ಪುಸ್ತಕ ಪರಿಚಯ ‘ಬಂಜೆತನ ಬಯಸಿದವಳು’ , ಲೇಖಕರು: ಎನ್ನೇಬಿ ಮೊಗ್ರಾಲ್ ಪುತ್ತೂರು

Share Button
ಬಿ.ಕೆ.ಮೀನಾಕ್ಷಿ, ಮೈಸೂರು

ಮಂಗಳ ವಾರಪತ್ರಿಕೆಯ ಸಂಪಾದಕರಾದ ಶ್ರೀಯುತ ಎನ್ನೇಬಿ ಮೊಗ್ರಾಲ್ ಪುತ್ತೂರರ ಕಥಾಸಂಕಲನಬಂಜೆತನ ಬಯಸಿದವಳುನ್ನು ಕೊಂಡು ಬಹಶಃ ವರ್ಷವೇ ಕಳೆದಿರಬಹುದು. ಈ ಸಂಕಲನ ಐದಾರು ಕೈಗಳನ್ನು ದಾಟಿಕೊಂಡಿತ್ತೇ ಹೊರತು, ನಾನು ಓದಲಾಗಿರಲಿಲ್ಲ. ಒಂದೆರಡು ಕತೆಗಳನ್ನು ಓದಿದ್ದಷ್ಟೆ, ಈಗ ಯಾರ ಬಳಿಯಿದೆ ಎಂದು ಹುಡುಕತೊಡಗಿ ಮತ್ತೆ ನನ್ನ ಕೈಸೇರಿದೆ. ಈಗಾದರೂ ಓದಿಬಿಡೋಣವೆಂದು ಹಿಡಿದು ಕುಳಿತೆ. ಕುಳಿತದ್ದಷ್ಟೆ, ಒಂದೇ ಸಮನೆ ಓದಿಸಿಕೊಂಡು ಹೋಯಿತು, ಇಲ್ಲ, ಈ ಸಂಕಲನದ ಬಗ್ಗೆ ಬರೆಯಲೇ ಬೇಕೆಂಬ ತುಡಿತ ಹೆಚ್ಚಾಗಿ ಬರೆಯುತ್ತಿದ್ದೇನೆ.

ಪ್ರಸಿದ್ಧ ವಿಮರ್ಶಕರಾದ ಸನ್ಮಾನ್ಯ ಶ್ರೀ ಎಸ್. ಆರ್. ವಿಜಯಶಂಕರ್ ಸರ್ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಈ ಸಂಕಲನದಲ್ಲಿ ವೈವಿಧ್ಯಮಯ ವಿಷಯವಸ್ತುಗಳನ್ನೊಳಗೊಂಡ ಒಟ್ಟು ಹದಿನಾಲ್ಕು ಕತೆಗಳಿದ್ದು ಎಲ್ಲ ಕತೆಗಳೂ ಸುಧಾ, ತರಂಗ, ಮಂಗಳ, ಹೊಸದಿಗಂತ, ಕರ್ಮವೀರಗಳಲ್ಲಿ ಪ್ರಕಟವಾಗಿರುವ ಕತೆಗಳೇ. ಅಲ್ಲದೆ ಕೆಲವು ಕಿರುಚಿತ್ರ ಮತ್ತು ನಾಟಕಗಳಾಗಿಯೂ ಹೆಸರು ಮಾಡಿವೆ. ಅಲ್ಲದೆ, ಅವ್ವ ಪುಸ್ತಕಾಲಯದ ಪ್ರಶಸ್ತಿಯ ಗರಿಯನ್ನು ಸಿಕ್ಕಿಸಿಕೊಂಡ ಹೆಗ್ಗಳಿಕೆಯೂ ಸಂಕಲನದ ಸತ್ವಕ್ಕೆ ನೀಡಿದ ಗೌರವವಾಗಿದೆ. ವಿಶಿಷ್ಟ ಮುಖಪುಟವನ್ನೊಳಗೊಂಡ ಈ ಸಂಕಲನ ನಿಜಕ್ಕೂ ಸೆಳೆದದ್ದು ಸೂಕ್ಷ್ಮಸಂವೇದನೆಗೆ ಒತ್ತುಕೊಟ್ಟ ಕತೆಗಳಿಂದ.

ಮಂಗಳ ಸಂಪಾದಕರಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎನ್ನೇಬಿಯವರ ಭಾಷಾ ಪ್ರಬುದ್ಧತೆ, ಕತೆಯನ್ನು ಓದುಗರಿಗೆ ಕಟ್ಟಿಕೊಟ್ಟಿರುವ ರೀತಿ ಅನನ್ಯವಾದದ್ದು. ಎಲ್ಲ ಕತೆಗಳು ಎಂಭತ್ತು ತೊಂಭತ್ತರ ದಶಕಗಳಲ್ಲಿ ಪ್ರಕಟವಾದವುಗಳಾದ್ದರಿಂದ ಅಂದಿನ ತಂತ್ರಗಾರಿಕೆಯನ್ನೇ ಬಳಸಿಕೊಂಡ ಕತೆಗಳಾಗಿವೆ. ವಿಶಿಷ್ಟ ಪದಪುಂಜಗಳು, ಕಥಾನಿರೂಪಣೆಯ ಮೇಲಿನ ಹಿಡಿತ, ಓದುಗನ ಕುತೂಹಲವನ್ನು ಹಿಡಿದಿಡುವ ಕಥೆಗಳ ಬೆಳವಣಿಗೆ ಓದುಗನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಸಮಾಜದಲ್ಲಿ ಘಟಿಸಿರಬಹುದಾದ ಘಟನೆಗಳನ್ನೇ ಕಥಾವಸ್ತುಗಳನ್ನಾಗಿ ಮಾಡಿಕೊಂಡಂತೆ ತೋರುವ ಕತೆಗಳು ನೈಜತೆಗೆ ಒತ್ತುಕೊಟ್ಟಿವೆ. ಎಲ್ಲಿಯೂ ಕೃತಕವೆನಿಸದೆ, ಸಹಜವಾಗಿ ಕತೆ ಬೆಳೆದುಕೊಳ್ಳುವುದಲ್ಲದೆ, ಓದುಗನ ಕುತೂಹಲವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹಾಗೆ ನೋಡುವುದಾದರೆ, ಏಕಸೂತ್ರ ಕತೆ ಓದುಗನನ್ನು ನಿರಾಸೆಗೆ ತಳ್ಳಿ ಮತ್ತೆ ಅವನನ್ನು ಅಲ್ಲಿಂದ ಸಂತಸ ನೆಮ್ಮದಿಗೆ ಎಳೆದೊಯ್ಯವ ಬಗೆ ಚಂದವೆನಿಸುತ್ತದೆ. ಸರಳವಾಗಿ ಹೇಳಿಕೊಂಡು ಹೋಗುವ ಈ ಕತೆ ಸಮಾಜದ ಒಂದು ಮುಖವನ್ನು ತೆರೆದಿಡುವುದಲ್ಲದೆ, ಎಲ್ಲರ ಜೀವನದ ಸಂಘರ್ಷಗಳೂ ಅವೇ ಆಗಿರುವುದರಿಂದ ಓದುಗನನ್ನು ತಟ್ಟುತ್ತದೆ. ಅಂತೆಯೇ ‘ಬೇಲಿ‘ಯೂ ಗಮನ ಸೆಳೆದ ಕತೆ. ಬಿಗಿ ನಿರೂಪಣೆಯಲ್ಲಿ ಮೂಡಿ ಬಂದಿರುವ ಈ ಕತೆ, ಅನ್ಯರಿಗೆ ಬೇಲಿ ಹಾಕಲು ಹೋಗಿ, ಅದೇ ಬೇಲಿಯ ಬಂಧನದಲ್ಲಿ ತಾನೇ ತೊಳಲಾಡುವ ಕತೆ. ಇದು ಹೊಸತಾದ ವಿಷಯವೆನಿಸುವ ಕತೆ. ಖಾಲಿ ಕುರ್ಚಿ ಎಂಬ ಕತೆಯಲ್ಲಿ ಸಂಭವಿಸುವ ಅನಿರೀಕ್ಷಿತ ಸಂಬಂಧಗಳನ್ನು , ತಿರಸೃತನಾದ ಒಬ್ಬ ಮನುಷ್ಯ ಅನುಭವಿಸುವ ವೇದನೆಯನ್ನು ಅಚ್ಚುಕಟ್ಟಾಗಿ ತೆರೆದಿಡುತ್ತಾರೆ.

ಪ್ರಶಸ್ತಿ, ಪ್ರಸಿದ್ಧಿಗಾಗಿ, ಮನುಷ್ಯನ ಮನಸ್ಸಿನಲ್ಲಿ ಬಗೆಬಗೆಯ ಕುಟಿಲತೆಗಳು, ತಂತ್ರಗಳು ಹೊಳೆಯುತ್ತವೆ. ಹಾಗೇ ಸಾಹಿತಿಯ ಪ್ರಸಿದ್ಧಿಗೆ, ಆತನ ರೋಚಕ ಬರವಣಿಗೆಯೂ ಕಾರಣವಾಗಬಹುದು ಎಂಬುದನ್ನು ‘ನನ್ನ ಬಾಲ್ಯದ ದಿನಗಳು’ ಲ್ಲಿ ಅತ್ಯಂತ ಮಾರ್ಮಿಕವಾಗಿ ಬಿಂಬಿಸುವುದರೊಂದಿಗೆ ಉಂಟಾಗುವ ಪರಿಣಾಮವನ್ನೂ ಖೇದದಿಂದಲೇ ಕಟ್ಟಿಕೊಟ್ಟಿದ್ದಾರೆ.

‘ಓಟ’ ಎಂಬ ಕತೆ ಹುಡುಗನೊಬ್ಬನ ವಿದ್ಯಾಭ್ಯಾಸದ ಹಂಬಲಕ್ಕಾಗಿ ಅವನು ಪಡುವ ಪಾಡನ್ನು ಹೇಳುತ್ತಲೇ ಅವನ ಜೀವನದ ಗತಿ ಯಾವುದೋ ಒಂದು ಕ್ಷಣದಲ್ಲಿ ಬದಲಾಗಿಬಿಡುವ ಬಗೆಯನ್ನು ಸರಳವಾಗಿ ಹೇಳಿಕೊಂಡು ಹೋಗುತ್ತಲೇ, ಕೆಲಸಕ್ಕಾಗಿ ಕೈಚಾಚಿದ ಪರಿಸ್ಥಿತಿಯನ್ನು ಮರೆಮಾಚಿಕೊಳ್ಳುವ ಅನಿವಾರ್ಯತೆ ಮತ್ತು ಬೇಡಿ ಹೋಗುವ ಮನೆ ತನ್ನ ಸ್ನೇಹಿತನದ್ದೇ ಆಗಿ, ಅಲ್ಲಿ ಕುಬ್ಜನಾಗುವ ಪರಿಸ್ಥಿತಿಗೆ ಬೆನ್ನು ಹಾಕುವ ಸೂಕ್ಷ್ಮ ಮನಸ್ಸಿನ ವ್ಯಥೆಯನ್ನು, ದುಃಖವನ್ನು ನೈಜವಾಗಿ ಕಟ್ಟಿಕೊಡುತ್ತಾರೆ. ಅಜ್ಜಿ ಮೊಮ್ಮಗಳ ಪ್ರೀತಿಗೆ ಸಾಕ್ಷಿಯಾಗಿ ನಿಲ್ಲುವ ‘ಮಾತು ಮೌನಗಳಾಚೆ‘ ಅಜ್ಜಿಯನ್ನು ಉತ್ಕಟವಾಗಿ ಪ್ರೀತಿಸುವ, ಹಾಗೇ ಮೊಮ್ಮಗಳ ಶ್ರೇಯಸ್ಸನ್ನೇ ಬಯಸುವ ಅಜ್ಜಿಯ ಅಂತಿಮ ನಡವಳಿಕೆ ಮಗುವನ್ನು ಘಾಸಿಗೊಳಿಸುವ ಪರಿಗೆ, ಮಗುವಿನ ತತ್ತರಕ್ಕೆ, ಅನೂಹ್ಯವಾದ ಸಂಬಂಧದ ಎಳೆಗಳನ್ನು ಬಿಡಿಸಿಕೊಳ್ಳಲು ಬಳಲುವ ಅಜ್ಜಿಯ ಮನೋಗತ ಒಮ್ಮೆಲೇ ಮನಸ್ಸನ್ನು ದಳ್ಳುರಿಗೆ ತಳ್ಳುತ್ತದೆ.

ಕತೆಗಳ ಓದುವಿಕೆಯೇ ಒಂದು ಕಲೆಯೆನೋ ಎಂಬಂತೆ ಕತೆಗಳನ್ನು ಕಟ್ಟಿಕೊಡುವ ಎನ್ನೇಬಿಯವರು ಅತ್ಯಂತ ಚತುರತೆಯಿಂದ ವಾಕ್ಯಗಳನ್ನು ಹೆಣೆಯುತ್ತಾರೆ. ಒಂದೊಮ್ಮೆ ಅಂತಹ ವಾಕ್ಯಗಳನ್ನು ಎರಡೆರಡು ಬಾರಿ ಓದಿಕೊಳ್ಳಬೇಕಾಗುತ್ತದೆ. ಬುದ್ಧಿಪೂರ್ವಕವಾಗಿ ಬಂದ ವಾಕ್ಯಗಳಲ್ಲ ಅವುಗಳು, ಸಾಂದರ್ಭಿಕ ಎಂಬಂತೆ ಸಹಜವಾಗಿ ಮೂಡಿಕೊಳ್ಳುತ್ತವೆ. ಇದನ್ನು ಅವರ ಎಲ್ಲ ಕತೆಗಳಲ್ಲೂ ಕಾಣಬಹುದು.

ಇಲ್ಲಿ ಕೆಲವು ಕತೆಗಳನ್ನು ಮಾತ್ರ ನಾನು ಉದ್ಧರಿಸಿದ್ದೇನೆ. ಎಲ್ಲ ಕತೆಗಳೂ ಮನಸ್ಸಿಗೆ ತಟ್ಟುವ, ಕೆಲವು ಕತೆಗಳನ್ನು ಓದುತ್ತಾ ನಾವೇ ಕಥಾವಸ್ತುವಾಗುವ ಸಂಭಾವ್ಯತೆಯೂ ಇಲ್ಲದಿಲ್ಲ. ಬಂಜೆತನ ಬಯಸಿದವಳು ಹೆಸರೇ ವಿಶಿಷ್ಠವಾಗಿದ್ದು ಇದರಲ್ಲಿರುವ ಕತೆಗಳು ಎಲ್ಲರಿಂದ ಮೆಚ್ಚುಗೆ ಪಡೆಯುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಬಿ.ಕೆ.ಮೀನಾಕ್ಷಿ, ಮೈಸೂರು

14 Responses

 1. Anonymous says:

  ಶ್ರೀಮತಿ ಮೀನಾಕ್ಷಿಯವರ ಈ ವಿಶಿಷ್ಟ ರೀತಿಯ ನಿರೂಪಣೆ ಓದಿದಾಗ ಓದಬೇಕೆಂಬ ತುಡಿತ ಅಧಿಕವಾಗುವುದೂ ಸುಳ್ಳಲ್ಲ.ಹೇಮಮಾಲಾ,ಎನ್ನೇಬಿ ಮೊಗ್ರಾಲ್ ಪುತ್ತೂರು ಹಾಗೂ ಮೀನಾಕ್ಷಿಯವರಿಗೆ ಧನ್ಯವಾದಗಳು.

 2. Bedre Manjunath says:

  Nice introduction. Congratulations.

 3. ಉತ್ತಮ ಗುಣಮಟ್ಟದ ಪುಸ್ತಕ ಪರಿಚಯ.ಅಭಿನಂದನೆಗಳು ಗೆಳತಿ ಮೀನಾಕ್ಷಿ..

  .

 4. ನಯನ ಬಜಕೂಡ್ಲು says:

  ನನ್ನದೂ ನಿಮ್ಮದೇ ಕಥೆ, ಪುಸ್ತಕ ತರಿಸಿಕೊಂಡಿದ್ದರೂ ಇನ್ನೂ ಓದಲು ಸಮಯ ಬಂದಿಲ್ಲ. ಸೊಗಸಾದ ಪುಸ್ತಕ ಪರಿಚಯ. ಓದುವ ತುಡಿತ ಹೆಚ್ಚಿಸುವಂತಿದೆ.

  • B.k.meenakshi says:

   ಕೆಲವೊಮ್ಮೆ ಉದಾಸೀನದಿಂದ ಒಳ್ಳೆಯದು ಕೈ ತಪ್ಪುವುದೇ ಹೆಚ್ಚು ಅಲ್ಲವಾ ಮೇಡಂ?

 5. ಶಂಕರಿ ಶರ್ಮ says:

  ಸೊಗಸಾದ ಪುಸ್ತಕವೊಂದರ ವಿಮರ್ಶಾತ್ಮಕ ಪರಿಚಯವು ಬಹಳ ಚೆನ್ನಾಗಿದೆ.

 6. padmini hegade says:

  ಓದುವ ತುಡಿತ ಹೆಚ್ಚಿಸುವಂತಿದೆ ಪುಸ್ತಕದ ಪರಿಚಯ.

 7. ASHA nooji says:

  ಸೂಪರ್

 8. Padma Anand says:

  ಪುಸ್ತಕ ಓದಲು ಮನಸ್ಸನ್ನು ಪ್ರೇರೇಪಿಸುವಂತಿರುವ ಪುಸ್ತಕ ಪರಿಚಯ ಎಂದಿನಂತೆ ನಿಮ್ಮ ಸೊಗಸಾದ ಶೈಲಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: