ಕಿರಿದರೊಳ್ ಪಿರಿದರ್ಥಂ- “ಕರಿ” ಪದದ ಸುತ್ತ ಮುತ್ತ!

Share Button

ಕಿರಿದರೊಳ್ ಪಿರಿದರ್ಥಂ– ಕೆಲವೊಂದು ಪದಗಳೇ ಹಾಗೇ…ಎರಡು ಅಥವಾ ಮೂರು ಅಕ್ಷರದ ಪದ ಆದರೂ ವಿವಿಧ ಅರ್ಥಗಳು ಅದಕ್ಕೆ. ಈ ವಿವರಣೆಗೆ ಪೂರಕವಾಗಿ ನಾನು ತೆಗೆದುಕೊಂಡ ಪದ – “ಕರಿ“. ಯಾಕೋ ಒಂದು ದಿನ ಈ ಪದ ನನ್ನನ್ನು ಬಹುವಾಗಿ ಕಾಡಿತು. ಕೇವಲ ಎರಡಕ್ಷರದ ಪದ ಆದರೂ ಎಷ್ಟೆಲ್ಲಾ ಅರ್ಥಗಳಿವೆ. ಒಂದು ಪದದ ಕಾಗುಣಿತ ವ್ಯತ್ಯಾಸವಾದರೂ ಅಲ್ಲಿ ಆಗುವ ಬೃಹತ್ ವ್ಯತ್ಯಾಸ! ನಾಮಪದವಾಗಿ, ಕ್ರಿಯಾಪದವಾಗಿ, ನಾಮವಿಶೇಷಣವಾಗಿ, ಸಮಾನಾರ್ಥಕ ಪದವಾಗಿ ಬಳಕೆಯಾಗುವ  ಪದ  “ಕರಿ”.

 ಕರಿ ಎಂದರೆ ಆನೆ. ಅದಕ್ಕೆಂದೇ ವಿನಾಯಕನನ್ನು ಕರಿವದನ, ಕರಿ ಮುಖ, ಕರಿರಾಜ ವರದ ಅನ್ನುವರು. ಅಲ್ಲದೆ ಮಹಾಭಾರತ ಕಥೆಯಲ್ಲಿ ಬರುವ ಹಸ್ತಿನಾಪುರಕ್ಕೂ ಕರಿಪುರವೆನ್ನುವರು. ಆನೆಯ ದಂತವನ್ನು ಹಾಗೆಯೇ  ಕಪ್ಪಾದ ದಂತವನ್ನೂ ಸಹಾ ಕರಿದಂತ ಅನ್ನಬಹುದು. ಸೊಕ್ಕಿದ ಆನೆಯನ್ನು ಮದಗಜವೆಂದು ಹೇಳುವಂತೆಯೇ  ಮದಕರಿ ಎಂದು ಹೇಳುವರು. ಕೆಂಡಕ್ಕೆ ನೀರು ಹಾಕಿದರೆ ಕರಿ  ಸಿಗುತ್ತದೆ. ಕರಿ ಕಪ್ಪು ಬಣ್ಣ ಸೂಚಕವೂ ಹೌದು. ಕರಿಯ ಕೂದಲು ಬೆಳ್ಳಗಾದಾಗ ಹಚ್ಚಿಕೊಳ್ಳಲು ಕರಿಯ ಬಣ್ಣವನ್ನು ಬಳಸುವರು. ಕಣ್ಣಿಗೆ ಹಚ್ಚುವ ಕಾಡಿಗೆಯೂ ಕರಿಯೇ. ರಸ್ತೆ ನಿರ್ಮಾಣದಲ್ಲಿ ಬಳಕೆಯಾಗುವ ಡಾಂಬರು ಕೂಡಾ ಅಚ್ಚ ಕರಿಯ ಬಣ್ಣವೇ! ರಾಹು ಗ್ರಹ ಪ್ರೀತ್ಯರ್ಥವಾಗಿ ಮಾಡುವ ದಾನಕ್ಕೆ ಬಳಸುವುದು ಕೂಡಾ ಕರಿ ಬಣ್ಣದ ವಸ್ತ್ರ ಹಾಗೂ ಇಡಿಯ ಉದ್ದು (ಸಿಪ್ಪೆ ಕರಿಯ ಬಣ್ಣ ಅಲ್ವಾ?)

ವರ್ಣದ್ವೇಷದ ಭಾವನೆಯನ್ನು ಹುಟ್ಟುಹಾಕಲು ಕಾರಣೀಭೂತವಾಗಿರುವುದು ಕೂಡಾ ಮನುಜನ ತೊಗಲಿನ ಬಣ್ಣ- ಕರಿಯರು, ಬಿಳಿಯರು ಅನ್ನುವ ನಾಮಧೇಯ ಬೇರೆ. ಜಗತ್ತಿನಾದ್ಯಂತ ಕರಿಯ ಬಣ್ಣವನ್ನು ಅಸಡ್ದೆಯಿಂದ ಕಾಣುವರು. ಕೆಡುಕು, ಅನಿಷ್ಟ ಅನ್ನುವ ಭಾವನೆ. ಹಾಗಾಗಿ ಕರಿ ಬಣ್ಣದವರನ್ನು ಕಂಡರೆ ತಾತ್ಸಾರ ಭಾವ. ಕ್ರೂರ, ನೀಚ, ಮಾಂತ್ರಿಕ ಪಾತ್ರಗಳಿಗೆ ಹೆಚ್ಚಾಗಿ ಬಳಕೆಯಾಗುವುದು ಕರಿವಸ್ತ್ರವೇ. ನೂರಾರು ಕಥೆಯ ಹೇಳುವ ಕರಿ ಮಚ್ಚೆಗಳು! ಕಪ್ಪು ಬಣ್ಣವನ್ನು ಸಂಕೇತಿಸುವ ಕರಿ ಶಬ್ದವು,  ಕೆಲವು ಶಬ್ದಗಳ ಹಿಂದಿನಿಂದ ಬಂದು ಸೇರಿಕೊಂಡು ಸೃಜಿಸುವ ಅರ್ಥವೈವಿಧ್ಯತೆಗೆ ತಲೆದೂಗಲೇ ಬೇಕು. ಕರಿಯಪ್ಪ, ಕರಿ ಮುಸುಡಿ, ಕರಿ ನಾಗ, ಕರಿಯ ಬೆಕ್ಕು, ಕರಿಯ ನಾಯಿ, ಕರಿಯ ದನ, ಕರಿಯ ಇರುವೆ, ಕರಿಮೋಡ, ಕರಿ ಇರುಳು, ಕರಿಯ ದಾರ, ಕರಿಹಲಗೆ, ಕರಿಪತಾಕೆ, ಕರಿಶಾಯಿ, ಕರಿ ಬೆಲ್ಟು, ಕರಿ ಎಳ್ಳು, ಕರಿ ಜೀರಿಗೆ, ಕರಿ ಮೆಣಸು, ಕರಿ ಚೆಂಡು, ಕರಿ ನೆರಳು/ಕರಿ ಛಾಯೆ, ಕರಿ ದ್ರಾಕ್ಷೆ,…, ಹೀಗೆ! 

ನೀಲಾಕಾಶದಲ್ಲಿ ಕರಿಮೋಡಗಳು ದಟ್ಟೈಸಿದಾಗ ಗಿರಿನವಿಲಿಗೆ ಗರಿಬಿಚ್ಚಿ ಕುಣಿಯುವ ಸಂಭ್ರಮ! ಅಮಾವಾಸ್ಯೆಯ ಕರಿ ಇರುಳು ಎಂತಹ ಧೈರ್ಯವಂತರಲ್ಲೂ ಅಂಜಿಕೆ ಹುಟ್ಟಿಸಬಲ್ಲುದು! ಹೆಚ್ಚಿನ ಕಾಗೆಗಳ ಬಣ್ಣ ಕಪ್ಪು ಅದಕ್ಕೆ ಕರಿಕಾಗೆ ಅನ್ನುವರು. ಅಪರೂಪದ ಬಿಳಿ ಕಾಗೆಗಳು ಇವೆಯಲ್ಲಾ? ಅಲ್ಲದೇ ಹಸಿರು, ನೀಲಿ ಕಂದು ಬಣ್ಣದ ಕಾಗೆಗಳೂ ಇವೆಯಂತೆ! ಅದೇ ರೀತಿ ಕರಡಿ ಅಂದ ಕೂಡಲೇ ನಮ್ಮ ಮುಂದೆ ಮೂಡುವುದು ಕರಿಯ ಬಣ್ಣದ ಕರಡಿಯೇ ಹೊರತು ಬಿಳಿ ಬಣ್ಣದ ಕರಡಿಯಲ್ಲ. ಕರಿ ಪತಾಕೆ ಅನ್ನುವ ಶಬ್ದವು ಪ್ರತಿಭಟನೆಯಲ್ಲಿ ಬಳಕೆಯಾಗುತ್ತದೆ. ಮೌನಪ್ರತಿಭಟನೆಯಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಡುವ ಅಥವಾ ತಮ್ಮ ಅಸಹಕಾರ ತೋರ್ಪಡಿಸುವ ಕ್ರಿಯೆಯನ್ನು ಕರಿಪತಾಕೆಯ ಪ್ರದರ್ಶನವೇ ಹೇಳುವುದು. ಬಾಯಿಯಲ್ಲಿ ಹೇಳದ ನೂರೊಂದು ಮಾತುಗಳನ್ನು ವ್ಯಕ್ತಪಡಿಸಲು ಕರಿಪತಾಕೆ ಬಳಕೆಯಾಗುವುದು. ನಮ್ಮಂತಹ ಶಿಕ್ಷಕರಿಗೆ ಕರಿಹಲಗೆಯ ಒಡನಾಟವೆಂದಿಗೂ ಬಲು ಪ್ರಿಯ. ಕರಿಹಲಗೆಯ ಮೇಲೆ ಬಿಳಿಯ ಸೀಮೆಸುಣ್ಣದಿಂದ ಮೂಡುವ ಅಕ್ಷರಗಳ ಲಾಲಿತ್ಯವೇ ಬಲು ಸೊಗಸು. ಅಂದ ಹಾಗೆ ಕಪ್ಪು ಬಣ್ಣ ಅಶುಭಸೂಚಕ, ಶೋಕಸೂಚಕ ಅನ್ನುವುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಪಾರ್ಥಿವ ಶರೀರದ ದರ್ಶನ ಮಾಡಲು ಹೋದಾಗ ಕರಿಯ ಬಣ್ಣದ ವಸ್ತ್ರವನ್ನು ಧರಿಸುವರು.  

ಕರಿಯ ಬಳೆ ಮಾತ್ರ ಮಂಗಲಸೂಚಕ, ವರಮಹಾಲಕ್ಷ್ಮಿ ವ್ರತದ ದಿನ ಕೊಡುವ ಪ್ರಸಾದ ಅಥವಾ ಬಾಗಿನದಲ್ಲಿ, ದೇವಿಯ ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ಕರಿಯ ಬಳೆಯೇ. ಕರಿ ಬಳೆಯನ್ನು ತೊಟ್ಟು ಸಂಭ್ರಮಿಸುವ ಹೆಂಗಳೆಯರ ಸಂಖ್ಯೆಗೇನೂ ಕಡಿಮೆಯಿಲ್ಲ. ಗೌರಿಹಬ್ಬದ ದಿನ ಸಹೋದರರು ಕೊಡಿಸುವ ಕಪ್ಪುಬಳೆ ಅಥವಾ ಗೌರಿಬಳೆಗೆ ಮಂಗಳಕರ ಹಾಗೆಯೇ ಸಹೋದರತ್ವದ ಲೇಪನ! ಮಾನಿನಿಯರ ಕತ್ತಿನಲ್ಲಿ ಶೋಭಿಸುವ ಕರಿಮಣಿ ಸರ ಮಾಂಗಲ್ಯದ ಪ್ರತೀಕವೂ ಹೌದು, ಸುಭಧ್ರತೆಯ ಬಾವನೆ ಮೂಡಿಸುವ ಮೌನ ಆಯುಧವೂ ಹೌದು. ಹಾಗೆಯೇ ಆಸ್ತಿಕರಿಂದ ಪೂಜಿಸಲ್ಪಡುವ ಹಲವು ದೇವರ ಮೂರ್ತಿಗಳು, ಶಿವಲಿಂಗ ಅಲ್ಲದೆ ಸಾಲಿಗ್ರಾಮ ಎಲ್ಲದರ ಬಣ್ಣ ಕರಿಬಣ್ಣ. ಕರಿಯಬೆಕ್ಕು ದಾರಿಗೆ ಅಡ್ಡ ಬಂದರೆ ಅಪಶಕುನ, ಆದರೆ ಕರಿಯ ಬೆಕ್ಕು ಮನೆಯಲ್ಲಿದ್ದರೆ ಆ ಮನೆಗೆ ಯಾವುದೇ ಕೆಟ್ಟದೃಷ್ಟಿ ತಾಗುವುದಿಲ್ಲ ಅನ್ನುವ ನಂಬಿಕೆಯೂ ದಟ್ಟವಾಗಿದೆ. ಮಂತ್ರಿಸಿದ ಕರಿದಾರ ಕೈ/ಕಾಲಿಗೆ ಕಟ್ಟಿದ್ದರೆ ಭದ್ರತೆಯ ಭಾವನೆ. ಕರಿಯ ಪಟ್ಟೆ ನೂಲಿನ ಉಡಿದಾರ ಮೈಮೇಲೆ ಇದ್ದರೆ ಒಳ್ಳೆಯದು ಅನ್ನುವ ನಂಬಿಕೆ. ಕಪ್ಪು ಬಣ್ಣದ ಶ್ರೇಷ್ಠತೆಯನ್ನು ವಿವರಿಸುವಾಗ “ಆಕಳ ಬಣ್ಣ ಕಪ್ಪಾದರೂ, ಅದರ ಹಾಲು ಕಪ್ಪೇ?” ಎಂದು ದಾಸರು ತಮ್ಮ ಹಾಡಿನಲ್ಲಿ ಪ್ರಶ್ನಿಸಿದ್ದಾರೆ. ಫ್ಯಾಷನ್ ಪ್ರಿಯರು ಹಾಗೆಯೇ ಚಲನಚಿತ್ರ ನಟಿ/ನಟರು ಬಿಸಿಲಿನಿಂದ ಕಣ್ಣುಗಳನ್ನು ರಕ್ಷಿಸಲು  ಕರಿ ಕನ್ನಡಕ ಅಥವಾ ಕಪ್ಪು ಕನ್ನಡಕ ಧರಿಸುವರು. ಕರಾಟೆ, ಜೂಡೋ ಪ್ರವೀಣರ ಪ್ರಾವೀಣ್ಯತೆ ಸಾರುವ  ಕರಿ ಬೆಲ್ಟು!

ಕರಿ ಬಣ್ಣವಿಲ್ಲದೆಯೂ ಕರಿ ಶಬ್ದವನ್ನು ಬೆನ್ನ ಹಿಂದೆ ಸೇರಿಸಿಕೊಂಡ ಹಲವು ಶಬ್ದಗಳಿವೆಯೆಂದರೆ ಅಚ್ಚರಿಯೇ? ಒಳ್ಳೆಯ ಸಂಭಾವಿತ ಮನುಷ್ಯನೇನಾದರೂ ತಪ್ಪು ಕೆಲಸ ಮಾಡಿದರೆ ಆತನ ವ್ಯಕ್ತಿತ್ವಕ್ಕೊಂದು ಕರಿಚುಕ್ಕೆ ಮೂಡಿತು ಅನ್ನುವರು. ಎಲ್ಲಾ ಬಣ್ಣ ಮಸಿ ನುಂಗಿತು ಅನ್ನುವ ಗಾದೆ ಮಾತಿನಂತೆ ಒಳ್ಳೆಯವನಾಗಿ ಬದುಕಿದ ವ್ಯಕ್ತಿ ಒಂದು ಕೆಟ್ಟ ಕೆಲಸ ಮಾಡಿದರೆ ಜನರು ಹೇಳುವ ರೀತಿ.  ಹಾಗೆಯೇ ನಂಬಿದವನಿಂದಲೇ ವಿಶ್ವಾಸದ್ರೋಹವಾದಾಗ ಒಬ್ಬನು ಹೀಗೆನ್ನಬಹುದು “ಅವನು ನನ್ನ ಕರಿಪುಸ್ತಕಕ್ಕೆ ಸೇರಿದ”. ತಪ್ಪು ಮಾಡಿದವರ,  ವಿಶ್ವಾಸ ಕಳೆದುಕೊಂಡಿರುವರ, ದಂಡನೆಗೆ ಗುರಿಯಾದವರ, ಉದ್ಯೋಗದಿಂದ ನಿರಾಕರಿಸಲ್ಪಟ್ಟವರ ಹೆಸರುಗಳನ್ನು ದಾಖಲೆ ಮಾಡಿ ಇಡುವ ಪುಸ್ತಕಕ್ಕೆ ಕರಿಪುಸ್ತಕವೆನ್ನುವರಂತೆ (Black book). ಹಾಲು ಸೇರಿಸದೆ ತಯಾರಿಸುವ ಚಹಾ, ಕಾಫಿ ಇವುಗಳನ್ನು ಕರಿ ಚಹಾ, ಕರಿ ಕಾಫಿ ಅನ್ನುವರು. ವಿಮಾನ ಹಾರಾಟದ ದಾಖಲೆಗಳನ್ನು ಸಂಗ್ರಹಿಸುವ ಕರಿ ಪೆಟ್ಟಿಗೆ (Black box)ಯ ಬಣ್ಣ ಕಪ್ಪಲ್ಲ ಅಂತ ಗೊತ್ತಿದೆ ತಾನೇ?

ಇನ್ನು ಆಡುಭಾಷೆಯಲ್ಲಿ ಯಾರನ್ನಾದರೂ ಕರೆಯಬೇಕಿದ್ದರೆ(ಕೂಗಬೇಕಿದ್ದರೆ- ನಮ್ಮ ಕಡೆ ಕೂಗುವುದೆಂದರೆ ಅಳುವುದು) “ಅವರನ್ನು/ಅವಳನ್ನು/ಅವನನ್ನು ಕರಿ” ಅಂತಾನೇ ಹೇಳುವರು. ಅದೇ ರೀತಿ ಎಣ್ಣೆಯಲ್ಲಿ ಕರಿದು ಮಾಡುವ ತಿಂಡಿಗಳಿವೆ ತಾನೇ? ಇಲ್ಲಿ ಕರಿ ಅಂದರೆ ಕಾಯಿಸು (Wait ಅಲ್ಲ) deep fry ಅನ್ನುವ ಅರ್ಥವನ್ನು ಕೊಡುತ್ತದೆ. ಕರಿ ಅಂದರೆ ಮೇಲೋಗರ ಅಥವಾ ಪಲ್ಯ ಅಂತಾನೂ ಅರ್ಥ ಇದೆ. ಪಲ್ಯಕ್ಕೆ ಉಪ್ಕರಿ ಅಂತಾನೂ ಅನ್ನುತ್ತಾರೆ.  ಇನ್ನು ಇಂಗ್ಲೀಷ್ ಭಾಷೆಗೆ ಬಂದಾಗ ಕರಿ (Curry) ಅನ್ನುವ ಶಬ್ದ ಅಡುಗೆಮನೆಯ ಎಲ್ಲಾ ವ್ಯಂಜನಗಳ ಎದುರು ಸೇರಿಕೊಳ್ಳುತ್ತದೆ. ಎಗ್-ಕರಿ, ಫಿಶ್-ಕರಿ,…., ಇತ್ಯಾದಿ.

ಮಾತನಾಡುವಾಗ, ಓದುವಾಗ ಅಥವಾ ಬರೆಯುವಾಗ ಒಂದು ಅಕ್ಷರ ಆಚೆ ಈಚೆ ಆದರೆ ಅದರಲ್ಲಿ ದೊಡ್ಡ ಸಂಗತಿ ಏನಿದೆ ಅಂತ ಕೆಲವರು ಹೀಗಳೆದು ಮಾತಾಡುವುದುಂಟು. ಒಂದಕ್ಷರದ ಕಾಗುಣಿತ ತಪ್ಪಿದರೂ, ಅದು ಅನಾಹುತ ಸೃಷ್ಟಿಸಬಹುದು. “ಕರಿ” ಶಬ್ದದ ಒಂದು ಅಕ್ಷರದ ಕಾಗುಣಿತ ಬದಲಾದರೂ ಸಿಗುವ ಪದಸಂಪತ್ತಿಗೆ ಬೆರಗಾಗಲೇ ಬೇಕು. ಕರಿ ಶಬ್ದದ “ಕ” ಅಕ್ಷರದ ಕಾಗುಣಿತ ಬದಲಾದರೆ  ಕಾರಿ (ಅಪಾಯಕಾರಿ, ಸಹಕಾರಿ), ಕಿರಿ (ಹಲ್ಲು ಕಿರಿ, ಕಿರಿ ಕಿರಿ), ಕೀರಿ (ಸಣ್ಣ ಮಗು ಒಂದೇ ಸವನೆ ಅಳುತ್ತಿದ್ದರೆ ತುಳು ಭಾಷೆಯಲ್ಲಿ ಮಗು ಕೀರಿಕುಟ್ಟಿ ಅಳುತ್ತಿದೆ ಅನ್ನುತ್ತೇವೆ), ಕುರಿ, ಕೂರಿ (ಕೂರೋದು), ಕೇರಿ, ಕೋರಿ (ಶುಭಾಶಯ ಕೋರಿ) ಅನ್ನುವ ಪದಗಳು ಸಿಗುತ್ತವೆ. ಹಾಗೆಯೇ “ರಿ” ಶಬ್ದದ ಕಾಗುಣಿತ ಬದಲಾದರೆ ಕರ, ಕರು, ಕರೆ, ಕರೋ (ಹಿಂದಿ) ಪದಗಳ ಅರ್ಥವೇ ಬೇರೆ. “ಕರಿ” ಶಬ್ದದ ಎರಡು ಅಕ್ಷರಗಳ ಕಾಗುಣಿತ ಬದಲಾದರೂ ಹಲವು ಶಬ್ದಗಳು ಹುಟ್ಟಿಕೊಳ್ಳುತ್ತವೆ. ಕಾರ, ಕೆರ, ಕೋರ, ಕೀರೆ, ಕೆರೆ, ಕೋರೆ, ಕಾರು, ಕುರು, ಕೋರು,….ಇತ್ಯಾದಿ. ಒತ್ತಕ್ಷರ ನುಸುಳಿದರೆ ಇನ್ನೂ ಹಲವು ಶಬ್ದಗಳು. “ಕ” ಮತ್ತು “ರ” ಅಕ್ಷರಗಳ ಮಧ್ಯೆ ಅದೆಂತಹಾ ಬೆಸುಗೆ! ನಿಜವಾಗಿಯೂ ಇದು ಅಚ್ಚರಿ ಪಡುವಂತಹ ವಿಷಯವೇ. ಒಟ್ಟಿನಲ್ಲಿ ನಮ್ಮ ಹೆಮ್ಮೆಯ ಕನ್ನಡದ ಪದಸಂಪತ್ತಿಗೆ ಎಂತಹವರೂ ಬೆರಗಾಗಿ ತಲೆದೂಗಬೇಕು. ಏನಂತೀರಾ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

38 Responses

  1. Shailarani Bolar says:

    Fantastic vocabulary. Well done

  2. ರವೀಶ says:

    ಬಹಳ ಅದ್ಭುತವಾದ ಲೇಖನ ಮೇಡಂ, ದಿನಚರಿಯಲ್ಲಿ ಬಳಸುವಂತಹ ಪದ ಆಗಿದ್ದರೂ ಸಹ ಇಷ್ಟೆಲ್ಲಾ ಯೋಚಿಸಿರಲಿಲ್ಲ. ಇದೇ ರೀತಿ ಇನ್ನೂ ಅನೇಕ ಪದಗಳ ಬಗ್ಗೆ ಎಷ್ಟೊಂದು ವಿಮರ್ಶೆ ಮಾಡಬಹುದು ಅಲ್ವಾ ..

    • ಡಾ. ಕೃಷ್ಣಪ್ರಭ ಎಂ says:

      ಹೌದು…ತುಂಬಾ ಪದಗಳನ್ನು ಈ ರೀತಿ ವಿಶ್ಲೇಷಿಸಿ ಬರೆಯಬಹುದು…ಮೆಚ್ಚುಗೆಯ ನುಡಿಗಳಿಗೆ ಧನ್ಯವಾದ

  3. ಅಬಬ್ಭಾ..ಕರಿ ಶಬ್ದದ ಅರ್ಥ ಬಾಹುಳ್ಯ…ಬಳಸುವ ಬಗೆ ಅವುಗಳ ವ್ಯತ್ಯಾಸ..ವಸ್ತಾರವಾದ ಅನಾವರಣ.. ಮನಕ್ಕೆ ಮುದ ತಂದಿತು ಧನ್ಯವಾದಗಳು ಮೇಡಂ

    • ಡಾ. ಕೃಷ್ಣಪ್ರಭ ಎಂ says:

      ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದ ಮೇಡಂ

  4. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  5. Santosh Shetty says:

    ಓದುತ್ತಾ ಹೋದಂತೆ ..ಸಾಹಿತ್ಯದ ವಿದ್ಯಾರ್ಥಿಯಾದ ನನಗೆ, ಭಾಷಾ ವಿಜ್ಞಾನ ಮತ್ತು ವ್ಯಾಕರಣ ತರಗತಿಯಲ್ಲಿ ಇದ್ದ ಅನುಭವವಾಯಿತು. Well presented.

    • ಡಾ. ಕೃಷ್ಣಪ್ರಭ ಎಂ says:

      ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದ

  6. Madam,
    Any topic, you ✍️ so naturally.
    Kudos…

  7. Hema says:

    ವಿಜ್ಞಾನ ಪಾಠ ಮಾಡುವ ಮೇಡಂರವರ ಕನ್ನಡ ಪಾಂಡಿತ್ಯಕ್ಕೆ ಬೆರಗಾದೆ… ‘ಕರಿ’ ಎಂಬ ಒಂದೇ ಪದದ ಲಾಲಿತ್ಯ, ವ್ಯಾಪ್ತಿ, ಆಳ , ವಿಸ್ತಾರವನ್ನು ಬಹಳ ಸೊಗಸಾಗಿ ಕಟ್ಟಿ ಕೊಟ್ಟಿದ್ದೀರಿ..ಬರಹ ಬಹಳ ಸೊಗಸಾಗಿ ಮೂಡಿಬಂದಿದೆ.

    • ಡಾ. ಕೃಷ್ಣಪ್ರಭ ಎಂ says:

      ಕನ್ನಡವೆಂದರೆ ಅದೇನೋ ಸೆಳೆತ..
      ಮೆಚ್ಚುಗೆಗೆ ವಂದನೆಗಳು..ಲೇಖನ ಪ್ರಕಟಿಸಿದ ನಿಮಗೆ ಧನ್ಯವಾದಗಳು

    • AHMAD JAMALUDDEEN says:

      ಅದು ನಮ್ಮ ಮೇಡಂ ಪವರ್. ಸ್ವಚ್ಛವಾಗಿ ಕನ್ನಡದಲ್ಲೇ ಮಾತನಾಡಬಲ್ಲ ಶಕ್ತಿ , ಆಂಗ್ಲ ಭಾಷೆಯನ್ನು ಅಷ್ಟೇ ಸ್ಪಷ್ಟವಾಗಿ ಮಾತನಾಡಬಲ್ಲರು. ಕಲೆಗಳು ಕೂಡಾ ಅದ್ಭುತ , ಅವರ ಕುರಿತು ಹೇಳಲೇ ಅಸಾಧ್ಯ

  8. ಹರಿಪ್ರಸಾದ್ N says:

    ‘ಕರಿ’ ಎಂಬ ಪದದ ಎಲ್ಲಾ ಅರ್ಥಗಳನ್ನು ಒಟ್ಟು ಗೋಡಿಸಿ ಒಂದು
    ಒಳ್ಳೆಯ Curry (ಪದಾರ್ಥ) ನೀಡಿದ್ದೀರಿ.
    ನಿಮಗೆ ನಮ್ಮ ಧನ್ಯವಾದಗಳು

    • ಡಾ. ಕೃಷ್ಣಪ್ರಭ ಎಂ says:

      ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು

  9. Padma Anand says:

    ಎರಡಕ್ಷರದ ಪದದ ಅರ್ಥ ವ್ಯಾಪ್ತಿಗೆ ಬೆರಗಾಯಿತು ಮನ. ಸುಂದರ ಲೇಖನ.

    • ಡಾ. ಕೃಷ್ಣಪ್ರಭ ಎಂ says:

      ಸುಂದರ ಪ್ರತಿಕ್ರಿಯೆಗೆ ಧನ್ಯವಾದ ಮೇಡಂ

  10. shubhalakshmi says:

    ನಿಮ್ಮ ಲೇಖನದಲ್ಲಿ ಇರುವ ಹಾಗೆ ವರ್ಣ ಬೇದ ಮಾಡುವುದು ಸಹಜ ಆದರೆ ದೃಷ್ಠಿ ತತಃ ಸೃಷ್ಟಿ ಎಂಬುವುದು ಸತ್ಯವಾದ ಮಾತು …..ನಾವು ಪ್ರಪಂಚವನ್ನು ಹೇಗೆ ನೋಡುತ್ತೇವೆ ಹಾಗೆ ನಮಗೆ ಪ್ರಪಂಚ ಕಾಣುತ್ತದೆ….ಎಲ್ಲರಲ್ಲಿ ಒಳ್ಳೆಯದನ್ನು ಹುಡುಕಿದ ಧರ್ಮರಾಯನಿಗೆ ಯಾರು ಕೆಟ್ಟವರಾಗಿ ಕಾಣಲೇ ಇಲ್ಲ …..ಎಲ್ಲರಲ್ಲಿಯೂ ದೋಷ ಹುಡುಕಿದ ಸುಯೋಧನನಿಗೆ ಯಾರೊಬ್ಬರೂ ಒಳ್ಳೆಯವರು ಕಾಣಲಿಲ್ಲ ……..ಯಾವಾಗ ಈ ಜಗತ್ತು ದೃಷ್ಟಿ ಕೋನ ವನ್ನು ಬದಲಾಯಿಸುತ್ತರೆಯೋ ಅವರಿಗೆ ಈ ಜಗತ್ತು ಸ್ವರ್ಗದಂತಿರುತ್ತದೆ……ನೀವು “ಕರಿ ” ಎಂಬ ಶಬ್ದದ ಜೊತೆ ….ಬಹಳ ಜಾಗರೂಕತೆ ಯನ್ನು ಸೃಷ್ಟಿಸಿದ್ದು ……ಓದಲು ಮುದವೆನಿಸಿತು………. ವಿಜ್ಞಾನ ಕಲಿಸುವುದರ ಜೊತೆಗೆ …..ನಿಮ್ಮ ಕನ್ನಡ ಪ್ರೇಮವು ವಿದ್ಯಾರ್ಥಿಗಳಾದ ನಮಗೆ ಹುರುಪು ತುಂಬುತ್ತದೆ…..ಧನ್ಯವಾದಗಳು ಮೇಡಂ

    • Dr Krishnaprabha M says:

      ಆಹಾ ಎಷ್ಟು ಚಂದದ ಪ್ರತಿಕ್ರಿಯೆ. ನನ್ನ ಲೇಖನ ನಿಮ್ಮ ಮನ ಮುಟ್ಟಿದರೆ ನನಗೆ ಅತ್ಯಾನಂದ.. ದನ್ಯವಾದಗಳು ಶುಭ

  11. . ಶಂಕರಿ ಶರ್ಮ says:

    ಕರಿ ಪದದ ಹಿರಿದರ್ಥವನ್ನು ಬೆರಗಾಗುವಂತೆ ಗರಿಗೆದರಿದ ಸಿರಿ ಬರೆಹದಲ್ಲಿ ಕೂರಿಸಿದ ತಮಗೆ ಕರ ಮುಗಿದೆ!

    • Dr Krishnaprabha M says:

      ಕರ ಮುಗಿದ ಶಂಕರಿ ಅಕ್ಕನಿಗೆ ಶಿರ ಬಾಗಿ ವಂದಿಸುವೆ

  12. Mittur Nanajappa Ramprasad says:

    ಸಿರಿಗನ್ನಡ ಕಸ್ತೂರಿಯ ಕಂಪನ್ನು

    ಸಿರಿಗನ್ನಡ ಕಸ್ತೂರಿಯ ಕಂಪನ್ನು
    ಕನ್ನಡ ಶ್ರೀಗಂಧ ಸೌಗಂಧವನ್ನು
    ಸವಿಗನ್ನಡ ಭಾಷೆಯ ಸೊಂಪನ್ನು
    ಕನ್ನಡ ಸೌಂದರ್ಯ ಸಿರಿತನವನ್ನು
    ಸಾರಿರುವಿರಿ ಕರಿ ಪದದ ಭವ್ಯತೆಯಲ್ಲಿ /

    ಪಂಪ ರನ್ನರು ಆಲಂಗಿಸಿದ ಅಕ್ಶರಮಾಲೆಯ ಭವ್ಯತೆಯನ್ನು/
    ವಿಶ್ಲೇಷಿಸಿರುವಿರಿ ವರ್ಣನೀಯ ವ್ಯಾಕರಣದ ವಿಭಿನ್ನತೆಯಲ್ಲಿ /
    ಬೇಂದ್ರೆ ಕುವೆಂಪು ಆರಾಧಿಸಿದ ವರ್ಣಮಾಲೆಯ ಘನತೆಯನ್ನು /
    ವಿವರಿಸಿರುವಿರಿ ಬಣ್ಣನೀಯ ಸೊಲ್ಲರಿಮೆಯ ವೈವಿಧ್ಯತೆಯಲ್ಲಿ /

    ಕನ್ನಡದ ವರ್ಗಿಯ ವ್ಯಂಜನ ಕ ಮತ್ತು ಅವರ್ಗಿಯ ವ್ಯಂಜನ ರ /
    ಪಾಂಡಿತ್ಯದಲ್ಲಿ ಜೊತೆಗೂಡಿಸಿ ತೋರಿರುವಿರಿ ಭಾಷೆಯ ಎತ್ತರ /
    ಸ್ಪಷ್ಟಿಸಿರುವಿರಿ ಕನ್ನಡ ಪದಗುಚ್ಛ ಪರಿಮಳ ಎಂದೆಂದೂ ಅಮರ /
    ಪರಿಣಿತಿಯಲಿ ಚಿತ್ರಿಸಿರುವಿರಿ ಕನ್ನಡ ಭಾಷೆ ಎಷ್ಟೊಂದು ಸುಂದರ/

    • Dr Krishnaprabha M says:

      ಎಷ್ಟು ಚಂದದ ಕವಿತೆ ಕಟ್ಟಿದಿರಿ! ಅನಂತಾನಂತ ಧನ್ಯವಾದಗಳು ನಿಮಗೆ

  13. ಮಹೇಶ್ವರಿ ಯು says:

    ಬರಹ ಬಹಳ ಸೊಗಸಾಗಿದೆ. ಚಿಂತನಪೂಣ೯ವಾಗಿದೆ

    • Dr Krishnaprabha M says:

      ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು

  14. VEDAVATHI S says:

    ಕರಿ ಎನ್ನುವ ಒಂದೇ ಪದದಿಂದ ನಮ್ಮ ಅಲೋಚನೆಯನ್ನು ಹಲವು ಮಗ್ಗುಲಿಗೆ ತೆರೆದಿಡುವ ತುಂಬಾ ಉಪಯುಕ್ತ ಲೇಖನ.

    • Dr Krishnaprabha M says:

      ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು

  15. Dr Krishnaprabha M says:

    ಕರಿಯಾಲಂಕೃತ ಬರಹ ,

    ಲೇಖನವನ್ನು ಬಣ್ಣಿಸಲು ಪದಗಳೇ ಸಾಲದು , ಅಷ್ಟು ಅದ್ಭುತವಾಗಿ ಮೂಡಿಬಂದಿದೆ.

    ಅಚ್ಚ ಕನ್ನಡದಲ್ಲಿ ಸ್ವಚ್ಛ ಬರಹ , .
    Awesome mam❤️ ——-ನನ್ನ ವಿದ್ಯಾರ್ಥಿಯೋರ್ವನ ಪ್ರತಿಕ್ರಿಯೆ

  16. Anonymous says:

    ಬಹಳ ಚೆನ್ನಾಗಿ ಮೂಡಿಬಂದಿದೆ.

  17. sudha says:

    Very nice article

  18. ಸುವರ್ಣಮಾಲಿನಿ says:

    ಕರಿ ಪದದ ಪಿರಿದರ್ಥವ ವರ್ಣಿಸಿ , ಸಾಮ್ಯತೆ ತುಲನೆ ಮಾಡಿ ಬಣ್ಣಿಸಿದ್ದು ಅದ್ಭುತವಾಗಿ ಮೂಡಿಬಂದಿದೆ.

    • Dr Krishnaprabha M says:

      ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

  19. Prajwal says:

    ಅದ್ಭುತವಾದ ಕರಿ ಪದದ ವರ್ಣನೆ….ಓದುತ್ತಾ ಹೋದಂತೆಲ್ಲ ಹೋ ಹೌದಲ್ಲ ಎಂದು ಕುತೂಹಲ ಮೂಡಿಸುವಂತಿದೆ… ಮೂರ್ತಿ ಚಿಕ್ಕದಾದರೂ ಪದದ ಕೀರ್ತಿ ದೊಡ್ಡದು ಎಂದು ಗಾದೆಗೆ ಮತ್ತೊಂದು ಸಾಬೀತು ದೊರಕಿತು…

  20. ಅರವಿಂದ ಶ್ಯಾನಭಾಗ says:

    “ಕರ”ವನ್ನು ಸೇರಿಸಿದ್ದರೆ ಬರೆಯುವ ‘ಕೈ’ ಗಟ್ಟಿಯಾಗಿ ‘ತೆರಿಗೆ’ ತುಂಬಲು ನೆರವಾದೀತು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: