ಅವಿಸ್ಮರಣೀಯ ಅಮೆರಿಕ-ಎಳೆ 29

Share Button

ಕಡಲ್ಗುದುರೆಯ ಬೆನ್ನೇರಿ..!

ನೋಡಿದಷ್ಟೂ ಮುಗಿಯದ ಮಾಂಟೆರೆ ಅಕ್ವೇರಿಯಂನ ಇನ್ನೊಂದು ಬಹುದೊಡ್ಡ ಗಾಜಿನ ತೊಟ್ಟಿಯಲ್ಲಿದೆ.. ದೊಡ್ಡ ಹಾಗೂ ಸಣ್ಣ ಅಕ್ಟೋಪಸ್ ಗಳು. ಅದರ ಗಡ್ಡೆಯಂತಿರುವ ತಲೆಯ ಎದುರು ಭಾಗದಲ್ಲಿರುವ ಕಪ್ಪಗಿನ ಎರಡು ದೊಡ್ಡ ಕಣ್ಣುಗಳು ನಮ್ಮನ್ನೇ ನುಂಗುವಂತೆ ದಿಟ್ಟಿಸುವುದನ್ನು ನೋಡುವಾಗ ಸ್ವಲ್ಪ ಭಯವೂ ಆಗದಿರುವುದಿಲ್ಲ. ಪ್ರಾಣಿಶಾಸ್ತ್ರದಲ್ಲಿ ಅವುಗಳಿಗೆ ನಾಲ್ಕು ಬಾಹುಗಳೆಂದು ಪರಿಗಣಿಸಲ್ಪಟ್ಟರೂ, ನಮಗೆ ಹೆಚ್ಚಾಗಿ ಕಾಣಸಿಗುವುದು ಎಂಟು ಬಾಹುಗಳ ಅಕ್ಟೋಪಸ್ ಗಳು. ಈ ಬಾಹುಗಳು ಅವುಗಳಿಗೆ ಸ್ಪರ್ಶ ಜ್ಞಾನವನ್ನು ನೀಡುವುದಲ್ಲದೆ, ಅವುಗಳ ಎಲ್ಲಾ ಕಾರ್ಯಗಳಿಗೂ ಬಹಳ ಉಪಯುಕ್ತವಾಗಿವೆ. ಬಾಹುಗಳ ಅಡಿಭಾಗದಲ್ಲಿರುವ ಬಿಳಿ ಬಣ್ಣದ ನೂರಾರು ವೃತ್ತಾಕಾರದ ಕಪ್ ನಂತಹ ರಚನೆಯು, ಅದರ ಕೊಳ್ಳೆಯನ್ನು ಬಹಳ ಗಟ್ಟಿಯಾಗಿ ಹಿಡಿಯಲು ಉಪಯೋಗವಾಗುವುದು.. ಅದರ ಹಿಡಿತಕ್ಕೆ ಸಿಕ್ಕರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ! ಅಕ್ಟೋಪಸ್ ನ  ಹಿಡಿತವು ಇದಕ್ಕೇ ಬಹಳ ಪ್ರಸಿದ್ಧಿ..ಅಲ್ಲವೇ?

ಅದು ತನ್ನ ಬಾಹುಗಳನ್ನು ಬಳುಕಿಸುತ್ತಾ ನೀರಿನಲ್ಲಿ ವಿಚಿತ್ರವಾಗಿ ಚಲಿಸುವುದು ನಿಜಕ್ಕೂ ಕೌತುಕ. ಅದರ ಬಾಹುಗಳ ನಡುಭಾಗದಲ್ಲಿರುವ ಕೊಕ್ಕಿನಂತಹ ಅಂಗವೇ ಅದರ ಬಾಯಿ. ಇದರ ದೇಹದಲ್ಲಿ ಎಲುಬು ಇಲ್ಲದಿರುವುದರಿಂದ ಎಷ್ಟು ಚಿಕ್ಕ ಜಾಗದಲ್ಲಿ ಬೇಕಾದರೂ ನುಸುಳಿ ಹೋಗಬಲ್ಲುದು. ಅತೀವ ಚಳಿ ನೀರಿನಲ್ಲಿ ಜೀವಿಸುವುದರಿಂದ, ಅದಕ್ಕೆ ಹೊಂದಿಕೊಳ್ಳಲು ಇದರ ರಕ್ತವು ನೀಲಿ ಬಣ್ಣದ್ದಾಗಿದೆ! ಬಹಳ ಬುದ್ಧಿವಂತ ಪ್ರಾಣಿಯಾದ ಇದು, ಶತ್ರುಗಳು ಬಂದಾಗ ತಪ್ಪಿಸಿಕೊಳ್ಳುವುದಲ್ಲದೆ, ಮೈಯಲ್ಲಿರುವ ಶಾಯಿಯಂತಹ  ನೀಲಿಬಣ್ಣದ ಈ ದ್ರವವನ್ನು ಅವುಗಳ ಮೇಲೆ ಚಿಮ್ಮುತ್ತದೆ. ಬಾಹುಗಳ ಮಧ್ಯೆ ಒಂದು ಮುಖ್ಯ ಮಿದುಳಿನ ಜೊತೆಗೆ, ಅದರ ಎಂಟು ಕೈಗಳಲ್ಲಿಯೂ ಪ್ರತ್ಯೇಕವಾಗಿ ಸಣ್ಣ ಮಿದುಳುಗಳು ಇರುವುದರಿಂದ, ಪ್ರತಿಯೊಂದು ಕೈಯೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲುದು!…ಹಾಗಾಗಿ ಇದಕ್ಕೆ ಒಟ್ಟು ಒಂಭತ್ತು ಮಿದುಳುಗಳು! ಇದರ ಶರೀರದಲ್ಲಿ ಪ್ರತ್ಯೇಕವಾಗಿ ಮೂರು ಹೃದಯಗಳು ಇರುವುದರಿಂದ, ಇದರ ಶರೀರ ತುಂಡಾದರೂ ತುಂಡಾದ ಭಾಗದಲ್ಲಿ ಹೃದಯವಿದ್ದರೆ ಅದು ಬದುಕಿರಬಲ್ಲುದು!  ಬಹಳ ವಿಷಕಾರಿಯಾದ ಇವುಗಳು ನೀರಿನಲ್ಲಿ ಈಜುತ್ತಿರುವಾಗ ತನ್ನ ಎಂಟೂ ಬಾಹುಗಳನ್ನು ಹಿಂಬದಿಯಿಂದ ಎಳೆದುಕೊಂಡು ಹೋಗುತ್ತವೆ. ಇವುಗಳಲ್ಲಿ ಈವರೆಗೆ ಸುಮಾರು 300 ಪ್ರಭೇದಗಳನ್ನು ಗುರುತಿಸಲಾಗಿದೆ. ಈ ವಿಚಿತ್ರ ಪ್ರಾಣಿಯನ್ನು ನೋಡುತ್ತಾ ನಿಂತವಳಿಗೆ ಈ ಲೋಕದ ಪರಿವೆಯೇ ಇಲ್ಲದಂತಾಯಿತು!

ಅಕ್ಟೋಪಸ್

ಪಕ್ಕದಲ್ಲಿರುವ ದೈತ್ಯಗಾತ್ರದ ಅಕ್ವೇರಿಯಂ, ಹತ್ತಾರು ಬಣ್ಣ ಬಣ್ಣದ ಕಡಲಾಮೆಗಳಿಂದ ಗಮನಸೆಳೆಯಿತು. ಅವುಗಳಲ್ಲಿ, ಹಸಿರು ಬಣ್ಣದ ಆಮೆಗಳು ಹೆಚ್ಚು ಆಕರ್ಷಕವಾಗಿವೆ. ಕಡಲಾಳದ ಹುಲ್ಲು  ಆಹಾರವಾಗಿರುವುದರಿಂದ ಇವುಗಳ ಬಣ್ಣ ಹಸಿರಾಗಿರಲು ಕಾರಣವಾಗಿದೆ. ಕಡಲಾಮೆಗಳು ಮೊಟ್ಟೆ ಇಡಲು ಮಾತ್ರ ಸಮುದ್ರತೀರಕ್ಕೆ ಬಂದು, ಒಂದೆರಡು ವಾರಗಳಲ್ಲಿ ಸುಮಾರು 150ರಷ್ಟು ಮೊಟ್ಟೆಗಳನ್ನು ಇಡುತ್ತವೆ. ಉಳಿದಂತೆ  ಜೀವನ ಪೂರ್ತಿ ಸಮುದ್ರದಲ್ಲೇ ಜೀವಿಸುತ್ತವೆ. ಕಡಲಾಮೆಗಳು ಉಸಿರಾಟಕ್ಕಾಗಿ ಸದಾ ನೀರಿನ ಮೇಲೆ ತೇಲುತ್ತಿದ್ದರೂ, ಸುಮಾರು ಐದು ಗಂಟೆಗಳಷ್ಟು ಕಾಲ ಉಸಿರು ಬಿಗಿಹಿಡಿದು ಆಳ ಸಮುದ್ರಲ್ಲಿ ಇರಬಲ್ಲವು!

ಮುಂದಕ್ಕೆ.. ಅಲ್ಲೇ ಹೊರಬಂದಾಗ, ಉರುಟುರುಟಾಗಿ ಮುದ್ದಾಗಿರುವ ಸಮುದ್ರದ ನೀರುನಾಯಿಗಳು ಆಟವಾಡುವುದು ಗೋಚರಿಸಿತು. ಇವುಗಳನ್ನು ಕಟ್ಟಡದ ಪಕ್ಕದಲ್ಲಿರುವ ತಂತಿ ಬಲೆಯ ಒಳಗಡೆ ಇರುವ ಕೊಳದಲ್ಲಿ ಸಾಕಲಾಗಿದೆ. ಹಲವಾರು ನೀರುನಾಯಿಗಳು  ನೀರಿನಲ್ಲಿ ಮುಳುಗೇಳುತ್ತಾ, ತಮ್ಮ ಫಳಫಳ ಮಿನುಗುವ ಮೈಯನ್ನು ಹೊತ್ತು ನೀರಿನಿಂದ ಮೇಲೇರಿ ಅಲ್ಲಿರುವ ನಯವಾದ ಬಂಡೆಗಳ ಮೇಲೆ ಮಲಗಿ, ಪುನ: ನೀರಿಗೆ ಜಿಗಿದು ಅಲ್ಲೇ ಉರುಳಾಡುತ್ತಾ ಸರ್ಕಸ್ ಮಾಡುವುದು, ಪುಟ್ಟ ಮಕ್ಕಳು ನೀರಿನಾಟವಾಡುವುದನ್ನು ನೆನಪಿಸುತ್ತದೆ. ಇವುಗಳು ಸುಮಾರು 45 ಕೆ.ಜಿ. ಯಷ್ಟು ಭಾರವಿದ್ದು, ಮೈ ತುಂಬಾ ತುಪ್ಪಳದಂತಹ ದಪ್ಪ ರೋಮವನ್ನು ಹೊಂದಿವೆ.

ನೀರುನಾಯಿ

ಅಲ್ಲಿಯ ಪುಟ್ಟ ಸೇತುವೆಯ ಪಕ್ಕದಲ್ಲಿರುವ ಅರ್ಧವೃತ್ತಾಕಾರದ ಸಣ್ಣ ನೀರಿನ ಕೊಳದಲ್ಲಿ ಈಜಾಡಿ ನಲಿದಾಡುವ, ಕಪ್ಪು ಬಣ್ಣದ, ಮುಷ್ಟಿಗಾತ್ರದ ಮೀನುಗಳನ್ನು ನಾವು ಕೈಯಿಂದ ಸ್ಪರ್ಶಿಸಬಹುದು. ಮಕ್ಕಳು ಅವುಗಳೊಡನೆ ಆಟವಾಡುತ್ತಾ ಕುಳಿತರೆ ಅಲ್ಲಿಂದ ಮೇಲೇಳಲು ನಿರಾಕರಿಸುತ್ತಾ, ದೊಡ್ಡವರನ್ನು ಗೋಳು ಹೊಯ್ದುಕೊಳ್ಳುವುದನ್ನು ನೋಡಲು ಮಜಾವೆನಿಸುತ್ತದೆ.        

ಈ ಮಾಂಟೆರೆ ಅಕ್ವೇರಿಯಂ ಸಮುಚ್ಚಯದ ಕಟ್ಟಡದ ಕೆಳಅಂತಸ್ತಿನಲ್ಲಿ ಅಗಾಧ ಗಾತ್ರದ ಅಕ್ವೇರಿಯಂಗಳಿದ್ದರೆ, ಅದರ ಮೇಲ್ಗಡೆಯ  ಅಂತಸ್ತಿನಲ್ಲಿ ನೂರಾರು ಸಾದಾ ಅಕ್ವೇರಿಯಂಗಳಿವೆ.  ವಿವಿಧ ನಮೂನೆಗಳ, ಬಹು ಅಂದದ ಅಕ್ವೇರಿಯಂಗಳಲ್ಲಿ, ಕಂಡು ಕೇಳರಿಯದ ಕುತೂಹಲಕಾರಿ ಜೀವಿಗಳನ್ನು ಬಹಳ ಅಚ್ಚುಕಟ್ಟಾಗಿ ಸಾಕುತ್ತಿರುವುದು ನೋಡಲು ಬಹು ಚಂದ.  ಇಲ್ಲಿಯೂ, ಪ್ರತಿಯೊಂದು ತೊಟ್ಟಿಯ ಮೇಲೂ, ಅದರೊಳಗಿರುವ ಜೀವಿಯ ಕೂಲಂಕುಶ ವಿವರಗಳು ಲಭ್ಯ. ಅವುಗಳಲ್ಲೊಂದು ಜೀವಿಯೇ ಕಡಲ್ಗುದುರೆ(Seahorse). ಇದರ ಹೆಸರನ್ನು ಕೇಳುವಾಗ ಈ ಕುದುರೆಯು, ನಾವು ಸಾಮಾನ್ಯವಾಗಿ ನೋಡುವ ಕುದುರೆಯಂತೆ ಇರಬಹುದೆಂದು ಊಹಿಸಿರಬಹುದಲ್ಲವೇ? ಹೌದು…ನಾನೂ ಅದೇ ರೀತಿ ಅಂದುಕೊಂಡಿದ್ದೆ. ಆದರೆ ಅದು ನೋಡಲು ಬಹಳ ವಿಚಿತ್ರವಾಗಿದೆ. ಇದರ ಉದ್ದ ಸಾಮಾನ್ಯವಾಗಿ ಬರೇ 7 ಸೆಂ.ಮೀ. ಇದ್ದರೂ, ಅದರ ಇತರ ಕೆಲವು ಪ್ರಭೇದಗಳು 5 ಸೆಂ.ಮೀ.  ಇದ್ದರೆ ಇನ್ನು ಕೆಲವು 30 ಸೆಂ.ಮೀ. ವರೆಗೂ ಇವೆ.

ಕಣ್ಸೆಳೆಯುವ ಹಳದಿ, ಗುಲಾಬಿ, ಕೆಂಪು, ಕಂದು, ಹೀಗೆ ಹಲವಾರು ಬಣ್ಣಗಳಲ್ಲಿ ಮಾತ್ರವಲ್ಲದೆ, ಹಲವು ಮಿಶ್ರಿತ ಬಣ್ಣಗಳಲ್ಲಿಯೂ ಕಾಣಬಹುದು. ಉಷ್ಣ ಮತ್ತು ಸಮಶೀತೋಷ್ಣವಲಯದ ಸಮುದ್ರ ತೀರದಲ್ಲಿ ವಾಸಿಸುವ ಇವುಗಳು ಅಸ್ತಿಮೀನು ಅಥವಾ ಕೊಳವೆ ಮೀನು ಎಂದೂ ಗುರುತಿಸಲ್ಪಡುತ್ತವೆ. ಕುದುರೆಯ ತಲೆಯಂತಿರುವ ತಲೆ, ಅದರಂತೆಯೇ ಬಾಗಿರುವ ಕುತ್ತಿಗೆ ಇರುವುದರಿಂದ ಇದನ್ನು ಕಡಲ ಕುದುರೆ ಎಂದು ಕರೆಯುತ್ತಾರೆ. ಇನ್ನೂ ವೈವಿಧ್ಯಮಯ, ಹಲವಾರು ನಮೂನೆಗಳ , ವಿವಿಧ ರಂಗುಗಳ ಏಡಿ, ಹಾವು, ಹಲ್ಲಿ, ಕಪ್ಪೆ, ಇತ್ಯಾದಿಗಳು ಚಂದದ ಪುಟ್ಟ ಗಾಜಿನ ತೊಟ್ಟಿಗಳಲ್ಲಿ ತಮ್ಮ ಪ್ರಪಂಚ ಇಷ್ಟೇ ಎಂಬಂತೆ ನಿಶ್ಚಿಂತೆಯಿಂದ ವಿಹರಿಸುವುದನ್ನು ಕಂಡಾಗ ನಮಗೇನೋ ಖುಷಿ ಎನಿಸುವುದು ಸುಳ್ಳಲ್ಲ…ಆದರೆ, ನಾವು ಮಾನವರು ಎಷ್ಟು ಸ್ವಾರ್ಥಿಗಳು ಎಂದೆನಿಸುವುದು ಕೂಡಾ ಅಷ್ಟೇ ನಿಜ.

ಕಡಲ್ಗುದುರೆ(Seahorse)

ಇಷ್ಟೆಲ್ಲಾ ಸಮುದ್ರ ಜೀವಿಗಳನ್ನು ಕಣ್ತುಂಬಿಕೊಂಡು ಹೊರಬಂದಾಗ ಅದಾಗಲೇ ಸಂಜೆ ನಾಲ್ಕು ಗಂಟೆ. ಇನ್ನೊಂದು ಅರ್ಧ ಗಂಟೆಯಲ್ಲಿ, ಅಲ್ಲಿರುವ ಪುಟ್ಟ ಅಡಿಟೋರಿಯಂನಲ್ಲಿ ಸಮುದ್ರ ಜೀವಿಗಳ ಬಗ್ಗೆ ಇರುವ ಪ್ರದರ್ಶನವನ್ನು ವೀಕ್ಷಿಸಲು ಸಜ್ಜಾದೆವು. ಸರಿಯಾದ ಸಮಯಕ್ಕೆ ಒಳಹೊಕ್ಕಾಗ ಸುಮಾರು ಮೂವತ್ತು ಜನರು ಕುಳಿತು ನೋಡಲು ಆಸನಗಳ ಅನುಕೂಲವಿತ್ತು. ಎದುರಿನ ಪರದೆಯ ಮೇಲೆ ಚಿತ್ರಗಳು ಬರತೊಡಗಿದಂತೆ ಮಹಿಳೆಯೊಬ್ಬರು ಅದರ ಬಗೆಗೆ ಬಹು ಚೆನ್ನಾಗಿ ವಿವರಗಳನ್ನು ನೀಡುತ್ತಿದ್ದರು. ಜಗತ್ತಿನಲ್ಲಿ ಆಗಿರುವ ಹೊಸ ಅನ್ವೇಷಣೆಗಳಿಗೆ ಪ್ರಕೃತಿಯು ಹೇಗೆ ಕಾರಣವಾಯಿತು ಎಂಬುದು ನಿಜಕ್ಕೂ ಕುತೂಹಲಕಾರಿಯಾಗಿದೆ. ಆಗಸದಲ್ಲಿ ಹಾರುವ ಹದ್ದು, ರೈಟ್ ಬ್ರದರ್ಸ್ ಗೆ ವಿಮಾನವನ್ನು ಕಂಡುಹಿಡಿಯಲು ಪ್ರೇರಣೆಯಾದರೆ, ಸಾಗರದಾಳದಲ್ಲಿ ಸಮುದ್ರಕಳೆಗಳು ಓಲಾಡುವ ಕ್ರಿಯೆಯು, ನೀರಿನಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಪ್ರೇರಣೆ ಒದಗಿಸಿತು…ಇತ್ಯಾದಿ. ಅರ್ಧ ಗಂಟೆಯ ಈ ಪ್ರದರ್ಶನವು ಬಹಳ ಚೆನ್ನಾಗಿಯೂ, ಉಪಯುಕ್ತವಾಗಿಯೂ ಇತ್ತು. 

ಅತ್ಯಂತ ಕುತೂಹಲಭರಿತ ಪ್ರದರ್ಶನವನ್ನು ವೀಕ್ಷಿಸಿ ಹೊರಬಂದಾಗ ಸಂಜೆ ಐದು ಗಂಟೆ…. ಸಮುದ್ರದೊಳಗಡೆಯಿಂದ ಎದ್ದು ಬಂದ ಅನುಭವ! ಅಲ್ಲಿಂದ ಹೊರಟ ನಾವು, ಕೊಲ್ಲಿಯಲ್ಲಿ ಹದವಾಗಿ ಹರಿಯುತ್ತಿರುವ ಹಿನ್ನೀರಿನಲ್ಲಿ ಆಟವಾಡಿ, ಚಂದದ ಬಂಡೆಗಳ ಮೇಲೆ ಹಾರಿ, ನಡೆದು, ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಸಮಯವನ್ನು ಕಳೆದು ಹಿಂತಿರುಗಿದಾಗ, ನಮ್ಮ ಆ ದಿನವು ಅತ್ಯಂತ ಆನಂದಾಯಕವಾಗಿ, ನಮ್ಮೆಲ್ಲಾ ಕುತೂಹಲಗಳನ್ನು ತಣಿಸಿ, ಒಂದು ಬಗೆಯ ಸಾರ್ಥಕತೆಯನ್ನು ನೀಡಿತ್ತು. ಇಷ್ಟು ಬೇಗ ಮುಗಿಯಿತಲ್ಲಾ ಎನ್ನುವ ಬೇಸರದೊಂದಿಗೆ ಹೊರಟ ನನಗೆ, ಜೀವನದಲ್ಲಿ  ಮರೆಯಲಾಗದ ಮತ್ತೊಂದು ಸುಂದರ ಅನುಭವವನ್ನು ಮೆಲುಕು ಹಾಕುವಂತೆ  ಈ ದಿನವು ಮಾಡಿದ್ದಂತೂ ನಿಜ!            

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ  : http://surahonne.com/?p=35710

–ಶಂಕರಿ ಶರ್ಮ, ಪುತ್ತೂರು. 

(ಮುಂದುವರಿಯುವುದು….)

8 Responses

 1. ಅಮೆರಿಕದ ಪ್ರವಾಸ ಕಥನ ದಲ್ಲಿ…ಸಮುದ್ರ ಜೀವಿಗಳ ದರ್ಶನ ಅವುಗಳ ವಿವರಣೆಯನ್ನು.ಅದೂ ಅಕ್ವೇರಿಯಂ ನಲ್ಲಿನ..ದೃಷ್ಯವನ್ನು.. ಅನುಭವ ದ ಚೌಕಟ್ಟಿನಲ್ಲಿ.. ಅನಾವರಣ ಗೊಳಿಸಿದ ರೀತಿ… ಚೆನ್ನಾಗಿದೆ.. ಧನ್ಯವಾದಗಳು ಮೇಡಂ

  • ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು ಮೇಡಂ.

 2. ನಯನ ಬಜಕೂಡ್ಲು says:

  Nice

 3. ಆಶಾ ನೂಜಿ says:

  ಯಬ್ಬೋ … ಸೂಪರ್

 4. Padmini Hegade says:

  ಅನುಭವದ ಅನಾವರಣ ಚೆನ್ನಾಗಿದೆ.

 5. Padma Anand says:

  ಜಲಚರಗಳ ವಿವರಣಾತ್ಮಕ ಕಂತೂ ಸಹ ಎಂದಿನಂತೆ ಮುದದಿಂದ ಓದಿಸಿಕೊಂಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: