ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 3

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
2 . ವಿಜ್ಞಾನಿಗಳ ಹೋರಾಟದ ಮುಖಗಳು

ಬ್ರಿಟಿಷರು ಭಾರತವನ್ನು ತಮ್ಮ ಕೈಗಾರಿಕಾ ಕ್ರಾಂತಿಯ ಪ್ರಯೋಗ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ಪ್ರಯೋಗವನ್ನು ಧಿಕ್ಕರಿಸಿದವರನ್ನು ಕಾನೂನಿನ ಮೂಲಕ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಿದರು. ಶಿಕ್ಷೆಯ ಭಯದಿಂದ ಬಹುಸಂಖ್ಯಾತರು ಬ್ರಿಟಿಷರಿಗೆ ತಲೆಬಾಗಿದರು. ಅನೇಕರು ಶಿಕ್ಷೆಯ ಭಯಕ್ಕೆ ಒಳಗಾಗದೆ ಬ್ರಿಟಿಷರನ್ನು ಮಣಿಸಲು ತಮ್ಮದೇ ಆದ ವಿಧಾನವನ್ನು ಅನುಸರಿಸಿದರು. ಆ ಗುಂಪಿನಲ್ಲಿ ವಿಜ್ಞಾನಿಗಳು ಮತ್ತು ಅವರನ್ನು ಬೆಂಬಲಿಸಿದ ಕೈಗಾರಿಕೋದ್ಯಮಿಗಳಿದ್ದರು. ಅವರು ಬ್ರಿಟಿಷರು ರೂಪಿಸಿದ ಚೌಕಟ್ಟಿನಲ್ಲೇ ತಮ್ಮ ಶಕ್ತಿಯನ್ನು ವೃದ್ಧಿಸಿಕೊಂಡರು. ಬ್ರಿಟಿಷರ ಶೋಷಣೆಗೆ ಪ್ರತಿರೋಧವನ್ನು ಒಡ್ಡಿದರು. 

ಭಾರತೀಯರು ಎಲ್ಲಾ ರೀತಿಯಲ್ಲೂ ತಮಗಿಂತ ಬಹಳ ಬಹಳ ಕನಿಷ್ಠರು ಎನ್ನುವಂತೆ ಬ್ರಿಟಿಷರು ವರ್ತಿಸುತ್ತಿದ್ದುದನ್ನು ಸಹಿಸುವುದು ಪ್ರಜ್ಞಾವಂತರಿಗೆ ದುಷ್ಕರವಾಗಿತ್ತು. ಬ್ರಿಟಿಷರಷ್ಟೇ ತಾವು ಯೋಗ್ಯರು ಎಂದು ಸಾಬೀತುಪಡಿಸುವುದರ ಹೊರತಾಗಿ ಬ್ರಿಟಿಷರ ದುರ್ವರ್ತನೆಯನ್ನು ವಿರೋಧಿಸಲು ಅವರಿಗೆ ಬೇರೆ ಮಾರ್ಗ ಇರಲಿಲ್ಲ. ಬ್ರಿಟಿಷರ ಕೈಯಲ್ಲಿ ಮಂತ್ರವೂ ಇತ್ತು, ತಂತ್ರವೂ ಇತ್ತು; ಅಸ್ತ್ರವೂ ಇತ್ತು ಶಸ್ತ್ರವೂ ಇತ್ತು! ವಿಜ್ಞಾನಿಗಳ ಹೋರಾಟದ ಒಂದು ಭಾಗ ಭಾರತೀಯ ಎನ್ನಬಹುದಾದ ವಿಜ್ಞಾನ ಇದೆ ಎಂಬುದನ್ನು ನಿರೂಪಿಸುವುದು. ಇನ್ನೊಂದು ಭಾಗ ಬ್ರಿಟಿಷರ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು ವೈಜ್ಞಾನಿಕ ಕ್ಷೇತ್ರಕ್ಕೆ ತಮ್ಮದೇ ಆದ ಕಾಣಿಕೆಯನ್ನು ಕೊಡುವುದು ಮತ್ತು ತಮ್ಮ ಸಮಕಾಲೀನತೆಯನ್ನು ಪ್ರತಿಷ್ಠಾಪಿಸುವುದು; ಮತ್ತು ತಮ್ಮ ವೈಜ್ಞಾನಿಕ ಚಿಂತನೆಯ ಅನನ್ಯತೆ ಮತ್ತು ಪ್ರಸ್ತುತತೆಯನ್ನು ಎತ್ತಿಹಿಡಿಯುವುದು ಆಗಿತ್ತು.  

ವಸಾಹತುಶಾಹಿ ಆಡಳಿತಕ್ಕೆ ಸ್ವದೇಶೀಯರ ಪ್ರತಿಭೆ, ವಿಶೇಷವಾದ ಪರಿಶ್ರಮಗಳನ್ನು ಗೌರವಿಸುವುದು ಯೂರೋಪಿಯನ್ನರ ಹಿರಿಮೆಗೆ, ಶ್ರೇಷ್ಠತೆಗೆ ಭಂಗ ತಂದಂತೆ ಎಂಬ ನಿಲುವು ಇತ್ತು. ಈ ನಿಲುವಿಗೆ ಮುಕ್ಕಾಗದಂತೆ ತಮ್ಮ ಪ್ರತಿಭೆಯ, ಕುಶಲತೆಯ ಸಾರ್ಥಕ ಸದುಪಯೋಗ ಮಾಡಿಕೊಳ್ಳುವುದು ಭಾರತೀಯರಿಗೆ ಒಂದು ಪಂಥಾಹ್ವಾನವೇ ಆಗಿತ್ತು. ಬ್ರಿಟಿಷ್‌ ವ್ಯವಸ್ಥೆಯೊಳಗೆಯೇ ಅವರು ವಿಜ್ಞಾನ ಪದವಿಯನ್ನು, ಸಂಶೋಧನಾ ಪಟುತ್ವವನ್ನು ಅತ್ಯುನ್ನತ ಮಟ್ಟದಲ್ಲಿ ಪಡೆಯಬೇಕಾಗಿತ್ತು, ಸಂಶೋಧನಾ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು, ಗಮನಾರ್ಹ ಕೊಡಿಗೆಯನ್ನು ನೀಡಬೇಕಾಗಿತ್ತು ಮತ್ತು ಅದಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಗಳಿಸಿಕೊಳ್ಳಬೇಕಾಗಿತ್ತು. 

ಎಡಿನ್‌ಬರ್ಗ್‌ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದಿದ್ದರೂ ಪಿ.ಸಿ. ರೇ ಅವರನ್ನು ತಾತ್ಕಾಲಿಕ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಅದನ್ನು ಅವರು ವಿರೋಧಿಸಿದುದಕ್ಕೆ ಬಂದ ಪ್ರತಿಕ್ರಿಯೆ “ನಿಮಗೆ ಬದುಕಲು ಬೇಕಾದಷ್ಟು ದಾರಿಗಳು ತೆರೆದುಕೊಂಡಿವೆ; ನಾವೇನು ಈ ಕೆಲಸಕ್ಕೆ ಬನ್ನಿ ಎಂದು ನಿಮ್ಮನ್ನೇನು ಒತ್ತಾಯಿಸಿಲ್ಲ” ಎಂಬುದಾಗಿತ್ತು! ಇಂಗ್ಲಿಷ್‌ ಮೆಡಿಕಲ್‌ ಪದ್ಧತಿಗಿಂತ ಹೋಮಿಯೋಪತಿ ಹೆಚ್ಚು ಪರಿಣಾಮಕಾರಿ, ಅಲ್ಪ ವೆಚ್ಚದ್ದು ಎಂದು ಮೆಡಿಕಲ್‌ ಕೌನ್ಸಿಲಿನ ಮೀಟಿಂಗಿನಲ್ಲಿ ಪ್ರತಿಪಾದಿಸಿದುದಕ್ಕೆ ಮಹೇಂದರ್‌ ಲಾಲ್‌ ಸರ್ಕಾರ್‌ ಮೆಡಿಕಲ್‌ ಕೌನ್ಸಿಲಿನ ತಮ್ಮ ಅಧ್ಯಕ್ಷ ಪದವಿಯನ್ನು ಕಳೆದುಕೊಂಡಿದ್ದರು. 

ಇಂಗ್ಲೆಂಡಿನ “ರಾಯಲ್‌ ಸ್ಕೂಲ್‌ ಆಫ್‌ ಮೈನ್ಸ್‌” ನ ಪದವೀಧರನಾಗಿದ್ದ ಪಿ.ಎನ್.‌ ಬೋಸರಿಗೆ “ಜಿಯಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ” ದಲ್ಲಿ ಅದರ ಡೈರೆಕ್ಟರ್‌ ಆಗಿ ಪದೋನ್ನತಿಯನ್ನು ಕೊಡದೆ ಅವರಿಗಿಂತ 10 ವರ್ಷ ಕಿರಿಯನಾದ ಟಿ. ಹಾಲೆಂಡ್‌ಗೆ ಆ ಪದೋನ್ನತಿಯನ್ನು ಕೊಟ್ಟು ಸರ್ಕಾರ ಬೋಸರನ್ನು ಅವಮರ್ಯಾದಿಸಿತ್ತು. ಹಿಮಾಲಯದ ಅತ್ಯಂತ ಎತ್ತರದ ಶಿಖರದ ಎತ್ತರವನ್ನು ನಿಖರವಾಗಿ ಅಳೆದ ಗಣಿತಜ್ಞ ರಾಧಾನಾಥ ಸಿಕ್ದರ್‌ ನನ್ನು ಬದಿಗೆ ಸರಿಸಿ ಸರ್ವೇಯರ್ ಜನರಲ್‌ ಆಗಿದ್ದ ಜಾರ್ಜ್ ಎವರೆಸ್ಟ್‌ನ ಹೆಸರಲ್ಲಿ ಆ ಶಿಖರವನ್ನು ಎವರೆಸ್ಟ್‌ ಎಂದು ಹೆಸರಿಸಿತ್ತು. ಮಲೇರಿಯಾ ರೋಗದ ಹರಡುವಿಕೆಗೆ ಕಾರಣವನ್ನು ಕಂಡುಹಿಡಿದ ಗಮನಾರ್ಹ ಸಂಶೋಧನೆಯಲ್ಲಿ ಸಮಾನವಾಗಿ ಸಹಭಾಗಿಯಾಗಿದ್ದ ಕಿಶೋರಿ ಮೋಹನ್‌ ಬಂದೋಪಾಧ್ಯಾಯನನ್ನು ನಿರ್ಲಕ್ಷಿಸಿ ಸರ್‌ ರೋನಾಲ್ಡ್‌ ರಾಸ್‌ಗೆ ಮಾತ್ರ ನೊಬಲ್‌ ಬಹುಮಾನ ನೀಡಿದ್ದರು. ಭಾರತೀಯರ ಬಗೆಗಿನ ಇಂಥ ಕೀಳು ಮತ್ತು ನಿರ್ಲಕ್ಷ್ಯ ಮನೋಭಾವವನ್ನು ದೂರ ಮಾಡಬೇಕಾಗಿತ್ತು. 

ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಯಿಂದ ದೂರವುಳಿದ ಭಾರತೀಯರು ವಿಜ್ಞಾನದ ಯಾವ ತಿಳುವಳಿಕೆಗೂ ಮರ್ಯಾದೆ ಕೊಡದೆ ಬೆನ್ನು ಹಾಕಿರುತ್ತಿದ್ದರು. ಅವರನ್ನು ವೈಜ್ಞಾನಿಕ ಚಿಂತನೆಯ ಕಡೆಗೆ ಒಲವು ತೋರುವಂತೆ ಮನವೊಲಿಸಬೇಕಿತ್ತು. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅತ್ಯಗತ್ಯವಾಗಿತ್ತು. ಭಾರತೀಯ ವೈಜ್ಞಾನಿಕ ಪರಂಪರೆಯನ್ನು ಪುನಶ್ಚೇತನಗೊಳಿಸಲು ಕೈಜೋಡಿಸುವಂತೆ ಅವರ ಮನಃ ಪರಿವರ್ತನೆಯನ್ನು ಮಾಡುವ ಅಗತ್ಯವೂ ಇತ್ತು. ಹಾಗೆಯೇ ವೈಜ್ಞಾನಿಕ ಸಂಶೋಧನೆಯನ್ನು ಮಾಡುವ ಪಟುತ್ವ ಇರುವವರಿಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡಬೇಕಿತ್ತು. ಬಂಡವಾಳ ಹೂಡಿ ಕೈಗಾರಿಕೋದ್ಯಮಿಗಳಾಗುವ ಸಾಧ್ಯತೆ ಇರುವ ಭಾರತೀಯರಿಗೆ ವಿಜ್ಞಾನದ ತಿಳುವಳಿಕೆಯ ಬಂಡವಾಳವನ್ನೊದಗಿಸಿ ದೇಶೀ ಉದ್ಯಮವನ್ನು ಪ್ರೋತ್ಸಾಹಿಸಬೇಕಿತ್ತು. 

ಈ ಎಲ್ಲ ಪಂಥಾಹ್ವಾನಗಳನ್ನು ಭಾರತೀಯ ವಿಜ್ಞಾನ-ಪರವಾದಿಗಳ ಸಮುದಾಯ ಸಮರ್ಥವಾಗಿ ಸ್ವೀಕರಿಸಿತು. ತಮ್ಮ ತನು ಮನ ಧನದ ಬಳಕೆಯ ಅಗತ್ಯವಿಲ್ಲದೆ ದೇಶದ ಅಗತ್ಯಗಳ ಪೂರೈಕೆಯಾಗುತ್ತಿದ್ದುದರಿಂದ ವಿಜ್ಞಾನಿಗಳ ಸ್ವಂತ ನಿಲುವಿನಿಂದ ಬ್ರಿಟಿಷರಿಗೆ ಅಷ್ಟೇನೂ ಆತಂಕವಾಗಲಿಲ್ಲ. ಅವರು ಅದನ್ನು ನಿರ್ಲಕ್ಷಿಸಿದರು. ಸ್ವಾತಂತ್ರ್ಯ ಹೋರಾಟದ ಇತಿಹಾಸವೂ ಸಹ ವಿಜ್ಞಾನಿಗಳ ಪ್ರತಿರೋಧಕ್ಕೆ ಸಣ್ಣದಾದ ಜಾಗವನ್ನು ಕೊಟ್ಟಿತ್ತು. ಭಾರತೀಯರ ರಾಜಕೀಯ ಹೋರಾಟವನ್ನು ಬ್ರಿಟಿಷರು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದರು. ಅದು ಅತೀ ಸಾಮಾನ್ಯರನ್ನೂ ಬಡಿದೆಬ್ಬಿಸಿತ್ತು. ವಾಸ್ತವವಾಗಿ ಸ್ವಾತಂತ್ರ್ಯಾ ನಂತರದ ಭಾರತವನ್ನು ಪುನರ್ನಿರ್ಮಿಸುವ ಪ್ರಯತ್ನ ಶೀಘ್ರವಾಗಿ ಫಲಕಾರಿಯಾದುದಕ್ಕೆ ಸ್ವಂತಿಕೆಯ ನೆಲೆಗಟ್ಟನ್ನು ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತೀಯರು ಕಂಡುಕೊಂಡದ್ದೇ ಕಾರಣ.

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35620

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

8 Responses

  1. ನಾಗರತ್ನ ಬಿ. ಆರ್ says:

    ಅಭ್ಭಾ…ಎಷ್ಟು.. ಸಂಗತಿಗಳ ಸಂಗ್ರಹಣೆ…ನಿಮ್ಮ ಹತ್ತಿರ…ಪಾಠಕೇಳಿದ ಶಿಷ್ಯರು.. ಪುಣ್ಯ ವಂತರು ಮೇಡಂ.
    ಪ್ರತಿ ಸರಿ..ಓದಿ ದಾಗಲೂ…ಮುಂದಿನ ಕಂತಿಗಾಗಿ ಕಾಯುವಂತೆ ಮಾಡುತ್ತದೆ..
    ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  3. padmini Hegade says:

    Many many thanks to B.R. Nagaratna, Madam! for graceful appreciation

  4. padmini Hegade says:

    Thankyou very much Nayana Bajakudlu, Madam!

  5. ಶಂಕರಿ ಶರ್ಮ says:

    ವಿಸ್ತೃತ, ಗಂಭೀರ ಮಾಹಿತಿಗಳನ್ನೊಳಗೊಂಡ ಲೇಖನ.

  6. Padma Anand says:

    ಅತ್ಯಂತ ಕುತೂಹಲಭರಿತ, ಆದರೆ ಹೃದಯ ಕಲಕುವ ಮಾಹಿತಿಗಳನ್ನೊಳಗೊಂಡ ವಿಷಯಾಧಾರಿತ ಲೇಖನಮಾಲೆ.

  7. sudha says:

    even Nobel prize is given to whites. others are rarely considered.

  8. padmini hegade says:

    Thanks to Madam Padma Anand, Madam Shankari Sharma and Madam Sudha and anonymous readers – for your encouraging response.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: