ಸೌಂದರ್ಯವೆಲ್ಲಿದೆ?

Share Button

ಸೌಂದರ್ಯ ಹಾಗೂ ಆಕರ್ಷಣೆ ಈ ಎರಡೂ ಪದಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದೇ ಕರೆಯಬಹುದು. ಹೆಣ್ಣಿನ ಸೌಂದರ್ಯವೆನ್ನುವುದು ಎಲ್ಲರನ್ನೂ ಕ್ಷಣ ಮಾತ್ರದಲ್ಲಿ ಸೆರೆ ಹಿಡಿಯಬಲ್ಲ ಚುಂಬಕ ಶಕ್ತಿಯುಳ್ಳ ಒಂದು ವಿಶಿಷ್ಟ ಆಭರಣ. ಸೌಂದರ್ಯ ಹೆಣ್ಣಿಗೆ ಕಳಶಪಾಯವಿದ್ದಂತೆ. ಅನುರೂಪ ಸುಂದರಿಯನ್ನು ಎಲ್ಲರೂ ಗುರುತಿಸಿ ಮನ್ನಣೆ ನೀಡುತ್ತಾರೆ. ದೈವದತ್ತವಾದ ಈ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಸಲುವಾಗಿ ಹೆಣ್ಣು ತನ್ನನ್ನು ತಾನು ಸೌಂದರ್ಯವರ್ಧಕಗಳಿಂದ ಹಾಗೂ ಪ್ರಸಾಧನಗಳಿಂದ ಶೃಂಗರಿಸಿ ಸಂತೋಷ ಪಡುತ್ತಾಳೆ. ತಾನು ಚೆನ್ನಾಗಿ ಕಾಣಬೇಕೆಂದು ಪ್ರತೀ ಹೆಣ್ಣು ಬಯಸುತ್ತಾಳೆ. ಯಾವುದೇ ಸಭೆ, ಸಮಾರಂಭಗಳಿಗೆ ಹೋದಾಗ ಮುದ್ದು, ಮುದ್ದಾಗಿ ಓಡಾಡುತ್ತಿರುವ ಅಂದದ ಹೆಣ್ಣು ಮಕ್ಕಳನ್ನು ನೋಡುವುದೇ ಚಂದ. ಸೀರೆಯನ್ನು ಉಟ್ಟು, ಮೈ ತುಂಬಾ ಆಭರಣಗಳನ್ನು ಧರಿಸಿ ಸಭೆ ಸಮಾರಂಭಗಳಲ್ಲಿ ಓಡಾಡುವ ಹೆಣ್ಣು ಮಕ್ಕಳನ್ನು ಎಲ್ಲರೂ ನೋಡಲು ಇಷ್ಟ ಪಡುತ್ತಾರೆ.

ಮೋಹಕವಾದ ಈ ಚೆಲುವನ್ನು ಹೆಣ್ಣು ಆಭರಣಗಳಿಂದ ಸಿಂಗರಿಸಿದಾಗ ಇನ್ನೂ ಅಂದವಾಗಿ ಕಾಣುತ್ತಾಳೆ. ತುಂಬಿದ ಸಭೆಯಲ್ಲೊಂದು ಲಾವಣ್ಯವತಿ ಪ್ರತಿಯೊಬ್ಬರ ಗಮನವನ್ನು ತನ್ನತ್ತ ಆಕರ್ಷಿಸುತ್ತಾಳೆ. ರೂಪವತಿ ಸ್ತ್ರೀಯು ಎಲ್ಲಿದ್ದರೂ ಎದ್ದು ಕಾಣುತ್ತಿರುತ್ತಾಳೆ. ತನ್ನ ಒನಪು, ವೈಯಾರಗಳಿಂದ, ಬಿಂಕು, ಬಿನ್ನಾಣಗಳಿಂದ ಅದೆಷ್ಟೋ ಸ್ತ್ರೀಯರು ಪುರುಷರನ್ನು ಮರುಳುಗೊಳಿಸಿದ ಬಗ್ಗೆ ನಾವು ಪ್ರತಿನಿತ್ಯ ಕಾಣುತ್ತೇವೆ, ಕೇಳುತ್ತೇವೆ. ಹೆಣ್ಣಿನ ಸುಂದರತೆಗೆ ಮನಸೋತು ತನ್ನ ರಾಜ್ಯ, ಧನ, ಕನಕಗಳನ್ನು ಕಳೆದುಕೊಂಡ ಉಲ್ಲೇಖಗಳು ಪುರಾಣ ಹಾಗೂ ಇತಿಹಾಸದಿಂದ ತಿಳಿದು ಬರುತ್ತದೆ. ಹೆಣ್ಣಿನ ಅಪ್ರತಿಮ ಸುಂದರತೆಯ ಮೋಹಪಾಶಕ್ಕೆ ಸಿಲುಕಿ ನಾಶಗೊಂಡ ಋಷಿಮುನಿಗಳ ಬಗ್ಗೆ ನಾವು ಕೇಳಿಪಟ್ಟಿದ್ದೇವೆ. ಒಟ್ಟಿನಲ್ಲಿ ಸೌಂದರ್ಯಕ್ಕೆ ಎಲ್ಲರೂ ಮರುಳಾಗಿರುವುದಂತೂ ಸತ್ಯ. ಈ ಸೌಂದರ್ಯವೆಂಬುದು ಹೆಣ್ಣಿಗೆ ದೈವದತ್ತವಾಗಿ ಬಂದ ವರದಾನವಾಗಿದೆ.

ಆದರೆ ಕೆಲವುಹೆಣ್ಣುಮಕ್ಕಳಿಗೆ ಈ ವರದಾನ ಪ್ರಾಪ್ತವಾಗಿರುವುದಿಲ್ಲ. ಈ ಭಾಗ್ಯದಿಂದ ವಂಚಿತರಾದ ಹಲವರಲ್ಲಿ ನಾನೂ ಒಬ್ಬಳು. ನನ್ನ ಬಾಲ್ಯವನ್ನು ನೆನಪಿಸುವುದಾದರೆ, ಒಮ್ಮೆ ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ಇತ್ತು. ಆಗ ಶೇಕ್ಸ್‌ಪಿಯರ್‌ನ ‘ಮರ್ಚಂಟ್ ಆಫ್ ವೆನಿಸ್’ ನಾಟಕದಲ್ಲಿ ಪೋರ್ಷಿಯಾ ಪಾತ್ರಕ್ಕೆ ನನ್ನ ತರಗತಿಯಲ್ಲಿ ಚೆಂದದ ಹುಡುಗಿಯನ್ನು ಆಯ್ಕೆ ಮಾಡಿದ್ದರು. ನನಗೂ ಆ ಪಾತ್ರ ಮಾಡಲು ಮನಸಿತ್ತು. ನಾನು ನಟನೆಯಲ್ಲಿ ಚುರುಕಾಗಿದ್ದರೂ, ಟೀಚರ್ ರೂಪಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದರು. ಯಾಕೆಂದರೆ ಆ ಪಾತ್ರದಾರಿ ಅಪ್ರತಿಮ ಸುಂದರಿ. ಆಗ ನಾನು ಸಂಜೆ ಅಮ್ಮನ ಬಳಿ ಕೇಳಿದ್ದೆ. ನನ್ನನ್ನು ಯಾಕೆ ಸಾಧಾರಣ ರೂಪವಾಗಿ ಹುಟ್ಟಿಸಿದೆ ? ಆಗ ಅಮ್ಮ ಹೇಳಿದ ಆ ಮಾತು ನನಗೆ ಈಗಲೂ ನೆನಪಿದೆ. ಚಂದ ಯಾಕೆ? ದೇವರು ಕೈ ಕಾಲು ಸರಿಯಾಗಿ ಕೊಟ್ಟು ಹುಟ್ಟಿಸಿದ್ದಾನೆ. ಅದಕ್ಕೆ ನಾವು ಕೃತಜ್ಞತೆಯಿಂದ ಇರಬೇಕು. ಒಳ್ಳೆ ವಿದ್ಯೆ, ಬುದ್ಧಿ ಕಲಿತು ಉತ್ತಮ ವ್ಯಕ್ತಿಯಾಗು ಎಂದು ಸಮಾಧಾನ ಪಡಿಸಿದ್ದರು.

ಅಂದಿನಿಂದ ನಾನು ಯಾವತ್ತೂ ರೂಪದ ಬಗ್ಗೆ ತಲೆ ಕೆಡಿಸಲಿಲ್ಲ. ಚೆನ್ನಾಗಿ ಕಲಿತು ಉತ್ತಮವಾಗಿ ಬದುಕಬೇಕೆಂಬುದೇ ನನ್ನ ಗುರಿಯಾಗಿತ್ತು. ಒಳ್ಳೆಯ ಬುದ್ಧಿ, ಗುಣ, ನಡತೆ, ವಿನಯ, ಸಕಾರಾತ್ಮಕ ನಡವಳಿಕೆಗಳಿಂದ ಎಲ್ಲರನ್ನೂ ಆಕರ್ಷಿಸಲು ಸಾಧ್ಯ ಎಂಬುದು ನನಗೆ ಮನದಟ್ಟಾಗಿತ್ತು. ನಮ್ಮ ಸ್ವಸ್ಥಕ್ಕಾಗಿ ನಮ್ಮ ಶರೀರವನ್ನು ನಾವು ಕಾಪಾಡಿಕೊಳ್ಳುವುದು ಅಗತ್ಯ ಎಂದು ಅರಿವಾಗಿತ್ತು. ನಂತರ ನೌಕರಿ ಸಿಕ್ಕಿ ಮದುವೆಯಾಗಿ ಮಗಳು ಆದ ಬಳಿಕವೂ ನಿತ್ಯ ವ್ಯಾಯಾಮ, ನಡಿಗೆ ಹಾಗೂ ಇನ್ನಿತರ ವಿಧಾನಗಳಿಂದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದೆ. ಅಲ್ಲದೆ ಮನೆಗೆಲಸ ಇತ್ಯಾದಿಗಳ ನಡುವೆಯೂ ಕಛೇರಿಗೆ ತೆರಳುವಾಗ ವೈಯಕ್ತಿಕ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು, ಯಾವಾಗಲೂ ನೀಟಾಗಿ, ಇರಲು ಪ್ರಯತ್ನಿಸುತ್ತಿದ್ದೆ. ಮುಖ್ಯವಾಗಿ ಮಾನಸಿಕವಾಗಿ ನೆಮ್ಮದಿಯಿಂದ ಇದ್ದರೆ ನಮ್ಮ ಆಂತರಿಕ ಸೌಂದರ್ಯವು ಮುಖದ ಮೇಲೆ ಪ್ರತಿಫಲಿಸುವುದು ಎಂಬ ಸತ್ಯದ ಅರಿವಾಯಿತು. ಹುಟ್ಟಿನಿಂದ ರೂಪ, ಲಾವಣ್ಯಗಳನ್ನು ಪಡೆದುಕೊಂಡು ಬರದಿದ್ದರೂ, ನಮ್ಮ ನಮ್ಮಲ್ಲಿರುವ ಪ್ರತಿಭೆಗಳು, ಆಚಾರ ವಿಚಾರಗಳು ನಮ್ಮನ್ನು ಎಲ್ಲರಿಗಿಂತಲೂ ಸುಂದರವಾಗಿಸುವಲ್ಲಿ ಸಂದೇಹವೇ ಇಲ್ಲ. ಸದ್ಗುಣವೇ ಸೌಂದರ್ಯದ ನಿಜವಾದ ಮಾಪಕವೇ ಹೊರತು ರೂಪವಲ್ಲ. ಸಾಮಾನ್ಯ ರೂಪಿನ ಸರಳವಾದ ಸೀರೆಯುಟ್ಟ, ನಿರಾಭರಣವಾಗಿರುವ ಚುರುಕು ಹುಡುಗಿ ಎಲ್ಲರ ಗಮನವನ್ನು ಸೆಳೆಯುತ್ತಾಳೆ. ಹೆಣ್ಣಿನ ಅನುರೂಪದಲ್ಲಿ ಅವಳ ಮುಗ್ದ ಸೌಂದರ್ಯವು ಅಡಗಿದೆ. ಆತ್ಮ ವಿಶ್ವಾಸವು ಕಣ್ಣಿನ ಹೊಳಪನ್ನು ಹೆಚ್ಚಿಸುತ್ತದಲ್ಲದೆ ಮುಖದ ಸೌಂದರ್ಯಕ್ಕೆ ಮೆರುಗನ್ನು ಕೊಡುತ್ತದೆ. ಯಾವತ್ತೂ ನಮ್ಮಲ್ಲಿರುವ ಪ್ರತಿಭೆ, ನಮ್ಮ ವ್ಯಕ್ತಿತ್ವ ಹಾಗೂ ನಮ್ಮ ನಡವಳಿಕೆಗಳು ನಮ್ಮ ಸೌಂದರ್ಯದ ಮಾನದಂಡಗಳಾಗಿವೆ.

PC: Internet

ಆದರೆ ಮಾನವೀಯ ಮೌಲ್ಯಗಳು ಹಾಗೂ ನೈತಿಕತೆಗಳು ಕುಸಿಯುತ್ತಿರುವ ಈ ಜಗತ್ತಿನಲ್ಲಿ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡುವುದು ಕಂಡು ಬರುತ್ತದೆ. ಕೆಲವೊಮ್ಮೆ ಗುಣ, ಬುದ್ದಿವಂತಿಕೆ, ಸಜ್ಜನಿಕೆ, ಜ್ಞಾನಗಳಿಗಿಂತ ಹೆಚ್ಚಾಗಿ ಸೌಂದರ್ಯ ವ್ಯಕ್ತಿಯನ್ನು ಅಳೆಯುವ ಮಾಪಕವಾಗಿರುವುದು ನಿಜಕ್ಕೂ ಖೇದಕರ. ಕಾರ್ಪೋರೇಟ್ ಪ್ರಪಂಚದಲ್ಲಿ ವ್ಯಕ್ತಿಯ ಒಳ್ಳೆತನವನ್ನು ಅವರ ವೇಷಭೂಷಣ, ಆಸ್ತಿ, ಅಂತಸ್ತು ನೋಡಿ ಅಳೆಯುವುದನ್ನು ಕಾಣಬಹುದು. ಆದ್ದರಿಂದ ಬಾಹ್ಯ ಸೌಂದರ್ಯ ಶಾಶ್ವತವಲ್ಲ. ನಿಜವಾದ ಸೌಂದರ್ಯವಿರುವುದು ನಮ್ಮ ಒಳಗಿನ ಅಂತರಾತ್ಮದಲ್ಲಿ ಮಾತ್ರ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಾಗಿದೆ. ಸೌಂದರ್ಯ ನೋಡುವವರ ಕಣ್ಣಲ್ಲಿ ಎಂಬಂತೆ ಪ್ರತಿಯೊಬ್ಬರೂ ಆಂತರ್ಯದಿಂದ ಸುಂದರವಾಗಿರುವುದು ಮುಖ್ಯವಾಗಿದೆ.

ಶೈಲಾರಾಣಿ. ಬಿ. ಮಂಗಳೂರು

6 Responses

 1. ಡಾ. ಕೃಷ್ಣಪ್ರಭ ಎಂ says:

  ಚಂದದ ಬರಹ…ಬಾಹ್ಯ ಸೌಂದರ್ಯದ ಜೊತೆ ಅಂತರಿಕ ಸೌಂದರ್ಯವೂ ಅಗತ್ಯ ಅನ್ನುವ ಸಂದೇಶವನ್ನೂ ನೀಡಿರುವಿರಿ

 2. ಉತ್ತಮ ಲೇಖನ… ಸೌದರ್ಯ…ನಾವು ನೋಡುವ ದೃಷ್ಟಿ ಯಲ್ಲಿರುತ್ತದೆ…ಬೆಳೆಸಿಕೊಳ್ಳವ ವ್ಯಕ್ತಿತ್ವದಲ್ಲಿ ರುತ್ತದೆ….ಧನ್ಯವಾದಗಳು ಮೇಡಂ.

 3. Shakila says:

  Well written article. Inner beauty enhances the personality of an individual

 4. ನಯನ ಬಜಕೂಡ್ಲು says:

  Very nice

 5. . ಶಂಕರಿ ಶರ್ಮ says:

  ಇಂದಿನ ದಿನಗಳಲ್ಲಿ, ಹೆಚ್ಚಿನವರು ಬಾಹ್ಯ ಹಾಗೂ ಆಂತರಿಕ ಸೌಂದರ್ಯಗಳ ನಡುವಿನ ಅಗಾಧ ವ್ಯತ್ಯಾಸವನ್ನು ಅರಿಯದಿರುವು ನಿಜಕ್ಕೂ ಖೇದಕರ ಸಂಗತಿ… ಚಿಂತನಾತ್ಮಕ ಬರೆಹ, ಧನ್ಯವಾದಗಳು ಮೇಡಂ.

 6. Padma Anand says:

  ಸೌಂದರ್ಯದ ಕುರಿತಾದ ಸಮಂಜಸವಾದ ಅನಿಸಿಕೆ ಲೇಖನದಲ್ಲಿ ಸ್ಪುಟವಾಗಿ ಅಭಿವ್ಯಕ್ತಗೊಂಡಿದೆ. ಲೇಖಕಿಗೆ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: