ಅವಿಸ್ಮರಣೀಯ ಅಮೆರಿಕ-ಎಳೆ 31

Share Button

ರಾತ್ರಿಯಲ್ಲಿ ಹಗಲು..!!

ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಎಲ್ಲಿದ್ದರೂ, ಸಂಜೆ 3 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ವಾಹನಗಳ ದೀಪಗಳನ್ನೂ ಕಡ್ಡಾಯವಾಗಿ ಬೆಳಗಿಸಲೇ ಬೇಕಿತ್ತು. ಈ ನಡು ಮಧ್ಯಾಹ್ನ, ಅದೂ ಇನ್ನೂ ಪ್ರಖರವಾದ ಸೂರ್ಯನ ಬೆಳಕು ಇರುವಾಗಲೇ ಇದೇಕೆ ಹೀಗೆ ಎಂದು ನನಗೆ ಅರ್ಥವಾಗಲಿಲ್ಲ. ಆಮೇಲೆ ತಿಳಿದ ವಿಷಯ ನಿಜಕ್ಕೂ ಕುತೂಹಲಕಾರಿಯಾಗಿತ್ತು. ನಾನು ಹಿಂದಿನ ಎಳೆಯಲ್ಲಿ ತಿಳಿಸಿದಂತೆ, ನಾವಿದ್ದ ಸ್ಥಳವು ಭೂಮಧ್ಯರೇಖೆಯಿಂದ ದೂರವಿದ್ದುದರಿಂದ, ವರ್ಷವಿಡೀ ಹಗಲು ಮತ್ತು ರಾತ್ರಿಯಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಇದರಿಂದಾಗಿ, ಚಳಿಗಾಲವಾದ ದಶಂಬರ, ಜನವರಿ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ರಾತ್ರಿಯ ಅವಧಿಯು ಬಹಳ ಜಾಸ್ತಿಯಾಗಿರುತ್ತದೆ. ಬೆಳಿಗ್ಗೆ 7 ಗಂಟೆಗೆ ಸೂರ್ಯೋದಯವಾದರೆ ಸಂಜೆ 5 ಗಂಟೆಗೆ ಸೂರ್ಯಾಸ್ತ.  ಮಾರ್ಚ್ ನಂತರದ ಬೇಸಿಗೆಗಾಲದಲ್ಲಿ ಹಗಲಿನ ಸಮಯ ತುಸು ಹೆಚ್ಚಾಗಿದ್ದರೂ; ಅಂದರೆ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಆದರೂ, ಸಂಜೆ ನಾಲ್ಕು ಗಂಟೆಗೇ ಕತ್ತಲಾವರಿಸತೊಡಗುತ್ತದೆ…ಅದಕ್ಕೇ ಬೀದಿ ದೀಪಗಳು, ವಾಹನಗಳ ದೀಪಗಳು ಬೇಗನೆ ಬೆಳಗುತ್ತದೆ. (ಈಗ ನಮ್ಮಲ್ಲೂ ಹೊಸದಾದ ದ್ವಿಚಕ್ರ ವಾಹನಗಳು ಇಡೀ ದಿನ ದೀಪ ಹಾಕಿಕೊಂಡೇ ಓಡಾಡುವಂತಾಗಿದೆ… ತಯಾರಕರ ದೆಸೆಯಿಂದಾಗಿ!) ಇನ್ನು ಜೂನ್ ತಿಂಗಳಿನ ಅವಸ್ಥೆ ಬೇಡವೇ ಬೇಡ! ಅತ್ಯಂತ ದೀರ್ಘವಾದ ಹಗಲು. ಸೂರ್ಯಾಸ್ತವು ರಾತ್ರಿ 8 ಗಂಟೆಗೆ…ಅಂದರೆ ನಾವು ರಾತ್ರಿ ಊಟದ ಹೊತ್ತಿನಲ್ಲಿ ಸಂಜೆಯಂತೆ ಸೂರ್ಯನ ಬೆಳಕು! ಒಮ್ಮೆಯಂತೂ ಹೊರಗಡೆಗೆ ಇನ್ನೂ  ಬಿಸಿಲು ಇದ್ದಂತೆಯೇ ಮಗಳು ಊಟಕ್ಕೆ ತಯಾರಾಗಿರುವುದನ್ನು ಕಂಡು ನನಗೆ ಸರಿಬರಲಿಲ್ಲ. ನಾನಂತೂ, ಕತ್ತಲಾದ ಬಳಿಕವೇ ಊಟ ಎಂದು ಕುಳಿತವಳು, ಗಡಿಯಾರ ನೋಡಿದಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು! ಅಬ್ಬಾ ..ವಿಚಿತ್ರವಾದ ಈ ಅನುಭವವನ್ನು ನಿಜಕ್ಕೂ ಅರಗಿಸಿಕೊಳ್ಳಲಾಗಲಿಲ್ಲ. ಇದನ್ನೆಲ್ಲಾ ನೋಡಿದಾಗ, ನಾವು ಭಾರತೀಯರು ಎಷ್ಟು ಭಾಗ್ಯವಂತರು ಎಂದು ಅನಿಸದೆ ಇರಲಿಲ್ಲ.

ಹ್ಯಾಲೋವೀನ್ ಭೂತ..‌!!

ಒಮ್ಮೆ, ಸಂಜೆಯ ವಾಕಿಂಗ್ ಸಮಯ.. ಕೆಲವೊಂದು ಮನೆಗಳ ಮುಂಭಾಗದಲ್ಲಿ ಕಿತ್ತಳೆ ಬಣ್ಣದ ಚೀನೀಕಾಯಿಯನ್ನು ಒಳಗೆ ಟೊಳ್ಳು ಮಾಡಿ, ವಿಚಿತ್ರವಾದ ಆಕಾರಗಳಲ್ಲಿ ಅದರಲ್ಲಿ ಕಣ್ಣು ಬಾಯಿಗಳನ್ನು ಕೊರೆದು ನೇತು ಹಾಕಿದ್ದನ್ನು ಗಮನಿಸಿದೆ.  ಬಟ್ಟೆ ಅಂಗಡಿಗಳಲ್ಲಿ ವಿಶೇಷವಾದ ಆದರೆ ಭಯಾನಕವಾದ ನೂರಾರು ತರಹದ ಭೂತ ಪಿಶಾಚಿಗಳ ಉಡುಪುಗಳನ್ನು ನೇತು ಹಾಕಿದ್ದು ನೋಡಿ ನಿಜವಾಗಿಯೂ ಭಯಗೊಂಡೆ. ಇವುಗಳೆಲ್ಲ ಒಂದು ವಿಶೇಷವಾದ ಹಬ್ಬದೊಡನೆ ತಳಕು ಹಾಕಿಕೊಂಡಿರುವುದು ಎಂದು ಆಮೇಲೆ  ತಿಳಿಯಿತು. ಹೌದು.‌‌..‌ ಅಮೆರಿಕದಲ್ಲಿ ಹ್ಯಾಲೋವೀನ್(Halloween) ಎನ್ನುವುದು ಅಕ್ಟೋಬರ್ 31ನೇ ತಾರೀಕಿನಂದು ಆಚರಿಸುವ ಒಂದು ವಾರ್ಷಿಕ ರಾಷ್ಟ್ರೀಯ ಹಬ್ಬವಾಗಿದೆ. ಇದು ಮೂಲತ: ಸೆಲ್ಟ್ ಜನಗಳ ಹಬ್ಬ ಮತ್ತು ಕ್ರಿಶ್ಚಿಯನ್ನರ ಪವಿತ್ರ ದಿನವಾದ ಆಲ್ ಸೇಂಟ್ಸ್ ನ ಹಬ್ಬವೂ ಆಗಿದೆ. ಆದರೆ ಇಂದಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಎಲ್ಲಾ ಮತದವರೂ ಆಚರಿಸುವರು.

ನಾನು ಗಮನಿಸಿದಂತೆ, ಅಮೆರಿಕದಲ್ಲಿ  ಸಂತೋಷಪಡುವುದು ಎಂದರೆ ಏನಾದರೂ ಭಯ ಹುಟ್ಟಿಸುವಂತಹುದೇ ಇರುತ್ತದೆ…ಇದು ನನ್ನ ಅನುಭವ ಕೂಡಾ. ಹಾಗೆಯೇ  ಈ ಹಬ್ಬದಲ್ಲಿಯೂ ವಿಚಿತ್ರವಾದ ವೇಷಭೂಷಣಗಳಿಗೆ ಹೆಚ್ಚು ಪ್ರಾಧಾನ್ಯತೆ. ಭೂತ, ಪ್ರೇತಗಳ ಉಡುಗೆಗಳನ್ನು ಧರಿಸುವುದು, ಭಯಾನಕ ಸಿನಿಮಾಗಳನ್ನು ನೋಡುವುದು, ಭಯಾನಕ ಕಥೆಗಳನ್ನು ಹೇಳುವುದು, ಚೇಷ್ಟೆಗಳನ್ನು  ಮಾಡಿ ಹೆದರಿಸುವುದು ಇತ್ಯಾದಿ. ಈ ದಿನದಂದು ಮಕ್ಕಳೆಲ್ಲಾ ಬಹಳ ಉತ್ಸಾಹದಿಂದ ಇಂತಹ ಉಡುಪು ಧರಿಸಿ ಅಕ್ಕಪಕ್ಕದ ಮನೆಗಳಿಗೆ ಹೋಗಿ, ಟ್ರಿಕ್ ಆರ್ ಟ್ರೀಟ್ (Trick or Treat?)ಎಂದು ಕೇಳುವರು. ಮನೆಯವರು ಸ್ವಾಭಾವಿಕವಾಗಿಯೇ ಟ್ರೀಟ್ ಎನ್ನುವರು. ಆ ಮಕ್ಕಳನ್ನು  ಸತ್ಕರಿಸಿ ಅವರಿಗೆ ಕೊಡಲೋಸುಗವೇ ತಂದಿರಿಸಿದ ವಿವಿಧ ಚಾಕಲೇಟ್ ಗಳನ್ನು ಅಥವಾ ಸ್ವಲ್ಪ ಹಣವನ್ನು ನೀಡುವರು. ಸಿಕ್ಕಿದ ಹಣದಿಂದ ಮಕ್ಕಳು ಅವರಿಗಾಗಿ ಏನಾದರೂ ಖರೀದಿಸಿ ಖುಷಿ ಪಡುವರು. ಇವರು ಧರಿಸುವ ಉಡುಪುಗಳಲ್ಲಿ, ಸಾವು, ದುಷ್ಟತೆ, ನಿಗೂಢತೆ, ಮಾಯಾತಂತ್ರ, ಪೌರಾಣಿಕ ರಾಕ್ಷಸರು, ಸಾಂಪ್ರದಾಯಿಕ ಪಾತ್ರಗಳು, ದೆವ್ವ, ಮಾಟಗಾತಿಯರು, ಅಸ್ಥಿಪಂಜರ, ಕರಿಬೆಕ್ಕು, ಬಾವಲಿ ಹೀಗೆ ತರಹೇವಾರಿ ರೀತಿಯಲ್ಲಿ ಲಭ್ಯ!..ಜೊತೆಗೆ ಇದೇ ತರಹದ ಮುಖವಾಡಗಳು!!  ಅಯ್ಯೋ.. ಇಂತಹುಗಳನ್ನು ಹಾಕಿದ ಮಕ್ಕಳನ್ನು ನೋಡಿದಾಗ; ಯಾಕಾಗಿ ಇಂತಹುಗಳನ್ನೆಲ್ಲಾ ಧರಿಸುವರೋ ಏನೋ ಎಂದು ಬಹಳ ಜಿಗುಪ್ಸೆ ಎನಿಸುವುದರ ಜೊತೆಗೆ ಭಯವೂ ಆಗದಿರುವುದಿಲ್ಲ. ನಮ್ಮಲ್ಲಿಯ ಯಕ್ಷಗಾನದ ಅಥವಾ ಪೌರಾಣಿಕ ನಾಟಕಗಳ ದೇವ ದೇವತೆಗಳ ದಿವ್ಯವಾದ ಉಡುಪುಗಳು ಎಷ್ಟು ಚೆನ್ನಾಗಿರುತ್ತವೆ ಎಂದು ಅನಿಸುತ್ತದೆ.

ಇದರಲ್ಲಿ ಇನ್ನೊಂದು ಮುಖ್ಯವಾದ ಆಚರಣೆಯೆಂದರೆ ಚೀನೀಕಾಯಿಯ ಒಳಗೆ ಟೊಳ್ಳು ಮಾಡಿ , ವಿವಿಧ ರೀತಿಯ ವಿಚಿತ್ರ ಕೆತ್ತನೆಗಳು, ಭಯಾನಕ ಇಲ್ಲವೇ ಹಾಸ್ಯಮಯವಾದ ಮುಖವನ್ನು ಕೊರೆದು ಕತ್ತಲಾದ ಬಳಿಕ ತಮ್ಮ  ಮನೆಯ ಮುಂಭಾಗದಲ್ಲಿ ಇರಿಸುವರು ಅಥವಾ ಅದರ ಒಳಗಡೆಗೆ ಬಲ್ಬ್ ಇರಿಸಿ ಇನ್ನೂ ಭಯಾನಕವಾಗಿ ಕಾಣುವಂತೆ ಮಾಡುವರು. ಇದೆಲ್ಲವುಗಳಿಂದ ಅವರ ಹಿರಿಯರ ಆತ್ಮಗಳಿಗೆ ಶಾಂತಿ ಸಿಗುವುದೆಂಬ ನಂಬಿಕೆಯಂತೆ! ಹೆಚ್ಚಾಗಿ, ಕಪ್ಪು ಮತ್ತು ಕೇಸರಿ ಬಣ್ಣಗಳು ಈ ಆಚರಣೆಯೊಂದಿಗೆ ಮಿಳಿತಗೊಂಡಿವೆ. ರಾತ್ರಿಯ ಕತ್ತಲೆ, ಬೆಂಕಿಯ ಬಣ್ಣ, ಶರತ್ಕಾಲದ ಹೊಂಬಣ್ಣದ ಎಲೆ, ಸಿಹಿಗುಂಬಳಕಾಯಿಯ ಬಣ್ಣ ಇವೆಲ್ಲವೂ ಇದಕ್ಕೆ ಕಾರಣವಿರಬಹುದು. ಹಬ್ಬದ ಸಮಯಕ್ಕೆ ಸರಿಯಾಗಿ, ಕಟಾವಿಗೆ ಸಿದ್ಧವಾದ ಸಾವಿರಾರು ಸಿಹಿಗುಂಬಳಗಳು ಶಿಸ್ತಿನಿಂದ ಹೊಲದಲ್ಲಿ ಸಾಲಾಗಿ ಕುಳಿತಿರುವುದು ನೋಡಲು ಬಹಳ ಚಂದ.

ಕೊನೆಯ ದಿನದ ವೀಕ್ಷಣೆ

ಅಂದು 2010ನೇ ಆಗಸ್ಟ್ 3, ಮಂಗಳವಾರವಾಗಿತ್ತು.. ಮರುದಿನವೇ ನಮ್ಮ ಮರುಪ್ರಯಾಣದ ಆರಂಭ. ಆದರೆ, ಆ ಹೊರಡುವ ತಯಾರಿಯ ಗಡಿಬಿಡಿಯಲ್ಲೂ ಅಳಿಯನಿಗೆ ನಮಗೆ ಇನ್ನೂ ಹೊಸ ಜಾಗಗಳನ್ನು ತೋರಿಸುವ ಉತ್ಸಾಹ. ಅಂತೆಯೇ  ಮಧ್ಯಾಹ್ನ ಊಟದ ಬಳಿಕ ನಮ್ಮ ವಾಹನವು, ಮನೆಯಿಂದ 50 ಮೈಲು  ದೂರದ ಓಕ್ ಲ್ಯಾಂಡ್ ನಲ್ಲಿರುವ ಚಬೊಟ್ ಬಾಹ್ಯಾಕಾಶ ಮತ್ತು ವಿಜ್ಞಾನ ಕೇಂದ್ರದೆಡೆ (Chabot Space and Research Center ) ದೌಡಾಯಿಸಿತು. 

ಈ ವಿಜ್ಞಾನ ಕೇಂದ್ರವು, ಸಂವಾದಾತ್ಮಕ ಪ್ರದರ್ಶನಗಳು, ತಾರಾಲಯಗಳು, ದೊಡ್ಡ ಪರದೆಯ ರಂಗಮಂದಿರ, ಕರಕುಶಲ ವಸ್ತುಗಳ ತಯಾರಿ, ಮತ್ತು ಮೂರು ಶಕ್ತಿಶಾಲಿ ದೂರದರ್ಶಕಗಳನ್ನು ಒಳಗೊಂಡ ವಿಜ್ಞಾನ ಕಲಿಕಾ ಕೇಂದ್ರವಾಗಿದೆ. ಇದು1883 ರಲ್ಲಿ, ಓಕ್ ಲ್ಯಾಂಡ್ ಪ್ರದೇಶದ ಮುಖ್ಯ ಪಟ್ಟಣದಲ್ಲಿತ್ತು. ಆ ದಿನಗಳಲ್ಲಿಯೇ, ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿರುವ ಎಲ್ಲಾ ವಿದ್ಯಾಕೇಂದ್ರಗಳಿಗೆ, ಸಾರ್ವಜನಿಕರಿಗೆ ಹಾಗೂ ಸಂಶೋಧಕರಿಗೆ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನದ ಅಧ್ಯಯನಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು.  ಪಟ್ಟಣ ಪ್ರದೇಶದಲ್ಲಿ, ರಾತ್ರಿ ವೇಳೆಯ ಕೃತಕವಾದ ಪ್ರಖರ ಬೆಳಕಿನಲ್ಲಿ ಆಕಾಶವೀಕ್ಷಣೆಯು ಅಸಾಧ್ಯವಾದುದರಿಂದ ಈ ವೀಕ್ಷಣಾಲಯವನ್ನು 1915 ರಲ್ಲಿ ಬೆಟ್ಟದ ಮೇಲಕ್ಕೆ ಸ್ಥಳಾಂತರಿಸಲಾಯಿತು. ಈಗ ಇಲ್ಲಿರುವ ವಿಜ್ಞಾನಕೇಂದ್ರದ ವಿಸ್ತರಿಸಲಾದ ಹೊಸ ವಿಭಾಗವು, 2000 ನೇ ಇಸವಿಯಲ್ಲಿ,  ಸ್ಕೈ ಲೈನ್ ಎನ್ನುವ ಈ ಹೊಸ ಜಾಗದಲ್ಲಿ ಸೇರ್ಪಡೆಗೊಂಡಿತು. (ನಿಜವಾಗಿಯೂ ಈಗಲೂ, ರಾತ್ರಿಯ ಶುಭ್ರ ಆಗಸದಲ್ಲಿ ಹೊಳೆಯುವ ನಕ್ಷತ್ರಗಳನ್ನು  ನೋಡಬೇಕಾದರೆ ಹಳ್ಳಿ ಪ್ರದೇಶಗಳಿಗೇ ಹೋಗಬೇಕಷ್ಟೆ…ಪಟ್ಟಣಗಳಲ್ಲಿ ಸಾಧ್ಯವಿಲ್ಲ!)

ದಟ್ಟ ಕಾಡಿನ ಸಾಲುಮರಗಳ ನಡುವಿನ ವಿಶಾಲವಾದ ಏರು ರಸ್ತೆಯಲ್ಲಿ ಸಾಗಿ ಬೆಟ್ಟದ ಮೇಲಕ್ಕೆ ತಲಪಿದಾಗ, ದಟ್ಟ ಕಾಡಿನ ನಡುವಿನ ಅತ್ಯಂತ ವಿಶಾಲವಾದ ಸಮತಟ್ಟು ಪ್ರದೇಶದಲ್ಲಿರುವ ವಿಶೇಷ ರೀತಿಯ ತಾರಾಲಯದ ಕಟ್ಟಡ, ಅಷ್ಟೇ ಸುಸಜ್ಜಿತವಾದ ವಾಹನ ನಿಲ್ಲಿಸುವ ಸ್ಥಳ ನೋಡಿ ದಂಗಾದೆ! ಇಲ್ಲಿ ಎಲ್ಲೆಲ್ಲೂ ಸ್ವಚ್ಛ.. ಸುಂದರ. ಮಧ್ಯಾಹ್ನ ಮೂರುಗಂಟೆಯ ನಡು ಹಗಲು ಹೊತ್ತು…ಸುಯ್ಯೆಂದು ಬೀಸುವ ಕುಳಿರ್ಗಾಳಿ ಮೈ ನಡುಗಿಸುತ್ತಿತ್ತು. ತಾರಾಲಯ ವೀಕ್ಷಣೆಗಾಗಿ ನಿಗದಿತ ಹಣವನ್ನು ಪಾವತಿಸಿ ಒಳಹೊಕ್ಕಾಗ, ಹೊಸತೊಂದು ಲೋಕಕ್ಕೆ ಕಾಲಿಟ್ಟ ಅನುಭವ. ಎಲ್ಲಿ ನೋಡಿದರೂ ಆಕಾಶಕಾಯಗಳ ಪ್ರತಿಕೃತಿಗಳು ಕಣ್ಸೆಳೆಯುತ್ತಿದ್ದವು. ನಮ್ಮ ಗೆಲಾಕ್ಸಿಯ ಪ್ರತಿಯೊಂದು ಕಾಯಗಳ ಬಗ್ಗೆ ಸ್ಪಷ್ಟವಾದ ವಿವರಗಳೊಂದಿಗೆ; ಅವುಗಳನ್ನು ಸಮೀಪದಿಂದ ನೋಡಬಹುದಾದರೆ ಯಾವ ರೀತಿಯಲ್ಲಿ ಗೋಚರಿಸಬಹುದೆಂಬುದರ ಮಾದರಿಗಳ ಪ್ರದರ್ಶನದಲ್ಲಿ ನಾವೇ ಕೈಯಾರೆ ಮುಟ್ಟಿ, ಅನುಭವಿಸಿ ನೋಡಬಹುದಾಗಿದೆ. ಶನಿಯ ಉಂಗುರಗಳು, ಮಂಗಳನ ಅಂಗಳ ಇತ್ಯಾದಿ..ಇದು ನಿಜವಾಗಿಯೂ  ಅದ್ಭುತ ಅನುಭವವೂ ಹೌದು. ಕಟ್ಟಡದ ಹೊರ ಬಯಲು ಪ್ರದೇಶದಲ್ಲಿ ಇರಿಸಲಾದ ಅತ್ಯಂತ ಶಕ್ತಿಯುತವಾದ ದೂರದರ್ಶಕದಲ್ಲಿ, ಸೂರ್ಯನ ಮೇಲಿನ ಕಪ್ಪು ಕುಳಿಯನ್ನು ನೋಡುವ ಅವಕಾಶ ದೊರೆತುದು ನನ್ನ ಸೌಭಾಗ್ಯವೆಂದುಕೊಂಡೆ. ಸೂರ್ಯನನ್ನು ನೇರವಾಗಿ ನೋಡಲಾರೆವು. ಅದಕ್ಕಾಗಿ ದೂರದರ್ಶಕದಲ್ಲಿ ದೊರೆತ ಬಿಂಬವನ್ನು ದಪ್ಪಗಿನ ಕಪ್ಪು ಫಲಕಕ್ಕೆ ಹಾಯಿಸುವರು. ಅದನ್ನು ವಿಶೇಷವಾದ ಮಸೂರದ ಮೂಲಕ ನಾವು ನೋಡಬೇಕಾಗುತ್ತದೆ. ನಾನು ಕುತೂಹಲದಿಂದ ಮಸೂರದ ಕಣ್ಣಿನಲ್ಲಿ ನನ್ನ ಕಣ್ಣನ್ನು ಇರಿಸಿ ನೋಡಿದ ತಕ್ಷಣ ಅದು ಮಾಯವಾಗಿಬಿಡುತ್ತಿತ್ತು… ನಾನು ಈ ಮೊದಲು ಚಂದ್ರನನ್ನು ನೋಡಿದಂತೆ! ನಮ್ಮ ಭೂಮಿಯ ಚಲನೆಯ ವೇಗದ ಗತಿ ನಮ್ಮ ಊಹೆಗೂ ಮೀರಿದ್ದು ಅಲ್ಲವೇ? ಇಲ್ಲಿಯ ಸಹಾಯಕರು ತಕ್ಷಣ ಅದನ್ನು ವೀಕ್ಷಣೆಗೆ ಸರಿಹೊಂದಿಸಿ ಕೊಡುತ್ತಿದ್ದರು. ಸಾಕಷ್ಟು ಬಾರಿ ನೋಡಿದರೂ ದಣಿಯದ ನನ್ನನ್ನು, ಮಗಳು ಬಂದು ಎಚ್ಚರಿಸಬೇಕಾಯಿತು.

ಮುಂದೆ ಅಲ್ಲಿಯ ಅದ್ಭುತ ತಾರಾಲಯಕ್ಕೆ ನಮ್ಮ ಭೇಟಿ.. 250 ಆಸನಗಳುಳ್ಳ, 21 ಮೀಟರ್ ವ್ಯಾಸದ ಗೋಳವನ್ನು ಹೊಂದಿದ ಈ ತಾರಾಲಯವು, ನಾನು ಈ ವರೆಗೆ ನೋಡಿದ ಎಲ್ಲ ತಾರಾಲಯಗಳಿಗಿಂತಲೂ ಹೆಚ್ಚು ವಿಶಾಲವಾಗಿ, ಸುಸಜ್ಜಿತವಾಗಿತ್ತು. ಬಾಹ್ಯಾಕಾಶದಲ್ಲಿ ಮಾಯಾ ನಾಗರಿಕತೆಯೆಂಬ ಕಾಲ್ಪನಿಕ ಜನಜೀವನದ ಬಗ್ಗೆ ಪ್ರದರ್ಶನಗೊಂಡ ಚಿತ್ರವು ಅತ್ಯಂತ ಪ್ರಭಾವಶಾಲಿ ಹಾಗೂ ಕುತೂಹಲಕಾರಿಯಾಗಿತ್ತು. ದೃಶ್ಯಗಳೊಂದಿಗೆ ನಾವೂ ಮಿಳಿತಗೊಂಡ ರೀತಿಯ ಅನುಭವವು ನಿಜಕ್ಕೂ ಅದ್ಭುತ! ಪಾತ್ರಗಳ ನಡುವೆಯೇ ನಮ್ಮ ಓಡಾಟವಿದ್ದಂತೆ ಅನಿಸಿ; ಹಳ್ಳ, ಕೊಳ್ಳ, ನದಿಯ ಹರಿವು, ಸಮುದ್ರದ ಅಲೆ, ಆಕಾಶದಲ್ಲಿ ಹಾರಾಟ, ಅಗ್ನಿ ಜ್ವಾಲೆ, ಮಳೆ, ಬಿರುಗಾಳಿ…ಹೀಗೆ ಎಲ್ಲವೂ ನಮ್ಮೊಡನೆ, ನಮ್ಮ ಅಕ್ಕಪಕ್ಕ, ನಾವೂ ಅದರಲ್ಲೊಂದು ಪಾತ್ರವಾಗಿ ಹೋಗುವ ಪರಿ… ವಿವರಿಸಲಸಾಧ್ಯವಾದ ವಿಶೇಷ ಅನುಭೂತಿಯನ್ನು ನೀಡಿತು!

ಅಲ್ಲಿಂದ ಹಿಂತಿರುಗಿದಾಗ ಸಂಜೆಗತ್ತಲು ಕವಿದಿತ್ತು. ಮರುದಿನ ಪ್ರೀತಿಯ ಮಕ್ಕಳನ್ನು, ಮುದ್ದು ಮೊಮ್ಮಗಳನ್ನು ಬಿಟ್ಟು ಹೊರಡುವ ಯೋಚನೆಯೇ ತಲೆತುಂಬಿತ್ತು.  ನಮ್ಮ ಅಮೆರಿಕ ಪ್ರಯಾಣ ಹಾಗೂ ಅಲ್ಲಿಯ ಆರು ತಿಂಗಳ ವಾಸ, ವಿವಿಧ ಕಡೆಗಳಲ್ಲಿ ಪಡೆದ ಅನೇಕ ಅನುಭವಗಳು ಮನದ ಭಿತ್ತಿಯಲ್ಲಿ ಆಳವಾಗಿ ಚಿತ್ರಿಸಲ್ಪಟ್ಟು ಜೀವನೋತ್ಸಹವನ್ನು ಹೆಚ್ಚಿಸಿದುದರಲ್ಲಿ ಸಂಶಯವಿಲ್ಲ.  ತಾರೀಕು 13.02.2010 ರಿಂದ  04.08.2010 ರ ವರೆಗಿನ ನನ್ನ ಅನುಭವಗಳ ಎಳೆಗಳನ್ನು ತಮ್ಮ ಮುಂದೆ ಬಿಡಿಸಿಡಲು ಪ್ರಯತ್ನಿಸಿದ್ದೇನೆ… ಇದು ತಮ್ಮಂತಹ ಸಹೃದಯೀ ಸಾಹಿತ್ಯ ಬಂಧುಗಳ ನಿರಂತರ ಪ್ರೋತ್ಸಾಹದ ಫಲವೆಂಬುದು ಕೂಡಾ  ಅಷ್ಟೇ ಸತ್ಯ.

ಮುಂದಿನ ಎಳೆಯನ್ನು, ಮುಂದಿನ ನಾಲ್ಕು ವರ್ಷಗಳ ಬಳಿಕದ ಕಾಲಘಟ್ಟಕ್ಕೆ ಇಳಿದು ತಮ್ಮ ಮುಂದೆ ಬಿಡಿಸಿಡಲು ಬರುವೆ…

ನಾಲ್ಕು ವರ್ಷಗಳ ಬಳಿಕವೇನು..??

 ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:   http://surahonne.com/?p=35844

–ಶಂಕರಿ ಶರ್ಮ, ಪುತ್ತೂರು. 

(ಮುಂದುವರಿಯುವುದು….)

5 Responses

  1. ನಿಮ್ಮ ಅಮೆರಿಕ ಪ್ರವಾಸ ಕಥನದ …ಅನುಭವದ ಅಭಿವ್ಯಕ್ತಿ… ಮುಗಿದೇಹೋಯತೇ…ಎಂದುಕೊಂಡು ನಿರಾಸೆಯಾದರೂ..ಮತ್ತೆ …ಮುಂದಿನ ಘಟ್ಟದಲ್ಲಿಬರುತ್ತದೆ ಎಂಬ ಸೂಚನೆ..ಮುದಕೊಟ್ಟಿತು…ಬೇಗ ಬರಲಿ.. ಎಂದು ಬಯಸುತ್ತೇನೆ…ಇದುವರೆಗೆ ನೀಡಿದ ಪ್ರವಾಸ ಕಥನ ಕ್ಕೆ ಧನ್ಯವಾದಗಳು ಮೇಡಂ.

    • . ಶಂಕರಿ ಶರ್ಮ says:

      ತಮ್ಮ ಪ್ರೀತಿ, ಅಭಿಮಾನಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮೇಡಂ.

  2. ನಯನ ಬಜಕೂಡ್ಲು says:

    Nice

  3. Padma Anand says:

    ಖಂಡಿತವಾಗಿಯೂ ನಿಮ್ಮ ಅಮೆರಿಕ ಪ್ರವಾಸ ಅವಿಸ್ಮರಣೀಯವೇ ಸರಿ. ಅದನ್ನು ನಮಗೆ ಉಣಬಡಿಸಿದ ಪರಿ ಅಮೋಘವೇ ಹೌದು. ತುಂಬು ಮನದ ಅಭಿನಂದನೆಗಳು.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: