ಅವಿಸ್ಮರಣೀಯ ಅಮೆರಿಕ-ಎಳೆ 30

Share Button

ಕಾಡಿನೊಳಗೆ ನುಗ್ಗಿ….

ಉತ್ತರ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯವು ತನ್ನ ಅತಿ ದಟ್ಟ ರೆಡ್ ವುಡ್ ಕಾಡುಗಳಿಗೆ ಬಹಳ ಹೆಸರುವಾಸಿಯಾಗಿದೆ. ಇಲ್ಲಿಯ ಮೂಲನಿವಾಸಿಗಳು ವಾಸವಾಗಿದ್ದ ಕಾಲದಲ್ಲಿ ಅವರಿಂದಲೇ ರೂಪಿಸಲ್ಪಟ್ಟ ಈ ಅರಣ್ಯ ಪ್ರದೇಶವು 1850ರ ಕಾಲಘಟ್ಟದಲ್ಲಿ ಸುಮಾರು 20 ಲಕ್ಷ ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಬಹಳ ದಟ್ಟವಾಗಿ ಹಬ್ಬಿತ್ತು. ಅವರನ್ನು ಮೂಲೆಗುಂಪಾಗಿಸಿದ ವಸಾಹತುಗಾರರ ಪ್ರಾಬಲ್ಯವು ಹೆಚ್ಚಾದಂತೆ,  ಬೆಲೆಬಾಳುವ ಮರಗಳ ಸಾಗಾಣಿಕೆಯೂ ಹೆಚ್ಚಾಯಿತು. ಆ ನಂತರದಲ್ಲಿ ಕಾಡಿನ ವಿಸ್ತೀರ್ಣ 1,39,000 ಎಕರೆಗಳಿಗೆ ಇಳಿಯಿತು. ಸಮಶೀತೋಷ್ಣ ಮಳೆಕಾಡುಗಳೂ ಒಳಗೊಂಡಿರುವ ಇವುಗಳು, ಇಲ್ಲಿಯ ಜಲಮೂಲಗಳೂ ಹೌದು. ನೀರಿನ ಹರಿವಿನಿಂದ ಉಂಟಾದ ಝರಿಗಳೂ, ನದಿಗಳೂ ಕ್ರಮೇಣ ನಾಶವಾಗತೊಡಗಿದವು. ಈ ಕಾಡುಗಳ ನಾಶ ಹಾಗೂ ಅದರಿಂದ ಪ್ರಕೃತಿಯ ಮೇಲೆ ಆಗುತ್ತಿರುವ ತೀವ್ರ ಹೊಡೆತವನ್ನು ಮನಗಂಡು 1918ರಲ್ಲಿ “ರೆಡ್ ವುಡ್ ನ್ನು ಉಳಿಸಿ!”(Save the Redwoods league) ಆಂದೋಲನವು ಆರಂಭವಾಗಿ, 1920ರಲ್ಲಿ ಅದಕ್ಕಾಗಿ ಬಲವಾದ ಸಂಘಟನಾ ಸಂಸ್ಥೆಯೊಂದು ರೂಪುಗೊಂಡಿತು. ಅಲ್ಲದೆ, ಅದಕ್ಕಾಗಿ ವಿವಿಧ ರೀತಿಯ ಕಾರ್ಯಕ್ರಮಗಳು ಆಯೋಜನೆಗೊಂಡವು. ಇದರ ಅಂಗವಾಗಿ 1968ರಲ್ಲಿ ಎಲ್ಲೆಡೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅರಣ್ಯ ಪಾರ್ಕ್ ಗಳನ್ನು ಸಂಕೀರ್ಣವಾಗಿ ರೂಪಿಸಲಾಯಿತು. ಇದರಿಂದಾಗಿ, 36 ರಾಜ್ಯ ಮತ್ತು 9 ರಾಷ್ಟ್ರೀಯ ಅರಣ್ಯ ಪಾರ್ಕ್ ಗಳು ಬರೇ ಕ್ಯಾಲಿಫೋರ್ನಿಯ ರಾಜ್ಯ ಒಂದರಲ್ಲೇ ರೂಪುಗೊಂಡಿವೆ. ಇದರಿಂದಾಗಿ  ಸುಮಾರು 45% ರಷ್ಟು ಅರಣ್ಯ ಪ್ರದೇಶವನ್ನು ರಕ್ಷಿಸಿದಂತಾಗಿದೆ. ರೆಡ್ ವುಡ್ ಕಾಡುಗಳ ಜೊತೆಗೆ, ಉದ್ಯಾನವನಗಳು, ಇತರ ಸ್ಥಳೀಯ ಸಸ್ಯ, ಪ್ರಾಣಿ, ಹುಲ್ಲುಗಾವಲು, ಸಾಂಸ್ಕೃತಿಕ ಸಂಪನ್ಮೂಲಗಳು, ನದಿಗಳ ಭಾಗಗಳು ಮತ್ತು ಇತರ ಹೊಳೆಗಳು ಅಲ್ಲದೆ ಸುಮಾರು 60ಕಿ.ಮೀ ಗಳಷ್ಟು ಉದ್ದದ ಪ್ರಾಚೀನ ಕರಾವಳಿಯನ್ನೂ ರಕ್ಷಿಸಲಾಗಿದೆ.

ಇಲ್ಲಿಯ ರೆಡ್ ವುಡ್ ಮರಗಳು, ಜಗತ್ತಿನಲ್ಲಿಯೇ ಅತೀ ಬಲಿಷ್ಟ, ಅತ್ಯಂತ ಹಳೆಯ, ಅತೀ ಎತ್ತರದವುಗಳಾಗಿವೆ. ಇವುಗಳು ಸುಮಾರು 240 ಅಡಿಗಳಿಂದ 350 ಅಡಿಗಳ ವರೆಗೆ ಬೆಳೆಯಬಲ್ಲವು. ಇವುಗಳ ಸರಾಸರಿ ಆಯುಸ್ಸು ಸುಮಾರು 500ರಿಂದ 700ವರ್ಷಗಳಷ್ಟಾದರೂ, 2000 ವರ್ಷಗಳಿಂದಲೂ ಹೆಚ್ಚು ವರ್ಷ ಜೀವಿಸಬಲ್ಲವು. ಪ್ರಪಂಚದಲ್ಲೇ ಅತೀ ಎತ್ತರದ ರೆಡ್ ವುಡ್ ಮರದ ಎತ್ತರವು 379.7 ಅಡಿಗಳು! ಇದರ ಸುತ್ತಳತೆ ಸುಮಾರು 151 ಅಡಿಗಳಾದರೆ, ಇದರ ಭಾರವು 1.6 ಮಿಲಿಯ ಪೌಂಡುಗಳು! ಕ್ಯಾಲಿಫೋರ್ನಿಯದ ಪರ್ವತ ಪ್ರದೇಶದಲ್ಲಿರುವ, ಜಗತ್ತಿನಲ್ಲಿಯೇ ಅತೀ ಹಳೆಯ ಮರವು, ಸುಮಾರು 3,200 ವರ್ಷದ್ದಾಗಿದೆ! ಇದರ ಎತ್ತರವು 360 ಅಡಿಗಳು. ಈ ಮರಗಳ ದೀರ್ಘಾಯುಸ್ಸಿನ ಗುಟ್ಟೇನು ಗೊತ್ತೇ… ಇವುಗಳಿಗೆ ಗೆದ್ದಲು ತಗಲುವುದಿಲ್ಲ. ಇವುಗಳ ತೊಗಟೆಯು ಬಹಳ ಒರಟಾಗಿದ್ದು, ಅದರ ದಪ್ಪವೇ 2 ಅಡಿಗಳಷ್ಟು ಇರುವುದರಿಂದ ಬೆಂಕಿ ಅವಘಡಗಳಿಗೆ ಬಹಳ ಬೇಗ ತುತ್ತಾಗುವುದಿಲ್ಲ. ಇದರ ಒಳ ತಿರುಳು ಕೆಂಪು ಕಂದು ಬಣ್ಣದ್ದಾಗಿದ್ದು, ನೋಡಲು ಬಹಳ ಅಂದ. ಕೆಲವು ಮರಗಳ ಕಾಂಡ ಎಷ್ಟು ದೊಡ್ಡದಾಗಿವೆ ಎಂದರೆ, ಅದನ್ನು ಗುಹೆಯಂತೆ ಕೊರೆದು ವಾಹನ ಸಂಚಾರಕ್ಕೆ ರಸ್ತೆಯನ್ನೂ ನಿರ್ಮಿಸುವರು!  ಅಮೆರಿಕದಲ್ಲಿ ಇದೇ ಮರವನ್ನು ಬಳಸಿ ಮನೆ ಕಟ್ಟುವರು. ಮನೆಯ ಛಾವಣಿಯಲ್ಲಿರುವ ಗಟ್ಟಿಮುಟ್ಟಾದ ಮರದ ತೊಲೆಗಳನ್ನು ನೋಡುವಾಗ ಬಹಳ ಆಶ್ಚರ್ಯವೆನಿತ್ತದೆ!

Red wood Tree

ಅಮೆರಿಕದಲ್ಲಿ ನಾವಿದ್ದ ಸ್ಥಳದಿಂದ ಇಂತಹ ಹಲವು ಅರಣ್ಯ ಪಾರ್ಕ್ ಗಳು ಒಂದೆರಡು ಗಂಟೆ ಪ್ರಯಾಣದ ಸರಹದ್ದಿನಲ್ಲಿ ಇದ್ದುದರಿಂದ, ಅವುಗಳಿಗೆ ಆಗಾಗ ವಾರಾಂತ್ಯದಲ್ಲಿ ಭೇಟಿ ಕೊಡುತ್ತಿದ್ದೆವು. ತುಲನಾತ್ಮಕವಾಗಿ ಸ್ವಲ್ಪ ಸಣ್ಣ ಅರಣ್ಯಗಳಲ್ಲಿ; ನಡೆದಾಡಲು ಅಚ್ಚುಕಟ್ಟಾದ ಕಾಲುದಾರಿ, ಸರಿಯಾದ ಮಾರ್ಗಸೂಚಿ, ಸುವ್ಯವಸ್ಥಿತ ಶೌಚಾಲಯ ಇತ್ಯಾದಿಗಳು ಇದ್ದೇ ಇರುತ್ತವೆ. ಆದರೆ ದೊಡ್ಡ ಅರಣ್ಯ ಉದ್ಯಾನವನದಲ್ಲಿರುವ ಸೌಕರ್ಯಗಳನ್ನು ನೋಡಿದಾಗ ಬಹಳ ಆಶ್ಚರ್ಯವಾಗುತ್ತದೆ…ಹೀಗೂ ಉಂಟೇ!?..ಎಂದು.

ಇಂತಹ ಕಡೆಗಳಲ್ಲಿ, ಆಕಾಶಕ್ಕೆ ಲಗ್ಗೆ ಇಟ್ಟಂತಿರುವ ನೇರ ಮರಗಳೇ ತುಂಬಿರುವ ಅರಣ್ಯದ ನಡುವಿನಲ್ಲಿ ಕೆಲವೆಡೆ ಅಗಲವಾದ ಕಾಲುದಾರಿ ಇದ್ದರೂ, ವಾಹನ ಸಂಚಾರಕ್ಕಾಗಿ ಮಾರ್ಗ ಸೂಚಿ ಸಹಿತದ ಸೊಗಸಾದ ರಸ್ತೆಯು ಇದ್ದೇ ಇರುತ್ತದೆ. ಇಲ್ಲಿ, ಹಿರಿಯರು ಕಿರಿಯರೆನ್ನದೆ ಎಲ್ಲಾ ವಯೋಮಾನದ ಸ್ತ್ರೀ, ಪುರುಷರು ಸೈಕಲ್ ಬಿಡುತ್ತಾ ಮಜಾ ಮಾಡುವುದು ನೋಡಲೇ ಖುಷಿ!

ಅಲ್ಲಲ್ಲಿ ಇರಿಸಿರುವ ಕಸದ ಬುಟ್ಟಿಗಳು ಒಪ್ಪವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತವೆ. ಮುಖ್ಯವಾಗಿ, ಜನರಿಗೆ ಉಳಕೊಳ್ಳಲು ಸುಸಜ್ಜಿತ ಸ್ಟೇ ಹೋಂ ಗಳು ಲಭ್ಯ. ನೂರಾರು ಜನರು ಸೇರಿ ಒಂದೆರಡು ದಿನಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ  ವೇದಿಕೆ ಸಹಿತದ ಬಯಲು ರಂಗಮಂದಿರ, ಊಟದ ವ್ಯವಸ್ಥೆಗಾಗಿ ಸುಸಜ್ಜಿತ ಊಟದ ಹಾಲ್, ಅಡುಗೆ ಕೋಣೆ,  ಇತ್ಯಾದಿಗಳು ಆ ಕಾಡಿನೊಳಗೆ ಅಡಗಿವೆ. ಹೆಚ್ಚಾಗಿ ಜನರು ಇಂತಹ ಕಾಡಿನೊಳಗೆ ಸ್ವತಃ ಡೇರೆ ರಚಿಸಿ ಉಳಕೊಳ್ಳುವುದು ರೂಢಿ. ಇವುಗಳ ಜೊತೆಗೆ, ಅಡುಗೆಗಾಗಿ ತಂದ ವಸ್ತುಗಳು ಹಾಳಾಗದಂತೆ ಇರಿಸಲು ಒಂದು ದೊಡ್ಡದಾದ ಕೋಣೆಯನ್ನೇ ಫ್ರಿಡ್ಜ್ ಆಗಿ ಪರಿವರ್ತಿಸುವರು…ಇದನ್ನು ನೋಡಿದ ನನಗೆ ಬಹಳ ಆಶ್ಚರ್ಯ ಸಹಿತದ ಮೆಚ್ಚುಗೆಯಾದದ್ದಂತೂ ನಿಜ.

ಕಾಡಿನೊಳಗಡೆ ಧರೆಗುರುಳಿದ ಮರಗಳು ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ, ಪ್ರಕೃತಿಯೊಡನೆ ಬೆರೆತು ಬಿದ್ದಿರುತ್ತವೆ. ಅವುಗಳನ್ನು  ತೆಗೆದು ಸ್ವಚ್ಛಗೊಳಿಸುವುದಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಿದ ಅಂಶವೆಂದರೆ, ಕಾಡಿನೊಳಗಡೆ   ರೆಡ್ ವುಡ್ ಮರ, ಗಿಡಗಳು ಬಿಟ್ಟರೆ ಬೇರೆ ಯಾವ ಸಸ್ಯಗಳೂ ಕಾಣಲಾರವು. ಆದರೆ, ಹರಿಯುವ ತೊರೆಗಳ ಪಕ್ಕದಲ್ಲಿ  ಸ್ವಲ್ಪ ವೈವಿಧ್ಯತೆಯನ್ನು ಕಾಣಬಹುದು. ತುಂಬು ತೊರೆಗಳಲ್ಲಿ ಹರಿಯುವ ಸ್ವಚ್ಛ ನೀರಿನಲ್ಲಿ ಸ್ವಚ್ಚಂದವಾಗಿ ಓಡಾಡುವ ಮೀನುಗಳನ್ನು ನೋಡುವುದೇ  ಖುಷಿ. ಹಿಂದಿನ ಎಳೆಯಲ್ಲಿ ನನ್ನ ಅನುಭಗಳನ್ನು ಹಂಚಿಕೊಂಡ ಯೂಸಿಮಿಟಿಯೂ ಇವುಗಳಲ್ಲೊಂದು. ಬೇರೊಂದು ಬಹು ದೊಡ್ಡ ರಾಷ್ಟ್ರೀಯ ಉದ್ಯಾನವನಕ್ಕೆ ಹೋದ ಅನುಭವದ ನೆನಪುಗಳನ್ನು ಮುಂದಿನ ಎಳೆಗಳಲ್ಲಿ ಬಿಡಿಸಿಡಲು ಪ್ರಯತ್ನಿಸುವೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ಆಗಾಗ ಕಾಡ್ಗಿಚ್ಚಿನ ಹಾವಳಿಯಿಂದ ಸಾವಿರಾರು ಎಕರೆ ಅರಣ್ಯ ನಾಶವಾಗುವುದೂ ನಡೆದೇ ಇದೆ.

ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಹೋದರೆ, ಜಾಸ್ತಿಯೆಂದರೆ ಸರಿಯಾಗಿ 6 ತಿಂಗಳು(180 ದಿನಗಳು) ಮಾತ್ರ ಅಲ್ಲಿರಲು ಅನುಮತಿ ದೊರೆಯುತ್ತದೆ. ಅದರ ಮೊದಲು ಕಡ್ಡಾಯವಾಗಿ ಹೊರಡಲೇಬೇಕು. ಅತಿ ತುರ್ತು ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಹೆಚ್ಚುವರಿ ಹಣವನ್ನು ತೆತ್ತು ಕೆಲವು ದಿನಗಳಿಗೆ ವಿಸ್ತರಿಸಬಹುದು ಅಷ್ಟೆ. ನಾವು ಅಮೆರಿಕದಿಂದ ಹೊರಡುವ ದಿನ ಹತ್ತಿರವಾಗುತ್ತಾ ಬರುತ್ತಿತ್ತು…ನಮ್ಮ ಸೂಟ್ಕೇಸುಗಳ ಹೊಟ್ಟೆ ದೊಡ್ಡದಾಗುತ್ತಾ ಬಂದಿತ್ತು! ಇದರ ಮಧ್ಯೆ, ಒಂದು ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಅಳಿಯ ನಮ್ಮನ್ನು ಒಂದು ವಿಶೇಷವಾದ ಸ್ಥಳಕ್ಕೆ ಕರೆದೊಯ್ದ…

ನಮ್ಮ ಮನೆಯಿಂದ ಹದಿನೈದು ನಿಮಿಷಗಳ ಪ್ರಯಾಣ… Foot Hill College ಗೆ. ಇಲ್ಲಿರುವ ಬಾಹ್ಯಾಕಾಶ ವೀಕ್ಷಣಾಲಯವು 1928ರಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕೋಸ್ಕರ ಸ್ಥಾಪಿಸಲ್ಪಟ್ಟಿದ್ದು, ಖಗೋಳಶಾಸ್ತ್ರ ಹವ್ಯಾಸಿಗಳ, ಸಂಶೋಧಕರ, ಹಾಗೂ ವಿದ್ಯಾರ್ಥಿಗಳ ಮೆಚ್ಚಿನ ತಾಣವಾಗಿದೆ. ಕಂಪ್ಯೂಟರಿನಿಂದ ನಿಯಂತ್ರಿಸಲ್ಪಡುವ ಇಲ್ಲಿರುವ ದೂರದರ್ಶಕವು 16 ಇಂಚು ವ್ಯಾಸದ ಬೃಹತ್ ಗಾತ್ರದ್ದಾಗಿದ್ದು, ಬಹಳ ಪರಿಣಾಮಕಾರಿ ವೀಕ್ಷಣೆಗೆ ಪ್ರಸಿದ್ಧಿ ಪಡೆದಿದೆ. ಈ ವೀಕ್ಷಣೆಯು ಉಚಿತವಾಗಿದ್ದು ಸಾರ್ವಜನಿಕರೂ ಇದರ ಉಪಯೋಗ ಪಡೆಯಬಹುದು.

ಬಾಹ್ಯಾಕಾಶ ವೀಕ್ಷಣಾ ಕೇಂದ್ರ

ನಾವು ಅಲ್ಲಿಗೆ ತಲಪಿದಾಗ, ಅದಾಗಲೇ ಸುಮಾರು ಇಪ್ಪತ್ತೈದು ಜನರು ಸೇರಿದ್ದರು. ನನಗಂತೂ ಬಹಳ ಕುತೂಹಲ.. ಮನೆಯಲ್ಲಿ ಈ ಮೊದಲೇ ಅಳಿಯ ತಂದಿದ್ದ ದೊಡ್ಡದಾದ ದೂರದರ್ಶಕದಲ್ಲಿ ಹುಣ್ಣಿಮೆಯ ಚಂದ್ರನನ್ನು ನೋಡಿದಾಗ ದಿಗ್ಭ್ರಮೆಗೊಂಡಿದ್ದೆ. ಚಂದ್ರನನ್ನು ನೋಡಲು ಸರಿಹೊಂದಿಸಿ ಕೊಟ್ಟು, ನಾನು ಅದರಲ್ಲಿ ಕಣ್ಣಿಟ್ಟಾಗ ಝಗಝಗಿಸುವ ಬೆಳ್ಳಿತಟ್ಟೆ ನನ್ನ ಮುಂದಿತ್ತು!! ಅದರಲ್ಲಿರುವ ಕುಳಿಗಳು ಬಹಳ ಸ್ಪಷ್ಟವಾಗಿ ಕಾಣುತ್ತಿದ್ದವು. ಆದರೆ, ಬರೇ ಮೂರು ಸೆಕೆಂಡುಗಳಲ್ಲಿ ಮಾಯವಾಗಿಬಿಡುತ್ತಿತ್ತು. ಇದ್ಯಾಕೆ ಹೀಗೆ..? ಎಂದು ಯೋಚಿಸುತ್ತಿರುವಾಗಲೇ ಬುದ್ಧನಿಗೆ ಜ್ಞಾನೋದಯವಾದಂತೆ ನನಗೂ ಆಯಿತೆನ್ನಿ…ನಮ್ಮ ಭೂಮಿ ವೇಗವಾಗಿ ತಿರುಗುವುದೇ ಕಾರಣವೆಂದು! ಆಮೇಲೆ ಬೇಸರಪಡದೆ ನಾನೇ ಹೊಂದಿಸಿಕೊಳ್ಳುತ್ತಾ ಆ ವೈಭವವನ್ನು ಮನಸಾರೆ ಸವಿದೆ.

ನಮ್ಮ ಈ ಬಾಹ್ಯಾಕಾಶ ವೀಕ್ಷಣೆಗೆ ಯಾವ ಅಡ್ಡಿಯೂ  ಒದಗದಿರಲಿ ಎಂದು ದೇವರಲ್ಲಿ ಬೇಡಲೇಬೇಕು..ಯಾಕೆ ಗೊತ್ತೇ? ನಿಚ್ಚಳವಾದ ಆಗಸವೂ ನಮಗೆ ಒದಗಿಬರಬೇಕಲ್ಲವೇ? ನಸು ಬೆಳಕಲ್ಲಿ, ಹತ್ತಡಿಗೂ ಎತ್ತರದ ವೇದಿಕೆಯ ಮೇಲೆ ಆಳೆತ್ತರದ ದೂರದರ್ಶಕವು ತನ್ನ ಮುಖವನ್ನು ಆಗಸದತ್ತ ಚಾಚಿ ನಿಂತಿತ್ತು. ಹೌದು…ಆ ದಿನ ಸ್ವಲ್ಪ ಮೋಡ ಕವಿದ ವಾತಾವರಣವಿತ್ತು, ಅಲ್ಲದೆ ನಮ್ಮ ವೀಕ್ಷಣೆಗಾಗಿ ಕ್ಷೀರಪಥ (Milkyway)ವನ್ನು ದೂರದರ್ಶಕದಲ್ಲಿ ಹೊಂದಿಸಿಟ್ಟಿದ್ದರು. ಸರತಿಯ ಸಾಲಿನಲ್ಲಿ ನಿಂತು ನನ್ನ ಸರದಿ ಬಂದಾಗ ಹತ್ತಾರು ಮೆಟ್ಟಲುಗಳನ್ನೇರಿ ದರ್ಶಕದ ಕಣ್ಣಲ್ಲಿ ಕಣ್ಣಿಟ್ಟಾಗ ಕಡು ಕೆಂಪು, ಬಿಳಿ ಬಣ್ಣಗಳ ನಕ್ಷತ್ರ ಸಮೂಹವು ಮಂಜಿನೊಳಗಡೆಯಿಂದ ಕಂಡುಬರುತ್ತಿತ್ತು…ಆಂದರೆ, ಅದಾಗಲೇ ಮೋಡ ಅಡ್ಡ ಬಂದಾಗಿತ್ತು! ಏನ್ಮಾಡಲಿ…ನಮಗೊದಗಿ ಬಂದುದನ್ನು ಅಸ್ವಾದಿಸಿ ಹೊರಬಂದೆವು. ಆದರೂ ಈ ಅನುಭವವು ಮಾತ್ರ ಅದ್ಭುತವಾಗಿತ್ತು.

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=35762

–ಶಂಕರಿ ಶರ್ಮ, ಪುತ್ತೂರು. 

(ಮುಂದುವರಿಯುವುದು….)

8 Responses

 1. Anonymous says:

  ಉಪಯುಕ್ತ ಮಾಹಿತಿ

 2. ನಯನ ಬಜಕೂಡ್ಲು says:

  Nice

 3. ಅಮೆರಿಕ ಪ್ರವಾಸ ದ ಅನುಭವ ವನ್ನು..ಕಣ್ಣಿಗೆ ಕಟ್ಟಿದಂತೆ..
  ವಿವರಿಸುವ ನಿಮಗೆ ಧನ್ಯವಾದಗಳು ಮೇಡಂ..

  • . ಶಂಕರಿ ಶರ್ಮ says:

   ತಮ್ಮ ಮೆಚ್ಚುಗೆಯ ನುಡಿಗಳಿಗೆ ನಮನಗಳು ಮೇಡಂ.

 4. padmini Hegade says:

  ಪ್ರವಾಸ ದ ಅನುಭವ ಕಣ್ಣಿಗೆ ಕಟ್ಟಿದಂತೆ.ಇದೆ

 5. Padma Anand says:

  ಕಾಡುಗಳು ನಾಶವಾಗುವಾಗ, ಅಲ್ಲಿನ ಸರ್ಕಾರ ತೆಗೆದುಕೊಂಡ ನಿರ್ಧಾರ ಮೆಚ್ಚುಗೆಯಾಯಿತು. ಎಂದಿನಂತೆ ಉಪಯುಕ್ತ ಮಾಹಿತಿಗಳನ್ನು ಆಕರ್ಷಕವಾಗಿ ಹಂಚಿಕೊಂಡಿದ್ದೀರಿ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: