ನಾ ಕಂಡ ಆದಿ ಯೋಗಿ: ಹೆಜ್ಜೆ 2
-ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…
ಮಾರನೆಯ ದಿನ ಮುಂಜಾನೆ ಐದು ಗಂಟೆಗೇ ಎದ್ದು, ಸ್ನಾನಮಾಡಿ, ಗುರುಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ಧರಾದೆವು. ವಿಶಾಲವಾದ ಸಾಧನ ಹಾಲಿನಲ್ಲಿ, ಸಾಧಕರ ದಂಡೇ ನೆರೆದಿತ್ತು. ಎಲ್ಲರೂ ಪದ್ಮಾಸನದಲ್ಲಿ ಕುಳಿತು ಓಂಕಾರವನ್ನು ಪಠಿಸುತ್ತಿದ್ದರು. ಐದೂವರೆಗೆ ಸರಿಯಾಗಿ ಗುರುಸ್ತುತಿ ಆರಂಭವಾಯಿತು. ನಾವು, ಅವರೊಂದಿಗೆ ಕುಳಿತು ಮಂತ್ರಗಳನ್ನು ಪಠಿಸತೊಡಗಿದೆವು. ಹತ್ತು ನಿಮಿಷ ಕಳೆದಿರಬಹುದು, ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರ ಆರಂಭವಾಯಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಈ ಮಂತ್ರಪಠಣ ನಡೆದಿತ್ತು. ನಸುಗತ್ತಲು, ನಿಧಾನವಾಗಿ ಮೂಡಣದಲ್ಲಿ ಸೂರ್ಯ ಉದಯಿಸುತ್ತಿದ್ದ, ಹಕ್ಕಿಗಳ ಚಿಲಿಪಿಲಿ ಸದ್ದು ಮಂತ್ರಘೋಷಕ್ಕೆ ಹಿಮ್ಮೇಳದಂತೆ ಭಾಸವಾಗುತ್ತಿತ್ತು. ನಮ್ಮ ಮುಂದೆ ಇದ್ದ ಕೊಳದಲ್ಲಿ ಬಿಳಿ, ಗುಲಾಬಿ ಹಾಗೂ ಕೆಂಪು ವರ್ಣದ ತಾವರೆಗಳು ಓಂಕಾರ ನಾದಕ್ಕೆ ತಲೆದೂಗುತ್ತ, ರವಿ ಕಿರಣಗಳ ಸ್ಪರ್ಶದಿಂದ ಮೆಲ್ಲನೆ ಅರಳುತ್ತಿದ್ದವು. ಮಲ್ಲಿಗೆ, ಜಾಜಿ, ಸಂಪಿಗೆ, ಪಾರಿಜಾತ ಹೂಗಳು ಕಂಪು ಸೂಸುತ್ತಿದ್ದವು. ಮಂಜಿನ ಮುಸುಕನ್ನು ಹೊದ್ದು ಮಲಗಿದ್ದ ವೆಲ್ಲಂಗಿರಿ ಬೆಟ್ಟ, ಕಣ್ಣರಳಿಸಿ ಆದಿಯೋಗಿಯ ಮಂತ್ರಪುಷ್ಪವನ್ನು ಆಲಿಸುತ್ತಿತ್ತು. ಧ್ಯಾನಲಿಂಗ ಮಂದಿರ ಮತ್ತು ಲಿಂಗ ಬೈರವಿಯ ಮಂದಿರಗಳು ಭಕ್ತರಿಗೆ ದರ್ಶನ ನೀಡಲು ಸಜ್ಜಾಗುತ್ತಿದ್ದವು. ಸಾಧಕರ ತನು ಮನವ ಸಂತೈಸಿ, ಅರಿವಿನ ಬೆಳಕನ್ನು ನೀಡಿತ್ತು ಗುರುಪೂಜೆ. ಎಲ್ಲರೂ ಮೌನಕ್ಕೆ ಶರಣಾಗಿದ್ದೆವು.
ಗುರುವಂದನೆಯನ್ನು ಸಲ್ಲಿಸಿ, ಲಿಂಗಭೈರವಿಯ ಆರತಿಯನ್ನು ಕಣ್ತುಂಬಿಕೊಳ್ಳಲು ಹೊರಟೆವು. ಮುಂಜಾನೆ ಏಳು ನಲವತ್ತಕ್ಕೆ ಲಿಂಗ ಭೈರವಿಯ ಮಹಾ ಮಂಗಳಾರತಿ ಇದ್ದುದರಿಂದ ನಾವೆಲ್ಲಾ ಏಳು ಗಂಟೆಗೇ ದೇಗುಲಕ್ಕೆ ಹೋದೆವು. ಲಿಂಗಭೈರವಿಯು ವೆಲ್ಲಂಗಿರಿ ಬೆಟ್ಟದ ತಪ್ಪಲಿನಲ್ಲಿ, ತ್ರಿಕೋನಾಕಾರದ ದೇಗುಲದಲ್ಲಿ ನೆಲೆಯಾಗಿದ್ದಾಳೆ. ಸೃಷ್ಟಿಯ ಸಂಕೇತವಾದ, ಲಿಂಗಾಕೃತಿಯಲ್ಲಿರುವ ಭೈರವಿ, ಸುಮಾರು ಎಂಟು ಅಡಿ ಎತ್ತರವಾಗಿದ್ದಾಳೆ. ಇರುಳಿನಷ್ಟೆ ಕಡುಕಪ್ಪು ಈ ಚೈತನ್ಯಸ್ವರೂಪಿಣಿ. ನಕ್ಷತ್ರದಂತೆ ಹೊಳೆಯುವ ಎರಡು ಕಣ್ಣುಗಳು, ಜ್ಯೋತಿಯಂತೆ ಬೆಳಗುವ ಹಣೆಗಣ್ಣು, ಘನೀಕರಿಸಿದ ಪಾದರಸ ಇವಳಲ್ಲಿ ವಿಶೇಷ ಶಕ್ತಿಯನ್ನು ತುಂಬಿದೆ. ನೋಡ ನೋಡುತ್ತಿದ್ದಂತೆ, ಭಕ್ತರ ಹೃದಯ ಕಮಲದೊಳಗೆ ಪ್ರವೇಶಿಸಿ ನೆಲೆಯಾಗುವಳು. ಸೃಷ್ಟಿಸುವವಳೂ ಅವಳೇ, ಪೊರೆಯುವವಳೂ ಅವಳೇ, ಸಂಹರಿಸುವವಳೂ ಭೈರವಿಯೇ. ಯೋಗಶಾಸ್ತ್ರದ ಸಾರವೇ ಮೂರ್ತಿವೆತ್ತಂತಿರುವ ಧ್ಯಾನಲಿಂಗದ ಅರ್ಧಾಂಗಿಯಾದ ಭೈರವಿ, ತನ್ನ ಶರೀರದಲ್ಲಿ ಮೂರೂವರೆ ಚಕ್ರವನ್ನು ಧರಿಸಿರುವಳು. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪೂರಕ ಚಕ್ರ ಹಾಗೂ ಅರ್ಧದಷ್ಟು ಅನಾಹತ ಚಕ್ರ. ಸದ್ಗುರುಗಳು ಲಿಂಗ ಭೈರವಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆ ಮಾಡಿದ ದಿನ ಜನವರಿ 30, 2010 ರ ಹುಣ್ಣಿಮೆಯಂದು ಲಿಂಗ ಭೈರವಿಯ ದೇಗುಲಕ್ಕೆ ಹೋಗಲು, ಎತ್ತರವಾದ ಮೂರು ಮೆಟ್ಟಿಲುಗಳನ್ನು ಏರಬೇಕು. ಸಾಧಕನು ತನ್ನ ಹಿಮ್ಮಡಿ ಊರಿ, ಈ ಮೆಟ್ಟಿಲುಗಳನ್ನು ಏರಿದಾಗ, ಅವನ ಪಾದದಲ್ಲಿನ ನರಗಳು ಸಕ್ರಿಯವಾಗಿ, ಅವನಲ್ಲಿ ಮಾನಸಿಕ ಜಾಗೃತಿ ಉಂಟಾಗುವುದು. ಭೈರವಿ ಮಾತೆ, ಸಾಧಕರ ಶರೀರ, ಮನಸ್ಸು ಹಾಗೂ ಚೇತನಕ್ಕೆ ಸಮಸ್ಥಿತಿಯನ್ನು ದಯಪಾಲಿಸುವಳು. ಕರುಣಾಮಯಿಯಾದ ದೇವಿಯು ತನ್ನ ಮಕ್ಕಳನ್ನು ಸಲಹುವಳು, ಶಕ್ತಿ ದೇವತೆಯಾದ ಭೈರವಿ ತನ್ನ ಮೊರೆ ಹೊಕ್ಕ ಭಕ್ತರ ಕಷ್ಟಗಳನ್ನು ಪರಿಹರಿಸುವಳು, ವಾತ್ಸಲ್ಯಮಯಿಯಾದ ಬೈರವಿ, ಪ್ರಾಪಂಚಿಕ ವ್ಯಾಮೋಹಕ್ಕೆ ಬಲಿಯಾದ ತನ್ನ ಮಕ್ಕಳನ್ನು ಮಮತೆಯ ಮಡಿಲಲ್ಲಿಟ್ಟು ಪೊರೆಯುವಳು. ರುದ್ರಸ್ವರೂಪಿಣಿಯಾದ ಭೈರವಿ ದುಷ್ಟ ಶಕ್ತಿಗಳನ್ನು ಸಂಹರಿಸುವಳು.
ದಕ್ಷಿಣ ಭಾರತದ ಮೂಲೆ ಮೂಲೆಯಲ್ಲೂ ಶಕ್ತಿ ದೇವತೆಯರ ದೇಗುಲಗಳಿವೆ – ಮೈಸೂರಿನ ಚಾಮುಂಡೇಶ್ವರಿ, ಕೊಲ್ಲೂರಿನ ಮೂಕಾಂಬಿಕೆ, ಸಿರ್ಸಿಯ ಮಾರಿಕಾಂಬ ಇತ್ಯಾದಿ. ಪ್ರತೀ ಗ್ರಾಮದಲ್ಲೂ ಮಾರಿಕಾಂಬ ದೇಗುಲಗಳು ರಾರಾಜಿಸುತ್ತಿವೆ. ಆದರೆ ಲಿಂಗರೂಪಿಯಾದ ಶಕ್ತಿ ದೇವತೆ ಎಲ್ಲಿಯೂ ಕಂಡುಬರುವುದಿಲ್ಲ. ಲಿಂಗ ಭೈರವಿಯ ಹೆಣ್ತನದ ಸ್ವರೂಪವು ಜ್ವಾಲೆಯಂತೆ ಬೆಳಗುತ್ತಾ ತನ್ನ ಪರಿಪೂರ್ಣತೆಯನ್ನು ಸಾರುತ್ತಿದೆ. ದೇವಿಯು ಮನಸ್ಸಿನ ಕಿಡಕಿಯಿದ್ದಂತೆ, ಕಿಡಕಿಯನ್ನು ತೆರೆದಾಗ ಮಾತ್ರ ಆಂತರಿಕ ಪ್ರಪಂಚದ ಅರಿವು ಮೂಡುವುದಲ್ಲವೇ?
ದೇವಿಯ ಬಲ ಭಾಗದ ಗೋಡೆಯನ್ನು ಕುಂಕುಮ ಹಾಗೂ ಅರಿಶಿಣ ವರ್ಣದ ಸೀರೆಗಳಿಂದ ಅಲಂಕರಿಸಿದ್ದರೆ, ಎಡ ಭಾಗದ ಗೋಡೆಯನ್ನು ದೀಪಗಳಿಂದ ಅಲಂಕರಿಸಲಾಗಿದೆ. ಈ ದೇಗುಲದ ಮತ್ತೊಂದು ವೈಶಿಷ್ಟ್ಯವೆಂದರೆ, ಭೈರವಿಯ ಗರ್ಭಗುಡಿಯನ್ನು ಹೊಕ್ಕು ಪೂಜೆ ಸಲ್ಲಿಸುವವರು ಸ್ತ್ರೀಯರೇ. ಕುಂಕುಮ ವರ್ಣದ ಒಡಲು, ಅರಿಶಿಣ ಬಣ್ಣದ ಅಂಚುಳ್ಳ ಸೀರೆ, ಕುಂಕುಮ ವರ್ಣದ ಕುಪ್ಪುಸ ಧರಿಸಿದ ಬೈರಾಗಿಣಿ ಮಾ/ ಉಪಾಸಕಿ ಎಂದೇ ಕರೆಯಲ್ಪಡುವ ಇವರು ಭಕ್ತಿ ಶ್ರದ್ಧೆಯಿಂದ ದೇವಿಯನ್ನು ಅರ್ಚಿಸುವರು. ಇಲ್ಲಿ ಮಡಿ ಮೈಲಿಗೆಯ ಸುಳಿವಿಲ್ಲ. ಋತುಸ್ರಾವದ ಸಮಯದಲ್ಲೂ ಉಪಾಸಕಿಯರು ಭೈರವಿಯನ್ನು ಪೂಜಿಸುವ ಅವಕಾಶ ಇಲ್ಲಿದೆ. ಮುಟ್ಟಿನ ಸಮಯದಲ್ಲಿ, ಸ್ತ್ರೀಯನ್ನು ಮೈಲಿಗೆಯೆಂದು ದೂರವಿಡುವ ಈ ಸಮಾಜದಲ್ಲಿ, ಸದ್ಗುರುಗಳು ಒಂದು ಹೊಸ ಮೈಲಿಗಲ್ಲನ್ನೇ ಸೃಷ್ಟ್ಟಿಸಿದ್ದಾರೆ. ಋತುಸ್ರಾವ ಮಹಿಳೆಯ ಬದುಕಿನಲ್ಲಿ ಒಂದು ಸಹಜ ಪ್ರಕೃತಿ ನಿಯಮವಾಗಿರುವುದರಿಂದ, ಮೈಲಿಗೆ ಹೇಗಾದೀತು? ಅಲ್ಲವೆ?
ಹೆಣ್ಣನ್ನು ದೇವತೆಯೆಂದು ಪೂಜಿಸುವ ಈ ನಾಡಿನಲ್ಲಿ, ದಿನ ನಿತ್ಯದ ಬದುಕಿನಲ್ಲಿ ಅವಳ ಶೋಷಣೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದರೆ ಈಶ ಯೋಗಕೇಂದ್ರದಲ್ಲಿ, ಸ್ತ್ರೀ ಪುರುಷರ ಸಮಾನತೆಯ ಪ್ರತೀಕವಾಗಿ, ಲಿಂಗ ಭೈರವಿಯ ಪೂಜೆಯನ್ನು ಸ್ತ್ರೀಯರೇ ಮಾಡುವರು. ಸದ್ಗುರು ಸ್ತ್ರೀ ಪುರುಷರನ್ನು ಒಂದು ಮರಕ್ಕೆ ಹೋಲಿಸುತ್ತಾರೆ. ಪುರುಷರು ಮರದ ಬೇರಿನಂತೆ, ಕಾಂಡದಂತೆ, ರೆಂಬೆ ಕೊಂಬೆಗಳಂತೆ, ಸ್ತ್ರೀಯರು ಮರದಲ್ಲಿ ಅರಳುವ ಹೂವಿನಂತೆ, ಹಣ್ಣಿನಂತೆ. ಎಲ್ಲ ಮರ ಗಿಡಗಳ ಗುರಿ ಒಂದೇ, ಹೂ ಅರಳಿ, ಕಾಯಾಗಿ, ಹಣ್ಣಾಗಿ ಮಾಗುವ ಕ್ರಿಯೆ ಅಲ್ಲವೆ?
ಲಿಂಗ ಭೈರವಿಯ ದೀಪಾರಾಧನೆಯನ್ನು, ವಿದೇಶಿ ಸತಿಪತಿಗಳಿಬ್ಬರು ತನ್ಮಯತೆಯಿಂದ ಮಾಡುತ್ತಿದ್ದರು. ಪತಿಯು ದೀಪಗಳಿಗೆ ಬತ್ತಿ, ಎಣ್ಣೆ ಹಾಕಿದರೆ, ಸತಿಯು ದೀಪ ಹೊತ್ತಿಸಿ, ದೇವಿಯ ಬಲಬದಿಯಲ್ಲಿ ತೂಗು ಹಾಕಿದ್ದ ದೀಪ ಕಂಬಗಳಲ್ಲಿ, ಸಾಲು ಸಾಲಾಗಿ ಜೋಡಿಸುತ್ತಿದ್ದಳು. ನಂತರ ಭೈರವಿಯ ಷೋಡಶೋಪಚಾರ ಪೂಜೆ ಆರಂಭವಾಯಿತು. ಮೊದಲಿಗೆ ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ, ದೇವಿಯನ್ನು ಆವಾಹಿಸಿ, ಆಸನ, ಪಾದ್ಯ, ಅರ್ಘ್ಯ, ಆಚಮನ ನೀಡಿ, ಶುದ್ಧೋದಕ ಹಾಗೂ ಪಂಚಾಮೃತದಿಂದ ಸ್ನಾನ ಮಾಡಿಸಿ, ವಸ್ತ್ರ, ಹರಿದ್ರ, ಅರಿಶಿಣ, ಕುಂಕುಮ, ಗಂಧ, ಅಕ್ಷತೆ, ಮಂತ್ರಾಕ್ಷತೆ ಅರ್ಪಿಸುವುದು. ನಂತರದಲ್ಲಿ ಹೂವು, ಪತ್ರೆಗಳಿಂದ ದೇವಿಯನ್ನು ಅಲಂಕರಿಸಿ, ನೂರೆಂಟು ನಾಮಗಳಿಂದ ದೇವಿಯ ಸ್ಮರಣೆ ಮಾಡುವುದು. ಧೂಪ, ದೀಪಗಳನ್ನು ಬೆಳಗಿ, ನೈವೇದ್ಯ, ತಾಂಬೂಲ ಅರ್ಪಿಸಿ ಕರ್ಪೂರದಾರತಿ ಮಾಡುವುದು. ದೇವಿಗೆ ಪ್ರಾರ್ಥನೆ ಸಲ್ಲಿಸಿ, ಪ್ರದಕ್ಷಿಣೆ ಹಾಕುವುದು. ಹೀಗೆ ಸಾಂಗೋಪಸಾಂಗವಾಗಿ ನಡೆದಿತ್ತು ಭೈರವಿಯ ಪೂಜೆ. ಪೂಜೆಯ ಪ್ರತಿ ಹಂತದಲ್ಲೂ ಅಲ್ಲಿ ನೆರೆದಿದ್ದ ಭಕ್ತರು ಮಂತ್ರಗಳನ್ನು ಪಠಿಸುತ್ತಿದ್ದರು. ಅಲ್ಲಿ ಒಂದು ಬಗೆಯ ಅವರ್ಣನೀಯ ವಾತಾವರಣ ಮೂಡಿತ್ತು. ಕೊನೆಯಲ್ಲಿ ಸಂಗೀತ ವಾದ್ಯಗಳನ್ನು ನುಡಿಸುತ್ತ, ದೇವಿಗೆ ಪೂಜೆ ಸಲ್ಲಿಸಲಾಯಿತು. ಚಿನ್ನದಂತೆ ಹೊಳೆಯುವ ವಸ್ತ್ರವನ್ನು ಧರಿಸಿದ್ದ ಭೈರವಿ, ದೀಪ ಬೆಳಗುತ್ತಿದ್ದ ಉಪಾಸಕಿ, ವಾದ್ಯ ಸಂಗೀತ, ಧೂಪದ ಸುಗಂಧ – ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದಿದ್ದವು. ಪೂಜೆ ಮುಕ್ತಾಯವಾದರೂ, ಯಾರಿಗೂ ಅಲ್ಲಿಂದ ಮೇಲೇಳಲಿಕ್ಕೆ ಮನಸ್ಸಾಗಲೇ ಇಲ್ಲ. ಮಂಗಳಾರತಿಯನ್ನು ಕಣ್ಣಿಗೊತ್ತಿಕೊಂಡು, ಅರಿಶಿಣ ಕುಂಕುಮ ಹಚ್ಚಿಕೊಂಡು, ದೇವಿಗೆ ಸಮರ್ಪಿಸಿದ ಪುಷ್ಪಗಳನ್ನು ಮುಡಿಗೇರಿಸಿ ದೇಗುಲದಿಂದ ಹೊರಬಿದ್ದಾಗ, ನಮ್ಮಲ್ಲಿ ಒಂದು ಬಗೆಯ ಚೈತನ್ಯ ಮೂಡಿತ್ತು. ದಿನಕ್ಕೆ ಮೂರು ಬಾರಿ ಲಿಂಗ ಭೈರವಿ ಆರತಿ ನಡೆಯುವುದು. ಹೆಣ್ಣಾದ ನಾನು, ಸ್ತ್ರೀಯರಿಗೆ ಭೈರವಿಯನ್ನು ಪೂಜಿಸುವ ಅವಕಾಶ ಕಲ್ಪಿಸಿದ ಸದ್ಗುರುವನ್ನು ಮನಸಾರೆ ವಂದಿಸಿದೆ. ಲಿಂಗ ಭೈರವಿಯ ಸ್ತುತಿ, ದೇಗುಲದಲ್ಲಿ ಪ್ರತಿಧ್ವನಿಸುತ್ತಿತ್ತು – ಜೈ ಭೈರವಿ ದೇವಿ / ಗುರುಭ್ಯೋ ನಮಶ್ರೀ / ಜೈ ಭೈರವಿ ದೇವಿ / ಸ್ವಯಂಭೋ ನಮಶ್ರೀ / ಜೈ ಭೈರವಿ ದೇವಿ / ಸರ್ವ ಜನನಿ ನಮಶ್ರೀ / ಜೈ ಭೈರವಿ ದೇವಿ/ ಗರ್ಭದಾಯಿನಿ ನಮಶ್ರೀ / ಜೈ ಭೈರವಿ ದೇವಿ / ಓಂ ಮಹಾಶಕ್ತಿ ಲಿಂಗ ಭೈರವಿ /ನಮಶ್ರೀ, ನಮಶ್ರೀ, ನಮಶ್ರೀ.
ಮುಂದೆ ಸಾಗಿದ ನಾವು ತೀರ್ಥಕುಂಡಗಳಿಗೆ ಹೊರಟೆವು. ಪುರುಷರಿಗಾಗಿ ಸೂರ್ಯಕುಂಡ, ಸ್ತ್ರೀಯರಿಗೆ ಚಂದ್ರಕುಂಡ ನಿರ್ಮಿಸಲಾಗಿದೆ. ಇಪ್ಪತ್ತು ರೂ ಪ್ರವೇಶ ಶುಲ್ಕವನ್ನು ನೀಡಿ, ಒಳ ಹೊಕ್ಕೆವು. ನಮ್ಮ ಉಡುಪನ್ನು ತೆಗೆದು, ಅವರು ನೀಡುವ ಗೌನನ್ನು ಧರಿಸಿ, ಹಣೆಗೆ ಹಚ್ಚಿದ್ದ ಬಿಂದಿಯನ್ನೂ ತೆಗೆದಿರಿಸಿ, ಅಲ್ಲಿದ್ದ ಷವರ್‌ನಲ್ಲಿ ಸ್ನಾನ ಮಾಡಿದ ಮೇಲೆಯೇ ತೀರ್ಥಕುಂಡಗಳಲ್ಲಿ ಪ್ರವೇಶ. ಇಲ್ಲಿ ಸ್ವಚ್ಛತೆಗೆ ಆದ್ಯತೆ, ಒಬ್ಬರಿಂದ ಮತ್ತೊಬ್ಬರಿಗೆ ರೋಗ ಹರಡದಿರಲು ವಹಿಸಿರುವ ಮುನ್ನೆಚ್ಚರಿಕೆ. ತೀರ್ಥಕುಂಡಗಳ ಗೋಡೆಗಳ ಮೇಲೆ ಮಹಾಕುಂಭಮೇಳದ ಚಿತ್ರಣಗಳನ್ನು ಕಲಾತ್ಮಕವಾಗಿ ಬಿಡಿಸಿದ್ದಾರೆ. ಸುಮಾರು ಮೂವತ್ತೈದು ಅಡಿ ತಗ್ಗಿನಲ್ಲಿರುವ ಈ ಕುಂಡದಲ್ಲಿ, ಸದಾ ನೀರು ಹರಿಯುತ್ತಿರುವುದು. ಸುಮಾರು ನಾಲ್ಕೂವರೆ ಅಡಿಯಷ್ಟು, ನೀರನ್ನು ಕುಂಡದಲ್ಲಿ ನಿಲ್ಲಿಸಿದ್ದರು. ಕುಂಡದ ಮಧ್ಯೆ ಘನೀಕರಿಸಿದ ಪಾದರಸದಿಂದ ನಿರ್ಮಿಸಲ್ಪಟ್ಟ ಒಂದು ಲಿಂಗ ಇತ್ತು. ಒಂದೊಂದೇ ಮೆಟ್ಟಿಲನ್ನು ಇಳಿದು, ತಣ್ಣನೆ ನೀರಿನಲ್ಲಿ ಅಡಿಯಿಡುವಾಗ ಗಾಬರಿ, ಚಿಕ್ಕ ವಯಸ್ಸಿನಲ್ಲಿ ಈಜು ಕಲಿತಿದ್ದ ನನಗೆ ತುಸು ಧೈರ್ಯ. ನನ್ನಕ್ಕ ನಿರ್ಮಲಾ ಹಾಗೂ ಗೆಳತಿ ಸುವರ್ಣಾ ಹೆದರಿಕೆಯಿಂದ ನೀರಿಗಿಳಿಯದೆ ನಿಂತಾಗ, ಅವರಲ್ಲಿ ಧೈರ್ಯ ತುಂಬಿ, ಕೈ ಹಿಡಿದು ನಡೆಸುವ ಸರತಿ ನನ್ನದಾಗಿತ್ತು.
ಮೂರು ಜನರೂ, ಮೆಲ್ಲ ಮೆಲ್ಲನೆ ಅಡಿಯಿಡುತ್ತಾ ಲಿಂಗದ ಸಮೀಪ ಹೋದೆವು. ಲಿಂಗವನ್ನು ಮುಟ್ಟಿ ನಮಸ್ಕರಿಸಿ, ಅಕ್ಕ ಮತ್ತು ಗೆಳತಿ ಹಿಂದಿರುಗಿ ಹೊರಟೇ ಬಿಟ್ಟರು. ಚಂದ್ರಕುಂಡದ ಒಂದು ಪಾರ್ಶ್ವದಲ್ಲಿ ಮೇಲಿನಿಂದ ನೀರು ಬೀಳುತ್ತಿತ್ತು. ನಾನು ಆ ಜಲಪಾತದ ಅಡಿಯಲ್ಲಿ ತಲೆಯೊಡ್ಡಿ ನಿಂತು ಸಂಭ್ರಮಿಸಿದೆ. ನಂತರ ಲಿಂಗದ ಬಳಿ ಸಾಗಿ, ಮೂರು ಬಾರಿ ಪ್ರದಕ್ಷಿಣೆ ಹಾಕಿ, ನೆತ್ತಿಯನ್ನು ಲಿಂಗಕ್ಕೆ ಮುಟ್ಟಿಸಿದಾಗ, ಕಣ್ಣಲ್ಲಿ ಆನಂದ ಬಾಷ್ಪ ಉಕ್ಕಿ ಬಂತು. ಯಾರೂ ನೋಡದಿರಲೆಂದು, ನೀರಲ್ಲಿ ಮುಳುಗು ಹಾಕಿದೆ. ಧ್ಯಾನಲಿಂಗದ ದರ್ಶನ ಮಾಡುವ ಮೊದಲು, ಚಂದ್ರಕುಂಡದಲ್ಲಿ ಮುಳುಗು ಹಾಕಿದಾಗ, ಶರೀರ ಚೈತನ್ಯ ಪಡೆದಿತ್ತು. ಪಾದರಸದ ಲಿಂಗವನ್ನು ಅಪ್ಪಿ ಹಿಡಿದಾಗ ಮನದಲ್ಲಿ ಸಂತಸ, ಆನಂದ ಮೂಡಿತ್ತು. ತನು ಮನವೆಲ್ಲಾ ಹಗುರಾಗಿ ಗಾಳಿಯಲ್ಲಿ ತೇಲುವ ಅನುಭವವಾಗಿತ್ತು. ನಂತರ ನಮ್ಮ ಉಡುಪನ್ನು ಬದಲಿಸಿ, ಸೂರ್ಯಕುಂಡದತ್ತ ಹೆಜ್ಜೆ ಹಾಕಿದೆವು. ಚಂದ್ರಕುಂಡದ ಮೇಲ್ಭಾಗದಲ್ಲಿ ಚಂದ್ರನ ಆಕೃತಿಯಿದ್ದರೆ, ಸೂರ್ಯಕುಂಡದ ಮೇಲ್ಭಾಗದಲ್ಲಿ ಸೂರ್ಯನ ಆಕೃತಿಯನ್ನು ಮಾಡಿದ್ದರು. ಸೂರ್ಯಕುಂಡದ ಎರಡೂ ಬದಿಯಲ್ಲಿ ನಕ್ಷತ್ರಗಳು ಪ್ರಜ್ವಲಿಸುವಂತೆ ಕಾಣುತ್ತಿದ್ದವು. ತೀರ್ಥಕುಂಡಗಳ ನೀರಿನಲ್ಲಿ ಚೈತನ್ಯ ಪ್ರವಹಿಸುವಂತೆ ಭಾಸವಾಗುತ್ತಿತ್ತು.
ಈ ಲೇಖನದ ಹಿಂದಿನ ಭಾಗ ಇಲ್ಲಿದೆ : http://surahonne.com/?p=35412
(ಮುಂದುವರಿಯುವುದು)
-ಡಾ.ಗಾಯತ್ರಿದೇವಿ ಸಜ್ಜನ್
ಚೆನ್ನಾಗಿದೆ
ಸೊಗಸಾಗಿದೆ ಧನ್ಯವಾದಗಳು ಮೇಡಂ
ಉತ್ತಮ ಮಾಹಿತಿ. ಈಶಾ ಫ಼ೌಂಡೇಶನ್ ಗೆ ಭೇಟಿ ಕೊಡಬೇಕು ಅನಿಸುತ್ತಿದೆ.
i have also seen. but next time with more time.
ಭಕ್ತಭಾವದಿಂದ ಕೂಡಿದ, ಸ್ಥಳವಿವರಗಳನ್ನೂ ಒಳಗೊಂಡ ಸುಂದರ ಲೇಖನ.
ಪವಿತ್ರ , ವಿಶೇಷವಾದ ದೇಗುಲ ವರ್ಣನೆ, ಪೂಜಾ ವೈಖರಿಯ ವರ್ಣನೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಮೇಡಂ….ನಾವೇ ಅಲ್ಲಿ ಓಡಾತ್ತಿರುವ ಅನುಭವ!