ಆದಿ ವೈದ್ಯ ಧನ್ವಂತರಿ

Share Button

ಅಷ್ಟೆಶ್ವರ್ಯಗಳಲ್ಲಿ ಆರೋಗ್ಯ ಭಾಗ್ಯವೇ ಮೇಲು. ಅದಕ್ಕಾಗಿಯೇ ‘ಆರೋಗ್ಯವೇ ಭಾಗ್ಯ’ ಎಂಬ ಸೂಕ್ತಿ ಇದೆ. ಆರೋಗ್ಯ ಹೀನ ಮಾನವನಿಗೆ ಯಾವುದೇ ಸಕಾರಾತ್ಮಕ ಸಾಧನೆ ಸಾಧ್ಯವಾಗಲಾರದು. ಧನ ನಷ್ಟಗೊಂಡರೆ ಮತ್ತೆ ತುಂಬಬಹುದು. ಆದರೆ ಆರೋಗ್ಯ ಹದಗೆಟ್ಟರೆ…? ಅದನ್ನು ಭರಿಸುವುದು ಅಷ್ಟೇನು ಸುಲಭದ ಮಾತಲ್ಲ. ಅನಾರೋಗ್ಯ ಮನುಷ್ಯನಿಗೆ ಬೇರಾವುದೇ ಭಾಗ್ಯವಿದ್ದರೂ ಅನುಭವಿಸುವ ಸಂತೋಷವಿಲ್ಲ. ಈ ನಿಟ್ಟಿನಲ್ಲಿ ನಮ್ಮ ಹಿರಿಯರು ಕಿರಿಯರಿಗೆ ”ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ” ಎಂಬ ಎಚ್ಚರಿಕೆ ಮಾತನ್ನು ಅಡಿಗಡಿಗೆ ಹೇಳುತ್ತಿರುವುದನ್ನು ಕೇಳುತ್ತೇವೆ. ಅದಕ್ಕಾಗಿ ಪೂರ್ವಿಕರು ನಮ್ಮ ಆಹಾರ-ಅನುಪಾನಗಳಲ್ಲಿ, ಊಟ-ಉಪಚಾರಗಳಲ್ಲಿ ಒಂದು ನಿಯಮ, ಅನುಷ್ಠಾನಗಳನ್ನು ತಂದಿರುತ್ತಾರೆ.

ಆರೋಗ್ಯ ರಕ್ಷಣೆಗೆ, ಆಯುಷ್ಯವರ್ಧನೆಗೆ ಆಯುರ್ವೇದ ಶಾಸ್ತದ, ಆಯುರ್ವಿಜ್ಞಾನದ ಅಧಿದೇವತೆ ಆದಿವೈದ್ಯನೊಬ್ಬನಿದ್ದಾನೆ. ‘ವೈದ್ಯೋ ನಾರಾಯಣೋ ಹರಿಃ’ ಈತನೇ ಮಹಾವಿಷ್ಣು ಪ್ರತೀಕವಾದ ಧನ್ವಂತರಿ, ಅರ್ಥಾತ್ ರೋಗ ನಿವಾರಕನು. ಈತನು ಸಾಕ್ಷಾತ್ಕರಿಸಿದ ಬಗ್ಗೆ ಪುರಾಣದಲ್ಲಿದೆ. ಅವನು ವೈಜ್ಞಾನಿಕವಾಗಿಯೂ ಹೇಗೆ ಕಾಣಿಸಿಕೊಂಡ ಎಂಬುದನ್ನು ತಿಳಿಯೋಣ.

ಪುರಾತನ ಕಾಲದಲ್ಲಿ ದೇವತೆಗಳೂ ರಾಕ್ಷಸರೂ ಸೇರಿ ಅಮೃತಕ್ಕಾಗಿ ಮಂದರ ಪರ್ವತವನ್ನು ಕಡೆಗೋಲು ಮಾಡಿಕೊಂಡು ವಾಸುಕಿಯನ್ನು ಹಗ್ಗವಾಗಿ ಹಿಡಿದುಕೊಂಡು ಕ್ಷೀರಸಾಗರವನ್ನು ಮಥಿಸಿದರು. ಮೊದಲು ‘ಹಾಲಾಹಲ’ವೆಂಬ ವಿಷ ಬಂತು. ಭೂಮಿಯ ಮೇಲೆ ಆ ವಿಷ ಬಿದ್ದರೆ ಅದರಿಂದ ಕೆಟ್ಟ ಪರಿಣಾಮವೆಂದರಿತ ಶಿವನು ಅದನ್ನು ಕುಡಿದ. ಶಿವನ ಉದರಕ್ಕೆ ಆ ವಿಷ ಇಳಿದರೆ ಪಾರ್ವತಿಗೆ ದುಃಖವಾಗುವುದಿಲ್ಲವೇ? ಅವಳು ತಡೆದಳು. ಪರಿಣಾಮವಾಗಿ ವಿಷವು ಶಿವನ ಗಂಟಲಲ್ಲೆ ಉಳಿಯಿತು. ‘ಉಚ್ಚೈಶ್ರವಸ್” ಎಂಬ ಕುದುರೆ, ಕಾಮಧೇನು, ಕಲ್ಪವೃಕ್ಷ, ಲಕ್ಷ್ಮೀದೇವಿ ಇವರೆಲ್ಲ ಉದಿಸಿ ಬಂದರು. ಲಕ್ಷ್ಮೀಯನ್ನು ವಿಷ್ಣು ಸ್ವೀಕರಿಸಿ ಲಕ್ಷ್ಮೀನಾರಾಯಣನೆನಿಸಿದ. ಕುದುರೆ, ಕಲ್ಪವೃಕ್ಷ, ಕಾಮಧೇನುಗಳೆಲ್ಲ ಇಂದ್ರನ ಪಾಲಾಯಿತು. ಇನ್ನೊಮ್ಮೆ ಕಡೆದಾಗ ರತ್ನಖಚಿತವಾದ ಸುವರ್ಣ ಕುಂಭದೊಂದಿಗೆ ಉದ್ಭವಿಸಿ ಬಂದವನೇ ಧನ್ವಂತರಿ, ಅಮೃತ ಕಲಶವನ್ನೇ ಹಿಡಿದಿರುವ ಇವನು ಅಮಿತ ಸೌಂದರ್ಯ ಹೊಂದಿರುವವನು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಈತನಿಗೆ ಚತುರ್ಭುಜಗಳು, ಮೇಲಿನೆರಡು ಕೈಗಳಲ್ಲಿ ವಿಷ್ಣು ಸಂಕೇತವಾದ ಶಂಖ ಹಾಗೂ ಚಕ್ರಗಳು, ಕೆಳಗಿನ ಬಲಕೈಯಲ್ಲಿ ಅಮೃತ ಕುಂಭವನ್ನೂ ಎಡಗೈಯಲ್ಲಿ ‘ಜಿಗಣೆ’ಯನ್ನೂ ಧರಿಸಿರುವನು. ಮಾನವರ ದುಷ್ಪರಕ್ತ ಹೀರಿ ತೆಗೆಯುವುದಕ್ಕಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಜಿಗಣೆಯನ್ನು ಬಳಸುತ್ತಿದ್ದರಂತೆ. ದೇವಾಸುರರು ಅಮೃತಕ್ಕಾಗಿ ಸಂಗ್ರಾಮ ನಡೆಸಿದಾಗ ಧನ್ವಂತರಿ ರೂಪದಲ್ಲಿದ್ದ ವಿಷ್ಣುವು ಮೋಹಿನಿ ರೂಪ ತಾಳಿದನೆಂದೂ ಹೇಳಲಾಗುತ್ತದೆ. ಈ ಆದಿ ವೈದ್ಯನನ್ನು ಹೋಮ, ಪೂಜೆ, ಪ್ರಾರ್ಥನೆ ಮೊದಲಾದ ಉಪಾಸನೆಗಳಿಂದ ಆಯುರಾರೋಗ್ಯ ಕರುಣಿಸೆಂದು ಬೇಡಿಕೊಳ್ಳುತ್ತೇವೆ.

ಧನ್ವಂತರಿಯ ಕುರಿತಾಗಿ ಇನ್ನೊಂದು ಕತೆಯಿದೆ. ದ್ವಾಪರ ಯುಗದಲ್ಲಿ ಕಾಶಿ ನಗರಿಯಲ್ಲಿ ಚಂದ್ರವಂಶದ ರಾಜನೊಬ್ಬನಿದ್ದ. ಅವನ ಹೆಸರು ‘ದೀರ್ಘತಪಸ್ಸು’. ಈತನಿಗೆ ಹಲವು ಕಾಲ ಮಕ್ಕಳಾಗದಿರಲು ವಿಷ್ಣುವನ್ನು ಸತತವಾಗಿ ಆರಾಧಿಸತೊಡಗಿದ. ಅಲ್ಲದೆ ಧನ್ವಂತರಿಯೇ ತನ್ನ ಮಗನಾಗಿ ಜನಿಸಿ ಬರಬೇಕೆಂದು ಬೇಡಿಕೊಂಡ. ಅದರ ಫಲವಾಗಿ ಕಾಶೀರಾಜನಾದ ದೀರ್ಘತಪಸ್ವಿಯ ಪುತ್ರನಾಗಿ ಧನ್ವಂತರಿಯು ಅವತರಿಸಿದ, ಈತನು ಆಯುರ್ವೇದ ಶಾಸ್ತ್ರವನ್ನು ಪರಾಮರ್ಶಿಸಿ ಮಾನವರ ಅನುಕೂಲಕ್ಕೆ ತಕ್ಕಂತೆ ಎಂಟು ವಿಭಾಗ ಮಾಡಿದನಂತೆ. ಈ ಅಷ್ಟ ಅಂಗಗಳಲ್ಲೂ ಈತನು ಪರಿಣತಿ ಹೊಂದಿದ್ದನಂತೆ. ಕೇವಲ ಸ್ವರ್ಗದಲ್ಲಿ ಅಶ್ವಿನಿ ದೇವತೆಗಳಿಂದ ಪ್ರಚಲಿತವಿದ್ದ ಆಯುರ್ವಿಜ್ಞಾನವು ಈತನಿಂದಾಗಿ ಆರ್ಯಾವರ್ತದಲ್ಲೂ ಪ್ರಚಾರವಾಯಿತು. ಇವನು ವೈದ್ಯಶಾಸ್ತ್ರಜ್ಞ ಮಾತ್ರವಲ್ಲ ಉತ್ತಮ ಪರಾಕ್ರಮಿಯೂ ರಾಜನೀತಿಜ್ಞನೂ ಆಗಿದ್ದನು. ಇವನ ಕಾಲದಲ್ಲಿ ಪ್ರಜೆಗಳು ಧರ್ಮಬೀರುಗಳೂ ಆಗಿದ್ದರು. ಇವನು ಭಾರದ್ವಾಜರ ಶಿಷ್ಯನಾಗಿದ್ದನು.

ಧನ್ವಂತರಿಯ ವ್ರತಮಹಿಮೆಯ ಬಗ್ಗೆ ಒಂದು ಕಾರಣಿಕ ಕತೆಯಿದೆ. ಹಿಂದೆ ಆವಂತಿ ನಗರದಲ್ಲಿ ‘ಧನಗುಪ್ತ’ನೆಂಬ ಒಬ್ಬ ರಾಜನಿದ್ದನು. ಈತನು ಪ್ರಜಾಪರಿಪಾಲನೆ ಸುಸೂತ್ರವಾಗಿ ಮಾಡುತ್ತಾ ಜನರ ಪ್ರೀತಿಗೆ ಪಾತ್ರನಾಗಿದ್ದನು. ಆದರೆ… ಅದೇಕೋ ಅವನ ಪೂರ್ವಜನ್ಮ ಪಾವಶೇಷದಿಂದಲೋ ಕ್ಷಯರೋಗಕ್ಕೆ ತುತ್ತಾದ. ಅನೇಕ ರೀತಿಯ ಔಷಧಿ, ಹಲವಾರು ಜಪ-ತಪ, ಹೋಮಾದಿ ಹರಕೆಗಳನ್ನು ಗೈದರೂ ರೋಗ ಉಲ್ಬಣಿಸಿತೇ ಹೊರತು ಹಿಂದೆ ಬರಲಿಲ್ಲ. ಇವನ ಪತ್ನಿಯ ಹೆಸರು ಸುಶೀಲೆ, ಆಕೆಯೂ ಪತಿಯ ಆರೋಗ್ಯಕ್ಕಾಗಿ ಅನೇಕ ವಮೋಪಾಸನೆಗಳನ್ನು ಕೈಗೊಂಡು ಶುಕ್ರೂಷೆ ಮಾಡಿದರೂ ಫಲಕಾರಿಯಾಗಲಿಲ್ಲ. ಬದಲಾಗಿ ಆಕೆಯೂ ಅವರ ಐವರು ಮಕ್ಕಳೂ ರೋಗಪೀಡಿತರಾದರು. ಇದರಿಂದಾಗಿ ರಾಜ ಬಹಳ ವ್ಯಾಕುಲ ಚಿತ್ತನಾದ. ಋಷಿಮುನಿಗಳಲ್ಲಿ ವಿಚಾರ ವಿಮರ್ಶೆ ಮಾಡಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅರಣ್ಯಕ್ಕೆ ಹೋದ. ಅಲ್ಲಿ ಭಾರದ್ವಾಜ ಮುನಿಗಳನ್ನು ಭೇಟಿಯಾಗಿ ತನ್ನ ಕಷ್ಟಗಳನ್ನು ಅವರಲ್ಲಿ ತೋಡಿಕೊಂಡ. ಅವರು ರಾಜನನ್ನು ಸಾಂತ್ವನಿಸುತ್ತಾ ‘ಮಹಾಮಹಿಮನೂ ಆದಿವೈದ್ಯನೂ ಆದ ಧನ್ವಂತರಿಯನ್ನು ಪೂಜಿಸುವ ವ್ರತ ಕೈಗೊಳ್ಳು’ ಎಂದು ನುಡಿದರಲ್ಲದೆ ವಿಧಿ ವಿಧಾನಗಳನ್ನೂ ತಿಳಿಸಿದರು. ಭಾರದ್ವಾಜ ಮುನಿಗಳು ತಿಳಿಸಿದಂತೆ ವ್ರತನಿಷ್ಠನಾದ ರಾಜ, ಧನ್ವಂತರಿ ವ್ರತವನ್ನು ಬಹಳ ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಮಾಡುತ್ತಾ ಬಂದ.

ಕೆಲವು ವರ್ಷಗಳು ಸರಿಯಿತು. ಒಂದು ದಿನ ಧನ್ವಂತರಿಯು ಸುಪ್ರಸನ್ನನಾಗಿ ರಾಜನಿಗೆ ಪ್ರತ್ಯಕ್ಷನಾದ. ‘ನಿನ್ನ ಇಷ್ಟಾರ್ಥವನ್ನು ಕೇಳಿಕೋ ಕರುಣಿಸುತ್ತೇನೆ’ ಎಂದು ಧನ್ವಂತರಿ ಹೇಳಿದಾಗ ನನಗೆ ಮತ್ತು ನನ್ನ ಮಡದಿ ಮಕ್ಕಳಿಗೆ ಕ್ಷಯರೋಗ ಬಾಧಿಸಿದೆ’ ಈ ರೋಗದಿಂದ ಮುಕ್ತರಾಗಿ ನಾವು ಆರೋಗ್ಯದಿಂದಿರಬೇಕು’ಎಂಬದಾಗಿ ಕೋರಿಕೊಂಡ ರಾಜ. ‘ತಥಾಸ್ತು’ ಎಂದು ಅಂತರ್ಧಾನನಾದ ಧನ್ವಂತರಿ, ಮುಂದಿನ ದಿನಗಳಲ್ಲಿ ಧನಗುಪ್ತರಾಜ ಮತ್ತು ಅವನ ಕುಟುಂಬದವರ ಆರೋಗ್ಯ ಮರಳಿ ಬಂದು ಸುಖಿಗಳಾದರು. ನಂತರದಲ್ಲಿ ಬಹುಕಾಲ ಧರ್ಮದಿಂದ ರಾಜ್ಯಭಾರ ಮಾಡಿದ ರಾಜ, ಉತ್ತಮಲೋಕ ಸೇರಿಕೊಂಡನು. ಹೀಗೆ ಧನ್ವಂತರಿಯನ್ನು ಯಾರು ದೃಢಭಕ್ತಿಯಿಂದ ಸೇವಸುತ್ತಾರೋ ಅವರಿಗೆ ಆಯುರಾರೋಗ್ಯಗಳು ಲಭಿಸುತ್ತವೆ ಎಂಬುದು ಸನಾತನ ನಂಬಿಕೆ.

ಧನ್ವಂತರಿ ಮಹಾಭಾಗ ಜರಾರೋಗ ನಿವಾರಕಃ |
ಆಯುರ್ವೇದ ಪ್ರವರ್ತಾರಂ ವಂದೇ ಪೀಯೂಷದಾಯಕಂ ||

ಮಹಿಮಾನ್ವಿತನಾದ ಧನ್ವಂತರಿಯೇ ಜರೆ (ಮುಪ್ಪು) ಹಾಗೂ ರೋಗಗಳಿಂದ ನನ್ನ ಮತ್ತು ಕುಟುಂಬವನ್ನು ರಕ್ಷಿಸು ಎಂದು ಬೇಡಿಕೊಳ್ಳೋಣ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

 1. Vijayasubrahmanya says:

  ಧನ್ಯವಾದಗಳು ಅಡ್ಮಿನರ್ ಹೇಮಮಾಲಾ ಹಾಗೂ ಪ್ರೀತಿಯ ಓದುಗ ಬಳಗಕ್ಕೆ.

 2. ನಯನ ಬಜಕೂಡ್ಲು says:

  ಚೆನ್ನಾಗಿದೆ

 3. ಆದಿ ವೈದ್ಯ ಧನ್ವಂತರಿ ಯ ಬಗ್ಗೆ …ಸೊಗಸಾದ… ಕಥ..ನೀಡಿರುವ ವಿಜಯಾ ಮೇಡಂಗೆ..
  ಧನ್ಯವಾದಗಳು

 4. ಶಂಕರಿ ಶರ್ಮ says:

  ಮೂಲ ದೇವವೈದ್ಯರಾದ ಧನ್ವಂತರಿ ಬಗೆಗಿನ ವಿಶೇಷ ಕಥೆ ಚೆನ್ನಾಗಿದೆ ವಿಜಯಕ್ಕಾ.

 5. Padma Anand says:

  ಸುಂದರವಾಗಿ ನಿರೂಪಣೆಗೊಂಡ ಆಸಕ್ತಿದಾಯಕ ಪೌರಾಣಿಕ ಕಥೆ

 6. ಶೋಭಾ ಕಾಟಿಪಳ್ಳ says:

  ತುಂಬಾ ಮಾಹಿತಿಯೊಂದಿಗಿನ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: