ಅವಿಸ್ಮರಣೀಯ ಅಮೆರಿಕ-ಎಳೆ 27

Share Button

ಸವಿಯೂಟದ ಸಂಭ್ರಮ
ಅಮೆರಿಕದಲ್ಲಿ ವಾಸಿಸುವ ನಮ್ಮ ದೇಶದವರು, ಹುಟ್ಟುಹಬ್ಬ, ವಾರ್ಷಿಕೋತ್ಸವ, ಸಂಕ್ರಾಂತಿ, ಯುಗಾದಿ, ಚೌತಿ…ಹೀಗೆ ಯಾವುದೇ ಸಮಾರಂಭ ಅಥವಾ ಹಬ್ಬಗಳಿರಲಿ; ಅವುಗಳು ವಾರದ ನಡುವೆ  ಬಂದರೂ ಆ ದಿನದಂದು ಆಚರಿಸುವುದಿಲ್ಲ. ಅದರ ಬದಲು, ಅದರ ಮೊದಲು ಅಥವಾ ನಂತರದ ರಜಾದಿನಗಳಾದ ಶನಿವಾರ ಅಥವಾ ಭಾನುವಾರಗಳಂದು ಏರ್ಪಡಿಸುವರು. ಹಬ್ಬಗಳನ್ನು ಎಲ್ಲರೂ ಒಟ್ಟುಗೂಡಿ ಆಚರಿಸುವುದು ರೂಢಿ. ಇಲ್ಲಿ ತಮ್ಮ ಉಪಪಂಗಡಗಳ ಮಂದಿಯೆಲ್ಲಾ ಸೇರಿ, ಆಯಾ ಹಬ್ಬಗಳ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಬಹಳ ಅಚ್ಚುಕಟ್ಟಾಗಿ  ಆಚರಿಸುವರು. ಸಾಂಪ್ರದಾಯಿಕ ಉಡುಗೆ, ತಿಂಡಿಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನಿತ್ತು ಸಂತೋಷದಿಂದ ಒಂದುಗೂಡುವುದನ್ನು ನೋಡಲು ಖುಷಿಯೆನಿಸುತ್ತದೆ. 

ಒಂದು ದಿನ ಮಗಳು ಈ ವಿಚಾರದ ಬಗ್ಗೆ ಪ್ರಾಸ್ತಾಪಿಸಿ, “ನಾಳೆಯ ಹಬ್ಬದಡುಗೆಯಲ್ಲಿ ನಾನು ಕಡಲೇಬೇಳೆ ಪಾಯಸ ಮಾಡಲು ಒಪ್ಪಿಕೊಡಿದ್ದೇನೆ. ಇದರಲ್ಲಿ ತುಂಬುವಷ್ಟು  ತಯಾರಿಸಬೇಕು” ಎಂದು ದೊಡ್ಡದಾದ  ಪಾತ್ರೆಯನ್ನು ತೋರಿಸಿದಾಗ ನಿಜಕ್ಕೂ ಕಕ್ಕಾಬಿಕ್ಕಿಯಾದೆ. ನಮ್ಮಲ್ಲಿ ಏನಿದ್ದರೂ, ಸಾಮಾನ್ಯವಾಗಿ, ಹೆಚ್ಚಿನ ಪ್ರಮಾಣದ ಅಡುಗೆಯನ್ನು ಅಡುಗೆಯವರು ಬಂದು ಮಾಡುವುದು ರೂಢಿ ತಾನೇ? ಇದೇನೆಂದು ಮಾತ್ರ ತಕ್ಷಣಕ್ಕೆ ನನಗೆ ಅರ್ಥವಾಗಲಿಲ್ಲ. ಆಮೇಲೆ ಈ ವಿಷಯದ ಬಗ್ಗೆ ತಿಳಿದಾಗ ನಿಜಕ್ಕೂ ಬಹಳ ವಿಶೇಷವೆನಿಸಿತು.. ಖುಷಿಯೆನಿಸಿತು.

ಅದುವೇ ಪೋಟ್ ಲಕ್(Potluck). ಇದೇನಪ್ಪಾ..ಯಾವ ಲಕ್ಕಿ ಡಿಪ್ ಅಂದ್ಕೊಂಡ್ರಾ? ಹೌದು..ನಾನೂ ಹಾಗೇ ತಿಳಿದಿದ್ದೆ. ಅಯಾಚಿತ ಅತಿಥಿಗಳಿಗೆ ಆದರದಿಂದ ನೀಡುವ ಆಹಾರ ಅಥವಾ ಸತ್ಕಾರಕ್ಕಾಗಿ ಈ ಶಬ್ದ ಬಳಕೆಯಾಗಿದೆ. ಸುಮಾರು 16ನೇ ಶತಮಾನದಷ್ಟು ಹಿಂದೆಯೇ ಆಂಗ್ಲ ಬರಹಗಾರರೊಬ್ಬರು ತಮ್ಮ ಬರಹವೊಂದರಲ್ಲಿ ಈ ಪೋಟ್ ಲಕ್ ನ ಬಗ್ಗೆ ಉಲ್ಲೇಖ ಮಾಡಿರುವರಂತೆ. ಬಳಿಕ 1930ರ ಸಮಯದಲ್ಲಿ, ಅಂದರೆ, ಮೊದಲನೇ ಮಹಾಯುದ್ಧದ ಬಳಿಕ ಜನರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಕಾಲದಲ್ಲಿ ಅದರಿಂದ ಮೇಲೇಳುವ ಶಕ್ತಿಯನ್ನು, ಈ ಒಟ್ಟುಗೂಡಿ ಹಂಚಿ ಉಣ್ಣುವ  ಪದ್ಧತಿಯು ಒದಗಿಸಿತ್ತು ಎನ್ನಬಹುದು. 

ಈ ಪದ್ಧತಿಯು ನಾವಿದ್ದ ಬೇ ಏರಿಯ ಪರಿಸರದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ತಿಂಗಳ ಮೊದಲೇ ರೂಪುಗೊಳ್ಳುವ ಕಾರ್ಯಕ್ರಮದಲ್ಲಿ  ಊಟದ ವ್ಯವಸ್ಥೆಯನ್ನು ಸದಸ್ಯರೆಲ್ಲರೂ ಸೇರಿ ತಾವೇ ಸ್ವತ: ಮಾಡುವರು. ಇದರಿಂದ ಪರಸ್ಪರ ಪ್ರೀತಿ ಬಾಂಧವ್ಯಗಳು ವೃದ್ಧಿಯಾಗುವುದರ ಜೊತೆಗೆ, ಹಣದ  ಉಳಿತಾಯವೂ ಆಗುವುದನ್ನು ಕಾಣಬಹುದು. ಮೊದಲೇ ನಿಗದಿಗೊಂಡಿರುವ ಆ ದಿನದ ಪೂರ್ತಿ ಅಡುಗೆಗಳ ವಿವರಗಳನ್ನು ಅಂತರ್ಜಾಲದ ಮೂಲಕ ಸದಸ್ಯರೆಲ್ಲರಿಗೂ ನೀಡಲಾಗುವುದು.  ಅವರವರಿಗೆ ಸಾಧ್ಯವಾದುದನ್ನು  ತಯಾರಿಸಲು ಒಪ್ಪಿಗೆಯನ್ನು ಅದರಲ್ಲೇ ತಿಳಿಸಬೇಕಾಗುತ್ತದೆ.  ಉದಾಹರಣೆಗೆ, ಮುನ್ನೂರು ಚಪಾತಿ ಬೇಕಾಗಿದ್ದರೆ, ಹತ್ತು ಮಂದಿಗೆ ಅದನ್ನು ಹಂಚಿಬಿಡುವರು ಅಂದರೆ, ಒಬ್ಬರು ಮೂವತ್ತು ಚಪಾತಿ ಮಾಡಿದರೆ ಸಾಕಾಗುತ್ತದೆ. ಇದೇ ರೀತಿಯಲ್ಲಿ ಎಲ್ಲಾ ಅಡುಗೆಗಳೂ ಸದಸ್ಯರ ಮನೆಗಳಲ್ಲಿ ಸಿದ್ಧಗೊಂಡು ದೊಡ್ಡ ದೊಡ್ಡ ಪಾತ್ರೆ ಪೊಟ್ಟಣಗಳಲ್ಲಿ ತುಂಬಿ, ಹಾಲ್ ನ ಪಕ್ಕದ ಮೇಜುಗಳ ಮೇಲೆ ಅಚ್ಚುಕಟ್ಟಾಗಿ, ಶಿಸ್ತಿನಿಂದ ಜೋಡಿಸಲ್ಪಡುತ್ತವೆ. ಅವುಗಳಿಗೆ ಬೇಕಾದ ಸೌಟು ಲೋಟಗಳನ್ನೂ ಸದಸ್ಯರೇ ತರುವರು. ಪ್ರತಿಯೊಂದು ಕೈರುಚಿಯೂ ವಿಭಿನ್ನವಾಗಿ, ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವುದರಿಂದ ಊಟವು ವಿಶೇಷವೆನಿಸುವುದು ಸುಳ್ಳಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಪ್ರತಿಯೊಬ್ಬರೂ ತಮ್ಮ ಬರುವಿಕೆಯನ್ನು ಮೊದಲೇ ಖಾತ್ರಿಪಡಿಸಬೇಕಾಗುತ್ತದೆ, ಆಗಬೇಕಾದ ಅಡುಗೆಯ ಪ್ರಮಾಣವನ್ನು ಖಚಿತಪಡಿಸಲು. ಇದರಿಂದಾಗಿ ಆಹಾರ ಪೋಲಾಗುವುದು ಕಡಿಮೆಯಾಗುವುದಲ್ಲವೇ?

ಬರುವವರಿಗೆಲ್ಲರಿಗೂ ಸಾಕಾಗುವಷ್ಟು ಅಡುಗೆಯು ಇದೇ ರೀತಿಯಲ್ಲಿ ಸಿದ್ಧವಾಗುವುದು.  ಊಟ ಪ್ರಾರಂಭವಾದಾಗ ಎಲ್ಲರ ಕಣ್ಣೂ ತಾವು ಇರಿಸಿದ ಅಡುಗೆಯ ಮೇಲೆ..ಯಾಕೆ ಗೊತ್ತೇ?.. ರುಚಿಯಾಗಿರುವುದು ಬೇಗ ಖಾಲಿಯಾಗುತ್ತದೆ. ಅದುವೇ ತಯಾರಿಸಿದವರಿಗೆ ಮೆಚ್ಚುಗೆಯ ಪ್ರಶಸ್ತಿ ಇದ್ದಂತೆ! ಅವರು ತಂದ ಪಾತ್ರೆಯಲ್ಲಿ ಅರ್ಧಕ್ಕರ್ಧ ಉಳಿದಿದ್ದರೆ ಸ್ವಲ್ಪ ಬೇಸರವಾಗುವುದು ಕೂಡಾ ಸಹಜ. ನಾನು ತಯಾರಿಸಿದ ಕಡಲೇಬೇಳೆ ಪಾಯಸ ಏನಾಯಿತೆಂದು ನೀವೇ ಊಹಿಸಿ.. ಯಾಕೆಂದರೆ, ಮಗಳ ಮುಖ ಖುಷಿಯಿಂದ ಅರಳಿತ್ತು! ಹೆಂಗೆಳೆಯರ ವೈವಿಧ್ಯಮಯ ಅಡುಗೆಗಳ ತರೆಹೇವಾರಿ ತಿನಿಸುಗಳ ಜಾತ್ರೆ…ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುವ ಪ್ರಶಂಸೆಗಳು, ಅಡುಗೆ ಮಾಹಿತಿಗಳು… ಇತ್ಯಾದಿಗಳಿಂದ ಸುಂದರವಾದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ! ಈ ತರಹದ ಪ್ರಯೋಗವನ್ನು ನಮ್ಮ ಆಫೀಸಿನ ವಾರ್ಷಿಕೋತ್ಸವದಂದು ಮಾಡಲು ಪ್ರಯತ್ನಿಸಿ ಫಲಕಾರಿಯಾಗದೆ ಕೈಬಿಡಬೇಕಾಯಿತೆನ್ನಿ.

Daylight Saving

ಇನ್ನು, ಅಮೆರಿಕದ ಇನ್ನೊಂದು ವಿಶಿಷ್ಟ ಪದ್ಧತಿಯ ಬಗೆಗೆ   ಹೇಳಲೇಬೇಕು. ಆ ದಿನ,  ಮಾರ್ಚ್ ತಿಂಗಳ 14ನೇ ತಾರೀಕು, ಆದಿತ್ಯವಾರವಾಗಿತ್ತು… ಮಧ್ಯಾಹ್ನ 12 ಗಂಟೆಯ ಸಮಯ. ರಜಾ ದಿನವಾದ್ದರಿಂದ ಸಹಜವಾಗಿ ಮಧ್ಯಾಹ್ನದ ಅಡುಗೆ ನಿಧಾನವಾಗಿಯೇ ಸಾಗಿತ್ತು. ಒಮ್ಮಿಂದೊಮ್ಮೆಲೇ ಅಳಿಯ “ಊಟಕ್ಕಾಯ್ತಾ?” ಎಂದು ಕೇಳುತ್ತಾ ಬಂದ. ಇದೇನು ಇಷ್ಟು ಬೇಗ ಊಟವೆಂದು ಗಡಿಯಾರದತ್ತ ನೋಡಿದಾಗ ಅದಾಗಲೇ ಒಂದು ಗಂಟೆ! ಅಲ್ಲಾ…ಐದು ನಿಮಿಷಗಳ ಮೊದಲು ಗಡಿಯಾರದಲ್ಲಿ 12 ಗಂಟೆ ತೋರಿಸುತ್ತಿತ್ತಲ್ಲಾ,  ಇಷ್ಟು ಬೇಗ ಇದೇನಾಯ್ತು?!  ಎಂದುಕೊಂಡೆ. ಗಡಿಯಾರವನ್ನು ಒಂದು ಗಂಟೆ ಮುಂದೆ…ಅಂದರೆ ಮಧ್ಯಾಹ್ನ ಒಂದು ಗಂಟೆಗೆ ಇರಿಸಿರುವುದು ತಿಳಿಯಿತು. ನನಗೆ ನಿಜವಾಗಿಯೂ ಏನೆಂದೇ ಅರ್ಥವಾಗಲಿಲ್ಲ. ಗಡಿಬಿಡಿಯಲ್ಲಿ ಆ ಒಂದು ಗಂಟೆಯನ್ನು ಎಲ್ಲಿಂದ ತರಲೆಂದು ಯೋಚಿಸುತ್ತಾ ನಿಂತೆ! ಒಂದು ನಿಮಿಷದಲ್ಲಿ ಅಡಿಗೆ ತಯಾರಿಸಲು ಸಾಧ್ಯವೇ? ಆಗಲೇ ಅವನು ಹೇಳಿದ ವಿಷಯ ಸ್ವಲ್ಪ  ವಿಚಿತ್ರವೆನಿಸಿತು..ಅದುವೇ…ಹಗಲು ಬೆಳಕಿನ ಉಳಿತಾಯ (Daylight Saving) ವ್ಯವಸ್ಥೆ!

ನಮ್ಮ ಸಮಶೀತೋಷ್ಣವಲಯವು ಭೂಮಧ್ಯರೇಖೆಯ ಬಳಿ ಇರುವುದರಿಂದ, ನಮ್ಮಲ್ಲಿ ವರ್ಷಪೂರ್ತಿ ಹಗಲು ಮತ್ತು ರಾತ್ರಿ ಸುಮಾರಾಗಿ ಒಂದೇ ತೆರನಾಗಿರುತ್ತವೆ. ಆದರೆ ಭೂಮಧ್ಯರೇಖೆಯಿಂದ ದಕ್ಷಿಣ ಅಥವಾ ಉತ್ತರದ ಕಡೆಗೆ ದೂರವಾದಂತೆ, ಹಗಲು ರಾತ್ರಿಗಳ ವ್ಯತ್ಯಾಸ ಬಹಳವಿರುತ್ತದೆ. ಅತೀ ಉದ್ದವಾದ ಹಗಲಿನ ದಿನಗಳಲ್ಲಿ, ಸೂರ್ಯನ ಬೆಳಕಿನ ಪೂರ್ಣ ಪ್ರಯೋಜನ ಪಡೆಯಲು ನೂರಾರು ವರುಷಗಳಿಂದಲೇ, ಅಮೆರಿಕ, ಕೆನಡ ಇತ್ಯಾದಿ 70 ದೇಶಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಂಡಿರುವರು. 18ನೇ ಶತಮಾನದಲ್ಲಿ, ಅಂದರೆ ಸುಮಾರು 1784ರಲ್ಲಿ ಮೇಣದಬತ್ತಿಯ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಈ ವಿಶೇಷ ಪದ್ಧತಿಯನ್ನು ಆರಂಭಿಸಲಾಯಿತು.  ಆ ಬಳಿಕ ನಡೆದ ಮೊದಲನೇ ಮಹಾಯುದ್ಧ (1914-1918) ಮತ್ತು ಎರಡನೇ ಮಹಾಯುದ್ಧ (1939-1945) ಗಳ ಕಾಲ, ಜಗತ್ತಿಡೀ ಆರ್ಥಿಕ ಹಿನ್ನಡೆಯಿಂದ ಕಂಗೆಟ್ಟ ಸಮಯದಲ್ಲಿ ಇದರ ಬಳಕೆ ಬಹಳ ಸಹಾಯವಾಯಿತೆನ್ನಬಹುದು. ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನ ಒಂದು ನಿಗದಿತ ದಿನದಂದು ಇಡೀ ದೇಶದ ಸಮಯವನ್ನು ಒಂದು ಗಂಟೆ ಮುಂದಿಡಲಾಗುತ್ತದೆ. ಅದೇ ರೀತಿಯಲ್ಲಿ,  ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ  ಒಂದು ಗಂಟೆ ಹಿಂದಿಡುವರು… ಅಂದರೆ ಮೂಲ ಸಮಯಕ್ಕೆ ಗಡಿಯಾರವನ್ನು ಹೊಂದಿಸುವರು. (ನಾನು ಅಲ್ಲಿದ್ದ ಸಮಯ, ಅಂದರೆ 2010ನೇ ಇಸವಿಯಲ್ಲಿ ನವೆಂಬರ 7ನೇ ತಾರೀಕು, ಆದಿತ್ಯವಾರದಂದು ಮಧ್ಯಾಹ್ನ ಹೊತ್ತಿಗೆ ಗಡಿಯಾರವನ್ನು ಮೂಲ ಸಮಯಕ್ಕೆ ಸರಿ ಹೊಂದಿಸಲಾಯಿತು) ನನಗೆ ಈ ಕಾಲ ಗಣನೆಯಿಂದ ಬಹಳ ರೀತಿಯ ಸಂಶಯ ಬರಲು ಪ್ರಾರಂಭವಾಯ್ತು. ನಮಗೋ, ಇಸವಿ ಬದಲಾದಾಗ ಬರೆಯಲು ತಪ್ಪುವುದು ಮಾಮೂಲಿ. ಮಾತ್ರವಲ್ಲ, ಕೆಲವೊಮ್ಮೆ ತಾರೀಕು ಕೂಡಾ ತಪ್ಪು ಬರೆಯುವ ನಾವು, ತಿಂಗಳುಗಟ್ಟಲೆ ದಿನದ ಒಂದು ಗಂಟೆಯೇ ಮುಂದೆ ಹೋದರೆ, ಎಲ್ಲಾ ತರಹದ ಕೆಲಸಗಳಲ್ಲಿ ಅದರ ಹೊಂದಾಣಿಕೆ ಯಾವ ರೀತಿಯಲ್ಲಿ ಮಾಡುವರೆಂದು ನನಗಿನ್ನೂ ತಿಳಿಯಲಾಗಿಲ್ಲ! 

ಬೇಡಪ್ಪಾ ಬೇಡ…!!

ಅಮೆರಿಕಕ್ಕೆ ಹೋದ ಪ್ರಾರಂಭದ ದಿನಗಳಲ್ಲಿ, ತರಕಾರಿ ಖರೀದಿಗೆ ಹೋಗಿದ್ದಾಗ, ಯಾವುದನ್ನು ಖರೀದಿಸಿದರೂ ಅದರ ಬೆಲೆಯನ್ನು ಡಾಲರ್ ನಲ್ಲಿ ನೋಡಿದ ತಕ್ಷಣ ಅದನ್ನು ನಮ್ಮ ರೂಪಾಯಿಗೆ ಬದಲಿಸಿ, ಗಾಬರಿ ಪಟ್ಟು ಮಗಳಲ್ಲಿ ಅದು ಬೇಡ, ಇದು ಬೇಡ ಎಂದು ಕಿರಿಕಿರಿ ಮಾಡುತ್ತಿದ್ದೆ. ಯಾಕೆ ಗೊತ್ತಾ, ನಾಲ್ಕು ಕರಿಬೇವಿನ ಎಲೆಗಳಿಗೆ ಎರಡು ಡಾಲರ್..ತಕ್ಷಣ ನಾನು ಅದಕ್ಕೆ 70ರಿಂದ ಗುಣಿಸಿ ರೂಪಾಯಿ ಮಾಡಿಬಿಡುತ್ತಿದ್ದೆ. “ಅಯ್ಯೋ, 140 ರೂಪಾಯಿಗೆ ಇದನ್ನು ಕೊಳ್ಳುವುದೇ!! ..ಬೇಡ, ನಮ್ಮ ಮನೆಯಲ್ಲಿರುವ ಮರಗಳಲ್ಲಿ ಲೋಡು ಗಟ್ಟಲೆ ಇದೆ!”. ಆಗ ಮಗಳು ಉವಾಚ, “ಅದು ಊರಲ್ಲಿರುವ ನಮ್ಮ ಮನೆಯಲ್ಲಿ. ಅದು ಈಗ ಇಲ್ಲಿ ಸಿಗಲಾರದು ಅಲ್ವೇ?” ಎಂದು ಬಾಯಿ ಮುಚ್ಚಿಸುವಳು. ಒಂದು ಮೈಸೂರು ಸ್ಯಾಂಡಲ್ ಸಾಬೂನು ಬೆಲೆ ಐದು ಡಾಲರ್..ಅಂದ್ರೆ, ₹350/- ದೇವಾ.. ಬೇಡಪ್ಪಾ..!! ಹೀಗೇ ನಡೆದಿತ್ತು ನನ್ನ ವಿರೋಧ! ಕೊನೆಗೆ, ಮಗಳು ನನ್ನ ಮಾತನ್ನು ಲೆಕ್ಕಿಸದೆ ಎಲ್ಲಾ ಸಾಮಾನು ಖರೀದಿಸಿದಳೆನ್ನಿ. ಆ ನಂತರದ ದಿನಗಳಲ್ಲಿ, ಡಾಲರನ್ನು ರೂಪಾಯಿಗೆ ಬದಲಾವಣೆ ಮಾಡುವುದನ್ನು ನಿಲ್ಲಿಸಬೇಕು ಎನ್ನುವ ಅವಳ ಪಾಠ, ಇವತ್ತಿಗೂ ತಲೆಯೊಳಗೆ ಫೆವಿಕೋಲಿನಲ್ಲಿ ಗಟ್ಟಿಯಾಗಿ ಅಂಟಿ ನಿಂತಿದ್ದರಿಂದ, ಆ ತಪ್ಪನ್ನು ಮತ್ತೆಂದೂ ಮಾಡದೆ, ಆಮೇಲಿನ ದಿನಗಳಲ್ಲಿ ಅವಳಿಗಿಂತ ಮೊದಲೇ ನನ್ನ ಖರೀದಿ ನಡೆಯುತ್ತಿತ್ತು!

ಕೇರಳ ರಾಜ್ಯದವರು, ಎವರೆಷ್ಟ್ ಪರ್ವತದ ಮೇಲೂ ವ್ಯಾಪಾರ ನಡೆಸಿ ಗೆಲ್ಲುವರೆಂಬ ಮಾತಿದೆ. ದಕ್ಷಿಣ ಭಾರತದ ಪ್ರಜೆಗಳು ಹೆಚ್ಚು ವಾಸಿಸುವ ಸ್ಥಳಗಳಲ್ಲಿ ಅವರ ಸರ್ವವ್ಯಾಪಾರ ಮಳಿಗೆಯೊಂದು ಇದ್ದೇ ಇರುತ್ತದೆ. ಹಾಗೆಯೇ, ನಾವಿದ್ದ ಸ್ಥಳದಲ್ಲಿಯೂ ಅವರ ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ತರಹದ ಸಾಮಾನುಗಳೂ ಸಿಗುತ್ತಿದ್ದವು. (ಅಮೆರಿಕಕ್ಕೆ ಅಂತಾರಾಷ್ಟೀಯ ಗುಣಮಟ್ಟದ ವಸ್ತುಗಳನ್ನು ಕಳುಹಿಸಿ, ಕಳಪೆಯಾಗಿರುವವು ಎಲ್ಲಾ ನಮಗೆ ಅಲ್ಲವೇ?!) ತಮಾಷೆ ಎಂದರೆ, ನನಗೆ ತಿಳಿದವರೊಬ್ಬರು ಅತ್ಯಂತ ದುಬಾರಿಯ, ಅಂತಾರಾಷ್ಟೀಯ ಗುಣಮಟ್ಟದ ಚಾ ಪುಡಿಯನ್ನು ಅಮೆರಿಕದಿಂದ ನಮ್ಮ ದೇಶಕ್ಕೆ, ತಮ್ಮಲ್ಲಿಗೆ  ತರಿಸಿಕೊಂಡು ಆಸ್ವಾದಿಸಿದ  ವಿಷಯ ತಿಳಿದು ನಿಜಕ್ಕೂ ದಿಗಿಲಾಯಿತು! 

ಈ ಅಂಗಡಿಯೊಳಗೆ ಅಡಿ ಇರಿಸಿದಾಗ  ಬೆಂಗಳೂರಿನಲ್ಲಿ ಇರುವೆವೇನೋ ಅನ್ನಿಸುತ್ತದೆ. ಇಲ್ಲಿ, ಕನ್ನಡ, ಮಲೆಯಾಳ, ತಮಿಳು ಎಲ್ಲಾ ಭಾಷೆಗಳ ಗ್ರಾಹಕರನ್ನು ಕಾಣಬಹುದು. ಕನ್ನಡ ಭಾಷೆಯವರ ಬಳಿ ಹೋಗಿ ಪರಿಚಯ ಮಾಡಿಕೊಳ್ಳುವ ಸದವಕಾಶವನ್ನು ನಾನೆಂದೂ ಬಿಡಲಿಲ್ಲ! ಒಳಗಡೆಗೆ, ಸುಶ್ರಾವ್ಯವಾದ ಹಳೆಯ ಹಿಂದಿ ಚಿತ್ರಗೀತೆಯ ಹಾಡುಗಳು ಮನಸ್ಸಿಗೆ ಖುಷಿ ಕೊಡುತ್ತವೆ. ಸಪ್ತ ಸಾಗರದಾಚೆ ನಮ್ಮೂರ ಸೊಗಡನ್ನು ಆಸ್ವಾದಿಸುವ ಅವಕಾಶ ನೀಡಿದ ಅಂಗಡಿಯವರ ಸದಭಿರುಚಿ ನಿಜಕ್ಕೂ ಮೆಚ್ಚುವಂತಹುದು.      

ಸಹಕಾರ

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ಗಮನಿಸಿದ ಇನ್ನೊಂದು ಅಂಶವೆಂದರೆ, ಪರಸ್ಪರ ಉಹಾತೀತ ಸಹಕಾರ. ಕುಟುಂಬ ಸ್ನೇಹಿತರೆಂದರೆ ಯಾವ ಸಹಾಯಕ್ಕೂ ತಯಾರಿರುತ್ತಾರೆ. ಉದಾಹರಣೆಗೆ, ಒಬ್ಬರ ಮನೆಯಲ್ಲಿ ಯಾವುದೇ  ಬದಲಾವಣೆ ಅಥವಾ ರಿಪೇರಿಯ ಕೆಲಸಗಳು ನಡೆಯಬೇಕಾದರೆ ಬಹಳಷ್ಟು ದಿನಗಳು ಬೇಕಾಗುವುದು ಮಾಮೂಲಿ. ಇಲ್ಲಿ, ಈ ಕೆಲಸದ ಸಮಯದಲ್ಲಿ ಮನೆ ಖಾಲಿ ಮಾಡಲೇಬೇಕು. ಮನೆ ಮಂದಿಯೆಲ್ಲಾ, ತಮ್ಮ ಮಕ್ಕಳ ಸಹಿತ ತಮ್ಮ ಕುಟುಂಬ ಸ್ನೇಹಿತರೆಲ್ಲರ ಮನೆಗಳಲ್ಲಿ ಕೆಲವು ದಿನಗಳನ್ನು ಹಂಚಿಕೊಂಡು ಪ್ರೀತಿಯಿಂದ ಇರುವುದು ನೋಡುವುದೇ ಖುಷಿ. ಯಾರಾದರೂ ಕೆಲವು ದಿನಗಳು ಬೇರೆ ಊರಿಗೆ ಹೋಗಿ ಹಿಂತಿರುಗುವಾಗ, ಇನ್ನೊಂದು ಮನೆಯವರು, ಅವರ ಆ ದಿನದ ಊಟವನ್ನು ತಯಾರಿಸಿ  ಅವರು ಬರುವ ಸಮಯಕ್ಕೆ ಸರಿಯಾಗಿ  ತಂದು ಮನೆಯಲ್ಲಿರಿಸುವರು! ಹೀಗೆಯೇ ಇನ್ನೊಂದು ಅಂಶವೆಂದರೆ, ತಮ್ಮ ಮನೆಯ ಪುಟ್ಟ ಮಕ್ಕಳ ಉಡುಗೆಗಳ ಉಪಯೋಗದ ಬಳಿಕ ಅವುಗಳನ್ನು ಸ್ವಚ್ಛವಾಗಿ ತೊಳೆದು ನಿರ್ವಾತ ಬ್ಯಾಗಿನಲ್ಲಿ ಹಾಕಿ ಜೋಪಾನವಾಗಿಡುವರು. ಬಳಿಕ, ತಮ್ಮ ಸ್ನೇಹಿತ ಕುಟುಂಬದಲ್ಲಿರುವ ಆ ವಯಸ್ಸಿನ  ಮಗುವಿಗೆ  ಬಳಸಲು ನೀಡುವರು. ಹೀಗೆ, ಒಂದು ಉಡುಗೆಯು ಕಡಿಮೆಯೆಂದರೆ ನಾಲ್ಕು ಮಕ್ಕಳ ಮೈಯನ್ನು ಅಲಂಕರಿಸುವುದು ಸುಳ್ಳಲ್ಲ. ಎಷ್ಟೇ ಧನಿಕರಾದರೂ ಇದನ್ನು ಬಹಳ ಪ್ರೀತಿಯಿಂದ ಸ್ವೀಕರಿಸುವುದನ್ನು ಕಂಡಾಗ ನನಗೆ ಬಹಳ ಹೆಮ್ಮೆ ಎನಿಸಿತು. ನಮ್ಮಲ್ಲಿ ಇದು ಸಾಧ್ಯವೇ ಇಲ್ಲ. ಏಕೆಂದರೆ ಇಲ್ಲಿಯ ಹವಾಮಾನಕ್ಕೆ ಯಾವುದೇ ಉಡುಗೆ ಬಾಳಿಕೆ ಬರುವುದು ಕಷ್ಟ. ಇನ್ನೊಂದು, ಉಳ್ಳವರು ಯಾರೂ ಆ ತರಹ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಇರುವುದಿಲ್ಲ …ಅಲ್ಲವೇ?

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ  : http://surahonne.com/?p=35597

–ಶಂಕರಿ ಶರ್ಮ, ಪುತ್ತೂರು. 

(ಮುಂದುವರಿಯುವುದು….)

8 Responses

 1. ಅಮೆರಿಕ ಪ್ರವಾಸ ಕಥನ ಓದಿಸಿಕೊಂಡು..ಹೋಯಿತು.. ಅನುಭವ ದ ಅಭಿವ್ಯಕ್ತಿ.. ಚಂದವಾಗಿ ಮೂಡಿಬರುತ್ತಿದೆ.ಧನ್ಯವಾದಗಳು ಮೇಡಂ.

 2. ನಯನ ಬಜಕೂಡ್ಲು says:

  Nice

 3. ಆಶಾ ನೂಜಿ says:

  ಹೌದು ಅಕ್ಕಾ ನಮಗೆ ಅಲ್ಲಿಗೆ ಹೋದಾಗ ಅಲ್ಲಿಯ‌ಬೆಲೆಯನ್ನು ನಾವು ಭಾರತಕ್ಕೆ ಹೋಲಿಸಿದಾಗ ಆಗುವ ಹೆಚ್ಚಳವನ್ನು ಗ್ರಹಿಸಲೂ ಅಸಾಧ್ಯ ..ಚಂದದ ನೆನಪಿನ ಅಮೇರಿಕಾ ಕಥನಾ …

 4. Padma Anand says:

  ಅಲ್ಲಿಯ ಒಂದೊಂದು, ಸ್ಥಳ, ನೀತಿ. ರೀತಿಗಳನ್ನೂ ನೀವು ವಿವರಿಸುವ ಪರಿ ಅಸದಳ, ಅನನ್ಯ.

  • . ಶಂಕರಿ ಶರ್ಮ says:

   ತಮ್ಮ ಮೆಚ್ಚುಗೆಯ ನುಡಿಗಳಿಗೆ ನಮನಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: