ಲೋಕಪಾವನಿ ಗಂಗೆ
ಹಿಮಗಿರಿಯ ಶೃಂಗಗಳಿಂದ ಧಾರೆ ಧಾರೆಯಾಗಿ ಹರಿದುಬಂದ ಭಾಗೀರಥಿ ನದಿಯು, ಅಲಕನಂದಾ, ಸರಸ್ವತಿ, ಮಂದಾಕಿನಿ, ಯಮುನೆಯರೊಂದಿಗೆ ಸಂಗಮಿಸಿಕೊಂಡು ಮುಂದೆ ಗಂಗೆಯಾಗಿ ಪರಮಪವಿತ್ರಳಾಗಿ ಭಾರತದೇಶದ ನೆಲವನ್ನು ಪಾವನಗೊಳಿಸುತ್ತಾಳೆ. ಇಂತಹ ಸಂಗಮದಲ್ಲಿ ಹರಿದ್ವಾರದಲ್ಲಿ ಮಿಂದು, ಭವದ ಬಂಧನದಲ್ಲಿ ಮಲಿನಗೊಂಡ, ಕಲುಷಿತಗೊಂಡ ದೇಹ ಮನಸ್ಸುಗಳನ್ನು ಪರಿಶುದ್ಧಗೊಳಿಸಿಕೊಂಡು ಪಾವಿತ್ರ್ಯದ ಭಾವದಲ್ಲಿ ಮನಸ್ಸನ್ನು ಹಸನಾಗಿಸಿಕೊಳ್ಳುವ, ಹಗುರಾಗಿಸಿಕೊಳ್ಳುವ ಮನುಷ್ಯನ ಭಾವಶುದ್ಧಿಗೆ ಗಂಗೆಯು ಸಾಕ್ಷಿಯಾಗುತ್ತಾಳೆ.
ನಮ್ಮ ಭಾರತದೇಶವೆಂದರೆ ಹಾಗೆ! ಭಾರತದ ಮನಸ್ಸೇ ಹಾಗೆ! ಸರ್ವರಲ್ಲೂ ಸರ್ವವಸ್ತುವಿನಲ್ಲೂ ದೈವತ್ವವನ್ನು ಕಾಣುವುದು. ಪಂಚಭೂತಗಳನ್ನು, ಮರ ಗಿಡಗಳನ್ನು ಪೂಜಿಸಿಕೊಂಡು ಬಂದಿರುವ ಮನುಷ್ಯ ನದಿಯ ನೀರನ್ನು ಅದು ಹೇಗೆ ತಾನೆ ಕೆಟ್ಟ ಶಬ್ಧಗಳಿಂದ ಅಪಹಾಸ್ಯ ಮಾಡಲು ಸಾಧ್ಯ? ಇಲ್ಲ, ಅದು ಸಾಧ್ಯವಿಲ್ಲ. ಯಾವುದರ ಮೇಲಿನ ವೈರತ್ವವನ್ನೋ, ಇನ್ನಾವುದರ ಮೇಲೋ ತೀರಿಸಿಕೊಳ್ಳಲು ಹವಣಿಸುತ್ತಿರುವ ಮನುಷ್ಯ ತನ್ನ ಸಂಕುಚಿತ ಯೋಚನಾಲಹರಿಗಳಿಂದ ತನ್ನ ಆಲೋಚನೆಗಳನ್ನೂ ಕುಬ್ಜಗೊಳಿಸಿಕೊಳ್ಳುತ್ತಿದ್ದಾನೆ. ಎಲ್ಲದಕ್ಕೂ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ, ಎಲ್ಲವನ್ನೂ ವೈಜ್ಞಾನಿಕವಾಗಿಯೇ ಸಿದ್ಧಪಡಿಸುತ್ತಾ ಹೋಗುವುದಾದರೆ, ನಮ್ಮ ಸಂಸ್ಕೃತಿಯಲ್ಲಿ ಬೆಳೆದುಬಂದ, ಆಚರಿಸಿಕೊಂಡು ಬಂದ ಆಚರಣೆಗಳಿಗೆಲ್ಲ ಅರ್ಥವೇ ಇಲ್ಲವೆಂಬ ಭಾವನೆಗಳನ್ನೂ ಮೂಡಿಸುವುದೇ ಆಗಿದೆ. ಅರ್ಥವಿಲ್ಲದ ಕೆಲವು ಮೂಢನಂಬಿಕೆಗಳನ್ನು ವಿರೋಧಿಸೋಣ. ಆದರೆ ಎಲ್ಲವೂ ಮೂಢನಂಬಿಕೆಗಳು ಎಂಬಂತೆ, ಭಾರತೀಯರು ಆಚರಿಸಿ ಅನುಸರಿಸಿಕೊಂಡು ಬರುತ್ತಿರುವುದನ್ನೆಲ್ಲ ಹಳದಿ ಕಣ್ಣಿಂದಲೇ ನೋಡುತ್ತಾ, ಅವನನ್ನು ಟೀಕಿಸುತ್ತಾ ಅವನ ಮನಸ್ಸಿಗೆ ನೋವುಂಟು ಮಾಡುವುದು ಎಷ್ಟು ಸಮಂಜಸ?
ಕಾಶೀಯಾತ್ರೆ ಮಾಡುವ ಪರಮ ಉದ್ದೇಶ ವಿಶ್ವನಾಥನನ್ನು ದರ್ಶಿಸುವುದೇ ಆದರೂ, ಪರಮಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವುದೂ ಮುಖ್ಯ ಉದ್ಧೇಶವಾಗಿರುತ್ತದೆ. ನಾನು ಎರಡು ಬಾರಿ ಕಾಶಿಗೆ ಹೋದ ಉದ್ಧೇಶವೇ ಗಂಗಾಸ್ನಾನಕ್ಕಾಗಿ. ದಿನಕ್ಕೆ ಸಾವಿರಾರು ಜನ ಹರಿದ್ವಾರದಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಸ್ನಾನ ಮಾಡುವುದರಿಂದ ಅದೇನು ಕರ್ಮ ಕಳೆದುಕೊಳ್ತಾರೋ ಇವರು ಎಂದು ವ್ಯಂಗ್ಯವಾಡಿದರೆ ಅದು ನಮ್ಮ ಸಂಕುಚಿತ ಭಾವನೆಯಾಗುತ್ತದೆ. ಎಲ್ಲ ಧರ್ಮದವರೂ ಅವರವರ ಆಚರಣೆಗಳನ್ನು ನಿಷ್ಠೆಯಿಂದ ಆಚರಿಸಿಕೊಳ್ಳುತ್ತಿರುವಾಗ, ನಮ್ಮ ಧರ್ಮದ ಆಚರಣೆಗಳ ನದೀತೀರ್ಥಗಳ ಬಗ್ಗೆ ವ್ಯಂಗ್ಯವೇಕೆ ಎಂಬುದು ಅರ್ಥವಾಗುವುದಿಲ್ಲ. ನಮ್ಮವರಿಗೆ ಏನೇ ಮಾತನಾಡಿದರೂ ತಿರುಗಿ ಬೀಳುವುದಿಲ್ಲ, ಏನೋ ಫೇಸ್‌ಬುಕ್ಕಲ್ಲಿ, (ಮುಖಾಮುಖಿಯಾಗದೆ) ಒಂದಷ್ಟು ಬೈದಾಡಿಕೊಳ್ಳುತ್ತಾರೆಂಬ ಉಡಾಫೆಯೇ?
ಅದೇನಾದರೂ ಇರಲಿ, ಗಂಗೆ ಪವಿತ್ರಳು ಕೋಟಿ ಕೋಟಿ ಜನರ ಮನಗಳಲ್ಲಿ ಲೋಕಪಾವನಿಯಾಗಿ ಹರಿಯುತ್ತಿದ್ದಾಳೆ. ಅವಳ ಕ್ಷೇಮ ಕಾಯುವವರೂ ಅವಳ ಜೊತೆಗಿದ್ದೇ ಇದ್ದಾರೆ. ಗಂಗೆ ನಮ್ಮ ಭಾರತದ ಜೀವನಾಡಿ. ಅವಳಿಲ್ಲದೆ ನಮ್ಮ ಸಂಸ್ಕೃತಿಯಿಲ್ಲ, ಆಚಾರ ವಿಚಾರಗಳೆಲ್ಲ ಅವಳೊಂದಿಗೇ ಬೆರೆತುಹೋಗಿವೆ.
-ಬಿ.ಕೆ.ಮೀನಾಕ್ಷಿ , ಮೈಸೂರು.
ಲೋಕಪಾವನಿ ಗಂಗೆ..ಲೇಖನ.. ಚಿಕ್ಕ ದಾದರೂ ಚೊಕ್ಕ ವಾಗಿ ..ಮೂಡಿಬಂದಿದೆ…
ಧನ್ಯವಾದಗಳು..ಗೆಳತಿ ಮೀನಾ
ಗಂಗಾ ನದಿಯ ಬಗ್ಗೆ ಬರೆಯುತ್ತಾ ನಮ್ಮ ಸಂಸ್ಕೃತಿ ಯನ್ನು ಜತನದಿಂದ ಬೆಂಬಲಿಸುವ ಲೇಖನ ಚೆನ್ನಾಗಿ ಬಂದಿದೆ
ಚಂದದ ಬರಹ
ಗಂಗಾಮಾತೆ ಕುರಿತ ಚಿಕ್ಕ ಚೊಕ್ಕ ಲೇಖನ.