ಕೇತಕಿ/ಕೇದಗೆ ಹೂವು..
ಬಲು ಅಪರೂಪದ ಹೂ ‘ಕೇದಗೆ ಅಥವಾ ಕೇತಕಿ’. ಅಸಲಿಗೆ ಇದು ಹೂವಿನಂತೆ ಕಾಣಿಸುವುದೇ ಇಲ್ಲ. ಹಳದಿ ಬಣ್ಣದ ತೆಂಗಿನ ಗರಿಯಂತೆ ಇರುತ್ತದೆ. ಮುಳ್ಳುಗಳುಳ್ಳ ಪೊದೆಯಂತಹ ಮರದಲ್ಲಿ ಬೆಳೆಯುವ ಕೇದಗೆಯ ಸಸ್ಯಶಾಸ್ತ್ರೀಯ ಹೆಸರು Pandanus odorifer. ಕೇದಗೆ ತನ್ನ ವಿಶಿಷ್ಟವಾದ ಸುಗಂಧದಿಂದ ಮನಸೆಳೆಯುತ್ತದೆ. ಇದರಿಂದಾಗಿ ಸುಗಂಧ ತೈಲ ಮತ್ತು ಪರ್ಫ್ಯೂಮ್ ಗಳ ತಯಾರಿಕೆಯಲ್ಲಿ ಕೇದಗೆಯನ್ನು ಬಳಸುತ್ತಾರೆ.
ನಮ್ಮ ಶಾಲಾದಿನಗಳಲ್ಲಿ ಶಾಲೆಗೆ ಹೊರಡುವ ಮುನ್ನ, ತಲೆಬಾಚಿ ಜಡೆ ಹೆಣೆದು, ಮನೆಯಂಗಳದಲ್ಲಿ ಬೆಳೆದ ಮಲ್ಲಿಗೆ, ಜಾಜಿಮಲ್ಲಿಗೆ, ಗುಲಾಬಿ, ಸ್ಪಟಿಕ ಹೀಗೆ ಯಾವುದಾದರೂ ಹೂವನ್ನು ಜಡೆಗೆ ಮುಡಿದುಕೊಂಡೇ ಶಾಲೆಗೆ ಹೋಗುತ್ತಿದ್ದೆವು. ಅಪರೂಪಕ್ಕೆ ಕಾಡಿನಲ್ಲಿ ಲಭಿಸುವ ಬಕುಳ, ಸುರಗಿ ಹಾಗೂ ಕೇದಗೆಯನ್ನೂ ಮುಡಿಯುತ್ತಿದ್ದೆವು. ಇತರ ಹೂವುಗಳಂತೆ ಕೇದಗೆಯನ್ನು ದಾರದಲ್ಲಿ ಪೋಣಿಸಲಾಗುವುದಿಲ್ಲ. ಹಳದಿ ಬಣ್ಣದ ಕೇದಗೆಯನ್ನು ಅರ್ಧವಾಗಿ ಮಡಚಿ, ತ್ರಿಕೋನಾಕಾರವಾಗಿ , ಹೇರ್ ಪಿನ್ನಿನ ಸಹಾಯದಿಂದ ಮುಡಿಗೇರಿಸಿದರಾಯಿತು. ಪುಟ್ಟ ಕಿರೀಟ ತೊಟ್ಟಷ್ಟೇ ಹೆಮ್ಮೆಯಿಂದ ಬೀಗುತ್ತಿದ್ದೆವು. ಕೆಲವೊಮ್ಮೆ ಟೀಚರ್ ಗೆ ಮತ್ತು ಗೆಳತಿಯರಿಗೆಂದು ಹೂವನ್ನು ಕೊಂಡೊಯ್ಯುತ್ತಿದ್ದೆವು.
ಪ್ರಕೃತಿಯಲ್ಲಿ ಕಾಣಸಿಗುವ ಸೋಜಿಗಗಳೆಷ್ಟೋ. ನಾವು ಮುಡಿಯುವ ಕೇದಿಗೆ ಗರಿಗಳು ನಿಜವಾದ ಹೂವಿನ ಗೊಂಚಲನ್ನು ಮುಚ್ಚಿರುತ್ತವೆ, ಅದೂ ಗಂಡು ಮರದಲ್ಲಿ ಮಾತ್ರ. ಹೆಣ್ಣು ಮರದಲ್ಲಿ ಹೂಗಳ ಗೊಂಚಲು ಹಲಸಿನ ಗುಜ್ಜೆ / ಅನಾನಸ್ ರೀತಿ ಕಾಣಿಸುತ್ತವೆ.
ಕೆಲವು ಸಮುದಾಯದಲ್ಲಿ ಪ್ರಚಲಿತವಿರುವ ನಾಗಾರಾಧನೆಯ ಸಂದರ್ಭದಲ್ಲಿ ಕೇದಗೆ ಹೂವನ್ನು ನಾಗದೇವರಿಗೆ ಪ್ರಿಯವಾದ ಹೂವೆಂಬ ಭಾವದಿಂದ ಅರ್ಪಿಸುವ ಪದ್ಧತಿಯಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ನಾಗರಪಂಚಮಿಯಂದು ಕೇದಗೆ ಹೂವಿಗೆ ಬೇಡಿಕೆ ಹೆಚ್ಚು.
ಆದರೆ ಕೇದಗೆ ಹೂವನ್ನು ಶಿವಪೂಜೆಗೆ ಬಳಸಬಾರದೆಂಬ ಆಚರಣೆ ಇದೆ. ಅದಕ್ಕೆ ಹಿನ್ನೆಲೆಯಾಗಿ ಒಂದು ಕಥೆ ಹೀಗಿದೆ. ವಿಶ್ವಸೃಷ್ಟಿಯ ಯಾವುದೋ ಒಂದು ಕಾಲದಲ್ಲಿ, ವಿಷ್ಣು ಮತ್ತು ಬ್ರಹ್ಮ ಅವರಿಗೆ ಒಂದು ಬೃಹತ್ತಾದ ಶಿವಲಿಂಗ ಗೋಚರಿಸಿತಂತೆ. ಇದರ ಆದಿ(ತುದಿ) ಮತ್ತು ಅಂತ್ಯ(ಬುಡ) ಎಲ್ಲಿ ವರೆಗೆ ಇದೆಯೋ ನೋಡೋಣವೆಂದು ಅವರಿಬ್ಬರು ಪಣತೊಟ್ಟರು. ವಿಷ್ಣುವು ವರಾಹರೂಪಿಯಾಗಿ ಭೂಮಿಯನ್ನು ಅಗೆಯುತ್ತಾ, ಶಿವಲಿಂಗದ ಮೂಲವನ್ನು ಹುಡುಕಲು ಹೊರಟ. ಬ್ರಹ್ಮನು ಹಂಸ ರೂಪ ತಾಳಿ ಆಕಾಶದಲ್ಲಿ ಹಾರಾಡುತ್ತಾ ಶಿವಲಿಂಗದ ತುದಿಯನ್ನು ತಲಪಲು ಹೊರಟ. ಬಹಳಷ್ಟು ಪ್ರಯತ್ನಿಸಿದರೂ ಇಬ್ಬರಿಗೂ ತಮ್ಮ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ತನ್ನ ಪ್ರಯತ್ನ ವಿಫಲವಾದಾಗ ವಿಷ್ಣು ಶಿವನಿಗೆ ವಂದಿಸಿ ಆತನನ್ನು ಬ್ರಹ್ಮಾಂಡ ಸ್ವರೂಪಿ ಎಂದು ಒಪ್ಪಿಕೊಂಡ.
ಬ್ರಹ್ಮನೂ ಶಿವಲಿಂಗದ ತುದಿಯನ್ನು ತಲಪಲು ವಿಫಲನಾದರೂ ಸೋಲೊಪ್ಪಲು ಮನಸ್ಸಿಲ್ಲದೆ ಇನ್ನೂ ಹಾರಾಡುತ್ತಿರುವಾಗ ಆಕಾಶದಲ್ಲಿ ಒಂದು ಕೇತಕಿ ಪುಷ್ಪವು ಮೇಲಿನಿಂದ ಕೆಳಕ್ಕೆ ಬರುವುದನ್ನು ಕಂಡನು. ಕೇತಕಿಯು ತಾನು ಶಿವಲಿಂಗದ ಮೇಲೆ ಇರಿಸಲಾದ ಹೂವೆಂದು ಹೇಳಿತು. ಬ್ರಹ್ಮನು, ತಾನು ಶಿವಲಿಂಗದ ಆದಿಯನ್ನು ತಲಪಿದುದರ ಬಗ್ಗೆ ಸಾಕ್ಷಿ ನುಡಿಯಬೇಕೆಂದು ಕೇತಕಿಗೆ ಹೇಳಿದನು. ಅವರಿಬ್ಬರು ಶಿವನ ಬಳಿ ಹೋದರು. ಬ್ರಹ್ಮನು ತಾನು ಶಿವಲಿಂಗದ ತುದಿಯನ್ನು ತಲಪಿದೆನೆಂದನು. ಕೇತಕಿಯು ಇದನ್ನು ತಾನೇ ನೋಡಿದೆನೆಂದು ಸುಳ್ಳು ಸಾಕ್ಷ್ಯ ನುಡಿಯಿತು, ಎಲ್ಲವನ್ನೂ ಬಲ್ಲ ಶಿವನು ಇವರ ಸುಳ್ಳುಕಥೆ ಕೇಳಿ ಕುಪಿತನಾಗಿ, ಇನ್ನು ಮುಂದೆ ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲಬಾರದು ಎಂದೂ, ಕೇತಕಿಯನ್ನು ಶಿವಪೂಜೆಗೆ ಬಳಸಬಾರದೆಂದೂ ಶಾಪವಿತ್ತನು.
ಹೀಗೆ, ಕೇತಕಿ ಹೂವು ಶಿವಪೂಜೆಗೆ ನಿಷಿದ್ಧವಾಯಿತು!
– ಹೇಮಮಾಲಾ. ಬಿ.
ಕಥೆ ಚೆನ್ನಾಗಿದೆ .ಕೇದಗೆ ನನ್ನ ಹುಟ್ಟಿದ ಮನೆಯಲ್ಲಿ ತುಂಬಾ ಇದೆ .ಆದರೆ ಅದರ ಘಮಘಮಕ್ಕೆ ಹಾವು ಬರುತ್ತದೆಯೆಂದು ಅಲ್ಲಿ ಹೋಗಲು ಬಿಡುತ್ತಿರಲಿಲ್ಲ .ಶಾಲಾ ಪುಸ್ತಕದೆಡೆಯಲ್ಲಿ ಇಟ್ಟು ನಾವೂ ಘಮಗುಡುತ್ತಿದ್ದೆವು. ಈಗ ಕೇದಗೆಯ ಸೀಸನ್ .ನೆನಪು ಮಾಡಿ ಕೊಟ್ಟಿದ್ದು ಸುರಹೊನ್ನೆ.
ನಮಸ್ತೇ. ಒಳ್ಳೆಯ ಲೇಖನ. ಓದಿದೆ.
ಎಂಟು ವರ್ಷಗಳ ಹಿಂದೆ “ವಿಚಿತ್ರಾನ್ನ” ಅಂಕಣದಲ್ಲಿ ನಾನೂ ಒಮ್ಮೆ ’ಕೇದಗೆ’ ಬಗ್ಗೆ ಬರೆದಿದ್ದೆ. ಇಲ್ಲಿದೆ ನೋಡಿ. http://kannada.oneindia.in/column/vichitranna/2006/281106kedage1.html
ತ್ರಿಮೂರ್ತಿಗಳ ದರ್ಪದ ಧಗೆ ಮತ್ತು ಕೇದಗೆ
kannada.oneindia.in
ಪರಮ ಪರಿಮಳದ ಕೇದಗೆ ಪುಷ್ಪಕ್ಕೆ ಪೂಜಾಪಾವಿತ್ರ್ಯವಿಲ್ಲ, ಶಾಪಗ್ರಸ್ತವಾಗಿರುವುದರಿಂದ ಪರಮಾತ್ಮನ ಪಾದದಡಿಯಲ್ಲಿ ಪವಡಿಸಿ ಪಾವನವಾಗುವ ಪುಣ್ಯಭಾಗ್ಯವಿಲ್ಲ. ಯಾಕೆ? ಯಾವ ಪಾಪಕ್ಕಾಗಿ ಕೇದಗೆಗೆ ಈ ಶಾಪ? ವಿಚಿತ್ರಾನ್ನ-216ರಲ್ಲಿ ಕೇದಗೆಯ ಕತೆ.ಶ್ರೀವತ್ಸ ಜೋಶಿ‘ಪೂಜಿಸಲೆಂದೇ ಹೂಗಳ ತಂದೆ…’ ಎಂದು ಕನ್ನಡಚಿತ್ರಗೀತೆಯಾಗಿ ಹಾಡಬಹುದು, ಅಥವಾ ‘ನಾನಾವಿಧ ಪರಿಮಳ ಪುಷ್ಪಾಣಿ ಸಮರ್ಪಯ…
Very unique and informative madam! Nice..
ಇದನ್ನ ಹಳ್ಳಿ ಕಡೆ ‘ತಾಳೇ ಹೂವು’ ಅಂತ ಕರೆಯುತ್ತಾರೆ. ತುಂಬಾ ಸುವಾಸನೆ.
ನಾಗನ ಪೂಜೆಗೆ ಈ ಕೇದಗೆ ತುಂಬಾ ವಿಶೇಷ……ಶ್ರಾವಣ ಮಾಸದಲ್ಲಿ ಹೆಚ್ಚಿಗೆ ಸಿಗುತ್ತೆ, ಈ ಕೇದಗೆ.
ಕೇದಗೆ..ನೋಡಿ ಆನಂದವಾಯಿತು.
ಹೌದು ಗೊತ್ತಿದೆ. ನಮ್ಮಜ್ಜ ಹೇಳುತ್ತಿದ್ದರು. ಬಾಲ್ಯದ ಕಥೆಗಳು ನೆನಪಾದವು.
Thava pooja karishyame yek bilvam shivarpanam..Thumba channagide.
shaalege hogo time li ajji jadege mudsi kalistidru ega nodoko siktilla..
hunnimeya ratriyalli emba cinema ide adaralli hunnime ratri ie kedage hoo kampu beeridaga sarpagalu akarshanegolagaguthave endu thorisiruthare …
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ನಾವು ಬಳಸುವುದು ಕೇದಿಗೆ ಹೂವಲ್ಲ !:)Pandanus odoratissimus ,ಎಂಬ ಸಸ್ಯಶಾಸ್ತ್ರೀಯ ಹೆಸರಿನ Family : Pandanaceae ಕುಟುಂಬಕ್ಕೆ ಸೇರಿದ ನಾವು ಬಳಸುವ ಕೇದಿಗೆ ಅಂದರೆ ಸುವಾಸನೆ ಇರುವ ಎಲೆಗಳು ,ಚಿತ್ರದಲ್ಲಿ ಹೂ ಗೊಂಚಲನ್ನು ಆವರಿಸಿರುವ ಮಾರ್ಪಾಡಾದ ಎಲೆಗಳು ( Bracts ) ನಡುವೆ ಇರುವ ದಿಂಡಿನಲ್ಲಿ ನೂರಾರು ಗಂಡು ಹೂವುಗಳಿವೆ ! ಹೆಣ್ಣು ಹೂ ಗೊಂಚಲು pineapple ನಂತೆ ಕಾಣುವ ಸಂಯುಕ್ತ ಹಣ್ಣಾಗಿ ಬೆಳೆಯುತ್ತೆ !
ಈ ಹೂವಿನ ಎಲೆಗಳಿಂದ ತಯಾರಿಸುವ ಮೂಡೆ (ಕಡುಬು) ಯ ಬಗ್ಗೆ ಪ್ರಸ್ತಾಪಿಸಿದ್ದರೆ ಇನ್ನಷ್ಟು ಘಮಘಮಿಸುತ್ತಿತ್ತು… 🙂
ಕೇದಗೆ ಹೂವಿನ ಎಲೆಗಳಿಂದ ಮೂಡೆ (ಕಡುಬು) ತಯಾರಿಸುವ ಬಗ್ಗೆ ಗೊತ್ತಿರಲಿಲ್ಲ .. ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು.
ಚೆನ್ನಾಗಿದೆ