ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 4

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಉದ್ಯಮ, ಉದ್ಯಮಿ:

ಬ್ರಿಟಿಷರ ದುರಾಡಳಿತದ ಫಲವಾಗಿ ಭಾರತದ ಹತ್ತಿ ವಸ್ತ್ರೋದ್ಯಮ, ಕಬ್ಬಿಣ ಕೈಗಾರಿಕೆ, ಹಡಗು ಕಟ್ಟುವ ಮತ್ತು ಶಿಪ್ಪಿಂಗ್‌ ಉದ್ಯಮ ಸಂಪೂರ್ಣವಾಗಿ ಹಾಳಾದವು. 1769ರ ವೇಳೆಗೇ ಬ್ರಿಟಿಷ್‌ ಕಂಪೆನಿ ಸರ್ಕಾರ ಕಚ್ಚಾ ರೇಷ್ಮೆಯ ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು; ರೇಷ್ಮೆ ಬಟ್ಟೆಯ ಉತ್ಪಾದನೆಯನ್ನು, ರೇಷ್ಮೆ ನೂಲುಗಾರರು ತಂತಮ್ಮ ಮನೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಬೇಕು; ರೇಷ್ಮೆ ಕೆಲಸಗಾರರು ಕಂಪೆನಿಯ ಕಾರ್ಖಾನೆಗಳಲ್ಲಿಯೇ ಕೆಲಸ ಮಾಡುವಂತೆ ನಿರ್ಬಂಧಿಸಬೇಕು ಎಂದು ಬಂಗಾಳದ ಮುಖ್ಯಸ್ಥನಿಗೆ ಪತ್ರ ಬರೆದಿತ್ತು. ಸರ್ಕಾರ ಸ್ವತಂತ್ರವಾಗಿ ತಮ್ಮ ಉತ್ಪತ್ತಿಗಳನ್ನು ಮಾರುವ ಭಾರತೀಯ ನೇಕಾರರು, ದಲ್ಲಾಲ್‌ ಗಳು, ಪೈಕಾರ್‌ ಗಳನ್ನು ಜೈಲಿಗೆ ಕಳುಹಿಸುತ್ತಿತ್ತು, ಅವರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಕಬ್ಬಿಣದ ಕೈಗಾರಿಕೆ ಹಾಳಾದುದರಿಂದ 80% ಕುಶಲಕರ್ಮಿಗಳು ಕೃಷಿಕರಾದರು. ಕೃಷಿಯ ಮೇಲಿನ ತೆರಿಗೆ ಗಗನಕ್ಕೆ ಮುಟ್ಟುತ್ತಿದ್ದುದರಿಂದ ತೆರಿಗೆ ಕೊಡಲಾರದೆ ಬೀದಿಗೆ ಬಿದ್ದರು. ಇದರ ಜೊತೆಗೆ 1877, 78, 89, 92, 97, 1900, 1943ರಲ್ಲಿ ಭಾರತ ಭಯಂಕರವಾದ ಕ್ಷಾಮಕ್ಕೆ ತುತ್ತಾಯಿತು.

ನಿರುದ್ಯೋಗದ ಕಾರಣದಿಂದಾಗಿ ಉಂಟಾದ ಜನಸಾಮಾನ್ಯರ ದುರ್ಭರ ಬಡತನದಿಂದ ಅವರನ್ನು ಪಾರುಮಾಡಲು, ಸ್ವದೇಶಿ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಕೆಲವು ಶ್ರೀಮಂತರು ಮುಂದಾದರು. ಜೇಮ್‌ ಸೇಟಜೀ ಟಾ ಟಾ ದಿವಾಳಿಯಾಗಿದ್ದ ಎಣ್ಣೆಮಿಲ್ಲನ್ನು 1869ರಲ್ಲಿ ಕೊಂಡುಕೊಂಡು ಅದನ್ನು ಕಾಟನ್‌ ಮಿಲ್ ಆಗಿ ಪರಿವರ್ತಿಸಿದರು. ಮತ್ತು ಅದನ್ನು ಲಾಭದಾಯಕವಾಗಿ ನಡೆಸಿ ಅನಂತರ ಮಾರಾಟ ಮಾಡಿದರು. 1874ರಲ್ಲಿ ಅಗ್ಗದ ಹೈಡ್ರೊ ಪವರ್‌, ಸ್ಪಿನ್ನಿಂಗ್‌, ವೀವಿಂಗ್‌, ಹೆವಿ ಇಂಡಸ್ಟ್ರಿ, ಸ್ಟೀಲ್‌ ಉದ್ಯಮಗಳನ್ನು ಆರಂಭಿಸಿದರು. ಟೆಕ್ನಿಕಲ್‌ ಮತ್ತು ಸಂಶೋಧನಾ ಕ್ಷೇತ್ರಗಳನ್ನು ಗುರುತಿಸಿದರು. 

ಜೇಮ್‌ ಸೇಟಜೀ ಟಾ ಟಾ

ಮೂಲಭೂತವಾಗಿ ವಿಜ್ಞಾನ-ತಂತ್ರಜ್ಞಾನದ ಸಾಕಾರ ರೂಪಿಯಾಗಿದ್ದ ಪ್ರಮಥನಾಥ ಬೋಸ್ ಅತ್ಯಂತ ದೇಶಾಭಿಮಾನಿಯಾಗಿದ್ದರು. ಅವರು ಕೈಗಾರೀಕರಣದಿಂದ ಮಾತ್ರ ದೇಶ ಸಶಕ್ತವಾಗಿರುತ್ತದೆ ಎಂದು ಕಂಡುಕೊಂಡಿದ್ದರು. ವಿಜ್ಞಾನದ ಭದ್ರ ಅಸ್ತಿಭಾರದ ಮೇಲೆ ರೂಪುಗೊಳ್ಳುವ ಕೈಗಾರಿಕೆಗಳನ್ನು ಆಧರಿಸಿ ಭಾರತೀಯರ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಬಹಳ ಮೊದಲೇ ಅರ್ಥಮಾಡಿಕೊಂಡಿದ್ದರು. ಬ್ರಿಟಿಷ್‌ ಸರ್ಕಾರ ಎಲ್ಲವನ್ನೂ ಸ್ವಾರ್ಥದ ದೃಷ್ಟಿಯಿಂದ ಪರಿಗಣಿಸುವುದನ್ನು ಕಂಡುಕೊಂಡು ತಮ್ಮ ಅಮೂಲ್ಯ ಶೋಧವಾದ ಕಬ್ಬಿಣದ ನಿಕ್ಷೇಪದ ಮಾಹಿತಿಯನ್ನು ಅವರು ಉದ್ಯಮಿ ಜೇಮಶೇಟಜಿ ಟಾಟಾ ರವರಿಗೆ ತಲುಪಿಸಿದರು. 

ಬೋಸರ ಜ್ಞಾನ ಬಂಡವಾಳ, ಟಾಟಾ ರವರ ಭೌತಿಕ ಬಂಡವಾಳದಿಂದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ವದೇಶೀಯರ ಆತ್ಮಾಭಿಮಾನ, ಸ್ವಾವಲಂಬನೆಯ ಪ್ರತೀಕವಾಗಿ 1907ರಲ್ಲಿ ಬಿಹಾರದಲ್ಲಿ ತಲೆಯೆತ್ತಿತು. ಈಗ ಇದು ಪ್ರಪಂಚದಾದ್ಯಂತ ವ್ಯಾಪ್ತಿಯನ್ನು ಹೊಂದಿದೆ. ಬೋಸರ ಜ್ಞಾನ ಬಂಡವಾಳ, ಟಾಟಾ ರವರ ಭೌತಿಕ ಬಂಡವಾಳವು 1908ರಲ್ಲಿ ಬಂಗಾಳದಲ್ಲಿ “State Market and Economy Centre for Civil Society”, ಮೈಸೂರಿನಲ್ಲಿ “ಮೈಸೂರು ಸ್ಟೇಟ್‌ ಐರನ್‌ ವರ್ಕ್ಸ್”‌ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೋದ್ಯಮಗಳಾಗಿಯೂ ಕೆಲಸ ಮಾಡಲಾರಂಭಿಸಿತು.  

ವಿದ್ಯಾವಂತರು ಉದ್ಯೋಗಕ್ಕಾಗಿ ಬ್ರಿಟಿಷ್‌ ವ್ಯವಸ್ಥೆಯನ್ನೇ ಆಶ್ರಯಿಸಬೇಕಿತ್ತು. ಉದ್ಯೋಗದಲ್ಲಿ ವೇತನ ತಾರತಮ್ಯ, ಪದೋನ್ನತಿಯಲ್ಲಿಯ ತಾರತಮ್ಯ ಮುಂತಾದ ತಾರತಮ್ಯಗಳನ್ನು ಸಹಿಸಿಕೊಳ್ಳಬೇಕಿತ್ತು.  ಇಂಥ ತಾರತಮ್ಯದ ಕಹಿಯನ್ನನುಭವಿಸಿದ ಪ್ರಪುಲ್ಲ ಚಂದ್ರ ರೇ ಸ್ವದೇಶೀಯರ ಆತ್ಮವಿಶ್ವಾಸ, ಸ್ವಾವಲಂಬನೆಯನ್ನು ಎತ್ತಿಹಿಡಿಯುವ ಸ್ವದೇಶೀ ಉದ್ಯಮವಾದ “Bengal Chemical and Pharmacutical Works”ನ್ನು 1892ರಲ್ಲಿ 700ರೂ.ಗಳ ಬಂಡವಾಳದಲ್ಲಿ ಕಲ್ಕತ್ತೆಯಲ್ಲಿ ಆರಂಭಿಸಿದರು. 1893ರಲ್ಲಿ ಇದು ಹರ್ಬಲ್‌ ಪ್ರಾಡಕ್ಟ್‌ನ್ನು ಉತ್ಪಾದಿಸಿತು. 1901ರಲ್ಲಿ ಇದು ಲಿಮಿಟೆಡ್‌ ಉದ್ಯಮವಾಗಿ ರೂಪಾಂತರಗೊಂಡಿತು. ಇದರ ಒಂದು ಫ್ಯಾಕ್ಟರಿ 1905ರಲ್ಲಿ, ಇನ್ನೊಂದು ಫ್ಯಾಕ್ಟರಿ 1920ರಲ್ಲಿ ಕಲ್ಕತ್ತೆಯಲ್ಲಿ ಕೆಲಸಮಾಡಲಾರಂಭಿಸಿತು. 1938ರಲ್ಲಿ ಮುಂಬೈಯಲ್ಲಿ ಮತ್ತೊಂದು ಫ್ಯಾಕ್ಟರಿ ತಲೆಯೆತ್ತಿತು. ಈ ಉದ್ಯಮ ಈಗ ಕೇಂದ್ರ ಸರ್ಕಾರದಡಿಯಲ್ಲಿ ಲಾಭದಾಯಕವಾಗಿ ನಡೆಯುತ್ತಿದೆ. 

ಪ್ರಪುಲ್ಲ ಚಂದ್ರ ರೇ ಅವರು ಬೆಂಗಾಲ್‌ ಪಾಟರೀಸ್‌”, “ಬೆಂಗಾಲ್‌ ಕ್ಯಾನಿಂಗ್‌”, “ಬೆಂಗಾಲ್‌ ಕ್ಯಾಂಡಿಮೆಂಟ್‌”, “ಬೆಂಗಾಲ್‌ ಎನಾಮೆಲ್‌ ವರ್ಕ್ಸ್‌”, “ಬೆಂಗಾಲ್‌ ಸಾಲ್ಟ್‌ ಮ್ಯಾನುಫಾಕ್ಚರಿಂಗ್‌ ಕಂಪೆನಿ”, “ಬೆಂಗಾಲ್‌ ಪೇಪರ್‌”, “ಬೆಂಗಾಲ್‌ ಸ್ಟೀಮ್‌ ನ್ಯಾವಿಗೇಷನ್‌”, “ಆಚಾರ್ಯ ಪ್ರಫುಲ್ಲ ಚಂದ್ರ ಕಾಟನ್‌ ಮಿಲ್‌”, “ನ್ಯಾಷನಲ್‌ ಟ್ಯಾನರೀಸ್‌ ಅಂಡ್‌ ಭಾರತಿ ಸೇಲ್ಸ್‌ ಅಂಡ್‌ ಇಂಜನಿಯರಿಂಗ್ ಕಂಪೆನಿ”, “ಚಕ್ರವರ್ತಿ ಚಟರ್ಜಿ ಕಂಪೆನಿ ಲಿಮಿಟೆಡ್‌ಗಳ ಪೋಷಕರಾದರು.

ಪ್ರಪುಲ್ಲ ಚಂದ್ರ ರೇ

ಸ್ವದೇಶೀಯರ ಸಹಾಯಧನದಿಂದ ವಿದೇಶದಲ್ಲಿ ಕೈಗಾರಿಕಾ ತಂತ್ರಜ್ಞಾನ ತರಬೇತಿ ಪಡೆದ ಸತ್ಯಸುಂದರ ದೇವ್‌ “ಕಲ್ಕತ್ತ ಪಾಟರೀಸ್‌” ಎಂಬ ಉದ್ಯಮವನ್ನು 1905ರಲ್ಲಿ ಆರಂಭಿಸಿದರು. ಇದು ಅಷ್ಟೊಂದು ಯಶಸ್ವಿಯಾಗದ ಕಾರಣ ಅದನ್ನು 1919ರಲ್ಲಿ “ಬೆಂಗಾಲ್‌ ಪಾಟರೀಸ್‌ ಲಿಮಿಟೆಡ್‌” ಎಂಬ ಸಾರ್ವಜನಿಕ ಸರ್ಕಾರೇತರ ಉದ್ಯಮವನ್ನಾಗಿ ರೂಪಾಂತರಿಸಿದರು. 600 ಭಾರತೀಯರಿಗೆ ಉದ್ಯೋಗಾವಕಾಶವನ್ನು ಇದು ಕಲ್ಪಿಸಿಕೊಟ್ಟಿತು. ಅದು ಆಟಿಗೆಗಳನ್ನು, “ಲೋ ವೋಲ್ಟೇಜ್‌ ಇನ್‌ಸುಲೇಟರ್‌” ಮತ್ತು “ಕ್ರೋಕರಿ”ಗಳನ್ನು ಉತ್ಪಾದಿಸಿತು. 1934ರಲ್ಲಿ ಇದನ್ನು ಕೊಂಡುಕೊಂಡ ಎಂ.ಜಿ. ಭಗತ್‌ ಇದನ್ನು ಮತ್ತಷ್ಟು ಆಧುನಿಕಗೊಳಿಸಿ ಉತ್ಪಾದನೆಯ ವ್ಯಾಪ್ತಿಯನ್ನು ವಿಸ್ತರಿಸಿ ಲಾಭದಾಯಕ ಉದ್ಯಮವನ್ನಾಗಿಸಿದರು. ಈಗ ಅವರ ಮಗ ಅದನ್ನು ಮುನ್ನಡೆಸುತ್ತಿದ್ದಾರೆ. ಪಿ.ಸಿ. ರೇ ಅವರ ಸಹಕಾರದಿಂದ ಸತ್ಯಸುಂದರ ದೇವ್‌ ಕಲ್ಕತ್ತದಲ್ಲಿ “ಮ್ಯಾಚ್‌ ಫ್ಯಾಕ್ಟರಿ”ಯನ್ನೂ ಸಹ 1906ರಲ್ಲಿ ಆರಂಭಿಸಿದರು.

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=35746

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

7 Responses

  1. ಸ್ವಾತಂತ್ರ್ಯ ಪೂರ್ವ ದ ವೈಜ್ಞಾನಿಕ..ಜಾಗೃತಿ ಲೇಖನ ಎಂದಿನಂತೆ.. ಓದಿಸಿಕಂಡು ಹೋಯಿತು..
    ಉತ್ತಮ ಮಾಹಿತಿಯನ್ನು …ಕೊಡುತ್ತಿರುವ ನಿಮಗೆ ಧನ್ಯವಾದಗಳು ಮೇಡಂ.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  3. ಶಂಕರಿ ಶರ್ಮ says:

    ಅಧ್ಯಯನ ಯೋಗ್ಯ ವಿಷಯದೊಂದಿಗಿನ ಸೊಗಸಾದ ಲೇಖನ

  4. Padmini Hegde says:

    ಸಹೃದಯಿ ಬಿ. ಆರ್. ನಾಗರತ್ನ ಮೇಡಂ, ನಯನ ಬಜಕೂಡ್ಲು‌ ಮೇಡಂ ಅವರಿಗೆ ಧನ್ಯವಾದಗಳು.
    ಪದ್ಮಿನಿ ಹೆಗಡೆ

  5. Padmini Hegade says:

    ಸಹೃದಯ ಸ್ಪಂದನೆಗೆ ಬಿ.ಆರ್.‌ ನಾಗರತ್ನ ಮೇಡಂ, ನಯನ ಬಜಕೂಡ್ಲು ಮೇಡಂ, ಶಂಕರಿ ಶರ್ಮ ಮೇಡಂ ಅವರಿಗೆ ಧನ್ಯವಾದಗಳು.
    ಪದ್ಮಿನಿ ಹೆಗಡೆ

  6. Padma Anand says:

    ಕಳೆದ ಸಂಚಿಕೆಗಳಲ್ಲಿ ಬ್ರಿಟಿಷರ ದಬ್ಬಾಳಿಕೆಗೆ ಕುಗ್ಗಿದ್ದ ಮನ, ಈ ಸಂಚಿಕೆಯಲ್ಲಿ ವೈಜ್ಞಾನಿಕ ಹಾಗೂ ಔದ್ಯೋಗಿಕ ಕ್ರಾಂತಿಯ ಪರಿಪೂರ್ಣ ಮಾಹಿತಿಯಿಂದ ಸಂತಸಗೊಂಡಿತು

    • Padmini Hegade says:

      ಪದ್ಮ ಆನಂದ್ ಮೇಡಂ ಅವರಿಗೆ ಲೇಖನ ಖುಷಿ ಕೊಟ್ಟದ್ದಕ್ಕೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: