದ ಆಲ್ಫೆನಜೋ಼ ರತ್ನಗಿರಿ, ಮಲ್ಲಿಕಾ. . . ಮುಂತಾದವುಗಳ ಪರಿಚಯವೂ ಆಯಿತು. ಮಲೆನಾಡ ಕಡೆ ಮದುವೆವೊಂದಕ್ಕೆ ಹೋಗಿದ್ದಾಗ ಲೊಟ್ಟೆ ಹೊಡೆದು ತಿನ್ನುವಂತಹ ವ್ಯಂಜನ “ಮಾವಿನ ಹಣ್ಣಿನ ಸಾಸುವೆ” ತಿನ್ನುವ ಭಾಗ್ಯವೂ ಸಿಕ್ಕಿತ್ತೆನ್ನಿ.
ತವರು ಮನೆಯಲ್ಲಿ ಮಾವನ್ನು ಕೊಂಡೇ ತಿನ್ನಬೇಕಿತ್ತು. ದಂಡ ಮಾಡುವ ಮಾತೇ ಇಲ್ಲ. ನಮ್ಮ ಪಾಲಿಗೆ ಬಂದದ್ದು ಕೊಂಚ ಹುಳಿಯೇ ಇರಲಿ, ಸಿಹಿಯೇ ಇರಲಿ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿನ್ನ ಬೇಕಿತ್ತು. ಆದರೆ ಮದುವೆಯ ನಂತರ ಅತ್ತೆಯ ಮನೆಯಲ್ಲಿ ಫಲಭರಿತ ಎರಡು ಮಾವಿನ ಮರಗಳಿದ್ದವು. ಎಲ್ಲರೂ ಹಣ್ಣುಗಳನ್ನು ಬಹಳ ಸಿಹಿಯಿದ್ದರೆ ಮಾತ್ರ ತಿನ್ನುತ್ತಿದ್ದರು. ಸ್ವಲ್ಪ ಹುಳಿಯಿದ್ದರೂ ರೊಯ್ಎಂದು ಗಿಡದ ಪಾತಿಗೆ ಎಸೆದು ಬಿಡುತ್ತಿದ್ದರು. ನಾನು ತಡೆಯಲಾದರೆ ʼಅಯ್ಯೋ ದಂಡ . . ʼ ಎಂದರೆ, ಗೊಬ್ಬರ ಆಗುತ್ತೆ ಬಿಡು ಎನ್ನುತ್ತಿದ್ದರು. ನಂತರದ ದಿನಗಳಲ್ಲಿ ನನ್ನವರಂತೂ ಒಂದು ಚೂರು ಕಚ್ಚಿ ಸ್ವಲ್ಪ ಹುಳಿಯಿದ್ದರೆ, ʼನಿಂಗೆ ಹುಳಿ ಎಂದರೆ ಇಷ್ಟ ಅಲ್ಲವಾ, ತೊಗೋʼ ಎಂದು ಅದನ್ನು ನನಗೆ ಕೊಟ್ಟು ತಾವು ಇನ್ನೊಂದು ಹಣ್ಣು ತೆಗೆದು ಕೊಳ್ಳುತ್ತಿದ್ದರು. ನಾನು ಪೆದ್ದಿಯ ತರಹ ಹುಳಿ ಹಣ್ಣೇ ತಿನ್ನುತ್ತಿದ್ದೆ. ಇಂದಿಗೂ ಇದು ಹೀಗೆಯೇ ನಮ್ಮ ಮನೆಯಲ್ಲಿ ನಡೆಯುತ್ತಿದೆ. ಮೂಡ್ ಇಲ್ಲದಿದ್ದರೆ, ನಿಮಗೆ ಹುಳಿ ಹಣ್ಣು ಸಿಕ್ಕಿದೆ, ನೀವೇ ತಿನ್ನಿ ಎಂದು ಜಗಳವಾಡುತ್ತೇನೆ.
ನನಗೆ ಮುಂಚಿನಿಂದಲೂ ಹುಳಿ ಎಂದರೆ ಸ್ವಲ್ಪ ಇಷ್ಟ (ಆದರೆ ಮಾವಿನ ಹಣ್ಣಲ್ಲ). ಮಾವಿನಕಾಯಿ, ನೆಲ್ಲಿಕಾಯಿ, ಹುಣಸೇಕಾಯಿಗಳನ್ನು ಉಪ್ಪಿನೊಂದಿಗೆ ಸೇರಿಸಿ ತಿನ್ನುತ್ತಿದ್ದೆ. ನಮ್ಮ ಅತ್ತೆ, – ʼಅಯ್ಯೋ, ನೀನು ತಿನ್ನುವುದನ್ನು ನೋಡಿದರೇ ನನಗೆ ಹಲ್ಲುಗಳು ಚುಳ್ಚುಳ್ಅನ್ನುತ್ತವೆʼ – ಎನ್ನುತ್ತಿದ್ದರು.
ನಮ್ಮ ಮನೆಗೆ ಪ್ರತೀ ಹಬ್ಬದಲ್ಲೂ ಹಲವಾರು ಜನ ಬಂದು ಮಾವಿನೆಲೆ ಕೇಳಿ ಕಿತ್ತುಕೊಂಡು ಹೋಗುತ್ತಿದ್ದರು. ಎಲ್ಲಾ ಹಬ್ಬದಲ್ಲೂ, “ಕಿತ್ತುಕೊಂಡು ಹೋಗಿ, ಅದಕ್ಕೇನು” ಎನ್ನುತ್ತಿದ್ದ ನಮ್ಮ ಮಾವನವರು, ಯುಗಾದಿ ಹಬ್ಬದಲ್ಲಿ ಮಾತ್ರ ಕೊಡುತ್ತಿರಲಿಲ್ಲ. ಗಿಡದ ತುಂಬಾ ಚಿಗುರೆಲೆ, ಮೊಸರು ಚೆಲ್ಲಿದಂತ ಬಿಳಿಯ ಸಣ್ಣ ಹೂವುಗಳು ಸಣ್ಣ, ದೊಡ್ಡ ಕಾಯಿಗಳು ಕಚ್ಚಿರುತ್ತಿದ್ದ ಗಿಡದಿಂದ ಎಲೆಗಳನ್ನು ಕೀಳಲು ಬಿಡುತ್ತಿರಲಿಲ್ಲ. ಎಲ್ಲರಿಗೂ ಹೇಳಿ ಹೇಳಿ ಸಾಕಾಗಿ ಕೊನೆಗೆ ರೇಗಿಯೇ ಬಿಡುತ್ತಿದ್ದರು. ನಮ್ಮ ಅತ್ತೆಗೂ ಕೀಳಲು ಬಿಡುತ್ತಿರಲಿಲ್ಲ. ಅವರು ಅತ್ತ ಕೆಲಸಕ್ಕೆ ಹೋದ ಕೂಡಲೇ, ನಮ್ಮ ಅತ್ತೆ ನನ್ನ ಮೈದುನನಿಗೆ ಹೇಳಿ, ಮಿನಿಮಮ್ ಎಲೆಗಳನ್ನು ಕೀಳಿಸಿಕೊಂಡು ನಂತರ ತಾಯಿ ಮಗ ಇಬ್ಬರೂ ಬೈಸಿಕೊಳ್ಳುತ್ತಿದ್ದರು. ಮನೆಯಲ್ಲಿ ಎರಡು ಮರಗಳನ್ನು ಇಟ್ಟುಕೊಂಡು ದುಡ್ಡುಕೊಟ್ಟು ಹೊರಗಿನಿಂದ ತರಲು ನಮ್ಮತ್ತೆಗೆ ಮನಸ್ಸು ಬರುತ್ತಿರಲಿಲ್ಲ.
ನಾವಾಗ ದೂರ ಗುಜರಾತಿನಲ್ಲಿದ್ದೆವು. ಒಮ್ಮೆ ಬೇಸೆಗೆ ರಜಕ್ಕೆ ಬಂದಿದ್ದೆವು. ಆಗ ಮರದ ತುಂಬಾ ದೋರುಗಾಯಿಗಳಿದ್ದವು. ಹೊರಗಿನಿಂದ ಹುಡುಗರು ಕಾಯಿಗೆ ಹೊಡೆದ ಕಲ್ಲು, ಅಲ್ಲೆ ಕೆಳಗೆ ಬಿದ್ದಿರಬಹುದಾದ ಕಾಯಿಯನ್ನು ಹೆಕ್ಕುತ್ತಿದ್ದ ನನ್ನ ಪುಟ್ಟ ಮಗಳ ತಲೆಗೆ ಬಿದ್ದು ಚಿಲ್ ಎಂದು ರಕ್ತ ಚಿಮ್ಮಿತು. ಅಂದು ಗಾಯವಾದ ಅರ್ಧ ಇಂಚು ಜಾಗದಲ್ಲಿ ಇಂದಿಗೂ ಕೂದಲು ಬೆಳೆದಿಲ್ಲ. ಮತ್ತೊಮ್ಮ ನನ್ನ ಮೈದುನ ಗೋಡೆಯ ಪಕ್ಕದಲ್ಲೇ ನಿಂತಿದ್ದಾಗ ಹೊರಗಿನಿಂದ ಒಂದು ಹುಡುಗ ಕಲ್ಲು ಹೊಡೆದ. ತಕ್ಷಣ ಬಾಗಿಲು ತೆರೆದು ಹೊರಗೋಡಿನ ಮೈದುನ, ಹೊಡೆದ ಕಲ್ಲಿಗೆ ಮಾವಿನಕಾಯಿ ಉದುರುತ್ತಾ ಎಂದು ಮೇಲೆ ನೋಡುತ್ತಾ ನಿಂತ ಹುಡುಗನ ತೋಳುಗಳನ್ನು ಬಲವಾಗಿ ಹಿಡಿದಾಗ ಆ ಹುಡುಗ ಹೆದರಿ ಚಡ್ಡಿಯಲ್ಲೇ ಮೂತ್ರ ಮಾಡಿಕೊಂಡು ಬಿಟ್ಟಾಗ ಎಲ್ಲರೂ ಬಿದ್ದು ಬಿದ್ದು ನಕ್ಕು ಆ ಹುಡುಗನನ್ನು ಒಳ ಕರೆದು ನಾಲ್ಕಾರು ಕಾಯಿಗಳನ್ನು ಕೊಟ್ಟು ಕಳುಹಿಸಿದೆವೆನ್ನಿ.
ಮಾವಿನ ಕಾಯಿಯ ಬಗೆ ಬಗೆಯ ಉಪ್ಪಿನಕಾಯಿಗಳ ಸವಿ, ಸವಿಯದಿದ್ದವರು ಯಾರಿದ್ದಾರೆ ಹೇಳಿ. ಆಯಾ ಪ್ರದೇಶಗಳಿಗೆ ತಕ್ಕಂತೆ ಆವಗಾಯಿ, ಮಿಡಿ, ಬಿಸಿ ಉಪ್ಪಿನಕಾಯಿಗಳನ್ನು ಹೆಂಗಳೆಯರು ಮಾಡುತ್ತಾರೆ. ಮನೆಯವರೆಲ್ಲಾ ಸವಿಯುತ್ತಾರೆ. ಆಂಧ್ರ ಪ್ರದೇಶದಲ್ಲಿ ದಪ್ಪನೆಯ ಹುಳಿ ಮಾವಿನಕಾಯಿಗಳಲ್ಲಿ ಜಾಡಿಗಟ್ಟಲೆ ಉಪ್ಪಿನಕಾಯಿ ಹಾಕುತ್ತಾರೆ. ಅಂಗಡಿಯವರೇ ಮಾವಿನಕಾಯಿಗಳನ್ನು ಚಿಕ್ಕ ಚಿಕ್ಕ ಹದವಾದ ಹೋಳುಗಳಾಗಿ ಕತ್ತರಿಸಿಯೂ ಕೊಟ್ಟುಬಿಡುತ್ತಾರಂತೆ. ಉಪ್ಪಿನಕಾಯಿ ಹಾಕುವ ಕೆಲಸದ ಅರ್ಧದಷ್ಟು ಹೊರೆಯೇ ಇಳಿದು ಬಿಡುತ್ತದೆ ಅಲ್ವಾ?
ಒಮ್ಮೆ ನಮ್ಮ ಮನೆಗೆ ರಾತ್ರಿ ಒಂಭತ್ತೂವರೆಯ ನಂತರ ದಿಢೀರ್ ಅಂತ ಮುನ್ಸೂಚನೆಯಿಲ್ಲದೆ ನಮ್ಮ ತಂದೆಯ ಸ್ನೇಹಿತರ ಮಗ, ಸೊಸೆ ಬಂದು ಇಳಿದರು. ಹೈದರಾಬಾದಿನಲ್ಲಿ ಅವರು ಅತ್ಯಂತ ದೊಡ್ಡ ಹುದ್ದೆಯಲ್ಲಿದ್ದವರು. ಮನೆಯವರೂ ಸಹ ಅಗರ್ಭ ಶ್ರೀಮಂತರು. ನಮ್ಮ ಮನೆಯಲ್ಲಿ ಅಂದೇನೋ ಬೇಗ ಊಟ ಮುಗಿಸಿ ಪಾತ್ರೆಗಳನ್ನೆಲ್ಲಾ ತೊಳೆದು ಬೋರಲು ಹಾಕಿಯಾಗಿತ್ತು. ಬಂದವರೇ – ಅಮ್ಮಾ, ಹೊಟ್ಟೆ ಹಸಿಯುತ್ತಿದೆ, ಏನಾದರೂ ತಿನ್ನುವುದಕ್ಕೆ ಬೇಕು – ಎಂದರೆ, ಎಂದೂ ಇಲ್ಲದೆ ಅಂದೇ ಪರೀಕ್ಷಿಸುವಂತೆ ಮನೆಯಲ್ಲಿ ಒಂದು ತರಕಾರಿಯಾಗಲೀ, ಕೊನೆಯ ಪಕ್ಷ ಕೊತ್ತಂಬರೀ ಸೊಪ್ಪು, ಮೆಣಸಿನಕಾಯಿ, ನಿಂಬೇ ಹಣ್ಣಾಗಲೀ (ಆಗಿನ್ನೂ ಫ್ರಿಡ್ಜ್ ಬಂದಿರಲಿಲ್ಲ), ಇರಲಿಲ್ಲ. – ಅಯ್ಯೋ, ಏನೂ ಇಲ್ಲವಲ್ಲ ಕುಮಾರ, ಬಿಸಿ ಅನ್ನ ಮಾಡುತ್ತೀನಿ, ಒಳ್ಳೆಯ ಮಾವಿನ ಮಿಡಿ ಉಪ್ಪಿನಕಾಯಿ ಇದೆ, ಅದರ ರಸದೊಂದಿಗೇ ತಿನ್ನುತ್ತೀರಾ . . ?ಎಂದು ಅತೀ ಸಂಕೋಚದಿಂದ ಕೇಳಿದರು. -ʼಓ, ಅದಕ್ಕೇನಂತೆ ಮಾಡಿʼ – ಎಂದರು. ಅಲ್ಲೇ ಇದ್ದ ಅವರ ಚಿಕ್ಕ ವಯಸ್ಸಿನ ಹೆಂಡತಿಯ ಮುಖ ಖುಷಿಯಿಂದ ಅರಳಿತು(ನಂತರ ತಿಳಿದ್ದು, ಆಗ ಅವರು ಒಂದೂವರೆ ತಿಂಗಳ ಗರ್ಭಿಣಿಯಂತೆ). ಸರಿ, ಅಮ್ಮ ಬಿಸಿ, ಬಿಸಿ ಅನ್ನ ಮಾಡಿದರು. ಮೇಲೆ ಒಳ್ಳೆ ಘಂ ಎನ್ನು ತುಪ್ಪ ಹಾಕಿಕೊಂಡು ಮಿಡಿ ಮಾವಿನ ಉಪ್ಪಿನಕಾಯಿಯ ರಸದೊಂದಿಗೆ ಅನ್ನ ಕಲಸಿ ಉಂಡು ನಂತರ ಮನೆಯಲ್ಲಿ ಹೆಪ್ಪು ಹಾಕಿದ್ದ ಮೊಸರಿನ ಅನ್ನ, ಚಟ್ನೀಪುಡಿಯೊಂದಿಗೆ ಖುಷಿಯಿಂದ ತಿಂದಿದ್ದರು, ಮುಂದೆ ಹಲವಾರು ದಶಕಗಳವರೆಗೂ, ನಮ್ಮಮ್ಮ, – ‘ಅಯ್ಯೋ ಪಾಪ, ಅಷ್ಟು ಶ್ರೀಮಂತರ ಮನೆಯ, ದೊಡ್ಡ ಹುದ್ದೆಯಲ್ಲಿದ್ದ ಹುಡುಗನಿಗೆ ಪಾಪ, ಬರೀ ಉಪ್ಪಿಕಾಯನ್ನ, ಮೊಸರನ್ನ ಹಾಕಿಬಿಟ್ಟೆʼ, ಎಂದು ಹಲುಬುವುದೂ, ಅವರುಗಳು, ಸಿಕ್ಕವರ ಹತ್ತಿರವೆಲ್ಲಾ ಅಂದು ಇವರ ಮನೆಯಲ್ಲಿ ಉಂಡ ಊಟದ ರುಚಿಗೆ ಸಾಟಿಯೇ ಇಲ್ಲ ಎಂದು ಬಾಯಿಚಪ್ಪರಿಸುತ್ತಾ ಹೊಗಳುವುದೂ ನಡೆದೇ ಇತ್ತು. ಮನಸ್ಸು ಮನಸ್ಸುಗಳ ಸಂಬಂಧ ಆತ್ಮೀಯವಾಗಿದ್ದರೆ, ಸರಳ ರುಚಿಯೂ ಸವಿ ಸವಿ ನೆನಪುಗಳಾಗಿ ಉಳಿದು ಬಿಡುವುವು ಎನ್ನುವ ಮಾತು ಸುಳ್ಳಲ್ಲ.
ನಮ್ಮ ಅಗ್ರಹಾರದ ಮನೆಯ ಹತ್ತಿರ ಒಬ್ಬರು ಅಚ್ಚಮ್ಮ ಅನ್ನುವವರು ಇದ್ದರು. ಅವರ ಮನೆಯ ಅಂಗಳದಲ್ಲಿ ಹೊರಗೋಡೆಯ ಪಕ್ಕದಲ್ಲೊಂದು ಮಾವಿನ ಮರವಿತ್ತು. ಅದರಲ್ಲಿ ಸಣ್ಣ ಸಣ್ಣ ಕಾಯಿಗಳು ಕಚ್ಚಿದ್ದಾಗ ಏನಾದರೂ ಜೋರಾಗಿ ಗಾಳಿ ಬೀಸಿದರೆ, ನಾನು, ನಮ್ಮ ಚಿಕ್ಕಣ್ಣ ಎಲ್ಲರೂ ಓಡಿ ಹೋಗುತ್ತಿದ್ದೆವು, ಗಾಳಿಗೆ ಬೀಳುವ ಕಾಯಿಗಳನ್ನು ಹೆಕ್ಕಿ ತಂದು ಉಪ್ಪಿನೊಂದಿಗೆ ತಿನ್ನಲು. ಅಮ್ಮ ಬೈಯುತ್ತಿದ್ದಳು – ಹೋಗಬೇಡಿ, ಗಾಳಿಗೆ ರೆಂಬೆ ಕೊಂಬೆ ಬಿದ್ದರೆ, ಮೈ ಕೈ ಮುರಿದು ಕೊಳ್ಳುತ್ತೀರಿ ಅಷ್ಟೆ – ಎಂದು. ಯಾರೂ ಅವಳ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ. ನನಗಂತೂ ಸಿಗುತ್ತಿದ್ದುದು ಅತ್ಯಂತ ಹೀಚುಗಾಯಿಗಳು. ಆದರೂ ಅವುಗಳನ್ನೇ ಉಪ್ಪು ಹಚ್ಚಿ ತಿನ್ನುವುದರಲ್ಲಿ ಏನ್ನನ್ನೋ ಸಾಧಿಸಿದ ತೃಪ್ತಿ, ಸಮಾಧಾನ.
ನಮ್ಮ ಅಜ್ಜಿ, ವೈಶಾಖಮಾನಸ ಹುಣ್ಣಿಮೆಯಂದು “ಇಂದು ವಡಸಾವಿತ್ರಿ ಹುಣ್ಣಿಮೆ, ಇಂದು ಮಾವು ದಾನ ನೀಡಿದರೆ ಮುತೈದೆತನ ವೃದ್ಧಿಯಾಗುವುದು, ಮಹಾಸತಿ ಸಾವಿತ್ರಿ, ಮಾವಿನ ಹಣ್ಣುಗಳನ್ನು ಧಾರಾಳವಾಗಿ ದಾನ ನೀಡಿದ್ದರಿಂದಲೇ ಸತ್ಯವಾನನನ್ನು ಬದುಕಿಸಿಕೊಂಡಳಂತೆ” ಎಂಬ ದಂತ ಕತೆಯನ್ನು ಹೇಳುತ್ತಿದ್ದರು. ಎಲ್ಲ ಹೆಂಗಳೆಯರಿಗೂ ದಾನ ನೀಡಿದ ನಂತರ ನನಗೂ ಕನ್ಯಾ ಮುತೈದೆ ಎಂದು ಎರಡು ಹಣ್ಣುಗಳನ್ನು ಕೊಡುತ್ತಿದ್ದರು. ಅದರಲ್ಲಿ ಯಾರೂ ಪಾಲು ಕೇಳುವಂತಿರಲಿಲ್ಲ. ಆ ದಿನಕ್ಕಾಗಿ ನಾನು ವರ್ಷಪೂರ್ತಿ ಕಾಯುವುದಕ್ಕೂ ಆ ಬಾಲ್ಯದಲ್ಲಿ ಸಿದ್ಧಳಿದ್ದೆ.
ಮಾವಿನ ಹಣ್ಣಿನ ಸ್ವಾದವೂ ಸವಿ ಸವಿ, ರುಚಿ, ರುಚಿ. ಬಾಲ್ಯದ ನೆನಪುಗಳೂ ಸವಿ, ಸವಿ, ರುಚಿ, ರುಚಿ. ಮಾವಿನ ಹಣ್ಣಿನಂತೇ ಎಷ್ಟೊಂದು ಸಿಹಿ ಸಿಹಿ ನೆನಪುಗಳು. ಹೀಗೆಯೇ ಬರೆಯಲು ಕುಳಿತರೆ, ಮಾವಿನ ರುಚಿ ಬರೆದಷ್ಟೂ, ತಿಂದಷ್ಟೂ ಹೆಚ್ಚುವುದೇ ಹೊರತು ತೃಪ್ತಿ ಎನ್ನಿಸುವುದೇ ಎಲ್ಲ. ಅದಕ್ಕೇ ಏನೋ ಅದನ್ನು ಹಣ್ಣುಗಳ ರಾಜ ಎನ್ನುವುದು.
ಈಗ ಹೋಗಿ ಇನ್ನೊಂದು ಉಂಡೆ ಮಾವನ್ನು ತಿಂದು ಈ ಲೇಖನಕ್ಕೆ ಒಂದು ಸಿಹಿ ಮಂಗಳನ್ನು ಹಾಡುತ್ತೇನೆ ಬರಲೇ . . . .
–ಪದ್ಮಾ ಆನಂದ್ , ಮೈಸೂರು
ಅಹಹಾ…. ಸವಿಯಾದ, ‘ರುಚಿಯಾದ’ ಬರಹ! ಬಹಳ ಇಷ್ಟವಾಯಿತು.ಶೀರ್ಷಿಕೆಯೂ ಬಹಳ ಸೊಗಸಾಗಿದೆ. “ಮನಸ್ಸು ಮನಸ್ಸುಗಳ ಸಂಬಂಧ ಆತ್ಮೀಯವಾಗಿದ್ದರೆ, ಸರಳ ರುಚಿಯೂ ಸವಿ ಸವಿ ನೆನಪುಗಳಾಗಿ ಉಳಿದು ಬಿಡುವುವು” ಈ ಸಾಲು ಅಕ್ಷರಶ: ಸತ್ಯ.
ಲೇಖನವನ್ನು ಒಪ್ಪಿ ಪ್ರಕಟಿಸಿ, ಮೆಚ್ಚುಗೆಯ ನುಡಿಗಳನ್ನೂ ಆಡಿದಕ್ಕಾಗಿ ವಂದನೆಗಳು.
ವಾವ್ ಮಾವಿನ ಹಣ್ಣಿನ ಲೇಖನದ ಜೊತೆ ಜೊತೆ ಯಲ್ಲಿಯೇ ಬಾಲ್ಯದ ಸವಿನೆನಪುಗಳ …ಬುತ್ತಿ..ನಂತರ ಅವುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬಳಸುವಿಕೆ..
ಅವುಗಳ ಪ್ರಭೇದಗಳು.. ತಮ್ಮ ಬಾಳಿನಲ್ಲಿ ತೂರಿಬಂದ ಅನುಭವ.. ಕಲ್ಲೆಸತದಿಂದಾದ ಅಳಿಸಲಾಗದ..ಅವಘಡ..
ಒಂದೇ ಎರಡೇ..ಎಲ್ಲ ವನ್ನು ಚೊಕ್ಕ ವಾಗಿ ಕಟ್ಟಿಕೊಟ್ಟಿರುವ..ಗೆಳತಿ ಪದ್ಮಾ ನಿಮಗೆ..
ಧನ್ಯವಾದಗಳು
ಮೆಚ್ಚುಗೆಯ ಸವಿನುಡಿಗಳಿಗೆ ಧನ್ಯವಾದಗಳು.
ಚಂದದ ಮಾವಿನಹಣ್ಣಿನ ಬರಹ ಸವಿದಷ್ಟು ಓದಿ ಖುಷಿಯಾಯಿತು….ಗೆಳತಿ
ಸವಿನುಡಿಗಾಗಿ ಧನ್ಯವಾದಗಳು.
ಮಾವಿನ ಹಣ್ಣಿನಷ್ಟೇ ಸವಿಯಾದ ಬರಹ. ನಾನಂತೂ ಉಪ್ಪಿನಕಾಯಿ ಪ್ರಿಯೆ, ಎಲ್ಲಾ ರೀತಿಯ ಉಪ್ಪಿನಕಾಯಿಯನ್ನೂ ಇಷ್ಟ ಪಟ್ಟು ಸವಿಯುತ್ತೇನೆ. Beautiful article.
ತಮ್ಮ ಆಪ್ತ ನುಡಿಗಳಿಗೆ ನಮನಗಳು.
ನಿಮ್ಮ ಲೇಖನ ಮಧುರ ಹಾಗೂ ರಸಭರಿತ ಮಾವಿನಹಣ್ಣಿನ ತರಹ ಸವಿಯಲು ರುಚಿಕರವಾಗಿತ್ತು
ಅಭಿನಂದನೆಗಳು
ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದಗಳು.
ಸುಂದರ ಲೇಖನ. ಬಾಲ್ಯದ ನೆನಪಾಯಿತು ಮೇಡಂ. ಧನ್ಯವಾದಗಳು.
ವೆಚ್ಚುಗೆಗಾಗಿ ವಂದನೆಗಳು.
ಮಾವಿನ ಹಣ್ಣಿನ ಸವಿಯಂತೆ ಲೇಖನದ ಸವಿಯನ್ನು ಉಣಿಸಿದ ನಿಮಗೆ ವಂದನೆಗಳು..
ತಮ್ಮ ನಲ್ನುಡಿಗಳಿಗಾಗಿ ಧನ್ಯವಾದಗಳು.
ಮಾವಿನಹಣ್ಣಿನ ರುಚಿ, ಸುವಾಸನಾಯುಕ್ತ ಬರಹ ತುಂಬಾ ಸಿಹಿಯೂ ಆಗಿದೆ ಮೇಡಂ.
ಚಂದದ ಲೇಖನ…