ಕಾದಂಬರಿ: ನೆರಳು…ಕಿರಣ 28

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಜೋಕಾಲಿಯಲ್ಲಿ ಕುಳಿತಿದ್ದ ಜೋಯಿಸರು ಹಿಂದಿನ ದಿನ ಅರ್ಧ ಬರೆದು ಇಟ್ಟಿದ್ದ ಕುಂಡಲಿಯನ್ನು ಪೂರೈಸಲೋಸುಗ ತಮ್ಮ ಖಾಸಗಿ ಕೋಣೆಯತ್ತ ನಡೆದರು.

ಭಾಗ್ಯ ತಾನು ತಂದ ಸೀರೆಯನ್ನು ಕಪಾಟಿನಲ್ಲಿಟ್ಟು ಜೋಯಿಸರು ಕೊಟ್ಟಿದ್ದ ಗಂಟುಗಳನ್ನು ಮೇಜಿನ ಮೇಲಿಟ್ಟಳು. ಮಾವಯ್ಯ ಹೇಳಿದಂತೆ ತುಂಬ ಎಚ್ಚರಿಕೆಯಿಂದ ನೋಡಬೇಕೆಂದು ಒಂದನ್ನು ಬಿಚ್ಚಿದಳು. ಹಾಳೆಯ ಮೇಲೆ ಹಾಗೇ ಕಣ್ಣಾಡಿಸಿದಳು. ಅರ್ಥವಾಗದಂತಹ ಸಂಗತಿಗಳಾಗಲೀ, ಓದಲಿಕ್ಕಾಗದ ಬರವಣಿಗೆಯಾಗಲೀ ಕಾಣಲಿಲ್ಲ. ಮಾವಯ್ಯನವರಿಗೆ ಪುರುಸೊತ್ತು ಸಿಕ್ಕಿಲ್ಲ ಅಷ್ಟೇ. ಹೋಗಲಿ ಬಿಡು ನನಗೊಂದು ಕೆಲಸ ಸಿಕ್ಕಿದಂತಾಯಿತು. ಎಂದುಕೊಳ್ಳುವಷ್ಟರಲ್ಲಿ ಕೆಳಗೆ ಗಂಡ ಶ್ರೀನಿವಾಸನ ಧ್ವನಿ ಕೇಳಿಸಿತು. ಇಳಿದು ಅಲ್ಲಿಗೆ ಹೋಗಲೇ ಎಂದುಕೊಂಡವಳು ಬೇಡ ಹೇಗಿದ್ದರೂ ಅಮ್ಮನಿಗೆ ವರದಿ ಒಪ್ಪಿಸಿಯೇ ಒಪ್ಪಿಸುತ್ತಾರೆ. ಇಲ್ಲಿಯೆ ಕೇಳಿಸಿಕೊಳ್ಳೋಣ. ಆದರೆ ಕದ್ದು ಕೇಳುವುದು ತಪ್ಪಲ್ಲವಾ ಎಂದು ಒಳಮನ ಪಿಸುಗುಟ್ಟಿತು. ಇಲ್ಲ ಈಗಲೇ ಕೇಳಿಸಿಕೊಂಡಿದ್ದರೆ ನನ್ನ ಬಳಿ ವಿಷಯ ಹೇಳಿ ಅಭಿಪ್ರಾಯ ಕೇಳಿದಾಗ ಉತ್ತರ ಕೊಡಲು ಸುಲಭವಾಗುತ್ತದೆ ಎಂದು ರೂಮಿನಿಂದ ಹೊರಬಂದು ಮೆಟ್ಟಲ ಬಳಿ ಸದ್ದಾಗದಂತೆ ಕುಳಿತುಕೊಂಡಳು.

“ಭಾಗ್ಯ ಎಲ್ಲಮ್ಮಾ?” ಎಂದ ಶ್ರೀನಿವಾಸ.

“ಇಷ್ಟೊತ್ತು ಇಲ್ಲಿಯೇ ಇದ್ದಳು. ನಿಮ್ಮಪ್ಪ ಅವಳಿಗೆ ಅವರ ಮುತ್ತಾತನ ಕಡತಗಳನ್ನು ಕೊಟ್ಟು ಓದುವ ಕೆಲಸ ವಹಿಸಿದರು. ಅವನ್ನು ಮಹಡಿಯಲ್ಲಿನ ತನ್ನ ರೂಮಿಗೆ ಇಡಲು ಹೋಗಿದ್ದಾಳೆ. ಕೂಗಲೇ?” ಎಂದರು ಸೀತಮ್ಮ.

“ಬೇಡ ನಾನೇ ಹೋಗುತ್ತೇನೆ” ಎಂದ ಶ್ರೀನಿವಾಸ.

“ಅದು ಸರಿ ಶೀನು, ಗೌರಿಯಮ್ಮ ಕರೆಕಳುಹಿಸಿದ್ದು ಏತಕ್ಕೆಂದು ಹೇಳಲೇ ಇಲ್ಲ” ಎಂದು ಕೇಳಿದರು .

“ಅದರಲ್ಲಿ ಹೊಸ ವಿಷಯವೇನಿಲ್ಲ. ‘ಮ್ಯೂಸಿಕ್ ಕ್ಲಾಸ್’ ಅವರ ಸಂಗೀತಶಾಲೆಯನ್ನು ನಮ್ಮ ಮನೆಯಲ್ಲೇ ಭಾಗ್ಯಳು ನಡೆಸಿಕೊಂಡು ಹೋಗಲು ನನ್ನ ಅನುಮತಿ ಕೇಳಿದರು” ಎಂದವ ಶ್ರೀನಿವಾಸ.

“ಹೌದೇ ! ನೀನೇನು ಹೇಳಿದೆ” ಎಂದರು ಆತುರದಿಂದ.

“ಏನು ಹೇಳಲಿ, ಅವರಿಗೆ ಇಲ್ಲಿ ಆಗುವುದಿಲ್ಲ ಅನ್ನುವುದಕ್ಕೆ ಆಗುತ್ತಾ, ಮನೆಯಲ್ಲಿ ತಾನೇ ಮಾಡುತ್ತಾಳೆ ಬಿಡಿ. ನೀವೇ ಒಂದು ದಿನ ನಿಶ್ಚಯಿಸಿ ಓಂಕಾರ ಹಾಕಿಬಿಡಿ ಎಂದು ಹೇಳಿಬಂದೆ” ಎಂದ ಶ್ರೀನಿವಾಸ.

“ಒಳ್ಳೆಯದಾಯ್ತು ಬಿಡು, ನೀನಂತೂ ಹೊರಗಡೆ ಕೆಲಸಕ್ಕೆ ಕಳುಹಿಸುವುದಿಲ್ಲ. ಇಷ್ಟು ಕಲಿತು ಸುಮ್ಮನೆ ಇದ್ದರೆ ಪ್ರಯೋಜನವಾಗದು. ನಾಲ್ಕು ಜನರಿಗೆ ಕಲಿಸಲಿ. ಮಹಡಿಮೇಲೆಯೇ ಅದಕ್ಕೆ ವ್ಯವಸ್ಥೆ ಮಾಡಿಬಿಡು ಯಾವ ತೊಂದರೆಯೂ ಬರಲ್ಲ” ಎನ್ನುತ್ತಾ ತಮ್ಮ ರೂಮಿನಿಂದ ಹೊರಬಂದರು ಜೋಯಿಸರು.

“ಓ ನೀವಿನ್ನೂ ಮಲಗಿಲ್ಲವೇ?” ಎಂದ ಶ್ರೀನಿವಾಸ.

“ಇಲ್ಲ ಸ್ವಲ್ಪ ಕೆಲಸ ಬಾಕಿಯಿತ್ತು ಅದನು ಮಾಡುತ್ತಿದ್ದೆ. ನೀನು ಬಂದದ್ದು ಗೊತ್ತಾಯಿತಲ್ಲ, ಅದಕ್ಕೇ ಎದ್ದು ಬಂದೆ” ಎಂದರು ಜೋಯಿಸರು.

‘ಅಂತೂ ಸೊಸೆಯ ಸಾಧನೆಯ ಹಿಂದೆ ಟೊಂಕಕಟ್ಟಿ ನಿಂತಿದ್ದೀರಿ ನೀವಿಬ್ಬರೂ.” ಎಂದು ನಗುತ್ತಾ ಮೇಲಕ್ಕೆ ಬರುವ ಸೂಚನೆ ಸಿಕ್ಕ ಕೂಡಲೇ ಭಾಗ್ಯ ಕುಳಿತಲ್ಲಿಂದ ಎದ್ದು ರೂಮಿಗೆ ಹೋದಳು.

“ಭಾಗ್ಯಾ” ಎಂದು ಕೂಗುತ್ತಾ ರೂಮಿನೊಳಗೆ ಬಂದ ಶ್ರೀನಿವಾಸ ಅವಳು ನೋಡುತ್ತಿದ್ದ ಕಡತದ ಕಡೆಗೆ ದೃಷ್ಟಿಹಾಯಿಸಿ “ಇದನ್ನು ಅಪ್ಪ ಆಗಾಗ್ಗೆ ತೆಗೆದು ನೋಡುತ್ತಿದ್ದರು. ನಾನೂ ಕುತೂಹಲದಿಂದ ನೋಡಿದ್ದಿದೆ. ಆದರೆ ಅದರ ಬಗ್ಗೆ ಪ್ರಶ್ನೆ ಮಾಡುವುದಾಗಲೀ, ಆಸಕ್ತಿ ತೋರುವುದಾಗಲೀ ಮಾಡಲಿಲ್ಲ. ಅದಕ್ಕೆಲ್ಲ ನನಗೆ ಪುರುಸೊತ್ತೆಲ್ಲಿದೆ. ಹೂಂ ಅಪ್ಪನೂ ಅಷ್ಟೇ ನೋಡುವುದು, ಕಟ್ಟಿಡುವುದು ಬಿಟ್ಟರೆ ಮುಂದುವರೆಯಲೇ ಇಲ್ಲ. ಈಗ ನೀನು ಸಿಕ್ಕಿದೆಯಲ್ಲಾ, ಏನು ಕೆಲಸ ವಹಿಸಿದರೂ ಮಾಡುತ್ತೀಯೆಂದು ಅವರ ನಂಬಿಕೆ. ಮಾಡು ಆ ಹಿರಿಯರು ತಾತನವರು ಬಹಳಷ್ಟು ವಿಷಯಗಳಲ್ಲಿ ತಿಳಿವಳಿಕೆ ಹೊಂದಿದ್ದರಂತೆ. ಅವರ ಬರಹ ಉಪಯುಕ್ತವಾದದ್ದೇ ಇರುತ್ತದೆ. ಬೆಳಕಿಗೆ ಬರಲಿ.” ಎಂದನು. ಹಾಗೇ ಗೌರಿಯಮ್ಮನವರು ಹೇಳಿ ಕಳುಹಿಸಿದ್ದ ಕಾರಣ, ಅದಕ್ಕೆ ಆತನ ತೀರ್ಮಾನ ಎಲ್ಲವನ್ನೂ ಬಡಬಡನೆ ಹೇಳಿ “ನಿನಗೆ ಅದರಲ್ಲಿ ಆಸಕ್ತಿ ಇದೆಯೇ?” ಎಂದು  ಕೇಳಿದ ಶ್ರೀನಿವಾಸ.

ಅಷ್ಟೊತ್ತಿಗಾಗಲೇ ಎಲ್ಲವೂ ತಿಳಿದಿದ್ದರೂ ಹೊಸದಾಗಿ ಕೇಳಿಸಿಕೊಂಡಂತೆ “ಎಂಥಹ ಪ್ರಶ್ನೆ ಕೇಳುತ್ತಿದ್ದೀರಿ. ನನಗೆ ಮೊದಲಿನಿಂದಲೂ ಕಲಿಯುವುದು, ಕಲಿಸುವುದು ಎರಡೂ ಇಷ್ಟ. ಈಗ ಅದಕ್ಕೆ ಅವಕಾಶ ತಾನಾಗಿಯೇ ಒದಗಿ ಬಂದಿದೆ. ನೀವು ಒಪ್ಪಿದ್ದೀರಿ. ಇಂಥದ್ದನ್ನು ನಾನು ಬಿಡುತ್ತೇನೆಯೇ, ಖಂಡಿತಾ ಮಾಡುತ್ತೇನೆ” ಎಂದಳು ಭಾಗ್ಯ.

PC: Internet

“ಸರಿ ಹಾಗಾದರೆ ಆ ಗುರುಮಾತೆ ಹೆಚ್ಚು ಕಾಲಾವಕಾಶ ಕೊಡುವುದಿಲ್ಲ. ನೀನು ಒಂದೆರಡು ದಿನ ತಾಯಿಯ ಮನೆಗೆ ಹೋಗಿ ಬರುವುದಾದರೆ ಹೋಗಿ ಬಂದುಬಿಡು. ಮೊನ್ನೆ ಸಮಾರಂಭಕ್ಕೆ ಬಂದಿದ್ದ ನಿಮ್ಮ ಅಪ್ಪ, ಅಮ್ಮ, ಸೋದರಿಯರೆಲ್ಲರ ಬಾಯಲ್ಲೂ ಒಂದೇ ಕಂಪ್ಲೇಂಟು. ನೀನು ಇತ್ತೀಚೆಗೆ ಹೆಚ್ಚು ತವರಿಗೆ ಹೋಗುವುದಿಲ್ಲವೆಂದು. ನಾನು ಕಳುಹಿಸಿಕೊಡುತ್ತೇನೆ ಎಂದು ಹೇಳಿಬಿಟ್ಟಿದ್ದೇನೆ. ಆ ನಂತರ ನನ್ನ ಸ್ನೇಹಿತರೆಲ್ಲ ಕೂಡಿ ಒಂದೆರಡು ದಿನದ ಚಿಕ್ಕ ಪ್ರವಾಸ ಹೋಗಲು ಆಲೋಚಿಸಿದ್ದಾರೆ. ತುಂಬ ದೂರ ಊರುಗಳಲ್ಲ. ಇಲ್ಲೇ ಮೈಸೂರಿನ ಸುತ್ತಮುತ್ತ. ಸಂಸಾರ ಸಮೇತ. ಅಪ್ಪ, ಅಮ್ಮ ಬರುವುದಿಲ್ಲವಂತೆ. ನೀವಿಬ್ಬರೇ ಹೋಗಿಬನ್ನಿ ಎಂದುಬಿಟ್ಟರು. ಹೋಗಿ ಬರೊಣ. ತರಗತಿಗಳನ್ನು ಪ್ರಾರಂಭಿಸಿದರೆ ಹೆಚ್ಚು ತಪ್ಪಿಸಿಕೊಳ್ಳಲು ಆಗದು. ಅಲ್ಲದೆ ಶ್ರಾವಣ ಮಾಸ ಪ್ರಾರಂಭವಾದರೆ ನಾನೂ ಬ್ಯುಸಿಯಾಗಿಬಿಡುತ್ತೇನೆ.” ಎಂದ ಶ್ರೀನಿವಾಸ.

ಗಂಡನ ಮಾತುಗಳನ್ನು ಕೇಳಿದ ಭಾಗ್ಯ ಒಂದೆರಡು ದಿನ ಅಮ್ಮನ ಮನೆಗೆ ಹೋಗಿ ಬರಲೇ..ಬೇಡ, ಅಲ್ಲಿ ಹೋದರೆ ಮೂರುಹೊತ್ತೂ ಮೊಮ್ಮಕ್ಕಳ ಗುಣಗಾನವೇ, ಬಯಸಿ ತಂಗಿಯರ ಮನೆಗೆ ಹೋದರೆ ಹಿರಿಯಮ್ಮನಂತೆ ಅವಳಿಂದ ಉಪದೇಶ. ಸಾಕಾಗಿ ಹೋಗಿದೆ ಜೀವಕ್ಕೆ. ನಾನೇನು ಮಕ್ಕಳ ದ್ವೇಷಿಯೇ, ಅವು ಹುಟ್ಟಿದರೆ ನನ್ನ ವೈಯಕ್ತಿಕ ಸಾಧನೆಗೆ ಅಡ್ಡಿಯಾಗುವುದೆಂದು ಕನಸು ಮನಸಿನಲ್ಲಿಯೂ ಯೋಚಿಸಿಲ್ಲ. ಕೈ ಹಿಡಿದವನೋ ಜಾತಕಫಲ, ಲೆಕ್ಕಾಚಾರ, ಮುಹೂರ್ತ ಎಂಬುದನ್ನು ಅವನ ಮೈಮೇಲೆ ಆವಾಹನೆ ಮಾಡಿಕೊಂಡಂತೆ ಇದ್ದಾರೆ. ಪದೇಪದೇ ಮಕ್ಕಳ ವಿಷಯ ಮಾತನಾಡಿದರೆ ಸಿಟ್ಟಿಗೆದ್ದು ಮತ್ತೇನಾದರೂ ಅನಾಹುತಕ್ಕೆ ಎಡೆಯಾದೀತು. ಎಂದುಕೊಂಡು “ಸದ್ಯಕ್ಕೆ ನಾನೆಲ್ಲೂ ಹೋಗುವುದಿಲ್ಲ. ಅಮ್ಮನ ಮನೆಯವರನ್ನೆಲ್ಲ ಹೋದ ವಾರವಷ್ಟೇ ನೋಡಿದ್ದೇನೆ. ಇನ್ನು ಹಬ್ಬ ಹರಿದಿನಗಳಲ್ಲಿ ಹೋಗಿ ಬರುವುದು ಇದ್ದದ್ದೇ. ಅದೇ ನೀವು ಹೇಳಿದಿರಲ್ಲ ಚಿಕ್ಕ ಪ್ರವಾಸ, ಅಲ್ಲಿಗೆ ಹೋಗಿ ಬರೋಣ” ಎಂದಳು ಭಾಗ್ಯ.

“ನಿನ್ನಿಷ್ಟ ಭಾಗ್ಯ, ರಾತ್ರಿ ಮಲಗಿದಾಗ ತುಂಬ ಹೊತ್ತಾಗಿತ್ತು. ಬೆಳಗ್ಗೆ ಬೇಗನೆ ಎದ್ದಿದ್ದೆವು. ಸ್ವಲ್ಪ ಹೊತ್ತು ಮಲಗುತ್ತೇನೆ” ಎಂದು ಮಲಗಿದ ಶ್ರೀನಿವಾಸ.

ಏಕೊ ಏನೊ ತನಗೂ ಆಯಾಸವಾದಂತಾಯಿತು. ನೋಡುತ್ತಿದ್ದ ಹಾಳೆಗಳನ್ನು ಜೋಡಿಸಿ ಬಟ್ಟೆಯಲ್ಲಿ ಮೊದಲಿನಂತೆಯೇ ಕಟ್ಟಿ ಕಪಾಟಿನಲ್ಲಿರಿಸಿದಳು. ಅಲ್ಲಿಯೇ ಇದ್ದ ಈಜೀಛೇರಿನಲ್ಲಿ ಕುಳಿತು ಕಣ್ಮುಚ್ಚಿದಳು.

ಆ ದಿನ ರಾತ್ರಿ ಊಟ ಮುಗಿಸಿದ ಮೇಲೆ ಮಗನೊಡನೆ ಮನೆಯ ಮುಂದೆ ಸ್ವಲ್ಪ ಹೊತ್ತು ಅಡ್ಡಾಡಿ ಒಳಗೆ ಬಂದರು ಜೋಯಿಸರು. ಏನೋ ನೆನಪಿಸಿಕೊಂಡವರಂತೆ ರೂಮಿಗೆ ಹೋಗಿ ಬಂದು “ಶೀನು ನಿನ್ನ ಫ್ರೆಂಡ್ ಮಧು ದೇವಸ್ಥಾನಕ್ಕೆ ಬಂದಿದ್ದ. ಸುಬ್ಬು ನಿನಗೆ ಕೊಡಲು ಒಂದು ಕಾಗದ ಕೊಟ್ಟಿದ್ದಾನೆಂದು ಹೇಳಿ ಶೀನನಿಗೆ ಕೊಟ್ಟುಬಿಡಿ ಎಂದು ಕೊಟ್ಟುಹೋದ” ಎಂದು ಕಾಗದವನ್ನು ಮಗನಿಗೆ ಕೊಟ್ಟರು.

“ಸುಬ್ಬೂನೇ ..ಕೊಡಿ” ಎಂದು ತೆರೆದು ಓದಿಕೊಂಡವನೇ “ಅಯ್ಯೋ” ಎಂದ.

“ಏನಂತೆ? “ ಕೇಳಿದರು ಜೋಯಿಸರು.

“ಬಹಳ ಆಸೆಪಟ್ಟು ಮೈಸೂರಿಗೆ ಟ್ರಿಪ್ ಹೋಗಿಬರೊಣಾಂತ ಪ್ಲಾನ್ ಮಾಡಿದ್ದ. ಸಿದ್ಧತೆಯೆಲ್ಲಾ ಮಾಡಿದ್ದೋನೇ ಅವನು. ವೆಹಿಕಲ್ಲಿಗೆ ಮಾತ್ರ ನನಗೆ ಹೇಳಿದ್ದ. ನಾನೂ ನಂಜುಂಡನಿಗೆ ಹೇಳಿದ್ದೆ. ಈಗ ಅವರ ತಂದೆಯವರಿಗೆ ಸೀರಿಯಸ್ ಅಂತ ಊರಿಗೆ ಹೋಗಿದ್ದಾನೆ. ಹೇಗೋ ಏನೋ ಸಾರಿ ಕಣೋ, ಮುಂದೆ ಯಾವಾಗಲಾದರೂ ಹೋಗೋಣ ಎಂದು ಬರೆದಿದ್ದಾನೆ.” ಎಂದ ಶ್ರೀನಿವಾಸ.

“ಸರಿ ಆತನಿಗೇನೋ ತೊಂದರೆಯಿದೆ. ಬೇರೆ ಮಿಕ್ಕವರ ಜೊತೆಯಲ್ಲಿ ಹೋಗಿ ಬರಬಹುದಲ್ಲಾ?” ಎಂದರು ಸೀತಮ್ಮ.

“ಅಮ್ಮಾ ಮಾಧು, ಗೋಪಿ, ಸುಬ್ಬು, ಲಕ್ಕಿ ಅವರೆಲ್ಲ ಹೇಗೆ ಎನ್ನುವುದು ನಿಮಗೂ ಗೊತ್ತು. ದೇಹಗಳು ಬೇರೆ ಬೇರೆಯಾದರೂ ಉಸಿರೊಂದೇ ಎನ್ನುವಂತಿದ್ದಾರೆ. ತಿಳಿದೂ ತಿಳಿದೂ ಮುಖಭಂಗವಾಗುತ್ತೆ. ಹೋಗಲಿಬಿಡಿ.” ಎಂದು ಶ್ರೀನಿವಾಸ ತನ್ನ ರೂಮಿನ ಕಡೆ ಹೋಗಲು ತಿರುಗಿದ.

ಮಗನ ಸ್ವಭಾವ ಅರಿತಿದ್ದ ದಂಪತಿಗಳು ವಿಷಯವನ್ನು ಮುಂದುವರೆಸುವುದು ಬೇಡವೆಂದು ಸೂಚ್ಯವಾಗಿ “ಭಾಗ್ಯ” ಎಂದರು. ಅಲ್ಲಿಯೇ ಇದ್ದ ಭಾಗ್ಯ ಎಲ್ಲವನ್ನೂ ಅರಿತವಳಂತೆ ನೀರಿನ ಜಗ್ಗು ಹಿಡಿದು ಗಂಡನನ್ನು ಹಿಂಬಾಲಿಸಿದಳು.

ಮಗ ಸೊಸೆ ಮಹಡಿಮೇಲಕ್ಕೆ ಹೋದಮೇಲೆ ತಾವೂ ತಮ್ಮ ರೂಮಿಗೆ ಬಂದರು. “ಪಾಪ ಕಣ್ರೀ, ಆ ಹುಡುಗಿ ಈ ಮನೆಗೆ ಸೊಸೆಯಾಗಿ ಬಂದು ಆರೇಳು ವರ್ಷಗಳೇ ಆದವು. ಎಲ್ಲಿಗೂ ಹೊರಗಡೆ ಹೋಗಿಲ್ಲ ಎಂದೇನಿಲ್ಲ. ನಾವೆಲ್ಲಾ ಒಟ್ಟಾಗಿ ಸಾಕಷ್ಟು ಕಡೆ ಓಡಾಡಿದ್ದೇವೆ. ಆದರೆ ಒಂದೇ‌ಒಂದು ಸಾರಿ ಕೂಡ ಅವರಿಬ್ಬರೇ ಎಲ್ಲಿಗೂ ಹೋಗಿಲ್ಲ. ಈಗ ಹೇಗಿದ್ದರೂ ಹೊರಟಿದ್ದರು. ಅವರುಗಳು ಬರದಿದ್ದರೇನಂತೆ, ಇವರಿಬ್ಬರೇ ಒಂದೆರಡು ದಿನ ಹೋಗಿ ಬರುವುದು ಬಿಟ್ಟು..ಛೇ..ಬಾಯಿಬಿಟ್ಟು ಏನೂ ಹೇಳುವುದಿಲ್ಲ, ಕೇಳುವುದಿಲ್ಲ. ಇತ್ತೀಚೆಗಂತೂ ತವರುಮನೆ, ತಂಗಿಯರ ಮನೆ, ನಾಮಕರಣ ಅದೂ ಇದೂ ಸಮಾರಂಭಗಳಿಗೆ ಹೋಗುವುದನ್ನೂ ಕಡಿಮೆ ಮಾಡಿದ್ದಾಳೆ ಭಾಗ್ಯ, ಕಾರಣ ಗೊತ್ತಿರುವುದೇ. ದೇವರ ನಿಯಾಮಕ ಏನಿದೆಯೋ. ನಾವು ಸುಮ್ಮನಿರಬಹುದು ಆದರೆ ಸುತ್ತಲಿನ ಜನ. ಹೂಂ ಯಾರೂ ಬೇಡ ಆ ನಿಮ್ಮ ದೊಡ್ಡಪ್ಪನವರ ಹರಕು ಬಾಯಿಂದ ಬಂದ ಮಾತುಗಳನ್ನು ನಿಮಗೆ ಹೇಳಿಲ್ಲ ಅಲ್ಲವೇ. ಕೇಳಿ “ಸೀತೂ ನಿನ್ನ ಮಗ ಸೊಸೆ ಜೋಡಿ ರತಿ ಮನ್ಮಥರಂತಿದ್ದಾರೆ, ವಂಶ ಉದ್ಧಾರವಾಗುವ ಲಕ್ಷಣವೇ ಕಾಣುತ್ತಿಲ್ಲ. ಅಲ್ಲಾ ವೆಂಕೂ ಅವರಿಬ್ಬರ ಜಾತಕವನ್ನು ಸರಿಯಾಗಿ ಪರಿಶೀಲಿಸಿದ್ದಾನೋ ಇಲ್ಲವೋ, ಶ್ರೀನಿವಾಸನೂ ನೋಡುತ್ತಾನೆ. ಅಂದಕ್ಕೆ ಮಾರುಹೋಗಿ ಸರಿಯಾಗಿ ಗಮನಿಸಲಿಲ್ಲ ಅಂತ ಕಾಣುತ್ತೆ.  ಕೊಡಿಲ್ಲಿ ನಾನು ಬೇರೆ ಕಡೆ ತೋರಿಸಿಕೊಂಡು ಬರುತ್ತೇನೆ” ಎಂದಿದ್ದರು. ಈ ವಿಷಯವನ್ನು ನನ್ನ ಸೊಸೆಯ ಮುಂದೆ ಹೇಳುವುದಾಗಲೀ, ನನ್ನ ಮಗನ ಕಿವಿ ಕಚ್ಚುವುದಾಗಲೀ ಮಾಡಿದರೋ ಈ ಮನೆಗೆ ಎಂಟ್ರಿಯಿಲ್ಲದ ಹಾಗೆ ಮಾಡುತ್ತೇನೆ ಎಚ್ಚರಿಕೆ” ಎಂದು ಉತ್ತರ ಹೇಳಿದ್ದೆ ಆವತ್ತಿನಿಂದ  ಈ ಸುದ್ಧಿ ಎತ್ತಿಲ್ಲ. ಮುಂದೆ ಮಾತನಾಡೋಲ್ಲ ಎನ್ನುವುದು ಯಾವ ಗ್ಯಾರಂಟಿ. ನಮ್ಮ ಮನೆಯವರೇ ಹೀಗಾದರೆ ಬೇರೆ ಜನ. ಈ ನಮ್ಮ ಶೀನಿಗೆ ಮದುವೆಗೆ ಮೊದಲು ನಿಮ್ಮ ದೊಡ್ಡಪ್ಪನ ತಲೆ ಕಂಡರೆ ಆಗುತ್ತಿರಲಿಲ್ಲ. ಆದರೀಗ ತೀರ ಆತ್ಮೀಯತೆ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಅವರ ಮಾತಿಗೆ ಬೆಲೆ ಕೊಡುತ್ತಾನೆ. ಅನುಭವಿಗಳ ಮಾತುಗಳು ತೆಗೆದು ಹಾಕುವಂತಿಲ್ಲ ಎನ್ನುತ್ತಾನೆ. ಇವನಿಗೆ ಏನಾಗಿದೆಯೋ ಕಾಣೇರೀ. ಭಗವಂತ ಏಕೆ ಈರೀತಿ ಪರೀಕ್ಷೆ ಮಾಡುತ್ತಿದ್ದಾನೋ ತಿಳಿಯದಾಗಿದೆ” ಎಂದು ನೋವಿನಿಂದ ಹೇಳಿದರು ಸೀತಮ್ಮ.

“ಸಮಾಧಾನ ಮಾಡಿಕೋ ಸೀತು, ಮದುವೆಯಾದ ಆರೇಳು ವರ್ಷಗಳ ಮೇಲಲ್ಲವೇ ನಮಗೂ ಸಂತಾನಭಾಗ್ಯ ಲಭಿಸಿದ್ದು. ಅದರಲ್ಲೂ ಮೂರು ಹೆರಿಗೆ…ಉಳಿದದ್ದು ಒಂದೇ. ಈಗ ಹಾಗೆಲ್ಲಾ ಆಗುವುದು ಬೇಡ. ಆರೋಗ್ಯವಾಗಿ, ಅಯುಸ್ಸು ತುಂಬಿಕೊಂಡ, ಲಕ್ಷಣವಾದ ಒಬ್ಬ ಮೊಮ್ಮಗನೋ, ಮೊಮ್ಮಗಳೋ ನಮ್ಮ ಮನೆಗೆ ಬರುವಂತಾಗಲಿ” ಎಂದು ಕೈ ಮುಗಿದು ಪ್ರಾರ್ಥಿಸಿ ಮಲಗಲು ಅಣಿಯಾದರು ಜೋಯಿಸರು.

“ಹೌದುರೀ, ನಮಗೀಗ ಉಳಿದಿರುವುದು ಹಾರೈಸುವುದಷ್ಟೇ” ಎಂದು ದೀಪವಾರಿಸಿ ಹಾಸಿಗೆಯ ಮೇಲೆ ಉರುಳಿಕೊಂಡರು ಸೀತಮ್ಮ.

ಇತ್ತ ತನ್ನ ರೂಮಿಗೆ ಬಂದ ಶ್ರೀನಿವಾಸ “ನನಗೇಕೋ ಗುಂಪು ಬಿಟ್ಟು ನಾವಿಬ್ಬರೇ ಟ್ರಿಪ್ ಹೋಗಲು ಮನಸ್ಸಾಗುತ್ತಿಲ್ಲ. ಎಲ್ಲವೂ ಸರಿಹೋದ ಮೇಲೆ ಹೋದರಾಯಿತು ಅನ್ನಿಸುತ್ತಿದೆ. ನೀನು ಎನು ಹೇಳುತ್ತೀ?” ಎಂದನು.

ಹೂಂ ಇವರಿಗೆ ಮನಸ್ಸಿಲ್ಲ, ಬಲವಂತದ ಮಾಘಸ್ನಾನವೇಕೆ ಎಂದುಕೊಂಡು “ನಿಮಗೇ ಮನಸ್ಸಿಲ್ಲ ಎಂದರೆ ಬೇಡ ಬಿಡಿ. ಕಾಲಕೂಡಿ ಬಂದಾಗ ಹೋದರಾಯಿತು. ಹೋಗಲೇಬೇಕೆಂಬ ಹಠವೇನೂ ಇಲ್ಲ. ನಾನು ಅಪ್ಪ ಅಮ್ಮನ ಜೊತೆಯಲ್ಲಿ ಹೆಚ್ಚು ದೂರದ ಜಾಗಗಳಿಗೆ ಹೋಗದಿದ್ದರೂ ಸುತ್ತಮುತ್ತಲಿನ ಸುಮಾರು ಸ್ಥಳಗಳನ್ನು ನೋಡಿದ್ದೇನೆ. ಮದುವೆಯ ನಂತರ ನಿಮ್ಮಗಳೊಡನೆ ಸಾಕಷ್ಟು ಊರುಗಳನ್ನು ಸುತ್ತಾಡಿದ್ದಿದೆ. ಈಗ ನಿಮ್ಮ ಸ್ನೇಹಿತರ ಗುಂಪಿನಲ್ಲಿ ನೀವೂ ಜೊತೆಗೂಡಿ ಹೋಗಬಹುದೆಂದು ಕೇಳಿದ್ದೆ ಅಷ್ಟೇ” ಎಂದು ಹೇಳಿ ಮಾರುತ್ತರಕ್ಕೂ ಕಾಯದೆ ಮುಸುಕೆಳೆದು ಮಲಗಿದಳು ಭಾಗ್ಯ.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35799

ಬಿ.ಆರ್.ನಾಗರತ್ನ, ಮೈಸೂರು

6 Responses

 1. ನಯನ ಬಜಕೂಡ್ಲು says:

  ಸೊಗಸಾದ ಕಾದಂಬರಿ. ಓದುತ್ತಾ ಸಾಗಿದಂತೆ ಕಂತು ಮುಗಿಯುವುದೇ ಗೊತ್ತಾಗದು

 2. ಧನ್ಯವಾದಗಳು ನಯನ‌ ಮೇಡಂ.

 3. . ಶಂಕರಿ ಶರ್ಮ says:

  ಸೊಗಸಾದ ಧಾರಾವಾಹಿ.. ತಮ್ಮ ಸರಳ ಸುಂದರ ನಿರೂಪಣೆಗೆ ಮಾರು ಹೋಗಿರುವೆನು ಮೇಡಂ..ಧನ್ಯವಾದಗಳು.

 4. ನಿಮಗೆ ಪ್ರೀತಿಯ ಧನ್ಯವಾದಗಳು ಶಂಕರಿ ಮೇಡಂ.

 5. Padma Anand says:

  ಇಚ್ಛೆಯನರಿತು ನಡೆವ ಹೆಂಡತಿಯಾಗಿ, ಸೊಸೆಯಾಗಿ ಭಾಗ್ಯಳ ಪಾತ್ರ ಅತ್ಯಂತ ಆಪ್ತವಾಗುತ್ತಾ ಕಥೆಯಲ್ಲಿ ಮುಂದುವರೆಯುತ್ತಿರುವುದು, ಕಾದಂಬರಿ ಓದುವಲ್ಲಿ ಸಂತಸ ನೀಡುತ್ತಿದೆ.

 6. ಧನ್ಯವಾದಗಳು ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: